ಕಾಂಗ್ರೆಸ್ಗೆ ಉಗ್ರವಾದಿಗಳ ಮೇಲೇಕೆ ಈ ಪರಿ ಅನುಕಂಪ?
ವಿವಿಧ ಉಗ್ರವಾದಿ ಸಂಘಟನೆಗಳಿಗೆ ತಮ್ಮ ಪರಾಕ್ರಮ ಪ್ರದರ್ಶಿಸಲು ಹೈದ್ರಾಬಾದ್ ಪ್ರಶಸ್ತ ಸ್ಥಳ ಎನ್ನುವುದನ್ನು ಸುಶೀಲ್ ಕುಮಾರ್ ಶಿಂದೆ ಅವರಿಂದಲೇ ನಾವು ಅರಿತುಕೊಳ್ಳಬೇಕಿಲ್ಲ. ದೇಶದ ಯಾವುದೋ ಭಾಗದಲ್ಲಿ ಭಯೋತ್ಪಾದನಾ ದಾಳಿಯಾಗಲಿದೆ ಎಂಬ ಬಗ್ಗೆ ತಮಗೆ ಮುಂಚಿತವಾಗಿಯೇ ಗೊತ್ತಿತ್ತು ಎಂದು ಶಿಂದೆ ಹೇಳಿಕೊಳ್ಳುತ್ತಿರುವುದು, ತಮ್ಮ ಸರ್ಕಾರದ ಅಸಮರ್ಥತೆಯನ್ನು ಮುಚ್ಚಿಡುವುದಕ್ಕಾಗಿಯೇ ಎನ್ನುವುದು ಅವರ ಹೇಳಿಕೆಯನ್ನು ಗಮನಿಸಿದ ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಬಾ ಮತ್ತು ಜೈಷ್-ಎ-ಮೊಹಮ್ಮದ್ನಂತಹ ತೀವ್ರವಾದಿ ಸಂಘಟನೆಗಳ ಆದೇಶದ ಮೇಲೆ ಕಾರ್ಯನಿರ್ವಹಿಸುವ ವಿವಿಧ ಉಗ್ರ ಸಂಘಟನೆಗಳಿಗೆ ಹೈದ್ರಾಬಾದ್ ಕೆಲವು ವರ್ಷಗಳಿಂದ ಕೇಂದ್ರ ಸ್ಥಳವಾಗಿದೆ. ಉತ್ತರ ಕೇರಳದ ಯುವ ಮುಸ್ಲಿಮರನ್ನು ಹೈದ್ರಾಬಾದ್ಗೆ ಕರೆತಂದು, ಅಲ್ಲವರ ಬ್ರೇನ್ವಾಷ್ ಮಾಡಿ ನಂತರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ತರಬೇತಿಗಾಗಿ ಕಳುಹಿಸಿಕೊಡಲಾಗುತ್ತಿತ್ತು.
ಈ ವಿಷಯ ಬಹಿರಂಗವಾಗಿದ್ದು ಎರಡು ವರ್ಷಗಳ ಹಿಂದೆ. ತಮ್ಮ ನಿರ್ವಾಹಕರೊಂದಿಗೆ ಈ ಯುವಕರು ಕಾಶ್ಮೀರದ ಮೂಲಕ ಪಾಕಿಸ್ತಾನದ ಉಗ್ರ ತರಬೇತಿ ಕೇಂದ್ರಗಳಿಗೆ ತೆರಳುವಾಗ ಸೇನೆಯ ದಾಳಿಗೆ ಬಲಿಯಾಗಿದ್ದರು. ಸತ್ತವರ ಗುರುತಿನ ಚೀಟಿಯನ್ನಾಧರಿಸಿ ತನಿಖೆಗಿಳಿದಾಗ, ಹೈದ್ರಾಬಾದ್ ಉಗ್ರವಾದಿಗಳಿಗೆ 'ಸುರಕ್ಷಿತ ಸ್ಥಳ'ವಾಗಿ ಬದಲಾಗಿದೆ ಎನ್ನುವುದು ತಿಳಿಯಿತು. ಹಾಗಿದ್ದರೆ ಈ ಮಾಹಿತಿಯಿಂದ ಯಾವುದಾದರೂ ಪ್ರಮುಖ ಉಗ್ರ ಕೊಂಡಿಯನ್ನು ಭೇದಿಸಲು ಸಾಧ್ಯವಾಯಿತೇ? ಊಹುಂ!
ತಮಗೆ ಬಂದ ಮಾಹಿತಿಯ ಬಗ್ಗೆ ಶಿಂದೆ ಅವರ ಪ್ರತಿಕ್ರಿಯೆ ಎಷ್ಟು ನೀರಸವಾಗಿದೆ ನೋಡಿ. ಆ ಮಾಹಿತಿಯನ್ನು ರಾಜ್ಯಗಳಿಗೆ ರವಾನೆ ಮಾಡಿದಾಕ್ಷಣ ತಮ್ಮ ಕೆಲಸ ಪೂರ್ಣವಾಯಿತು ಎಂದು ಅವರು ಭಾವಿಸಿದಂತಿದೆ. ದೆಹಲಿ ಪೊಲೀಸ್ ಕಸ್ಟಡಿಯಲ್ಲಿರುವ ಪುಣೆ ಸ್ಫೋಟದ ಪ್ರಮುಖ ಶಂಕಿತರಲ್ಲೊಬ್ಬನಾದ ಮಕ್ಬೂಲ್, ಕಳೆದ ಅಕ್ಟೋಬರ್ನಲ್ಲೇ ಪ್ರಮುಖ ಮಾಹಿತಿಯನ್ನು ಹೊರಗೆಡವಿದ್ದ. ಇನ್ನೊಬ್ಬನೊಡನೆ ಸೇರಿ ತಾನು ಹೈದ್ರಾಬಾದ್ನ ಪ್ರಮುಖ ಸ್ಥಳವೊಂದರ ಪರಿಶೀಲನೆ ನಡೆಸಿರುವುದಾಗಿ ಆತ ಹೇಳಿದ್ದ. ಆತ ಹೇಳಿದ ಸ್ಥಳದಲ್ಲೇ ಈಗ ದಾಳಿ ನಡೆದಿದೆ.
ಹಾಗಿದ್ದರೆ ಮಕ್ಬೂಲ್ನಿಂದ ಇನ್ನಷ್ಟು ಮಾಹಿತಿಯನ್ನು ಹೊರಗೆಳೆಯಲು ಏಕೆ ಪ್ರಯತ್ನಿಸಲಿಲ್ಲ? ಬಾಟ್ಲಾ ಹೌಸ್ ಎನ್ಕೌಂಟರ್ನಲ್ಲಿ ಸತ್ತ ಇಂಡಿಯನ್ ಮುಜಾಹಿದ್ದೀನ್ನ ಉಗ್ರರ ಮನೆಗೆ ಓಡಿ ಹೋಗಿ ಅನುಕಂಪ ಸೂಚಿಸಿದ ಕಾಂಗ್ರೆಸ್ಸಿಗರು, ದೇಶದ ರಾಜಧಾನಿಯನ್ನು ರಕ್ಷಿಸಲು ಹೋದ ದೆಹಲಿ ಪೊಲೀಸರ ವಿರುದ್ಧ ಹರಿಹಾಯ್ದಿದ್ದರು. ಬಹುಶಃ ಇದೇ ತೆರನಾದ ಅನುಕಂಪವನ್ನು ಅವರು ಮಕ್ಬೂಲ್ ಮೇಲೆ ತೋರಿಸುತ್ತಿರಬಹುದಲ್ಲವೇ?
ಹಿಂದೆ ಹೈದ್ರಾಬಾದ್ನಲ್ಲಿ ನಡೆದ ದಾಳಿಗಳಲ್ಲೂ ಟಿಫಿನ್ ಬಾಕ್ಸ್ಗಳನ್ನು ಬಳಸಲಾಗಿತ್ತು. ಈ ಬಾರಿಯೂ ಉಗ್ರರು ಅದೇ ತಂತ್ರ ಅನುಸರಿಸಿದ್ದಾರೆ. ಇನ್ನು ಹೈದ್ರಾಬಾದ್ ಪೊಲೀಸರಿಗೆ ದಾಳಿಯನ್ನು ತಡೆಯಲಾಗಲಿಲ್ಲ ಎಂದು ಎಲ್ಲರೂ ದೂರುತ್ತಿದ್ದಾರೆ. ಆದರೆ ಎಲ್ಲ ತಪ್ಪನ್ನೂ ಪೊಲೀಸರ ಮೇಲೆ ಹೊರಿಸುವುದು ಸರಿಯೇ? ಎಷ್ಟೋ ಘಟನೆಗಳಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಕೈಲಾಗುವುದಕ್ಕಿಂತಲೂ ಹೆಚ್ಚಿನ ಪ್ರಯತ್ನ ಪಟ್ಟಿದ್ದಾರೆ. ಪ್ರಾಣ ತ್ಯಜಿಸಿದ್ದಾರೆ. ಆದರೂ ಕಾಂಗ್ರೆಸ್ನ ನಾಯಕರಿಗೆ ದಾಳಿ ನಡೆಸಿದವರ ಮೇಲೆಯೇ ಹೆಚ್ಚು ಅನುಕಂಪ. ಹೀಗೆ ಮಾಡುವುದರಿಂದ ಪೊಲೀಸರ ಅಂತಃಶಕ್ತಿ ಕುಸಿಯುವುದಿಲ್ಲವೇ?
ಮುಂಬೈ ದಾಳಿಯ ಪ್ರಮುಖ ರೂವಾರಿಗಳು ಭಾರತವನ್ನು ಹಂಗಿಸುತ್ತಾ ಪಾಕಿಸ್ತಾನದಲ್ಲಿ ಹಾಯಾಗಿ ಅಡ್ಡಾಡಿಕೊಂಡಿದ್ದಾರೆ. ಅವರುಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಗಟ್ಟಿದನಿಯಿಂದ ಹೇಳಲಾಗದಷ್ಟು ನಿಶ್ಶಕ್ತಿಯೇ ನಮ್ಮ ಸರ್ಕಾರಕ್ಕೆ? ಇದು ಸಾಲದೆಂಬಂತೆ ಪಾಕಿಸ್ತಾನದ ಪರ ಮೃದು ಧೋರಣೆ ಬೇರೆ!
ಈಗಂತೂ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳಾದ ಸೈಯದ್ ಅಲಿ ಶಾಹ್ ಗಿಲಾನಿ ಮತ್ತು ಯಾಸಿನ್ ಮಲಿಕ್ ಪಾಕಿಸ್ತಾನಕ್ಕೆ ಹೋಗಿ ಹಫೀಜ್ನೊಂದಿಗೆ ಪಾಯಸ ಕುಡಿದು ಬರುತ್ತಿದ್ದಾರೆ. ಉಗ್ರಗಾಮಿಗಳ ಪ್ರಮುಖ ನಾಯಕನನ್ನು ಭೇಟಿಯಾಗಿ ಬರುವವರ ಮೇಲೆ ಕ್ರಮ ಕೈಗೊಳ್ಳುವ ವಿಷಯ ಒತ್ತಟ್ಟಿಗಿರಲಿ, ಭಾರತ ಸರ್ಕಾರ ಕೊಡುವ ಸಾಕ್ಷ್ಯಾಧಾರಗಳು ಸಮರ್ಪಕವಾಗಿಲ್ಲ ಎಂದು ಪಾಕಿಸ್ತಾನ ಪ್ರತಿ ಬಾರಿ ಹೇಳಿದಾಗಲೆಲ್ಲ ನಮ್ಮವರು ಕೋಲೆ ಬಸವನಂತೆ ತಲೆ ಆಡಿಸುತ್ತಿದ್ದಾರೆ. ಒಸಾಮಾ ಬಿನ್ ಲಾಡೆನ್ನ ಸಾವನ್ನು ಕಂಡು ಹಿಗ್ಗುವ ಬದಲು, ಆತನನ್ನು 'ಒಸಾಮಾಜಿ' ಎಂದು ಗೌರವಾದರಗಳಿಂದ ಸಂಬೋಧಿಸುತ್ತಾರೆ ದಿಗ್ವಿಜಯ್ ಸಿಂಗ್.
ಎಲ್ಇಟಿ ಮತ್ತು ಜೆಇಎಮ್ನ ನಾಯಕರನ್ನು ಬಂಧಿಸಿ ಅವರನ್ನು ಭಾರತಕ್ಕೊಪ್ಪಿಸುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕೆಂದು ಅಮೆರಿಕವನ್ನು ಒಮ್ಮೆಯಾದರೂ ನಮ್ಮವರು ಕೇಳಿದ್ದಾರೆಯೇ? ಹಾಗೆ ನೋಡಿದರೆ ಖುದ್ದು ಅಮೆರಿಕವೇ ಈ ಉಗ್ರ ನಾಯಕರ ತಲೆಗೆ ದೊಡ್ಡ ಬಹುಮಾನ ಘೋಷಿಸಿದೆ. ಗೃಹ ಸಚಿವರಾಗಿಯಂತೂ ಶಿಂದೆ ಅತಿ ಕೆಟ್ಟದಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಸ್ಲಾಮಿಕ್ ಉಗ್ರವಾದದ ನಿಷ್ಠುರ ಸತ್ಯವನ್ನು ಮರೆಮಾಚಲು, ಬಿಜೆಪಿ ಮತ್ತು ಆರ್ಎಸ್ಎಸ್ ಮೇಲೆ ಅವರು ಗೂಬೆ ಕೂರಿಸುವ ಪ್ರಯತ್ನ ಮಾಡಿ ತಮ್ಮ ಆಂತರ್ಯದಲ್ಲಿರುವುದನ್ನೆಲ್ಲ ಹೊರಗೆಡವಿಕೊಂಡಿದ್ದಾರೆ.
ಯುವ ಪ್ರತಿಭಟನಾಕಾರರ ವಿಷಯದಲ್ಲಾಗಲಿ, ರಾಜಧಾನಿಯಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆಯಾಗಲಿ ಅಥವಾ ಸಂಸತ್ತಿನಲ್ಲಿ ಯಾವುದಾದರೂ ಪ್ರಮುಖ ವಿಷಯದ ಬಗ್ಗೆ ಚರ್ಚೆಯಾಗುವಾಗಲಾಗಲಿ ಶಿಂದೆ ಅವರ ಪ್ರತಿಕ್ರಿಯೆ ಹೇಗಿರುತ್ತದೋ ನೋಡಿ. ಇನ್ನು ಖುದ್ದು ಅವರ ಪ್ರಧಾನ ಮಂತ್ರಿಗಳೇ 'ಅಫ್ಜಲ್ ಗುರುವಿನ ವಿಷಯದಲ್ಲಿ ಸಂವೇದನೆ ಮೆರಯಲಾಗಿಲ್ಲ' ಎಂದು ಬಹಿರಂಗವಾಗಿ ಹೇಳುತ್ತಾರೆಂದರೆ ಏನರ್ಥ?
ಜವಾಬ್ದಾರಿಯುತ ಹುದ್ದೆಯಲ್ಲಿರುವ ಕಾಂಗ್ರೆಸ್ಸಿನ ಕ್ಯಾಬಿನೆಟ್ ಮಂತ್ರಿಗಳು ಕಳೆದೆರಡು ವರ್ಷಗಳಿಂದ ಪ್ರಮುಖ ವಿಷಯಗಳ ಬಗ್ಗೆ ಸಂವೇದನೆಯಿಲ್ಲದೆ ಮಾತನಾಡುತ್ತಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ನಿಂದ ದಾಳಿ ನಡೆಯಬಹುದು ಎಂಬ ಮಾಹಿತಿ ಗೃಹ ಸಚಿವರಿಗೆ ಸಿಕ್ಕಾಗ, ಅವರು ಅದನ್ನು ಅಧಿಕಾರಿಗಳಿಗೆ ವರ್ಗಾಯಿಸಿ ಸುಮ್ಮನೆ ಕುಳಿತುಬಿಟ್ಟರು. ಮಕ್ಬೂಲ್ ನೀಡಿದ ಮಾಹಿತಿಯನ್ನು ಆಧರಿಸಿ ಸೂಕ್ತ ಯೋಜನೆ ರೂಪಿಸುವುದು ಅವರ ಕರ್ತವ್ಯವಲ್ಲವೇ?
ಕಾಂಗ್ರೆಸ್ನ ಈ ವರ್ತನೆಯನ್ನು ನೋಡಿದರೆ, ಅದರ ನಾಯಕರೆಲ್ಲರೂ 'ಹಾದಿ ತಪ್ಪಿದ ಮಕ್ಕಳಂತೆ' ಕಾಣುವುದು ಅಸಹಜವೇನಲ್ಲ. 'ತಮಗೆ ಸೇನೆಯ ಮಾಜಿ ಅಧಿಕಾರಿಯೊಬ್ಬರು ಲಂಚ ಕೊಡಲು ಬಂದಿದ್ದರು' ಎಂದು ಸೇನಾ ಮುಖ್ಯಸ್ಥರು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರಿಗೆ ದೂರು ನೀಡಿದರೆ, ಅವರು ಹೇಗೆ ನಡೆದುಕೊಂಡರೋ ಒಮ್ಮೆ ನೆನಪುಮಾಡಿಕೊಳ್ಳಿ?! ಭ್ರಷ್ಟಾಚಾರವೇ ಆಗಿರಲಿ ಅಥವಾ ಭಯೋತ್ಪಾದನೆಯೇ ಆಗಿರಲಿ, ಅದನ್ನು ಬೇರು ಸಮೇತ ಕಿತ್ತೆಸೆಯುವ ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್ಗೆ ಇಲ್ಲವಾಗಿದೆ. ಇದೇ ಕಾರಣಕ್ಕಾಗಿಯೇ ಈಗ ಹೆಲಿಕಾಪ್ಟರ್ ಹಗರಣ ತಲೆಯ ಮೇಲೆ ಗಿರಕಿ ಹೊಡೆಯುತ್ತಿರುವುದು. ಇಂಡಿಯನ್ ಮುಜಾಹಿದ್ದೀನ್ ಭಾರತವನ್ನು ಅಣುಕಿಸುತ್ತಾ ಕೇಕೆ ಹಾಕುತ್ತಿರುವುದು.
ಶಿಂದೆ ಅವರು ದೇಶಕ್ಕೆ ಮಾಡಬಹುದಾದ ಮಹದುಪಕಾರವೆಂದರೆ ಕೂಡಲೇ ತಮ್ಮ ಸ್ಥಾನದಿಂದ ಕೆಳಗಿಳಿದು ಆ ಜಾಗಕ್ಕೆ ಸಮರ್ಥ ವ್ಯಕ್ತಿಯನ್ನು ತಂದು ಕೂಡಿಸುವ ಅವಕಾಶವನ್ನು ಪ್ರಧಾನಿಯವರಿಗೆ ಕೊಡುವುದು. ಆದರೆ ಅದು ಸಾಧ್ಯವಾಗುವಂಥದ್ದಲ್ಲ. ಏಕೆಂದರೆ ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಪಾಕಿಸ್ತಾನದ ಪರ ಮೃದು ಧೋರಣೆ ತೋರುವ ಗುಣ ಎಲ್ಲರಿಗಿಂತಲೂ ನಮ್ಮ ಪ್ರಧಾನಿಗಳಿಗೇ ತುಸು ಹೆಚ್ಚಿದೆ.
-ಬಲ್ಬೀರ್ ಪುಂಜ್
ಬಿಜೆಪಿ ರಾಜ್ಯಸಭಾ ಸಂಸದ,
punjbalbir@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

