ಮುಸ್ಲಿಮರಿಗೆ ಬೇಕಿರುವುದು ಇಫ್ತಾರ್ ಊಟವಲ್ಲ, ಉದ್ಯೋಗ
ಭಾರತವು ಒಂದು ಹಂತದಲ್ಲಿ ಹಿಂದು ರಾಷ್ಟ್ರಪತಿ, ಮುಸ್ಲಿಂ ಉಪರಾಷ್ಟ್ರಪತಿ, ಸಿಖ್ ಪ್ರಧಾನಿ ಮತ್ತು ಆಡಳಿತ ಪಕ್ಷದ ಅಧ್ಯಕ್ಷೆಯಾಗಿ ಕ್ರೈಸ್ತ ಸೋನಿಯಾ ಗಾಂಧಿ ಮೇಳೈಕೆ ಇದ್ದ ದಿನಗಳನ್ನು ಕಂಡಿದೆ. ಆದರೆ ನನಗೆ ತಿಳಿದಿರುವಂತೆ ಈ ಹಿಂದಿನ ಪ್ರತಿಭಾ ಪಾಟೀಲ್ ಸೇರಿದಂತೆ ಆ ಹುದ್ದೆಯನ್ನು ಅಲಂಕರಿಸಿದ ಯಾವುದೇ ಹಿಂದುಗಳು - ಹಿಂದು ರಾಜಕಾರಣಿಗಳು, ರಾಯಭಾರಿಗಳು ಮತ್ತು ದೆಹಲಿಯ ವರ್ಚಸ್ವಿ ಗಣದಲ್ಲಿರುವ ಹಿಂದೂ ಪ್ರಮುಖರನ್ನು ಸರ್ಕಾರದ ಖರ್ಚಿನಲ್ಲಿ ದೀಪಾವಳಿ ಭೋಜನ ಮಾಡೋಣ ಬನ್ನಿ ಎಂದು ಕರೆದ ನೆನಪಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅವರು ಬೈಸಾಕಿ ಹಬ್ಬವನ್ನು ಸಿಖ್ ಬಾಂಧವರೊಂದಿಗೆ ಆಚರಿಸಿ ಆ ಮೂಲಕ ಖಾಲ್ಸಾ ಚಳವಳಿ ನಡೆದ ದಿನವನ್ನು ಸರ್ಕಾರಿ ವೆಚ್ಚದಲ್ಲಿ ನೆನಪು ಮಾಡಿಕೊಂಡ ಉದಾಹರಣೆಯೂ ಸಿಗುವುದಿಲ್ಲ. ಸೋನಿಯಾ ಗಾಂಧಿ ಸಹ ಕ್ರಿಸ್ಮಸ್ ಪಾರ್ಟಿಗೆ ಅಂತ ಆರ್ಚ್ಬಿಷಪ್ಗಳು, ಕ್ರೈಸ್ತ ವರ್ಗಕ್ಕೆ ಸೇರಿದ ರಾಜಕಾರಣಿಗಳು, ರಾಜತಾಂತ್ರಿಕರು, ಶಿಕ್ಷಣ ತಜ್ಞರನ್ನೆಲ್ಲ ಕಲೆಹಾಕಿದ ಉದಾಹರಣೆ ಸಿಗುವುದಿಲ್ಲ. ಅವರು ಹೀಗೆಲ್ಲ ಮಾಡಬೇಕಿತ್ತು ಅಂತಲ್ಲ. ಹಾಗೆ ಮಾಡದೇ ಇರುವುದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸೋಣ.
ಆದರೆ ಆಗಿನ ಉಪರಾಷ್ಟ್ರಪತಿ 2009ರ ಸೆಪ್ಟೆಂಬರ್ 7ರಂದು ಇಫ್ತಾರ್ ಭೋಜನಕೂಟ ಏರ್ಪಡಿಸಿ ಮುಸ್ಲಿಂ ಸಮುದಾಯದ ವೈಭವೋಪೇತ ಹಾಗೂ ಕೆಲ ಅಪ್ರಸಿದ್ಧರನ್ನು ಆಹ್ವಾನಿಸಿದ್ದರು. ಇಲ್ಲಿ ಒತ್ತಿ ಹೇಳಬೇಕಾದ ಸಂಗತಿ ಎಂದರೆ ಇದೇನೂ ಉಪರಾಷ್ಟ್ರಪತಿಯ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. ಅವರ ಕಚೇರಿ ಅನುಸರಿಸಿದ ಸಂಪ್ರದಾಯವನ್ನು ಪಾಲಿಸುವುದಕ್ಕೆ ಸರ್ಕಾರಿ ವೆಚ್ಚದಲ್ಲಿ ಹೈದರಾಬಾದ್ ಹೌಸ್ನಲ್ಲಿ ಸಾಯಂಕಾಲದ ಇಫ್ತಾರ್ ಕೂಟ ನೆರವೇರಿತು.
ಇದು ಸಾಲದು ಎಂಬಂತೆ ಆನಂತರದಲ್ಲಿ ವಿದೇಶ ವ್ಯವಹಾರಗಳ ಸಚಿವಾಲಯವು ಈ ಆಹಾರ ಗೌರವವನ್ನು ಹಮ್ಮಿಕೊಂಡು ಸಂಕೇತ ಪೌರುಷವನ್ನು ಮೆರೆಯಿತು. ಇಂಥ ಕಾರ್ಯಕ್ರಮಗಳಲ್ಲಿ ಫೋಟೊಕ್ಕೆ ಚೆನ್ನಾಗಿ ಕಾಣಲೆಂದು ಸರ್ಕಾರದ ವಿಐಪಿಗಳೆಲ್ಲ ಮುಸ್ಲಿಂ ಬಿಳಿ ಟೊಪ್ಪಿಗೆಯನ್ನೂ ಧರಿಸಿ ಬರುತ್ತಾರೆ.
ಸಾರ್ವಜನಿಕ ತೋರುಗಾಣಿಕೆಯ ಇಂಥ ನಡೆಗಳ ಹಿಂದಿನ ಕಾರಣಗಳೆಲ್ಲ ಸರಳ. ಸ್ಥಳೀಯ ಮುಸ್ಲಿಮ್ ಪ್ರಮುಖರನ್ನು ಇಫ್ತಾರ್ ಅತಿಥಿಗಳನ್ನಾಗಿ ಬಂಡಲ್ ಕಟ್ಟುವ ಮೂಲಕ ದೆಹಲಿಯ ರಾಜಕೀಯ ವರ್ಗ ಅವರನ್ನು ಮೂರ್ಖರು ಎಂದೇ ಭಾವಿಸಿಬಿಟ್ಟಿದೆ. ವಾರ್ಷಿಕವಾಗಿ ಒಂದು ಊಟ ಕೊಟ್ಟುಬಿಟ್ಟರೆ ಅವರೆಲ್ಲ ತಮ್ಮ ಜತೆಗಿರುತ್ತಾರೆ ಎಂಬಂತೆ ಇವರು ನಡೆದುಕೊಳ್ಳುತ್ತಿದ್ದಾರೆ. ಈ ರಾಜಕೀಯ ವರ್ಗಕ್ಕೆ ತಾನೇನು ಮಾಡುತ್ತಿದ್ದೇನೆ ಎಂಬುದು ಗೊತ್ತಿದೆ. ಈ ಮುಸ್ಲಿಂ 'ಪ್ರಮುಖ'ರೆನ್ನಿಸಿಕೊಂಡವರು ರಮಜಾನ್ ಸಂದರ್ಭವನ್ನು ಸರ್ಕಾರದಿಂದ ಏನನ್ನಾದರೂ ಪಡೆದುಕೊಳ್ಳುವುದಕ್ಕೆ ಇರುವ ಸಮಯ ಎಂದು ಭಾವಿಸಿದ್ದಾರೆ ಎಂಬ ನಂಬುಗೆಯನ್ನು ಅದು ತನ್ನ ಅನುಭವದ ಆಧಾರದಲ್ಲಿ ಬೆಳೆಸಿಕೊಂಡಿದೆ. ವಾಸ್ತವದಲ್ಲಿ ಆ ದಿನ ನಮ್ಮಲ್ಲಿರುವುದನ್ನು ಬಡವರ ಜತೆ ಹಂಚಿಕೊಳ್ಳಬೇಕೇ ಹೊರತು ಏನನ್ನೊ ಪಡೆಯುವುದಕ್ಕೆ ನೋಡುವುದಲ್ಲ. ಭಾರತದ ಮುಸ್ಲಿಂ ಪ್ರಮುಖರು ಈ ಮೂಲಕ ಆಡಳಿತ ವರ್ಗವು ತನ್ನ ಸವಾರಿಗೆ ಆಯ್ಕೆ ಮಾಡಿಕೊಂಡಿರುವ ಜಾಕಿಗಳಾಗಿದ್ದಾರೆ. ಈ ಓಟ ಅವರನ್ನು ಎಲ್ಲಿಗೂ ತಲುಪಿಸುವುದಿಲ್ಲ.
ಈ ಇಫ್ತಾರ್ ಪ್ರಹಸನ ಅದೆಷ್ಟು ಭದ್ರವಾಗಿ ಬೇರೂರಿದೆ ಎಂದರೆ ಯಾವ ಆಡಳಿತವೂ ಇದನ್ನು ಮುರಿಯುವುದಕ್ಕೆ ಧೈರ್ಯ ತೋರಿಸಿಲ್ಲ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವೂ ಇದಕ್ಕೆ ಹೊರತಲ್ಲ. ದೆಹಲಿಯ ರಾಜಕೀಯ ಕಾಲಸೂಚಿಯಲ್ಲಿ ಇಫ್ತಾರ್ ಭೋಜನ ಏರ್ಪಡಿಸುವ ದಿನ ಹೇಗೆ ಮುದ್ರೆ ಒತ್ತಿಬಿಟ್ಟಿದೆ ಎಂದರೆ ಅದರ ಅವಶ್ಯಕತೆ, ತಾರ್ಕಿಕತೆಯನ್ನು ಯಾರೂ ಪರಿಶೀಲಿಸುವುದಕ್ಕೆ ತಯಾರಿಲ್ಲ.
ಬಹುಶಃ ಈ ಇಫ್ತಾರ್ ಕೂಟವನ್ನು ಪರಿಪಾಲಿಸಿದ ಅತಿ ಸಿನಿಕ ಆಡಳಿತಗಾರ ಎಂದರೆ ಪಿ. ವಿ. ನರಸಿಂಹರಾವ್ ಇದ್ದಿರಬಹುದು. ಏಕೆಂದರೆ ಅವರದೇ ಕಾಲದಲ್ಲಿ ಬಾಬರಿ ಮಸೀದಿ ವಿಧ್ವಂಸ ನಡೆದರೂ ಆ ಬಗ್ಗೆ ಯಾವುದೇ ಮುಲಾಜಿಲ್ಲದೆ ಅವರು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡರು. ಬಹುಶಃ ಅವರನ್ನು ಸಿನಿಕರೆನ್ನುವುದು ತಪ್ಪಾದೀತು. ಏಕೆಂದರೆ ಮುಸ್ಲಿಂ ಪ್ರಮುಖರು ಉತ್ಸುಕತೆಯಿಂದ ಅವರ ಸುತ್ತ ಜಮಾಯಿಸಿದ್ದರು. ಹೇಗಾದರೂ ಅವರ ದೃಷ್ಟಿ ತಮ್ಮ ಮೇಲೆ ಬೀಳುವಂತಾಗಲಿ, ಏನಾದರೂ ಉಡುಗೊರೆ ಸಿಗುವುದಾದರೆ ಸಿಗಲಿ ಎಂಬ ನಿರೀಕ್ಷೆ ಹೊತ್ತಂತವರಂತೆ ಇದ್ದರು ಅವರೆಲ್ಲ. ದೇಹಿ ಎಂಬ ಸ್ಥಿತಿಯಲ್ಲಿ ನಿಂತವರಿಗೆ ಏನಾದರೂ ಬಿಸಾಕುವುದು ನರಸಿಂಹರಾವ್ ಅವರಿಗೆ ಖುಷಿ ಕೊಡುವ ವಿಚಾರವೇ ಆಗಿತ್ತು.
ಆದರೆ ನನಗೆ ತಿಳಿದಂತೆ ವಿದೇಶ ವ್ಯವಹಾರಗಳ ಸಚಿವಾಲಯ ಈ ಇಫ್ತಾರ್ ರಾಜಕೀಯದಿಂದ ದೂರವೇ ಉಳಿದಿತ್ತು. ಆದರೆ ಅಲ್ಲೂ ಆ ಉತ್ಸಾಹದ ಜ್ವಾಲೆ ಕೊನೆಗೊಮ್ಮೆ ಹರಡಿಯೇ ಬಿಟ್ಟಿತೆನ್ನಿ. ಪ್ರಮುಖವಾಗಿ ಮುಸ್ಲಿಂ ರಾಷ್ಟ್ರಗಳ ರಾಯಭಾರಿಗಳಿಗೆ ಬೆನ್ನಿಗೆ ಬೆನ್ನು ಸೋಕಿಸುತ್ತ ವೈಭವೋಪೇತವಾಗಿ ಪಾರ್ಟಿ ಮಾಡುವ ಅವಕಾಶ. ಇಫ್ತಾರ್ನ ಆಹ್ವಾನ ಪತ್ರಿಕೆ ಸಿಗುತ್ತಲೇ ಮುಸ್ಲಿಂ ರಾಯಭಾರಿಗಳು ಮುಖವರಳಿಸಿದ್ದು ಈ ಐಡಿಯಾ ಮಾಡಿದವರಿಗೆ ಸಾರ್ಥಕ್ಯವನ್ನೆ ದಯಪಾಲಿಸಿತು.
ಭಾರತದ ಮುಸ್ಲಿಮರಿಗೆ ಬೇಕಿರುವುದು ಇಫ್ತಾರ್ ಊಟವಲ್ಲ, ಉದ್ಯೋಗ. ಅಂತೆಯೇ ರಾಯಭಾರಿಗಳನ್ನು ರಾಜತಾಂತ್ರಿಕ ಕಾರ್ಯಗಳ ಮೂಲಕ ವರ್ಷವಿಡೀ ಸಂವಾದದಲ್ಲಿ ಇರಿಸಬೇಕೆ ವಿನಃ ಸಾಯಂಕಾಲದ ಊಟದಲ್ಲಿ ಕೈಕುಲುಕುವುದಲ್ಲ.
ಆದರೆ ಜಗತ್ತಿನಾದ್ಯಂತ ಮುಸ್ಲಿಂ ಪ್ರಮುಖರೆನ್ನಿಸಿಕೊಂಡವರ ವರ್ತನೆ ಉಳಿದವರಲ್ಲಿ ಸಿನಿಕತೆ ಹುಟ್ಟುಹಾಕುವಂತೆಯೇ ಇರುತ್ತದೆ. ರಂಜಾನ್ ಸಂದರ್ಭವನ್ನು ಲಾಭಕ್ಕೆ ಬಳಸಿಕೊಳ್ಳುವುದು ಉಳ್ಳವರಲ್ಲಿ ರೂಢಿಯಾಗಿ ಬೆಳೆದುಬಿಟ್ಟಿದೆ. ಜಗತ್ತಿನ ಇಷ್ಟೊಂದು ಮುಸ್ಲಿಂ ರಾಷ್ಟ್ರಗಳು ಏಕೆ ಅರಾಜಕ ಸ್ಥಿತಿಯಲ್ಲಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು 'ಮುಸ್ಲಿಂ ಬ್ರದರ್ಹುಡ್'ನ ಉದ್ದೇಶವಾಗಿದ್ದರೆ ಅವರು ತಮ್ಮ ಸಮುದಾಯದ ಉಳ್ಳರ ವರ್ತನೆ ರಂಜಾನ್ ಪವಿತ್ರ ಮಾಸದಲ್ಲಿ ಹೇಗಿರುತ್ತದೆ ಎಂಬುದನ್ನು ಪರಾಮರ್ಶಿಸಬೇಕು. ಆಗ ಕುರಾನ್ ಪ್ರತಿಪಾದಿಸುವ ಮೌಲ್ಯಗಳಾದ ದಯೆ, ದಾನ, ತ್ಯಾಗಗಳನ್ನು ಆಚರಿಸಬೇಕಾದ ಸಂದರ್ಭ. ಆದರೆ ಅದನ್ನು ತಿಂಗಳಿಡಿ ತಮಾಷೆಯಾಗಿ ಆಚರಿಸುವುದು ಅಭ್ಯಾಸವಾಗಿದೆ. ರಂಜಾನ್ನ ಮುಕ್ತಾಯ ಸೂಚಿಸುವ ಈದ್ ಉಲ್ಫಿತರ್ ಎಂದರೆ (ಈದ್ ಆಫ್ ಪಿತ್ರಾ) ದಾನ ಎಂದರ್ಥ. ಪವಿತ್ರ ಕುರಾನ್ನ ನೂರಾರು ಶ್ಲೋಕಗಳು ಸಮುದಾಯದ ಹಿಂದುಳಿದವರಿಗೆ ದಾನ ಮಾಡುವ ಹಾಗೂ ದಯೆ ತೋರಿಸುವ ಪಾಠವನ್ನು ಹೇಳಿವೆ. ಪ್ರಯಾಣ ಹಾಗೂ ಅನಾರೋಗ್ಯದ ಸಂದರ್ಭ ಇದ್ದಾಗ ಉಪವಾಸವನ್ನು ಮುಂದೂಡಬಹುದು ಎಂಬುದನ್ನು ಕುರಾನ್ ಸಮ್ಮತಿಸುತ್ತದೆ. ಆದರೆ ಬೂಟಾಟಿಕೆಯನ್ನು ಅದು ಬೆಂಬಲಿಸುವುದಿಲ್ಲ.
ದಿನಚರಿಯ ಗಡಿಯಾರವನ್ನು ಹಿಂದೆ ಮುಂದೆ ಮಾಡುವ ಮೂಲಕ ಈ ವಿಷಯದಲ್ಲಿ ನಿಯಮ ಪಾಲನೆ ಮಾಡಿದ್ದೇವೆ ಎಂದುಕೊಳ್ಳುವವರೂ ಇದ್ದಾರೆ. ಸಾಯಂಕಾಲದ ಸಮಯ ಉಪವಾಸವನ್ನು ಮುರಿಯುವ ಅವಕಾಶವನ್ನೆ ಬೆಳಗಿನ ತನಕದ ಭೋಜನವಾಗಿಸಿಕೊಳ್ಳುವವರು ಹಲವರು. ದಿನದ ಹೆಚ್ಚು ಸಮಯ ಮಲಗಿದ್ದು ಮಧ್ಯಾಹ್ನದ ನಂತರ ಎದ್ದು ಕುಳಿತರೆ ರಂಜಾನ್ ಆಚರಣೆಗೆ ಮಾಡುವ ದ್ರೋಹವಾಗುತ್ತದೆ. ಹಗಲನ್ನೆ ರಾತ್ರಿಯಾಗಿಸುವ ಜಾಯಮಾನದ ಜಾಣ್ಮೆ ತೋರಿಸುವುದಾದರೆ ವರ್ಷದುದ್ದಕ್ಕೂ ಅಂಥ ಉಪವಾಸ ಆಚರಿಸಬಹುದಲ್ಲವೇ?
ಸಂಪ್ರದಾಯ ಹಾದಿತ್ನಲ್ಲಿ ಪ್ರವಾದಿಗಳು ಹೇಳುತ್ತಾರೆ- 'ಅಬ್ರಾಹಂ ಮಕ್ಕಳಿಗೆ ಮೂರು ಮೂಲಭೂತ ಹಕ್ಕುಗಳಿವೆ. ಆಶ್ರಯಕ್ಕೆ ಮನೆ, ದೇಹವನ್ನು ಮುಚ್ಚುವುದಕ್ಕೆ ಬಟ್ಟೆ ಮತ್ತು ನೀರು-ಆಹಾರ.' ಹಸಿದವರನ್ನು ಸಂತುಷ್ಟಗೊಳಿಸುವುದು ಇಸ್ಲಾಮ್ನ ಕರ್ತವ್ಯ. ಮುಸ್ಲಿಂ ಸಮಾಜ ಮತ್ತು ದೇಶಗಳಲ್ಲಿ ಎಷ್ಟು ಲಕ್ಷ ಮಂದಿ ಊಟಕ್ಕೆ ತತ್ವಾರ ಅನುಭವಿಸುತ್ತಿದ್ದಾರೆ ಎಂಬುದನ್ನು ಲೆಕ್ಕ ಹಾಕಿದರೆ ನಾವು ಮುಖ್ಯ ಮೌಲ್ಯದಿಂದ ಎಷ್ಟು ದೂರ ಸಾಗಿದ್ದೇವೆ ಎಂಬುದು ಅರಿವಾಗುತ್ತದೆ. ರಂಜಾನ್ನ ಪವಿತ್ರ ತಿಂಗಳಲ್ಲಿ ಕುರಾನ್ ಅನ್ನು ಅರ್ಥ ಮಾಡಿಕೊಳ್ಳುವ ಕೆಲಸವಾಗಬೇಕು.
- ಎಂ. ಜೆ. ಅಕ್ಬರ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

