ರಾಜಕೀಯದ ಅಲೆಗೆ ಅಲುಗಾಡಿದೆ ಶಿಕ್ಷಣದ ಬುನಾದಿ
ಈಚೆಗೊಮ್ಮೆ ತಮಿಳುನಾಡಿಗೆ ಭೇಟಿ ನೀಡಿದಾಗ ಆ ನಾಡಿನ ಭವ್ಯ ಸಂಸ್ಕೃತಿಯ ಬಗ್ಗೆ ವಿವರವಾಗಿ ತಿಳಿದು ಹೆಮ್ಮೆಯಾಯಿತು. ಖುಷಿಯಾಯಿತು. ತಮಿಳುನಾಡು ಎಂದಾಕ್ಷಣ ಚೋಳ ಸಾಮ್ರಾಜ್ಯದ ರಾಜ ಮಹಾರಾಜರು ಮತ್ತು ಅವರ ಪರಾಕ್ರಮ ನೆನಪಾಗುತ್ತದೆ. ಹಾಗೆಯೇ ತಮಿಳ್ನಾಡು ಎಂದಾಕ್ಷಣ ಆ ನೆಲದ ಶ್ರೇಷ್ಠ ಕವಿ ತಿರುವಳ್ಳವರ್ ಹಾಗೂ ಅವರ ಸುಪ್ರಭಾತದಂಥ ಮಾತುಗಳು ನೆನಪಾಗುತ್ತವೆ. ಮಹಾಕವಿ ತಿರುವಳ್ಳವರ್ ಅವರ ಮಾತುಗಳಲ್ಲಿ ಎಂಥದೋ ಮೋಡಿಯಿದೆ. ಒಂದು ಸೆಳೆತವಿದೆ. ಒಂದು ಶಕ್ತಿಯಿದೆ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಬದುಕಿನ ಕುರಿತು ಹೊಸದೊಂದು ಭರವಸೆ ಉಂಟಾಗುತ್ತದೆ. ಹಾಗೆಯೇ, ತಮಿಳ್ನಾಡು ಎಂದಾಕ್ಷಣ ತುಂಬ ಖುಷಿಯಾಗಲಿಕ್ಕೆ, ಮತ್ತೊಂದು ಕಾರಣವೂ ಇದೆ. ಅದೇನೆಂದರೆ- ಆ ನಾಡಿನಲ್ಲಿ ಕಾಣಸಿಗುವ ನಟರಾಜನ ಮನೋಹರ ವಿಗ್ರಹ. ಹಿಂದೂಗಳ ಪ್ರಮುಖ ದೇವರುಗಳಲ್ಲಿ ಒಂದಾದ ಪರಶಿವ, ನಾಟ್ಯಕ್ಕೆ ನಿಂತಾಗ ಕಾಣಿಸುವ ರೂಪವೇ ನಟರಾಜನದು. ಈ ಎಲ್ಲ ಕಾರಣಗಳಿಂದ ತಮಿಳುನಾಡಿನ ಪ್ರವಾಸ ಎಂದರೆ ಮನಸ್ಸು ಉಲ್ಲಾಸದ ಹೂವಾಗುತ್ತದೆ.
ದಕ್ಷಿಣ ಭಾರತದ ಮಹಾನಗರಗಳ ಪೈಕಿ ಚೆನ್ನೈ ಕೂಡ ಒಂದು. ಬೆಂಗಳೂರು, ಹೈದ್ರಾಬಾದ್ನಂತೆ ಚೆನ್ನೈ ಕೂಡ ಐಟಿ ಕ್ಷೇತ್ರದ ರಂಗಸ್ಥಳವಾಗುತ್ತಿದೆ. ಸರ್ ಸಿ.ವಿ. ರಾಮನ್, ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್, ಡಾ॥ ಅಬ್ದುಲ್ ಕಲಾಂ ಮುಂತಾದ ಶ್ರೇಷ್ಠ ವಿಜ್ಞಾನಿಗಳು ದಕ್ಷಿಣ ಭಾರತದ ಮೂಲದವರೇ. ಈಗಿನ ಸಂದರ್ಭ ಹಾಗೂ ದಶಕಗಳ ಹಿಂದಿನ ಮಾತುಗಳನ್ನು ಬದಿಗಿಟ್ಟು, ನೂರಾರು ವರ್ಷಗಳ ಹಿಂದಿನ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲಿ ಕೂಡ ಯತಿಗಳಾದ ಆದಿ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರು ಆರಂಭಿಸಿದ ಬದಲಾವಣೆಯ ಪರ್ವ ಮತ್ತು ನೆಮ್ಮದಿಯ ಬದುಕಿಗೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿ ನೆನಪಾಗುತ್ತದೆ.
ಶಿಕ್ಷಣದಲ್ಲಿ ರಾಜಕೀಯವನ್ನು ಎಳೆದು ತರುವ ಕೆಲಸವನ್ನು ಅಧಿಕಾರದಲ್ಲಿದ್ದ ಮಂದಿ ಒಂದು ಆಚರಣೆಯಂತೆ ಮಾಡಿಕೊಂಡೇ ಬಂದರು. ಈ ಕೆಲಸವನ್ನು ಜಗತ್ತಿನ ಎಲ್ಲ ರಾಷ್ಟ್ರಗಳ ನಾಯಕರೂ ಮಾಡಿದರು. ಶಿಕ್ಷಣವೆಂಬುದನ್ನು ರಾಜಕೀಯ ಪ್ರವೇಶಕ್ಕೆ ಒಂದು ಚಿಮ್ಮು ಹಲಗೆಯಾಗಿ, ಒಂದು ಅಸ್ತ್ರವಾಗಿ ಹಲವು ದೇಶಗಳಲ್ಲಿ ನೂರಾರು ವರ್ಷಗಳಿಂದಲೂ ಬಳಸಲಾಗಿದೆ. ಶಿಕ್ಷಣದಲ್ಲಿ ರಾಜಕೀಯ ನುಸುಳಿದ್ದಕ್ಕೆ ಸಿಗುವ ಮೊದಲ ಉದಾಹರಣೆ ಬ್ರಿಟನ್ ದೊರೆ ಎಂಟನೇ ಹೆನ್ರಿಯ ಕಾಲದ್ದು. ಈ ರಾಜ, ತನ್ನ ಹೆಂಡತಿಯಿಂದ ವಿಚ್ಛೇದನ ಪಡೆಯಲು ಬಯಸಿದ. ಅದಕ್ಕೆ ಅನುಮತಿ ನೀಡುವಂತೆ ಪೋಪ್ ಅವರಲ್ಲಿ ಮನವಿ ಮಾಡಿಕೊಂಡ. ಈ ಬೇಡಿಕೆಯನ್ನು ಪೋಪ್ ತಿರಸ್ಕರಿಸಿದಾಗ, ಅವರ ವಿರುದ್ಧ ತಿರುಗಿ ಬಿದ್ದು, ಹತ್ತಾರು ಹೊಸ ಶಾಲೆ ಹಾಗೂ ಚರ್ಚ್ಗಳನ್ನೂ ಆರಂಭಿಸಿದ. ದೊರೆಯ ಆಶ್ರಯ ಪಡೆದಿದ್ದ ಚರ್ಚ್ ಮತ್ತು ಶಾಲೆಗಳಲ್ಲಿ ಅವನ ಗುಣಗಾನ ಮಾಡುವ ಒಂದು ಅಧ್ಯಾಯವೂ ಸೇರಿಕೊಂಡಿತು. ಯುರೋಪ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ರಾಜಕೀಯವೆಂಬುದು ಕಾಲಿರಿಸಿದ್ದು ಹೀಗೆ.
20ನೇ ಶತಮಾನದಲ್ಲಿ ಸೋವಿಯತ್ ರಷ್ಯಾದ ಶಾಲೆ ಹಾಗೂ ಕಾಲೇಜಿನ ಪಠ್ಯಗಳಲ್ಲಿ, ಆ ದೇಶದ ಮಹಾನಾಯಕರುಗಳಾದ ಲೆನಿನ್ ಹಾಗೂ ಸ್ಟಾಲಿನ್ರ ಬದುಕಿನ ಕಥೆಯನ್ನು ಸೇರಿಸಲಾಯಿತು. ಪುಟ್ಟ ರಾಷ್ಟ್ರವಾದ ಕ್ಯೂಬಾ, ತನ್ನ ರಾಷ್ಟ್ರದ ಪಠ್ಯದಲ್ಲಿ ಚೆಗವಾರನ ಹೋರಾಟದ ಕಥೆ ಹೇಳಿ, ನಮ್ಮ ನಾಡಿನ ಯುವಕರಿಗೆ ಚೆಗವಾರನೇ ರೋಲ್ ಮಾಡೆಲ್ ಎಂದು ಸಾರಿತು. ಅದೇ ರೀತಿ ಜರ್ಮನ್ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯಗಳ ಪಾಲಿಗೆ ಹಿಟ್ಲರ್ನೇ, ಅವನ ಆಕ್ರಮಣಶಾಲಿ ಪ್ರವೃತ್ತಿಯೇ ಆದರ್ಶವಾಯಿತು. ಇವಿಷ್ಟೂ ಪಶ್ಚಿಮ ರಾಷ್ಟ್ರಗಳ ವಿಷಯವಾಯಿತು. ಈಗ ನಮ್ಮ ನೆಲದ ವಿಷಯಕ್ಕೆ ಬರೋಣ. ಭಾರತದಲ್ಲಿ, ಶಿಕ್ಷಣ ವ್ಯವಸ್ಥೆ ತುಂಬ ಹಿಂದಿನಿಂದಲೂ ರಾಜರು ಮತ್ತು ರಾಜಕೀಯದಿಂದ ಮುಕ್ತವಾಗಿತ್ತು. ಭಾರತದ ಪುರಾತನ ಇತಿಹಾಸ ತಿಳಿಯಲು ಹೊರಟರೆ, ಆಗ ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾನಿಲಯಗಳಿದ್ದವು ಎಂಬ ಸಂಗತಿ ತಿಳಿದು ಬರುತ್ತದೆ. ಈ ಪೈಕಿ, ಸಮೀಪದ ನೂರು ಹಳ್ಳಿಗಳಿಂದ ನೇರವಾಗಿ ಕಂದಾಯ ವಸೂಲಿ ಮಾಡಿ ಖರ್ಚನ್ನು ಸರಿದೂಗಿಸಿಕೊಳ್ಳುವ ಅಧಿಕಾರವನ್ನು ನಳಂದಾ ವಿಶ್ವವಿದ್ಯಾನಿಲಯಕ್ಕೆ ನೀಡಲಾಗಿತ್ತು. ಈ ಮಾತು ಹಾಗಿರಲಿ; ಮಹಾಭಾರತದಲ್ಲಿ ಪಗಡೆಯಲ್ಲಿ ತನ್ನ ಸಾಮ್ರಾಜ್ಯವನ್ನೇ ಕಳೆದುಕೊಂಡ ಸಂದರ್ಭದಲ್ಲಿ, ಧರ್ಮರಾಯ ತನ್ನ ರಾಜ್ಯದ ಶಿಕ್ಷಣ ಕೇಂದ್ರಗಳನ್ನು ಮುಟ್ಟಲು ಹೋಗಬಾರದೆಂಬ ವಿನಂತಿಯಿಡುತ್ತಾನೆ. ಅದರರ್ಥ ಇಷ್ಟೆ: ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣವೆಂಬುದು ರಾಜಕೀಯದಿಂದ ಮುಕ್ತವಾಗಿತ್ತು. ಭಾರತದಲ್ಲಿ, ಸರ್ವರಿಗೂ ಶಿಕ್ಷಣದ ಯೋಚನೆ ಮೊಳಕೆಯೊಡೆದದ್ದು 18ನೇ ಶತಮಾನದಲ್ಲಿ. ಆಗ ಈಸ್ಟ್ ಇಂಡಿಯಾ ಕಂಪನಿಯ ನೌಕರನಾಗಿದ್ದ ಚಾರ್ಲ್ಸ್ ಗ್ರಾಂಟ್ ಎಂಬಾತ ಇಂಥದೊಂದು ಯೋಚನೆಯನ್ನು ತೇಲಿಬಿಟ್ಟ. ಮುಂದೆ ಲಾರ್ಡ್ ಮೆಕಾಲೆ ರೂಪಿಸಿದ ರೀತಿ ನೀತಿಗಳನ್ನು ಆಧರಿಸಿ, ಬ್ರಿಟಿಷರು 1850ರ ಸುಮಾರಿನಲ್ಲಿ ಮೂರು ವಿಶ್ವವಿದ್ಯಾನಿಲಯಗಳನ್ನು ಆರಂಭಿಸಿದರು. ಬ್ರಿಟನ್ ರಾಜಪ್ರಭುತ್ವಕ್ಕೆ ಗೌರವ ತೋರಿಸುವ, ಹೊಸ ಅರಿವು ಹೊಂದುವ, ಭವಿಷ್ಯದ ಬಗ್ಗೆ ಯೋಚಿಸುವ ವಿಧಾನದ ಬಗ್ಗೆ ಶಿಕ್ಷಣದಲ್ಲಿ ಪಠ್ಯ ಅಳವಡಿಸಲಾಗಿತ್ತು. ಬ್ರಿಟಿಷರು ಆರಂಭಿಸಿದ ಈ ವಿಶ್ವವಿದ್ಯಾಲಯಗಳಲ್ಲಿ ಓದಿದ ಹಲವರು ಮುಂದೆ 1885ರಲ್ಲಿ ಆರಂಭವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾದರು. ಮುಂದೆ ಸ್ವಾತಂತ್ರ್ಯ ಹೋರಾಟದ ಚಳವಳಿ ಆರಂಭವಾದಾಗ ಗಾಂಧೀಜಿ ಹೇಳಿದ್ದು ಒಂದೇ ಮಾತು: ದೇಶಕ್ಕೆ ಬೇಗ ಸ್ವಾತಂತ್ರ್ಯ ಲಭಿಸಬೇಕು ಎಂದರೆ, ನಮ್ಮಲ್ಲಿರುವ ಎಲ್ಲ ಮಕ್ಕಳಿಗೂ ವಿದ್ಯೆ ಸಿಗಬೇಕು. ದೇಶ ಅಭಿವೃದ್ಧಿ ಹೊಂದಬೇಕಾದರೆ, ಭಾರತವೆಂಬುದು ಅನಕ್ಷರತೆಯಿಂದ ಮುಕ್ತವಾಗಬೇಕು.
ವಿಪರ್ಯಾಸವೇನು ಗೊತ್ತೆ? ಗಾಂಧೀಜಿಯ ಈ ಮಾತುಗಳನ್ನು ಅವರ ಹಿಂಬಾಲಕರು ಕೇಳಿಸಿಕೊಳ್ಳಲೇ ಇಲ್ಲ. ಅವರು ಮಹಾತ್ಮನ ಹೆಸರನ್ನು ತಮ್ಮ ಅನುಕೂಲಗಳಿಗಾಗಿ, ಸ್ವಾರ್ಥ ಸಾಧನೆಗಾಗಿ ಬಳಸಿಕೊಂಡರು. ಸ್ವಾತಂತ್ರ್ಯಾನಂತರದ ರಾಜಕೀಯ ಬೆಳವಣಿಗೆಯಲ್ಲಿ ಗಾಂಧೀಜಿಯ ಹೆಸರು ಹೇಳಿಕೊಂಡೇ ಹಲವರು ನಾಯಕರಾಗಿ ಬಿಟ್ಟರು. ನಮ್ಮ ನೆಲದ ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಶಿಕ್ಷಣದಲ್ಲಿ ತರಬೇಕು. ಆ ಮೂಲಕ ಮಕ್ಕಳಲ್ಲಿ ಭಾರತದ ಸಮಗ್ರ ತಿಳಿವಳಿಕೆ ಮೂಡುವಂತೆ ನೋಡಿಕೊಳ್ಳಬೇಕು ಎಂದ ಗಾಂಧೀಜಿಯ ಮಾತು, ಅವರ ಜೊತೆಗಿದ್ದವರಿಗೆ ಕೊನೆಯವರೆಗೂ ಅರ್ಥವಾಗಲೇ ಇಲ್ಲ. ಇಂಗ್ಲಿಷರು ತೋರಿಸಿಕೊಟ್ಟ ಶಿಕ್ಷಣ ನೀತಿಯ ಅನುಕರಣೆಯಿಂದಲೇ ಭಾರತದ ಉದ್ಧಾರ ಸಾಧ್ಯವೆಂದು ಅವರೆಲ್ಲ ಗಟ್ಟಿಯಾಗಿ ನಂಬಿದ್ದರು.
ಎಡಪಂಥದ ಬುದ್ಧಿಜೀವಿ ಪ್ರೊ॥ ನೂರುಲ್ ಹಸನ್ ನೇತೃತ್ವದ ತಂಡಕ್ಕೆ ತನ್ನ ಶೈಕ್ಷಣಿಕ ನೀತಿಯನ್ನು ಕಾಂಗ್ರೆಸ್ ಹೊರಗುತ್ತಿಗೆ ನೀಡಿದ ನಂತರ, ಶಿಕ್ಷಣದಲ್ಲಿ ರಾಜಕೀಯವನ್ನು ತುರುಕುವ ಒಂದು ಅಸಹ್ಯ ಪರಂಪರೆಯೇ ಆರಂಭವಾಯಿತು ಎನ್ನಬಹುದು. ಎಡಪಂಥದ ಈ ಬುದ್ಧಿಜೀವಿಗಳು, ಸರಿಸುಮಾರು ಎರಡು ದಶಕಗಳ ಕಾಲ ಭಾರತದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಸವಾರಿ ನಡೆಸಿದರು. ಹಲವು ವಿಷಯಗಳಲ್ಲಿ ಸುಳ್ಳನ್ನೆ ಸತ್ಯವೆಂದು ಬರೆದರು. ಹಲವು ಸಂದರ್ಭಗಳಲ್ಲಿ ಭಾರತದ ಇತಿಹಾಸವನ್ನೇ ತಿರುಚಿ ಬರೆದು ವಿಕೃತಿ ಮೆರೆದರು.
ಮುಂದೆ, ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹೀಗೆ ತಿರುಚಿ ಬರೆದ ವಿಷಯಕ್ಕೆ ಸಾಕ್ಷ್ಯಾಧಾರ ಒದಗಿಸುವಂತೆ ಒತ್ತಾಯಿಸಿಸಲಾಯಿತು. ಶಿಕ್ಷಣ ತಜ್ಞರು ಅನ್ನಿಸಿಕೊಂಡವರಿಂದ ಸಮರ್ಪಕ ಉತ್ತರ ಬರದೇ ಹೋದಾಗ, ಸುಳ್ಳು ಮಾಹಿತಿ ಹೊಂದಿದ್ದ ಪಠ್ಯವನ್ನು ಕೈಬಿಡಲು ಮುಂದಾದೆವು. ನಮ್ಮ ಈ ಕ್ರಮಕ್ಕೆ ಹಲವರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ವಿಷಾದವೆಂದರೆ, ನಮ್ಮ ಮೂಲ ಉದ್ದೇಶ ಏನೆಂದು ಅರ್ಥ ಮಾಡಿಕೊಳ್ಳದ ಮಾಧ್ಯಮಗಳು, ಎನ್ಡಿಎ ಸರ್ಕಾರವು ಶೈಕ್ಷಣಿಕ ರಂಗದಲ್ಲಿ ಕೇಸರೀಕರಣ ತುಂಬಲು ಹೊರಟಿದೆ ಎಂದು ಹುಯಿಲೆಬ್ಬಿಸಿತು. ಕೆಲವು ವರ್ಷಗಳ ನಂತರ, ದೆಹಲಿ ವಿಶ್ವವಿದ್ಯಾಲಯವು ಬಿ.ಎ ಆನರ್ಸ್ ವಿದ್ಯಾರ್ಥಿಗಳಿಗೆಂದು ರೂಪಿಸಿದ ಪದವಿ ಪಠ್ಯಪುಸ್ತಕದಲ್ಲಿ ಪ್ರಸಿದ್ಧ ಲೇಖಕ ಎ.ಕೆ. ರಾಮಾನುಜನ್ ಅವರು, ಥ್ರೀ ಹಂಡ್ರೆಡ್ ರಾಮಾಯಣ್ ಎಂಬ ಬರಹದಲ್ಲಿ ಪುರಾಣ ಪುರುಷ ಶ್ರೀರಾಮನನ್ನು ಅತ್ಯಂತ ಕೀಳು ಭಾಷೆಯಲ್ಲಿ ವರ್ಣಿಸಿದ್ದರು. ಅವರದು ಕೇವಲ ಕಲ್ಪನೆಗಳಿಂದಲೇ ತುಂಬಿದ್ದ ಬರಹ. ಅವರ ಮಾತುಗಳಿಗೆ ಯಾವುದೇ ಪುರಾವೆಯೂ ಇರಲಿಲ್ಲ. ಈ ಬರಹ ಹಲವರ ಮನಸ್ಸಿಗೆ ಘಾಸಿ ಉಂಟು ಮಾಡಬಹುದು ಅನ್ನಿಸಿದಾಗ, ತೀವ್ರ ಪ್ರತಿರೋಧದ ಮಧ್ಯೆಯೇ ಅದನ್ನು ಪಠ್ಯದಿಂದ ತೆಗೆಯಲಾಯಿತು. ಅದಕ್ಕೆ ಪ್ರತಿಯಾಗಿ ಶಿಕ್ಷಣ ಕ್ಷೇತ್ರಕ್ಕೂ ಎನ್ಡಿಎ ಸರ್ಕಾರದವರು ರಾಜಕೀಯ ತಂದರು ಎಂಬ ಆರೋಪಗಳನ್ನು ನಾವು ಕೇಳಬೇಕಾಗಿ ಬಂತು. ಎನ್ಡಿಎ ಸರ್ಕಾರದ ಆಡಳಿತವಿದ್ದ ಸಂದರ್ಭದಲ್ಲಿ ದೇಶಭಕ್ತಿಗೆ ಪೂರಕವಾಗುವ ಹಲವು ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲೆಂದು ಕೊಥಾರಿ ಆಯೋಗದ ವರದಿಯನ್ನು ಜಾರಿಗೆ ತರುವ ಪ್ರಯತ್ನವೂ ನಡೆಯಿತು. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕು ಎಂಬ ಕೂಗು ಜೋರಾಗಿ ಕೇಳಿ ಬಂದದ್ದು ಎನ್ಡಿಎ ಸರ್ಕಾರದ ಅವಧಿಯಲ್ಲಿಯೇ. ಎನ್ಡಿಎ ಸರ್ಕಾರ ಪತನವಾದ ನಂತರ, ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವ ಪ್ರಯತ್ನವೊಂದು ಆರಂಭವಾಯಿತು. ಬದಲಾವಣೆಯ ನೆಪದಲ್ಲಿ ಮತ್ತೆ ಸುಳ್ಳು ದಾಖಲೆಗಳ, ವಿಕೃತ ಮಾತುಗಳ ಅಧ್ಯಾಯವನ್ನೇ ಪಠ್ಯಕ್ಕೆ ಸೇರಿಸಲಾಯಿತು. ಇದಕ್ಕಿಂತ ನೋವಿನ ವಿಷಯ ಬೇರೇನಿರಲು ಸಾಧ್ಯ?
ಈ ಸಂದರ್ಭದಲ್ಲಿ ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ಅವರ ಮಾತೊಂದನ್ನು ಹೇಳಲು ಬಯಸುತ್ತೇನೆ: 'ವಿದೇಶಿಯರು ಬರೆಯುವ ಭಾರತದ ಚರಿತ್ರೆಯೇ ಶ್ರೇಷ್ಠ ಎಂಬ ಭ್ರಮೆ ನಮ್ಮ ದೇಶದ ಹಲವರಿಗಿದೆ. ಆದರೆ, ನಮ್ಮದೇ ನೆಲದಲ್ಲಿದ್ದು, ಇಲ್ಲಿನ ಪ್ರತಿಕ್ಷಣದ ತಲ್ಲಣವನ್ನೂ ಕಂಡು ಅನುಭವಿಸಿ ಬರೆಯುವ ಸ್ವದೇಶಿ ಲೇಖಕನ ಬರಹವೇ ಶ್ರೇಷ್ಠವಾದದ್ದು ಎಂಬುದು ನನ್ನ ಗಟ್ಟಿ ನಂಬಿಕೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆಯ ಪಾಕಶಾಲೆಯಲ್ಲಿ ಈ ತವರಿಗೆ ಈ ಸರಳ ಸತ್ಯ ಅರಿವಿಗೆ ಬಂದಿಲ್ಲ ಎಂಬುದು ಈ ಕ್ಷಣದ ದುರಂತ...' ಪ್ರಾಚೀನ ಕಾಲದ ಶಿಕ್ಷಣವು ವಿದ್ಯಾರ್ಥಿಗಳಿಗೆ ಅರಿವನ್ನು ಮಾತ್ರವಲ್ಲ, ದೀಕ್ಷೆಯನ್ನೂ ಕೊಡುತ್ತಿತ್ತು. ಆದರೆ ಈಗ ಕೌಶಲ್ಯ ವೃದ್ಧಿ, ವ್ಯಕ್ತಿತ್ವ ವಿಕಸನ ಹಾಗೂ ರಾಷ್ಟ್ರೀಯತೆಯ ವಿಷಯವನ್ನು ಮಾತ್ರ ಪ್ರಮುಖವಾಗಿಟ್ಟುಕೊಂಡು ಮಕ್ಕಳಿಗೆ ಪಾಠ ಹೇಳಲಾಗುತ್ತಿದೆ. ನಿಜ ಹೇಳಬೇಕೆಂದರೆ ಶಿಕ್ಷಣ ಕ್ಷೇತ್ರಕ್ಕೆ ರಾಜಕೀಯ ನುಸುಳಿದ್ದರಿಂದ ಅನುಕೂಲ ಮತ್ತು ಅನಾನುಕೂಲಗಳು ಸಮಪ್ರಮಾಣದಲ್ಲಿಯೇ ಆಗಿವೆ.
- ರಾಜ್ನಾಥ್ ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

