ಕಲ್ಯಾಣ ಕಾರ್ಯಕ್ರಮಗಳ ಭರಾಟೆಯಲ್ಲಿ ಕೆಟ್ಟಿರುವ ಕಾನೂನು ವ್ಯವಸ್ಥೆ
ಭಾರತದಲ್ಲಿ ಕುಸಿಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯೇ. ಈ ನಿಟ್ಟಿನಲ್ಲಿ ಬಹಳ ಮುಖ್ಯವಾಗಿ ಕೇಳಬೇಕಾದ ಪ್ರಶ್ನೆ- ಸಮಸ್ಯೆಯನ್ನು ಬಗೆಹರಿಸುವ ದಾರಿ ಯಾವುದು?
ಆಕ್ರೋಶಗೊಳ್ಳುವಿಕೆಯೇ ಒಳ್ಳೆಯ ನೀತಿಯೊಂದರ ವಿಶ್ಲೇಷಣೆ ಆಗುವುದಿಲ್ಲ. ಭ್ರಷ್ಟಾಚಾರದ ವಿಷಯದಂತೆಯೇ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೂ ತಾರ್ಕಿಕ ಆಲೋಚನೆಗಳು ಬೇಕು. ಬಾಬಾ ರಾಮ್ದೇವ್ ಮತ್ತು ಅಣ್ಣಾ ಹಜಾರೆ ಅವರ ಹಿಂಬಾಲಕರಾದ ದೊಡ್ಡ ಯುವ ಸಮೂಹಕ್ಕೆ ಭ್ರಷ್ಟಾಚಾರವನ್ನು ನಿಯಂತ್ರಿಸುವುದಕ್ಕೆ ಕೊನೆಗೂ ಸೂಕ್ತ ದಾರಿ ಹೇಗೆ ಸಿಗಲಿಲ್ಲವೋ ಅಂತೆಯೇ ಕಾನೂನು- ವ್ಯವಸ್ಥೆ ಸಂಬಂಧದ ಆಕ್ರೋಶದಲ್ಲೂ ಎಚ್ಚರವಿರಬೇಕು.ರಾಜಕೀ? ಶಾಸ್ತ್ರ ಮತ್ತು ಆಡಳಿತಗಳ ಬಗ್ಗೆ ಕೆಳಮಟ್ಟದ ಜ್ಞಾನ ಹೊಂದಿದ್ದರೆ ಆಗ ಆಕ್ರೋಶ ಮತ್ತು ಸಿಟ್ಟುಗಳು ನಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಸಿಟ್ಟು ನಮ್ಮನ್ನು ನಿಧಾನಕ್ಕೆ ವಿಶ್ಲೇಷಣೆಯತ್ತ ಹಾಗೂ ಇಂಥ ವಿಮರ್ಶೆ ಕಾರ್ಯದತ್ತ ತಿರುಗಿಸಬೇಕು. ಉದಾಹರಣೆಗೆ, ಅತ್ಯಾಚಾರಕ್ಕೆ ಅತ್ಯುಗ್ರ ಶಿಕ್ಷೆ ಆಗುವಂತೆ ಹೊಸ ಕಾನೂನು ತರುವುದರಿಂದ ಅತ್ಯಾಚಾರಿಗಳು ತಮ್ಮ ಬಲಿಯನ್ನು ಬದುಕಗೊಡದಂತೆ ಮಾಡುತ್ತಾರಷ್ಟೆ. ಹೀಗಾಗಿ ಈಗಿರುವ ಕಾನೂನುಗಳದ್ದೇ ನಿಖರ ಅನುಷ್ಠಾನದತ್ತ ನಮ್ಮ ಒತ್ತಡ ಮತ್ತು ಗಮನಗಳು ಕೆಲಸ ಮಾಡಬೇಕು. ಪೊಲೀಸರು ಮತ್ತು ನ್ಯಾಯಾಲಯ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಅಂಶಗಳು ಯಾವವು? ಒಟ್ಟೂ ಮೂರು ಅಂಶಗಳನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ.
ರಾಜಕಾರಣಿಗಳಿಗೆ ಉತ್ತೇಜನ: ಕಾನೂನು -ಸುವ್ಯವಸ್ಥೆಗಳು ಸರಿ ಇರುವಂತೆ ರಾಜಕಾರಣಿಗಳು ಯಾವಾಗ ಎಚ್ಚರ ವಹಿಸುತ್ತಾರೆ ಎಂದರೆ ಆ ಅಂಶ ಅವರ ಮರುಆಯ್ಕೆಗೆ ಸಹಾಯಕವಾಗುತ್ತದೆ ಎಂಬಂಥ ವಾತಾವರಣ ನಿರ್ಮಾಣವಾದಾಗ ಮಾತ್ರ. ಇಂದಿರಾ ಗಾಂಧಿ ಕಾಲದ ನಂತರ ರಾಜಕಾರಣಿಗಳಿಗೆ ಮನದಟ್ಟಾಗಿರುವ ವಿಷಯವೆಂದರೆ ಅವರು ಮರುಆಯ್ಕೆಯಾಗಬೇಕಾದರೆ ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಬೇಕು ಎಂಬುದು. ಈ ಧೋರಣೆಗೆ ಪ್ರೋತ್ಸಾಹ ಸಿಗುವವರೆಗೂ ಬಡತನ, ಅಸಮಾನತೆ, ಕಲ್ಯಾಣ ಕಾರ್ಯಕ್ರಮಗಳು ಎಂಬ ಮಾತುಗಳೇ ಮುಂದುವರಿಯುತ್ತವೆ. ಅರ್ಥಶಾಸ್ತ್ರಜ್ಞರು ಸಾರ್ವಜನಿಕ ಹಿತ ಎಂಬುದನ್ನು ವಿವರಿಸುವ ರೀತಿಯೇ ಭಿನ್ನವಾದದ್ದು. ಅವರ ಪ್ರಕಾರ ಅದರಲ್ಲಿ ವಿರೋಧ ಗುಣ ಇರಬಾರದು. ಅಂದರೆ ನಿಮ್ಮ ಸುರಕ್ಷತೆ ಸಾಧಿಸುವ ನಿಟ್ಟಿನಲ್ಲಿ ನನ್ನ ಸುರಕ್ಷತೆಯನ್ನು ಹನನ ಮಾಡಬಾರದು ಎಂಬ ಅರ್ಥ. ಸರ್ಕಾರದ ಉದ್ದೇಶ ಸಾರ್ವಜನಿಕ ಹಿತವನ್ನು ಸಾಧಿಸುವುದು. ಅದರಲ್ಲಿ ಮೊದಲನೆಯದಾಗಿ ಬರುವಂಥದ್ದೇ ಸಾರ್ವಜನಿಕರ ಸುರಕ್ಷತೆ. ಇದು ಸೇನೆ, ಪೊಲೀಸ್ ಮತ್ತು ನ್ಯಾಯಾಲಯಗಳನ್ನು ಬಲಪಡಿಸುವುದರಲ್ಲಿ ಅಡಗಿದೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಆಡಳಿತ ವ್ಯವಸ್ಥೆ ಕಲ್ಯಾಣ ಕಾರ್ಯಕ್ರಮಗಳ ಮುಖಾಂತರ ಶೌರ್ಯ ಮೆರೆಯುವ ಆಸ್ಥೆಯನ್ನು ಹೊಂದಿದೆ. ದೊಡ್ಡ ಸಮೂಹದ ಮತದಾರರಿಗೆ ಖಾಸಗಿ ವಸ್ತುಗಳನ್ನು ಕೊಡುಗೆ ರೂಪದಲ್ಲಿ ನೀಡುವುದು. ಇದು ನೋವನ್ನುಂಟು ಮಾಡುವ ಪ್ರಕ್ರಿಯೆ ಎಂಬುದು ರಾಜಕಾರಣಿಗಳಿಗೆ ಅರ್ಥವಾಗಿಲ್ಲ. ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯೇ ಆದ್ಯತೆ ಆಗಬೇಕು ಎಂಬುದನ್ನು ಶೀಲಾ ದೀಕ್ಷಿತ್ ಅವರು ಅರಿತುಕೊಳ್ಳಬೇಕು.
ಪೊಲೀಸ್ ಪಡೆಯ ನಿರ್ವಹಣೆ ಮತ್ತು ರಚನೆಯಲ್ಲಿ ನಿಸ್ಸಂಶಯವಾಗಿ ಹಲವು ದೋಷಗಳು ಇವೆ. ನಾಯಕತ್ವದ ಕೊರತೆ ಇದೆ. ಕಾನೂನು ಮತ್ತು ಸುವ್ಯವಸ್ಥೆಯೇ ಮುಖ್ಯ ವಿಷಯ ಎಂಬುದು ರಾಜಕಾರಣಿಗಳಿಗೆ ಅರಿವಾದಾಗ ಅವರು ಸುಧಾರಣೆಗಳಿಗೆ ಮುಂದಾಗುತ್ತಾರೆ. ಈ ಬಗೆಗಿನ ಒತ್ತಾಯಗಳೇ ಸುಧಾರಣೆಯ ಕ್ರಮಗಳಿಗೆ ಅವರು ಮುಂದಾಗುವಂತೆ ಮಾಡುತ್ತದೆ. ಉದಾಹರಣೆಗೆ ಪಿಡಬ್ಲ್ಯುಡಿನಿಂದ ಬೇರ್ಪಟ್ಟು ಎನ್ಎಚ್ಎಐ ರೂಪುಗೊಂಡಿದ್ದಕ್ಕೆ, ದೆಹಲಿ ಮೆಟ್ರೊ ರೂಪುಗೊಂಡಿದ್ದಕ್ಕೆ ಕಾರಣಗಳು ಇವೇ ಆಗಿವೆ. ಇದೇ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಹ ಜನರು ತಲೆಕೆಡಿಸಿಕೊಳಅಳುವ ವಿಷಯ ಎಂಬ ಬಗ್ಗೆ ರಾಜಕಾರಣಿಗಳಿಗೆ ಮನದಟ್ಟಾಗಬೇಕಲ್ಲ? ಆದರೆ 1960ರಿಂದ ಈಚೆಗೆ ರಾಜಕಾರಣಿಗಳ ತಲೆತುಂಬ ಕಲ್ಯಾಣ ಕಾರ್ಯಕ್ರಮಗಳೇ ತುಂಬಿಕೊಂಡಿವೆ.
ಒಂದು ಮೊತ್ತದ ಹಣವನ್ನು ನಿರ್ದಿಷ್ಟ ಮತದಾರ ಸಮೂಹಕ್ಕೆ ಗಿಫ್ಟ್ ನೀಡುವುದಕ್ಕೆ ಉಪಯೋಗಿಸಿದರೆ ಚುನಾವಣೆ ಗೆಲ್ಲುವಲ್ಲಿ ಅದು ಸಹಾಯಕ್ಕೆ ಬರುತ್ತದೆ. ಇದೇ ರೀತಿ ಸಾರ್ವಜನಿಕ ಭದ್ರತೆ ಒದಗಿಸುವುದಕ್ಕೆ ಒಂದುಮೊತ್ತದ ಹಣವನ್ನು ವಿನಿಯೋಗಿಸಿದರೆ ಅದೇ ಕಾರಣಕ್ಕೆ ಅವರು ಚುನಾವಣೆಯಲ್ಲಿ ಹೆಚ್ಚು ಮತ ಗಳಿಸುವುದು ಸಾಧ್ಯವಾಗಬೇಕು.
ಸಂಪನ್ಮೂಲಗಳು: ಭಾರತಕ್ಕೆ ಸಂಪನ್ಮೂಲಗಳು ಹೆಚ್ಚು ಬೇಕಿದೆ. ಅಂದರೆ ಭಾರತದ ಪೊಲೀಸ್ ಪಡೆ ಮತ್ತು ನ್ಯಾಯಾಲಯಗಳಿಗೆ ಹೆಚ್ಚಿನ ಸಿಬ್ಬಂದಿ ಬೇಕು. ತಾಂತ್ರಿಕ ಸಿಬ್ಬಂದಿ ಅಂದರೆ ನ್ಯಾಯಾಧೀಶರು, ಕಾನ್ಸ್ಟೇಬಲ್ಗಳು ಹಾಗೂ ಪೂರಕ ಸಿಬ್ಬಂದಿ ಅಂದರೆ ಲೆಕ್ಕಿಗರು, ಕಂಪ್ಯೂಟರ್ ನಿರ್ವಹಣೆ ಮಾಡುವವರು ಇವರಿಬ್ಬರೂ ಅಗತ್ಯವಾಗಿದ್ದಾರೆ. ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗಳಲ್ಲಿ ಉತ್ತಮ ಕೆಲಸದ ವಾತಾವರಣ ನಿರ್ಮಾಣವಾಗಬೇಕು. ಆಧುನಿಕ ಕಚೇರಿಗೆ ಅಗತ್ಯವಿರುವ ಕಂಪ್ಯೂಟರ್ ವ್ಯವಸ್ಥೆ, ನವೀನ ಸಲಕರಣೆಗಳು, ಶೌಚಾಲಯ, ವಿದ್ಯುತ್ ಇವೆಲ್ಲವಕ್ಕೆ ಕೊರತೆ ಇರಕೂಡದು. ಪೊಲೀಸರು ಉತ್ತಮ ಮಾದರಿಯ ಮನೆಗಳಲ್ಲಿ ವಾಸಿಸುವ ಸೌಲಭ್ಯಗಳನ್ನು ಪಡೆಯಬೇಕು. ಮನೆ ಮತ್ತು ಕೆಲಸದ ವಾತಾವರಣಗಳಲ್ಲಿ ಈ ಎಲ್ಲ ಸೌಲಭ್ಯಗಳಿದ್ದರೆ ಪೊಲೀಸರ ವರ್ತನೆಗಳಲ್ಲಿ ಹತಾಶೆ ಮಾಯವಾಗಿ ಗುಣಾತ್ಮಕ ಬದಲಾವಣೆಗಳು ಆಗುತ್ತವೆ. ಇವಕ್ಕೆಲ್ಲ ಸರ್ಕಾರಗಳು ಭಾರಿ ಮೊತ್ತದ ಹಣವನ್ನು ವ್ಯಯಿಸಬೇಕಾಗುತ್ತದೆ. ಆದರೆ ಇರುವ ಹಣವನ್ನೆಲ್ಲ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಖರ್ಚು ಮಾಡುತ್ತಿರುವ ಸರ್ಕಾರದ ಕೈಯಲ್ಲಿ ಪೊಲೀಸ್ ಮತ್ತು ನ್ಯಾಯಾಲಯಗಳ ಸುಧಾರಣೆಗೆ ಹಣವೇ ಇಲ್ಲವಾಗಿದೆ. ಪ್ರಜೆಗಳಿಗೆ ಒಳ್ಳೆಯದಾಗಬೇಕು ಎಂಬುದಕ್ಕೆ ಉತ್ತಮ ಪೊಲೀಸ್ ಮತ್ತು ನ್ಯಾಯಾಲಯ ವ್ಯವಸ್ಥೆಗಳಿರುವುದು ಪ್ರಾಥಮಿಕ ಅಗತ್ಯ. ಆದರೆ ಪ್ರಸ್ತುತ ನಮ್ಮ ಸರ್ಕಾರ ಪೊಲೀಸ್ ಮತ್ತು ನ್ಯಾಯಾಲಯಗಳ ಸುಧಾರಣೆಗೆ 'ಯೋಜನೇತರ ವೆಚ್ಚ'ದಲ್ಲಿ ಹಣ ಹೊಂದಿಸುತ್ತಿದೆ. ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ 'ಯೋಜನಾ ವೆಚ್ಚ'ದಲ್ಲೇ ವರ್ಷದಿಂದ ವರ್ಷಕ್ಕೆ ಖರ್ಚು ಹೆಚ್ಚು ಮಾಡಲಾಗುತ್ತಿದೆ.
ಸಾಮಾನ್ಯ ಮಂದಿಗೆ ಒಳ್ಳೆಯದನ್ನು ಮಾಡಬೇಕು ಎಂಬುದೇ ಕಲ್ಯಾಣದ ಪರಿಕಲ್ಪನೆ ಎನ್ನುವುದಾದರೆ ಸುರಕ್ಷತೆಯ ಕೊರತೆ ಎನ್ನುವುದು ಭಾರಿ ದೊಡ್ಡ ವಿಷಯವೇ ಆಗುತ್ತದೆ. ಏಕೆಂದರೆ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಅದು ಶ್ರೀಮಂತರಿಗಿಂತ ಹೆಚ್ಚು ಬಡವರನ್ನೇ ಬಾಧಿಸುತ್ತದೆ. ಉದಾಹರಣೆಗೆ ಇದೇ ಅಂಕಣಕಾರನನ್ನು ಪೊಲೀಸ್ ತಡೆದು ನಿಲ್ಲಿಸಿದ ಎಂದಿಟ್ಟುಕೊಂಡರೆ, ಆತನಿಗೆ ಮಾತನಾಡುತ್ತಲೇ ಈತ ಮೇಲ್ಸ್ತರಕ್ಕೆ ಸೇರಿದವನು ಎಂದು ತಿಳಿಯುತ್ತದೆ. ಹೆಚ್ಚಿನ ಹರಾಕಿರಿಗೆ ಆತ ಮುಂದಾಗಲಾರ. ಆದರೆ ಬಡವರು ಅತ್ತ ಕ್ರಿಮಿನಲ್ಗಳಿಂದ ಇತ್ತ ಪೊಲೀಸರಿಂದ ಎರಡೂ ಕಡೆಗಳಲ್ಲಿ ಶೋಷಣೆಗೆ ಒಳಗಾಗುತ್ತಾರೆ. ಬಡವರ ಬಗ್ಗೆ ಕರುಣೆ ಇರುವವರು ಕಲ್ಯಾಣ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಈ ಬಗ್ಗೆ ಆಲೋಚಿಸಬೇಕು.
ಪ್ರತಿಕ್ರಿಯೆ ಲೋಪಗಳು: ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಆಲೋಚಿಸುವಾಗ ಅದನ್ನು ಅಳೆಯುವುದಕ್ಕೆ ಒಂದು ಮಾಪಕ ಬೇಕು ಎಂಬ ಸಮಸ್ಯೆ ಎದುರಾಗುತ್ತದೆ. ಕೊಲೆಗಳ ಪ್ರಮಾಣ ಕಾನೂನು ಸುವ್ಯವಸ್ಥೆಯನ್ನು ಅಳೆಯುವ ದಾರಿ ಎನ್ನುವುದಾದರೆ ಭಾರತದ ಅನೇಕ ಕಡೆಗಳಲ್ಲಿ ಹೆಚ್ಚಿನ ಕೊಲೆಗಳು ಪೊಲೀಸರಿಗೆ ವರದಿಯೇ ಆಗುವುದಿಲ್ಲ!
ಇದರ ಗಾಂಭೀರ್ಯ ಅಳೆಯುವುದಕ್ಕೆ ಚಿಕ್ಕದೊಂದು ಸಮೀಕ್ಷೆ ಸಾಕು. ಪೋಷಕರನ್ನು ಕೇಳಬೇಕು- ನಿಮ್ಮ ಮಗಳು ರಾತ್ರಿ ಹನ್ನೊಂದರ ಸಮಯದಲ್ಲಿ ಹೊರಬಿದ್ದರೆ ನೀವು ನಿರಾತಂಕದಿಂದ ಇರುವ ಪರಿಸ್ಥಿತಿ ಇದೆಯೇ? ಬಹುಶಃ ಇದಕ್ಕೆ ಸಿಗುವ ಉತ್ತರವೇ ಸೂಕ್ತ ಮಾಪಕ. ಕಲ್ಯಾಣ ರಾಜ್ಯದ ಗುರಿ ಇರಬೇಕಾಗಿದ್ದೂ ಅಲ್ಲಿಯೇ. ಹದಿಹರೆಯದ ಹುಡುಗಿ ರಾತ್ರಿ ವೇಳೆ ಮನೆಯಿಂದ ಹೊರಗೆ ಕಾಲಿಟ್ಟರೂ ಆಕೆಯ ಪಾಲಕರು ಆ ಬಗ್ಗೆ ಗಾಬರಿಗೊಳ್ಳದಿರುವಂಥ ನಾಗರಿಕ ವಾತಾವರಣವನ್ನು ನಿರ್ಮಿಸುವುದು.
ಹಾಗಾದರೆ ಇಂಥ ಒಳ್ಳೆಯ ಕಾರ್ಯಗಳೆಲ್ಲ ಆಗುತ್ತಿಲ್ಲ ಏಕೆ?
ಏಕೆಂದರೆ ಭಾರತದಲ್ಲಿ ಚುನಾವಣೆಯನ್ನು ಗೆಲ್ಲುವುದಕ್ಕೆ ಶೇ. 30ರಷ್ಟಿರುವ ಮತದಾರರ ಒಂದು ಸಮೂಹವನ್ನು ಮರುಳು ಮಾಡಿದರೆ ಸಾಕು ಎಂಬಂಥ ವಾತಾವರಣವಿದೆ. ಹೀಗಾಗಿ ಗಿಫ್ಟ್ ನೀಡುವುದೇ ಆದ್ಯತೆಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು, ಸಹಾಯ ಸಂಸ್ಥೆಗಳು ಮತ್ತು ವಿಶ್ವಬ್ಯಾಂಕ್ ಇವೆಲ್ಲ ಬಡತನ, ಅಸಮಾನತೆ ಸುತ್ತಲೇ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇದು ಸ್ವಯಂಸೇವಾ ಸಂಸ್ಥೆಗಳಿಗೆ ನಾನಾ ಬಗೆಯ ಉದ್ಯೋಗಗಳನ್ನೂ ದೊರಕಿಸಿಕೊಡುವ ವ್ಯವಸ್ಥೆ. ಇದನ್ನೇ ಭಾರತದ ನೀತಿ ನಿರೂಪಕ, ಅಭಿಪ್ರಾಯ ನಿರ್ಮಾಣದ ಗಣವೂ ತನ್ನದಾಗಿಸಿಕೊಂಡುಬಿಟ್ಟಿದೆ.
ಭಾರತದ ಜಾಯಮಾನಕ್ಕೆ ಒಗ್ಗುವ ಆರ್ಥಿಕ ಹಂದರದ ಬಗ್ಗೆ ಯೋಚಿಸುವ ಮತ್ತು ಅಂಥ ವಿಚಾರಗಳ ಮೂಲಕ ರಾಜಕಾರಣಿಗಳನ್ನು ಪ್ರಭಾವಿಸುವ ಚಿಂತಕರು ನಮಗೆ ಬೇಕಾಗಿದ್ದಾರೆ.
- ಅಜಯ್ ಶಾ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

