ದೇಶದ ಭವಿಷ್ಯವೂ, ಗಾಂಧಿ ವಂಶಾಡಳಿತದ ಭವಿಷ್ಯವೂ...

Updated on: 

ಕಳೆದ ವಾರ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಅಧ್ಯಕ್ಷರ ಪದಗ್ರಹಣ ಸಮಾರಂಭ ಒಂದೇ ದಿನ ನಡೆಯಿತು. ಅತ್ಯಂತ ಅವಮಾನಕರ ಪ್ರಸಂಗಗಳನ್ನು ಕಡಿಮೆ ಅವಮಾನದಲ್ಲಿ ಮುಕ್ತಾಯಗೊಳಿಸುವುದು ಹೇಗೆ ಎಂಬ ಸಮಸ್ಯೆಯನ್ನು ಆ ಪಕ್ಷಗಳು ಹೊಂದಿದ್ದವು. ದೇಶದ ರಾಜಕೀಯ ಪಕ್ಷಗಳ ಮುಖಂಡರು ಅವರು ಪುರುಷರಾಗಿರಲಿ ಅಥವಾ ಮಹಿಳೆಯರಾಗಿರಲಿ ಪ್ರಚಂಡ ಮೇಧಾವಿಗಳಾಗಿದ್ದವರು. ವಿವಿಧ ರೀತಿಯಲ್ಲಿ ಅವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಯಶಸ್ಸು ಕಂಡುಕೊಂಡಿದ್ದಾರೆ.
ವಂಶ ಪಾರಂಪರ್ಯವಾಗಿ ಹೊಂದಿರುವ ಆಡಳಿತವನ್ನು ಕಾಂಗ್ರೆಸ್ ಪ್ರಜಾಪ್ರಭುತ್ವ ಮಾದರಿ ಆಡಳಿತ ಎಂದು ಬಿಂಬಿಸುವುದಕ್ಕೆ ಮುಂದಾಗುತ್ತದೆ. ಇದಕ್ಕಾಗಿ ಅದು ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಲಾರಂಭಿಸುತ್ತದೆ. ಇದಕ್ಕಾಗಿ ಅದು ಜನರು, ನ್ಯಾಯ, ಸಮಾನತೆ ಮತ್ತು ಕರ್ತವ್ಯ ಎಂಬ ತಾತ್ವಿಕ ಪದಗುಚ್ಛಗಳಿಂದ ಸುಂದರವಾಗಿ ತುಂಬಿರುವ ಸತ್ಯಗಳನ್ನು ಮುಂದಿಡುವ ಪ್ರಯತ್ನ ಮಾಡುತ್ತದೆ. ಕಾಂಗ್ರೆಸ್‌ನದ್ದು ಈ ರೀತಿಯದ್ದಾದರೆ ಬಿಜೆಪಿಯದ್ದು ಮತ್ತೊಂದು ಸಮಸ್ಯೆ. ಹಲವು ಆರೋಪಗಳಿಗೆ ಗುರಿಯಾಗಿರುವ ತನ್ನ ನಿಕಟಪೂರ್ವ ಅಧ್ಯಕ್ಷರನ್ನೇ 2ನೇ ಅವಧಿಗೆ ಮುಂದುವರಿಸಲು ತೀರ್ಮಾನಿಸಿತ್ತು. ಪಕ್ಷ ಅವರು ಹಿಮಾಲಯದಲ್ಲಿನ ಹಿಮದಷ್ಟೇ ಪರಿಶುದ್ಧರು ಎಂದು ಪ್ರತಿಪಾದಿಸಿತ್ತು. ಆದರೆ, ಅವರನ್ನು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಲು ಅಸಾಧ್ಯ ಎಂದಾಗ ಅಂತಿಮವಾಗಿಅವರನ್ನು ಕೈಬಿಟ್ಟು ಮತ್ತೊಬ್ಬರನ್ನು ಬಿಜೆಪಿ ಆಯ್ಕೆ ಮಾಡಿತು.
ಆದರೆ ಈ ಕಾರ್ಯಶೈಲಿಯಲ್ಲಿ ಮಾತ್ರ ಭಿನ್ನತೆ ಕಂಡುಬಂದಿತ್ತು. ಕಾಂಗ್ರೆಸ್‌ನ ನಾಯಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವ ವೇಳೆ ಅತ್ಯಂತ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದರು. ವರಿಷ್ಠ ಮಂಡಳಿಗೆ ತಮ್ಮ ಅಭಿಪ್ರಾಯ ತಿಳಿಯಪಡಿಸುವಲ್ಲಿ ಅವರು ಏಕಕಂಠದ ಹಾಗೂ ಅವರ ಆಂಗಿಕ ಭಾಷೆಯೂ ಒಂದೇ ಆಗಿತ್ತು ಎನ್ನುವುದು ಗಮನಾರ್ಹ. ಆದರೆ ಬಿಜೆಪಿಯಲ್ಲಿ ಮಾತ್ರ ಅದು ತೀರಾ ಭಿನ್ನವಾಗಿತ್ತು. ಬಾಹ್ಯದಲ್ಲಿ ಅತ್ಯಂತ ಶಿಸ್ತಿನಿಂದ ಕೂಡಿದ್ದರೂ, ಆಂತರಿಕವಾಗಿ ತೀವ್ರ ಹೊಯ್ದಾಟಗಳು ಇದ್ದದ್ದು ಎದ್ದು ಕಾಣುತ್ತಿತ್ತು. ಪಕ್ಷದ ವಿವಿಧ ಹಂತದ ನಾಯಕರಲ್ಲಿನ ಭಿನ್ನಾಭಿಪ್ರಾಯ ಕಂಡುಬರುತ್ತಿತ್ತು. ನಿಕಟಪೂರ್ವ ಅಧ್ಯಕ್ಷರ ಎದುರಾಗಿ ಚುನಾವಣೆಗೆ ಸ್ಪರ್ಧಿಸಲು ಬೆದರಿಕೆಯನ್ನೂ ಹಾಕಲಾಗಿತ್ತು. ಇಲ್ಲಿ ಏನಾಗಿತ್ತೆಂದರೆ ವರಿಷ್ಠ ಮಂಡಳಿ ಎನ್ನುವುದೇ ಇರಲಿಲ್ಲ!
ಇನ್ನು ಭಾಷಣದತ್ತ ನೋಡುವುದಾದರೆ ಅದು ಇನ್ನೂ ಕುತೂಹಲಕಾರಿಯಾಗಿದೆ. ಕಾಂಗ್ರೆಸ್ ತಾನು ಏನನ್ನೋ ಹೊಸತಾಗಿ ಘೋಷಣೆ ಮಾಡುತ್ತಿದ್ದೇನೆ ಎನ್ನುವಂತೆ ಹಳೆಯದ್ದನ್ನೇ ಧೈರ್ಯವಾಗಿ ಹೇಳಿಕೊಂಡಿತು. ಜೈಪುರದ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದನ್ನು ಕೇಳೋಣ: 'ಅತ್ಯಂತ ಸುರಕ್ಷಿತ ಮತ್ತು ನಿರ್ಭಯ ವಾತಾವರಣ ಹೊಂದಲೇಬೇಕು; ಭ್ರಷ್ಟಾಚಾರ ಎಲ್ಲೆಡೆ ಬೇರು ಬಿಟ್ಟಿದೆ. ಅದರ ವಿರುದ್ಧ ಹೋರಾಟ ನಡೆಸಲೇ ಬೇಕು' ಇನ್ನು ರಾಹುಲ್ ಗಾಂಧಿ ಹೇಳಿದ್ದು 'ಈಗಿನಿಂದ ಭಾರತವೇ ನನ್ನ ಜೀವನ. ಈ ದೇಶದ ಜನರೇ ನನ್ನ ಉಸಿರು; ಕಳೆದ ರಾತ್ರಿ ತಾಯಿ ನನ್ನ ಬಳಿಗೆ ಬಂದು ಅತ್ತರು; ಇವತ್ತು ಬೆಳಗ್ಗೆ 4 ಗಂಟೆಗೆ ನಾನು ಎದ್ದೆ; ದೇಶದ ಯುವಕರು ವ್ಯವಸ್ಥೆಯಿಂದ ಭ್ರಮನಿರಸನಗೊಂಡಿದ್ದಾರೆ; ಬಡವರು ಇನ್ನೂ ಬಡತನದಲ್ಲೇ ಇರುವಂತಾಗಿದೆ' ಕೆಲವೊಂದು ಬಾರಿ ರಾಜಕೀಯ ಭಾಷಣಗಳಲ್ಲಿ ಶೂನ್ಯತೆ ಎನ್ನುವುದು ಅನಿವಾರ್ಯ ಎನ್ನಿಸುತ್ತದೆ. ಬಹುಶಃ ರಾಹುಲ್ ಗಾಂಧಿಯವರು ತಮ್ಮ  ಭಾಷಣದಲ್ಲಿ ಆತಂಕಗೊಂಡಿರುವ ಸಾರ್ವಜನಿಕರ ಭ್ರಾಂತಿಯನ್ನು ತೊಡೆದು ಹಾಕಲು ಯತ್ನಿಸಿದ್ದಾರೆ ಮತ್ತು ಯಾವತ್ತೂ ಮರೆಯಲಾಗದ ವಿಚಾರಗಳನ್ನೇ ಪ್ರಸ್ತಾಪಿಸಿದ್ದಾರೆ.
1985ರಲ್ಲಿ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‌ನ ಇದೇ ರೀತಿಯ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಮಾಡಿದ್ದ ಭಾಷಣ ದೇಶಾದ್ಯಂತ ಹಾಗೂ ಪಕ್ಷದಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ ಅದರ ಪ್ರಭಾವ ಮಾತ್ರ ಕೇವಲ ವಾರಗಳದ್ದಾಗಿತ್ತು ಎನ್ನುವುದು ಗಮನಾರ್ಹ. 27 ವರ್ಷಗಳ ಹಿಂದೆ ರಾಜೀವ್ ಗಾಂಧಿ ಕೂಡ ಅಧಿಕಾರ ದಾಹಿಗಳು ಮತ್ತು ಮಧ್ಯವರ್ತಿಗಳಿಂದ ದೂರವಿರಬೇಕು. ಅವರೇ ದೇಶವನ್ನು ಹಿಂಡಿ ಹಿಪ್ಪೆಯನ್ನಾಗಿ ಮಾಡಿದರು ಎಂದು ಭಾಷಣ ಮಾಡಿದ್ದರು. ಆದರೆ ರಾಜೀವ್ ಗಾಂಧಿ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಷ್ಟೂ ದಿನ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮಧ್ಯವರ್ತಿಗಳೇ ತುಂಬಿಕೊಂಡಿದ್ದರು. ಮಧ್ಯವರ್ತಿಗಳನ್ನು ದೂರ ಇರಿಸಿಕೊಳ್ಳಬೇಕು ಎಂದು ಆ ಸಂದರ್ಭದಲ್ಲೇ ರಾಜೀವ್‌ಗಾಂಧಿ ಹೇಳಿದ್ದು ಜಾರಿಯಾಗಿರಲಿಲ್ಲ. ಹೀಗಾಗಿ, ಇನ್ನು ರಾಹುಲ್ ಗಾಂಧಿ ಹೇಳಿದ್ದರಿಂದಾಗಿ ವ್ಯವಸ್ಥೆ ಬದಲಾದೀತೇ?
ರಾಹುಲ್ ಗಾಂಧಿ ಅಧಿಕಾರಕ್ಕೇರುತ್ತಾರೆ ಎನ್ನುವುದನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಅವರ ದಾರಿಯನ್ನು ಮುಖ್ಯವಾಹಿನಿಯಲ್ಲಿರುವ ಮಾಧ್ಯಮಗಳು ಸೇರಿದಂತೆ ಹಲವರು ಗಮನಿಸಿದ್ದಾರೆ. ಹಲವು ಹಗರಣಗಳಿಂದ ಕಂಗೆಟ್ಟಿರುವ ದೇಶ ನಿಜಕ್ಕೂ ಒಂದು ಬೆಳ್ಳಿ ಗೆರೆಯನ್ನು ನಿರೀಕ್ಷಿಸುತ್ತಿದೆ. ಯುವರಾಜನೋ ಅಥವಾ ವಂಶಪಾರಂಪರ್ಯವೋ ಅದೇನೇ ಇರಲಿ ರಾಹುಲ್‌ಗಾಂಧಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಅತ್ಯಾಚಾರ ತಡೆಯುವ ಬಗ್ಗೆ ಕ್ರಮ ಕೈಗೊಂಡರೆ ಅದಕ್ಕೆ ದೇಶದ ಜನರು ಅವರಿ ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ.
ರಾಹುಲ್ ಗಾಂಧಿಯವರ ಸಾಮರ್ಥ್ಯ ಮತ್ತು ಬಲಹೀನತೆ ಏನೇ ಇರಲಿ,  ವಂಶಪಾರಂಪರ್ಯ ಆಡಳಿತ ಪ್ರಜಾಪ್ರಭುತ್ವಕ್ಕೆ ಅಮಾನ್ಯವಿದ್ದಿರಬಹುದು. ಆದರೆ ಭಾರತೀಯ ಕಾಂಗ್ರೆಸ್‌ನಲ್ಲಿ ಅದಕ್ಕೆ ಮಾನ್ಯತೆ ಇದೆ. ಇದು ರಾಹುಲ್ ಗಾಂಧಿಗೆ ಅಟಲ್ ಬಿಹಾರಿ ವಾಜಪೇಯಿ ಮತ್ತು ನರಸಿಂಹ ರಾವ್ ಅವರಿಗಿಂತ ಹೆಚ್ಚಿನ ಅಧಿಕಾರ ನೀಡಲಿದೆ. ಅವರ ವಿರುದ್ಧ ಯಾರೂ ಧ್ವನಿ ಎತ್ತುವವರೇ ಇರಲಾರರು. ಇಂಥ ಒಂದು ಪರಿಸ್ಥಿತಿಯನ್ನು ಅವರು ಯಾರು ಯಾವ ರೀತಿ ಉಪಯೋಗಿಸುತ್ತಾರೆ ಎನ್ನುವುದು ಗಮನಾರ್ಹ. ಪಕ್ಷದಲ್ಲಿರುವ ಹೊಗಳು ಭಟರ ವಿರುದ್ಧವೋ, ಕಾಂಗ್ರೆಸ್‌ನ ಕೆಲ ನಾಯಕರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಲು ಉಪಯೋಗಿಸುತ್ತಾರೆಯೇ? ಕಿಚನ್ ಕ್ಯಾಬಿನೆಟ್ ಪದ್ಧತಿಗೆ ಅವರು ಕೊನೆ ಹಾಡಲಿದ್ದಾರೆಯೇ? ಕೇವಲ ಅರ್ಹತೆಯ ಆಧಾರದ ಮೇಲೆ ಹುದ್ದೆಗಳನ್ನು ನೀಡುತ್ತಾರಾ? ರಾಜೀವ್ ಗಾಂಧಿಯವರಿಗೆ ಇಂಥ ಅಧಿಕಾರವಿದ್ದರೂ ಈ ಕ್ರಮಗಳನ್ನು ಕೈಗೊಂಡಿರಲಿಲ್ಲ. ತಾಯಿ ಸೋನಿಯಾ ಕೂಡ ಅದಕ್ಕೆ ಮನಸ್ಸು ಮಾಡಿಲ್ಲ.  ತಂದೆ ಕೈಗೊಳ್ಳದಿದ್ದ ಕಾರ್ಯವನ್ನು ಮಾಡಲು ರಾಹುಲ್‌ಗೆ ಧೈರ್ಯವಿದೆಯೇ? ಒಂದು ವೇಳೆ ಅದು ಇದ್ದರೆ ದೇಶದ ಭವಿಷ್ಯ ಉಜ್ವಲವಾದೀತು. ಇಲ್ಲದಿದ್ದರೆ ವಂಶಪಾರಂಪರ್ಯ ಆಡಳಿತ ಸಹಜವಾಗಿಯೇ ಮಂಕಾಗುತ್ತದೆ.

-ಟಿ.ಜೆಎಸ್.ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com