ಮತಕ್ಕಾಗಿ ಮಠ ಎಂಬ ಹೊಸ ಚಟ

Updated on: 

ಪ್ರಜಾಪ್ರಭುತ್ವದಲ್ಲಿ 'ಮತ' ಎಷ್ಟು ಪ್ರಭಾವಶಾಲಿ ಎಂಬುದು ತಿಳಿದ ವಿಷಯವೇ. ಆದರೆ ಅಷ್ಟೇ ಮಹತ್ವ 'ಮಠ'ಕ್ಕೂ ಇದೆ ಎಂಬುದು ತಿಳಿದಿದ್ದು ನಿಮ್ಮ 9/2ರ ಮುಖಪುಟದ ವರದಿ 'ಮತ ಮಠ ಬಜೆಟ್‌' ಓದಿದಾಗಲೇ.
ರಾಜ್ಯದ ಅಥವಾ ದೇಶದ ಆರ್ಥಿಕ ಸ್ಥಿತಿ-ಗತಿ, ಬೆಳವಣಿಗೆಗೆ ಬಜೆಟ್ ಅಳತೆಗೋಲಾಗಿರುವುದು ಸಹಜ. ಈ ಸಲ ಜಗದೀಶ ಶೆಟ್ಟರ್ ಪ್ರಯತ್ನದಲ್ಲಿ ಮಠಾಧೀಶರನ್ನೂ ಸಂತುಷ್ಟಗೊಳಿಸುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಅಂತ ಅನಿಸುವುದಿಲ್ಲವೇ? ಎಲ್ಲವನ್ನೂ ತ್ಯಜಿಸಿ, ಮನುಕುಲದ ಉದ್ಧಾರಕ್ಕಾಗಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಚಿಂತಿಸಬೇಕಾದ ಮಠಗಳನ್ನೇಕೆ ಎಳೆದು ತಂದಿದ್ದಾರೋ? 'ಇದೇ ಈ ಸಲದ ಬಜೆಟ್ ವಿಶೇಷ' ಅಂತ ವಿಶ್ಲೇಷಕರು ಅಭಿಪ್ರಾಯಪಟ್ಟರೂ ಆಶ್ಚರ್ಯವಿಲ್ಲ. ಹಾಗಂತ ಈ ಪರಂಪರೆ ಹೊಸತೇನೂ ಅಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ದಿಸೆಯಲ್ಲಿ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ.
ಅವರು ಮುಖ್ಯಮಂತ್ರಿಯಾಗಿದ್ದಾಗ ಅದೆಷ್ಟೋ ಮಠಗಳಿಗೆ ಕೋಟಿ ಕೋಟಿ ಅನುದಾನ ಕೊಟ್ಟು ಮಠಾಧೀಶರುಗಳ ಕೃಪೆಗೆ ಪಾತ್ರರಾಗಿದ್ದಾರೆ. ಈಗ ಅದೇ 'ಸಂಸ್ಕೃತಿ'ಯನ್ನು ಹಾಲಿ ಮುಖ್ಯಮಂತ್ರಿಗಳು ನಡೆಸಿಕೊಂಡು ಬರುತ್ತಿದ್ದಾರಲ್ಲವೇ? ವಿಶೇಷವೆಂದರೆ ಮಾಜಿಗಿಂತ ಹಾಲಿ ಎಷ್ಟಕ್ಕೂ ಕಡಿಮೆಯಿಲ್ಲ ಎಂಬಂತೆ ಮಠಗಳ ಸಂಖ್ಯೆಯನ್ನು ಹೆಚ್ಚಿಸಿದ್ದಲ್ಲದೆ ಮೊಬಲಗನ್ನೂ ಹೆಚ್ಚಿಸಿದ್ದಾರೆ! ನಾಡಿನ ಜನರ ಒಂದೇ ಒಂದು ಸರಳ ಪ್ರಶ್ನೆ-ಮಠಗಳಿಗೆ ನೀಡಲಿರುವ ಅನುದಾನಗಳು ಯಾವ ಪುರುಷಾರ್ಥ ಸಾಧಿಸಲು ಎಂಬುದು. ಅಷ್ಟಕ್ಕೂ ಮನಸೋ ಇಚ್ಛೆ ದಾನ ಮಾಡಲು ಇದೇನು ಅವರ ಸ್ವಂತ ಕಿಸೆಯಿಂದ ಕೊಡಲ್ಪಡುವುದೇ? ಕಷ್ಟಪಟ್ಟು ದುಡಿದ ಜೀವಗಳ ತೆರಿಗೆ ಹಣದಿಂದಲ್ಲವೇ? ಇವರ ಈ ದಾನಶೂರತ್ವ ರಾಜ್ಯದ ಪ್ರಗತಿಗೆ ಅಥವಾ ಅಭಿವೃದ್ಧಿಗೆ ಯಾವ ರೀತಿ ಸಹಾಯ ಮಾಡೀತು? ಕೇವಲ ಜಾತಿಯ ಲೆಕ್ಕಾಚಾರ ಹಾಕಿ ಮತ ಗಿಟ್ಟಿಸಿಕೊಳ್ಳುವ ಹುನ್ನಾರವಲ್ಲವೇ ಇದು? ಒಂದು ಮಾತಂತೂ ಸತ್ಯ, ಈಗಿತ್ತಲಾಗಿ ಮಠಾಧೀಶರುಗಳೂ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕೇವಲ ಹಸ್ತಕ್ಷೇಪಕ್ಕೆ ನಿಲ್ಲದೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಮುಂದುವರಿದಿದ್ದಾರೆ. ಒಂದು ರೀತಿಯ ಜಜಜಿಛ್ಛಡ್ಟಿ ಆಡಳಿತಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ.
ಯಾರನ್ನು ಮುಖ್ಯಮಂತ್ರಿ ಮಾಡೋದು, ಇನ್ಯಾರನ್ನು ಪ್ರಧಾನಿ ಮಾಡೋದು ಎಂಬಲ್ಲಿ ಕೂಡ ಮಠಗಳು ಮುಖ್ಯ ಪಾತ್ರ ವಹಿಸುತ್ತಿವೆ. ಹಾಗಂತ ಎಲ್ಲ ಮಠಗಳನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಬೇಕಂತಲ್ಲ. ಎಲ್ಲಿ ನಿಜವಾದ ಶೈಕ್ಷಣಿಕ, ಸಾಮಾಜಿಕ ಕೆಲಸಗಳಾಗುತ್ತಿವೆಯೋ ಅಂಥಲ್ಲಿ ಸಹಾಯಹಸ್ತ ನೀಡಬೇಕಾದದ್ದೆ. ಆದರೆ ಈ ರೀತಿಯಲ್ಲಲ್ಲ. ಇಂದು ಅದೆಷ್ಟೋ ಜನರು ಮೂಲಭೂತ ಸೌಕರ್ಯಗಳಿಲ್ಲದೇ ವಂಚಿತರಾಗುತ್ತಿದ್ದಾರೆ, ದಿನಕ್ಕೆರಡು ಹೊತ್ತು ಊಟಕ್ಕೆ ತತ್ವಾರ ಎಂಬಂತಿದೆ. ಕಲಿಯಬೇಕೆಂಬ ಮನಸ್ಸಿದೆ ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ನಿಜವಾದ ಹಣದ ಆವಶ್ಯಕತೆ ಇರುವುದು ಅಲ್ಲಿ. ಒಂದು ಮಾತನ್ನಂತೂ ಒಪ್ಪಲೇಬೇಕು. ನಮ್ಮಲ್ಲಿ ಬೇಕಾಬಿಟ್ಟಿ ಖರ್ಚು ಮಾಡುವಷ್ಟು ಸಂಪನ್ಮೂಲವಿಲ್ಲ. ಈ ರೀತಿಯ ದುಂದುವೆಚ್ಚಗಳಿಗೆ ಅವಕಾಶವೇ ಇಲ್ಲದಿರುವಾಗ ಅನುದಾನದ ಹೊಳೆ ಹರಿಸಿರುವುದು ಎಷ್ಟಕ್ಕೂ ಸಲ್ಲ. ಇಷ್ಟಕ್ಕೆಲ್ಲ ಮೂಲಕಾರಣ ಮತಬ್ಯಾಂಕ್ ಅನ್ನಬಹುದೇ? ಈ ಎಲ್ಲ ಬೆಳವಣಿಗೆಗಳು ರಾಜ್ಯವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಲಿವೆ ಎಂಬುದನ್ನು ಮಠಾಧೀಶರುಗಳು ಹೇಳಬಲ್ಲರೇ? ಸದ್ಯದ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ಬಿಂಬಿಸುವ ನಿಮ್ಮ ಶೀರ್ಷಿಕೆ 'ಮತ ಮಠ ಬಜೆಟ್‌' ಸಚಿತ್ರವಾಗಿವೆ.

-ಶಂಕರನಾರಾಯಣ ಭಟ್
ಮಾಡಗೇರಿ, ಹೊನ್ನಾವರ ಉ.ಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com