ವೀರಪ್ಪನ್ ಸಹಚರರಿಗೆ ಗಲ್ಲಾದರೆ ಆತ್ಮಶಾಂತಿ

ವೀರಪ್ಪನ್ ಅಟ್ಟಹಾಸದಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ಅನಿಸಿಕೆ ಏನಿದೆ ಎಂಬುದನ್ನು ತಿಳಿಯಲು ಮೈಸೂರು ವಿವಿ ಮಾನಸ ಗಂಗೋತ್ರಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಜಮೀಲ್ ಅಹ್ಮದ್ ಅವರನ್ನು ಮಾತನಾಡಿಸಿದಾಗ....
Updated on: 

ವೀರಪ್ಪನ್ ಅಟ್ಟಹಾಸದಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ಅನಿಸಿಕೆ ಏನಿದೆ ಎಂಬುದನ್ನು ತಿಳಿಯಲು ಮೈಸೂರು ವಿವಿ ಮಾನಸ ಗಂಗೋತ್ರಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಜಮೀಲ್ ಅಹ್ಮದ್ ಅವರನ್ನು ಮಾತನಾಡಿಸಿದಾಗ....

ಕುಖ್ಯಾತ ಕಾಡುಗಳ್ಳ ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರಾದ ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್‌ಗೆ ಗಲ್ಲು ಶಿಕ್ಷೆ ಜಾರಿಗೆ ಸುಪ್ರೀಂಕೋರ್ಟ್ ಆರು ವಾರಗಳ ತಡೆ ನೀಡಿದೆ. ಕಳೆದ 20 ವರ್ಷಗಳಿಂದ ಜೈಲಿನಲ್ಲಿರುವ ಈ ನಾಲ್ವರಿಗೆ ಗಲ್ಲು ಶಿಕ್ಷೆ ಬೇಡ ಎಂಬ ಕೂಗು ಕೇಳಿ ಬಂದಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂಬ ವಾದಗಳು ನಡೆಯುತ್ತಿವೆ. ಆದರೆ ವೀರಪ್ಪನ್ ಅಟ್ಟಹಾಸದಿಂದ ತಮ್ಮ ಮನೆಯವರನ್ನು ಕಳೆದುಕೊಂಡ ಕುಟುಂಬದವರ ಅನಿಸಿಕೆ ಏನಿದೆ ಎಂಬುದನ್ನು ತಿಳಿಯಲು ಮೈಸೂರು ವಿವಿ ಮಾನಸ ಗಂಗೋತ್ರಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಜಮೀಲ್ ಅಹ್ಮದ್ ಅವರೊಂದಿಗೆ ಈ ವಾರ ಬುಲೆಟ್ ಸಂದರ್ಶನ.
ಇವರು 1992ರ ಆ.14 ರಂದು ಮೀಣ್ಯಂ ಬಳಿ ನಡೆದ ಹತ್ಯಾಕಾಂಡದಲ್ಲಿ ಸಾವಿಗೀಡಾದ ಸಬ್ ಇನ್‌ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ಸಹೋದರ. ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ ರಾಜ್ಯ ಸರ್ಕಾರ, ಟಾಡಾ ಪ್ರಕರಣದಲ್ಲಿ ಬಂಧಿತರಾಗಿ ಮೈಸೂರು ಜೈಲಿನಲ್ಲಿದ್ದ ಆತನ ಸಹಚರರ ವಿರುದ್ಧ ಪ್ರಕರಣಗಳನ್ನು ಕೈಬಿಟ್ಟು ಬಿಡುಗಡೆ ಮಾಡಲು ಮುಂದಾಗಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡಿ, ನಾಲ್ವರಿಗೆ ಗಲ್ಲು ಶಿಕ್ಷೆಯಾಗುವಂತೆ ಮಾಡಿದ್ದು ಶಕೀಲ್ ಅಹ್ಮದ್ ಅವರ ತಂದೆ ದಿ. ಅಬ್ದುಲ್ ಕರೀಂ. ಇವರು ಕೂಡ ಡಿವೈಎಸ್ಪಿಯಾಗಿ ನಿವೃತ್ತರಾಗಿದ್ದರು.
----
-ವೀರಪ್ಪನ್‌ನ ನಾಲ್ವರು ಸಹಚರರಿಗೆ ಗಲ್ಲು ಶಿಕ್ಷೆ ಜಾರಿ ಮುಂದೂಡಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ಖಂಡಿತಾ ಸರಿಯಲ್ಲ. ನಮಗೆ ಇದರಿಂದ ತೀವ್ರ ನಿರಾಶೆಯಾಗಿದೆ. ಆದಷ್ಟು ಬೇಗ ಆ ನಾಲ್ವರು ಡಕಾಯಿತರನ್ನು ಗಲ್ಲಿಗೇರಿಸುವ ಮೂಲಕ ವೀರಪ್ಪನ್‌ನಿಂದ ಹತರಾಗಿರುವವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು. ಏಕೆಂದರೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರವೇ ಇದು ಅತ್ಯಂತ ಹೀನಕೃತ್ಯ, ಅಪರೂಪದ ಪ್ರಕರಣಗಳಲ್ಲಿ ಅಪರೂಪವಾದದ್ದು. 15 ಮಂದಿ ನಾಗರಿಕರು, ಐವರು ಪೊಲೀಸರು ಹಾಗೂ ಇಬ್ಬರು ಅರಣ್ಯ ಸಿಬ್ಬಂದಿಯನ್ನು ಒಮ್ಮೆಲೆ ನೆಲಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದ ಆರೋಪಿಗಳನ್ನು ಕ್ಷಮಿಸಲು ಸಾಧ್ಯವೇ? ಇದನ್ನೆಲ್ಲಾ ಮನವರಿಕೆ ಮಾಡಿಕೊಂಡೇ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ನೀಡಿದೆ ಅಲ್ಲವೇ? ರಾಷ್ಟ್ರಪತಿಗಳು ಕೂಡ ಇದೇ ಕಾರಣಕ್ಕಾಗಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಅಲ್ಲವೇ? ಇವ್ಯಾವು ಮಾನವ ಹಕ್ಕುಗಳ ಪರ ಮಾತನಾಡುವವರ ಕಣ್ಣಿಗೆ ಕಾಣುವುದಿಲ್ಲವೇ? ನೊಂದ ಕುಟುಂಬದವರ ಆಕ್ರಂದನ ಕೇಳುವುದಿಲ್ಲವೇ? ಅವರು ಮಾತ್ರ ಮನುಷ್ಯರು ನಾವು ಮನುಷ್ಯರಲ್ಲವೇ?

-20 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬವಾಗಿದೆ. ಆದ್ದರಿಂದ ಗಲ್ಲು ಶಿಕ್ಷೆ ಬಿಟ್ಟು, ಜೀವಾವಧಿ ಶಿಕ್ಷೆ ಕೊಡಿ ಎಂದು ಮಾನವ ಹಕ್ಕು ಸಂಘಟನೆಗಳು ವಾದ ಮಾಡುತ್ತಿರುವ ಬಗ್ಗೆ ಏನಂತೀರಿ?
ಇದು ಅತಿಯಾಯಿತು. ಈಗ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿರುವವರಿಗೆ ವೀರಪ್ಪನ್‌ನಿಂದ ಹತರಾಗಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬಗಳ ಬಗ್ಗೆ ಅನುಕಂಪ, ಕರುಣೆ ಏಕಿಲ್ಲ? ಅಪರಾಧಿಗಳ ಪರ ವಾದಿಸುವವರು ನೊಂದವರ ಪರ ಏಕೆ ಮಾತನಾಡುವುದಿಲ್ಲ? ಅಪರಾಧಿಗಳು ತಮ್ಮ ಮಕ್ಕಳನ್ನು ನೋಡಿಲ್ಲ ಎಂದು ಹೇಳುವವರು ಹತರಾದವರು ಯಾವ ಯಾವ ಪರಿಸ್ಥಿತಿಯಲ್ಲಿ ಕುಟುಂಬದಿಂದ ದೂರವಾದರು ಎಂದು ಯೋಚಿಸುವುದಿಲ್ಲ ಏಕೆ?

-ಗಲ್ಲು ಶಿಕ್ಷೆಗೆ ಗುರಿಯಾಗಿರುವವರು ನಿರಪರಾಧಿಗಳು ಎಂದು ಹೇಳಲಾಗುತ್ತಿದೆಯಲ್ಲ?
ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ರಚಿಸಿದ್ದ ಶಂಕರ ಬಿದರಿ ನೇತೃತ್ವದ ವಿಶೇಷ ಪಡೆ 172 ಮಂದಿಯನ್ನು ಬಂಧಿಸಿತ್ತು. ಈ ಪೈಕಿ 120 ಮಂದಿಯ ವಿರುದ್ಧ ಐಪಿಸಿ ಪ್ರಕಾರ ಮೊಕದ್ದಮೆಗಳು ದಾಖಲಾಗಿದ್ದವು. 52 ಮಂದಿಯ ವಿರುದ್ದ ಟಾಡಾ ಕೇಸುಗಳನ್ನು ಹಾಕಲಾಗಿತ್ತು. ಆದರೆ ಟಾಡಾ ಪ್ರಕರಣದಲ್ಲಿ 11 ಮಂದಿಗೆ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದು ಹೆಚ್ಚಾಯಿತು ಎಂದು ಅಪರಾಧಿಗಳು ಸುಪ್ರೀಂಕೋರ್ಟ್ ಮೊರೆ ಹೋದರು. ಅಷ್ಟರಲ್ಲಿ ನಮ್ಮ ತಂದೆ ಕೂಡ ಟಾಡಾ ಪ್ರಕರಣ ರದ್ದು ಮಾಡದಂತೆ ಹಾಗೂ ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಸುಪ್ರೀಂಕೋರ್ಟ್ ಮೊರೆ ಹೋದರು. ಅಲ್ಲಿ ಕೃತ್ಯದ ತೀವ್ರತೆಯನ್ನು ಗಮನಿಸಿಯೇ ನ್ಯಾಯಮೂರ್ತಿಗಳು ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದರು. ಈ ನಾಲ್ವರು ನಾಲ್ಕು ಟಾಡಾ ಪ್ರಕರಣಗಳಲ್ಲೂ ಆರೋಪಿಗಳು. ಅದರಲ್ಲೂ ಸೈಮನ್ ನೆಲಬಾಂಬ್ ಸ್ಫೋಟಿಸುವುದರಲ್ಲಿ ನಿಷ್ಣಾತ. ಜಿಲೆಟಿನ್ ಕಡ್ಡಿಗಳನ್ನು ನೆಲದಲ್ಲಿ ಹುದುಗಿಸಿಟ್ಟು ಒಟ್ಟಿಗೆ 22 ಮಂದಿಯ ಹತ್ಯೆಯ ಪ್ರಮುಖ ರೂವಾರಿ ಆತನೇ. ಉಳಿದವರು ಕೂಡ ಭಾಗಿ. ಸ್ಫೋಟದ ತೀವ್ರತೆಗೆ ದೇಹದ ಭಾಗಗಳು ಛಿದ್ರವಾಗಿ ಕರಳು ಮತ್ತಿತರ ಭಾಗಗಳು ಮರದ ಕೊಂಬೆಗಳಿಗೆ ಸಿಕ್ಕಿಕೊಂಡು ಇಳಿ ಬಿದ್ದಿದ್ದವು. ಇದಲ್ಲದೇ ಸತ್ತ ಹೆಣಗಳ ಮೇಲೆ ವೀರಪ್ಪನ್ ತಂಡ ಗುಂಡು ಹಾರಿಸಿ ಖುಷಿಪಟ್ಟಿತು, ಕೇಕೆ ಹಾಕಿ ನೃತ್ಯ ಮಾಡುತ್ತಿತ್ತು ಎಂದರೆ ಎಂಥ ರಾಕ್ಷಸಿ ಪ್ರವೃತ್ತಿ ಅವರದ್ದು ಎಂಬುದನ್ನು ಯೋಚಿಸಿ.

-ನಿಮ್ಮ ತಂದೆಯ ಹೋರಾಟದ ಬಗ್ಗೆ ಹೇಳಿ..
ನಮ್ಮ ತಂದೆ 2009ರ ಅ.8 ರಂದು ನಿಧನರಾದರು. ಆಗ ಅವರಿಗೆ 84 ವರ್ಷ. ತಾಯಿ ಮುಮ್ತಾಜ್ ಬೇಗಂ ಅವರಿಗೆ 79 ವರ್ಷ. ನಾವು ನಾಲ್ವರು ಸಹೋದರರು. ಏಳು ಮಂದಿ ಸಹೋದರಿಯರು. ಶಕೀಲ್ ಹತ್ಯೆಗೀಡಾದಾಗ 32 ವರ್ಷ. ಅನುಕಂಪದ ಆಧಾರದ ಮೇಲೆ ತಮ್ಮ ಫಾರೂಕ್‌ಗೆ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ  ಎಫ್‌ಡಿಸಿ ಕೆಲಸ ನೀಡಿದರು. ಮತ್ತೊಬ್ಬ ಸೋದರ ಮನ್ಸೂರ್ ಅಹ್ಮದ್ ಬಿ.ಇ ಪದವೀಧರ. 25 ವರ್ಷಗಳಿಂದಲೂ ವಿದೇಶದಲ್ಲಿದ್ದಾರೆ. ನಾಲ್ವರು ಸಹೋದರಿಯರು ಕೂಡ ವಿದೇಶದಲ್ಲಿದ್ದಾರೆ. ಒಬ್ಬರು ಬೆಂಗಳೂರು ಹಾಗೂ ಇಬ್ಬರು ಮೈಸೂರಿನಲ್ಲಿದ್ದಾರೆ.
ಶಕೀಲ್ ತಂದೆಯಂತೆ ಪೊಲೀಸ್ ಇಲಾಖೆಗೆ ಎಸ್‌ಐ ಆಗಿ ಸೇರಿದ್ದ. ಖಡಕ್ ಅಧಿಕಾರಿಯಾಗಿದ್ದ. ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಎಸ್‌ಐ ಆಗಿದ್ದ ಆತ ನಂತರ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಹೋಗಿದ್ದ. ಎಸ್ಪಿ ಟಿ. ಹರಿಕೃಷ್ಣ ಮತ್ತಿತರ ಜೊತೆ ಆತ ಮೀಣ್ಯಂ ಬಳಿ ಹೋದಾಗ ವೀರಪ್ಪನ್ ಕುತಂತ್ರದಿಂದ ಹತ್ಯೆ ಮಾಡಿಬಿಟ್ಟ. ಇದು ತಂದೆಯನ್ನು ಜರ್ಜರಿತರನ್ನಾಗಿ ಮಾಡಿತು. ಈ ಘಟನೆಯ ನಂತರ 1993ರ ಏ.9 ರಂದು ಪಾಲಾರ್ ಸ್ಫೋಟ ಪ್ರಕರಣ ನಡೆಯಿತು. ಒಟ್ಟಿಗೆ 22 ಮಂದಿಯನ್ನು ಹತ್ಯೆ ಮಾಡಲಾಯಿತು. ವೀರಪ್ಪನ್ ನಡೆಸಿದ ಕುಕೃತ್ಯಗಳಲ್ಲೇ ಇದೇ ಅತ್ಯಂತ ಭೀಕರವಾದದ್ದು. ಇದಾದ ಕೆಲ ವರ್ಷಗಳ ನಂತರ ಡಾ.ರಾಜ್‌ಕುಮಾರ್ ಅವರ ಅಪಹರಣವಾಯಿತು. ಆಗ ವೀರಪ್ಪನ್ ಬ್ಲಾಕ್‌ಮೇಲ್ ತಂತ್ರ ಶುರು ಮಾಡಿದ. ನಕ್ಕೀರನ್ ಗೋಪಾಲ್ ಮೂಲಕ ಕ್ಯಾಸೆಟ್ ಕಳುಹಿಸಿ, ಟಾಡಾ ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದ. ನ್ಯಾಯ, ನೀತಿ ಎಂದು ಬಾಳಿದ, ಅದೇ ರೀತಿ ಸೇವೆ ಸಲ್ಲಿಸಿದ ಹಾಗೂ ಶಕೀಲ್‌ನನ್ನು ಕಳೆದುಕೊಂಡ ದುಃಖದಲ್ಲಿದ್ದ ತಂದೆಯವರು ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡಿ, ಟಾಡಾ ಆಪರಾಧಿಗಳು ಬಿಡುಗಡೆಯಾಗುವುದನ್ನು ತಪ್ಪಿಸಿದರು. ಸುಪ್ರೀಂಕೋರ್ಟ್‌ನಿಂದಲೂ ಪ್ರಶಂಸೆಗೆ ಒಳಗಾದರು.

-ಗಲ್ಲು ಶಿಕ್ಷೆಗೆ ಗುರಿಯಾದವರ ಪರ ಚರ್ಚ್‌ಗಳು, ಪಾದ್ರಿಗಳು ಧ್ವನಿ ಎತ್ತಿದ್ದಾರೆ...
 ಅಪರಾಧಿಗಳಿಗೆ ಯಾವುದೇ ಜಾತಿ, ಧರ್ಮ ಇಲ್ಲ. ಯಾರೇ ಅಪರಾಧ ಮಾಡಿದರೂ ತಪ್ಪೇ. ಈ ವಿಷಯದಲ್ಲಿ ಜಾತಿ, ಧರ್ಮ ಬೆರೆಸಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿಲ್ಲವೆಂದರೇ ಮುಂದೆ ಸಮಾಜದಲ್ಲಿ ಅಪರಾಧ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶವೇ ಇಲ್ಲದಂತಾಗುತ್ತದೆ.

-ರಾಜ್ಯ ಸರ್ಕಾರ ಮುಂದೇನು ಮಾಡಬೇಕು?
ವಿಶೇಷ ಕಾರ್ಯಪಡೆಯ ನೇತೃತ್ವ ವಹಿಸಿದ್ದ ನಿವೃತ್ತ ಡಿಜಿಪಿ ಶಂಕರ ಬಿದರಿ ಸೇರಿದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳು ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಲೇಬೇಕು ಎಂದು ಹೇಳಿದ್ದಾರೆ. ವೀರಪ್ಪನ್ ನಡೆಸಿದ ಹತ್ಯಾಕಾಂಡದಲ್ಲಿ ಹತರಾದವರು ಕುಟುಂಬದವರ ಧ್ವನಿ ಕೂಡ ಇದೇ ಆಗಿದೆ. ರಾಜ್ಯ ಸರ್ಕಾರ ಅದರಲ್ಲೂ ಗೃಹ ಖಾತೆ ಹೊಂದಿರುವ ಡಿಸಿಎಂ ಆರ್. ಅಶೋಕ್ ಅವರು ಗಲ್ಲು ಶಿಕ್ಷೆಯ ಪರ ಮಾತನಾಡಿದ್ದಾರೆ. ಹೀಗಾಗಿ ನಾಲ್ವರಿಗೆ ಗಲ್ಲು ಶಿಕ್ಷೆ ಜಾರಿಯಾಗುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಇದೆ. ಯಾವುದೇ ಕಾರಣಕ್ಕೂ ಯಾವುದೇ ಒತ್ತಡಕ್ಕೆ ಮಣಿಯಬಾರದು.

-ಶಕೀಲ್ ಅಹ್ಮದ್ ಹತ್ಯೆಯ ಘಟನೆಯ ಬಗ್ಗೆ ಏನು ಹೇಳುವಿರಿ?
ನನ್ನ ಸಹೋದರ ಶಕೀಲ್ ಅಹ್ಮದ್‌ನನ್ನು ವೀರಪ್ಪನ್ ತಂಡ ಹತ್ಯೆ ಮಾಡಿದ ಘಟನೆಯನ್ನು ಮರೆಯಲು ಸಾಧ್ಯವೇ? ಅದು ಇಡೀ ದೇಶಕ್ಕೆ ದೇಶವೇ ಸ್ವಾತಂತ್ರ್ಯೋತ್ಸವದ ಸಿದ್ಧತೆಯಲ್ಲಿ ತೊಡಗಿರುವಾಗ, ಮರುದಿನ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಇರುವಾಗ  ನಾವು ಪ್ರೀತಿಯ ಶಕೀಲ್‌ನನ್ನು ಕಳೆದುಕೊಂಡೆವು. ಶಕೀಲ್ ಜೊತೆಗೆ ಎಸ್ಪಿ ಟಿ. ಹರಿಕೃಷ್ಣ ಸೇರಿದಂತೆ ಇನ್ನೂ ನಾಲ್ವರು ಹತರಾಗಿದ್ದರು. ಇನ್ನೂ ಅವನ ನೆನಪಿನಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ಹೋದವನು ಮತ್ತೆ ಬರುವುದಿಲ್ಲ. ಆದರೆ ನಮ್ಮಂತೆ ವೀರಪ್ಪನ್‌ನಿಂದ ಹತರಾದವರ ಕುಟುಂಬದವರನ್ನು ಬದುಕಿದ್ದಿರೋ ಸತ್ತಿದ್ದೀರೋ ಎಂದು ಕೇಳದ ಜನ ಮಾನವ ಹಕ್ಕುಗಳ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. 20 ವರ್ಷಗಳಿಂದ ನಾವು ಅನುಭವಿಸಿದ ನೋವಿಗೆ ಪರಿಹಾರ ಬೇಕಲ್ಲವೇ? ಇಂತಹ ಕೃತ್ಯಗಳು ಕೊನೆಯಾಗಬೇಕು ಅಲ್ಲವೇ? ಆದ್ದರಿಂದ ಯಾವುದೇ ಕಾರಣಕ್ಕೂ ಗಲ್ಲು ಶಿಕ್ಷೆಯಿಂದ ಮಾಫಿ ನೀಡಬಾರದು ಎಂಬುದು ನಮ್ಮ ಕುಟುಂಬದ ಒಕ್ಕೊರಳ ಅಭಿಪ್ರಾಯ.

-ಅಂಶಿ ಪ್ರಸನ್ನಕುಮಾರ್, ಕನ್ನಡಪ್ರಭ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com