ಅಂಕಣಗಳು

ದಶಕಗಳ ರೇಲ್ವೆ ಬಾಕಿ ಈ ಬಾರಿ ಸಿಕ್ಕೀತೇ?

Published On :

ಈ ಬಾರಿಯ ರೇಲ್ವೆ ಬಜೆಟ್ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದೇನೆಂದರೆ 17 ವರ್ಷಗಳ ಬಳಿಕ ಆಡಳಿತ ಪಕ್ಷದ ಸಂಸದ, ರೇಲ್ವೆ ಖಾತೆ ಸಚಿವ ಪವನ್‌ಕುಮಾರ್ ಬನ್ಸಲ್ ಫೆ.26ರಂದು ಬಜೆಟ್ ಮಂಡಿಸಲಿದ್ದಾರೆ. ಅದಕ್ಕೆ ಪೂರಕವಾಗಿ ರಾಜ್ಯದ ಜನರಿಗೆ ಕೇಂದ್ರ ಸರ್ಕಾರದಿಂದ ಬೆಟ್ಟದಷ್ಟು ನಿರೀಕ್ಷೆ ಇದೆ. ಕಳೆದ ಹಲವು ದಶಕಗಳಿಂದ ಈಡೇರಿಸದೆ ಉಳಿದಿರುವ ರೇಲ್ವೆ ಬೇಡಿಕೆಗಳ ಪಟ್ಟಿ 2013-14ನೇ ಸಾಲಿನ ಬಜೆಟ್‌ನಲ್ಲಿ ಪೂರೈಕೆಯಾದೀತು ಎಂಬ ವಿಶ್ವಾಸ ಜನರದ್ದು. ನಗರೀಕರಣದಲ್ಲಿ ರಾಜ್ಯ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಆದರೆ ಅದಕ್ಕೆ ಪೂರಕವಾಗಿ ರೈಲು ಸಂಪರ್ಕ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಆಗಿಯೇ ಇಲ್ಲ. ರಾಜ್ಯದ ಒಳಗೆ ಪ್ರಮುಖ ಸ್ಥಳಗಳಿಗೆ ರೈಲು ಸಂಪರ್ಕ, ರಾಜ್ಯದಿಂದ ದೇಶದ ವಿವಿಧ ಭಾಗಗಳಿಗೆ ರೈಲು ಓಡಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಈ ವಿಚಾರ ನಿಜಕ್ಕೂ ಕಳವಳಕಾರಿಯಾಗಿದೆ.
11 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ವಲಯ ಸ್ಥಾಪಿಸಲಾಯಿತು. ಆದರೆ ಇದು ರೇಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿ (ಹೊಸ ಮಾರ್ಗ, ಹಳಿ ದ್ವಿಪಥ, ಮಾರ್ಗ ಬದಲು,  ಆಧುನಿಕ ರೇಲ್ವೆ ನಿಲ್ದಾಣ ಮತ್ತು ವಿದ್ಯುದೀಕರಣ) ಆಗಿಲ್ಲ. ಇದರ ಜತೆಗೆ ಅಗತ್ಯವಿರುವ ಇಂಟರ್‌ಸಿಟಿ ಮತ್ತು ಅಂತಾರಾಜ್ಯ ರೈಲುಗಳ ಸಂಚಾರ ಮಾತ್ರ ಆರಂಭವಾಗದಿರುವುದು ಮಾತ್ರ ಖೇದಕರ ವಿಚಾರ. ಏಕೆಂದರೆ ಈ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಸರಕು ಸಾಗಣೆ ಮತ್ತು ಪ್ರಯಾಣಿಕರಿಗೆ ನೀಡುವ ಟಿಕೆಟ್‌ನಿಂದ ಹೇರಳ ಆದಾಯ ರೇಲ್ವೆಗೆ ಬರುತ್ತದೆ. ನೈಋತ್ಯ ವಲಯಕ್ಕೆ ಸೇರಿದ ಬೆಂಗಳೂರು, ಹುಬಳ್ಳಿ ಮತ್ತು ಮೈಸೂರು ವಿಭಾಗಗಳ ಸಾಧನೆ ನಿಜಕ್ಕೂ ತೃಪ್ತಿಕರವಾಗಿದೆ. ಈ ವಿಭಾಗಗಳು ಭಾರತೀಯ ರೇಲ್ವೆಗೆ ಸಾಕಷ್ಟು ಪ್ರಮಾಣದಲ್ಲಿ ಆದಾಯವನ್ನೂ ತಂದುಕೊಡುತ್ತವೆ. ಈಗಾಗಲೇ ತಿಳಿದಿರುವಂತೆ ಭಾರತೀಯ ರೇಲ್ವೆಯ ಹಣಕಾಸಿನ ಪರಿಸ್ಥಿತಿ ಏನೇನೂ ತೃಪ್ತಿಕರವಾಗಿಲ್ಲ. ಹೀಗಾಗಿ ಹೊಸ ರೇಲ್ವೆ ಸಚಿವರು ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವರು ಎಂಬ ಆಶಯ ಕೈಗಾರಿಕಾ ವಲಯ, ರಾಜಕೀಯ ಮತ್ತು ಜನಸಾಮಾನ್ಯರಲ್ಲಿದೆ. ರೇಲ್ವೆ ಇಲಾಖೆಯ ಉದ್ದಾರಕ್ಕಾಗಿ ಬನ್ಸಲ್ ಕ್ರಮ ಕೈಗೊಳ್ಳುವರೇ ಎಂಬ ಕುತೂಹಲ ಮೂಡಿದೆ.
ಆದರೆ, ಬನ್ಸಲ್ ಅವರ ದಾರಿ ಸುಲಭವೇನೂ ಅಲ್ಲ. ಏಕೆಂದರೆ ರೇಲ್ವೆ ಇಲಾಖೆಗೆ ಹೆಚ್ಚು ಆದಾಯ ಸಂಗ್ರಹಿಸುವಂತೆ ಆಂತರಿಕವಾಗಿ ಗುರಿ ನಿಗದಿಪಡಿಸಲಾಗಿದೆ. ಕಳೆದ ತಿಂಗಳು, ಬರೋಬ್ಬರಿ 10 ವರ್ಷಗಳ ಬಳಿಕ, ರೇಲ್ವೆಯ ಎಲ್ಲ ಸ್ತರಗಳ ಪ್ರಯಾಣ ದರದಲ್ಲಿ ಹೆಚ್ಚಳ ಮಾಡುವ ನಿರ್ಧಾರವನ್ನು ಬನ್ಸಲ್ ಪ್ರಕಟಿಸಿದ್ದರು. ಇದಲ್ಲದೆ ಪ್ರಯಾಣದಲ್ಲಿ ನೀಡಲಾಗುವ ಆಹಾರದ ಬೆಲೆಯನ್ನೂ ಹೆಚ್ಚಿಸುವ ನಿರ್ಧಾರವನ್ನು ರೇಲ್ವೆ ಸಚಿವಾಲಯ ತೆಗೆದುಕೊಂಡಿತು. ಏಕೆಂದರೆ ಆಹಾರ ಪದಾರ್ಥ ಮತ್ತು ತೈಲೋತ್ಪನ್ನಗಳ ಬೆಲೆ ಏರಿಕೆ ರೇಲ್ವೆಗೆ ಇಂಥ ನಿರ್ಧಾರ ಕೈಗೊಳ್ಳುವಂತೆ ಮಾಡಿತ್ತು. ಆದರೆ ಇಂಥ ಕ್ರಮಗಳ ಮೂಲಕ ಸಂಗ್ರಹಿಸಿದ ಹಣ ಸಿಗ್ನಲ್‌ಗಳ ಆಧುನೀಕರಣ ಮತ್ತು ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲು ಯಾವುದೇ ರೀತಿಯ ನೆರವು ನೀಡಲಾರದು.  ಏಕೆಂದರೆ ಹೊಸ ನಿರ್ಧಾರದ ಪ್ರಕಾರ ತೈಲೋತ್ಪನ್ನಗಳ ದರ ಇನ್ನು ಪ್ರತಿ ತಿಂಗಳೂ ಪರಿಷ್ಕರಣೆಯಾಗಲಿದೆ. ಇದು ನಿಜಕ್ಕೂ ರೇಲ್ವೆ ಇಲಾಖೆಯ ಹಣಕಾಸಿನ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಹೀಗಾಗಿ ಕೇಂದ್ರ ರೇಲ್ವೆ ಸಚಿವರು ಮತ್ತೆ ಪ್ರಯಾಣ ಮತ್ತು ಸರಕು ಸಾಗಣೆ ದರ ಹೆಚ್ಚಿಸಬೇಕೇ ಬೇಡವೆ ಎಂಬ ಬಗ್ಗೆ ಗೊಂದಲದಲ್ಲಿದ್ದರೂ ಅಚ್ಚರಿಯೇನಿಲ್ಲ. ಇತ್ತೀಚೆಗಷ್ಟೇ ನಾಗರಿಕ ವಿಮಾನ ಕ್ಷೇತ್ರದಲ್ಲೂ ದರ ಸಮರ ಶುರುವಾಗಿದೆ. ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಗಳು ದೇಶದಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಿಮಾನ ಪ್ರಯಾಣದ ಕೊಡುಗೆ ನೀಡಲಾರಂಭಿಸಿವೆ. ಹೀಗಾಗಿ, ರೇಲ್ವೆ ಸಚಿವರು ಪ್ರಯಾಣ ದರವನ್ನು ಮತ್ತೊಮ್ಮೆ ಹೆಚ್ಚಿಸುವ ಮುನ್ನ ಆಲೋಚನೆ ಮಾಡಬೇಕಾದೀತು ಅಥವಾ ರಾಜಧಾನಿ, ಶತಾಬ್ದಿ, ತುರಂತೋ ರೈಲುಗಳಂಥ ಅತ್ಯುನ್ನತ ಶ್ರೇಣಿಯ ರೈಲುಗಳ ಪ್ರಯಾಣ ದರ ಪರಿಷ್ಕರಣೆ ಬಗ್ಗೆಯೂ ಚಿಂತನೆ ನಡೆಸಬೇಕಾದೀತು. ಹಣಕಾಸಿನ ತೊಂದರೆಯಿಂದ ಬಳಲುತ್ತಿರುವ ರೇಲ್ವೆಗೆ ನೆರವಿನ ಬಗ್ಗೆ ಬನ್ಸಲ್‌ರ ಮುಂದೆ ಮತ್ತೊಂದು ಮಾರ್ಗವೂ ಇದೆ. ಹೇಗಿದ್ದರೂ ಅವರು ಆಡಳಿತಾರೂಢ ಕಾಂಗ್ರೆಸ್‌ಗೆ ಸೇರಿದವರು. ಪ್ರಧಾನಿ, ಹಣಕಾಸು ಸಚಿವರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡುವ ಬಗ್ಗೆಯೂ ವಿಪುಲ ಅವಕಾಶವಿದೆ. ನಮ್ಮ ರಾಜ್ಯವೂ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆಗಳಿಗೆ ಪ್ರಸಕ್ತ ವರ್ಷ ಚುನಾವಣೆ ನಡೆಯಲಿದೆ. ಹೀಗಾಗಿ, ಕೇಂದ್ರ ಸರ್ಕಾರ ಪ್ರಯಾಣ ದರ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಅದಕ್ಕೆ ನೆರವಾಗುವ ಸಾಧ್ಯತೆ ಹೆಚ್ಚು.
ಇನ್ನು ನಮ್ಮ ರಾಜ್ಯದ ರೈಲುಗಳ ಬೇಡಿಕೆ ಬಗ್ಗೆ ಗಮನಿಸುವುದಾದರೆ, ನಮ್ಮ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿರುವ ರೇಲ್ವೆ ಸಂಪರ್ಕಕ್ಕಿಂತ ಕಡಿಮೆ. ಇದರಿಂದಾಗಿ ರಾಜ್ಯದ ಜನರಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ವರ್ಷದಿಂದ ವರ್ಷಕ್ಕೆ ರಾಜ್ಯದ ರೇಲ್ವೆ ಬೇಡಿಕೆಗಳ ಪಟ್ಟಿ ಏರುತ್ತಿದೆಯೇ ಹೊರತು ತಗ್ಗುತ್ತಿಲ್ಲ. ಹೊಸ ಮತ್ತು ಹಾಲಿ ಯೋಜನೆಗಳು, ಘೋಷಣೆ ಮಾಡಲಾಗಿರುವ ಯೋಜನೆಗಳ ಬಗ್ಗೆ ಸಮೀಕ್ಷೆ, ಹೊಸ ರೈಲುಗಳು, ಹಾಲಿ ರೈಲುಗಳ ವಿಸ್ತರಣೆ ಮತ್ತು ವಾರಕ್ಕೊಮ್ಮೆ, ಎರಡು ವಾರಕ್ಕೊಮ್ಮೆ ಓಡುವ ರೈಲುಗಳ ವಿಸ್ತರಣೆ ಸೇರಿದಂತೆ ಹಲವು ಬೇಡಿಕೆಗಳು ಈಡೇರಿಲ್ಲ. ಕಳೆದ ರೇಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ನೀಡಿರುವ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅವುಗಳೆಂದರೆ ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ (ಹವಾನಿಯಂತ್ರಿತ), ಯಶವಂತಪುರ- ಇಂದೋರ್ (ಸೂಪರ್‌ಫಾಸ್ಟ್ ಬೈವೀಕ್ಲಿ) ಮತ್ತು ಬೆಂಗಳೂರು-ನೆಲಮಂಗಲ (ಪ್ಯಾಸೆಂಜರ್ ರೈಲು ಪ್ರತಿದಿನ).
ಇದಲ್ಲದೆ ಬೆಂಗಳೂರು-ಹಾಸನ, ಮುನಿರಾಬಾದ್-ಮೆಹಬೂಬ್‌ನಗರ್, ಬೀದರ್-ಗುಲ್ಬರ್ಗ ನಡುವಿನ ಹೊಸ ರೇಲ್ವೆ ಮಾರ್ಗ ನಿರ್ಮಾಣ ಹಲವು ವರ್ಷಗಳಿಂದ ಪ್ರಗತಿಯಲ್ಲಿದೆಯಾದರೂ ಅದು ಪೂರ್ತಿಯಾಗಿಲ್ಲ. ಅಚ್ಚರಿಯೆಂದರೆ ಈ ಯೋಜನೆಗಳು ಆರಂಭವಾಗಿ 10-15 ವರ್ಷಗಳೇ ಕಳೆದಿವೆ. ರಾಷ್ಚ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೇಲ್ವೆ ಇಲಾಖೆಗೆ ಭೂಮಿ ಹಸ್ತಾಂತರ, ಯೋಜನೆಗೆ ಕಡಿಮೆ ಬಜೆಟ್‌ನಲ್ಲಿ ಮೊತ್ತದ ಹಣ ನಿಗದಿ ಸೇರಿದಂತೆ ಇನ್ನಿತರ ಕಾರಣಗಳಿಂದ ಯೋಜನೆ ಪೂರ್ತಿಯಾಗುವಲ್ಲಿ ವಿಳಂಬವಾಗಿದೆ.
12.07 ಕಿ.ಮೀ ದೂರದ ಯಲಹಂಕ-ಯಶವಂತಪುರ ಮತ್ತು  12.89  ಕಿ.ಮೀ ಯಲಹಂಕ-ಚನ್ನಸಂದ್ರ  ನಡುವಿನ ಜೋಡಿ ಹಳಿಮಾರ್ಗ ಕಾಮಗಾರಿ ಮತ್ತು ವಿದ್ಯುದೀಕರಣ ಕಾಮಗಾರಿ 2009ರಲ್ಲೇ ಮಂಜೂರಾಗಿತ್ತು. ಆದರೆ ಇನ್ನೂ ಪೂರ್ತಿಯಾಗಿಲ್ಲ. ಈ ರೀತಿ ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿದ್ದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ತಿಗೊಳ್ಳುವುದಾದರೂ ಹೇಗೆ? ಇದರಿಂದಾಗಿ ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ ಮಾತ್ರವಲ್ಲದೆ ಹಣ ಹೂಡಿಕೆ ಮಾಡಿದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಏನೂ ಲಾಭ ಉಂಟಾಗುವುದಿಲ್ಲ.
ಮೈಸೂರು-ಬೆಂಗಳೂರು ನಡುವಿನ ಹಳಿ ದ್ವಿಗುಣ ಮತ್ತು ವಿದ್ಯುದೀಕರಣ ಬೇಕೋ ಬೇಡವೋ ಎಂಬಂತೆ ಹಲವು ವರ್ಷಗಳಿಂದ ಸಾಗುತ್ತಿದೆ. ಅದಕ್ಕೆ ಮುಖ್ಯವಾಗಿ ತೊಡಕಾಗಿರುವುದೆಂದರೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್‌ನ ಆಯುಧಾಗಾರ ಸ್ಥಳಾಂತರ. ಇದರ ಜತೆ ಸಚಿವರ ಸಮಿತಿಯಿಂದ ಕೆಲವೊಂದು ವಿಚಾರಗಳ ಬಗ್ಗೆ ಮಂಜೂರಾತಿ ಬಾಕಿ ಉಳಿದಿದೆ. ಹೀಗಾಗಿ ಯೋಜನೆ  ಪೂರ್ತಿಯಾಗಲು ತೊಂದರೆಯುಂಟಾಗಿದೆ. ಇದರ ಜತೆಗೆ ರಾಜ್ಯದ ಆರು ಪ್ರಮುಖ ಯೋಜನೆಗಳಾಗಿರುವ ಹುಬ್ಬಳ್ಳಿ-ಅಂಕೋಲಾ, ಚಾಮರಾಜನಗರ-ಮೆಟ್ಟುಪಾಳ್ಯಂ, ಬೆಂಗಳೂರು-ಸತ್ಯಮಂಗಲ, ಕುಶಾಲನಗರ-ಮಡಿಕೇರಿ, ಮತ್ತು ತಾಳಗುಪ್ಪ-ಹೊನ್ನಾವರ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅವುಗಳ ಕತೆ ಹೀಗಾದರೆ ಸಕಲೇಶಪುರ- ಸುಬ್ರಹ್ಮಣ್ಯರೋಡ್ ನಡುವಿನ ಜೋಡಿ ಹಳಿಮಾರ್ಗ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಕಾಣದಿರುವುದು ದಕ್ಷಿಣ ಮತ್ತು ಉತ್ತರ ಹಾಗೂ ಕರಾವಳಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಅನಾನುಕೂಲವಾಗಿದೆ. ಇದರ ಜತಗೆ ಈ ಯೋಜನೆ ಪೂರ್ತಿಗೊಂಡರೆ ಕರಾವಳಿ ಪ್ರದೇಶದ ಪ್ರಮುಖ ಬಂದರುಗಳಿಗೆ ರೇಲ್ವೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಪ್ರಮುಖವಾದ ವಿಚಾರವೆಂದರೆ ರಾಜ್ಯದ ಭೂಪಟದಲ್ಲಿ ರೇಲ್ವೆ ಮಾರ್ಗ ಇರದ ಜಿಲ್ಲೆಯೆಂದರೆ ಕೊಡಗು. ಕುಶಾಲನಗರ-ಮಡಿಕೇರಿ ಯೋಜನೆ ಪೂರ್ತಿಗೊಂಡರೆ ಕೊಡಗು ಜಿಲ್ಲೆಗೆ ರೇಲ್ವೆ ಸಂಪರ್ಕ ಸಿಕ್ಕಿದಂತಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಈ ಯೋಜನೆಗೆ ಅನುಮತಿ ಸಿಗಬೇಕಾಗಿದೆ.
ತುಮಕೂರು-ದಾವಣಗೆರೆ ಮತ್ತು ಧಾರವಾಡ-ಬೆಳಗಾವಿ ನಡುವಿನ ಹೊಸ ಮಾರ್ಗ  ಸರಕು ಸಾಗಣೆಗೆ ಪ್ರಶಸ್ತವಾದ ಮಾರ್ಗಗಳು. ಎಲ್ಲದಕ್ಕಿಂತ ಹೆಚ್ಚಾಗಿ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಬೆಳಗಾವಿಗೆ ನೇರ ಸಂಪರ್ಕ ಸಿಕ್ಕಿದಂತಾಗುತ್ತದೆ. ಮಾತ್ರವಲ್ಲದೆ ಈ ಸ್ಥಳಗಳ ನಡುವಿನ ದೂರ 100 ಕಿ.ಮೀನಷ್ಟು ಕಡಿಮೆಯಾಗಿ ಪ್ರಯಾಣಿಕರಿಗೆ 3 ಗಂಟೆಗಳಷ್ಟು ಉಳಿತಾಯವಾಗಲಿದೆ. ಜತೆಗೆ ಸಿರಾ, ಹಿರಿಯೂರು ಮತ್ತು ಚಿತ್ರದುರ್ಗಕ್ಕೆ ಸಂಪರ್ಕ ಸಿಕ್ಕಿದಂತಾಗುತ್ತದೆ. ಹೀಗಾಗಿ ರೇಲ್ವೆ ಇಲಾಖೆ ಈ ಯೋಜನೆಗೆ ಸೂಕ್ತ ರೀತಿಯಲ್ಲಿ ಹಣಕಾಸಿನ ನೆರವು ನೀಡುವ ಮೂಲಕ 2 ವರ್ಷಗಳಲ್ಲಿ ಯೋಜನೆ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.
ಬೆಂಗಳೂರಿನಿಂದ ಚಾಮರಾಜನಗರ, ಮೀರಜ್, ಹೊಸಪೇಟೆ, ಹಾಸನ, ಚಿಕ್ಕಮಗಳೂರು, ದಾವಣಗೆರೆ ಮತ್ತು ಬೀದರ್‌ಗೆ ಹೊಸದಾಗಿ ಇಂಟರ್‌ಸಿಟಿ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳಬೇಕು. ಹುಬ್ಬಳ್ಳಿಯಿಂದ ಬಳ್ಳಾರಿ ಮೂಲಕ ಸೋಲಾಪುರ, ಹುಬ್ಬಳ್ಳಿಯಿಂದ ಗುಂತಕಲ್ ಮೂಲಕ ಬೀದರ್‌ಗೆ ಹೊಸ ರೈಲು ಸಂಚಾರಕ್ಕೆ ಮುತುವರ್ಜಿ ವಹಿಸಬೇಕು.
ಇದರ ಜತೆಗೆ ಬೆಂಗಳೂರಿನಿಂದ ಮುಂಬೈ, ಜಮ್ಮು, ವಾರಾಣಸಿ, ಅಮೃತಸರ, ಡೆಹ್ರಾಡೂನ್, ಗಯಾ, ಚಂಡೀಗಢ, ಬಿಕಾನೇರ್, ಹರಿದ್ವಾರ, ಉದಯಪುರ, ಶಿರ್ಡಿ, ರಾಮೇಶ್ವರ, ಔರಂಗಾಬಾದ್, ಜೈಪುರ, ರಾಜ್‌ಕೋಟ್, ಭಾವಾನಗರ್‌ಗಳಿಗೆ ಅಂತಾರಾಜ್ಯ ಸೂಪರ್‌ಫಾಸ್ಟ್ ರೈಲುಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸುತ್ತೇವೆ.  ಚೆನ್ನೈನಿಂದ ಬಳ್ಳಾರಿ ಮೂಲಕ ಮುಂಬೈಗೆ ರೈಲು ಆರಂಭವಾಗಬೇಕು. ಮೇಲೆ ಹೇಳಿದ ಎಲ್ಲ ಸ್ಥಳಗಳು ಒಂದೋ ವ್ಯಾವಹಾರಿಕವಾಗಿ ಮತ್ತು ಧಾರ್ಮಿಕ ಕ್ಷೇತ್ರಗಳಾಗಿ ಪ್ರಸಿದ್ಧಿಯಾಗಿವೆ. ಹೀಗಾಗಿ ಆ ಸ್ಥಳಗಳಿಗೆ ರಾಜ್ಯದಿಂದ ಪ್ರಯಾಣಿಕರಿಗೆ ತೆರಳಲು ಸೂಕ್ತ ವ್ಯವಸ್ಥೆಯಾಗಬೇಕು. ಮೂರು ವಾರಕ್ಕೊಮ್ಮೆ ಬೆಂಗಳೂರು- ಶೋಲಾಪುರ್, ಹುಬ್ಬಳ್ಳಿ- ವಿಜಯವಾಡ ರೈಲನ್ನು ಪ್ರತಿ ದಿನ ಓಡಿಸುವ ವ್ಯವಸ್ಥೆಯಾಗಬೇಕು. ಎರಡು ವಾರಕ್ಕೊಮ್ಮೆ ಯಶವಂತಪುರ-ವಾಸ್ಕೋ ರೈಲನ್ನು ಪ್ರತಿದಿನ ಓಡಿಸಲು ಕ್ರಮ ಕೈಗೊಳ್ಳಬೇಕು. ಹುಬ್ಬಳ್ಳಿ, ಬೆಳಗಾವಿ, ಪುಣೆ, ಮನ್ಮಾಡ್ ಮೂಲಕ ಓಡುವ ಯಶವಂತಪುರ-ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲನ್ನು 4 ಮತ್ತು 3 ದಿನ ಗದಗ, ಬಾಗಲಕೋಟೆ, ಬಿಜಾಪುರ, ಶೋಲಾಪುರ್ ಮತ್ತು ಮನ್ಮಾಡ್ ನಡುವೆ ಸಂಚರಿಸುವಂತೆ ಮಾಡಬೇಕು. ಇದರಿಂದಾಗಿ ಬಿಜಾಪುರ, ಬಾಗಲಕೋಟೆ, ಗದಗ, ಹೊಸಪೇಟೆ ಮತ್ತು ಬಳ್ಳಾರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
2000ನೇ ಇಸವಿಯಂದ ಬೆಂಗಳೂರಿಗೆ ಸುವ್ಯವಸ್ಥಿತ ಕಮ್ಯೂಟರ್ ರೇಲ್ವೆ ವ್ಯವಸ್ಥೆ ಬೇಕೆಂದು ರೇಲ್ವೆ ಸಚಿವಾಲಯಕ್ಕೆ ಮನವಿ ಮಾಡುತ್ತಾ ಬರುತ್ತಿದ್ದೇನೆ. ಏಕೆಂದರೆ ಹಲವು ವರ್ಷಗಳಿಂದ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ಇತರ ರಾಜ್ಯಗಳಿಂದ ಜನರು ವಿವಿಧ ಕಾರಣಗಳಿಗಾಗಿ ಬೆಂಗಳೂರಿಗೆ ಆಗಮಿಸುತ್ತಾರೆ. ಹೀಗಾಗಿ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಹಜವಾಗಿಯೇ ಹೆಚ್ಚುತ್ತದೆ. ಅದನ್ನ ನಿಯಂತ್ರಿಸಲು ಈ ವ್ಯವಸ್ಥೆ ನೆರವಾಗಲಿದೆ ಮಾತ್ರಲ್ಲದೆ 2 ಮತ್ತು 3ನೇ ಹಂತದ ನಗರಗಳಿಂದ ಜನರು ಬೆಂಗಳೂರಿಗೆ ಬರಲು ಅನುಕೂಲವಾಗಲಿದೆ. ಇದೆಲ್ಲದರ ಜತೆಗೆ ರೇಲ್ವೆ ಇಲಾಖೆ ಮೂರು ಮೆಟ್ರೋ ನಗರಗಳನ್ನು ಕಲ್ಪಿಸುವ ಪೂರ್ವ-ಪಶ್ಚಿಮ ಸರಕು ಸಾಗಣೆ ಕಾರಿಡಾರ್ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಬೇಕು. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್ ಮತ್ತು ಪುಣೆಗಳನ್ನು ಸಂಪರ್ಕಿಸುವಂತೆ ಚೆನ್ನೈ-ಬೆಂಗಳೂರು-ಮುಂಬೈ ಕಾರಿಡಾರ್ ಅನ್ನು ನಿರ್ಮಿಸಬೇಕು.
ಹೊಸ ಕೋಚಿಂಗ್ ಟರ್ಮಿನಲ್‌ಗಳು: ಅತ್ಯಂತ ಪ್ರಮುಖವಾಗಿರುವ ಜಂಕ್ಷನ್‌ಗಳಾದ ಬೆಳಗಾವಿ, ಕಾರವಾರ, ಗದಗ, ಬೀದರ್ ಮತ್ತು ರಾಯಚೂರುಗಳಲ್ಲಿ  ರೈಲುಗಳ ನಿರ್ವಹಣೆಗಾಗಿ ಸುವ್ಯವಸ್ಥಿತ ಹಾಗೂ ಪೂರ್ಣ ಪ್ರಮಾಣದ ಕೋಚಿಂಗ್ ಟರ್ಮಿನಲ್‌ಗಳನ್ನು  (ರೈಲುಗಳನ್ನು ತೊಳೆಯಲು ಮತ್ತು ಪ್ರಾಥಮಿಕ ಹಂತದ ಉಸ್ತುವಾರಿ ಕೆಲಸಗಳ ನಿರ್ವಹಣೆಗೆ) ರಚಿಸಬೇಕು.
ಹೊಸ ವಿಭಾಗಗಳು: 1984ರಲ್ಲಿ ಸರೀನ್ ಆಯೋಗ ಶಿಫಾರಸು ಮಾಡಿದಂತೆ ಗುಲ್ಬರ್ಗದಲ್ಲಿ ವಿಭಾಗೀಯ ಕಚೇರಿ ತೆರೆಯಬೇಕು. ಇದರ ಜತೆಗೆ ಮಂಗಳೂರಿಗೆ ಕೂಡ ಒಂದು ವಿಭಾಗೀಯ ಕಚೇರಿ ನೀಡಬೇಕು. ಏಕೆಂದರೆ ರಾಜ್ಯದ ಎರಡನೇ ಅತ್ಯಂತ ಪ್ರಮುಖ ನಗರ ಬಯಸುತ್ತಿರುವ ಅತ್ಯಂತ ಹಳೆಯ ಬೇಡಿಕೆ. 2008ರಲ್ಲಿ ಅಂದಿನ ರೇಲ್ವೆ ಸಚಿವ ಲಾಲುಪ್ರಸಾದ್ ಯಾದವ್ ಸೇಲಂಗೆ ಹೊಸ ವಿಭಾಗವನ್ನು ಅತ್ಯಂತ ಉದಾರತೆಯಿಂದ ನೀಡಿದ್ದರು. ಅದೇ ರೀತಿಯ ಉದಾರತೆಯನ್ನು ಹಾಲಿ ರೇಲ್ವೆ ಸಚಿವರು ತೋರುವರು ಎಂಬ ವಿಶ್ವಾಸ ರಾಜ್ಯದ ಜನರದ್ದಾಗಿದೆ.
ವಿಶ್ವದರ್ಜೆ ನಿಲ್ದಾಣಗಳು: 2008ರ ರೇಲ್ವೆ ಬಜೆಟ್‌ನಲ್ಲಿ ಮಂಗಳೂರು ಮತ್ತು ಬೆಂಗಳೂರು ರೇಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಯ ನಿಲ್ದಾಣಗಳನ್ನಾಗಿ ಮಾಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮಗಳನ್ನು ಇಲಾಖೆ ಕೈಗೊಂಡಿಲ್ಲ.  ಬೆಂಗಳೂರು ರೇಲ್ವೆ ನಿಲ್ದಾಣದಲ್ಲಿ ಇನ್ನು ಯಾವುದೇ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಸ್ಥಳಾವಕಾಶದ ಕೊರತೆ ಇದೆ. ಹೀಗಾಗಿ, ಸದ್ಯ ಮುಚ್ಚಿ ಹೋಗಿರುವ ಬಿನ್ನಿ ಮಿಲ್‌ನ ಜಮೀನನ್ನು ಅದಕ್ಕೆ ಉಪಯೋಗಿಸುವ ಅವಕಾಶ ಉಂಟು. 2008ರಿಂದ ಈಚೆಗೆ ವಲಯ ಮತ್ತು ವಿಭಾಗೀಯ ಮಟ್ಟದ ರೇಲ್ವೆ ಅಧಿಕಾರಿಗಳಿಗೆ ಈ ಬಗ್ಗೆ ನಾನು ಸತತವಾಗಿ ಪತ್ರ ಬರೆದಿದ್ದೆ. ಅಷ್ಟು ಮಾತ್ರವಲ್ಲದೆ ವಲಯ ರೇಲ್ವೆ ಪ್ರಯಾಣಿಕರ ಸಲಹಾ ಸಮಿತಿ ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತಾ ಬಂದಿದ್ದೆ. ಕಮ್ಯೂಟರ್ ರೇಲ್ವೆ ವ್ಯವಸ್ಥೆ ಆರಂಭಕ್ಕೆ ಈ ಜಮೀನು ಅತ್ಯಂತ ಉಪಯುಕ್ತವಾಗಲಿದೆ. ರಾಜ್ಯ ಸರ್ಕಾರ ಮತ್ತು ರೇಲ್ವೆ ಇಲಾಖೆ ಜಂಟಿಯಾಗಿ ಈ ಸ್ಥಳದ ಮಾಲೀಕರ ಜತೆ ಚರ್ಚಿಸಿ ಅದನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಸುವುದು ಉತ್ತಮ.
ಬೈಯ್ಯಪ್ಪನಹಳ್ಳಿಯಲ್ಲಿ: ಬೆಂಗಳೂರು ನಗರ ಮತ್ತು ಯಶವಂತಪುರ ಜತೆಗೆ ಬೆಂಗಳೂರಿಗೆ ಮತ್ತೊಂದು ಮೂರನೇ ಕೋಚಿಂಗ್ ಕೇಂದ್ರದ ಅಗತ್ಯವಿದೆ. ರೈಲುಗಳ ಸುಗಮ ಸಂಚಾರ, ಉಸ್ತುವಾರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಇಂಥ ಒಂದು ಕೇಂದ್ರವನ್ನು ನಿರ್ಮಾಣ ಮಾಡುವುದು ಅಗತ್ಯವಾಗಿದೆ.
ಮೈಸೂರು ನಿಲ್ದಾಣ: ಐತಿಹಾಸಿಕವಾಗಿ ಮತ್ತು ಪ್ರವಾಸಿ ಸ್ಥಳವಾಗಿ ಪ್ರಾಮುಖ್ಯತೆ ಹೊಂದಿರುವ .ಮೈಸೂರು ರೇಲ್ವೆ ನಿಲ್ದಾಣ ರಾಜ್ಯದಲ್ಲೇ ಅತ್ಯಂತ ಬಿಡುವಿಲ್ಲದ ನಿಲ್ದಾಣ ಎನ್ನಿಸಿಕೊಂಡಿದೆ. ದೇಶದ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಿಗೆ ಹೆಚ್ಚಿನ ರೈಲುಗಳು ಇಲ್ಲಿಂದ ಹೊರಡುತ್ತವೆ. ಹೀಗಾಗಿ, ನಿಲ್ದಾಣದ ಮುಂದಿನ ವಿಸ್ತರಣಾ ಕಾಮಗಾರಿಗಾಗಿ ಬೆಳಗೊಳ ರೇಲ್ವೆ ನಿಲ್ದಾಣದ ಬಳಿ 50 ಎಕರೆ ಜಮೀನನ್ನು ಅಗತ್ಯವಾಗಿ ಕಾಯ್ದಿರಿಸಬೇಕು. ರೇಲ್ವೆ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಬಗ್ಗೆ 2008ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ರೇಲ್ವೆ ಉದ್ಯೋಗಿಗಳ ಅನುಕೂಲಕ್ಕೆಂದು ಘೋಷಿಸಲಾಗಿರುವ ಈ ನಿರ್ಧಾರದ ಅನುಷ್ಠಾನ ಮಾತ್ರ ಆಗಿಯೇ ಇಲ್ಲ.
ಪ್ರಮುಖ ರೈಲುಗಳು:  ಬೆಂಗಳೂರಿನಿಂದ ಚಾಮರಾಜನಗರ, ಹಾಸನ ಅಥವಾ ಸಕಲೇಶಪುರ, ಚಿತ್ರದುರ್ಗ, ದಾವಣಗೆರೆ, ಹೊಸಪೇಟೆ, ಹಿಂದೂಪುರಕ್ಕೆ ಹೊಸ ರೈಲುಗಳ ಸಂಚಾರಕ್ಕೆ ಆದ್ಯತೆಯ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಬೀದರ್‌ನಿಂದ ಬೆಂಗಳೂರಿಗೆ  ಸಂಜೆ 5.30ಕ್ಕೆ ರೈಲು ಆರಂಭಕ್ಕೆ ಕ್ರಮ, ಶಿವಮೊಗ್ಗ-ಹೊಸಪೇಟೆ, ಹುಬ್ಬಳ್ಳಿಯಿಂದ ಬಳ್ಳಾರಿ-ಗುಂತಕಲ್ ಮಾರ್ಗವಾಗಿ ಶೋಲಾಪುರ, ಬೆಂಗಳೂರಿನಿಂದ ಚಿಕ್ಕಮಗಳೂರು (ರೇಲ್ವೆ ಯೋಜನೆ ಪೂರ್ತಿಗೊಂಡ ನಂತರ), ಬೆಂಗಳೂರಿನಿಂದ ಮೀರಜ್ ( ಈ ರೈಲು ಆರಂಭವಾದರೆ ಬೆಳಗಾವಿ ವ್ಯಾಪ್ತಿಯ ಜನರ ಬೇಡಿಕೆ ಈಡೇರುತ್ತದೆ), ಹುಬ್ಬಳ್ಳಿಯಿಂದ ಬೀದರ್‌ಗೆ ರಾತ್ರಿ ವೇಳೆ ರೈಲು, ಹುಬ್ಬಳ್ಳಿ, ವಾಸ್ಕೋ, ಕಾರವಾರ, ಮೈಸೂರು ಮೂಲಕ ಬೆಂಗಳೂರಿನಿಂದ ಬೆಂಗಳೂರಿಗೆ ಸರ್ಕ್ಯುಲಾರ್ ರೈಲು ಸೇವೆ, ಬೆಳಗ್ಗೆ 6.30ಕ್ಕೆ ಗುಂತಕಲ್‌ನಿಂದ ಹುಬ್ಬಳ್ಳಿಗೆ, ಬೆಂಗಳೂರಿನಿಂದ ನೆಲಮಂಗಲಕ್ಕೆ ರೈಲು (2010ರಲ್ಲಿ ಅಂದಿನ ರೇಲ್ವೆ ಸಚಿವರ ಘೋಷಣೆ ಇನ್ನೂ ಅನುಷ್ಠಾನವಾಗಿಲ್ಲ)
ಅಂತಾರಾಜ್ಯ ಸೂಪರ್‌ಫಾಸ್ಟ್ ರೈಲುಗಳು:  ಬೆಂಗಳೂರಿನಿಂದ ಮುಂಬೈ, ಜಮ್ಮು ಅಥವಾ ಕಾಟ್ರಾ, ವಾರಾಣಸಿ, ಡೆಹ್ರೂಡೂನ್ ಅಥವಾ ಹರಿದ್ವಾರ, ಚಂಡೀಗಢ, ಅಮೃತಸರ, ಜೈಪುರ, ಶಿರ್ಡಿ, ರಾಮೇಶ್ವರ, ಔರಂಗಾಬಾದ್, ಬಿಕಾನೇರ್, ಉದಯಪುರ, ಭಾವಾನಗರ, ರಾಜ್‌ಕೋಟ್ ಚೆನ್ನೈನಿಂದ ಗುಂತಕಲ್, ಬಳ್ಳಾರಿ ಮತ್ತು ಬಾಗಲಕೋಟೆ ಮೂಲಕ ಮುಂಬೈಗೆ, ಹುಬ್ಬಳ್ಳಿಯಿಂದ ಗದಗ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ ಮತ್ತು ವಾಡಿ ಮೂಲಕ ಹೈದರಾಬಾದ್‌ಗೆ ರೈಲುಗಳನ್ನು ಆರಂಭಿಸಬೇಕು. ಈ ರೈಲು ಸೇವೆ ಆರಂಭವಾದರೆ ಉತ್ತರ ಮತ್ತು ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಸಂಚಾರ ಹೆಚ್ಚಿಸಿ: ಎರಡು ವಾರಕ್ಕೊಮ್ಮೆ ಯಶವಂತಪುರ ಮತ್ತು ನಿಜಾಮುದ್ದೀನ್ ನಡುವೆ ಓಡಾಡುವ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ ಮತ್ತು ಬೆಳಗಾವಿ ಮೂಲಕ 4 ದಿನಗಳಿಗೆ ಒಮ್ಮೆ ಓಡಿಸುವಂತಾಗಬೇಕು. ಮೂರು ವಾರಕ್ಕೊಮ್ಮೆ ಓಡುವ ಹುಬ್ಬಳ್ಳಿ- ವಿಜಯವಾಡ ಮತ್ತು ಬೆಂಗಳೂರು-ಕಾರವಾರ ರೈಲನ್ನು ಪ್ರತಿದಿನ, ಎರಡು ವಾರಕ್ಕೊಮ್ಮೆ  ಬೆಂಗಳೂರು-ವಾಸ್ಕೋ ಮತ್ತು ಬೆಂಗಳೂರು-ಗೋರಖ್‌ಪುರ ರೈಲನ್ನು ಪ್ರತಿ ದಿನ ಓಡಿಸುವ ವ್ಯವಸ್ಥೆ ಆಗಬೇಕು.
ರೈಲುಗಳ ವಿಸ್ತರಣೆ: ತಿರುಪತಿಯಿಂದ ಗುಂತಕಲ್ ವರೆಗಿನ ರೈಲನ್ನು ಬಳ್ಳಾರಿ, ಮುಂಬೈ-ಶೋಲಾಪುರ ರೈಲನ್ನು ಗದಗವರೆಗೆ, ಶೋಲಾಪುರ-ಯಶವಂತಪುರ ರೈಲನ್ನು ಮೈಸೂರು, ಯಶವಂತಪುರ-ಗುಲ್ಬರ್ಗ-ಬಿಜಾಪುರ-ಬಾಗಲಕೋಟೆ ರೈಲನ್ನು ಹುಬ್ಬಳ್ಳಿ, ಬೆಂಗಳೂರು-ತುಮಕೂರು ಪುಶ್‌ಪುಲ್ ರೈಲನ್ನು ಅರಸೀಕೆರೆ ವರೆಗೆ ವಿಸ್ತರಿಸಬೇಕು.

-ಪ್ರಕಾಶ್ ಮೆಂಡೋತ್
ವಲಯ ರೇಲ್ವೆ ಪ್ರಯಾಣಿಕರ ಸಲಹಾ ಸಮಿತಿ ಮಾಜಿ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.