ಅಂಕಣಗಳು

ನಿರೀಕ್ಷಿತ ಕ್ರಮ ಜಾರಿಯಾಗದಿದ್ದರೂ ಜಾಗೃತಿ ಸಾಧ್ಯವಾಗಿದೆ

Published On :

ಹೆಚ್ಚುವರಿ ಶುಲ್ಕಕ್ಕೆ ಸಂಬಂಧಿಸಿ ನಿಮ್ಮ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿದ ಸಮಿತಿ ಕೇವಲ ಸರ್ಕಾರಿ ವೆಚ್ಚಕ್ಕೆ ಸೀಮಿತವಾಯಿತು, ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿಲ್ಲ?
ಖಂಡಿತಾ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಿಂದಿನ ಸಮಿತಿಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕಳೆದ ವರ್ಷ ನಾನು ಅಧ್ಯಕ್ಷ ಹುದ್ದೆ ಸ್ವೀಕರಿಸಿದ ಬಳಿಕ ರಾಜ್ಯದ ಸಾಕಷ್ಟು ವಿದ್ಯಾರ್ಥಿಗಳ ದೂರುಗಳನ್ನು ಆಲಿಸಿದ್ದೇನೆ. ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಶುಲ್ಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ಹಾಗೂ ಅಂತಿಮ ವರದಿಗಳ ಮೂಲಕ ಶಿಕ್ಷಣ ಸಂಸ್ಥೆಗಳ ತುಲನಾತ್ಮಕ ಚಿತ್ರಣ ನೀಡಿದ್ದೇನೆ. 'ನಮ್ಮನ್ನು ಯಾರೂ ಪ್ರಶ್ನೆ ಮಾಡುವವರಿಲ್ಲ' ಎಂಬ ಖಾಸಗಿ ಶಿಕ್ಷಣ ಸಂಸ್ಥೆಗಳ ವಾದ ಬದಲಾಗಿದೆ. ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ಕೆಲವಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಒಪ್ಪಿಕೊಳ್ಳುತ್ತಿವೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ 6 ಸಾವಿರದಿಂದ 63 ಸಾವಿರದವರೆಗೆ ಹೆಚ್ಚುವರಿ ಶುಲ್ಕವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡಿದ್ದವು.

-    ವಿದ್ಯಾರ್ಥಿಗಳು ನೀಡಿದ ಸಾವಿರಾರು ದೂರು, ನಿಮ್ಮ 8 ತಿಂಗಳ ಪರಿಶ್ರಮದ ವರದಿಯ ಕತೆಯೇನಾಯಿತು? ದೂರು ನೀಡಿದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕದಿದ್ದರೆ ಸಮಿತಿ ಕೇವಲ ಕಣ್ಣೊರೆಸುವ ತಂತ್ರದ ಭಾಗವೆ?
ಗುಲ್ಬರ್ಗದ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನ ಕಾಲೇಜೊಂದರಲ್ಲಿ ಪ್ರವೇಶ ಪಡೆಯಲು ಪಾಲಕರೊಂದಿಗೆ ಹೋಗಿದ್ದಳು. ಆ ಕಾಲೇಜಿನ ಆಡಳಿತ ಮಂಡಳಿ ಸುಮಾರು 30 ಸಾವಿರದಷ್ಟು ಹೆಚ್ಚುವರಿ ಶುಲ್ಕವನ್ನು ಕೇಳಿತು. ಸರ್ಕಾರಿ ಶುಲ್ಕಕ್ಕೆ ಹಣ ಹೊಂದಿಸಿಕೊಂಡು ಹೋಗಿದ್ದ ಪಾಲಕರಿಗೆ ಅಲ್ಲಿ ಆತಂಕ ಕಾದಿತ್ತು. ಇಂತಹ ಸಾಕಷ್ಟು ಉದಾಹರಣೆಗಳು ವರದಿಯಲ್ಲಿವೆ. ತಮ್ಮ ಗೋಳಿಗೆ ಪರಿಹಾರ ಸಿಗಬಹುದೆಂದು ಸಾಕಷ್ಟು ವಿದ್ಯಾರ್ಥಿಗಳು ಲಿಖಿತ ದೂರನ್ನು ನೀಡಿದ್ದಾರೆ. ಕಳೆದ ವರ್ಷದ ವರದಿ ಮೂಲಕ ಸರ್ಕಾರಕ್ಕೆ ವಿಚಾರದ ಜಟಿಲತೆ ಅರ್ಥವಾಗಿದೆ ಎಂದು ತಿಳಿದಿದ್ದೇನೆ. ದೂರು ನೀಡಿದ ವಿದ್ಯಾರ್ಥಿಗಳಿಗೆ ಅಕ್ಷರಶಃ ನ್ಯಾಯ ದೊರಕಿಸಿಕೊಡದೆ ಇರಬಹುದು. ಆದರೆ ಸರ್ಕಾರವು ತನ್ನ ತಪ್ಪಿನಿಂದ ಎಚ್ಚೆತ್ತು ಈ ವರ್ಷ ಅದೇ ಪ್ರಮಾದಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಲಿದೆ ಎಂಬ ವಿಶ್ವಾಸವಿದೆ.

-    ಹಾಗಿದ್ದರೆ ಕೇವಲ ನೆಪ ಮಾತ್ರಕ್ಕೆ ವರದಿ ನೀಡಲು ವಿದ್ಯಾರ್ಥಿಗಳಿಂದ ಸರಣಿ ದೂರುಗಳನ್ನು ಪಡೆಯುವ ಅಗತ್ಯವೇನಿತ್ತು? ಭವಿಷ್ಯದಲ್ಲಿ ಸಮಸ್ಯೆ ಮರುಕಳಿಸುವುದಿಲ್ಲ ಎಂದಾದರೂ ಈ ಹಿಂದೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಸಾಧ್ಯವಿಲ್ಲವೇ?
ಪ್ರಾಮಾಣಿಕವಾಗಿ ನಾನು ಸರ್ಕಾರಕ್ಕೆ ವರದಿ ನೀಡಿದ್ದೇನೆ. ಮಧ್ಯಂತರ ವರದಿಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ವಸೂಲಿ ಮಾಡಿದ ಹೆಚ್ಚುವರಿ ಶುಲ್ಕದ ಬಗ್ಗೆ ವಿವರವಾಗಿ ದಾಖಲೆಗಳ ಮೂಲಕ ತಿಳಿಸಿದ್ದೇನೆ. ಆದರೆ ನನ್ನ ವರದಿಗೆ ಕೇವಲ ನೋಟಿಸ್ ನೀಡುವುದಷ್ಟೆ ಸರ್ಕಾರದ ಉತ್ತರ ಹಾಗೂ ಪ್ರತಿಕ್ರಮವಾಯಿತು. ಸರ್ಕಾರದ ಈ ನೋಟಿಸ್‌ಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಜಾರಿಕೆಯ ಉತ್ತರ ನೀಡಿದವು. ಸರ್ಕಾರವು ಮತ್ತೆ ಮುಂದುವರೆಯಲೇ ಇಲ್ಲ. ಕೊನೆಯ ಪಕ್ಷ ಹೆಚ್ಚುವರಿಯಾಗಿ ಪಡೆದ ಶುಲ್ಕವನ್ನಾದರೂ ಹಿಂತಿರುಗಿಸಬೇಕು ಅಥವಾ ಮುಂಬರುವ ಸೆಮಿಸ್ಟರ್ ಶುಲ್ಕದಲ್ಲಿ ಮನ್ನಾ ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು. ವರದಿಯ ಇದ್ಯಾವುದೇ ಅಂಶಗಳನ್ನು ಸರ್ಕಾರ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿದ ಲಕ್ಷಣ ಗೋಚರಿಸಲಿಲ್ಲ.

-    ಹಾಗಾದರೆ ಹೆಚ್ಚುವರಿ ಶುಲ್ಕ ಕುರಿತಂತೆ ತಮ್ಮ ಅಭಿಪ್ರಾಯವೇನು?
ರಾಜ್ಯ ಸರ್ಕಾರ ನಿಗದಿಮಾಡುವ ಶುಲ್ಕದಲ್ಲಿ ಕಾಲೇಜಿನ ಎಲ್ಲ ಅಂಶಗಳು ಸೇರಿಲ್ಲ. ಕೆಲವು ಅವಶ್ಯಕ ಖರ್ಚುಗಳಿಗೆ ವಿದ್ಯಾರ್ಥಿಗಳಿಂದ ಹಣ ಪಡೆಯುವುದು ಅನಿವಾರ್ಯ ಎಂದು ಆಡಳಿತ ಮಂಡಳಿಗಳು ವಾದ ಮಾಡುತ್ತಿವೆ. ಇದು ನಿಜವಾಗಿಯೂ ಇರಬಹುದು. 2006 ಕಾಯಿದೆ ಜಾರಿಯಾದರೆ ಇವೆಲ್ಲ ಗೊಂದಲಗಳಿಗೆ ತೆರೆ ಬೀಳುತ್ತದೆ. ಆದರೆ ಅಲ್ಲಿಯವರೆಗೆ ಒಂದು ಏಕರೂಪ ವ್ಯವಸ್ಥೆ ತರುವುದು ಒಳಿತು. ಈ ಶುಲ್ಕ ನಿಗದಿ ಮಾಡಲು ಒಂದು ಮಾನದಂಡವನ್ನು ಸರ್ಕಾರ ನಿಗದಿಮಾಡಬೇಕು. ಸುಮಾರು 10 ಸಾವಿರದವರೆಗೆ ಅಧಿಕ ಶುಲ್ಕ ಪಡೆಯಬಹುದು ಎಂದು ಹಿಂದಿನ ಸರ್ಕಾರವು ತನ್ನ ಸಭೆಗಳಲ್ಲಿ ಹೇಳಿತ್ತು. ಇದಕ್ಕೆ ಒಂದು ಸಾರ್ವಜನಿಕ ಹಿತವಾದ ಮಾನದಂಡ ರೂಪಿಸಿ ಶುಲ್ಕ ನಿಗದಿಮಾಡಬೇಕು. ಇದಕ್ಕೆ ಎಲ್ಲ ಶಿಕ್ಷಣ ಸಂಸ್ಥೆಗಳು ಒಪ್ಪಿಗೆ ಸೂಚಿಸಿ ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರವೇ ಈ ಬಗ್ಗೆ ಸೂಕ್ತ ಆದೇಶ ಹೊರಡಿಸಿ ತನ್ನ ನಿಲುವು ಸ್ಪಷ್ಟಪಡಿಸಬೇಕು. ಕಳೆದ ವರ್ಷದಂತೆ ಈ ವರ್ಷವು ವಿದ್ಯಾರ್ಥಿಗಳಿಗೆ ಗೊಂದಲವಾಗದಂತೆ ವಾತಾವರಣ ಏರ್ಪಡಿಸುವುದು ಸರ್ಕಾರದ ಜವಾಬ್ದಾರಿ. ಒಂದೊಮ್ಮೆ ನಿಯಮವನ್ನು ಸರ್ಕಾರ ರೂಪಿಸಿದರೆ ಉಲ್ಲಂಘನೆ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಬೇಕು. ಇಂತಹ ಎಚ್ಚರಿಕೆ ಹಾಗೂ ಅದಕ್ಕೆ ಪೂರಕವಾದ ಕ್ರಮದಿಂದ ಮಾತ್ರ ನಿಯಂತ್ರಣ ಸಾಧ್ಯವಿದೆ.

-    ರಾಜ್ಯದ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಅಕ್ರಮದ ಬಗ್ಗೆ ನಿಮ್ಮ ಅಂತಿಮ ವರದಿಯಲ್ಲಿ ಪ್ರಸ್ತಾಪಿಸಿದ್ದೀರಿ, ಇದು ಕೂಡ ಶಿಫಾರಸಾಗಿ ಉಳಿದಿದೆ?
ರಾಜ್ಯ ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ಒಪ್ಪಂದ ಪ್ರಕಾರ ಶುಲ್ಕ ಹಾಗೂ ಪ್ರವೇಶದ ಮೇಲ್ವಿಚಾರಣೆಗಾಗಿ ಈ ಸಮಿತಿ ರಚಿತವಾಗಿದೆಯಷ್ಟೆ. ನಾನು ಮಾಡಬೇಕಾದ ಕೆಲಸವನ್ನು ಕೈಲಾದ ಮಟ್ಟಿಗೆ ಮಾಡಿದ್ದೇನೆ. ಇನ್ನು ರಾಜ್ಯದ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಮೀಸಲು ನಿಯಮವನ್ನು ಉಲ್ಲಂಘಿಸಿ ನೂರಾರು ಸರ್ಕಾರಿ ಸೀಟುಗಳನ್ನು ಖಾಸಗಿ ಆಡಳಿತ ಮಂಡಳಿಗಳೇ ಉಳಿಸಿಕೊಳ್ಳುತ್ತಿವೆ. ರಾಜ್ಯದ ಅಲ್ಪಸಂಖ್ಯಾತರಿಗೆ ನೀಡಬೇಕಿರುವ ಸೀಟನ್ನು ಪರರಾಜ್ಯದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದಲ್ಲದೆ ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಪ್ರತ್ಯೇಕ ಮೀಸಲು ನಿಯಮಗಳಿವೆ. ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಪ್ರತಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಶೇ.66ರಷ್ಟು ಸೀಟುಗಳನ್ನು ಆಯಾ ಕಾಲೇಜು ಮಾನ್ಯತೆ ಪಡೆಯಲು ಬಳಸಿಕೊಂಡ ಅಲ್ಪಸಂಖ್ಯಾತ ವರ್ಗದವರಿಗೆ ನೀಡಬೇಕು. ಈ ಪ್ರಮಾಣದ ಸೀಟುಗಳನ್ನು ತುಂಬಲು ವಿಫಲವಾದರೆ ಸರ್ಕಾರಕ್ಕೆ ಹಿಂತಿರುಗಿಸಬೇಕು. ರಾಜ್ಯ ಸರ್ಕಾರವು ಭವಿಷ್ಯದಲ್ಲಿ ಅಲ್ಪಸಂಖ್ಯಾತ ಮಾನ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದೊಂದು ಕಾಲೇಜಿಗೆ ಒಂದೊಂದು ನಿಯಮ ರೂಪಿಸಿರುವ ಹಿನ್ನೆಲೆಯಲ್ಲಿ ಕ್ರಮ ಜರುಗಿಸುವುದು ಕಷ್ಟವಾಗಿದೆ. ನಿಯಮಗಳನ್ನು ಸಡಿಲಿಸಿದ್ದರೂ ಅದನ್ನು ಪೂರೈಸಲು ಈ ಸಂಸ್ಥೆಗಳು ವಿಫಲವಾಗಿವೆ. ವೃತ್ತಿಪರ ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆ-2006ರಿಂದ ಇದು ಏಕರೂಪವಾಗುವ ವಿಶ್ವಾಸವಿದೆ. ಅದಕ್ಕೂ ಮುಂಚೆ ರಾಜಕೀಯ ಇಚ್ಛಾಶಕ್ತಿಯಿದ್ದರೆ ಈ ವರ್ಷದಿಂದಲೇ ನಿಯಮ ಬದಲಿಸಬಹುದು. ಹಿಂದಿನ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರು ಇಂತಹ ಅಕ್ರಮ ಕಾಲೇಜುಗಳ ಮಾನ್ಯತೆ ರದ್ದುಮಾಡುವುದಾಗಿ ಹೇಳಿ ಸುಮ್ಮನಾದರಷ್ಟೆ. ಎಲ್ಲವೂ ಹೇಳಿಕೆಯಲ್ಲಿಯೆ ಮುಗಿದುಹೋಯಿತು. ಈಗಿನ ಸರ್ಕಾರದ ನಿರ್ಧಾರ ತಿಳಿದಿಲ್ಲ.

-    ರಾಜ್ಯ ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒಪ್ಪಂದ ಕಾಲಮಿತಿ ಮುಗಿಯುವುದರೊಳಗೆ ಸಮತಿಯು ವರದಿ ನೀಡಿಲ್ಲ. ಇದೇ ಕಾರಣದಿಂದ ವರದಿ ಜಾರಿ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ವಾದ ನಿಜವೆ?
ಈ ಬಗ್ಗೆ ನನಗೇನೂ ಮಾಹಿತಿಯಿಲ್ಲ. ವರದಿ ಮಂಡಿಸಲು ಸರ್ಕಾರ ನನಗೆ ಯಾವುದೆ ಕಾಲಮಿತಿ ನಿಗದಿ ಮಾಡಿರಲಿಲ್ಲ.

-  ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಮಾಡಲು ಚಿಂತಿಸುತ್ತಿರುವ 2006 ಕಾಯಿದೆ ವೃತ್ತಿಪರ ಶಿಕ್ಷಣ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿದೆಯೆ?
ಶುಲ್ಕದಲ್ಲಿ ಅಲ್ಪಮಟ್ಟಿಗೆ ಏರುಪೇರಾಗಬಹುದು. ಆದರೆ ಉಳಿದೆಲ್ಲ ಗೊಂದಲಗಳಿಗೆ ಈ ಕಾಯಿದೆ ತೆರೆ ಎಳೆಯಲಿದೆ. ಒಮ್ಮೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾದರೆ ಯಾವುದೇ ಗೊಂದಲವಿರುವುದಿಲ್ಲ. ಕಾಯಿದೆ ಮೂಲಕ ನೇಮಕವಾಗುವ 2 ಸಮಿತಿಗಳು ಈ ನಿಟ್ಟಿನಲ್ಲಿ ಕಣ್ಗಾವಲು ನಡೆಸಲಿವೆ. ಇಂದಿನ ವ್ಯವಸ್ಥೆಗಿಂತ 2006ರ ಕಾಯಿದೆಯಲ್ಲಿನ ಅಂಶಗಳು ಉತ್ತಮವಾಗಿವೆ.

-  ರಾಜ್ಯದ 214 ಎಂಜಿನಿಯರಿಂಗ್, 46 ವೈದ್ಯ ಹಾಗೂ 37 ದಂತವೈದ್ಯ ಕಾಲೇಜುಗಳನ್ನು ಏಕ ಸದಸ್ಯ ಸಮಿತಿ ನಿಯಂತ್ರಿಸಿ, ಪರಿವೀಕ್ಷಿಸಲು ಸಾಧ್ಯವಿದೆಯೆ?
ರಾಜ್ಯಾದ್ಯಂತ ಪ್ರವಾಸ ಮಾಡಿ ವಿದ್ಯಾರ್ಥಿಗಳ ದೂರುಗಳನ್ನು ಆಲಿಸುವುದು ಕಷ್ಟಸಾಧ್ಯ. ಕೆಲ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರು ಬಂದಿದ್ದರೂ ಭೇಟಿ ಮಾಡಿ ವಿಚಾರಿಸಲು ಸಾಧ್ಯವಾಗಲಿಲ್ಲ. ಸಮಿತಿ ವಿಸ್ತರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಅಷ್ಟಕ್ಕೂ ಮುಂದಿನ ವರ್ಷದಿಂದ ಪ್ರತ್ಯೇಕ 2 ಸಮಿತಿಗಳು ರಚನೆಯಾಗಲಿದೆ ಎಂದು ಈಗಾಗಲೇ ಸರ್ಕಾರ ಘೋಷಿಸಿದೆ.

-  ಕಳೆದ ವರ್ಷದ ದೂರುಗಳು ರದ್ದಿಯಾದವು, ಪ್ರಸಕ್ತ ವರ್ಷದಲ್ಲೂ ಅಕ್ರಮಗಳು ನಡೆದರೆ ಯಾವ ವಿಶ್ವಾಸದಿಂದ ವಿದ್ಯಾರ್ಥಿಗಳು ದೂರು ನೀಡಬೇಕು?
ದೂರು ನೀಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ನಿಯಮರೂಪಿಸಲಿ. ಸರ್ಕಾರ ಎಚ್ಚೆತ್ತುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ವಿದ್ಯಾರ್ಥಿಗಳು ನೀಡಿದ ದೂರುಗಳು ನೆರವಾಗಿವೆ. ವಿದ್ಯಾರ್ಥಿಗಳು ಇದೇ ವಿಶ್ವಾಸದಿಂದ ತಮಗಾದ ಅನ್ಯಾಯಗಳನ್ನು ಸರ್ಕಾರಿ ಸಂಸ್ಥೆಗಳಿಗೆ ಅಧಿಕೃತವಾಗಿ ತಿಳಿಸುವ ಕಾರ್ಯಮಾಡಲಿ. ವ್ಯವಸ್ಥೆ ಸುಧಾರಣೆಗೆ ಇದು ಸಹಕಾರಿಯಾಗುತ್ತದೆ.


- ರಾಜೀವ ಹೆಗಡೆ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.