ಅಮೆರಿಕದವರು ಭಾರತದ ಇಂಟರ್ನೆಟ್ ಮತ್ತು ಟೆಲಿಫೋನ್ ದಾಖಲೆಗಳನ್ನೆಲ್ಲ ಸೋಸುತ್ತಿದ್ದಾರೆಂಬುದು ರೋಚಕ ಕಂಪನವೊಂದನ್ನು ದಯಪಾಲಿಸುವ ಇತ್ತೀಚಿನ ಸುದ್ದಿ. ಭಾರತದ ಖಾಸಗಿಕೋಶವನ್ನು ಅವರು ಜಾಲಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸಿಟ್ಟಾಗಬೇಕೊ ಅಥವಾ 'ಎಷ್ಟೆಂದರೂ ಈ ಅಮೆರಿಕದವ್ರು ಶಾಣ್ಯಾ ಕಣ್ರಿ' ಅಂತ ಬೆರಗುಗೊಳ್ಳಬೇಕೊ ಅನ್ನೋ ಸಂದಿಗ್ಧದಲ್ಲಿ ನಾವಿದ್ದೇವೆ. 'ಗಾರ್ಡಿಯನ್' ಪತ್ರಿಕೆಯ ಪ್ರಕಾರ ಇದು ಅಮೆರಿಕದ ಗೂಢಚರ ಕಾರ್ಯಕ್ರಮದ ಒಂದು ಭಾಗ. ಪತ್ರಿಕೆಯ ವರದಿ ಹೇಳುವಂತೆ, ಅಮೆರಿಕವು ಈ ಬಗೆಯ ಸೈಬರ್ ಕನ್ನ ಹಾಕಿರುವ ಐದನೆಯ ಆದ್ಯತೆಯ ದೇಶ ಭಾರತ. ತಿಂಗಳ ಅವಧಿಯಲ್ಲೇ ಭಾರತದ ಕಂಪ್ಯೂಟರ್ಗಳು ಮತ್ತು ಡಾಟಾ ನೆಟ್ವರ್ಕ್ನಿಂದ 6.3 ಬಿಲಿಯನ್ ಮಾಹಿತಿ ತುಣುಕುಗಳನ್ನು ಎತ್ತಿಕೊಳ್ಳಲಾಗಿದೆ ಅನ್ನುತ್ತದೆ ವರದಿ. 'ಹೀಗೆಲ್ಲ ಆಗಿರುವುದೆ ಹೌದಾದರೆ ಅದು ಗಂಭೀರ ವಿಷಯ. ರಾಷ್ಟ್ರೀಯ ಭದ್ರತಾ ಸಭೆಯು ರೂಪಿಸಿರುವ ಸೈಬರ್ ಸೆಕ್ಯುರಿಟಿ ಡೈಲಾಗ್ನ ವೇದಿಕೆಯಲ್ಲಿ ಇದನ್ನು ನಾವು ವಿವರವಾಗಿ ಚರ್ಚಿಸುತ್ತೇವೆ' ಎಂದಿರುವುದನ್ನು ಬಿಟ್ಟರೆ ಭಾರತ ಈ ಬಗ್ಗೆ ಹೆಚ್ಚೇನೂ ಹೇಳಿಲ್ಲ. ಈ ಸರ್ಕಾರದಿಂದ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಇರಲಿ, ಆದರೆ ಜಗತ್ತಿನ ಗೂಢಚಾರಿಕೆಯ ಹೆಜ್ಜೆಗಳು ಹಿಡಿದಿರುವ ದಿಕ್ಕು ಯಾವುದು ಎಂಬ ಸುಳಿವನ್ನು ಈ ವಿದ್ಯಮಾನ ಜಾಹೀರಾಗಿಸುತ್ತದೆ. ಅಂತೆಯೇ 2020ರ ವೇಳೆಗೆ ಸೂಪರ್ಪವರ್ ಆಗುವ ಕನಸು ಹೊತ್ತ ಭಾರತಕ್ಕೆ ಈ ದಾರಿ ತನ್ನದಾಗಿಸಿಕೊಳ್ಳುವ ಛಾತಿ ಎಷ್ಟರಮಟ್ಟಿಗೆ ಇದೆ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳುವುದಕ್ಕೆ ನಮ್ಮೆದುರು ಈ ಹೊತ್ತಿನಲ್ಲಿ ಚರ್ಚೆಯಾಗುತ್ತಿರುವ ಎರಡು ಸಂಗತಿಗಳು ನೆರವಾಗುತ್ತವೆ.
ಪ್ರಕರಣ ಒಂದು: ಬೋಧಗಯಾವನ್ನು ಗುರಿ ಮಾಡಿಕೊಂಡು ಉಗ್ರರು ದಾಳಿ ನಡೆಸುತ್ತಾರೆ ಎಂಬ ಬಗ್ಗೆ 'ಇಂಟೆಲಿಜೆನ್ಸ್ ಬ್ಯೂರೊ' (ಐಬಿ) ಮೊದಲೇ ಎಚ್ಚರಿಸಿತ್ತು. ಅಷ್ಟಾಗಿಯೂ ಅಲ್ಲಿ ಸೂಕ್ತ ಭದ್ರತಾ ಕ್ರಮ ಕೈಗೊಂಡಿರಲಿಲ್ಲ ಎಂದಿತು ಒಂದು ವರದಿ. 'ದಾಳಿ ಸಾಧ್ಯತೆ ಬಗ್ಗೆ ಐಬಿ ಎಚ್ಚರಿಕೆ ನೀಡಿದ್ದು ಹೌದಾದರೂ ಅದರಲ್ಲಿ ನಿಖರತೆ ಇರಲಿಲ್ಲ' ಎಂದು ಆಡಳಿತ ವ್ಯವಸ್ಥೆ ಪಿಸುಗುಟ್ಟಿತು.
ಪ್ರಕರಣ ಎರಡು: ಉಗ್ರ ಸಂಘಟನೆಗೆ ಸೇರಿದ ಇಶ್ರತ್ ಜಹಾನ್ ಮತ್ತು ಆಕೆಯ ಸಹಚರರನ್ನು 2004ರಲ್ಲಿ ಗುರಿಯಾಗಿಸಿದ ಎನ್ಕೌಂಟರ್ ನಕಲಿಯಾಗಿತ್ತು ಎಂದು ಇಷ್ಟು ದಿನ ಬುದ್ಧಿಜೀವಿಗಳು ಬೊಬ್ಬೆ ಹೊಡೆದುಕೊಂಡಿದ್ದರು. ಈಗ ಸುಪ್ರೀಂಕೋರ್ಟ್ನಲ್ಲಿ ಸಿಬಿಐ ಸಹ ಹಾಗೆಂದೇ ಅಫಿಡವಿಟ್ ಸಲ್ಲಿಸಿದೆ. ಇದು ನಡೆದಿದ್ದು ಇಂಟೆಲಿಜೆನ್ಸ್ ಬ್ಯೂರೊ ನೀಡಿದ ಮಾಹಿತಿಯ ಆಧಾರದಲ್ಲಿ ಗುಜರಾತ್ನ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ.
ಬೋಧಗಯಾದ ದಾಳಿಯಲ್ಲಿ ಐಬಿ ಎಚ್ಚರಿಕೆ ಪರಿಗಣಿಸಲಿಲ್ಲ ಎಂದು ಟೀಕಿಸುತ್ತೇವೆ. ಇಶ್ರತ್ ಪ್ರಕರಣದಲ್ಲಿ ಐಬಿ ಮಾಹಿತಿ ಆಧರಿಸಿ ಕಾರ್ಯಾಚರಣೆ ಮಾಡಿದ್ದಕ್ಕೆ ಪೊಲೀಸರು ಮತ್ತು ಐಬಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಿದೆ. ಇದೆಂಥ ವೈರುಧ್ಯ?
ಲಷ್ಕರೆ ತಯ್ಬಾವೇ ಇಶ್ರತ್ ತನ್ನ ಸದಸ್ಯೆ ಆಗಿದ್ದಳು ಎಂದು ಹೇಳಿದ ಮೇಲೆ ಆಕೆ ಮುಗ್ಧೆ ಎಂದು ನಿರೂಪಿಸುವ ಪ್ರಯತ್ನಗಳು ಹಳ್ಳ ಹಿಡಿದವು. ಈಗ ಚರ್ಚೆಯಾಗುತ್ತಿರುವುದು ಆಕೆಯ ಸಾಚಾತನವಲ್ಲ. ಬದಲಿಗೆ ಆಕೆಯನ್ನು ಕೊಂದ ರೀತಿ ಸರಿಯಿರಲಿಲ್ಲ ಅನ್ನೋದು! ಸಿಬಿಐ ಮೂಲಕ ಇಷ್ಟೆಲ್ಲ ನಾಟಕವನ್ನಾಡುತ್ತಿರುವ ಕಾಂಗ್ರೆಸ್ಗೆ ಇಲ್ಲಿರುವುದು ಕಾನೂನು ಪಾಲನೆಯ, ದೇಶೋದ್ಧಾರದ ಯಾವ ಘನಂದಾರಿ ಉದ್ದೇಶವೂ ಅಲ್ಲ. ಇಶ್ರತ್ ಮತ್ತಾಕೆಯ ಸಹಚರರು ಉಗ್ರರು ಎಂದಾದ ಮೇಲೆ ಅವರನ್ನು ಹೊಸಕಿ ಬಿಸಾಕದೇ ಅನ್ಯಮಾರ್ಗವೇನೂ ಇರಲಿಲ್ಲ ಎಂಬುದು ದೇಶವನ್ನು ಪ್ರೀತಿಸುವ ಯಾರಾದರೂ ಒಪ್ಪುವ ಮಾತು. ಎನ್ಕೌಂಟರ್ ಅಸಲಿಯಲ್ಲ ಎಂಬುದೇ ಈ ಮಟ್ಟಿಗಿನ ಕಾಳಜಿಗೆ ಕಾರಣವಾಗುತ್ತದೆ ಎಂದಾದರೆ ಈವರೆಗಿನ ಎಲ್ಲ ಪೊಲೀಸ್ ಎನ್ಕೌಂಟರ್ಗಳೂ ತನಿಖೆಯಾಗಬೇಕು. ಆದರೆ ಇಲ್ಲಿರುವುದು ಗುಜರಾತ್ ನೆಲದಲ್ಲಿ ಆದ ಎನ್ಕೌಂಟರ್ ಅನ್ನು ಬಳಸಿಕೊಂಡು ನರೇಂದ್ರ ಮೋದಿಯವರನ್ನು ಹಣಿಯಬೇಕು ಎಂಬ ಉತ್ಸಾಹ ಮಾತ್ರ. ಈ ರಾಜಕೀಯ ಆಟದ ಪರಿಣಾಮವಾಗಿ ಇಂಟೆಲಿಜೆನ್ಸ್ ಬ್ಯೂರೊದ ಸ್ಪೆಷಲ್ ಡೈರೆಕ್ಟರ್ ರಾಜಿಂದರ್ ಕುಮಾರ್ ಸೇರಿದಂತೆ ಐಬಿಯ ಹಲವು ಅಧಿಕಾರಿಗಳು ಕಟಕಟೆಯಲ್ಲಿ ನಿಲ್ಲಬೇಕಿದೆ.
ಈ ಹಿನ್ನೆಲೆಯಲ್ಲಿ ಭಾರತದ ಇಂಟೆಲಿಜೆನ್ಸ್ ವ್ಯವಸ್ಥೆ ಸಾಗಬಹುದಾದ ದಾರಿ ಯೋಚಿಸುವುದಾದರೆ... ಗುಪ್ತಚರ ಮಾಹಿತಿ ಕಲೆಹಾಕುವ ಬಗ್ಗೆ ಒಬ್ಬ ಅಧಿಕಾರಿ ಯಾಕಾದರೂ ತಲೆ ಕೆಡಿಸಿಕೊಳ್ಳಬೇಕು? ತನ್ನ ಮಾಹಿತಿಯ ಆಧಾರದ ಮೇಲೆ ಭಯೋತ್ಪಾದಕನನ್ನು ಹೊಡೆದು ಹಾಕಿದರೂ ನಂತರ ಒಂದು ದಿನ ಅದಕ್ಕೆ ವಿವರಣೆ ಕೊಡಬೇಕಾಗಿ ಬರುತ್ತದೆ ಅಂತಾದಾಗ ಆತ ಯಾವ ಭಾಗ್ಯಕ್ಕಾಗಿ ಕರ್ತವ್ಯನಿಷ್ಠೆ ತೋರಬೇಕು?
ದೇಶದ ಆಂತರಿಕ ವಿಷಯಗಳ ನಿಗಾ ವಹಿಸುವ ಐಬಿ ಇದ್ದಿರಬಹುದು, ವಿದೇಶಿ ಬೇಹುಗಾರಿಕೆಯಲ್ಲಿ ತೊಡಗಿಕೊಂಡಿರುವ 'ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್' (ರಾ) ಇರಬಹುದು, ಒಟ್ಟಾರೆ ಗೂಢಚರ ಚಟುವಟಿಕೆ ಬಗ್ಗೆ ಜನಸಾಮಾನ್ಯರಿಗೆ 'ಧಾಂ ಧೂಂ' ಎಂಬಂಥ ಅತಿಮಾನುಷ ಕಲ್ಪನೆಗಳಿವೆ. ವಾಸ್ತವದಲ್ಲಿ ಬೇಹುಗಾರಿಕೆ ಎಂಬುದು ಸಿನಿಮಾಗಳಲ್ಲಿ ತೋರಿಸುವಂತೆ ಶರ್ಟ್ಬಿಚ್ಚಿ ಫೈಟ್ ಮಾಡಿ, ಡಜನ್ ಮಂದಿಯನ್ನು ಡಮ್ಮೆನಿಸಿ ಬರುವಂಥದ್ದಲ್ಲ. ಭದ್ರತೆಗೆ ಎದುರಾದ ಆತಂಕದ ನೂರೆಂಟು ಜಡಕುಗಳನ್ನು ಹರವಿಕೊಂಡು ಅತ್ಯಂತ ತಾಳ್ಮೆಯಿಂದ ಸಿಕ್ಕುಗಳನ್ನು ಬಿಡಿಸುವ ತಪಸ್ಸಿನಂಥ ಕೆಲಸಕ್ಕೆ ಇಂಟೆಲಿಜೆನ್ಸ್ ಎನ್ನುತ್ತಾರೆ. ಇವರು ವರ್ಷಾನುಗಟ್ಟಲೆ ಕಷ್ಟಪಟ್ಟು ಅಪರಾಧ ಮತ್ತು ಆತಂಕವಾದದ ಜಗತ್ತಿನೊಳಗೆ ತಮ್ಮ ಮಾಹಿತಿ ಮೂಲಗಳನ್ನು ಹುಡುಕಿಕೊಳ್ಳುತ್ತಾರೆ. ಬೇರೆ ಬೇರೆ ಪ್ರದೇಶಗಳಲ್ಲಿ, ಹತ್ತೆಂಟು ದಿನಾಂಕಗಳಲ್ಲಿ ಹರಡಿಕೊಂಡ ಯಾವ್ಯಾವುದೋ ಘಟನೆಗಳ ಚುಕ್ಕಿಗಳನ್ನು ಹರವಿಟ್ಟುಕೊಂಡು ತರ್ಕದ ರಂಗೋಲಿ ಬಿಡಿಸಿ, ಆ ಎಲ್ಲ ವಿದ್ಯಮಾನಗಳಲ್ಲಿ ಅಂತರ್ಗತವಾಗಿದ್ದ ವ್ಯೂಹವನ್ನು ಬಿಡಿಸುತ್ತಾರೆ. ಹಿಂದಾದ ಕೃತ್ಯಕ್ಕೆ ಕಾರಣರಾದವರನ್ನು ಹುಡುಕಿ ಕೊಲ್ಲುವುದೇ ಆಗಲಿ, ಮುಂದಾಗುವ ವಿಧ್ವಂಸವನ್ನು ತಡೆಯಲು ಭದ್ರತಾ ಏಜೆನ್ಸಿಗಳು ಒಂದಿಷ್ಟು ಮಂದಿಯನ್ನು ಬಂಧಿಸುವ ಕಾರ್ಯವೇ ಆಗಿರಲಿ, ಅವೆಲ್ಲದರ ಹಿಂದೆ ಇಂಟೆಲಿಜೆನ್ಸ್ನವರ ಅಗಾಧ ಪರಿಶ್ರಮ- ಬೆವರಿನ ಹನಿಗಳಿರುತ್ತವೆ. ಬೋಧಗಯಾದ ಬಾಂಬ್ಸ್ಫೋಟ ಪ್ರಕರಣವನ್ನೇ ಮತ್ತೊಂದು ಮಗ್ಗುಲಿನಲ್ಲಿ ನೋಡುವುದಾದರೆ, ನಮ್ಮ ಇಂಟೆಲಿಜೆನ್ಸ್ ವಿಭಾಗ ಚುರುಕಾಗಿದ್ದರಿಂದಲೇ ಉಗ್ರರಿಗೆ ಅಂದುಕೊಂಡಷ್ಟು ತೀವ್ರತೆಯಲ್ಲಿ ಬಾಂಬ್ಸ್ಫೋಟವನ್ನು ನಡೆಸುವುದಕ್ಕೆ ಆಗಲಿಲ್ಲ ಎಂಬ ಸಾಧ್ಯತೆಯೂ ಮಿಂಚುತ್ತದೆ. ಗುಪ್ತಚರ ಮಾಹಿತಿ ಕಲೆಹಾಕುವ ತ್ರಾಸದಾಯಕ ಕೆಲಸದಲ್ಲಿ ಆದ ಲೋಪಗಳಿಂದ ತೀರ ವಿರಳ ಸಂದರ್ಭಗಳಲ್ಲಿ ತಪ್ಪು ಗುರಿಗೆ 'ಸನ್ನಿವೇಶದ ಬಲಿ'ಗಳು ನಿರ್ಮಾಣವಾದ ಪ್ರಸಂಗವೂ ಇದ್ದಿರಬಹುದು. ಹಾಗೆಂದು, ನಾವೆಲ್ಲ ನಿತ್ಯಜೀವಿತದ ಅಸಂಖ್ಯ ಆಕರ್ಷಣೆಗಳಲ್ಲಿ ಹಾಯಾಗಿ ಜೀಕಿಕೊಂಡಿದ್ದೇವೆ ಎಂದರೆ, ಅದಕ್ಕೆ ಇಂಟೆಲಿಜೆನ್ಸ್ ಸಮುದಾಯದ ಸದ್ದಿರದ ಕೆಲಸದ ಫಲವಾಗಿ ಅವೆಷ್ಟೊ ವಿನಾಶಕಾರಿ ದಾಳಿಗಳು ತಪ್ಪಿರುವುದೇ ಕಾರಣ. ಅನಾಮಧೇಯತೆಯೇ ಇಂಟೆಲಿಜೆನ್ಸ್ ಸಮುದಾಯದ ಅನಿವಾರ್ಯ ಚಹರೆಯಾಗಿರುವುದರಿಂದ, ಆಪರೇಷನ್ ಸಕ್ಸಸ್ ಎಂದಾದಾಗ ಇವರ್ಯಾರೂ ಶ್ರೇಯಸ್ಸಿನ ಪಾಲು ಪಡೆಯುವುದಕ್ಕೆ ವೇದಿಕೆ ಹತ್ತುವುದಿಲ್ಲ. ಸರ್ಕಾರಿ ಸಮ್ಮಾನಗಳು, ಮಾಧ್ಯಮದ ಚಿಂತಕರ ಚಾವಡಿಯಲ್ಲಿ ಹೀರೊಗಿರಿ ತೋರುವ ಅವಕಾಶ ಇವ್ಯಾವುದರ ಕೃತಜ್ಞತಾ ತೋರ್ಪಡಿಕೆಗಳೂ ಅವರಿಗೆ ಬೇಡ. ಆದರೆ ಉಗ್ರರನ್ನು ಕೊಲ್ಲುವುದಕ್ಕೆ ನೆರವಾಗಿದ್ದಕ್ಕೂ ಅವರನ್ನೆಲ್ಲ ಕಟಕಟೆಗೆ ತಂದು, ಅವರೆದು ಕಾನೂನು- ಮಾನವ ಹಕ್ಕುಗಳ ಭಾಷಣ ಬಿಗಿಯುವಷ್ಟು ಕೃತಘ್ನರು ನಾವು ಎಂದಾದರೆ, ನಮ್ಮ ಜೀವ ಕಾಪಾಡುವ ಹೊಣೆಯನ್ನು ಅವರೇಕೆ ಹೊರಬೇಕು? ಇಷ್ಟಕ್ಕೂ ಸರ್ಕಾರದ ಸಂಬಳ ಪಡೆಯುವುದಕ್ಕೆ ಕೆಲಸ ಮಾಡಲೇಬೇಕು ಎಂಬ ಪರಿಸ್ಥಿತಿಯಂತೂ ನಮ್ಮಲ್ಲಿಲ್ಲ! ಮೈಮೇಲೆ ರಿಸ್ಕ್ ಎಳೆದುಕೊಂಡು ನಿವೃತ್ತಿ ಸಮಯದಲ್ಲಿ ನ್ಯಾಯಾಲಯಕ್ಕೆ ಅಲೆಯುವುದಕ್ಕಿಂತ ಸುಮ್ಮನೇ ಖುರ್ಚಿ ಬಿಸಿಮಾಡಿ ಪಿಂಚಣಿ ತೆಗೆದುಕೊಂಡು ಎದ್ದುಹೋಗುವುದು ಒಳಿತಲ್ಲವೇ?
ಅಮೆರಿಕ, ಚೀನಾ, ಇಸ್ರೇಲ್ನಂಥ ರಾಷ್ಟ್ರಗಳ ಮಿಲಿಟರಿ ಬಲವನ್ನು ಅಚ್ಚರಿಯಿಂದ ಕೊಂಡಾಡುತ್ತೇವೆ. ಈ ಸೇನೆಗಳ ಯೋಧರು ಕಾರ್ಯಾಚರಣೆಯೊಂದಕ್ಕೆ ಕೈ ಹಾಕಿದರೆ ವಿಜಯದೊಂದಿಗೇ ಹಿಂತಿರುಗುವುದು ಎಂಬುದು ನಮಗೆಲ್ಲ ಮನದಟ್ಟಾಗಿಬಿಟ್ಟಿದೆ. ಗಮನಿಸಬೇಕಾದ ಅಂಶವೆಂದರೆ ಅಂಥ ಎಲ್ಲ ಮಿಲಿಟರಿ ವಿಕ್ರಮಗಳು ನಿಂತಿರುವುದು ಒಂದು ಮಜಬೂತಾದ ಇಂಟೆಲಿಜೆನ್ಸ್ ಅಡಿಗಲ್ಲಿನ ಮೇಲೆ. ಅದೊಂದು ರಾತ್ರಿ ಅಮೆರಿಕನ್ ಪಡೆ ಪಾಕಿಸ್ತಾನ ನೆಲದಲ್ಲಿ, ಅವರ ಮಿಲಿಟರಿ ನೆಲೆಯ ಸನಿಹದಲ್ಲೇ ಇದ್ದ ಅಬೋಟಾಬಾದ್ನ ಮನೆಗೆ ನುಗ್ಗಿ ಒಸಾಮಾ ಬಿನ್ ಲಾಡೆನ್ನನ್ನು ಕೊಂದು ಬಂದಾಗ ಜಗತ್ತು ಅಬ್ಬಬ್ಬಾ ಎಂದಿತ್ತು. 2001ರಲ್ಲಿ ವಿಶ್ವಗೋಪುರ ಕಟ್ಟಡದ ಮೇಲೆ ಆದ ದಾಳಿಯ ನಂತರ ಅದರ ರೂವಾರಿ ಲಾಡೆನ್ನನ್ನು ಸಂಹರಿಸುವುದಕ್ಕೆ ಅಮೆರಿಕ ದಶಕದಷ್ಟು ಕಾಲವನ್ನು ತೆಗೆದುಕೊಂಡಿತು. ಆದರೆ ಆ ಅವಧಿಯುದ್ದಕ್ಕೂ ಒಸಾಮಾನನ್ನು ತಲೆ ಮರೆಸಿಕೊಳ್ಳುವಂತೆ ಮಾಡಿ, ಸಾವಿನ ಆಗಮನ ಎದುರು ನೋಡುವ ಪರಿಸ್ಥಿತಿ ನಿರ್ಮಿಸಿ ಬಡಿದು ಒಗೆದಿದ್ದರ ಹಿಂದಿರುವುದು ಬಂದೂಕಿನ ಆರ್ಭಟವಲ್ಲ. ಆ ಡಮಾಡಮ್ಗಳು ಕ್ಲೈಮಾಕ್ಸ್ನ ದೃಶ್ಯಗಳಷ್ಟೆ. ಇದಕ್ಕೆ ಭೂಮಿಕೆಯನ್ನು ಒದಗಿಸಿದ್ದು ಅಮೆರಿಕದ ದೈತ್ಯ ಬೇಹುಗಾರಿಕೆ ಸಂಸ್ಥೆ ಸಿಐಎ.
ಇತಿಹಾಸದ ಈ ಅತಿದೊಡ್ಡ ಮಾನವ ಶಿಕಾರಿ ನಡೆದಿದ್ದು ಹೇಗೆ, ಅದರಲ್ಲಿ ಗುಪ್ತಚರ ಮಾಹಿತಿ ವಹಿಸಿದ ಪಾತ್ರವೇನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಆಸಕ್ತಿ ಇದ್ದರೆ 2012ರಲ್ಲಿ ತೆರೆಕಂಡ 'ಜಿರೋ ಡಾರ್ಕ್ ಥರ್ಟಿ' ಎಂಬ ಹಾಲಿವುಡ್ ಚಿತ್ರವನ್ನು ವೀಕ್ಷಿಸಬೇಕು. ಆಸ್ಕರ್ ವಿಜೇತ ನಿರ್ದೇಶಕ ಕ್ಯಾಥರಿನ್ ಬಿಗೆಲೊ ನಿರ್ದೇಶನದ, ಮಾರ್ಕ್ ಬೊಯಲ್ ಚಿತ್ರಕತೆಯ ಈ ಸಿನಿಮಾ ಕೇವಲ ಆ್ಯಕ್ಷನ್ ಹಂದರದ ಸಿನಿಮೀಯ ಕೃತಿಯಲ್ಲ. ಅಂಥ ನಿರೀಕ್ಷೆಯಲ್ಲಿ ಚಿತ್ರ ವೀಕ್ಷಿಸಿದರೆ ನಿರಾಸೆ ಖಂಡಿತ. ಆದರೆ ಒಸಾಮಾನನ್ನು ತಲುಪುವುದಕ್ಕೆ ಅನುಸರಿಸಿದ ಬೇಹುಗಾರಿಕೆ ಮತ್ತು ಮಾಹಿತಿ ವಿಶ್ಲೇಷಣೆಗಳ ಸಹನಾಶಕ್ತಿಯ ಜಗತ್ತನ್ನು ಇದರಲ್ಲಿ ಪರಿಚಯಿಸಲಾಗಿದೆ. ಮಾಹಿತಿ ಹೊರಗೆಳೆಯುವಾಗ ಹಿಂಸೆಯೇ ಪ್ರಧಾನ ಎಂಬಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಅಮೆರಿಕದ ಸಿಐಎ ಕ್ಯಾತೆ ತೆಗೆದಿತ್ತು. ಒಸಾಮಾನನ್ನು ಹೊಡೆದು ಹಾಕಿದ ಸೀಲ್ ತಂಡದ ಸದಸ್ಯರು ಚಿತ್ರದ ಕೊನೆಯ ದೃಶ್ಯದ ಕೆಲ ವಿವರಗಳು ಹಾಗಲ್ಲ ಎಂಬ ಬಗ್ಗೆ ವರದಿಗಳಿವೆ. ಸಿನಿಮಾದ ಮಟ್ಟಿಗೆ ಕೆಲ ಕಲಾ ಸ್ವಾತಂತ್ರ್ಯ ಅನಿವಾರ್ಯವಾಗುತ್ತದೆ. ಆದರೆ ಈ ಚಿತ್ರದಲ್ಲಿ ಒಸಾಮಾ ಶಿಕಾರಿಯ ಶೇ. 80ರಷ್ಟು ವಿವರಗಳು ಹೇಗೆ ನೈಜ ಘಟನೆಗಳೊಂದಿಗೆ ಹೋಲುತ್ತವೆ ಎಂಬುದನ್ನು ವಿವರಿಸುವುದಕ್ಕೆ, ಆ ಗುಪ್ತಚರ ನೇಪಥ್ಯದ ಹೀರೊಗಳನ್ನು ಬಣ್ಣಿಸುವುದಕ್ಕೆ ಇನ್ನೊಂದು ಅಂಕಣವನ್ನೇ ಬರೆಯಬೇಕಾಗುತ್ತದೆ.
ಕೊನೆಗೂ ಉಳಿಯುವ ಪ್ರಶ್ನೆ ಇಷ್ಟೆ. ಜಾಗತಿಕವಾಗಿ ಬೇಹುಗಾರಿಕೆ ಎಂಬುದು ಗಂಭೀರ ಆಯಾಮ ಪಡೆದುಕೊಂಡಿರುವಾಗ ನಮ್ಮ ಸರ್ಕಾರವೇಕೆ ಗುಪ್ತಚರ ಪಡೆಯ ನೈತಿಕ ಸ್ಥೈರ್ಯವನ್ನೇ ಕಸಿಯುವ ಕೆಲಸಕ್ಕೆ ಕೈಹಾಕಿದೆ? ರಾಜಕೀಯ ಚದುರಂಗದ ಮೋಜಿಗಾಗಿ ರಾಷ್ಟ್ರದ ಭದ್ರತೆ ಮತ್ತು ಸಾರ್ವಭೌಮತೆಗೆ ಆಧಾರವಾಗಿರುವ ಸ್ತಂಭಗಳನ್ನೇ ಉರುಳಿಸುವ ಮಟ್ಟಕ್ಕೆ ಹೋಯಿತಲ್ಲ ಯುಪಿಎ? ಇನ್ನು ಉಳಿದಿರುವುದೇನು?
- ಚೈತನ್ಯ ಹೆಗಡೆ
cchegde@gmail.com