ಕರ್ತವ್ಯ ಪ್ರಜ್ಞೆಯೆ ಆರ್ಥಿಕ ಅಭಿವೃದ್ಧಿಗೆ ನಾಂದಿ
ಆರ್ಥಿಕ ಅಭಿವೃಧ್ಧಿ ಕೇವಲ ಆರ್ಥಿಕ ಘಟಕಗಳ ಮೇಲೆ ಅವಲಂಬಿಸಿರುವುದಾದರೆ ಭಾರತ ಈವೇಳೆಗೇ ನಂ 1. ಸ್ಥಾನ ಅಲಂಕರಿಸುತಿತ್ತು. ಆದರೆ ಆರ್ಥಿಕ ಅಭಿವೃದ್ಧಿ ಒಂದು ಸಂಕೀರ್ಣ ಪದ. ಆರ್ಥಿಕ ಘಟಕಗಳ ಜೊತೆಯಲ್ಲಿ ಸಾಮಾಜಿಕ, ರಾಜಕೀಯ, ಭೌಗೋಳಿಕ ಮತ್ತು ನೈತಿಕ ಘಟಕಗಳು ಸಹಭಾಗಿತ್ವ ವಹಿಸುತ್ತವೆ. ಅದರಲ್ಲು ಕಾರ್ಮಿಕರ ಮನೋಭಾವ ಹಾಗು ಮನೋಬಲಗಳ ಮಹತ್ವ ಹೇಳತೀರದು. ಈ ಮನೋಭಾವದಲ್ಲಿ ಅತಿ ಮುಖ್ಯ ಅಂಶವೆಂದರೆ ಕರ್ತವ್ಯ ಪ್ರಜ್ಞೆ.
ಕರ್ತವ್ಯ ಪ್ರಜ್ಞೆಯೆಂದರೆ ತಾನು ಯಾರಿಗಾಗಿ, ಯಾಕಾಗಿ ಮತ್ತು ಯಾವ ಉದ್ದೇಶಕ್ಕಾಗಿ ದುಡಿಮೆ ಮಾಡುತ್ತಿರುವೆನು ಎಂಬ ಭಾವನೆಗಳು. ಹೊರದೇಶಗಳಲ್ಲಿ ದುಡಿಯುವ ಪ್ರತಿ ಶ್ರಮಿಕನು ಇಂತಹ ಪ್ರಜ್ಞೆಯನ್ನು ದುಡಿಮೆಗೆ ಸೇರುವ ಮುನ್ನವೆ ರೂಡಿಸಿಕೊಂಡಿರುತ್ತಾನೆ. ಅದೇನೆಂದರೆ ತನ್ನ ದುಡಿಮೆ ತನ್ನ ಸಂಸಾರಕಷ್ಟೆ ಅಲ್ಲ, ಅದು ದೇಶದ ಅಭಿವೃದ್ಧಿಗಾಗಿಯು ಎಂದು. ನಮ್ಮ ದೇಶದ ಶೇಕಡಾ 80 ರಷ್ಟು ಕಾರ್ಮಿಕರು ತಿಳಿದುಕೊಂಡಿದ್ದೇನೆಂದರೆ 'ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತುಹಿಟ್ಟಿಗಾಗಿ' ಎಂದು.
ಕರ್ತವ್ಯ ಪ್ರಜ್ಞೆ ಉದ್ದೀಪನಗೊಳ್ಳಲು ಬೇಕಾದ ಸುಗುಣಗಳೆಂದರೆ ದುಡಿಮೆಯಲ್ಲಿ ಭಕ್ತಿ, ದೇಶಪ್ರೇಮ, ಸಮಯಪ್ರಜ್ಞೆ, ಸೇವಾಭಾವನೆ, ಕೃತಜ್ಞತಾಭಾವ, ದುಡಿಯುವ ಛಲ ಮತ್ತು ಬಲ. ಹಾಗಿದ್ದರೆ ಯಾವುದೆ ವ್ಯಕ್ತಿ ಕೆಲಸಗಳ್ಳನಾಗಲಾರ. ಇದರಿಂದಾಗಿ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಿ, ಉತ್ಪಾದನೆಗೊಳ್ಳುವ ವಸ್ತು ಹಾಗೂ ಸೇವೆಗಳ ಮೊತ್ತವು ಇಮ್ಮಡಿಯಾಗುವುದು. ಇದರಿಂದಾಗಿ ರಾಷ್ಟೀಯ ಆದಾಯವು ಹೆಚ್ಚಿ ಆರ್ಥಿಕ ಅಭಿವೃದ್ಧಿ ದ್ವಿಗುಣಗೊಳ್ಳುವುದು.
ನಮ್ಮ ಕಾರ್ಮಿಕರಲ್ಲನೇಕರಲ್ಲಿ ಕರ್ತವ್ಯ ಪ್ರಜ್ಞೆ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಬಹಳಷ್ಟು ಕಾರ್ಮಿಕರಿಗೆ ರಜೆಗಳು ಬಂದ ಹಾಗೆ ಖುಷಿ ಎನಿಸುತ್ತದೆ. ಅದರಂತೆ ಶನಿವಾರ ರಜೆ ಇದ್ದರೆ ಶುಕ್ರವಾರ ಹಾಗು ಸೋಮವಾರ ರಜೆ ಹಾಕಿ ಕಾಲಹರಣಮಾಡುವವರು ಇದ್ದಾರೆ. ವರ್ಷದ ಕೊನೆಯಲ್ಲಿ ಇರುವ ಸಾಂದರ್ಭಿಕ ರಜೆಯನ್ನು ಸುಳ್ಳು ನೆಪ ಹೇಳಿ ಖರ್ಚು ಮಾಡುವರು. ಶಿಕ್ಷಕರಾದರೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಈ ಹೊತ್ತು ಕ್ಲಾಸ್ ಬೇಡ ನಾಳೆ ನೋಡುವ ಎಂದು ಬಿಡುವುದು ಉಂಟು.
ಸಮಯ ಪ್ರಜ್ಞೆ ಕೊರತೆಯೂ ಇದಕ್ಕೆ ಹೊಂದಿಕೊಂಡಿದೆ. ಕಚೇರಿಯ ವೇಳೆ ಮುಂಜಾನೆ 10.30 ಕ್ಕೆ ಆರಂಭವಾದರೂ ಕೆಲವರು 11 ಗಂಟೆಗೆ ಡ್ಯೂಟಿಗೆ ಬರುವರು. ಹಾಗೇನೆ ಕಚೇರಿಯ ವೇಳೆ 5.30ಕ್ಕೆ ಮುಗಿಯುವುದಿದ್ದರೆ 4.30ಕ್ಕೆ ಅಥವಾ 5 ಘಂಟೆಗೆ ಕಚೇರಿ ಬಿಟ್ಟು ಹೊರಡುವರು. ಅದರಂತೆ ಕೆಲಸದ ವೇಳೆಯಲ್ಲಿ ತಮ್ಮ ವಿಭಾಗದ ಕಡತಗಳನ್ನು ವಿಲೇವಾರಿ ಮಾಡುವ ಬದಲು ಉಳಿದ ಕೆಲಸಗಾರರೊಡನೆ ಹರಟೆಯಲ್ಲಿ ನಿರತರಾಗುವರು. ಇನ್ನು ಕೆಲವರು ಕ್ಯಾಂಟಿನ್ಗೆ ಹೋಗಿ ಹರಟೆ ಹೊಡೆಯುತ್ತ ಕೂಡುವರು. 'ಸರಕಾರಿ ಕೆಲಸ ದೇವರ ಕೆಲಸ' ಎಂದು ಹೇಳಿ ನಮ್ಮ ಅನೇಕ ಕಾರ್ಮಿಕರು ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿ ಕರ್ತವ್ಯ ಲೋಪವನ್ನು ಮನ್ನಿಸಮ್ಮ ಎಂದು ಬೇಡಿಕೊಳ್ಳುವರು. 1945ರಲ್ಲಿ ಸಂಪೂರ್ಣವಾಗಿ ನಾಶಗೊಂಡಿದ್ದ ಜಪಾನ್ ಕೇವಲ 25 ವರ್ಷಗಳಲ್ಲಿ ಪುನಶ್ಚೇತನಗೊಳ್ಳಲು ಆ ದೇಶದ ಕಾರ್ಮಿಕರ ಕರ್ತವ್ಯ ಪ್ರಜ್ಞೆಯೆ ಕಾರಣ.
ಜಪಾನ್ನಲ್ಲೂ ಕಾರ್ಮಿಕರು ಹರತಾಳ ಅಥವಾ ಬಂದ್ಗೆ ಕರೆ ನೀಡುವರು. ಆದರೆ ಆ ದಿವಸ ಅಲ್ಲಿನ ಕಾರ್ಮಿಕರು ಕಪ್ಪು ಬ್ಯಾಡ್ಜ್ ಧರಿಸಿ 8 ಗಂಟೆಯ ಬದಲು 10 ಗಂಟೆ ಕೆಲಸ ನಿರ್ವಹಿಸುವರು. ಆ ಸಮಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಯಾವುದೆ ತರಹದ ಹಾನಿ ಆಗದಂತೆ ಮತ್ತು ಎಲ್ಲಿಯು ಹಿಂಸಾಚಾರವಾಗದೆ ಮುಗ್ಧ ಜನರು ಸಾಯದಂತೆ ಕಾಳಜಿ ವಹಿಸುವರು. ನಮ್ಮ ದೇಶದಲ್ಲಿ ಬಂದ್ ಎಂದರೆ ಬಹಳಷ್ಟು ಕೆಲಸಗಾರರಿಗೆ ಮಜಾ. ಅಷ್ಟೆ ಅಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ಕಲ್ಲಿನೇಟು ನೀಡಿ ತಾವು ಸರಕಾರದ ಸ್ವತ್ತುಗಳನ್ನು ನಾಶ ಮಾಡಿದ ಬಗ್ಗೆ ಹೆಮ್ಮೆ ಪಡುವುದು.
ಆದರೆ ಹಾಗೆ ಮಾಡುವವರಿಗೆ ಸರಕಾರದ ಸೊತ್ತುಗಳು ನಮ್ಮದೆ ಎಂಬ ಪ್ರಜ್ಞೆ ಇರುವುದಿಲ್ಲ. ಹಾಗೇನೆ ನಮ್ಮ ಕಾರ್ಮಿಕರಲ್ಲನೇಕರಲ್ಲಿ ತಮಗೆ ಕೆಲಸ ನೀಡಿ ಜೀವನಾಧಾರಕ್ಕೆ ಅನುವು ಮಾಡಿಕೊಟ್ಟ ಉದ್ಯೋಗಪತಿಯ ಕುರಿತು ಕೃತಜ್ಞತಾ ಭಾವನೆಯು ಕೂಡ ಇರುವುದಿಲ್ಲ. ಅಷ್ಟೆ ಅಲ್ಲ ದುಡಿಯುವ ಛಲ ಮತ್ತು ಸೇವಾಮನೋಭಾವ ಕುಂಟಿತಗೊಳ್ಳುತ್ತಿದೆ. ನಿಜವಾಗಿ ಹೇಳುವುದಾದರೆ ಕರ್ತವ್ಯ ಪ್ರಜ್ಞೆ ಕಳೆದುಕೊಂಡ ನಮ್ಮ ಅನೇಕ ಕಾರ್ಮಿಕರು ಪಡೆಯುತ್ತಿರುವ ಸಂಬಳ ಇಂದು ಅವರು ನೀಡುತ್ತಿರುವ ಸೇವೆಗಿಂತ ಎರಡು ಪಟ್ಟು ಹೆಚ್ಚಿದೆ. ಅಂದರೆ ಅತಿಶಯೋಕ್ತಿಯಾಗಲಾರದು. ಅರ್ಥಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ ಶ್ರಮಿಕರ ಅಂಚಿನಮಟ್ಟದ ಉತ್ಪಾದನೆಗೆ ಹೋಲಿಸಿದರೆ ಅವರು ಪಡೆಯುತ್ತಿರುವ ವೇತನ ಹೆಚ್ಚಿಗೆ ಇರುವುದು ಕಂಡು ಬಂದಿದೆ. ವಿದೇಶಗಳಲ್ಲಿ ಶ್ರಮಿಕರು ನೀಡುವ ಸೇವೆಯು ಅವರು ಪಡೆಯುತ್ತಿರುವ ವೇತನಕ್ಕಿಂತ ಹೆಚ್ಚಿಗೆ ಇರುವುದು ಕಂಡು ಬಂದಿದೆ. ಇದರಿಂದಾಗಿ ಆ ದೇಶಗಳು ಇಂದು ಅಭಿವೃಧ್ಧಿಯಲ್ಲಿ ಮುಂಚೂಣಿಯಲ್ಲಿವೆ. ಅದಕ್ಕೆ ಕಾರಣ ಆ ದೇಶದ ಕಾರ್ಮಿಕರಲ್ಲಿ ಹೆಮ್ಮರವಾಗಿ ಬೆಳೆದು ನಿಂತ ಕರ್ತವ್ಯ ಪ್ರಜ್ಞೆ.
ನಮ್ಮ ದೇಶದ ಖಾಸಗಿರಂಗಕ್ಕೆ ಹೋಲಿಸಿದಲ್ಲಿ ಈ ಒಂದು ಪ್ರಜ್ಞೆ ಸರಕಾರಿ ರಂಗದ ಉದ್ದಿಮೆಗಳಲ್ಲಿ ಬಹಳ ಕಡಿಮೆ. ಕಾರಣ ಖಾಸಗಿ ರಂಗದಲ್ಲಿ ಆಡಳಿತ ಅಧಿಕಾರಿಗಳು ತಮ್ಮ ಕಾರ್ಮಿಕರಿಂದ ಕೆಲಸವನ್ನು ತೆಗೆದುಕೊಳ್ಳುತ್ತಾರೆ. ಅದರೆ ನಮ್ಮ ಸರಕಾರಿ ರಂಗದಲ್ಲಿ ಬಹಳಷ್ಟು ಅಧಿಕಾರಿಗಳು ತಾವೇ ಕರ್ತವ್ಯಭ್ರಷ್ಟರಾಗಿರುವುದರಿಂದ ತಮ್ಮ ಸಹದ್ಯೋಗಿಗಳನ್ನು ತಿದ್ದಿ ಹೇಳುವ ನೈತಿಕ ಹಕ್ಕನ್ನು ಕಳೆದುಕೊಂಡಿರುವರು. ಎಲ್ಲಿಯವರೆಗೆ ಸರಕಾರ ತನ್ನ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಕಾರ್ಮಿಕರಲ್ಲಿ ಕರ್ತವ್ಯ ಪ್ರಜ್ಞೆ ಉದ್ದೀಪನಗೊಳಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಆಮೆಗತಿಯ ಅಭಿವೃದ್ಧಿ ಮುಂದುವರೆಯುವುದು.
- ಡಾ. ಎಸ್.ಡಿ.ನಾಯ್ಕ,
ಕಾರವಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

