'ಮಠಗಳ ದಾರಿ ತಪ್ಪಿಸುತ್ತಿರುವ ರಾಜಕಾರಣಿಗಳು' ಎಂಬ ಒಳಸುರುಳಿ ಅಂಕಣದ (ಕ.ಪ್ರ. ಫೆ.11) ಲೇಖನ ಆಡಳಿತ ಚುಕ್ಕಾಣಿ ಹಿಡಿದವರು ಹಾಗೂ ಮಠಾಧೀಶರುಗಳಿಗೆ ಚಾಟಿ ಏಟು ಬೀಸಿದೆ. ಈ ಮಠಮಾನ್ಯಗಳಿಗೆ ಹಣ ಹಂಚಿಕೆ ಸಂಬಂಧ ಸೌಮ್ಯ ಸ್ವಭಾವದವರಂತೆ ಕಾಣುವ ವಕೀಲರೂ ಕೂಡ ಆದ ಜಗದೀಶ್ ಶೆಟ್ಟರ್ರವರು ಯಡಿಯೂರಪ್ಪನವರನ್ನು ಸೋಲಿಸಿದ್ದಾರೆ. ಇವುಗಳಿಗೆ ನೀಡಿದ ಅನುದಾನ ಹಂಗಿನ ಕಾರಣವೇ ಹೆಚ್ಚಿನ ಲಾಭ ಪಡೆದ ಸಮುದಾಯದ ಮಠಗಳು, ಯಡಿಯೂರಪ್ಪನವರು ದಾರಿ ತಪ್ಪಿಸಿದಾಗಲೂ, ಈ ಕಾವಿಧಾರಿಗಳು ಅವರ ಬೆಂಬಲಕ್ಕೆ ನಿಂತಿದ್ದುದು ಈಗ ಇತಿಹಾಸ.
ತಮ್ಮ ಲೇಖನವನ್ನು ಅವಲೋಕಿಸಿದ ಕೂಡಲೇ, ಈ ಫಲಾನುಭವಿ ಮಠಗಳಿಗೆ ಸ್ವಾಭಿಮಾನ ಹಾಗೂ ಆತ್ಮಾಭಿಮಾನ ಇರುವುದಾದರೆ, ಅನುದಾನವನ್ನು ನಿರಾಕರಿಸಬೇಕು ಹಾಗೂ ಮುಖ್ಯಮಂತ್ರಿ ಅಥವಾ ಹಣಕಾಸು ಮಂತ್ರಿ ಅನುದಾನವನ್ನು ರದ್ದುಪಡಿಸಬೇಕು. ಆದರೆ ಶೆಟ್ಟರ್ರವರೇ ಎರಡನೇ ಕಂತಿನಲ್ಲಿ ಇನ್ನೂ ಕೆಲವು ಮಠಗಳಿಗೆ ಅನುದಾನ ಘೋಷಿದ್ದಾರೆ. ಈ ಮಠಗಳು ಇನ್ನೂ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟರೂ ಆಶ್ಚರ್ಯಪಡಬೇಕಾಗಿಲ್ಲ. ಅನುದಾನಕ್ಕಾಗಿ ಹೊಸ ಮಠಗಳು ಹುಟ್ಟಿಕೊಂಡರೂ ಆಶ್ಚರ್ಯವಿಲ್ಲ.
ಈ ಸರ್ಕಾರ ಮಂಡಿಸಿರುವ ತನ್ನ ಐದು ಬಜೆಟ್ಗಳಲ್ಲಿ ಮಠಮಾನ್ಯಗಳಿಗೆ 1500 ಕೋಟಿ ರು.ಗಳನ್ನು ನೀಡಿರುವುದು ವಿಧಾನಸಭೆಯಲ್ಲಿ ಪ್ರಸ್ತಾಪವೂ ಆಗಿದೆ. ಈ ಅನುದಾನದ ಲಾಭ ಪಡೆಯದವರು ಬಹುತೇಕ ಈ ಮಠಗಳನ್ನು ನಿಯಂತ್ರಿಸುತ್ತಿರುವ ಮಧ್ಯವರ್ತಿಗಳ, ಕಂಟ್ರಾಕ್ಟ್ದಾರರು/ ವ್ಯಾಪಾರಿಗಳು. ಸಮುದಾಯದ ರಾಜಕಾರಣಿಗಳು/ಬುದ್ಧಿಜೀವಿಗಳು ಆಗಿರುತ್ತಾರೆ. ಜನಸಾಮಾನ್ಯರ ತೆರಿಗೆ ಹಣ ಈ ಮಠಗಳ ಜಾತಿ-ಸಮುದಾಯದವರಿಗೆ ಬಹುತೇಕ ಸಂದಾಯವಾಗುತ್ತದೆ. ಕೆಲವಕ್ಕಂತೂ ಹೇರಳ ಅನುದಾನ ಲಭ್ಯವಾಗುವುದು ಮೇಲುನೋಟಕ್ಕೆ ಕಾಣಬರುತ್ತದೆ.
ಅನುದಾನವನ್ನು ಕೊಡಲೇ ಬೇಕಾದಲ್ಲಿ ಜನಸಂಖ್ಯೆ ಹಾಗೂ ಆರ್ಥಿಕ ಬಲಹೀನತೆಯನ್ನು ಪರಿಗಣಿಸಿ, ತಾರತಮ್ಯವಿಲ್ಲದೆ ನೆರವು ನೀಡಲಿ. ಹೆಚ್ಚು ಕಡಿಮೆ ಒಂದೇ ಪ್ರಮಾಣದ (ಶೇಕಡ 1-2ರ ವ್ಯತ್ಯಾಸ) ಜನಸಂಖ್ಯೆಯ ಲಿಂಗಾಯತ ಮತ್ತು ಒಕ್ಕಲಿಗರ ಮಠಗಳಿಗೆ, ಈ ಐದು ಬಜೆಟ್ಗಳಲ್ಲಿ ನೀಡಿದ ಅನುದಾನದ ಮೊತ್ತ ಗಮನಿಸಿದಲ್ಲಿ, ಮೇಲುನೋಟಕ್ಕೆ ವ್ಯತ್ಯಾಸ ಕಾಣುತ್ತದೆ. ಜಾತಿ, ಸಮುದಾಯದ ಜನಸಂಖ್ಯೆ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಅನುದಾನ ನೀಡುವ ಮಾನದಂಡವಾಗಬೇಕು. ಎರಡನೇ ಕಂತಿನಲ್ಲಿ ಆದಿಚುಂಚನಗಿರಿ ಮಠಕ್ಕೆ ಅನುದಾನ ನೀಡಿದಂತಿದೆ.
ಮಠ-ಮಠಗಳ ನಡುವೆ ದ್ವೇಷ, ಅಸೂಯೆ ಬೆಳೆಯಲು ಹಾಗೂ ಒಂದು ಸಮುದಾಯದ ಭಕ್ತರ ವಿರುದ್ಧ ಇನ್ನೊಂದು ಸಮುದಾಯದ ಭಕ್ತರ ವೈಮನಸ್ಸು ಬೆಳೆಯುತ್ತದೆ ಎಂಬ ಸಂಗತಿ ಸರ್ಕಾರಕ್ಕೆ ತಿಳಿದರೂ, ಸಾರ್ವಜನಿಕ ಸ್ಮೃತಿ ಕಡಿಮೆ/ಅಲ್ಪ ಅವಧಿಯದು ಎಂಬ ಸಂಗತಿಯನ್ನು ಆಡಳಿತ ಚುಕ್ಕಾಣಿ ಹಿಡಿದವರು ಅರಿತಿರುತ್ತಾರೆ. ಮೇಲಾಗಿ, ಅಶಕ್ತ ಸಮುದಾಯದವರು ಧ್ವನಿ ಎತ್ತಲಾರರು. ಜೊತೆಗೆ ಕೆಲವು ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆಯೂ ಇರುತ್ತದೆ.
ಸರ್ಕಾರಿ ಮೀಸಲಾತಿ ನಿಯಮಗಳು ಹಾಗೂ ಆಡಿಟ್ ಪದ್ಧತಿ ನಿಯಮಗಳೂ ಅವಕ್ಕೆ ಅನ್ವಯಿಸಲು ಈ ಮಠಾಧೀಶರು ಹಾಗೂ ಸಮುದಾಯದ ರಾಜಕಾರಣಿಗಳು ಬಿಡುವುದಿಲ್ಲ. ಅವೀಗ ಬಹುತೇಕ ರಾಜಕೀಯ ಮಠಗಳಾಗಿವೆ. ಈ ಸರ್ಕಾರ ಬಂದ ನಂತರ ಯಾವ ಯಾವ ಜಾತಿ-ಸಮುದಾಯದ ಮಠಗಳಿಗೆ ಎಷ್ಟೆಷ್ಟು ಹಣ ಅನುದಾನ ನೀಡಲಾಗಿದೆ ಹಾಗೂ ಆ ಸಮುದಾಯಗಳ ಸಂಖ್ಯೆ ಎಷ್ಟು ಎಂಬ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವುದು ಅಪೇಕ್ಷಣೀಯವೆನಿಸುತ್ತದೆ. ಮಠಮಾನ್ಯಗಳು ಸರ್ಕಾರದಿಂದ ಪಡೆದಿರುವ ವಿವಿಧ ಬಗೆಯ ಸವಲತ್ತುಗಳು, ಸೌಲಭ್ಯಗಳು, ಅನುದಾನ (ಶಾಸಕರ- ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಸೇರಿದಂತೆ) ಜಮೀನು ಮಂಜೂರಾತಿ ಇತ್ಯಾದಿಗಳ ಬಗ್ಗೆ ಶ್ವೇತಪತ್ರ ಹೊರಡಿಸಲು ಸರ್ಕಾರವನ್ನು ಬುದ್ಧಿಜೀವಿಗಳು/ಪ್ರಗತಿಪರ ಚಿಂತಕರು ಹಾಗೂ ಮಾಧ್ಯಮದವರು ಒತ್ತಾಯಿಸುವುದು ಅವಶ್ಯ. ಸರ್ಕಾರ ಮುಂದಾಗದಿದ್ದರೆ, ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸುವುದು ಅನಿವಾರ್ಯವೆನಿಸುತ್ತದೆ.
"ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ" ಎಂಬ ನಾಣ್ಣುಡಿ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಹಾಗಾಗಿ, ಈ ಮಠಗಳು ಅನುದಾನ ಪಡೆಯುವಲ್ಲಿ ಸ್ಫರ್ಧೆಗೆ ಇಳಿದಿವೆ. ಸರ್ವರಿಗೂ ಸಮಪಾಲು ಹಾಗೂ ಸಹಬಾಳು ಎಂಬ ತತ್ವಕ್ಕೆ ತಿಲಾಂಜಲಿ ನೀಡಲು ಇವು ಹೊರಟಿವೆ.
-ಕೆ.ಟಿ. ತಿಮ್ಮಾರೆಡ್ಡಿ
ನಿವೃತ್ತ ಕೆ.ಎ.ಎಸ್ ಅಧಿಕಾರಿ