ಅಂಕಣಗಳು

ಭ್ರಷ್ಟಾಚಾರದಲ್ಲಿ ಹಿಂದುಳಿದವರು ಯಾರಿದ್ದಾರೆ?

Published On :

ವ್ಯಕ್ತಿಯೊಬ್ಬ ಸಂಬಂಧಿಕರ ಸಹಾಯದಿಂದ ತನ್ನ ಉದ್ಯಮವನ್ನು ಹಿಗ್ಗಿಸುತ್ತಾ ಹೋದರೆ, ಅದರ ಬಗ್ಗೆ ಪ್ರಶ್ನೆಗಳೇ ಏಳುವುದಿಲ್ಲ.
ಹಿಂದುಳಿದ ವರ್ಗ ಮತ್ತು ದಲಿತರಲ್ಲಿ ಹೆಚ್ಚು ಭ್ರಷ್ಟರು ಕಾಣಿಸುತ್ತಾರೆ ಏಕೆಂದರೆ ಅವರಿಗೆ ನುಣಚಿಕೊಳ್ಳುವ ಮಾರ್ಗ ಗೊತ್ತಿಲ್ಲ ಎಂದು ಆಶಿಶ್ ನಂದಿ ಹೇಳಿದ್ದಾರೆ. ನಿಜವಾಗಿಯೂ ವಿವಾದಕ್ಕೆ ಈಡಾಗಬೇಕಿದ್ದು ಇದೇ ಹೇಳಿಕೆಯೇ. ಏಕೆಂದರೆ ಇದು ಸತ್ಯ ಎಂದು ರುಜುವಾತು ಮಾಡಲು ಅವರ ಬಳಿ ಯಾವ ಪುರಾವೆಯೂ ಇಲ್ಲ.
'ಹಿಂದುಳಿಗ ವರ್ಗ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ' ಎಂದು ಹೇಳಿ ಈಗ ಅವರು ಪೊಲೀಸರಿಂದ ತನಿಖೆ ಎದುರಿಸುತ್ತಿದ್ದಾರೆ.
ಒಂದು ವೇಳೆ ಭ್ರಷ್ಟಾಚಾರದಲ್ಲಿ ಈ ವರ್ಗಗಳ ಪಾಲೇ ಹೆಚ್ಚಾಗಿದೆ ಎನ್ನುವುದು ಸತ್ಯವಾಗಿದ್ದರೆ, ಅದಕ್ಕೊಂದು ಕಾರಣ ಸಿಗುತ್ತದೆ. ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಂಖ್ಯೆ ಸುಮಾರು 70 ಪ್ರತಿಶತದಷ್ಟಿದ್ದರೆ, ಮೇಲ್ವರ್ಗದವರು 15 ಪ್ರತಿಶತದಷ್ಟಿದ್ದಾರೆ.
ನನಗನ್ನಿಸಿದ ಮಟ್ಟಿಗೆ, ನಂದಿಯವರಿಗೆ ದಲಿತರನ್ನೋ ಅಥವಾ ಹಿಂದುಳಿದ ವರ್ಗದವರನ್ನೋ ಹೆಚ್ಚು ಭ್ರಷ್ಟರು ಎಂದು ಚಿತ್ರಿಸುವ ಇರಾದೆ ಇರಲಿಲ್ಲ. ಮೇಲ್ಜಾತಿಯವರು ಭ್ರಷ್ಟಾಚಾರವೆಸಗಿ ತಪ್ಪಿಸಿಕೊಂಡುಬಿಡುತ್ತಾರೆ, ಆದರೆ ಹಿಂದುಳಿದವರು ನುಣುಚಿಕೊಳ್ಳುವ ವಿಷಯದಲ್ಲೇ ಇನ್ನೂ ಹಿಂದೆಯೇ ಇದ್ದಾರೆ ಎಂದು ಹೇಳಿ, ತಾವೇ ಗೊಂದಲಕ್ಕೊಳಗಾಗಿ, ಕೇಳಿಸಿಕೊಂಡವರನ್ನೂ ಗೊಂದಲಗೊಳಿಸಿಬಿಟ್ಟರು.
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಈ ಕುರಿತು ಪ್ರಕಟವಾದ  ಕುತೂಹಲಕರ ತನಿಖಾ ವರದಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಭ್ರಷ್ಟಾಚಾರದ ವಿಷಯದಲ್ಲಿ ಯಾರೂ ಹಿಂದುಳಿದಿಲ್ಲ ಎನ್ನುವುದು ಆ ವರದಿಯ ತಾತ್ಪರ್ಯವಾಗಿತ್ತು. ಅದು ಹೀಗಿದೆ: 'ಮಾಯಾವತಿ ಮೂರನೇ ಅವಧಿಗೆ ಮುಖ್ಯಮಂತ್ರಿ ಆಗುವ ವೇಳೆಗೆ ಆಕೆಯ ಕಿರಿಯ ಸಹೋದರನ ರಿಯಲ್ ಎಸ್ಟೇಟ್ ಉದ್ಯಮ ಹಿಂದೆಂದಿಗಿಂತಲೂ ವೇಗವಾಗಿ ಬೆಳೆಯಿತು. ಕುಮಾರ್‌ನ ಕಂಪೆನಿಗೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಬಿಲ್ಡರುಗಳೊಂದಿಗೆ, ರಿಯಲ್ ಎಸ್ಟೇಟ್ ದೈತ್ಯರೆನಿಸಿಕೊಳ್ಳುವ ಜಯ್ಪಿ, ಯುನಿಟೆಕ್ ಮತ್ತು ಡಿಎಲ್‌ಎಫ್ ಕಂಪನಿಗಳೊಂದಿಗೆ ವ್ಯಾವಹಾರಿಕ ಸಂಬಂಧಗಳಿವೆ' ಎಂದದು ಹೇಳಿದೆ.
ಒಬ್ಬ ವ್ಯಕ್ತಿ, ಸಂಬಂಧಿಕರ ಸಹಾಯದಿಂದ ತನ್ನ ಉದ್ಯಮವನ್ನು ಹಿಗ್ಗಿಸುತ್ತಾ ಹೋದರೆ, ಅದರ ಬಗ್ಗೆ ಪ್ರಶ್ನೆಗಳೇ ಏಳುವುದಿಲ್ಲ. ಆತನಿಗೆ ಸಹಾಯ ಮಾಡಿದ ಸಂಬಂಧಿಯೂ ಸಿಕ್ಕಿಬೀಳುವುದಿಲ್ಲ! ಆದರೆ ಇಂಥದ್ದೇ ವ್ಯವಹಾರದಲ್ಲಿ ನೇರವಾಗಿ ತೊಡಗಿಸಿಕೊಂಡ ಜಗನ್ ಮೋಹನ್ ರೆಡ್ಡಿ ಈಗ ಕಂಬಿ ಎಣಿಸುತ್ತಾ ಕುಳಿತಿದ್ದಾನೆ.
ಇನ್ನೊಂದು ವಿಷಯವನ್ನು ಮರೆಯುವುದು ಬೇಡ. ಮಾಯಾವತಿ ತಾವು ನಡೆಸಿದ ಭೂ ವ್ಯವಹಾರಗಳಿಂದ ಇದುವರೆಗೂ ತೊಂದರೆಗೆ ಸಿಕ್ಕಿಹಾಕಿಕೊಂಡಿಲ್ಲ. ಆದರೆ ಲಿಂಗಾಯತ ಸಮುದಾಯಕ್ಕೆ ಸೇರಿದ ಕರ್ನಾಟಕದ ಬಿ.ಎಸ್. ಯಡಿಯೂರಪ್ಪ ತಮ್ಮ ವ್ಯವಹಾರಗಳನ್ನು ಮುಚ್ಚಿಡಲು ವಿಫಲರಾಗಿ ಮುಖ್ಯಮಂತ್ರಿ ಕುರ್ಚಿಯಿಂದಲೇ ಕೆಳಗಿಳಿದರು. ಈ ವಿಷಯದಲ್ಲಿ ಯಡಿಯೂರಪ್ಪನವರಿಗಿಂತಲೂ ಹಿಂದುಳಿದ ವರ್ಗಕ್ಕೆ ಸೇರಿದ ಮಾಯಾವತಿ ಬಚಾವಾಗಲು ಯಶಸ್ವಿಯಾದಳು.
ಇನ್ನು ಆಶಿಶ್ ನಂದಿಯವರು ಮಧು ಕೋಡಾ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. 'ಡಾಲರ್‌ಗಳ ಲೆಕ್ಕದಲ್ಲಿ ಅತಿ ಹೆಚ್ಚು ಕಮಾಯಿ ಮಾಡಿರುವ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೀತ. ಆದರೆ ತನ್ನ ಭ್ರಷ್ಟಾಚಾರವನ್ನು ಬಚ್ಚಿಡಲು ಆತನಿಂದ ಸಾಧ್ಯವಾಗಲಿಲ್ಲ' ಎಂದಿದ್ದಾರೆ.
ಕೋಡಾ ಈಗ ಕಠಿಣ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನುವುದೇನೋ ಸತ್ಯ. ಆದರೆ ಆತ ಬುಡಕಟ್ಟು ಜನಾಂಗಕ್ಕೆ ಸೇರಿದವನಾದ್ದರಿಂದ ಸಿಕ್ಕಿಬಿದ್ದ ಎನ್ನುವ ವಾದದಲ್ಲಿ ಅರ್ಥವಿಲ್ಲ. ಇದು ಸುಳ್ಳು ಎಂದು ಸಾಬೀತು ಮಾಡಲು ಅನೇಕ ಉದಾಹರಣೆಗಳನ್ನು ಕೊಡಬಹುದು. ಬ್ರಾಹ್ಮಣರಾಗಿದ್ದ ಪ್ರಧಾನಿ ಪಿ.ವಿ. ನರಸಿಂಹರಾಯರು 1990ರ ಸಮಯದಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾದ ಬುಡಕಟ್ಟು ಜನಾಂಗಕ್ಕೆ ಸೇರಿದ ಎಂಪಿಗಳಿಗೆ ಲಂಚ ಕೊಡಲು ಹೋಗಿ ಸಿಕ್ಕಿಬೀಳಲಿಲ್ಲವೇ? ಆದರೆ ಲಂಚ ಪಡೆದ ಆ ಎಂಪಿಗಳು ಯಾವುದೇ ತೊಂದರೆಗೆ ಸಿಕ್ಕಿಹಾಕಿಕೊಳ್ಳದೆ ಲಂಚದ ರೂಪವಾಗಿ ಬಂದ ಹಣವನ್ನೆಲ್ಲ ತೆರಿಗೆ ಮುಕ್ತ 'ರಾಜಕೀಯ ದೇಣಿಗೆ'ಯಾಗಿ ಪರಿವರ್ತಿಸಲು ಸಫಲರಾಗಲಿಲ್ಲವೇ?
ಭ್ರಷ್ಟಾಚಾರ ಮಾಡಿ ಮೇಲ್ಜಾತಿಯವರು ತಪ್ಪಿಸಿಕೊಂಡುಬಿಡುತ್ತಾರೆ ಎನ್ನುವ ಆಶಿಶ್‌ರ ವಾದದಲ್ಲಿ ಹುರುಳಿಲ್ಲ ಎನ್ನುವುದಕ್ಕೆ ಈ ಉದಾಹರಣೆಯೇ ಸಾಕು. ಇನ್ನು ಬೇಕಿದ್ದರೆ, ನಿತಿನ್ ಗಡ್ಕರಿಯವರ ವಿಷಯವನ್ನೇ ತಗೆದುಕೊಳ್ಳಬಹುದು. ನಿತಿನ್ ಗಡ್ಕರಿ ಬ್ರಾಹ್ಮಣರು. ಈ ಬ್ರಾಹ್ಮಣನ ಬೆನ್ನಿಗೆ ಗಟ್ಟಿಯಾಗಿ ನಿಂತದ್ದು ಬಲಿಷ್ಠ ಸಂಘ ಪರಿವಾರದ ಬ್ರಾಹ್ಮಣರು. ಇಷ್ಟೆಲ್ಲ ಬೆಂಬಲವಿದ್ದರೂ ಗಡ್ಕರಿಯವರ ತಪ್ಪುಗಳು ಎಷ್ಟು ಸುಲಭವಾಗಿ ಎಲ್ಲರ ಕಣ್ಣಿಗೆ ಕಾಣಿಸಿದವು ನೋಡಿ! ತಮ್ಮ ಡ್ರೈವರ್‌ನನ್ನು ಕಂಪನಿಯ ಡೈರೆಕ್ಟರ್ ಮಾಡಿ ಎಲ್ಲರಿಂದಲೂ ಅಪಹಾಸ್ಯಕ್ಕೀಡಾಗಿದ್ದಾರವರು. ಅವರನ್ನು ಉಳಿಸಲು ಸಂಘ ಪರಿವಾರಕ್ಕೂ ಸಾಧ್ಯವಾಗಲಿಲ್ಲ. ಕೊನೆಗೆ ಪವಾರ್‌ಗಳೇ ಬಂದು ಸಂಕಷ್ಟದಿಂದ ಪಾರು ಮಾಡಬೇಕಾಯಿತು.
ಇದನ್ನು ಎ.ರಾಜಾ ಅವರ ಹಗರಣದೊಂದಿಗೆ ಒಮ್ಮೆ ಹೋಲಿಸಿ ನೋಡಿ. ಎ. ರಾಜಾ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ. 'ಅವರು ಭ್ರಷ್ಟಾಚಾರವೆಸಗಿ ಸಿಕ್ಕಿಬಿದ್ದರಲ್ಲ?' ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಆದರೆ ಅವರು ಇದುವರೆಗೂ ನಡೆದುಕೊಂಡು ಬಂದ ರೀತಿ, ನೀಡಿದ ಹೇಳಿಕೆಗಳೆಲ್ಲ ಎಷ್ಟೊಂದು ಚಾಣಾಕ್ಷತನದಿಂದ ಕೂಡಿವೆ ಎನ್ನುವುದನ್ನು ಗಮನಿಸಿದ್ದೀರಾ? ಇದಕ್ಕೆ ಹೋಲಿಸಿದರೆ ಗಡ್ಕರಿಯವರ ವರ್ತನೆ ಹೇಗಿದೆ? ಹಾಗೆ ನೋಡಿದರೆ ಇಲ್ಲಿಯವರೆಗೂ ಸಿಬಿಐ ಸಂಸ್ಥೆಗೆ ರಾಜಾ ಸ್ಪೆಕ್ಟ್ರಮ್ ಹಗರಣದಲ್ಲಿ ಎಷ್ಟು ಹಣ ತಿಂದಿದ್ದಾರೆ ಎಂದು ನಿಖರವಾಗಿ ಹೇಳಲು ಆಗುತ್ತಿಲ್ಲ. ರಾಜಾ ಒಂದು ವೇಳೆ ಈ ಹಗರಣ ಮಾಡಿ ಹಣ ಕಬಳಿಸಿದ್ದಾರೆ ಎನ್ನುವುದೇ ಸತ್ಯವಾದರೆ, ಅವರು ಅದನ್ನು ಬಚ್ಚಿಡುವಲ್ಲಿ ಬಹಳ ಚಾಣಾಕ್ಷತನ ಮೆರೆದಿದ್ದಾರೆ ಎನ್ನುವುದೂ ಅಷ್ಟೇ ಸತ್ಯವಾಗುತ್ತದೆ. ಬರೀ ಇಷ್ಟೇ ಅಲ್ಲ, ಅವರು ಹಗರಣದ ಕುಣಿಕೆ ಪಿ. ಚಿದಂಬರಂ ಮತ್ತು ಮನಮೋಹನ್ ಸಿಂಗ್ ಅವರ ಕುತ್ತಿಗೆಗೂ ಹೋಗಿ ಸುತ್ತಿಕೊಳ್ಳುವಂತೆ ನೋಡಿಕೊಂಡರು. ಇದೇ ಕಾರಣದಿಂದಾಗಿಯೇ ಇಂದು ಈ ಜಂಟಲ್‌ಮನ್‌ಗಳನ್ನು ಜನ ಅನುಮಾನದಿಂದ ನೋಡುವಂತಾಗಿದೆ. ಇನ್ನೊಂದು ವಿಷಯವನ್ನು ಮರೆಯುವುದು ಬೇಡ. ರಾಜಾ ಒಬ್ಬರೇ ಜೈಲಿಗೆ ಹೋಗಲಿಲ್ಲ. ಅವರೊಟ್ಟಿಗೆ ಅತ್ಯಂತ ಚತುರಮತಿಗಳಾದ ಉದ್ಯಮಿಗಳೂ ಜೈಲಿನತ್ತ ಹೆಜ್ಜೆ ಹಾಕಿದರು.
ರಾಜಾ ತಪ್ಪೆಸಗಿದ್ದಾರೆ ಎಂದು ಸಾಬೀತಾಗುತ್ತದಾ, ಇಲ್ಲವಾ ಎನ್ನುವುದು ಬೇರೆ ವಿಷಯ. ಆದರೆ ಅವರು, ಈ ಇಕ್ಕಟ್ಟಿನಲ್ಲಿ ಹೇಗೆ ಮೇಲ್ವರ್ಗಕ್ಕೆ ಸೇರಿದ ಕಾಂಗ್ರೆಸ್‌ನ ಇಬ್ಬರು ಬುದ್ಧಿವಂತ ನಾಯಕರುಗಳನ್ನು ಸಿಲುಕಿಸಲು ಸಫಲರಾದರು ಎನ್ನುವುದನ್ನು ನಾವು ನೋಡಬೇಕು. ಹಾಗಾಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ಭ್ರಷ್ಟಾಚಾರದಲ್ಲಿ ಹಿಂದುಳಿದ ವರ್ಗಗಳವರೂ ಹಿಂದುಳಿದಿಲ್ಲ, ಹಾಗೆಯೇ ಮುಂದುವರಿದ ವರ್ಗದವರೂ ಹಿಂದೆ ಬಿದ್ದಿಲ್ಲ!
ಇನ್ನು ಇತರೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಾ ಆಶಿಶ್ ನಂದಿ, ಹೇಳಿದ್ದು ಹೀಗೆ-'ಲಾಲು ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್‌ರಂಥವರನ್ನು ನೋಡಿದಾಗ, ಅವರಲ್ಲಿ ಹತಾಶೆ ಮತ್ತು ಅಭದ್ರತೆ ಹೆಚ್ಚಾಗಿ ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಭ್ರಷ್ಟಾಚಾರ ಮಾಡಿ ಕೋಟ್ಯಂತರ ರುಪಾಯಿ ಗಳಿಸಿದರೂ, ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ 'ಕಾನೂನಿನಿಂದ ತಪ್ಪಿಸಿಕೊಳ್ಳುವುದು ಅಥವಾ ಗಳಿಸಿದ ಕಪ್ಪುಹಣವಷ್ಟನ್ನೂ ಬಿಳಿಯಾಗಿಸುವುದು ಸಾಧ್ಯವಿಲ್ಲದ ಮಾತು' ಎನ್ನುವ ಭಯ ಅಂಥವರನ್ನು ಯಾವಾಗಲೂ ಕಾಡುತ್ತಿರುತ್ತದೆ...' ಎನ್ನುತ್ತಾರೆ ನಂದಿ.
ನಿಜಕ್ಕೂ ಈ ಮಾತು ಹಾಸ್ಯಾಸ್ಪದವಾಗಿದೆ. ಮುಲಾಯಂ ಸಿಂಗ್ ಅವರಿಗೆ ಅಭದ್ರತೆ ಕಾಡುತ್ತಿದೆ ಎಂದರೆ ನಗದೆ ಇನ್ನೇನು ಮಾಡಬೇಕು? ಆ ಮಾತನ್ನು ನಂಬುವವರ್ಯಾರು? 2014ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಮುಲಾಯಂ ಸಿಂಗ್ ಈಗ ಕನಸು ಕಾಣುತ್ತಾ ಕುಳಿತಿದ್ದಾರೆ! ಇನ್ನು ಲಾಲು ಪ್ರಸಾದ್ ಅವರ ವಿಚಾರಕ್ಕೆ ಬಂದರೆ ಮೇವು ಹಗರಣದ ಹಗ್ಗ ತಮ್ಮ ಕುತ್ತಿಗೆಗೆ ಸುತ್ತಿಕೊಳ್ಳಲು ಬರುತ್ತಿದೆ ಎಂದು ಅರಿವಾಗುತ್ತಿದ್ದಂತೆಯೇ ತಮ್ಮ ಹೆಂಡತಿಯನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿಸಿದ ಚಾಣಾಕ್ಷ ರಾಜಕಾರಣಿಯವರು. ಆ ಹಗರಣ ನಡೆದು ಇಷ್ಟು ವರ್ಷಗಳಾದರೂ ಅವರಿಗೆ ಶಿಕ್ಷೆಯಾಗಿದೆಯೇ? ಅವರಿಗೂ ಕೂಡ ಅಭದ್ರತೆ, ಭಯ ಎನ್ನುವುದು ಇದುವರೆಗೂ ಕಾಡಿಲ್ಲ ಎನ್ನುವುದು ಸ್ಪಷ್ಟ. ಏಕೆಂದರೆ ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಂದು ಸ್ಪಷ್ಟವಾಗಿ ಅನೇಕ ಬಾರಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.  ಭ್ರಷ್ಟಾಚಾರದ ವಿಷಯದಲ್ಲಿ ಯಾರೂ ಹಿಂದುಳಿದಿಲ್ಲ ಎನ್ನುವುದಕ್ಕೆ ಇನ್ನೆಷ್ಟು ಉದಾಹರಣೆ ಕೊಡಬೇಕು?

-ಆರ್.ಜಗನ್ನಾಥನ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.