ಅಂಕಣಗಳು

ಪಾಕ್‌ನ ಆಂತರ್ಯದಲ್ಲಿ ಆಗುತ್ತಿರುವುದೇನು?

Published On :

ನನ್ನ ತಾಯಿ ಹಾಗೂ ಸಹೋದರಿಯ ಕಣ್ಣಿನ ಚಿಕಿತ್ಸೆ ಜವಾಬ್ದಾರಿ ಹೊತ್ತಿದ್ದ ವೈದ್ಯರನ್ನು ಕಳೆದ ಸೋಮವಾರ ಕೊಲ್ಲಲಾಯಿತು. ಅವರು ಶಿಯಾ ಪಂಗಡಕ್ಕೆ ಸೇರಿದವರು. ತನ್ನ 12 ವರ್ಷದ ಮಗನನ್ನು ಶಾಲೆಗೆ ಬಿಡುವುದಕ್ಕೆ ಹೋಗಿದ್ದಾಗ ಆರುಬಾರಿ ಗುಂಡಿಕ್ಕಿ ಕೊಲ್ಲಲಾಯಿತು. ಹಾಗೂ ಅವರ ಮಗನನ್ನು ತಲೆಗೆ ಬಿದ್ದ ಒಂದೇ ಗುಂಡು ಆಹುತಿ ತೆಗೆದುಕೊಂಡಿತು.
ಮಂಗಳವಾರ ಲಾಹೋರ್‌ನ ಗವರ್ನರ್ ನಿವಾಸದ ಎದುರು, ಶಿಯಾಗಳಿಗೆ ತೀವ್ರವಾದಿಗಳಿಂದ ಇನ್ನಷ್ಟು ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿ ನಡೆದ ಧರಣಿಯಲ್ಲಿ ನಾನು ಪಾಲ್ಗೊಂಡಿದ್ದೆ. ಹಿಂಸಾಚಾರ, ಪ್ರಾಣಹಾನಿಗಳು ಹೆಚ್ಚುತ್ತಿರುವುದಕ್ಕೆ ಈ ತೀವ್ರವಾದಿಗಳೇ ಕಾರಣರಾಗಿದ್ದಾರೆ. ಈ ವರ್ಷ ಕ್ವೆಟ್ಟಾದಲ್ಲಿ ನಡೆದ ಬಾಂಬ್‌ಸ್ಫೋಟಕ್ಕೂ ಇವರೇ ಕಾರಣ. 200 ಮಂದಿಯನ್ನು ಆ ಸ್ಫೋಟ ಬಲಿ ತೆಗೆದುಕೊಂಡಿತು. ಅವರಲ್ಲಿ ಹೆಚ್ಚಿನವರು ಹಜರಾ ಶಿಯಾ ಸಮುದಾಯಕ್ಕೆ ಸೇರಿದವರು. ಲಾಹೋರ್‌ನಲ್ಲಿ ನಡೆದಂಥದ್ದೇ ಪ್ರತಿಭಟನೆಗಳು ದೇಶದುದ್ದಕ್ಕೂ ನಡೆಯುತ್ತಿವೆ. ರಸ್ತೆಗಳನ್ನು ಮುಚ್ಚಲಾಗಿದೆ, ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಗಳನ್ನೂ ಪ್ರತಿಭಟನಾಕಾರರು ಮುಚ್ಚಿದ್ದಾರೆ. ಒಂದು ಸಾಯಂಕಾಲ ಇಂಥದೇ ಪ್ರತಿಭಟನೆಗಳ ನಡುವೆ ನನ್ನ ತಂದೆಯೂ ಸಿಕ್ಕಿಕೊಂಡಿದ್ದರು. ಆದರೆ ಪ್ರತಿಭಟನಾಕಾರರ ಉದ್ದೇಶಕ್ಕೆ ಸಹಾನುಭೂತಿ ಇದ್ದಿದ್ದರಿಂದ ಯಾವ ಪ್ರಯಾಣಿಕರೂ ಆಕ್ರೋಶ ಹೊರಹಾಕಲಿಲ್ಲ ಎಂದು ಅವರು ಹೇಳಿದ್ದರು.
ಅಲ್ಪಸಂಖ್ಯಾತರ ಮೇಲೆ ಹಿಂಸೆ ಎಂಬುದು ಜಗತ್ತಿನಾದ್ಯಂತ ಪರಿಚಯದಲ್ಲಿರುವ ವಿದ್ಯಮಾನ ಎನ್ನಿಸಿಬಿಟ್ಟಿದೆ. ಆದರೆ ಪಾಕಿಸ್ತಾನದಲ್ಲಿ ಮಾತ್ರ ಇದರ ಸ್ಥಿತಿ ಭಾರೀ ಗಂಭೀರ ಎನಿಸಿದೆ. ಏಕೆಂದರೆ ಇಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳನ್ನೆಲ್ಲ ಸೇರಿಸಿದರೆ ಅವರೇ ಒಂದು ಬಹುಸಂಖ್ಯಾತ ಸಮೂಹವಾಗುತ್ತಾರೆ.
ನನಗೊಬ್ಬ ಚಿತ್ರ ನಿರ್ಮಾತೃರ ಪರಿಚಯವಿದೆ. ಅಹ್ಮದಿ ಪಂಗಡದಲ್ಲಿ ಅವರಿಗೆ ಸಂಬಂಧಿಕರಿದ್ದಾರೆ. ಲಾಹೋರ್‌ನ ಅವರ ಕುಟುಂಬದ ಸಮಾಧಿಗಳನ್ನು ವಿರೂಪಗೊಳಿಸಲಾಗಿದೆಯಂತೆ. ಕಾರಣ ತೀವ್ರವಾದಿಗಳು ಅಹ್ಮದೀಯರನ್ನೂ ಧರ್ಮಭ್ರಷ್ಟರೆಂದೇ ಪರಿಗಣಿಸುತ್ತಾರೆ! ಪಂಜಾಬಿ ಸಂದರ್ಶಕರನ್ನು ಬಲೂಚಿ ಪ್ರಾಂತ್ಯಕ್ಕೆ ಜತೆಗೆ ಕರೆದೊಯ್ಯುವುದಕ್ಕೆ ಕಷ್ಟವಾಗುತ್ತದೆ ಏಕೆಂದರೆ ಬಲೂಚಿಗಳಿಗೆ ತಮ್ಮ ಮೇಲಾಗುತ್ತಿರುವ ಹಿಂಸೆಯ ಬಗ್ಗೆ ಇನ್ನಿಲ್ಲದ ಆಕ್ರೋಶವಿದೆ ಎಂಬುದು ಬಲೂಚಿಸ್ತಾನ ಪ್ರಾಂತ್ಯಕ್ಕೆ ಸೇರಿದ ಸ್ನೇಹಿತನೊಬ್ಬ ಹೇಳುತ್ತಾನೆ. ಪಾಕಿಸ್ತಾನದಹಿಂದು ಸ್ನೇಹಿತನೊಬ್ಬ ನನಗೆ 'ಮತ್ತೆಲ್ಲ ಹೇಗೆ ನಡೀತಿದೆ' ಎಂದು ವಿಚಾರಿಸಿದಾಗ ನಾನು 'ಫೈನ್‌' ಎಂದುತ್ತರಿಸಿದ್ದೆ. ಅವನಿಗೆ ವಿಪರೀತ ಸಿಟ್ಟು ಬಂತು. ಏಕೆಂದರೆ ಯಾವುದೂ ಸರಿ ಇಲ್ಲ ಎಂಬುದೇ ವಾಸ್ತವ. ಪಾಕಿಸ್ತಾನದಲ್ಲಿರುವ ಕ್ರೈಸ್ತರನ್ನಂತೂ ಧರ್ಮನಿಂದೆ ಕಾನೂನಿನ ಹೆಸರಿನಲ್ಲಿ ಹಿಂಸಿಸಲಾಗುತ್ತಿದೆ. ಆ ಕಾಯ್ದೆಯನ್ನು ಬದಲು ಮಾಡಲುಹೋದ ಗವರ್ನರ್‌ನನ್ನು ಹತ್ಯೆ ಮಾಡಲಾಯಿತು.
ಹಾಗಾದರೆ ಪಾಕಿಸ್ತಾನದ ಬಹುಸಂಖ್ಯಾತರ ಪರಿಸ್ಥಿತಿಯಾದರೂ ಹೇಗಿದೆ? ಈ ದೇಶದಲ್ಲಿ ಹಾಗೊಂದು ಪರಿಕಲ್ಪನೆಯೇ ಇಲ್ಲ. ಇಲ್ಲಿನ ಪಂಜಾಬ್ ಪ್ರದೇಶ ಸುಮಾರು ಹತ್ತು ಕೋಟಿ ಜನರನ್ನು ಹೊಂದಿದೆ. ಆದರೆ ಇವರೆಲ್ಲ ಭಾಷೆ, ಧಾರ್ಮಿಕ ವಿಭಾಗಗಳು, ಭಿನ್ನ ದೃಷ್ಟಿಕೋನ ಹಾಗೂ ಲಿಂಗ ಸಂಬಂಧಿ ಅಸಮಾನತೆಗಳಿಂದ ಛಿದ್ರವಾಗಿದ್ದಾರೆ. ಸುನ್ನಿ ಪಂಥವು ಅತಿ ಹೆಚ್ಚಿನ ಜನರನ್ನು ಹೊಂದಿರುವಂಥದ್ದು. ಆದರೆ ಇಲ್ಲೂ ವ್ಯತ್ಯಾಸಗಳನ್ನು ಪರಿಗಣಿಸಲಾಗುತ್ತದೆ. ಪಾಶ್ಚಿಮಾತ್ಯ ಆಧುನಿಕ ವಿಚಾರಗಳಿಗೆ ತೆರೆದುಕೊಂಡರೆ, ಭಾರತೀಯ ಮೂಲದ ಸಂಪ್ರದಾಯಗಳನ್ನು ಪಾಲಿಸಿದರೆ, ಉದಾರವಾದಿಗಳಾಗಿದ್ದರೆ, ರಾಜಕೀಯದಲ್ಲಿ ಹೆಚ್ಚು ಪಾಲ್ಗೊಂಡರೆ ಇವೇ ಮುಂತಾದ ಕಾರಣಗಳಿಗೆ ಸುನ್ನಿ ಸಮುದಾಯದವರೂ ಹತ್ಯೆಗೆ ಒಳಗಾಗುತ್ತಿದ್ದಾರೆ.
ಪಾಕಿಸ್ತಾನದ ಹೃದಯದಲ್ಲಿ ಹುಣ್ಣಿನಂತೆ ಸ್ರವಿಸುತ್ತಿರುವ ಸಮಸ್ಯೆ ಎಂದರೆ ಉಗ್ರವಾದಿಗಳ ದರ್ಬಾರು. ಅದು ಅಫಘಾನಿಸ್ತಾನದಲ್ಲಿ ಹೋರಾಡುವ ವಿಷಯದಲ್ಲಾಗಿರಬಹುದು, ಕಾಶ್ಮೀರದ ವಿಷಯ ಇದ್ದಿರಬಹುದು, ಆಂತರಿಕ ವಿದ್ಯಮಾನಗಳಿಗೆ ಸಂಬಂಧಿಸಿಯೇ ಇದ್ದಿರಬಹುದು ಈ ತೀವ್ರವಾದಿಗಳಿಗೇ ಇಲ್ಲಿ ಹೀರೋ ಪಟ್ಟ. ಇವರು ತ್ಯಾಗಕ್ಕೆ ಮುಂದಾಗಿರುವವರು, ಅಂತಿಮ ಜಯಕ್ಕೆ ಸೆಣೆಸುವವರು ಇವರೇ, ಇವರು ನಿಸ್ವಾರ್ಥಿಗಳು, ಶ್ರೇಷ್ಠರು ಎಂಬ ವ್ಯಾಖ್ಯಾನಗಳನ್ನು ನೀಡಲಾಗಿದೆ. ಆದರೆ ವಾಸ್ತವದಲ್ಲಿ ಸಹಸ್ರಾರು ಪಾಕಿಸ್ತಾನಿಯರು ಇವರ ಕೈಯಲ್ಲಿ ಸಾಯುತ್ತಿದ್ದಾರೆ. ಸಾವಿರ ಸಾವಿರ ಸಂಖ್ಯೆಯ ಪಾಕಿಸ್ತಾನಿಯರು ತಮ್ಮ ದೈನಿಕವನ್ನು ಈ ಹೀರೋಗಳ ಭಯದ ನೆರಳಿನಲ್ಲೇ ದೂಡಬೇಕಾಗಿದೆ. ಇವತ್ತಿಗೆ ಪಾಕಿಸ್ತಾನದ ತುರ್ತಿನ ಸಂಗತಿ ಎಂದರೆ ಶಾಂತಿ ಅಷ್ಟೇ.
ಪಾಕಿಸ್ತಾನ ಹೀಗೆ ತೀವ್ರವಾದಿಗಳ ಮುಷ್ಠಿಯಲ್ಲಿ ಸಿಲುಕಿರುವುದಕ್ಕೆ ಭಾರತದೊಂದಿಗಿನ ಅದರ ತಿಕ್ಕಾಟವೇ ಕಾರಣ. 1947ರಲ್ಲಿ ಹಿಸೆಯಾದಾಗಿನಿಂದ ಈವರೆಗೆ ಅದು ಭಾರತದೊಂದಿಗೆ ಮೂರು ಯುದ್ಧಗಳನ್ನೂ ಲೆಕ್ಕವಿಲ್ಲದಷ್ಟು ಸಂಘರ್ಷಗಳನ್ನೂ ನಡೆಸಿದೆ. ಇಂಥದೊಂದು ದೊಡ್ಡ ವೈರಿಯ ಎದುರು ಪಾಕಿಸ್ತಾನ ಸುರಕ್ಷಿತವಾಗಿ ಇಡಬೇಕೆಂದರೆ ಅದಕ್ಕೆ ತೀವ್ರವಾದಿಗಳೇ ಆಗಬೇಕು ಎಂಬ ಭಾವನೆ ನೆಲೆಯಾಗಿಬಿಟ್ಟಿದೆ. ಆದರೆ ಈ ತೀವ್ರವಾದಿಗಳು ಸುರಕ್ಷತೆಯ ಪರಿಕಲ್ಪನೆಗೆ ವಿರುದ್ಧವಾದುದನ್ನೇ ಮಾಡುತ್ತಿದ್ದಾರೆ. ತಮ್ಮ ನೆಲದಲ್ಲಿ ಪಾಕಿಸ್ತಾನಿಯರನ್ನೇ ಕೊಲ್ಲುತ್ತಿದ್ದಾರಲ್ಲದೇ ವಿದೇಶಗಳಲ್ಲೂ ಸಂಘರ್ಷಗಳು ಏರ್ಪಡುವಂತೆ ಮಾಡುತ್ತಿದ್ದಾರೆ. ಭಾರತದೊಂದಿಗೆ ಶಾಂತಿ ಕಾಪಾಡುವುದೇ ಪಾಕಿಸ್ತಾನದ ತೀವ್ರವಾದಿಗಳಿಗೆ ಉಸಿರು ನಿಲ್ಲಿಸುವ ಪ್ರಕ್ರಿಯೆ ಆಗಿದೆ.
ಭಾರತ ಮತ್ತು ಪಾಕಿಸ್ತಾನಗಳು ಬಹಳ ಉದ್ದದ ಭೂ ಗಡಿಯನ್ನು ಹೊಂದಿವೆಯಾದರೂ ಎರಡೂ ಭಿನ್ನ ಖಂಡಗಳಲ್ಲಿ ಇರುವ ದೇಶಗಳಂತೆ ಕಾಣುತ್ತಿದ್ದವು. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ಬಹಳ ಸೀಮಿತವಾತ್ತು. ಇದೀಗ ವ್ಯವಹಾರ ಮತ್ತು ಹಿರಿಯ ನಾಗರಿಕರ ಪ್ರವಾಸಗಳಿಗೆ ಅನುಕೂಲವಾಗುವಂತೆ ವೀಸಾ ನಿಯಮಗಳು ಸಡಿಲಿಕೆಗೆ ಒಳಗಾಗಿವೆ. ವ್ಯಾಪಾರವೂ ತುಸು ಚಿಗಿತುಕೊಂಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ತಿರುಳು ಉತ್ಪಾದಕನೊಬ್ಬ, ತನ್ನೆಲ್ಲ ಉತ್ಪಾದನೆಯನ್ನೂ ಒಟ್ಟಿಗೇ ಖರೀದಿಸುವಷ್ಟು ಸಾಮರ್ಥ್ಯದ ಕಾರ್ಖಾನೆಯೊಂದು ಭಾರತದ ಪಂಜಾಬ್ ಪ್ರಾಂತ್ಯದಲ್ಲಿದೆ ಎಂದು ಖುಷಿಪಡುತ್ತಿದ್ದ.
ಬಹುಶಃ ಬೆರೆಯುವಿಕೆಗಾಗಿ ಮಿಡಿಯುತ್ತಿರುವ ಭಾವಗಳ ಆಣೆಕಟ್ಟೆಯ ಬಾಗಿಲುಗಳನ್ನು ತೆರೆಯುವುದರಲ್ಲೇ ಮೊದಲ ಹೆಜ್ಜೆ ಇದೆ ಎಂದೆನಿಸುತ್ತದೆ. ಏಕೆಂದರೆ ನಾನು ಹೊಸ ದೆಹಲಿಗೆ ಹೋದಾಗಲೆಲ್ಲ ಅಲ್ಲಿ ಲಾಹೋರ್‌ಗೆ ಭೇಟಿ ನೀಡಲು ಉತ್ಸುಕರಾಗಿರುವ ಅನೇಕರು ಸಿಗುತ್ತಾರೆ. ಇವೆರಡು ನಗರಗಳ ನಡುವಿನ ವಿಮಾನ ಪ್ರಯಾಣದ ಅವಧಿ ಕೇವಲ ಅರ್ಧಗಂಟೆ. ಆದರೂ ಇವೆರಡು ನಗರಗಳನ್ನು ಬೆಸೆಯುವುದಕ್ಕೆ ವಾರಕ್ಕೆರಡೇ ವಿಮಾನಗಳಿವೆ.
ಇವೆಲ್ಲದರ ನಡುವೆ ಸಾಂಸ್ಕೃತಿಕ ಕೊಂಡಿಯೂ ಬಲವಾಗುತ್ತಿದೆ. ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳಿಗೆ ಭಾರೀ ಬೇಡಿಕೆ. ಅಲ್ಲಿನ ಮದುವೆಗಳಲ್ಲಿ ಭಾರತದ ಹಾಡುಗಳನ್ನೇ ಹಾಡಲಾಗುತ್ತದೆ. ಪಾಕಿಸ್ತಾನಿ ನಟರು ಬಾಲಿವುಡ್ ಸಿನಿಮಾಗಳ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತದ ರಿಯಾಲಿಟಿ ಟಿವಿಯಲ್ಲೂ ಪಾಕ್ ಕಲಾವಿದರ ಪಾಲ್ಗೊಳ್ಳುವಿಕೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಪಾಕ್ ಕಲಾವಿದರ ಕಲಾಕೃತಿಗಳು ಬಿಕರಿಯಾಗುತ್ತವೆ. ಪಾಕಿಸ್ತಾನದ ಇಂಗ್ಲಿಷ್ ಕಾದಂಬರಿಗಳ ಪ್ರಕಟಣಾ ಕೇಂದ್ರ ಭಾರತವೇ ಆಗಿದೆ.
ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಉಭಯ ದೇಶಗಳು ಎದುರಿಸುತ್ತಿರುವ ಮುಖ್ಯ ಸವಾಲು ಭದ್ರತೆ ಬಗೆಗಿನ ಆತಂಕ. ಕಾಲ ಕ್ರಮೇಣ ಇದರಲ್ಲೂ ಸುಧಾರಣೆ ಆಗುತ್ತಿದೆ. ಪಾಕಿಸ್ತಾನ ಸೇನೆಯ ಹೊಸ ಅಧಿಕೃತ ನೀತಿಯು ಆಂತರಿಕ ಉಗ್ರವಾದವೇ ದೇಶದ ಪ್ರಥಮ ಆತಂಕವೇ ಹೊರತು ಭಾರತವಲ್ಲ ಎಂದಿರುವುದು ಒಂದು ಪ್ರಮುಖ ಬೆಳವಣಿಗೆ. ಈ ವರ್ಷ ಪಾಕಿಸ್ತಾನ ಚುನಾವಣೆ ಎದುರಿಸಲಿದ್ದು, ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಭಾರತದೊಂದಿಗೆ ಶಾಂತಿ ಅತ್ಯಗತ್ಯ ಎಂದು ಪ್ರತಿಪಾದಿಸಿರುವುದು ಗಮನಾರ್ಹ.
ಭಾರತದೊಂದಿಗೆ ಶಾಂತಿ ಅಥವಾ ಸಂಬಂಧದ ಅಭಿವೃದ್ಧಿಯೇ ಪಾಕಿಸ್ತಾನವು ತನ್ನ ಉಗ್ರವಾದವನ್ನು ತಹಬಂದಿಗೆ ತಂದುಕೊಳ್ಳುವುದಕ್ಕೆ ಇರುವ ಮಾರ್ಗ. ಇದು ಅಲ್ಲಿನ ಉಗ್ರವಾದಿಗಳಿಗೆ ಬೇಕಿಲ್ಲವಾದ್ದರಿಂದ ಈ ಮಾತುಕತೆಯ ಪ್ರಗತಿಯನ್ನು ಗಡಿದಾಟಿ ಉಗ್ರಕೃತ್ಯಗಳ ಮೂಲಕ ಹಳಿ ತಪ್ಪಿಸುವುದಕ್ಕೆ ಯತ್ನಿಸುತ್ತಿದ್ದಾರೆ. ಭಾರತದ ಮಧ್ಯಮ ವರ್ಗವೂ ಅತ್ಯುಗ್ರ ರಾಷ್ಟ್ರವಾದವನ್ನು ಅಪ್ಪಿಕೊಳ್ಳುತ್ತಿರುವುದರಿಂದ ಈ ಉಗ್ರರ ಅಭಿಲಾಷೆ ಈಡೇರುವ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಗಡಿಯಲ್ಲಿ ಉಭಯ ದೇಶಗಳ ಯೋಧರ ವಿಚಾರದಲ್ಲಿ ಹೊರಹೊಮ್ಮುತ್ತಿರುವ ಆಕ್ರೋಶ ಇದೇ ಸೂಚನೆ ನೀಡುತ್ತಿದೆ.
ಹೀಗಾಗಿ ಉಭಯ ದೇಶಗಳ ಸಾರ್ವಜನಿಕರನ್ನೂ ಈ ವಿಪರೀತ ಭಾವಾವೇಶಗಳಿಂದ ದೂರವಿಡುವ ಕಾರ್ಯ ಆಗಬೇಕಿದೆ. ಇಂಥ ಆಕ್ರೋಶ ಹುಟ್ಟಿಕೊಂಡಾಗಲೆಲ್ಲ ಅದು ಶಾಂತಿ ಪ್ರಕ್ರಿಯೆಯನ್ನು ಹಳಿ ತಪ್ಪಿಸಿರುವುದನ್ನು ಮನಗಾಣಬೇಕು.
(ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಗೊಂಡ ಲೇಖನ. ಲೇಖಕರು 'ದ ರಿಲಕ್ಟಂಟ್ ಫಂಡಮೆಂಟಲಿಸ್ಟ್‌' ಎಂಬ ಕಾದಂಬರಿಯಿಂದ ಪ್ರಸಿದ್ಧಿಗೆ ಬಂದವರು.)

- ಮೊಹ್ಸಿನ್ ಹಮಿದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.