ವಿಶ್ವರೂಪಂ ಮೇಲೆ ವಿಷಕಾರುವ ಅಗತ್ಯ ಏನಿದೆ?
ವಿಶ್ವರೂಪಂ ಚಿತ್ರಕ್ಕೆ ಎಲ್ಲೆಡೆಯಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗೇ ನನ್ನಂತಹ ಅನೇಕರಿಗೆ ಪ್ರಶ್ನೆಯೊಂದು ಬಹುವಾಗಿ ಕಾಡುತ್ತಿದೆ. ತಾಲಿಬಾನ್ ಅಥವಾ ಅಲ್ಖಾಯ್ದಾ ಭಯೋತ್ಪಾದಕರು ಮತ್ತು ಅವರ ಮೇಲಿನ ಅಮೆರಿಕದ ಯುದ್ಧವನ್ನು ತೋರಿಸಿದರೆ ಚಿತ್ರದಲ್ಲಿ ತೋರಿಸಿದರೆ, ಅದೇಕೆ ಭಾರತೀಯ ಮುಸ್ಲಿಮರು ರೊಚ್ಚಿಗೆದ್ದಿದ್ದಾರೆ ಎನ್ನುವುದು.
ತಾಲಿಬಾನ್ ನಾಯಕ ಮುಲ್ಲಾ ಉಮರ್ನ ಮೇಲೆ ರೂಪುಗೊಂಡಿರುವ ಪಾತ್ರವೊಂದು, ಮಧುರೈ ಮತ್ತು ಕೊಯಂಬತ್ತೂರ್ನ ಬಗ್ಗೆ ಮಾತನಾಡಿದ್ದನ್ನು ಬಿಟ್ಟರೆ, ಚಿತ್ರದಲ್ಲೆಲ್ಲೂ ಭಾರತೀಯ ಮುಸ್ಲಿಮರ ಬಗ್ಗೆ ಉಲ್ಲೇಖವಿಲ್ಲ.
ಇನ್ನು ಭಾರತೀಯ ಸಿನೆಮಾಗಳಲ್ಲಿ ತಮಿಳೇತರ ಪಾತ್ರಗಳು ಆ ಭಾಷೆಯನ್ನು ಮಾತನಾಡುವುದು ಹೊಸ ವಿಷಯವೇನೂ ಅಲ್ಲ. ಕೆಲವೊಂದು ಚಿತ್ರಗಳಲ್ಲಂತೂ ಇಡೀ ಭಾರತೀಯ ಸೇನೆ ಅಥವಾ ದೆಹಲಿಯ ನಾಯಕರು ತಮಿಳಿನಲ್ಲಿಯೇ ಮಾತನಾಡುವ ಹುಚ್ಚಾಟವನ್ನು ನಾವು ನೋಡಿದ್ದೇವೆ. ಇಂತಹ ದೋಷಪೂರಿತ ದೃಶ್ಯಗಳ ಬಗ್ಗೆ ಭಾರತೀಯ ಪ್ರೇಕ್ಷಕ ವರ್ಗ ನಿಜಕ್ಕೂ ತಲೆಕೆಡಿಸಿಕೊಳ್ಳುವುದೇ ಇಲ್ಲ.
ಅದಾಗ್ಯೂ ಕೊಯಂಬತ್ತೂರ್ ಮತ್ತು ಮಧುರೈನ ಪ್ರಸ್ತಾಪನೆಯನ್ನು ಚಿತ್ರದಲ್ಲಿ ಸುಖಾಸುಮ್ಮನೆ ಮಾಡಿದ್ದಲ್ಲ. 1998ರಲ್ಲಿ ಕೊಯಂಬತ್ತೂರ್ನ ಸುಮಾರು 11 ಜಾಗಗಳಲ್ಲಿ ನಡೆದ ಸರಣಿ ಸ್ಫೋಟದಿಂದಾಗಿ 50 ಜನ ಮೃತಪಟ್ಟು, 200 ಜನ ಗಾಯಗೊಂಡಿದ್ದರು. ಮಧುರೈ ಕೂಡ 2010ರಿಂದ ಇದುವರೆಗೆ ಸುಮಾರು 6 ಬಾಂಬ್ ಸ್ಫೋಟಗಳಿಗೆ ಸಾಕ್ಷಿಯಾಗಿದೆ. ವಿಶ್ವರೂಪಂ ಚಿತ್ರದಲ್ಲಿ ಉಮರ್ನ ಪಾತ್ರಧಾರಿ ಈ ಭಾಗಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ತೋರಿಸಲಾಗಿದೆ, ಆ ಕಾರಣಕ್ಕಾಗಿ ನಮ್ಮವರು ಸಿಟ್ಟಿಗೇಳುವ ಅವಶ್ಯಕತೆಯೇ ಇಲ್ಲ. ಏಕೆಂದರೆ ಭಾರತದಲ್ಲಿ ಘಟಿಸುವ ಉಗ್ರಕೃತ್ಯಗಳಲ್ಲಿ ವಿದೇಶಿಯರ ಕೈವಾಡವಿದೆಯೆಂಬುದು ಆ ದೃಶ್ಯದಲ್ಲಿ ಪರೋಕ್ಷವಾಗಿ ಹೇಳಲಾಗಿದೆ.
ಇನ್ನು ಆ ಚಿತ್ರಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವವರು ನೀಡುವ ಕಾರಣವೆಂದರೆ, ಭಾರತೀಯ ಮುಸಲ್ಮಾನರನ್ನು ಅದರಲ್ಲಿ ಉಗ್ರವಾದಿಗಳೆಂದು ಬಿಂಬಿಸಲಾಗಿದೆ ಎಂಬುದು.
ಆದರೆ ಆ ಚಿತ್ರದಲ್ಲಿ ನಮಗೆ ಕಾಣಿಸುವುದು ತಾಲಿಬಾನ್ ಮತ್ತು ಅಲ್ಖಾಯಿದಾಗಳ ಜಾಲವೇ ಹೊರತು ಭಾರತೀಯ ಮುಸಲ್ಮಾನರಲ್ಲ. ಹಾಗಾಗಿ ಸಿಟ್ಟಾಗಬೇಕಾದದ್ದು ಆ ಉಗ್ರ ಸಂಘಟನೆಗಳು. ಚಿತ್ರದಲ್ಲಿ ಸಲ್ವಾರ್ ಕಮೀಜ್ಗಳು, ದಾಡಿ ಮತ್ತು ಉರ್ದು ಭಾಷೆ ಕಾಣಿಸಿಕೊಂಡಿರುವುದೇ ವಿರೋಧಕ್ಕೆ ಕಾರಣ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಇದನ್ನೆಲ್ಲ ನಾವು ಎಷ್ಟು ಬಾರಿ ನೋಡಿಲ್ಲ? (ಬರೀ ವಿಶ್ವರೂಪಂನಂತಹ ಚಿತ್ರಗಳಿಂದಲ್ಲ, ಬದಲಾಗಿ ಖುದ್ಧು ಉಗ್ರವಾದಿಗಳಿಂದಲೇ). ವಿಶ್ವರೂಪಂ ಅನ್ನು ಉಗ್ರವಾಗಿ ವಿರೋಧಿಸುತ್ತಿರುವವರಿಗೆ ನನ್ನದೊಂದು ಪ್ರಶ್ನೆ- 'ಹಾಗಿದ್ದರೆ ತಾಲಿಬಾನಿಗಳು ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುತ್ತಿಲ್ಲವೇ?'
ದೃಶ್ಯಗಳು ಮತ್ತು ಇನ್ನಿತರ ಸಾಮಾಜಿಕ-ಸಾಂಸ್ಕೃತಿಕ ರಚನೆಗಳನ್ನು ಬಳಿಸಿಕೊಂಡು ಒಂದು ಸಾಮಾಜಿಕ ಪರಿಸರವನ್ನು ನಿರ್ಮಾಣ ಮಾಡುವುದು ಸಿನಾಮಾಗಳ ರೂಢಿ. ಬಹಳಷ್ಟು ಬಾರಿ ಅದರಲ್ಲಿ ತೋರಿಸಲಾಗುವ ಚಿತ್ರಣಗಳು Stereotypeಅನ್ನಿಸುತ್ತವಾದರೂ, ಒಂದು ನಿರ್ದಿಷ್ಟ ಪರಿಸರವನ್ನು ನಿರ್ಮಾಣ ಮಾಡಲು ಆ ತಂತ್ರವನ್ನು ಬಳಸಬೇಕಾಗುತ್ತದೆ. ಅತ್ಯಂತ ಪ್ರಸಿದ್ಧ, ಸಂವೇದನಾಶೀಲ ಚಿತ್ರ ನಿರ್ದೇಶಕರೂ ಕೂಡ ಈ ಕೆಲಸವನ್ನೇ ಮಾಡುತ್ತಾರೆ. ಉದಾಹರಣೆಗೆ 'ಲೈಫ್ ಆಫ್ ಪೈ' ಚಿತ್ರವನ್ನೇ ನೋಡಿ? ಅದರಲ್ಲಿನ ಬಹುತೇಕ ಭಾಗ ಭಾರತೀಯರಿಗೆ Stereotypeಅನ್ನಿಸದೇ ಇರದು.
ತಾಲಿಬಾನ್ ಮತ್ತು ಅಲ್ಖಾಯಿದಾಗಳ ಚಿತ್ರವನ್ನು ನಮಗೆ ಮೊದಲು ತೋರಿಸಿದ್ದು ಕಮಲ್ ಹಾಸನ್ ಅಲ್ಲ, ಬದಲಾಗಿ ಖುದ್ದು ಆ ಉಗ್ರ ಸಂಘಟನೆಗಳೇ. ಈ ವಿಷಯದಲ್ಲಿ ಕಮಲ್ ಸ್ವಂತ ತಲೆ ಉಪಯೋಗಿಸಿಲ್ಲ ಎನ್ನುವುದಂತೂ ಸ್ಪಷ್ಟ. ಅವರು ಕಾಪಿ ಮಾಡಿದ್ದಾರೆ. ಇನ್ನು ಸಲ್ವಾರ್ ಕಮೀಜ್ ಮತ್ತು ದಾಡಿಯಂತಹ ಪ್ರಯೋಗಗಳು ಅವರ ಕಾಸ್ಟ್ಯೂಮರ್ನ ಪ್ರಯೋಗವಾಗಿರುತ್ತದಷ್ಟೆ!
ಇನ್ನು 'ಭಾರತೀಯ ಸಿನೆಮಾಗಳಲ್ಲಿ ಮುಸಲ್ಮಾನರ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ವಾದವಿದೆ. 'ಅಂಡರ್ವರ್ಲ್ಡ್ ಮಾಫಿಯಾಗಳಾಗಿ ತೋರಿಸುವ ಬಹುತೇಕ ಪಾತ್ರಗಳು ಮುಸಲ್ಮಾನರದ್ದೇ ಆಗಿರುತ್ತವೆ. ಮತ್ತವರು ತಪ್ಪದೆ, 'ಅಸ್ಸಲಾಂವಾಲೇಂಕುಂ' ಅಥವಾ 'ಮಾಶಾ ಅಲ್ಲಾ' ಎನ್ನುವ ಪದಗಳನ್ನು ಬಳಸಿ
ಕೊಲೆ, ದರೋಡೆ, ಕಳ್ಳಸಾಗಣೆಯಲ್ಲಿ ತೊಡಗುತ್ತಾರೆ' ಎನ್ನುವುದು ಕೆಲವರ ಅಂಬೋಣ.
ಹೌದು. ಅವರು ಹೇಳುವುದರಲ್ಲಿ ಸತ್ಯವಿದೆ. ಆದರೆ ಈ ಸ್ಮಗ್ಲಿಂಗ್ ಮತ್ತು ಕಾಶ್ಮೀರದಿಂದ ಪಾಕಿಸ್ತಾನಕ್ಕೆ ಯುವಕರನ್ನು ಉಗ್ರ ತರಬೇತಿಗಾಗಿ ಕಳುಹಿಸುವಂತಹ ಘಟನೆಗಳ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಲೇ ಇರುತ್ತವೆ. ಭಾರತ ಸರ್ಕಾರ ಕೂಡ ಈ ಬಗ್ಗೆ ಹೇಳುತ್ತಲೇ ಇರುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಸಿನೆಮಾ ಮಂದಿ ಪಾತ್ರಗಳನ್ನು ಸೃಷ್ಟಿಸುತ್ತಾರೆ.
ತಾಲಿಬಾನಿಗಳ ಬಗ್ಗೆ ಮಾತನಾಡಿದರೆ, 'ಭಾರತೀಯ ಮುಸಲ್ಮಾನರಿಗೆ ಅವಮಾನ ಮಾಡಿದ್ದಾರೆ' ಎಂದು ಅರಚಿ ಒಂದು ಕಲಾತ್ಮಕ ಅಭಿವ್ಯಕ್ತಿಗೆ ವಿರೋಧ ವ್ಯಕ್ತಪಡಿಸುವುದು ಏನನ್ನು ಸೂಚಿಸುತ್ತದೆ? ಇದು ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ದಾಳಿಯಲ್ಲ, ಬದಲಾಗಿ ಜಾತ್ಯತೀತತೆ ಎನ್ನುವ ಸಿದ್ಧಾಂತದ ಮೇಲೆ ಮಾಡಿದ ದಾಳಿ.
ಜಾತ್ಯತೀತತೆ ಎನ್ನುವುದು ಇಸ್ಲಾಮಿಕ್ ಉಗ್ರವಾದವನ್ನು, ಹಿಂದೂ ಉಗ್ರವಾದದೊಂದಿಗೆ ಹೋಲಿಸುವ ಅಥವಾ ಯಾವುದಾದರೊಂದನ್ನು ಸಮರ್ಥಿಸಿಕೊಳ್ಳುವ ಸಿದ್ಧಾಂತವಾಗಿ ಇಂದು ಬದಲಾಗಿಹೋಗಿದೆ. ಎರಡೂ ಕೂಡ ದೇಶದ ಭದ್ರತೆಗೆ, ಶಾಂತಿಗೆ ಅಪಾಯವೊಡ್ಡುತ್ತವೆ ಎನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಈಗ ವಿಶ್ವರೂಪಂ ಚಿತ್ರದ ವಿರುದ್ಧ ಬೀದಿಗಿಳಿದಿರುವ ಕೆಲವು ಸಂಘಟನೆಗಳ ಮೇಲೆ ಮೂಲಭೂತವಾದವನ್ನು ಪ್ರೇರೇಪಿಸುವ, ಧರ್ಮದ ಹೆಸರಲ್ಲಿ ಹಿಂಸಾಚಾರಕ್ಕೆ ತೊಡಗಿರುವ ಆರೋಪಗಳಿವೆ. ಅಲ್ಲದೆ, ಇವುಗಳ ಕೆಲವು ನಾಯಕರೂ ಈ ವಿಷಯವಾಗಿಯೇ ಜೈಲಿನ ಮುಖ ನೋಡಿ ಬಂದಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿನ ಚಿತ್ರಮಂದಿರಗಳಲ್ಲಿ ವಿಶ್ವರೂಪಂ ಫುಲ್ಹೌಸ್ ಆಗಿ ಪ್ರದರ್ಶಿತವಾಗುತ್ತಿತ್ತು. ಶಾಂತಿಯುತವಾಗಿದ್ದ ವಾತಾವರಣವನ್ನು ಹದಗೆಡಿಸಿದ್ದೇ 'ಪಾಪುಲರ್ ಫ್ರಂಟ್ ಆಫ್ ಇಂಡಿಯಾ' ಎಂಬ ಸಂಘಟನೆ. ಕೇರಳ ಸರ್ಕಾರವೇ, 'ಈ ಸಂಘಟನೆಗೆ 'ಸಿಮಿ'ಯೊಂದಿಗೆ ನಂಟಿದೆ, ಭಾರತದ ಏಕತೆಗೆ ಮತ್ತು ಭದ್ರತೆಗೆ ಇದು ಮಾರಕವಾಗಿದೆ.' ಎಂದು ಹೇಳಿದೆ.
ಕಾಲೇಜು ಪ್ರೊಫೆಸರ್ ಒಬ್ಬನ ಎರಡೂ ಕೈಗಳನ್ನು ಕತ್ತರಿಸಿ ಹಾಕಿದ್ದ ಕುಖ್ಯಾತಿ ಈ ಸಂಘಟನೆಗೇ ಸೇರಿದ್ದು. 'ಪಾಪುಲರ್ ಫ್ರಂಟ್ ಇನ್ನೊಂದು ಇಪ್ಪತ್ತು ವರ್ಷಗಳಲ್ಲಿ ಕೇರಳ ರಾಜ್ಯವನ್ನು ಸಂಪೂರ್ಣ 'ಮುಸ್ಲಿಂ ರಾಜ್ಯ'ವನ್ನಾಗಿ ಮಾಡಲು ತಂತ್ರ ರಚಿಸಿದೆ' ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಎಮ್ ನಾಯಕ ವಿ.ಎಸ್. ಅಚ್ಯುತಾನಂದನ್ ಪದೇ ಪದೇ ದೂರುತ್ತಲೇ ಇದ್ದಾರೆ.
ಇನ್ನು ಚಿತ್ರದ ವಿರುದ್ಧ ಮೊದಲಿಗೆ ಗದ್ದಲವೆಬ್ಬಿಸಿದ್ದು ತಮಿಳುನಾಡಿನ 'ಟಿಎಮ್ಎಮ್ಕೆ' ಎನ್ನುವ ಸಂಘಟನೆ. ಅದರ ವಿರುದ್ಧವೂ ಇಂಥದ್ದೇ ಆರೋಪಗಳಿವೆ. 'ಸಿಮಿ'ಯೊಂದಿಗೆ ಅದಕ್ಕೆ ನಂಟಿದೆ ಎನ್ನುವ ಆರೋಪ ಅದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇದೆ. ಅಲ್ಲದೆ, ಅದರ ಕೆಲವು ನಾಯಕರನ್ನು ಕೊಯಂಬತ್ತೂರ್ ಸ್ಫೋಟದ ವಿಚಾರವಾಗಿ ಬಂಧಿಸಿ ಜೈಲಿನಲ್ಲಿಡಲಾಗಿದೆ. ನಿಜ ಹೇಳಬೇಕೆಂದರೆ ಅಲ್ಪಸಂಖ್ಯಾತರ ಹಿತ ರಕ್ಷಣೆಗಾಗಿ ಭಾರತೀಯರೆಲ್ಲರೂ ಪ್ರಯತ್ನ ಪಡುತ್ತಲೇ ಇದ್ದಾರೆ. ಆದರೆ ಅವರಲ್ಲಿ ಅನವಶ್ಯಕ ಭಯ, ಆಕ್ರೋಶ ಹುಟ್ಟುಹಾಕುತ್ತಿರುವುದು ಇಂತಹ ಸಂಘಟನೆಗಳೇ. ತಮ್ಮ ಸ್ವಾರ್ಥ ಸಾಧನೆಗಾಗಿ ಬೇಜವಾಬ್ದಾರಿ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಂದ ಜಾತ್ಯತೀತತೆ ಎನ್ನುವ ಪದದ ಅರ್ಥವನ್ನೇ ಕೆಡಿಸುತ್ತಿರುವ ಸಂಘಟನೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ದಿನೇ ದಿನೇ ಹದಗೆಡಿಸುತ್ತಲೇ ಇವೆ. ಅವರನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮೊದಲು ಕಿತ್ತೆಸೆಯುವ ಕೆಲಸವಾಗಬೇಕು.
ಜಾತ್ಯತೀತತೆ ಎಂದರೆ ಒಂದು ಧರ್ಮದ ಮೂಲಭೂತವಾದವನ್ನು ರಕ್ಷಿಸುವುದಲ್ಲ. ಅದರರ್ಥ, ಅಭಿವ್ಯಕ್ತಿ ಸ್ವಾಂತಂತ್ರ್ಯವನ್ನು ಉಸಿರು ಗಟ್ಟಿಸದೇ ಇರುವುದು!
- ಜಿ. ಪ್ರಮೋದ್ ಕುಮಾರ್
ಅಂಕಣಕಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

