'ದಾದಾ'ಗಿರಿ ನೆನಪಿಸುವ ಕದನ ಮತ್ತೆ ಬಂದಿದೆ

ಉತ್ಸಾಹಿ ಯುವಕರು, ಅನುಭವಿಗಳ ತಂಡದ ಪಾಲಿಗೆ ಗಂಗೂಲಿ 'ದಾದಾ' ಎನಿಸಿದ
Updated on: 

2001 ಭಾರತವನ್ನು ಅದರ ಗುಹೆಯಲ್ಲಿಯೇ ಬಡಿದು ಬಿಸಾಕುವ ಉಮೇದಿನಲ್ಲಿಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತದ ಪ್ರವಾಸ ಕೈಗೊಂಡಿತ್ತು. ಸತತ 15 ಟೆಸ್ಟ್‌ಗಳನ್ನು ಗೆದ್ದು ದಾಖಲೆಯ ಉತ್ಸಾಹದಲ್ಲಿದ್ದ ಸ್ಟೀವ್ ವಾ ಈ ಒಂದು ಸರಣಿ ಜಯಕ್ಕಾಗಿ ಹಾತೊರೆದಿದ್ದರು. ಅವರ ಬತ್ತಳಿಕೆಯಲ್ಲಿ ಭಾರತವನ್ನು ಸೋಲಿಸಲು ಬೇಕಾದ ಎಲ್ಲ ಅಸ್ತ್ರಗಳೂ ಇದ್ದವು. ಅದಕ್ಕಿಂತ ಹೆಚ್ಚಾಗಿ ಆ್ಯಟಿಟ್ಯೂಡ್ ತುಸು ಹೆಚ್ಚಾಗಿಯೇ ಇತ್ತು. ತಾವು ಕ್ರಿಕೆಟ್ ಜಗತ್ತಿನ ಸಾರ್ವಭೌಮ ತಂಡ ಎಂಬ ಸೊಕ್ಕು, ತನ್ನ ಪಡೆಯನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂಬ ಅಹಂಕಾರ ಸ್ವತಃ ಸ್ಟೀವ್ ವಾ ಮತ್ತು ಆತನ ಸಹಚರರಿಗಿತ್ತು. ಕ್ರಿಕೆಟ್ ಆಡುವ ತಂಡಗಳನ್ನೆಲ್ಲ ನಿವಾಳಿಸಿ ಬಂದಿದ್ದ ಈ ದಂಡಿಗೆ ಭಾರತದಲ್ಲಿ ಮೂರು ದಶಕಗಳಿಂದ ಮರೀಚಿಕೆಯಾಗಿದ್ದ ಸರಣಿ ಜಯ ಪಡೆಯುವ ಮೂಲಕ ದಿಗ್ವಿಜಯ ಸಾಧಿಸುವ ಹಂಬಲ ಇತ್ತು. ಭಾರತ ತಂಡವೂ ಒಂದು ರೀತಿಯ ಸ್ಥಿತ್ಯಂತರದಲ್ಲಿತ್ತು. ಕಳ್ಳಾಟದ ಆರೋಪಗಳು ತಂದ ಗೊಂದಲದ ಸ್ಥಿತಿಯಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಲು ಪ್ರತಿಭೆಗಿಂತ ಗೆಲ್ಲುವ ಛಲ, ಆ್ಯಟಿಟ್ಯೂಡ್‌ನ ಅವಶ್ಯಕತೆ ಹೆಚ್ಚಿತ್ತು. ಸ್ಟೀವ್ ವಾ ಪಡೆ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಗೆದ್ದು ತನ್ನ ಜಯದ ಕೇಕೆಯನ್ನು ಸತತ 16 ಟೆಸ್ಟ್‌ಗಳಿಗೆ ವಿಸ್ತರಿಸಿಕೊಂಡಿತ್ತು. ಸ್ಟೀವ್ ವಾ ನಾಯಕತ್ವದ ತಂಡ ತನಗೆ ಯಾರೂ ಸಾಟಿ ಇಲ್ಲ ಎಂದು ಭಾವಿಸಿದ್ದ ಕಾಲವದು. ಅದರಲ್ಲೂ ಸ್ಟೀವ್ ವಾ ಅಂತೂ ಎದುರಾಳಿ ತಂಡದ ಪ್ರಮುಖ ಆಟಗಾರರು ಹಾಗೂ ನಾಯಕನ ಮೇಲೆ ಮಾನಸಿಕವಾಗಿ ಸವಾರಿ ಮಾಡಲು ಸದಾ ಪ್ರಯತ್ನಿಸುತ್ತಿದ್ದ. ಆಗಿನ ಭಾರತ ತಂಡದಲ್ಲಿ ಪ್ರಾಯಶಃ ಆತ ಗೌರವ ನೀಡುತ್ತಿದ್ದುದು ಸಚಿನ್ ತೆಂಡೂಲ್ಕರ್‌ಗೆ ಮಾತ್ರ. ಆದರೆ ಸ್ಟೀವ್‌ಗೆ ಆತನ ತಂತ್ರಗಳ ಮೂಲಕವೇ ಉತ್ತರ ನೀಡಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ಗಟ್ಟಿ ಆಟಿಟ್ಯೂಡ್ ಬೇಕಿತ್ತು. ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾಗೆ ಈ ಆಟಿಟ್ಯೂಡ್ ಅನ್ನು ಅತ್ಯಂತ ಧಾರಾಳವಾಗಿ ತೋರಿಸಿದ ವ್ಯಕ್ತಿ ಎಂದರೆ ನಾಯಕ ಸೌರವ್ ಗಂಗೂಲಿ! ಇದು ಯಾವ ಪರಿ ಹೋಗಿತ್ತೆಂದರೆ ಸ್ವತಃ ಸ್ಟೀವ್ ವಾ ಕುಪಿತನಾಗಿದ್ದ, ಇರಿಟೇಟ್ ಆಗಿದ್ದ. ಸೌರವ್ ಕ್ರೀಡಾಸ್ಫೂರ್ತಿ ಇಲ್ಲದ ವ್ಯಕ್ತಿ ಎಂದು ಬಡಬಡಿಸಿದ. ಅತಿಥಿ ತಂಡವನ್ನು ಯಾವ ರೀತಿ ಟ್ರೀಟ್ ಮಾಡಬೇಕೆಂದು ಗೊತ್ತಿಲ್ಲದ ವ್ಯಕ್ತಿ ಎಂದು ಜರೆದ. ಒಂದು ರೀತಿಯಲ್ಲಿ ಮೈಪರಚಿಕೊಳ್ಳುವ ಸ್ಥಿತಿ ಆತನದ್ದಾಗಿತ್ತು. ಇದಕ್ಕೆ ಕಾರಣ ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಸೌರವ್ ಟಾಸ್‌ಗೆ ಸರಿಯಾದ ಸಮಯಕ್ಕೆ ಬರದೆ ಸ್ಟೀವ್ ವಾನನ್ನು ಮೈದಾನದಲ್ಲಿ ಕಾಯಿಸಿದ್ದ, ಸತಾಯಿಸಿದ್ದ. ಒಮ್ಮೆ ಬಂದರೂ ಕ್ರಿಕೆಟ್ ಉಡುಪಿನಲ್ಲಿ ಬರದೆ ಒಂದು ಹೊಸ ಪರಂಪರೆ ಹಾಕಿದ.
ಸೌರವ್ ಗಂಗೂಲಿ ಇಷ್ಟೆಲ್ಲ ಮಾಡಿದ್ದು 'ಸೊಕ್ಕು ತೋರಿಸಲು, ಕಿಚಾಯಿಸಲು, ಸತಾಯಿಸಲು ಬರುವುದು ನಿಮಗೊಬ್ಬರಿಗೇ ಅಲ್ಲ, ನಮಗೂ ಆ ವಿದ್ಯೆ ಗೊತ್ತು. ಇನ್ನಾದರೂ ಅದನ್ನು ಬಿಟ್ಟು ಮೈದಾನದಲ್ಲಿ ಹೋರಾಡೋಣ ಬಾ' ಎಂದು ಹೇಳುವುದಕ್ಕೇ ಆಗಿತ್ತು. ಅಲ್ಲದೇ ಆ ಮೂಲಕ 'ನಾವು ಯಾರಿಗೂ ಹೆದರಬೇಕಿಲ್ಲ. ಯಾರ ಮುಂದೆಯೂ ಹಿಂಜರಿಯುವ ಅಗತ್ಯವಿಲ್ಲ. ಅವರು ಹೇಳಿದ್ದನ್ನು ಅವರಿಗೇ ತಿರುಗಿಸಿ ಹೇಳೋಣ. ಹಾಗೆ ಮಾಡುವ ಮೂಲಕ ಅನಗತ್ಯ ಕಿರಿಕಿರಿಯಿಂದ ಹೊರಬಂದು ಗರಿಷ್ಠ ಸಾಮರ್ಥ್ಯ ಪ್ರದರ್ಶಿಸಿ ಹೋರಾಡೋಣ. ಜಯಿಸಲು ಹವಣಿಸೋಣ' ಎಂದು ಭಾರತ ತಂಡದ ಆಟಗಾರರನ್ನೂ ಹುರಿದುಂಬಿಸುವುದು ಆತನ ಉದ್ದೇಶವಾಗಿತ್ತು. ಈ ತಂತ್ರದಲ್ಲಿ ಸೌರವ್ ಎಷ್ಟು ಸೊಗಸಾಗಿ ಯಶಸ್ವಿಯಾದ! ಹೆಚ್ಚಾಗಿ ಉತ್ಸಾಹಿ ಯುವಕರು, ಅನುಭವಿಗಳ ಸಮ್ಮಿಶ್ರವಾಗಿದ್ದ ತಂಡದ ಪಾಲಿಗೆ ಸೌರವ್ ಗಂಗೂಲಿ 'ದಾದಾ' ಎನಿಸಿದ. ಅಲ್ಲಿಂದ ಆರಂಭವಾಯಿತು ಸೌರವ್ 'ದಾದಾ'ಗಿರಿಯ ದಿನಗಳು.
ಚೆನ್ನೈನಲ್ಲಿ ಮೊದಲ ಟೆಸ್ಟ್‌ನ ಸೋಲಿನ ನಂತರ ಭಾರತ ತಿರುಗಿಬಿದ್ದ ಪರಿ ಎಂಥದು. ಅದರಲ್ಲಿಯೂ ಕೋಲ್ಕತಾದಲ್ಲಿ ನಡೆದ ಎರಡನೇ ಟೆಸ್ಟ್! ಮೊದಲೆರಡು ದಿನ ಶರಣಾಗತಿಯ ಪಥದಲ್ಲಿದ್ದ (ಫಾಲೋಆನ್‌ಗೆ ಗುರಿಯಾಗಿ) ಭಾರತ ನಂತರ ತೋರಿದ ಕೆಚ್ಚು, ಲಕ್ಷ್ಮಣ್ ಮತ್ತು ದ್ರಾವಿಡ್ ಆಡಿದ ಪರಿ, ಅಂತಿಮ ದಿನ ಭೋಜನ ವಿರಾಮದ ವೇಳೆಗೆ ಇನಿಂಗ್ಸ್ ಘೋಷಿಸಿ ಪಂದ್ಯ ಉಳಿಸಿಕೊಳ್ಳಲು ಸ್ಟೀವ್ ವಾಗೆ ಸೌರವ್ ನೀಡಿದ ಪಂಥಾಹ್ವಾನ, ಚಹಾ ವಿರಾಮದ ನಂತರ ಪಟಪಟನೆ ಉದುರಿದ ಏಳು ವಿಕೆಟ್, ಹರ್‌ಭಜನ್ ಹ್ಯಾಟ್ರಿಕ್, ಒಂದಾ, ಎರಡಾ, ಈ ಪಂದ್ಯ ಅದಾಗಲೇ ಕ್ರಿಕೆಟ್ ಜಾನಪದದ (folklore) ಭಾಗವಾಗಿ ಹೋಗಿದೆ. ಸೋಲು ಗ್ಯಾರಂಟಿ ಎನ್ನುವ ಸ್ಥಿತಿಯಿಂದ ಮೈಕೊಡವಿ ಮೇಲೆದ್ದ ತಂಡ 172 ರನ್‌ಗಳಿಂದ ಪವಾಡವೆನ್ನುವಂಥ ಪಂದ್ಯ ಗೆದ್ದಿತ್ತು. ಸರಣಿ ಸಮವಾಯಿತು. ಮುಂದೆ ಮುಂಬೈನಲ್ಲಿ ನಡೆದ ಮೂರನೇ ಟೆಸ್ಟ್ ಸಹ ಭಾರತದ ಪಾಲಾಗುವುದರೊಂದಿಗೆ ಸ್ಟೀವ್ ವಾ ಮತ್ತು ಅವರ ಪಂಗಡದ ಕನಸು ನುಚ್ಚುನೂರಾಗಿತ್ತು. ಗರ್ವಭಂಗವಾಗಿತ್ತು. ಏಕದಿನ ಸರಣಿ 3-2ರಲ್ಲಿ ಆಸ್ಟ್ರೇಲಿಯಾ ಪಾಲಾದರೂ ಒಟ್ಟಾರೆ ಆ ಪ್ರವಾಸ ಎರಡು ತಂಡಗಳ ನಡುವಿನ ಭವಿಷ್ಯದ ಹೋರಾಟಕ್ಕೆ ಬುನಾದಿಯಾಯಿತು. ಉಭಯ ತಂಡಗಳ ನಡುವಿನ ಜಂಗಿ ಕುಸ್ತಿ ಈ ಸರಣಿ ನಂತರ ಸಂಪೂರ್ಣ ಬದಲಾಯಿತು. ಇಂಗ್ಲೆಂಡ್-ಆಸ್ಟ್ರೇಲಿಯಾ (ಆ್ಯಶಸ್), ಭಾರತ-ಪಾಕಿಸ್ತಾನದ ನಡುವಿನ ಕಾದಾಟಕ್ಕೆ ಮಾತ್ರ ಸೀಮಿತವಾಗಿದ್ದ  cult status (ಅತ್ಯುನ್ನತ ಪ್ರಾಧಾನ್ಯ) ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಗಳಿಗೂ ಲಭಿಸುವಂತಾಯಿತು. ಈ ಕಳೆದ ದಶಕದಲ್ಲಿ ಪರಸ್ಪರ ಏಳುಬಾರಿ ಸಂಧಿಸಿರುವ ಈ ತಂಡಗಳು (2011 ಹೊರತುಪಡಿಸಿ) ಪ್ರತಿ ಬಾರಿಯೂ ಹೀರೊಯಿಸಂನ ಹೊಸ ಹೊಸ ಝಲಕುಗಳನ್ನು ತೋರಿವೆ.
ಈ ಎರಡು ತಂಡಗಳ ನಡುವಿನ ಸ್ಪರ್ಧೆ ಪ್ರಬಲ ಪೈಪೋಟಿಯ ರೂಪುರೇಷೆ ಪಡೆದದ್ದು 1980ರ ದಶಕದ ನಂತರವಷ್ಟೆ. ಅದಕ್ಕೆ ಮುಂಚೆ ಪೂರ್ವ ನಿರ್ಧಾರಿತ ಫಲಿತಾಂಶದೊಂದಿಗೇ ಉಭಯ ತಂಡಗಳು ಸೆಣಸುತ್ತಿದ್ದವು. 1980ರ ದಶಕದ ಆರಂಭದಲ್ಲಿ ಗವಾಸ್ಕರ್ ಮತ್ತು ಕಪಿಲ್‌ದೇವ್ ಬದಲಾವಣೆಯ ಬೀಜ ನೆಟ್ಟರು. 1981ರ ಸರಣಿ ರೋಚಕತೆಯ ಎಲ್ಲ ಅಂಶಗಳನ್ನು ಒಳಗೊಂಡಿತ್ತು. ಆ ಸರಣಿಯ ಮೊದಲ ಪಂದ್ಯ ಆಸ್ಟ್ರೇಲಿಯಾದ ಪಾಲಾಗಿತ್ತು. ಎರಡನೇ ಟೆಸ್ಟ್ ಅನ್ನು ಭಾರತ ಡ್ರಾ ಮಾಡಿಕೊಂಡಿತು. ಸರಣಿಯನ್ನು ನಿರ್ಧರಿಸುವ ಮೂರನೇ ಟೆಸ್ಟ್ ಮೆಲ್ಬೋರ್ನ್‌ನಲ್ಲಿ ನಡೆದಿತ್ತು. ಇಡೀ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಸುನಿಲ್ ಗವಾಸ್ಕರ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 70 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದರು. ಡೆನಿಸ್ ಲಿಲ್ಲಿ ಎಸೆತದಲ್ಲಿ ಚೆಂಡು ಪ್ಯಾಡಿಗೆ ತಗುಲಿತೆಂದು ಎಲ್‌ಬಿಗೆ ಬಂದ ಮನವಿಯನ್ನು ಅಂಪೈರ್ ಪುರಸ್ಕರಿಸಿದಾಗ ಗವಾಸ್ಕರ್ ವಾದಕ್ಕಿಳಿದರು. ಆಗಿನ್ನೂ ತಟಸ್ಥ ಅಂಪೈರ್‌ಗಳಾಗಲಿ, ಡಿಆರ್‌ಎಸ್ ಆಗಲಿ ಇರಲಿಲ್ಲ. ತವರಿನ ಅಂಪೈರ್ ಹೇಳಿದ್ದೇ ಸತ್ಯ, ಕೊಟ್ಟಿದ್ದೇ ರೂಲಿಂಗ್. ಪರಾಮರ್ಶೆಗೆ ಆಸ್ಪದವೇ ಇರಲಿಲ್ಲ. ಚೆಂಡು ಬ್ಯಾಟಿಗೆ ತಗುಲಿ ನಂತರ ಪ್ಯಾಡಿಗೆ ಬಡಿಯಿತೆಂದು ಗವಾಸ್ಕರ್ ಅಂಪೈರ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಸುತ್ತಲೂ ನೆರೆದ ಆಸ್ಟ್ರೇಲಿಯಾ ಆಟಗಾರರು ಅವರನ್ನು ಇನ್ನಿಲ್ಲದಂತೆ ಮೂದಲಿಸಿದರು. ಕೆರಳಿದ ಗವಾಸ್ಕರ್ ಮುಂದೇನಾಗಬಹುದು ಎಂಬುದನ್ನೂ ಯೋಚಿಸದೆ ಮತ್ತೊಂದು ತುದಿಯಲ್ಲಿದ್ದ ಚೇತನ್ ಚೌಹಾಣ್‌ಗೆ ಸನ್ನೆ ಮಾಡಿ ತನ್ನೊಂದಿಗೆ ಪೆವಿಲಿಯನ್‌ಗೆ ವಾಪಸಾಗುವಂತೆ ಸೂಚಿಸಿದರು. ಗವಾಸ್ಕರ್‌ರ ದಾರ್ಷ್ಟ್ಯ ಕಂಡು ಆಸ್ಟ್ರೇಲಿಯಾ ಬೆಚ್ಚಿತು. ಆದರೆ ಭಾರತದ ಮ್ಯಾನೇಜರ್ ಸಲೀಂ ದುರಾನಿ ಮಧ್ಯಪ್ರವೇಶಿಸಿ ಗವಾಸ್ಕರ್ ಮನವೊಲಿಸಿ ಪಂದ್ಯ ಮುಂದುವರಿಯುವಂತೆ ಮಾಡಿದರು. ಅಂದು ಗವಾಸ್ಕರ್ ನಡೆ ಟೀಕೆಗೆ ಗುರಿಯಾಯಿತಾದರೂ 'ಆದದ್ದಾಯಿತು ನಡಿ' ಎಂಬ ಉಡಾಫೆಯನ್ನು ನಾವು ಸಹಿಸುವುದಿಲ್ಲ ಎಂಬ ಹೇಳಿಕೆ ಅದರಲ್ಲಿ ಅಡಕವಾಗಿತ್ತು. ನಂತರ ಪಂದ್ಯದ ಕಡೆಯ ದಿನ ಆಸ್ಟ್ರೇಲಿಯಾಕ್ಕೆ ಗೆಲ್ಲಲು 112 ರನ್‌ಗಳ ಅವಶ್ಯಕತೆ ಇತ್ತು. ಜಯದ ಗುರಿ 145. ನಾಲ್ಕನೇ ದಿನಾಂತ್ಯಕ್ಕೆ ಅದು ಎರಡು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತ್ತು. ಮುಂಚೂಣಿಯ ಬೌಲರ್ ಕಪಿಲ್‌ದೇವ್ ತೀವ್ರ ಜ್ವರದಿಂದ ಮೈದಾನಕ್ಕಿಳಿದಿರಲಿಲ್ಲ. ಆದರೆ ಡ್ರೆಸಿಂಗ್ ರೂಮ್‌ಗೆ ಬಂದ ಕೂಡಲೇ ಗವಾಸ್ಕರ್ ಹೇಳಿದ್ದು 'ಕಪಿಲ್ ತಂಡಕ್ಕಾಗಿ, ದೇಶಕ್ಕಾಗಿ ನಾಳೆ ನೀನು ಆಡಲೇಬೇಕು. ಏನು ಮಾಡುತ್ತೀಯೋ ಗೊತ್ತಿಲ್ಲ' ಎಂದರು. ಮೊದಲೇ ಯಾವುದೇ ಸೋಗುಗಳಿಲ್ಲದ ಆಟಗಾರ ಕಪಿಲ್ ಮರುಮಾತಾಡಲಿಲ್ಲ. ನೋವು ಶಮನಕ್ಕೆ ಮೇಲಿಂದ ಮೇಲೆ ಕಾರ್ಟಿಸೋನ್ ಚುಚ್ಚುಮದ್ದು ಹಾಕಿಸಿಕೊಂಡು ತೀವ್ರ ಬಳಲಿಕೆಯಲ್ಲಿಯೇ ಐದನೇ ದಿನ ಮೈದಾನಕ್ಕಿಳಿದರು. ಆಸ್ಟ್ರೇಲಿಯಾದ ಐದು ವಿಕೆಟ್ ಕಬಳಿಸಿ ತಂಡ 83 ರನ್‌ಗಳಿಗೆ ಆಲೌಟ್ ಆಗುವಂತೆ ಮಾಡಿದರು. ಕಡೆಯ ವಿಕೆಟ್ ಬೀಳುವ ವೇಳೆಗೆ ಕಪಿಲ್ ನಿತ್ರಾಣರಾಗಿದ್ದರು. ಆದರೂ ಅವರ ಹೀರೋಯಿಸಂ ಚಿರಕಾಲ ಉಳಿಯುವಂತಾಯಿತು. ನಂತರ 1990ರ ದಶಕದಲ್ಲಿ ಸಂದೀಪ್ ಪಾಟೀಲ್, ಸಚಿನ್ ತೆಂಡೂಲ್ಕರ್ ಮುಂತಾದವರು ಈ ಹೀರೊಯಿಸಂ ಮುಂದುವರಿಸಿಕೊಂಡು ಬಂದರೂ 2001ರ ನಂತರವಷ್ಟೇ ಈ ಎರಡು ತಂಡಗಳ ಕಾದಾಟ ಉಚ್ಛ್ರಾಯಕ್ಕೆ ಹೋದದ್ದು. ಪ್ರತಿ ಬಾರಿ ವಿದೇಶ ಪ್ರವಾಸಕ್ಕೆ ಹೋದಾಗಲೂ ಮೊದಲ ಪಂದ್ಯದಲ್ಲಿ ಸೋತು ನಂತರ ಸರಣಿ ಸೋಲುವುದು ಭಾರತಕ್ಕೆ ಶಾಪವಾಗಿತ್ತು. 2003ರಲ್ಲಿ ಸಹ ಹೀಗೇ ಆಗಬಹುದಿತ್ತು. ಆದರೆ ಸೌರವ್ ಗಂಗೂಲಿ ಗಳಿಸಿದ ಭರ್ಜರಿ 145 ರನ್ ಬ್ರಿಸ್ಬೇನ್‌ನಲ್ಲಿ ಭಾರತ ಮೊದಲ ಪಂದ್ಯ ಡ್ರಾ ಮಾಡಿಕೊಳ್ಳಲು ಅನುವಾಯಿತು. ನಂತರದ ಪ್ರತಿ ಸರಣಿಯಲ್ಲಿಯೂ ಯಾರಾದರೊಬ್ಬರು 'ನಾನಿದ್ದೇನೆ. ಏನಾಗುತ್ತೋ ನೋಡೋಣ, ಹೆದರಬೇಡಿ' ಎಂದು ಹೇಳುವವರಿದ್ದರು. ಅದು ಲಕ್ಷ್ಮಣ್ ಇರಬಹುದು, ದ್ರಾವಿಡ್, ತೆಂಡೂಲ್ಕರ್, ಕುಂಬ್ಳೆ, ಸೆಹ್ವಾಗ್ ಇರಬಹುದು. ಪ್ರತಿ ಸರಣಿಯೂ ಕಠಿಣ ಪೈಪೋಟಿಯ ವಿವಿಧ ಮಜಲುಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಯಾವ ಸಂದರ್ಭದಲ್ಲೂ ಭಾರತ ಡಿಫೀಟಿಸ್ಟ್ ಆ್ಯಟಿಟ್ಯೂಡ್ ತೋರಿಲ್ಲ. 2008ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಪ್ರವಾಸ ಕೈಗೊಂಡ ತಂಡ ಏನೆಲ್ಲ ಪಡಿಪಾಟಲು ಬೀಳಬೇಕಾಗಿ ಬಂತಾದರೂ (ಮಂಕಿಗೇಟ್ ಪ್ರಕರಣ, ಪಾಂಟಿಂಗ್ ದುರುಳತನ, ಕೆಟ್ಟ ಅಂಪೈರಿಂಗ್) ಭಾರತ ಹೋರಾಟ ಕೈಬಿಡಲಿಲ್ಲ. ಬದಲಿಗೆ ಅತ್ಯಂತ ವೇಗದ ಪಿಚ್‌ಗಳಲ್ಲಿ ಒಂದಾದ ಪರ್ತ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಇತಿಹಾಸ ಬರೆಯಿತು. ಈ ರೋಚಕತೆ ಮಾಯವಾಗಿದ್ದು, ಭಾರತ ಆ್ಯಟಿಟ್ಯೂಡ್ ಇಲ್ಲದ ಹರಕೆಯ ಕುರಿಯಂತೆ ಕಂಡಿದ್ದು 2011ರ ಪ್ರವಾಸದಲ್ಲಿ. ತಂಡದಲ್ಲಿ ಸಚಿನ್, ದ್ರಾವಿಡ್, ಸೆಹ್ವಾಗ್, ಲಕ್ಷ್ಮಣ್ ಎಲ್ಲರೂ ಇದ್ದರು. ಆದರೂ ತಂಡ 4-0ಯಿಂದ ಸರಣಿ ಸೋತಿತು. ತಂಡದಲ್ಲಿ ಈ ಹಿಂದಿನ ಕೆಚ್ಚು ಕಾಣಲೇ ಇಲ್ಲ. ಈಗ ಆಸ್ಟ್ರೇಲಿಯಾ ಭಾರತದ ಪ್ರವಾಸಕ್ಕೆ ಬಂದಿದೆ. ಇದೇ 22ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಆಸ್ಟ್ರೇಲಿಯಾ ತಂಡದಲ್ಲಿ ಪಾಂಟಿಂಗ್, ಹಸ್ಸಿ ಇಲ್ಲ. ಭಾರತದ ಯಾದಿಯಲ್ಲಿ ದ್ರಾವಿಡ್, ಲಕ್ಷ್ಮಣ್ ಇಲ್ಲ. ಇದು ಒಂದಕ್ಕೊಂದು ಸಮತೂಕ. 2011ರ ಕಹಿ ಅರಗಿಸಿಕೊಳ್ಳಲು ಭಾರತ ಈ ಸರಣಿಯಲ್ಲಿ ಆ ಹಿಂದಿನ ಕೆಚ್ಚು, ಹೋರಾಟದ ಕಿಡಿ ಹೊತ್ತಿಸಿಕೊಳ್ಳಬೇಕಿದೆ. ಸೌರವ್ ಗಂಗೂಲಿ ಪುಟಗಳಿಂದ ಧೋನಿ ಪಾಠ ಕಲಿಯಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯಾರಾದರೊಬ್ಬರು ಇಡೀ ತಂಡಕ್ಕಾಗಿ ಕೈ ಎತ್ತಬೇಕಿದೆ.
Let the battle begin!

-ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com