ಹಿಂದು ಉಗ್ರವಾದಿಗಳ ಕಾಲ್ಪನಿಕ ಕ್ಯಾಂಪುಗಳು!
ಸುಶೀಲ್ ಕುಮಾರ್ ಶಿಂದೆ ಅವರನ್ನು ನಾನು ಮೊದಲ ಬಾರಿಗೆ ಭೇಟಿ ಆದದ್ದು 1998ರಲ್ಲಿ. ಮುಂಬೈನಲ್ಲಿ ನಡೆದ ನನ್ನ ಹೆಂಡತಿ ಕಹಿನಿಯ ಪ್ರಥಮ ಕಲಾ ಪ್ರದರ್ಶನದ ಉದ್ಘಾಟನೆಗೆ ಅವರು ಬಂದಿದ್ದರು. ಅವರಾಗ ಶರದ್ ಪವಾರ್ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದರು.
ಈ ಇಪ್ಪತೈದು ವರ್ಷದಲ್ಲಿ ಹಲವಾರು ಮಂತ್ರಿ ಪದವಿಗಳನ್ನು ನಿರ್ವಹಿಸಿ ರಾಜಕೀಯ ಏಣಿಯನ್ನು ಜಾಗೃತವಾಗಿ ಏರಿಕೊಂಡು ಬಂದಿದ್ದಾರವರು. ಶಿಂದೆ, ವಿನಯಶೀಲ ಗುಣಕ್ಕೆ ಮತ್ತು ಪಕ್ಷದ ಪರ ನಿಷ್ಠೆಯಿಂದಾಗಿ ಗುರುತಿಸಿಕೊಂಡವರು. ಆದರೆ ಕೇಂದ್ರ ಸಚಿವರಾದ ಮೇಲೆ ಗಮನಸೆಳೆಯುವಂತಹ ವರ್ಚಸ್ಸನ್ನೇನೂ ಅವರು ಸೃಷ್ಟಿಸಿಕೊಂಡಿಲ್ಲ.
ಫೆಬ್ರವರಿ 21ಕ್ಕೆ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಮಾತ್ರ ಎಲ್ಲರ ಕಣ್ಣು ಅವರ ಮೇಲಿರಲಿವೆ. ಅದರಲ್ಲೂ ಮುಖ್ಯವಾಗಿ 'ಆರ್ಎಸ್ಎಸ್ ಮತ್ತು ಬಿಜೆಪಿ' ಉಗ್ರವಾದಿಗಳನ್ನು ಹುಟ್ಟುಹಾಕುತ್ತಿವೆ ಎನ್ನುವ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ.
ನಿಜಕ್ಕೂ ಅವು ಉಗ್ರರನ್ನು ಸೃಷ್ಟಿಸುತ್ತಿವೆಯೇ? ಖಂಡಿತ ಇಲ್ಲ. ಒಂದು ವೇಳೆ ಶಿಂದೆ ಅವರ ಮಾತಿನಲ್ಲಿ ಹುರುಳಿದ್ದರೆ, ಅವರು ಮತ್ತು ಕಾಂಗ್ರೆಸ್ ಪಕ್ಷ ಇಷ್ಟು ಹೊತ್ತಿಗಾಗಲೇ ಜನತೆಯೆದುರು ದಾಖಲೆಗಳನ್ನು ತರೆದಿಡುತ್ತಿರಲಿಲ್ಲವೇ?
ಇದೇನೇ ಇದ್ದರೂ, ಪಾಕಿಸ್ತಾನಕ್ಕಂತೂ ಭಯೋತ್ಪಾದನೆಯ ವಿಷಯದಲ್ಲಿ ಎರಡೂ ದೇಶಗಳೂ ಒಂದೇ ಸ್ಥಿತಿಯಲ್ಲಿವೆ ಎಂದು ಹೇಳಿಕೊಳ್ಳಲು ಒಂದೊಳ್ಳೆಯ ನೆಪ ಸಿಕ್ಕಂತಾಗಿದೆ: ನಾವು ಉಗ್ರ ಕೇಂದ್ರಗಳನ್ನು ನಡೆಸುತ್ತೇವೆ, ಹಾಗೆಯೇ ನೀವೂ ಕೂಡ. ನಾವು 26/11 ದಾಳಿ ನಡೆಸಿದರೆ ನೀವು ಸಂಝೋತಾ ಎಕ್ಸ್ಪ್ರೆಸ್ ಸ್ಫೋಟ ನಡೆಸಿದಿರಿ!
ಖುದ್ದಾಗಿ ಮಾಡಿಕೊಂಡಿರುವ ಗಾಯಕ್ಕೆ ಮುಲಾಮು ಹಚ್ಚಲೇಬೇಕಿದೆ. ಒಂದೋ ಶಿಂದೆ ಕ್ಷಮಾಪಣೆ ಕೇಳಿ, ಹೇಳಿಕೆಯನ್ನು ಹಿಂಪಡೆಯಬೇಕು ಅಥವಾ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಒಂದು ವೇಳೆ ಅವರು ಹೇಳುತ್ತಿರುವುದೆಲ್ಲ ನಿಜವೆಂದಾದರೆ, ಕೂಡಲೇ ಕಾಂಗ್ರೆಸ್ ಈ ವಿಷಯವನ್ನು ವಿಚಾರಣಾ ನ್ಯಾಯಾಲಯಕ್ಕೆ ಒಯ್ಯಬೇಕು.
ಆದರೆ ಅದು ಆ ಕೆಲಸಕ್ಕೆ ಮುಂದಾಗುವುದಿಲ್ಲ. ಏಕೆಂದರೆ ಶಿಂದೆ, ಪಕ್ಷದ ಮುಖವನ್ನು ಉಳಿಸಲು ಮತ್ತು ವಿರೋಧ ಪಕ್ಷದ ಸಿಟ್ಟನ್ನು ತಣ್ಣಗಾಗಿಸಲು ಸಾಕಾಗುವಷ್ಟು ಅರೆಕ್ಷಮಾಪಣೆಯನ್ನು ಕೇಳಿಯೇ ಕೇಳುತ್ತಾರೆ. ಆಗ ಈ ವಿಷಯದ ತೀವ್ರತೆ ಕಡಿಮೆಯಾಗಿ, ಬೇರೆ ವಿಷಯಗಳತ್ತ ಸಂಸತ್ತಿನ ಗಮನ ಹರಿಯುವುದಂತೂ ನಿಶ್ಚಿತ. ಉದಾಹರಣೆಗೆ ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣ. ಯುಪಿಎ ಸರ್ಕಾರದ 2014ರ ಚುನಾವಣಾ ಜೀವಾಳವಾಗಿರುವ ಆಹಾರ ಭದ್ರತಾ ಮಸೂದೆಯತ್ತಲೂ ಎಲ್ಲರ ದೃಷ್ಟಿ ನೆಡಲಿದೆ.
ಹಾಗಾಗೆ ಬಜಟ್ ಮಂಡನೆ ವೇಳೆ ಯಾವುದೇ ರೀತಿಯ ಅಡ್ಡಿಗಳು ಎದುರಾಗದಂತೆ ನೋಡಿಕೊಳ್ಳಲು ಸರ್ಕಾರ ಸರ್ವ ರೀತಿಯಿಂದಲೂ ಪ್ರಯತ್ನಿಸಲಿದೆ. ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಅವರು ಆಗಸ್ಟಾ ವೆಸ್ಟ್ಲ್ಯಾಂಡ್ ಡೀಲ್ನ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚನೆಯ ಪ್ರಸ್ತಾಪವನ್ನಿಟ್ಟಿರುವುದು ಅಧಿವೇಶನ ಸುಸೂತ್ರವಾಗಿ ನಡೆಯಲಿ ಎಂಬ ಮುಂದಾಲೋಚನೆಯನ್ನಿಟ್ಟುಕೊಂಡೇ.
ಆದರೆ 'ಹಿಂದೂ ಉಗ್ರವಾದ'ದ ಕುರಿತ ಮಾತನ್ನು ನಾವು ಮರೆಯಬಾರದು. ಇನ್ನೊಂದು ಬಾರಿ ಇದೇ ರೀತಿಯ ಹೇಳಿಕೆಗಳು ಹೊರಬರುವವರೆಗೂ ನಮ್ಮ ಸಾಮೂಹಿಕ ಉಪಪ್ರಜ್ಞೆಯ ಬಿರುಕುಗಳಲ್ಲಿ ಆ ವಿಷಯವನ್ನು ಜಾರಿಹೋಗಲು ಬಿಡಬಾರದು.
ಹಿಂದೂ/ ಕೇಸರಿ ಉಗ್ರವಾದದ ವಿಷಯ ನಿಜಕ್ಕೂ ಎಷ್ಟು ಗಂಭೀರ ಸ್ವರೂಪದಲ್ಲಿದೆ ಎಂಬುದಕ್ಕೆ ತಾರ್ಕಿಕ ಉತ್ತರ ಕಂಡುಕೊಳ್ಳಲು ಪ್ರಯತ್ನ ಪಡೋಣ. ಹಿಂದೂ ಉಗ್ರವಾದಕ್ಕೆ ಥಳುಕುಹಾಕಿಕೊಂಡಿರುವ ನಾಲ್ಕು ಪ್ರಮುಖ ಘಟನೆಗಳೆಂದರೆ: ಮಾಲೇಗಾಂವ್(2006), ಸಂಝೋತಾ ಎಕ್ಸ್ಪ್ರೆಸ್(2007), ಮೆಕ್ಕಾ ಮಸೀದಿ(2007) ಮತ್ತು ಅಜ್ಮೇರ್ ಶರೀಫ್(2007). ಇವೆಲ್ಲವೂ ಇನ್ನು ವಿಚಾರಣೆಯಲ್ಲಿರುವ ಕೇಸುಗಳು. ಆಪಾದಿತರೆಲ್ಲ ಹಲವಾರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಆದರೆ ಈ ದಾಳಿಗಳಲ್ಲಿ ನಿಷೇಧಿತ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳ ಕೈವಾಡವಿದೆ ಎನ್ನುತ್ತದೆ ವಿಶ್ವಸಂಸ್ಥೆ. ಇನ್ನು ಈ ನಾಲ್ಕು ದಾಳಿಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 127. ಇದಕ್ಕೆ ಹೋಲಿಸಿದರೆ, ಮಾರ್ಚ್ 1993ರಂದು ಮುಂಬೈನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಸತ್ತದ್ದು 257 ಮಂದಿ.
ಉಗ್ರವಾದವನ್ನು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಥಳುಕು ಹಾಕುವುದು ಸಾಧ್ಯವಿಲ್ಲ. ಹಾಗೆಯೇ ದಾಳಿಗಳ ಪ್ರಮಾಣ ಮತ್ತು ಸತ್ತವರ ಸಂಖ್ಯೆಯ ಆಧಾರದ ಮೇಲೆ ಉಗ್ರವಾದಿಗಳನ್ನು ಹೋಲಿಸಿ ನೋಡುವುದೂ ಸರಿಯಲ್ಲ. ಒಬ್ಬರೇ ಸಾಯಲಿ ಅಥವಾ ನೂರು ಜನರೇ ಸಾಯಲಿ, ಎಲ್ಲ ಉಗ್ರ ಕೃತ್ಯಗಳೂ ಖಂಡನಾರ್ಹವೇ.
ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ 'ಹಿಂದೂ ಉಗ್ರವಾದಿಗಳಿಂದ'(ಸಾಬೀತಾಗದ) ಇದುವರೆಗೂ ನಡೆದಿವೆ ಎನ್ನಲಾದ ದಾಳಿಗಳ ಸಂಖ್ಯೆ ಕೇವಲ ನಾಲ್ಕು. ಈ ನಾಲ್ಕೂ ಘಟನೆಗಳು ನಡೆದಿದ್ದು 2006 ಮತ್ತು 2007ರ ನಡುವೆ. ಅದಕ್ಕೂ ಮುಂಚೆ ಅಥವಾ ಅದರ ನಂತರ ಅಂತಹದ್ದೇನೂ ಘಟಿಸಿದ ಉದಾಹರಣೆಗಳಿಲ್ಲ.
ಜಿಹಾದಿಗೆ ಸರಿಸಮಾನವಾಗಿರಲೆಂದು ಸುಖಾ ಸುಮ್ಮನೆ ಹಿಂದೂ ಉಗ್ರವಾದವನ್ನು ಸೃಷ್ಟಿಸುವುದು ನಿಜಕ್ಕೂ ಹೇಯ ಕೆಲಸ. ಇದು ಹೇಗಿದೆಯೆಂದರೆ, ಸಾಬೀತಾಗದ ಸಂಝೋತಾ ಎಕ್ಸ್ಪ್ರೆಸ್ ಪ್ರಕರಣವೊಂದನ್ನೇ ಮುಂದಿಟ್ಟುಕೊಂಡು ಉಗ್ರವಾದದ ವಿಷಯದಲ್ಲಿ ಇಬ್ಬರೂ 'ಒಂದೇ ಸ್ಥಿತಿಯಲ್ಲಿದ್ದೇವೆ' ಎಂದು ಪಾಕಿಸ್ತಾನ ವಾದಿಸುತ್ತಿರುವಂತೆ!
ಶಿಂದೆಯವರ ಕ್ಷಮಾಪಣೆಯಲ್ಲಿ ಸ್ಪಷ್ಟ ಸಂದೇಶವಿರಬೇಕು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಕ್ಯಾಂಪುಗಳನ್ನು ಧ್ವಂಸ ಮಾಡುವತ್ತ ಅವರು ತಮ್ಮ ಗಮನ ಹರಿಸಬೇಕೇ ಹೊರತು, ಆರ್ಎಸ್ಎಸ್ ಮತ್ತು ಬಿಜೆಪಿಯ ಕಾಲ್ಪನಿಕ ಕ್ಯಾಂಪುಗಳ ಮೇಲಲ್ಲ. ಸಂಘಪರಿವಾರದಲ್ಲಿ ಅನೇಕ ನ್ಯೂನತೆಗಳಿರಬಹುದು. ಆ ವಿಷಯವಾಗಿ ನಾನು ವರ್ಷಗಳಿಂದ ಲೇಖನಗಳನ್ನು ಬರೆದು ಖಂಡಿಸಿದ್ದೇನೆ. ಆದರೆ ಉಗ್ರವಾದಿಗಳನ್ನು ಹುಟ್ಟುಹಾಕುವ ಕೆಲಸವನ್ನು ಅದು ಮಾಡಿಲ್ಲ ಎನ್ನುವುದಂತೂ ಸತ್ಯ.
(ಲೇಖಕರ ಅನುಮತಿಯೊಂದಿಗೆ ಟೈಮ್ಸ್ ಬ್ಲಾಗ್ನಿಂದ)
-ಮಿನ್ಹಾಜ್ ಮರ್ಚೆಂಟ್, ಪತ್ರಕರ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

