ದೇಶದ ಆಡಳಿತಕ್ಕೆ ಎಷ್ಟೊಂದು ವಾಮಮಾರ್ಗ!

Updated on: 

ಭಯೋತ್ಪಾದಕ ಖಂಡಿತವಾಗಿಯೂ ಒಬ್ಬ ಹೇಡಿ. ಆತ ಅವಿತುಕೊಳ್ಳುತ್ತಾನೆ, ಬಳಿಕ ದಾಳಿ ನಡೆಸುತ್ತಾನೆ, ಅಮಾಯಕರನ್ನು ಕೊಂದುಹಾಕುತ್ತಾನೆ. ಹೇಡಿಗಳು ಎಂದೂ ಜಯ ಗಳಿಸುವುದಿಲ್ಲ. ಹಾಗಾಗಿ ಹೈದರಾಬಾದ್ ಸ್ಫೋಟದಂಥ ದುರ್ಘಟನೆಗಳಿಂದ ಭಯೋತ್ಪಾದಕರಿಗೆ ಏನೂ ಲಾಭವಾಗದು, ಏನೂ ಸಾಬೀತೂ ಆಗದು. ಭಾರತದ ದೊಡ್ಡ ದುರಂತಗಳ ಸಾಲಿಗೆ ಅವೂ ಸೇರಬಹುದು ಅಷ್ಟೆ. ಇಂಥ ದುರಂತಗಳಿಗೆ ಭಾರತೀಯ ರಾಜಕಾರಣಿಗಳ ಹೊಲಸು ಆಟಗಳೇ ಕಾರಣ. ಅವರು ಸೃಷ್ಟಿಸಿದ ಚಿತ್ರಣದತ್ತ ಒಮ್ಮೆ ಗಮನಹರಿಸಿ ನೋಡಿ. ರಾಜಕೀಯ ಇಲ್ಲದಿದ್ದರೆ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಲು ನಿಮಗೆ ಸಾಧ್ಯವಿಲ್ಲ. ರಾಜಕೀಯ ಇಲ್ಲದಿದ್ದರೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಸಾಧ್ಯವಿಲ್ಲ. ರೇಪ್‌ಗೂ ಇದೆ ರಾಜಕೀಯದ ನಂಟು!
 ಈ ಎಲ್ಲ ವಿಷಯಗಳಲ್ಲಿ ಕಾಂಗ್ರೆಸ್ ಆರೋಪಿ ಸ್ಥಾನದಲ್ಲಿ ನಿಲ್ಲುತ್ತದೆ. ಇತರ ಪಕ್ಷಗಳು ಅದಕ್ಕಿಂತ ಉತ್ತಮ ಎಂಬ ಕಾರಣದಿಂದಲ್ಲ. ಬದಲಾಗಿ, ಅದು ಇಂದಿನ ಆಡಳಿತಾರೂಢ ಪಕ್ಷ ಎಂಬ ಕಾರಣಕ್ಕೆ. ತಪ್ಪು ದಾರಿಗೆಳೆಯುವ ಸಲಹೆಗಳನ್ನು ಕೇಳುವಲ್ಲಿ, ಅವುಗಳನ್ನು ಪಾಲಿಸುವಲ್ಲಿ ಅದು ಕುಖ್ಯಾತ. ಸರ್ದಾರ್ ಪಟೇಲ್ ಅವರಿಂದ ಬೀಗ ಹಾಕಲ್ಪಟ್ಟ ಬಾಬರಿ ಮಸೀದಿಯ ಬಾಗಿಲುಗಳನ್ನು ತೆರೆಸಿದ್ದು, ಶಾಬಾನೋ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ವಿವೇಕದ ತೀರ್ಪನ್ನು ನಿಷ್ಫಲಗೊಳಿಸಲು ಪ್ರತಿಗಾಮಿ ಮುಸ್ಲಿಂ ಮಹಿಳಾ ಮಸೂದೆಯನ್ನು ಅಂಗೀಕರಿಸಿದ್ದು ಇತ್ಯಾದಿಗಳನ್ನು ಇಲ್ಲಿ ಹೆಸರಿಸಬಹುದು. ಕಾಂಗ್ರೆಸ್ ಒಂದು ದಿನ ಮುಸ್ಲಿಮರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತದೆ, ಮಾರನೇ ದಿನ ಹಿಂದುಗಳನ್ನು ಸಂತೋಷಪಡಿಸಲು ಯತ್ನಿಸುತ್ತದೆ. ಕೊನೆಗೆ ಎಲ್ಲರನ್ನೂ ಅಸಮಾಧಾನಗೊಳಿಸುತ್ತದೆ.
 ಅಫ್ಜಲ್ ಗುರುವಿನ ಗಲ್ಲು ಶಿಕ್ಷೆ ಜಾರಿಗೆ ಬಲವಾದ ಕಾನೂನು ಸಮರ್ಥನೆ ಇರಬಹುದು. ತನ್ನ ಪರ ವಾದ ಮಂಡಿಸಲು ಅಫ್ಜಲ್‌ಗೆ ಸಾಕಷ್ಟು ಸಮಯಾವಕಾಶ ಇತ್ತು, ಮಾನವಹಕ್ಕು ಉಲ್ಲಂಘನೆಯ ಆರೋಪಗಳಿಗೆ ಆಧಾರವೇ ಇಲ್ಲ ಎಂದಿದ್ದಾರೆ ಸುಪ್ರೀಂಕೋರ್ಟ್ ವಕೀಲ ಹರೀಶ್ ಸಾಳ್ವೆ. ಆದರೆ, ಈ ವಿಚಾರದ ಕಾನೂನು ಆಧಾರವು ರಾಜಕೀಯದ ಮುಂದೆ ಪ್ರಾಮುಖ್ಯ ಕಳೆದುಕೊಳ್ಳುತ್ತದೆ. 2005ರಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು 2013ರಲ್ಲಷ್ಟೇ ಜಾರಿಗೊಳಿಸಿದ್ದು ಯಾಕೆ? ಸಾಳ್ವೆ ಅವರೇ ಹೇಳುತ್ತಾರೆ- ಇಡೀ ಪ್ರಕ್ರಿಯೆಯನ್ನು ವಿಳಂಬಗೊಳಿಸಿದ್ದೇ ಯಾವುದೋ ಒಂದು ಹಿತಾಸಕ್ತಿ. ಅದರ ಆಳವನ್ನು ಅಳೆಯುವುದು ಕಷ್ಟಸಾಧ್ಯ.
 ಹಾಗಾದರೆ, ಗಲ್ಲು ಶಿಕ್ಷೆ ಜಾರಿಯನ್ನು ವಿಳಂಬಗೊಳಿಸಿದ್ದಾದರೂ ಯಾವುದು? ಪಕ್ಷ ಹಿತಾಸಕ್ತಿ! ಅಫ್ಜಲ್‌ನನ್ನು ಗಲ್ಲಿಗೇರಿಸಿದರೆ ಮುಸ್ಲಿಂ ಮತಗಳನ್ನು ಕಳೆದುಕೊಳ್ಳಬೇಕಾದೀತು ಎಂಬ ಭಯವೇ ಕಾಂಗ್ರೆಸ್ಸನ್ನು ನಿರ್ಬಂಧಿಸಿತ್ತು. ಮಹಾ ಚುನಾವಣೆ ಸಮೀಪಿಸುತ್ತಿರುವಂತೆ, ಆತನನ್ನು ಗಲ್ಲಿಗೇರಿಸದೇ ಇದ್ದರೆ ಭಾರಿ ಸಂಖ್ಯೆಯ ಹಿಂದೂ ಮತಗಳನ್ನು ಕಳೆದುಕೊಳ್ಳಬೇಕಾದೀತು ಎಂಬ ಭಯ ಅದನ್ನು ಕಾಡತೊಡಗಿತು. ಈ ಭಯವು ಮೊದಲಿನ ಭಯವನ್ನು ಹಿಂದಿಕ್ಕಿತು. ಅಧಿಕಾರಕ್ಕಾಗಿ ಎಂತೆಂಥ ದಾರಿ ಹಿಡಿಯುತ್ತಾರೆ ನೋಡಿ. ಇಂಥ ಮಾರ್ಗದಿಂದ ಕಾಂಗ್ರೆಸ್ ಈಗ ಮುಸ್ಲಿಂ ಮತಗಳನ್ನೂ ಕಳೆದುಕೊಳ್ಳಲಿದೆ, ಇನ್ನೊಂದೆಡೆ ಹಿಂದೂ ಮತಗಳನ್ನೂ ಗೆದ್ದುಕೊಳ್ಳಲಾರದು. ಇತ್ತ, ಹಿಂದುತ್ವ ಭಾವನೆಗಳ ಮೇಲೆ ಬಿಜೆಪಿಯು ಹಿಡಿತ ಸಾಧಿಸಿದೆ.  ನರೇಂದ್ರ ಮೋದಿಯ ಕ್ರಿಯಾಶೀಲತೆ ಮತ್ತು ಸುಶೀಲ್‌ಕುಮಾರ್ ಶಿಂದೆಯ ಮೂರ್ಖತನ ಇದಕ್ಕೆ ಇನ್ನಷ್ಟು ಬಲ ನೀಡಿದೆ.
ರಕ್ಷಣಾ ಭ್ರಷ್ಟಾಚಾರದಲ್ಲಿನ ರಾಜಕೀಯವು ಹೊಸ ಬಗೆಯದು, ಕುತೂಹಲಕಾರಿ. ಏಕೆಂದರೆ, ಹಿಂದಿನ ಮಿಸ್ಟರ್ ಕ್ಲೀನ್ ಈಗ ರಕ್ಷಣಾ ಸಚಿವರು. ಯಾವುದೇ ಡೀಲ್‌ನಿಂದ ಎ.ಕೆ. ಆ್ಯಂಟನಿಗೆ ಒಂದು ಪೈಸೆ ದಕ್ಕುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಕೂಡಾ ಹೇಳಲಾರದು. ಆದರೆ, ತನ್ನ ಮೂಗಿನ ನೇರಕ್ಕೇ ನಡೆಯುವ ಹೊಲಸು ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೆ ಒಬ್ಬ ಕ್ಲೀನ್ ಸಚಿವನಿಂದ ಏನು ಪ್ರಯೋಜನ? ತಮ್ಮ ಅಸಹಾಯಕತೆಯನ್ನು ಆ್ಯಂಟನಿ ಬಹಿರಂಗವಾಗಿ ಒಪ್ಪಿಕೊಂಡಿದ್ದೂ ಆಗಿದೆ. ಅಂದರೆ, ರಕ್ಷಣಾ ವ್ಯವಸ್ಥೆಯಲ್ಲೂ ಭ್ರಷ್ಟಾಚಾರಕ್ಕೆ ಅವಕಾಶವಿದೆ, ಸಚಿವ ಎಂಬವನು ಅಪ್ರಸ್ತುತ ವ್ಯಕ್ತಿ ಎಂದು ಒಪ್ಪಿಕೊಂಡಂತಾಯ್ತು.
 ಆಂತರಿಕ ಭ್ರಷ್ಟಾಚಾರದ ಪರಿಣತ ಕೆಲಸವನ್ನು ಮಾಡಿದವನಾದರೂ ಯಾರು? ಒಬ್ಬ ಅತಿ ಬುದ್ಧಿವಂತನಿಗಾದರೂ ಉನ್ನತ ಸ್ಥಾನದಲ್ಲಿರುವವರ ನೆರವಿಲ್ಲದೆ ಇದನ್ನು ಮಾಡಲು ಸಾಧ್ಯವೇ? ಬೊಫೋರ್ಸ್ ಹಗರಣದಲ್ಲಿ ಒಟ್ಟಾವಿಯೋ ಕ್ವಟ್ರೋಕಿಯೇ ಅಪರಾಧಿ ಎಂದು ಪ್ರತಿಯೊಬ್ಬ ಭಾರತೀಯ ನಂಬಿದ್ದಾನೆ. ಎಲ್ಲ ವಿಚಾರಗಳಲ್ಲಿ ಆತ ಬುದ್ಧಿವಂತನೇ. ಆದರೆ, ಯಾರ ನೆರವಿಲ್ಲದೆಯೇ ಕಾರ್ಯವೆಸಗಿರುತ್ತಿದ್ದರೆ ಇಡೀ ಭಾರತ ಸರ್ಕಾರವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಲು ಅವನಿಗೆ ಸಾಧ್ಯವಾಗುತ್ತಿತ್ತೇ?
 ಬೊಫೋರ್ಸ್ ಹಗರಣ ಮತ್ತು ಇತ್ತೀಚಿನ ಹೆಲಿಕಾಪ್ಟರ್ ಡೀಲ್ ಮಧ್ಯೆ ಸಾಕಷ್ಟು ಸಾಮ್ಯತೆ ಕಂಡುಬರುತ್ತದೆ. ಹೆಲಿಕಾಪ್ಟರ್ ವ್ಯವಹಾರದಲ್ಲಿ ಲಂಚ ಪಾವತಿಯಾದ ಬಗ್ಗೆ ಕಳೆದ ಒಂದು ವರ್ಷದಿಂದ ಗುಸುಗುಸು ಕೇಳಿಬರುತ್ತಲೇ ಇತ್ತು. ಆದರೆ, ಸರ್ಕಾರ ಏನೂ ಗೊತ್ತಿಲ್ಲದವರಂತೆ ಕುಳಿತಿತ್ತು. ಬೊಫೋರ್ಸ್ ಪ್ರಕರಣದಂತೆ, ಹೆಲಿಕಾಪ್ಟರ್ ಒಪ್ಪಂದದಲ್ಲಿನ ಅವ್ಯವಹಾರವು ವಿದೇಶದಲ್ಲಿ ಬಹಿರಂಗವಾದ ಬಳಿಕವಷ್ಟೇ ಸರ್ಕಾರ ಕಾರ್ಯಪ್ರವೃತ್ತವಾಯಿತು. ಅತ್ಯಂತ ವಿಷಾದದ ವಿಚಾರವೆಂದರೆ, ಕ್ವಟ್ರೋಕಿಗೆ ನೆರವಾಗಲು ಉದ್ದೇಶಪೂರ್ವಕವಾಗಿ ಬೊಫೋರ್ಸ್ ತನಿಖೆಯ ದಾರಿ ತಪ್ಪಿಸಿದ ಅದೇ ಸಿಬಿಐಗೆ ಹೆಲಿಕಾಪ್ಟರ್ ಅವ್ಯವಹಾರದ ತನಿಖೆಯ ಉಸ್ತುವಾರಿಯನ್ನೂ ವಹಿಸಲಾಗಿದೆ. ಉನ್ನತ ಸ್ಥಾನದಲ್ಲಿರುವವರು ತನಿಖೆಯನ್ನೇ ಬುಡಮೇಲು ಮಾಡುವ ಸಾಧ್ಯತೆಯಿದೆ ಎಂಬ ಸಾರ್ವಜನಿಕರ ಸಂಶಯಕ್ಕೆ ಇದು ಇನ್ನಷ್ಟು ಇಂಬು ನೀಡಿದೆ.
 ದೇಶವನ್ನು ನಿರಂತರವಾಗಿ ಹಾಳುಗೆಡವಲಾಗುತ್ತಿರುವುದನ್ನು ಗ್ಯಾಂಗ್‌ರೇಪ್ ಪ್ರಕರಣಗಳು ಪ್ರತಿಬಿಂಬಿಸುತ್ತವೆ. ದೆಹಲಿ ಪ್ರಕರಣದ ಬಳಿಕ ಗ್ಯಾಂಗ್‌ರೇಪ್ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಅನೇಕ ಪ್ರಕರಣಗಳಲ್ಲಿ, ಪೊಲೀಸರು ದೂರು ದಾಖಲಿಸಿಕೊಳ್ಳುವುದೇ ಇಲ್ಲ. ಕೆಲ ಸಂದರ್ಭಗಳಲ್ಲಿ ಪೊಲೀಸರೇ ಅತ್ಯಾಚಾರವೆಸಗುವುದುಂಟು. ಅನೇಕ ಹಿರಿಯ ರಾಜಕಾರಣಿಗಳೂ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ. ಹಲವರು ಆರೋಪಗಳಿಂದ ತಪ್ಪಿಸಿಕೊಂಡು ತಮ್ಮ ಹುದ್ದೆಗೇ ಅಂಟಿಕೊಂಡಿದ್ದಾರೆ. ಕೇರಳದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಅತ್ಯಾಚಾರಕ್ಕೊಳಗಾದ ಮಹಿಳೆಯ ಮೇಲೇ ಆರೋಪ ಹೊರಿಸಿದ್ದಾರೆ. ಚಾರಿತ್ರ್ಯಹೀನೆ ಎಂದು ಜರೆದಿದ್ದಾರೆ, ಪುರುಷರು, ಮಹಿಳೆಯರ ರಕ್ಷಣೆಗಾಗಿ ಸೂಕ್ತ ಕಾನೂನು ರೂಪಿಸಲು ಒತ್ತಾಯಿಸಿದ್ದಾರೆ. ಅವರು ಇನ್ನೂ ಕಾಂಗ್ರೆಸ್‌ನ ಹಿರಿಯ ನಾಯಕರಾಗಿಯೇ ಉಳಿದಿದ್ದಾರೆ!
 ರೌಡಿಗಳು ಮತ್ತು ಇಂಥ ಸಮಯಸಾಧಕ ರಾಜಕಾರಣಿಗಳ ಆಡಳಿತದಲ್ಲಿರುವ ದೇಶವೊಂದರಲ್ಲಿ ಭಯೋತ್ಪಾದಕರು, ಹೇಡಿಗಳು ಕೂಡಾ ಜನಸಮೂಹದ ಅಂಗವಾಗಿಬಿಡುತ್ತಾರೆ. ಸ್ತ್ರೀಲೋಲರು ಮತ್ತು ಲಾಭಬಡುಕರು, ಮತಾಂಧರು ಮತ್ತು ಭಯೋತ್ಪಾದಕರ ಭಾರತವಿದು. ಇಂಥವರಿಗೆ ಜಾಗ ನೀಡಬಾರದು. ಭಾರತವನ್ನು ರಕ್ಷಿಸಬೇಕಾದರೆ ಇಂಥವರ ವಿರುದ್ಧ ಸಮರ ಸಾರಬೇಕು, ಸೋಲಿಸಿ ಹೊರಗಟ್ಟಬೇಕು.

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com