ಹಬ್ಬಗಳ ಆಚರಣೆಯಲ್ಲೂ ಇದೆ ಮನಃಶಾಸ್ತ್ರದ ಝಲಕು!

Updated on: 

ಹಬ್ಬಗಳು ಎಂದರೇ ಹಾಗೆ. ಅದೆಷ್ಟು ಸುಂದರ. ಅದೆಷ್ಟು ಸಂಭ್ರಮ! ಆಚೆ ಈಚೆ ಓಡಾಡುವುದೇನು? ನಾನು ಏನು  ಮಾಡಲೀ, ಯಾರಿಗೆ ನನ್ನ ಸಹಾಯಬೇಕು, ಯಾವುದನ್ನು ಮಾಡಿದರೆ ಚೆನ್ನ, ಯಾವ ಪೋಷಾಕು ಧರಿಸಬೇಕು, ಹೇಗೆ ಮನೆಯನ್ನು ಅಲಂಕರಿಸಬೇಕು, ಊರಿಗೆ ಊರನ್ನೇ ಅಲಂಕಾರಗೊಳಿಸಬೇಕೆಂಬ ಕುರಿತೇ ಎಲ್ಲರ ಹಂಬಲ. ಹಿರಿಯರು, ಕಿರಿಯರೆಂಬ ಭೇದವಿಲ್ಲ. ಜಾತಿ ಪಂಗಡಗಳೆಂಬ ಭಾವನೆಯಿಲ್ಲ. ಬಡವ ಬಲ್ಲಿದರೆಂಬ ಸಂಕುಚಿತ ಭಾವನೆಗಳ ಸುಳಿವಿಲ್ಲ.
ಅದಕ್ಕೇ ಇರಬೇಕು. ಲೋಕಮಾನ್ಯ ತಿಲಕರು ಮುಂಬಯಿಯಲ್ಲಿ ಬೇರೆ ಬೇರೆ ಪಂಗಡಗಳನ್ನು ಒಂದಾಗಿ ಸೇರಿಸುವುದು ಹೇಗೆ ಎಂದು ಯೋಚಿಸಿದಾಗ ಅವರಿಗೆ ಹೊಳೆದದ್ದು ಸಾರ್ವಜನಿಕವಾಗಿ ಆಚರಿಸುವ ಗಣೇಶನ ಹಬ್ಬ. ಮುಂಬಯಿಯಲ್ಲಿಯೇ ಏಕೆ, ಈಗಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಗಣೇಶನ ಹಬ್ಬ, ದೀಪಾವಳಿಯನ್ನು ಆಚರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ.  
ಹಬ್ಬಗಳಿಗೂ ಮನೋವಿಜ್ಞಾನಕ್ಕೂ ಅತ್ಯಂತ ನಿಕಟ ಸಂಬಂಧವಿದೆ ಎಂದರೆ ಓದುಗರಿಗೆ ಕುತೂಹಲವೆನಿಸಬಹುದು. ಕಲುಷಿತ ಮನಗಳನ್ನು ಹಸನು ಮಾಡುವಲ್ಲಿ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮದು ಸುಮಾರು ನೂರು ಮನೆಗಳಿರುವ ಪುಟ್ಟ ಹಳ್ಳಿ. ಐದು ಆರು ಜನಾಂಗದವರು ವಾಸಿಸುತ್ತಿದ್ದ ಊರು. ಎಲ್ಲರ ಮನೆಗಳಲ್ಲೂ ದನಕರುಗಳು ಇರುತ್ತಿದ್ದ  ದಿನಗಳವು. ದೀಪಾವಳಿಯು ಮೂರು ದಿನಗಳ ಹಬ್ಬ ತಾನೇ? ದೀಪಾವಳಿ ಹಬ್ಬದ ವಿಶೇಷವೆಂದರೆ ಬೂರೆ ಹಾಯುವುದು ಎಂಬ ಅನೂಚಾನವಾಗಿ ಆಚರಿಸಿಕೊಂಡು ಬಂದ ಪದ್ಧತಿ. ನರಕ ಚತುರ್ದಶಿಯ ಹಿಂದಿನ ರಾತ್ರಿ ಬೇರೆಯವರ ಮನೆಯ ತರಕಾರಿ, ತೆಂಗಿನ ಕಾಯಿ, ಬಾಳೆಗೊನೆ ಹೀಗೆ ಕೆಲವನ್ನು ಮಾತ್ರ ಒಡೆಯನ ಕಣ್ಣು ತಪ್ಪಿಸಿ ರಾತ್ರಿ ಕದ್ದು ಹೋಗುವುದು. ಅದು ಒಂದು ರೀತಿಯ ಮೋಜು. ಯಜಮಾನನ ಕಣ್ತಪ್ಪಿಸಿ ಮಾಡುವ ಕೆಲಸ. ಹಾಗೆ ಹಿಂದಿನ ರಾತ್ರಿ ಕದ್ದು ತಂದದ್ದನ್ನು ಮಾರನೇ ದಿನ ಸ್ನೇಹಿತರು ಸೇರಿ ಆ ಯಜಮಾನನೊಂದಿಗೆ ಹಂಚಿಕೊಳ್ಳುವ ಸಂತೋಷ ಹೇಳತೀರದು. ಅದು ಕಳ್ಳತನವೆಂದಾಗಲೀ, ಅಪರಾಧವೆಂದಾಗಲೀ ಯಾರೂ ಎಣಿಸುತ್ತಿರಲಿಲ್ಲ. ಅಲ್ಲಿ ಜಾತಿಯ ಭಾವನೆ ಎಂದೂ ಕಾಣುತ್ತಿರಲಿಲ್ಲ. ಎಲ್ಲರಿಗೂ ಖುಷಿ ಕೊಡುವ ಸಂಗತಿಯಾಗುತ್ತಿತ್ತು.
ಮಾರನೇ ದಿನ ನಮ್ಮ ಊರಿನ ಶಾಲೆಯ ಮುಂದಿರುವ ದೊಡ್ಡ ಮೈದಾನದಲ್ಲಿ ಗುರಿಕಾಯಿ ಆಟ. ಸಾಮಾನ್ಯವಾಗಿ ಮಧ್ಯಾಹ್ನ ಊಟದ ನಂತರ ಪ್ರಾರಂಭವಾಗುವ ಈ ಆಟದಲ್ಲಿ ಹಳ್ಳಿಗರೆಲ್ಲರೂ ಪಾಲ್ಗೊಳ್ಳುವುದು ವಾಡಿಕೆ. ಆದರೂ ಹೆಚ್ಚಿನ ಜನರು ಯುವಕರು. 'ಗುರಿ ಕಾಯಿ ಆಟ' ಎಂದರೆ ಸಿಪ್ಪೆ ಸುಲಿದ ಒಂದು ತೆಂಗಿನ ಕಾಯಿಯನ್ನು ಸ್ವಲ್ಪ ದೂರದಲ್ಲಿ ಇರಿಸುತ್ತಾರೆ. ನಿರ್ದಿಷ್ಟವಾದ ಅಳತೆಯ ದೂರದಿಂದ ಮತ್ತೊಂದು ತೆಂಗಿನ ಕಾಯಿಯಿಂದ ಅದಕ್ಕೆ ಹೊಡೆದು ಆ ಕಾಯಿಯನ್ನು ಒಡೆಯಬೇಕು. ಎಸೆದ ಕಾಯಿ ಮಾತ್ರ ಒಡೆಯಬಾರದು. ಯಾರು ಎಷ್ಟು ಕಾಯಿಗಳನ್ನು ಒಡೆಯುತ್ತಾರೆ ಎಂಬುದು ಕುತೂಹಲದ ಸಂಗತಿ. ಅಲ್ಲಿ ಯಾರು ಮೊದಲ ಸ್ಥಾನ, ಯಾರು ಎರಡನೇ ಸ್ಥಾನ ಎಂಬುದರ ಕಡೆ ಗಮನ ನೀಡದೇ ಆಟದಲ್ಲಿ ಪಾಲ್ಗೊಳ್ಳುವುದೇ ಒಂದು ಸಂತಸಕರ ಸಂಗತಿ ಎಂದು ಭಾವಿಸುತ್ತಿದ್ದರು.
ಮೂರನೇ ದಿನ ಗೋಪೂಜೆ. ಆಕಳು-ಎಮ್ಮೆಗಳ ಅಲಂಕಾರ ಲೋಕವೇ ಬೆರಗಿನದ್ದು. ಬೆಳಿಗ್ಗೆ ಸುಮಾರು ಎಂಟು ಗಂಟೆಗೆ ಎಲ್ಲರ ಮನೆಯಲ್ಲೂ ಗೋವಿಗೆ ಪೂಜೆ. ಊರವರೆಲ್ಲ ಸೇರಿ ಗೋವುಗಳನ್ನು ಬಿಟ್ಟು, ಜೋರಾಗಿ ಜಾಗಟೆ ಭಾರಿಸುತ್ತಾ ಊರಿನವರೆಲ್ಲರೂ ಊರ ಹೊರಗಿನ ಬಯಲಿಗೆ ಬರುವುದು. ಅಲ್ಲಿ ಎಲ್ಲರೂ ಸೇರಿ ಪರಸ್ಪರ ಮಾತನಾಡಿಕೊಂಡು ಮನೆಗಳಿಗೆ ಹಿಂದಿರುಗುವುದು. ಎಲ್ಲರೂ ನಗುತ್ತಾ ತಮಾಷೆ ಮಾಡುತ್ತಾ, ತಮ್ಮ ತಮ್ಮ ಗೋವಿನ ಬಗ್ಗೆ ಹೇಳಿಕೊಳ್ಳುವುದು ವಾಡಿಕೆ.
ಗ್ರಾಮದ ದೇವಸ್ಥಾನ, ಅಲ್ಲೇ ಹತ್ತಿರದಲ್ಲಿರುವ ಭೂತಗಳು, ಚೌಡಿಗಳು, ಜಟ್ಟಿ, ಬ್ರಹ್ಮ, ಗ್ರಾಮ ದೇವತೆ ಇತ್ಯಾದಿ ದೈವಗಳಿಗೆ ಪೂಜೆ ಸಲ್ಲಿಸುವ ಸಂಭ್ರಮ. ಊಟವಾದ ನಂತರ ಸ್ವಲ್ಪ ಹೊತ್ತಿನ ವಿಶ್ರಾಂತಿ. ನಂತರ ಊರ ಬಯಲಲ್ಲಿ ಗ್ರಾಮಸ್ಥರು ಸೇರುವುದು. ಅಲ್ಲಿ ಮಹಿಳೆಯರು ಹೊಸ ಬಟ್ಟೆಯ ವಿವಿಧ ಆಕರ್ಷಕ ಉಡುಪುಗಳನ್ನು ಧರಿಸಿಕೊಂಡು ಖುಷಿಯಿಂದ ಬರುವುದು. ಯಾವ ಮಾತ್ಸರ್ಯ, ದ್ವೇಷಗಳಿದ್ದರೂ ಅದು ಅಲ್ಲಿ ಕಾಣುತ್ತಿರಲಿಲ್ಲ. ಎಲ್ಲರೂ ಕೋಸುಂಬರಿ, ಬೆಲ್ಲದ ಪಾನಕ ಸೇವಿಸಿದ ನಂತರ ಮಹಿಳೆಯರಿಂದ ಇಂಪಾದ ಜನಪದ ಶೈಲಿಯ ಹಾಡುಗಳನ್ನು ಕೇಳುವ ಪದ್ಧತಿ. ಯಾರಿಗೂ 'ತಾನೆಂಬ' ಭಾವನೆ ಇಲ್ಲದೇ 'ತಾವೆಂಬ' ಮನೋಭಾವ.
ಅಂಟಿಕೆ-ಪಿಂಟಿಕೆ ತಂಡವು ಒಬ್ಬರ ಮನೆ ಮುಂದೆ ನಿಂತು ಕೂಗಿದಾಗ ಮನೆಯವರು ಬಾಗಿಲು ತೆಗೆದು ಅವರನ್ನು ಬರಮಾಡಿಕೊಂಡು ಕುಳಿತುಕೊಳ್ಳಲು ಕಂಬಳಿ, ಚಾಪೆ ಕೊಡುತ್ತಿದ್ದರು. ಅಂಟಿಕೆ ಪಿಂಟಿಕೆ ತಂಡ ತಂದ ದೀಪದ ಹಣತೆಗೆ ಎಣ್ಣೆ ಹಾಕಿ ಅವರಿಗೆ ಹಣ್ಣು ಕಾಯಿ ಬೆಲ್ಲ ನೀಡುವುದು ವಾಡಿಕೆ. ನಂತರ ಕೇಳಲು ಇಂಪಾದ ಧಾಟಿಯಲ್ಲಿ ಹಾಡು ಪ್ರಾರಂಭ. ಸುಮಾರು ಹದಿನೈದು ನಿಮಿಷಗಳ ನಂತರ ತಂಡಕ್ಕೆ ಕಾಣಿಕೆ ಕೊಟ್ಟು ಅವರನ್ನು  ಆತ್ಮೀಯವಾಗಿ ಬೀಳ್ಕೊಡುತ್ತಿದ್ದರು. ದೀಪಾವಳಿ ಬಗ್ಗೆ ವರ್ಣಿಸುತ್ತ ಹಬ್ಬಗಳ ಹಿಂದಿರುವ 'ಜೀವನ ಕಲೆ' ಕುರಿತು ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರುವುದು ಇಲ್ಲಿನ ಉದ್ದೇಶ.
ನಮ್ಮ ಜೀವನದಲ್ಲಿ 'ಜೀವನ ಕಲೆ' ಎಂಬುದು ಅತ್ಯಂತ ಮಹತ್ವದ್ದು. ಜೀವನ ಕಲೆ ಸಾಧಿಸುವಲ್ಲಿ ಮಾನವೀಯ ಮೌಲ್ಯಗಳು ಮತ್ತು ಪರಸ್ಪರ ಸಂಬಂಧಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಬ್ಬ ಹರಿದಿನಗಳನ್ನು ಒಟ್ಟಾಗಿ ಆಚರಿಸುವುದರಿಂದ ಪರಸ್ಪರ ಸಂಬಂಧಗಳು ವೃದ್ಧಿಸುತ್ತವೆ. ಒಬ್ಬರಿಗೊಬ್ಬರು ಹಂಚಿಕೊಳ್ಳುವ ಸಂತಸಗಳು, ಒಟ್ಟಾಗಿ ಮಾಡುವ ಕೆಲಸಗಳು ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಡುತ್ತವೆ. ನಕಾರಾತ್ಮಕ ಯೋಚನೆಗಳು ಮನಸ್ಸಿನಿಂದ ದೂರವಾಗುತ್ತವೆ. ಎಷ್ಟೋ ಒತ್ತಡಗಳು ಮಾಯವಾಗಿ ಮನಸ್ಸು ನಿರಾಳವಾಗುತ್ತದೆ. ಕೆಲವು ವೇಳೆ ನಮ್ಮವರೊಂದಿಗೆ ಇರುವ ಶತ್ರುತ್ವ ಭಾವನೆಗಳು ಮಾಯವಾಗಿ ಸ್ನೇಹ ವಾತಾವರಣ ಸೃಷ್ಟಿಯಾಗುವುದರಲ್ಲಿ ಹಬ್ಬ ಹರಿದಿನಗಳು ಹೆಚ್ಚು ಸಹಾಯಕಾರಿ. ಮೇಲು ಕೀಳೆಂಬ ಭಾವನೆಗಳು ಕಡಿಮೆಯಾಗುತ್ತವೆ. ನಾವೆಲ್ಲರೂ ಒಂದೇ, ಅಂದರೆ ಮನುಷ್ಯರು ಎಂಬ ಭಾವನೆ ನಮಗರಿವಿಲ್ಲದೆಯೇ ನಮ್ಮಲ್ಲಿ ಮೂಡುತ್ತದೆ. ಹಬ್ಬ ಹರಿದಿನಗಳಲ್ಲಿ ಮಕ್ಕಳೂ ಪಾಲ್ಗೊಳ್ಳುವುದರಿಂದ ಅವರಿಗೆ ಸಾಮಾಜಿಕ ಪ್ರಜ್ಞೆ ಉಂಟಾಗುತ್ತದೆ. ಒಂಟಿತನ ಕಡಿಮೆಯಾಗುತ್ತದೆ. ಮಾನವೀಯ ಸಂಬಂಧಗಳು ವೃದ್ಧಿಗೊಳ್ಳಲು ಹಬ್ಬ ಹರಿದಿನಗಳು ಸಹಾಯಕಾರಿ. ಹಬ್ಬದ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಕ್ಕಳ ಮನಸ್ಸು ವಿಕಾಸಗೊಳ್ಳುತ್ತದೆ. ಒಳ್ಳೆಯ ರೀತಿ ನೀತಿಗಳನ್ನು ಕಲಿಯಲು ಮಕ್ಕಳಿಗೆ ಅದು ಗಟ್ಟಿ ಬುನಾದಿ ಎಂದು ಹೇಳಬಹುದು.
ಆಧ್ಯಾತ್ಮಿಕ ಭಾವನೆಗಳು ಸಮಗ್ರ ಆರೋಗ್ಯದ ಒಂದು ಅವಿಭಾಜ್ಯ ಅಂಗ. ಹಬ್ಬ ಹರಿದಿನಗಳನ್ನು ಆಚರಿಸುವುದರಿಂದ ನೈತಿಕ ಗುಣಗಳು ಮಕ್ಕಳಲ್ಲಿ ಮೂಡುತ್ತವೆ. ಒಟ್ಟಾಗಿ ಕ್ರಿಯಾಶೀಲರಾದಾಗ ಪರಸ್ಪರ ಅರಿವಿನೊಂದಿಗೆ ತಮ್ಮ ಬಗ್ಗೆ ಅರಿವು ಉಂಟಾಗುತ್ತದೆ. ಅನುಭೂತಿ ಗುಣವು ತಾನಾಗಿಯೇ ವೃದ್ಧಿಯಾಗುತ್ತದೆ. ಮಕ್ಕಳಲ್ಲಿ ಅವಶ್ಯವಾದ ಆಧ್ಯಾತ್ಮಿಕ ಚಿಂತನೆಗಳು ಮೂಡುವಲ್ಲಿ ಈ ವಿಧದ ಹಬ್ಬ ಹರಿದಿನಗಳು ಪ್ರಮುಖ ಪಾತ್ರ ವಹಿಸುತ್ತವೆ.
ಮೇಲೆ ತಿಳಿಸಿದ ದೀಪಾವಳಿ ಹಬ್ಬದ ಆಚರಣೆ ಒಂದು ಉದಾಹರಣೆ ಅಷ್ಟೇ. ಹೀಗೆ ಕಾಲ ಕಾಲಕ್ಕೆ ಹಬ್ಬ ಹರಿದಿನಗಳನ್ನು ಆಚರಿಸುವುದು, ಕಾಲಕಾಲಕ್ಕೆ ನೆರೆ ಹೊರೆಯವರು ಎಲ್ಲರೂ ಸೇರಿ ಕಲೆತು ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು, ಪ್ರವಾಸ ಹೋಗಿ ಬರುವುದು, ಜೀವನ ಕಲೆಯನ್ನು ಸಾಧಿಸುವಲ್ಲಿ ಮತ್ತು ಮಕ್ಕಳಲ್ಲಿ ಹಲವಾರು ಒಳ್ಳೆಯ ಗುಣಗಳನ್ನು ಹುಟ್ಟು ಹಾಕುವಲ್ಲಿ ಅತ್ಯಂತ ಸಹಾಯಕಾರಿ.

-ಡಾ. ಕೆ.ಆರ್. ಶ್ರೀಧರ್
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com