ಅಂಕಣಗಳು

ಇಲ್ಲಿ ಕಾಡಾನೆಗಳದ್ದಲ್ಲ, ಜಿಂಕೆ-ಕರಡಿಗಳ ಉಪಟಳ

Published On :

ರಾಜ್ಯದಲ್ಲಿ ಆನೆ ಮತ್ತು ಮಾನವನ ನಡುವೆ ಸಂಘರ್ಷ ತಪ್ಪಿಸಲು ಯೋಜನೆ ರೂಪಿಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ. ಮಾನವ- ಪ್ರಾಣಿ ಸಂಘರ್ಷ ತಪ್ಪಿಸಲು ಮೂರು ವರ್ಷದ ಅವಧಿಯಲ್ಲಿ, 109 ಕೋಟಿ ವೆಚ್ಚದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆಯಂತೆ. ಕಾಡಾನೆಗಳ ಹಾವಳಿ ಇರುವ ಪ್ರದೇಶಗಳ ಅಂಚಿನಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಯನ್ನು 24 ಗಂಟೆ ಕಾವಲಿಗೆ ನೇಮಿಸುವುದು, ಆನೆ ಕಂದಕ ನಿರ್ಮಿಸುವುದು, ಸೌರಶಕ್ತಿ ಬೇಲಿ ನಿರ್ಮಾಣ ಮತ್ತು ಇರುವ ಬೇಲಿಗಳನ್ನು ಸರಿಪಡಿಸುವುದು, ಅವುಗಳ ಆಹಾರ ಕೊರತೆ ನೀಗಿಸಲು ಅರಣ್ಯ ಪ್ರದೇಶಗಳಲ್ಲಿ ಅವುಗಳಿಗೆ ಇಷ್ಟವಾದ ಸಸ್ಯ ಪ್ರಬೇಧ ಮತ್ತು ಬಿದಿರು ಬೀಜಗಳ ಬಿತ್ತನೆ, ಅರಣ್ಯಗಳಲ್ಲಿ ಕೆರೆಗಳ ಹೂಳು ತೆಗೆಯುವುದು, ಲಂಟಾನ ಮತ್ತಿತರ ಕಳೆಗಳನ್ನು ತೆಗೆದು ಸ್ವಾಭಾವಿಕ ಹುಲ್ಲು ಬೆಳೆಸುವುದು...ಹೀಗೆ ಸಾಗುತ್ತದೆ ಯೋಜನೆ.
ಕಾಡಾನೆಗಳಿಂದ ಬಾಧಿತವಾದ ರೈತರಿಗೆ ಮತ್ತು ಅಲ್ಲಿನ ಜನರಿಗೆ ಈ ನಿರ್ಧಾರ ಹರ್ಷ ತಂದಿರಬಹುದು. ಆದರೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳೂ ಹೀಗೆ ವನ್ಯ ಪ್ರಾಣಿಗಳಿಂದ ಪದೇ ಪದೇ ದಾಳಿಗೆ ತುತ್ತಾಗುತ್ತಿವೆ. ಅಲ್ಲಿಯ ಹಾಗೂ ಇಲ್ಲಿಯ ವನ್ಯ ಪ್ರಾಣಿಗಳ ದಾಳಿ ಮತ್ತು ಅದರ ಪರಿಣಾಮಗಳಲ್ಲಿ ವ್ಯತ್ಯಾಸವಿರಬಹುದಷ್ಟೆ. ಆದರೆ ಬೀರುವ ಪರಿಣಾಮ ಮಾತ್ರ ಪ್ರತಿಕೂಲವೇ ಎಂಬುವುದನ್ನು ಒಪ್ಪಿಕೊಳ್ಳಲೇಬೇಕು. ಈ ಹಿನ್ನಲೆಯಲ್ಲಿ ಈ ಭಾಗದಲ್ಲಿ ಕಳೆದ ಒಂದು ದಶಕದಿಂದ ನಡೆಸುತ್ತಿರುವ ಹೋರಾಟ, ಪ್ರತಿಭಟನೆಗೆ ಸೂಕ್ತ ಬೆಲೆ ಸಿಗದಿರುವುದು ಖೇದಕರ ಸಂಗತಿ. ಕಾಡಾನೆಗಳ ದಾಂಧಲೆಯನ್ನು ಹತ್ತಿಕ್ಕಲು ಆಡಳಿತ ಯಂತ್ರ ಯಾವ ರೀತಿ ಇಚ್ಛಾಶಕ್ತಿ ತೋರಿತೋ ಅದೇ ಇಚ್ಛಾಶಕ್ತಿಯನ್ನು ಉತ್ತರ ಕರ್ನಾಟಕದ ರೈತರಿಗೆ ವನ್ಯ ಪ್ರಾಣಿಗಳಿಂದಾಗುತ್ತಿರುವ ಉಪದ್ರವ, ಆಪಾಯವನ್ನು ತಡೆಗಟ್ಟುವ  ನಿಟ್ಟಿನಲ್ಲಿ ತೋರುತ್ತಿಲ್ಲ. ಕೊಪ್ಪಳ, ಗದಗ, ಹಾವೇರಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಜಿಂಕೆಯ ಉಪಟಳ ಹದ್ದು ಮೀರಿದೆ.
ಒಂದೆಡೆ ಬರಗಾಲ, ವಿದ್ಯುತ್ ಕೊರತೆ ಮತ್ತೊಂದೆಡೆ ಈ ಕಾಡುಪ್ರಾಣಿಗಳ ಕಾಟ. ಇಲ್ಲಿ ಮೊದಲೇ ಮಳೆ ಅಪರೂಪ. ಈ ಕಾರಣಕ್ಕೆ ಸೂರ್ಯಕಾಂತಿ, ಹತ್ತಿ, ಜೋಳ, ಶೇಂಗಾ, ಸಜ್ಜೆಯಂಥ ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದೇ ಹೆಚ್ಚು. ಆದರೆ ಹೀಗೆ ಬಿತ್ತನೆ ಮಾಡಿದ ಬೆಳೆ ಮೊಳಕೆಯೊಡೆಯುವುದೇ ದೊಡ್ಡ ಪವಾಡ. ಸಾವಿರಾರು ಸಂಖ್ಯೆಯಲ್ಲಿರುವ ಜಿಂಕೆಗಳು ಹಿಂಡು ಹಿಂಡಾಗಿ ದಾಳಿ ಮಾಡಿ ತಿಂದು ಧ್ವಂಸ ಮಾಡುತ್ತಿವೆ. ಅಲ್ಲದೆ ಇತ್ತೀಚೆಗೆ ಮೇವಿನ ಕೊರತೆ ಎದುರಿಸುತ್ತಿರುವ ಜಿಂಕೆಗಳು ತೋಟಗಾರಿಕೆ ಪ್ರದೇಶಕ್ಕೂ ಲಗ್ಗೆ ಇಡುತ್ತಿವೆ. ಇನ್ನು ವರದಾ ನದಿ ದಡದಲ್ಲಿನ ರೈತರಿಗಂತೂ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ.
ಅವುಗಳನ್ನು ಹಿಡಿದು ರಾಣಿಬೆನ್ನೂರು ಹತ್ತಿರದ ಕೃಷ್ಣಮೃಗಧಾಮಕ್ಕೆ ಸಾಗಿಸಿ, ನಮ್ಮ ಬೆಳೆ ರಕ್ಷಣೆ ಮಾಡಬೇಕೆಂದು ಇಲ್ಲಿನ ರೈತರು ಅನುಕ್ಷಣವೂ ಅರಣ್ಯ ಇಲಾಖೆಯನ್ನು ಗೋಗರೆಯುತ್ತಾರೆ. ಇದಕ್ಕಾಗಿಯೇ ನೂರಾರು ಬಾರಿ ಸತ್ಯಾಗ್ರಹ, ಪ್ರತಿಭಟನೆ, ರಸ್ತೆತಡೆ ಮಾಡಿ ಸಂಬಂಧಿಸಿದ ಇಲಾಖೆ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಕೈಚೆಲ್ಲಿದಾಗ, ತಮ್ಮ ಬೆಳೆಗೆ ತಾವೇ ರಕ್ಷಣೆ ನೀಡಲು ಇಲ್ಲಿನ ರೈತರು ಜೀವದ ಹಂಗು ತೊರೆದು ಹಗಲಿರಳು ಶ್ರಮಿಸುತ್ತಾರೆ. ಆಕ್ರೋಶಗೊಂಡು  ಒಂದು ವೇಳೆ ಜಿಂಕೆಗಳನ್ನು ಚದುರಿಸಲು ಹೋದರೆ ಅರಣ್ಯ ಇಲಾಖೆಯವರು ಜಿಂಕೆ ಬೇಟೆಯಾಡುತ್ತೀರಿ ಎಂದು ಜೈಲಿಗೆ ತಳ್ಳುವ ಭಯವಿದೆ. ಈ ನಡುವೆ ಯಲಬುರ್ಗಾದಲ್ಲಿ 'ಜಿಂಕೆಧಾಮ' ನಿರ್ಮಾಣದ ಆಸೆ ಹಚ್ಚಿ ಅದಕ್ಕೆ ಈಗ ಕಲ್ಲು ಹಾಕಿರುವುದು ಈ ಸಮಸ್ಯೆ ಮತ್ತೇ ಜೀವಂತವಾಗಿಸುವ ಸೂಚನೆ ನೀಡಿದೆ. ಅಲ್ಲದೆ ಈ ನಡುವೆ ಜಿಂಕೆ, ಕೃಷ್ಣಮೃಗಗಳು ಮಾತ್ರವಲ್ಲದೇ ಕಾಡುಹಂದಿಗಳು, ಮಿಕ ಸಹ ಬೆಳೆ ನಾಶ ಮಾಡುತ್ತಿವೆ. ಇನ್ನು ರೈತರು ಬಿತ್ತಲು ಖರ್ಚು ಮಾಡಿದ ಅಷ್ಟೂ ಹಣ ಹಿಂದಿರುಗಿ ಬರುತ್ತದೆ ಅನ್ನುವ ನಂಬಿಕೆ ಇಲ್ಲಿಲ್ಲ. ಎಕರೆಗೆ 04-05 ಸಾವಿರ ಖರ್ಚು ಮಾಡಿದ್ದರೆ, ಸಿಗುವುದು ಕೇವಲ 200 ರಿಂದ 500 ರು.ಗಳ ಪರಿಹಾರ ಧನವಷ್ಟೇ!
ಜಿಂಕೆಗಳ ಹಾವಳಿಯ ಕಥೆ ಒಂದೆಡೆಯಾದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಗುಡೇಕೋಟೆ, ಕಡೆಕೋಳ, ಅಗ್ರಹಾರ ಸೇರಿದಂತೆ ವಿವಿಧೆಡೆಯದ್ದು ಇನ್ನೊಂದು ವ್ಯಥೆ. ಈ ಭಾಗದಲ್ಲಿ ಕರಡಿ ಮತ್ತು ಜನರ ನಡುವೆ ನಿತ್ಯ ಸಂಘರ್ಷ. ಹೀಗೆ ಕರಡಿಗಳ ದಾಳಿಗಳಿಂದ ಶಾಶ್ವತವಾಗಿ ಕೆಲವರು ಅಂಗ ಊನರಾಗಿದ್ದರೆ ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯೂ ಅದೇ ಹಣೆ ಬರಹ. ಬೆಳೆ ನಾಶಕ್ಕೆ, ಗಾಯಗೊಂಡವರಿಗೆ ನೀಡುವ ಪರಿಹಾರ ಧನ ಅತ್ಯಲ್ಪ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿ ನೂರಕ್ಕೂ ಹೆಚ್ಚು ಜನ ಕರಡಿ ದಾಳಿಗೆ ತುತ್ತಾಗಿದ್ದರೆ, ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಈ ನಡುವೆ ಇಲ್ಲೊಂದು ಕರಡಿ ಧಾಮ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ, ಆದರೆ ಅದಕ್ಕೆ ಹಸಿರು ನಿಶಾನೆ ದೊರಕುವುದು ಯಾವಾಗಲೋ? ಅಲ್ಲಿಯವರೆಗೆ?
'ಕಾಡು ಪ್ರಾಣಿಗಳು ಕಾಡಿನಲ್ಲಿ, ಕಾಡುವ ಪ್ರಾಣಿಗಳು ನಾಡಿನಲ್ಲಿ' ಎಂಬ ಸೂಕ್ತಿ ಈಗ ಬದಲಾಗುತ್ತಿದೆ. ಕಾಡುವ ಪ್ರಾಣಿಗಳಾದ ಮನುಷ್ಯ ಕಾಡಿನ ಪ್ರಾಣಿಗಳ ಅಸ್ತಿತ್ವ, ನೆಮ್ಮದಿ ಕದಡುತ್ತಿದ್ದಾನೆ. ಹೀಗಾಗಿಯೇ ಅವು ಮನುಷ್ಯರು, ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಈ ಸತ್ಯವನ್ನು ಅರಿತು ವ್ಯಾಪಾರಕ್ಕಾಗಿ ಮತ್ತು ಸ್ವಪ್ರಯೋಜನಕ್ಕಾಗಿ ಜೀವ ವೈವಿಧ್ಯತೆಗೆ ಧಕ್ಕೆ ಬಾರದಂತೆ ನಮ್ಮ ಮಿತಿ ಒಳಗೆ ಜೀವಿಸಿದರೆ ಮಾತ್ರ ಜೀವಗೋಲದ ಸುಸ್ಥಿರತೆ ಸಾಧಿಸಬಹುದು. ಆಗ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ದೊರಕುವುದು.

- ಸ್ವರೂಪಾನಂದ ಎಂ.ಕೊಟ್ಟೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.