ಟಿಬಿ ಔಷಧ ಕೊರತೆಗೆ ಕಾರಣವಾಯಿತೆ ಕೇಂದ್ರಿಕೃತ ವ್ಯವಸ್ಥೆ?
ಕ್ಷಯ ರೋಗ(ಟಿಬಿ ಕಾಯಿಲೆ)ಯ ಔಷಧಿಯ ಕೊರತೆ ದೇಶಾದ್ಯಂತ ತಲೆದೋರಿರುವುದು ಇತ್ತೀಚೆಗೆ ವರದಿಯಾಗಿದೆ. ನಿಯಮಿತವಾಗಿ ಸರಿಯಾದ ಹೊತ್ತಿಗೆ, ಸರಿಯಾದ ಅಳತೆಯಲ್ಲಿ ತೆಗೆದುಕೊಳ್ಳಲೇಬೇಕಾದ ಕ್ಷಯ ರೋಗದ ಔಷಧಿ ಕೊರತೆಯ ಅಹಿತಕರ ಸುದ್ದಿಯಿಂದ ಟಿಬಿ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಗಂಭೀರವಾದ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಂತಾಗಿದೆ. ಸಂವಿಧಾನಿಕವಾಗಿ ರಾಜ್ಯ ಪಟ್ಟಿಯಲ್ಲಿರುವ ಆರೋಗ್ಯ ಸೇವೆ ಎನ್ನುವ ವಿಷಯದ ಬಹುಮುಖ್ಯ ಭಾಗವಾದ ಔಷಧಿ ವಿತರಣೆ ಎನ್ನುವ ಜವಾಬ್ದಾರಿಯನ್ನು ರಾಜ್ಯಕ್ಕೆ ಬಿಟ್ಟುಕೊಡದೆ ಕೇಂದ್ರವು ತನ್ನ ಹಿಡಿತದಲ್ಲಿಟ್ಟುಕೊಂಡಿರುವುದು ಮತ್ತು ಹಿಡಿತದಲ್ಲಿಟ್ಟುಕೊಂಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದಿರುವುದೇ ಈ ಅವಘಡಕ್ಕೆ ಕಾರಣ ಎಂದು ಕಂಡು ಬರುತ್ತಿದೆ.
ಟಿಬಿ ಖಾಯಿಲೆ ಚಿಕಿತ್ಸೆಗೆ ಬೇಕಿರುವ ಔಷಧಿಯ ಕೊರತೆ ಬಹುದೊಡ್ಡ ಅಪಾಯಕಾರಿ ಎಚ್ಚರಿಕೆಯ ಗಂಟೆ. ಔಷಧಿಯ ಕೊರತೆಯಿಂದಾಗುವ ಅನಾಹುತಗಳು ಅತ್ಯಂತ ಗಂಭೀರವಾದದ್ದು ಮತ್ತು ಸರಿಪಡಿಸಲಾಗದಂತಹುದು. ಈ ಕಾಯಿಲೆಗೆ ತುತ್ತಾಗಿರುವವರು ಔಷಧಿಯನ್ನು ನಿಯಮಿತವಾಗಿ ಸರಿಯಾದ ಹೊತ್ತಿಗೆ, ಸರಿಯಾದ ಅಳತೆಯಲ್ಲಿ ಖಾಯಿಲೆಯು ಗುಣವಾಗುವವರೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಡ್ರಗ್ರೆಸಿಸ್ಟೆನ್ಸ್ ಟಿಬಿ(ಔಷಧಿಗೆ ಬಗ್ಗದ ಕ್ಷಯ ರೋಗ) ಮತ್ತು ಒಂಚೂರು ಗುಣಪಡಿಸಲಾಗದಂತಹ ಕ್ಷಯರೋಗದ ಸಮಸ್ಯೆಗಳು ತಲೆದೋರುತ್ತವೆ. ಇಂಥ ಸ್ಥಿತಿ ತಲುಪಿದಾಗ ರೋಗಿಯು ಈ ಕಾಯಿಲೆಯನ್ನು ಇತರರಿಗೂ ಹರಡುವ ಸಾಧ್ಯತೆಯುಂಟು. ಹೀಗೆ ಹರಡುವ ಈ ಖಾಯಿಲೆಗೆ ಚಿಕಿತ್ಸೆ ಕೊಡುವುದು ತುಂಬಾ ಕಷ್ಟಕರ ಮತ್ತು ದುಬಾರಿಯೂ ಹೌದು. ಔಷಧಿಗೆ ಬಗ್ಗದಿರುವಂತ ಕ್ಷಯ ರೋಗಕ್ಕೆ ತುತ್ತಾಗುವ ಬಹುತೇಕ ಮಂದಿ ಸಾವನ್ನಪ್ಪುತ್ತಾರೆ ಮತ್ತು ಉಳಿದವರು ದುಬಾರಿ ಮತ್ತು ನಂಜಿನ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಒಮ್ಮೆ ರೋಗಿಯು ಔಷಧಿಗೆ ಬಗ್ಗದ ಕ್ಷಯರೋಗಕ್ಕೆ ತುತ್ತಾದರೆ ಅದೊಂದು ದೊಡ್ಡ ದುರಂತ. ಮೊದಲನೆಯದಾಗಿ, ಎರಡನೇ ಹಂತದ ಚಿಕಿತ್ಸೆಯು ಮೊದಲನೇ ಹಂತದ ಚಿಕಿತ್ಸೆಯಷ್ಟು ಪರಿಣಾಮಕಾರಿಯಲ್ಲ. ಒಂದೊಮ್ಮೆ ಎರಡನೆ ಹಂತದ ಚಿಕಿತ್ಸೆಯು ಫಲಕಾರಿಯಾಗುವುದಾದಲ್ಲಿ ಅದು ಮೊದಲನೇ ಹಂತದ ಚಿಕಿತ್ಸೆಗಿಂತ ಮೂರು ಪಟ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಎರಡನೆಯದಾಗಿ, ಈ ಔಷಧಿಗಳು ನಂಜಿನಿಂದ ಕೂಡಿರುತ್ತವೆ ಹಾಗೂ ಮೂರನೆಯದಾಗಿ ಚಿಕಿತ್ಸೆಯು ತುಂಬಾ ದುಬಾರಿ. ಒಂದು ವೇಳೆ ಮೊದಲನೆ ಮತ್ತು ಎರಡನೆ ಹಂತದ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ರೋಗಿಯು ಚಿಕಿತ್ಸೆ ಮಾಡಲಾಗದಂತಹ ಅಪಾಯಕಾರಿ ಹಂತ ತಲುಪಬಹುದು. ಇಂತಹದೊಂದು ಆತಂಕದ ಪರಿಸ್ಥಿತಿಗೆ ಔಷಧಿ ಪೂರೈಕೆಯ ವಿಷಯದಲ್ಲಿ ಭಾರತ ಹೊಂದಿರುವ ಕೇಂದ್ರಿಕೃತ ವ್ಯವಸ್ಥೆಯೇ ಕಾರಣವಾಗಿದೆ. ಕೇಂದ್ರಿಕೃತ ಪೂರೈಕೆ ತಂದಿರುವ ಆಪತ್ತು ಕೇಂದ್ರೀಕೃತವಾಗಿ ಕೊಳ್ಳುವಂತಹ ರಾಷ್ಟ್ರೀಯ ಕಾರ್ಯಕ್ರಮ (Centralized procurement for national programmes)ದಡಿಯಲ್ಲಿ ಕೇಂದ್ರ ಸರ್ಕಾರವು ಔಷಧಿಗಳನ್ನು ಕೊಂಡುಕೊಳ್ಳುತ್ತದೆ. ಇದರ ಹಿಂದಿರುವ ಉದ್ದೇಶಗಳೆಂದರೆ ಎಲ್ಲಾ ರಾಜ್ಯಗಳಿಗೂ ಔಷಧಿಯನ್ನು ಒಟ್ಟಿಗೇ ಕೊಳ್ಳುವುದರಿಂದ ಅಗ್ಗದ ಬೆಲೆಯಲ್ಲಿ ಸಿಗುತ್ತದೆ ಹಾಗಾಗಿ ಹಣಕಾಸಿನ ಉಳಿತಾಯವಾಗುತ್ತದೆ ಮತ್ತು ಎಲ್ಲಾ ರಾಜ್ಯಗಳಿಗೂ ಒಂದೇ ಗುಣಮಟ್ಟದ ಔಷಧಿಯನ್ನು ಒದಗಿಸಿದಂತಾಗುತ್ತದೆ ಎನ್ನುವುದು. ಆದರೆ ತೊಡಕುಗಳಿಂದ ಕೂಡಿರುವ ಈಗಿನ ಕೇಂದ್ರೀಕೃತ ವ್ಯವಸ್ಥೆಗಳಿಂದ ಅನುಕೂಲಕ್ಕಿಂತ ಅನಾನುಕೂಲ, ಅಪಾಯಗಳೇ ಹೆಚ್ಚು. ಈಗ ತಲೆದೋರಿರುವ ದೊಡ್ಡ ಮಟ್ಟದ ಔಷಧಿಯ ಕೊರತೆಗೆ ಇಂತಹ ಕೇಂದ್ರೀಕೃತ ವ್ಯವಸ್ಥೆಯೇ ಕಾರಣವಾಗಿದೆ. ಕೇಂದ್ರ ಆರೋಗ್ಯ ಇಲಾಖೆಯು ಸರಿಯಾದ ಸಮಯದಲ್ಲಿ ಔಷಧಿಯನ್ನು ಕೊಂಡುಕೊಳ್ಳದಿರುವುದು ಮತ್ತು ಔಷಧಿಯ ಕೊರತೆಯ ಬಗ್ಗೆ, ಸರಬರಾಜಿನ ಕೊರತೆಯ ಬಗ್ಗೆ ರಾಜ್ಯಗಳಿಗೆ ಕೊನೆ ಗಳಿಗೆಯಲ್ಲಿ ವಿಷಯ ತಿಳಿಸಿರುವುದು ಸಮಸ್ಯೆಯ ಮೂಲವಾಗಿದೆ. Revised National Tuberculosis Control Programme (RNTCP) ಯೋಜನೆಯಡಿಯಲ್ಲಿ ಕೊಡಮಾಡುವ ಔಷಧಿಯನ್ನೇ ನೆಚ್ಚಿಕೊಂಡಿದ್ದ ರಾಜ್ಯ ಸರ್ಕಾರಗಳು ಕೊನೆ ಗಳಿಗೆಯಲ್ಲಿ ಏನೂ ಮಾಡಲಾಗದಂತಹ ನಿಸ್ಸಹಾಯಕ ಸ್ಥಿತಿಗೆ ತಲುಪುವಂತಾಗಿದೆ. ಔಷಧಿ ಕೊರತೆಯ ಎಡವಟ್ಟು ಕೇಂದ್ರ ಮಾಡಿದ್ದರೂ ಅದು ತಂದೊಡ್ಡುವ ಆಕ್ರೋಶ, ಪ್ರತಿಭಟನೆಯ ಬಿಸಿಗೆ ಜನರ ಆರೋಗ್ಯದ ನೇರ ಹೊಣೆ ಹೊರುವ ರಾಜ್ಯ ಸರ್ಕಾರಗಳು ತುತ್ತಾಗುವ ಎಲ್ಲ ಸಾಧ್ಯತೆಗಳಿವೆ. ಕೇಂದ್ರದ ಬೇಜವಾಬ್ದಾರಿತನ ಭಾರತವನ್ನು ಪ್ರಪಂಚದಲ್ಲೇ ಅತಿ ಹೆಚ್ಚು 'ಡ್ರಗ್ ರೆಸಿಸ್ಟೆನ್ಸ್ ಟಿಬಿ(DR-TB)' ಹೊಂದಿರುವ ದೇಶ ಎನ್ನುವ ಕುಖ್ಯಾತಿಗೆ ಈಡು ಮಾಡುವ ಸಾಧ್ಯತೆ ಇದೆಯೆನ್ನಲಾಗುತ್ತಿದೆ.
ಜನರ ಆರೋಗ್ಯ ಸೇವೆಯ ಹೊಣೆ ರಾಜ್ಯ ಸರ್ಕಾರದ್ದು. ಪ್ರತಿಯೊಂದು ರಾಜ್ಯದ ಆರೋಗ್ಯ ಸೇವೆಯ ಅಗತ್ಯಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ರಾಜ್ಯಗಳ ನಡುವಿನ ಸಾಮಾಜಿಕ ಮತ್ತು ಆರ್ಥಿಕ ವೈವಿಧ್ಯತೆಗಳನ್ನು ಲೆಕ್ಕಿಸದೆ, ಆಯಾ ರಾಜ್ಯದ ವಸ್ತುಸ್ಥಿತಿಯನ್ನು ಪರಿಗಣಿಸದೆ ಎಲ್ಲರಿಗೂ ಒಂದೇ ತೆರನಾದ ಯೋಜನೆಗಳನ್ನು ಕೇಂದ್ರದಿಂದ ಕಣ್ಣು ಮುಚ್ಚಿ ಹೇರುತ್ತಿರುವುದೇಕೆ? ಆರೋಗ್ಯದಂತಹ ವಿಷಯಗಳಲ್ಲಿ ಕೇಂದ್ರದ ಹೊಣೆಯೇನಿದ್ದರೂ ರಾಜ್ಯಗಳಿಗೆ ಸಲಹೆ ನೀಡುವುದು, ಹಣದ ಅನುದಾನ, ರಾಜ್ಯಗಳ ಪರವಾಗಿ ಮಾತುಕತೆ ಇವುಗಳಷ್ಟಕ್ಕೆ ಸೀಮಿತವಾಗಿರಬೇಕು. ಮಿಕ್ಕೆಲ್ಲಾ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟುಕೊಡಬೇಕು. ಆಯಾ ರಾಜ್ಯ ಸರ್ಕಾರಗಳು ಮೂರನೆಯ ಹಂತದ ಸರ್ಕಾರದ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಆರೋಗ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬಲ್ಲವು. ದೆಹಲಿಯಲ್ಲಿ ಕುಳಿತು ಎಲ್ಲವನ್ನು ನಿರ್ಧರಿಸುವ ಯೋಚನೆ ಭಾರತದಂತಹ ವೈವಿಧ್ಯತೆಯ ಒಕ್ಕೂಟದ ಆಳ್ವಿಕೆಗೆ ತಕ್ಕದಾದುದಲ್ಲ. ಈ ಬಗ್ಗೆ ರಾಜ್ಯ ಸರ್ಕಾರವೂ ದನಿ ಎತ್ತಲಿ.
- ಮಲ್ಲೇಶ ಬೆಳವಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

