ತುತ್ತು ಕೊಟ್ಟ ಕೈಯನ್ನೇ ಕಚ್ಚುವ ಶಾರುಖ್ ಬುದ್ಧಿ!

Updated on: 

ಪಂಜಾಬಿ ಭಾಂಗ್ರಾ -ಪಾಪ್ ಕಲಾವಿದ ದಲೇರ್ ಮೆಹಂದಿ ಅವರ ಬಗ್ಗೆ ಪ್ರಸಿದ್ಧಿಯಾಗಿರುವ ಮಾತೊಂದಿದೆ. ಅದೆಂದರೆ ಅವರ ಇಡೀ ಮನರಂಜನಾ ವೃತ್ತಿಯೇ ಒಂದೈದು ಡಾನ್ಸ್ ಸ್ಟೆಪ್‌ಗಳ ಮೇಲೆ ನಿಂತಿದೆ.
ಇದೇ ಧಾಟಿಯ ಮಾತನ್ನು ಶಾರುಖ್ ಖಾನ್ ವಿಚಾರದಲ್ಲೂ ಹೇಳಬಹುದು. ಅತ್ಯಂತ ನಾಟಕೀಯ ನಡೆಗಳನ್ನು ಕರಗತ ಮಾಡಿಕೊಂಡಿರುವ ಖಾನ್, ಬಹಳ ಕಡಿಮೆ ಪ್ರತಿಭೆಯನ್ನು ಉಪಯೋಗಿಸಿಕೊಂಡು ಜನಪ್ರಿಯತೆಯ ಶಿಖರಕ್ಕೇರಿದ ವ್ಯಕ್ತಿ. ನಟನೆಗಿಂತ ನೋಟವನ್ನೇ ನೆಚ್ಚಿಕೊಂಡ ಒಂದು ಪೀಳಿಗೆಯವರಿಂದ ಹಣ ಮತ್ತು ಪ್ರಸಿದ್ಧಿಯನ್ನು ಪಡೆದುಕೊಂಡು 'ಕಿಂಗ್ ಖಾನ್‌' ಎಂಬ ಪಟ್ಟ ಪಡೆದ ಶಾರುಖ್.
ವೃತ್ತಿಯ ಉತ್ತುಂಗದಲ್ಲಿ ಬಾಲಿವುಡ್‌ನ ಶೆಹನ್‌ಶಾ ಅಮಿತಾಭ್ ಬಚ್ಚನ್ ಹೇಗೆ ಒಂದೇ ಉಸುರಿನಲ್ಲಿ ಮಾತಾಡುವರೋ ಶಾರುಖ್ ಸಹ ಹಾಗೆಯೇ. ಆದರೆ ಇವರಿಬ್ಬರ ಈ ತುಲನೆ ಗಲ್ಲಾ ಪೆಟ್ಟಿಗೆಯ ಯಶಸ್ಸಿಗೆ ಮಾತ್ರ ಸೀಮಿತ. ತಮ್ಮ ಸುತ್ತ ಕೆಮರಾಗಳು ಇರದಿದ್ದಾಗಲೂ ಅಮಿತಾಭ್ ಕಾಯ್ದುಕೊಂಡು ಬಂದಿದ್ದ ವರ್ಚಸ್ಸು ಶಾರುಖ್ ಪಾಲಿಗೆ ಸಾಧ್ಯವಿಲ್ಲದ್ದು.
ಹೇಗೆಯೇ ಲೆಕ್ಕ ಹಾಕಿದರೂ ಅರ್ಹತೆಗಿಂತ ಹೆಚ್ಚಿನ ಯಶಸ್ಸು, ಅಭಿಮಾನಿಗಳ ಪ್ರೀತಿ, ವೈಭೋಗಗಳನ್ನು ಪಡೆದಿರುವ ವ್ಯಕ್ತಿ ಶಾರುಖ್ ಖಾನ್. ಹೀಗಾಗಿ ಮುಸ್ಲಿಂ ಐಡೆಂಟಿಟಿಯ ಮೊರೆ ಹೋಗಿ ತನ್ನನ್ನು 'ಬಲಿಪಶು'ವಿನಂತೆ ಬಿಂಬಿಸಿಕೊಳ್ಳುತ್ತಿರುವುದು ಖಾನ್‌ಗೆ ಸರಿಹೋಗುವುದಿಲ್ಲ. ವಿದೇಶಿ ಮಾಧ್ಯಮ ಸಂಸ್ಥೆಯೊಂದಕ್ಕೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು- 'ನಾನು ಬಹಳಷ್ಟು ಸಾರಿ ಅನಾವಶ್ಯಕವಾಗಿ ರಾಜಕೀಯ ನೇತಾರರಿಗೆ ಗುರಿಯಾಗುತ್ತಿದ್ದೇನೆ ಎನ್ನಿಸುತ್ತದೆ. ಭಾರತದ ಮುಸ್ಲಿಮರ ಬಗ್ಗೆ ದೋಷಪೂರಿತವಾದ ಹಾಗೂ ರಾಷ್ಟ್ರಪ್ರೇಮದ ಹೊರತಾಗಿರುವ ಯಾವುದೇ ಅಂಶವನ್ನು ವಿವರಿಸುವುದಿದ್ದರೂ ನನ್ನನ್ನು ರೂಪಕವಾಗಿ ಇರಿಸಿಕೊಳ್ಳುತ್ತಾರೆ.'
ಮತ್ತೊಂದು ಸಂದರ್ಭದಲ್ಲಿ ಶಾರುಖ್ ಹೇಳಿದ್ದು- 'ನಾನು ಭಾರತೀಯನಾಗಿದ್ದರೂ ನನ್ನ ತಂದೆ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ್ದರೂ ನನ್ನ ದೇಶಕ್ಕಿಂತ ನೆರೆ ರಾಷ್ಟ್ರಕ್ಕೇ ಹೆಚ್ಚು ನಿಷ್ಠೆ ತೋರಿಸುವವ ನಾನೆಂದು ನನ್ನ ಮೇಲೆ ಆಪಾದನೆ ಇದೆ.'
ಕಣ್ಣೀರ ಕೋಡಿ ಹರಿಸು ಶಾರುಖ್....! ಭಾರತದ ಕೋಟ್ಯಂತರ ಅಭಿಮಾನಿಗಳು ನಿಮ್ಮ ಧಾರ್ಮಿಕ ಐಡೆಂಟಿಟಿ ಏನೆಂಬುದರ ಬಗ್ಗೆ ತುಸುವೂ ತಲೆ ಕೆಡಿಸಿಕೊಳ್ಳದೇ ನಿನ್ನನ್ನು ಹರಸಿದರು. ಅದಕ್ಕೂ ಮೊದಲಿನ ಕಾಲಘಟ್ಟದಲ್ಲಿ ಬಾಲಿವುಡ್‌ನಲ್ಲಿ ಉತ್ತಮ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕೆ ಮೊಹಮದ್ ಯೂಸುಫ್ ಖಾನ್ ತಮ್ಮ ಹೆಸರನ್ನು ದಿಲೀಪ್ ಕುಮಾರ್ ಎಂದು ಬದಲಿಸಿಕೊಂಡಿದ್ದರು. ಆದರೆ ಇವತ್ತಿನ ಭಾರತದ ಸಿನಿಮಾ ಪ್ರಿಯರು ತಮ್ಮ ಸ್ಟಾರ್‌ಗಳ ಧಾರ್ಮಿಕ ಐಡೆಂಟಿಟಿ ಯಾವುದೆಂಬುದರ ಬಗ್ಗೆ ತುಸುವೂ ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲದಿದ್ದರೆ ಆಮೀರ್ ಖಾನ್ ಅವರನ್ನು ಹೊರತುಪಡಿಸಿ ಉಳಿದಂತೆ ಸಾಮಾನ್ಯ ನಟನಾ ಸಾಮರ್ಥ್ಯ ಹೊಂದಿರುವ ಹೆಚ್ಚಿನ ಖಾನ್‌ಗಳು ಈ ಪರಿಯಲ್ಲಿ ಬಾಲಿವುಡ್‌ನಲ್ಲಿ ಪಾರಮ್ಯ ಸಾಧಿಸುವುದಕ್ಕೆ ಸಾಧ್ಯವೇ ಇರಲಿಲ್ಲ.
ಮೈ ನೇಮ್ ಈಸ್ ಖಾನ್ ಎಂಬ ಚಲನಚಿತ್ರ ಬಂದ ಸಂದರ್ಭದಲ್ಲಿ ಶಾರುಖ್, ಶಿವಸೇನೆಯ ಅಡ್ಡಿಯನ್ನು ಎದುರಿಸಬೇಕಾಯಿತು ಎಂಬುದು ನಿಜ. ಆದರೆ ಹೀಗೆ ರಾಜಕೀಯ ಉದ್ದೇಶದ ಅಡ್ಡಿ ಎದುರಿಸಿದ ಏಕಮಾತ್ರ ಸ್ಟಾರ್ ಏನೂ ಅಲ್ಲ ಶಾರುಖ್. ಇಂಥ ಘಟನೆಗಳನ್ನು ಎಲ್ಲರೂ ಖಂಡಿಸುವುದು ಅವಶ್ಯ. ಆದರೆ ಇದಕ್ಕೆ ಪ್ರತಿಯಾಗಿ, 'ನಾನು ಮುಸ್ಲಿಂ ಆಗಿರುವುದರಿಂದಲೇ ಇಷ್ಟೆಲ್ಲ ಅಡ್ಡಿ' ಎಂದು ಸುಳ್ಳೇ ರೊಳ್ಳೆ ತೆಗೆಯುವ ಅವಶ್ಯಕತೆ ಇಲ್ಲ. ಮಾಧ್ಯಮವಂತೂ ಯಾವತ್ತೂ ಶಾರುಖ್ ವಿಷಯದಲ್ಲಿ ಅನುಕಂಪದಿಂದಲೇ ವರ್ತಿಸಿದೆ. ಎಲ್ಲರೂ ಶಾರುಖ್ ಪರವಾಗಿ ಮಾತನಾಡಿದ್ದನ್ನು ಮರೆಯುವಂತಿಲ್ಲ. ಆ ಕ್ಷಣದಲ್ಲಿ ಮನರಂಜನಾ ಉದ್ಯಮ ವಲಯದ ಎಲ್ಲರೂ ಶಾರುಖ್ ಬೆಂಬಲಕ್ಕೆ ನಿಂತರು. ಆ ಚಿತ್ರದ ಪ್ರದರ್ಶನಕ್ಕೆ ಭದ್ರತೆಯೂ ದೊರೆಯಿತು. ಆದರೆ...ಇದೀಗ ಕಮಲ್ ಹಾಸನ್ ಅವರ ವಿಶ್ವರೂಪಂ ಚಲನಚಿತ್ರವೂ ಇಂಥ ತಡೆಯನ್ನು ಎದುರಿಸುತ್ತಿದೆ. 'ಮುಸ್ಲಿಂ ಬಲಿಪಶು' ಎಂದು ಬೊಬ್ಬೆ ಹಾಕುವ ಶಾರುಖ್ ಮನಸ್ಥಿತಿಯವರಿಂದಲೇ ಏಳುತ್ತಿರುವ ವಿರೋಧ ಇದಾಗಿದೆ. ಶಾರುಖ್ ಏಕೆ ಕಮಲ್ ಹಾಸನ್ ಪರವಾಗಿ ತಕ್ಷಣಕ್ಕೆ ಹೇಳಿಕೆ ನೀಡಲಿಲ್ಲ?  
ಬಾಲಿವುಡ್‌ನ ಸಹನಟನೊಂದಿಗೆ ಕ್ಷುಲ್ಲಕವಾಗಿ ಹೊಡೆದಾಟಕ್ಕೆ ಇಳಿದ ವರ್ತನೆ ತೋರಿಸಿದ್ದು ಶಾರುಖ್ ಖಾನ್. ವಾಂಖೆಡೆ ಕ್ರೀಡಾಂಗಣದಲ್ಲಿ ತನ್ನ ಕರ್ತವ್ಯ ನಿಭಾಯಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್ ಮೇಲೆ ಹರಿಹಾಯ್ದಿದ್ದು ಇದೇ ಶಾರುಖ್ ಖಾನ್. ಆಗೆಲ್ಲ ಮೀಡಿಯಾ ಮಿಂಚುಳ್ಳಿಗಳು ಇವರನ್ನು ಸ್ಟುಡಿಯೋಕ್ಕೆ ಕರೆಸಿ ಇವರ ಪಾಲಿನ ವ್ಯಾಖ್ಯಾನ ಹೇಳುವುದಕ್ಕೆ ಅನುವು ಮಾಡಿಕೊಟ್ಟರು. ಸಹಾನೂಭೂತಿ ವ್ಯಕ್ತಪಡಿಸುವ ಆಪ್ತ ಸಲಹೆಗಾರರ ಪಾತ್ರವನ್ನು ನಿರ್ವಹಿಸಿದರು. ಗೂಂಡಾವರ್ತನೆ ತೋರಿದ ಎಲ್ಲರಿಗೂ ಈ ರೀತಿಯ ಅವಕಾಶಗಳು ಲಭ್ಯವಾಗುವುದಿಲ್ಲ.
ಮೈ ನೇಮ್ ಈಸ್ ಖಾನ್ ಎಂಬ ಚಿತ್ರ ನಿರ್ಮಾಣಗೊಂಡಿದ್ದೇ 'ಅಯ್ಯೋ ನಾನು ಬಲಿಪಶು' ಎಂಬ ಬೊಬ್ಬೆಯ ಮೇಲೆ. ಅಮೆರಿಕ ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರಣಗಳಿಗಾಗಿ ಕೆಲಕಾಲ ತಡೆಹಿಡಿದ ಘಟನೆಯನ್ನೇ ಶಾರುಖ್ ತನ್ನ ಚಿತ್ರಕ್ಕೆ ಹೇಗೆ ಬಂಡವಾಳ ಮಾಡಿಕೊಂಡರು ಎಂಬುದನ್ನು ಜಗತ್ತು ಮರೆತಿಲ್ಲ. ಬೇರೆಯವರು ಅಂಥ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡರೆ ಕೇಳುವವರಿಲ್ಲ. ಆದರೆ ಅಮೆರಿಕದ ವಲಸೆ ಅಧಿಕಾರಿಗಳನ್ನು ಸಂಪರ್ಕಿಸಿದ ಭಾರತ ಸರ್ಕಾರ, ತಕ್ಷಣ ಆ ಪರಿಸ್ಥಿತಿಯಿಂದ ಶಾರುಖ್‌ರನ್ನು ಹೊರತರುವುದಕ್ಕೆ ಎಲ್ಲ ಶಕ್ತಿ ವ್ಯಯಿಸಿತು. ಎಷ್ಟೆಂದರೂ ಶಾರುಖ್ ಸೂಪರ್‌ಸ್ಟಾರ್ ಅಲ್ವೇ? ಅಷ್ಟೆಲ್ಲ ಆದಮೇಲೂ ವಿದೇಶಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮುಸ್ಲಿಂ ಆಗಿರುವ ಕಾರಣದಿಂದ ಶೋಷಣೆಗೆ ಗುರಿಯಾಗುತ್ತಿದ್ದೇನೆ ಎಂದರೆ ಏನರ್ಥ?
ಬಾಲಿವುಡ್‌ನ ವೈಭವದಿಂದಲೇ ಶಾರುಖ್‌ಗೆ ಐಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಯಿತು. ಅಲ್ಲಿಯೂ ಅಸಂಖ್ಯ ಅಭಿಮಾನಿಗಳ ಗಮನ ಸೆಳೆಯುವುದಕ್ಕೆ ಅವಕಾಶವಾಯಿತು. ಭಾರತದಲ್ಲಿ ಕ್ರಿಕೆಟ್ ಮತ್ತು ಬಾಲಿವುಡ್‌ಗಳು ಎರಡು ಪ್ರಮುಖ ಧರ್ಮಗಳಿದ್ದಂತೆ. ಈ ವಿಷಯಗಳ ಬಗ್ಗೆ ಎಲ್ಲರಿಗೂ ಅಭಿಪ್ರಾಯಗಳಿರುತ್ತವೆ. ಆ ಎರಡೂ ವಲಯಗಳಲ್ಲಿ ಹೆಜ್ಜೆ ಗುರುತು ಮೂಡಿಸುವ ಅನನ್ಯ ಅವಕಾಶ ಒಲಿದು ಬಂದಿದ್ದು ಶಾರುಖ್‌ಗೆ. ಅಂದಮೇಲೆ ಅಗತ್ಯಕ್ಕಿಂತ ಹೆಚ್ಚು ಅಭಿಮಾನಿ ಬಳಗ ಸಿಕ್ಕಿದ ರೀತಿಯಲ್ಲೇ ಟೀಕೆಗಳಿಗೂ ಒಗ್ಗಿಕೊಳ್ಳಬೇಕಲ್ಲವೇ? ದೇಶದ ಭಾವನೆಗಳಿಗೆ ವ್ಯತಿರಿಕ್ತವಾಗಿ ವಾದಿಸುತ್ತ ಐಪಿಎಲ್ ತಂಡದಲ್ಲಿ ಪಾಕಿಸ್ತಾನಿ ಕ್ರಿಕೆಟಿಗರಿರಲಿ ಎಂದಾಗ ಬಂದ ಟೀಕೆಗಳನ್ನೂ ಇದೇ ನೆಲೆಯಲ್ಲಿ ಗ್ರಹಿಸಬಾರದೇಕೆ?
ಶಾರುಖ್ ಇನ್ನೂ ಬೆಳೆಯಬೇಕಿದೆ. ಪ್ರೀತಿಯಂತೆ ಕೆಲ ಟೀಕೆಗಳನ್ನೂ ನಗುತ್ತ ಸ್ವೀಕರಿಸುವ ಮನಸ್ಥಿತಿ ಬೇಕು. ಅದುಬಿಟ್ಟು ಪ್ರೀತಿಯಿಂದ ತುತ್ತಿಕ್ಕಿದ ಕೈಗಳನ್ನೇ ಕಚ್ಚುವ ಧೋರಣೆ ಏಕೆ? ವಿದೇಶಿ ಮಾಧ್ಯಮದೆದುರು ಶಾರುಖ್‌ನಂಥವರು ಸೃಷ್ಟಿಸುವ ಕಣ್ಣೀರ ಕತೆಗಳೇ ಹಫೀಜ್ ಸಯೀದ್‌ನಂಥ ಉಗ್ರರೂ ಭಾರತವನ್ನು ಹಂಗಿಸುವುದಕ್ಕೆ ವೇದಿಕೆ ಒದಗಿಸಿಕೊಡುತ್ತಿದೆ.
ಭಾರತವೇನೂ ಸ್ವರ್ಗವಲ್ಲದೇ ಇದ್ದಿರಬಹುದು. ಸಿನಿಮಾ ನಿರ್ಮಾಣದ ಲಾಂಗ್‌ಶಾಟ್‌ನಲ್ಲಿ ನೋಡಿದರೂ ಅಷ್ಟು ಚೆಂದಾಗಿ ಕಾಣಲಿಕ್ಕಿಲ್ಲ. ಆದರೆ ಪ್ಯಾಟ್ರಿಕ್ ಫ್ರೆಂಚ್ ಎಂಬ ಬರಹಗಾರ ಜೈಪುರ ಸಾಹಿತ್ಯ ಉತ್ಸವದಲ್ಲಿ ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು. 'ಭಾರತದ ನೆರೆ ರಾಷ್ಟ್ರಗಳನ್ನು ಒಮ್ಮೆ ಅವಲೋಕಿಸಿ, ನೀವು ಎಲ್ಲಿ ಬದುಕುವುದಕ್ಕೆ ಇಷ್ಟಪಡುತ್ತೀರಿ ಎಂಬುದನ್ನು ಪ್ರಶ್ನಿಸಿಕೊಂಡರೆ ಆಗ ಭಾರತದ ಹೆಚ್ಚುಗಾರಿಕೆ ವ್ಯಕ್ತವಾಗುತ್ತದೆ.' ಶಾರುಖ್ ತನ್ನ ಸಂದರ್ಶನದಲ್ಲಿ ಹೆಸರು ಉಲ್ಲೇಖಿಸದೇ ನೆರೆರಾಷ್ಟ್ರ ಎಂದು ಯಾವುದನ್ನೋ ಕರೆದರೋ ಅದೂ ಈ ಹೋಲಿಕೆಯ ಪರಿಧಿಗೇ ಬರುತ್ತದೆ!

-ವೆಂಕಿ ವೆಂಬು
ಅಂಕಣಕಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com