ಅಂಕಣಗಳು

ಅಮರ್ತ್ಯ ಸೇನ್ ಎಂಬ ಅಳಲೆಕಾಯಿ ಪಂಡಿತನ ಆರ್ಥಿಕ ನೀತಿಗಳು...

ಅಮರ್ತ್ಯ ಸೇನ್ ಎಂಬ ಅಳಲೆಕಾಯಿ ಪಂಡಿತನ ಆರ್ಥಿಕ ನೀತಿಗಳು...
ಅಮರ್ತ್ಯ ಸೇನ್
Published On :

ಯುಪಿಎ ಸರ್ಕಾರದ ಬಹಳಷ್ಟು ಅವಿವೇಕದ ಆರ್ಥಿಕ ನೀತಿಗಳಿಗೆ ಬೌದ್ಧಿಕ ಬೆಂಬಲಿಗರಾಗಿ ದುಡಿಯುತ್ತಿದ್ದಾರೆ ಅಮರ್ತ್ಯ ಸೇನ್. ಈಗ ಆಹಾರ ಭದ್ರತಾ ಮಸೂದೆ ಎನ್ನುವ ಯುಪಿಎದ ಇನ್ನೊಂದು ಮೂರ್ಖತನಕ್ಕೆ ಅವರು ಬಹುಪರಾಕು ಹಾಕುತ್ತಿದ್ದಾರೆ. ಈ ಕಾಯ್ದೆ ದೇಶಕ್ಕೆ ಮತ್ತಷ್ಟು ಹಾನಿ ಮಾಡಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗೇ ಇದರ ನಿಜ ಬಣ್ಣವನ್ನು ಬಯಲುಮಾಡಲೇಬೇಕಿದೆ.
ಒಂದು ಕಾಲದಲ್ಲಿ, ಕ್ಷಾಮ ಮತ್ತು ಹಸಿವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಮ್ಮ ನೀತಿಗಳಿಂದಾಗಿ ಬೆನ್ನುತಟ್ಟಿಸಿಕೊಳ್ಳುತ್ತಿದ್ದ ಸೇನ್, ಈಗ ಬಡವರಿಗೆ ಯಾವ ರೀತಿಯಲ್ಲಿಯೂ ಸಹಾಯಕ್ಕೆ ಬರದ ಅರ್ಥಿಕ ನೀತಿಗಳನ್ನೇ ಅಪ್ಪಿಕೊಂಡಿದ್ದಾರೆ.  
ಗಂಭೀರ ಹಸಿವು ಎನ್ನುವುದು ದೇಶದಿಂದ ಬಹುತೇಕ ಮಾಯವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದೆ. ಯಾವುದೋ ಕೆಲವು ಭಾಗಗಳಲ್ಲಿ ಅದು ಜೀವಂತವಾಗಿರಬಹುದಷ್ಟೆ. ಆದರೆ ಅಪೌಷ್ಟಿಕತೆ ಎನ್ನುವುದು ಭಿನ್ನ ವಿಚಾರ. ಈ ಸಮಸ್ಯೆಯನ್ನು ಬಗೆಹರಿಸಲು ಗರ್ಭಿಣಿಯ ಆರೈಕೆ, ಹುಟ್ಟಿದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಂತಹ ಭಿನ್ನ ಆಯಾಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಇಂಥಹ ಸಮಸ್ಯೆಗಳು ದೇಶದ ಮುಕ್ಕಾಲು ಪ್ರತಿಶತ ಜನರಿಗೆ ಅಕ್ಕಿ, ಗೋಧಿ ಮತ್ತು ಒರಟು ಧಾನ್ಯಗಳನ್ನು ಕೇಜಿಗೆ, ಕ್ರಮವಾಗಿ ರು.3, ರು.2 ಮತ್ತು ರು.1ರಂತೆ ಕೊಡುವುದರಿಂದ ಬಗೆಹರಿಯುವಂಥವುಗಳಲ್ಲ. ಈ ನಿಟ್ಟಿನಲ್ಲಿ ಯುಪಿಎ ಯೋಚಿಸುತ್ತಿಲ್ಲ. ಇನ್ನು ಅಮರ್ತ್ಯಸೇನ್ ಕೂಡ ಈ ಕೆಟ್ಟ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ.
ಆದರೆ ಒಂದಂತೂ ಸತ್ಯ. ಇಂಥ ಅರ್ಥಹೀನ ನೀತಿಗಳಿಂದ ಆರ್ಥಿಕತೆಯನ್ನಂತೂ ಬಲು ಸುಲಭವಾಗಿ ಹಳ್ಳಹಿಡಿಸಬಹುದು!
ದೇಶದ ಕೆಲವು ಸಂವೇದನಾಶೀಲ ಅರ್ಥಶಾಸ್ತ್ರಜ್ಞರು ಸೇನ್‌ರ ಖೋಟಾ ಅರ್ಥಶಾಸ್ತ್ರವನ್ನು ಕಾಲಕಾಲಕ್ಕೆ ಬಯಲಿಗೆಳೆಯುತ್ತಲೇ ಬಂದಿದ್ದಾರೆ. 'ಬ್ಯುಸಿನೆಸ್ ಸ್ಟ್ಯಾಂಡರ್ಡ್‌' ಪತ್ರಿಕೆಯಲ್ಲಿ ಪ್ರಕಟವಾಗಿರುವ ಅರವಿಂದ್ ಸುಬ್ರಮಣಿಯನ್ ಎಂಬ ಅರ್ಥಶಾಸ್ತ್ರಜ್ಞರ ಲೇಖನ, ಆಹಾರ ಭದ್ರತಾ ಕಾಯ್ದೆಯ ಬಗೆಗಿನ ಸೇನ್‌ರ ನಿಲುವನ್ನು ಸ್ಪಷ್ಟವಾಗಿ ಖಂಡಿಸುತ್ತದೆ.
ಜನರ 'ಹಾದಿತಪ್ಪಿಸುವ' ಯುಪಿಎದ ನೀತಿಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಆಹಾರ ಭದ್ರತಾ ಕಾಯ್ದೆ ಮತ್ತು ಇಲ್ಲಿಯವರೆಗಿನ ಆ ಸರ್ಕಾರದ ಕೆಲವು ಆರ್ಥಿಕ ನೀತಿಗಳಲ್ಲಿನ ಗಂಭೀರ ನ್ಯೂನತೆಗಳೇನು ಎನ್ನುವುದರ ಬಗ್ಗೆ ಅರವಿಂದ್ ಬೆಳಕು ಚೆಲ್ಲಿದ್ದಾರೆ.
ಮೊದಲನೆಯದು, ಇದು ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತದೆ. ದೇಶೀಯ ಉತ್ಪಾದನೆಯಲ್ಲಿನ ಇಳಿಕೆ ಮತ್ತು ರುಪಾಯಿಯ ವರ್ತನೆ ಇದಕ್ಕೆ ಸ್ಪಷ್ಟ ಪುರಾವೆ. ಯುಪಿಎ ನೀತಿಗಳಿಂದ ಆಗಬಹುದಾದ ಹಾನಿಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಇನ್ನೊಂದಿರಲಿಕ್ಕಿಲ್ಲ.
ಎರಡನೆಯದಾಗಿ, 'ಹಕ್ಕು'  ಎನ್ನುವ ಆಧಾರದ ಮೇಲೆ ಇಂಥ ದುಷ್ಟ ನೀತಿಗಳಿಗೆ ಸಮರ್ಥನೆ ನೀಡುವುದು(ಶಾಸನಬದ್ಧವಾಗಿಸುವುದು). ಕಳೆದ ಹತ್ತು ವರ್ಷಗಳಲ್ಲಿ ಇಂಧನ ಸಬ್ಸಿಡಿಗಳ ಹೆಚ್ಚಳದಿಂದಾಗಿ ಜನರು ಬೇರೆ ಆಯ್ಕೆಗಳತ್ತಲೇ ಗಮನ ಹರಿಸುತ್ತಿಲ್ಲ, ಕಳಪೆ ಕೃಷಿ ವಿಧಾನಗಳಿಗೇ ಒಗ್ಗಿಕೊಳ್ಳುತ್ತಿದ್ದಾರೆ.
ಮೂರನೆಯದಾಗಿ, ಶಿಕ್ಷಣ ಹಕ್ಕು ಕಾಯ್ದೆಯಂಥ ಬೃಹತ್ ಖರ್ಚಿನ ನೀತಿಗಳಿಂದಾಗಿ ಅಂದುಕೊಂಡಷ್ಟು ಪ್ರತಿಫಲ ಸಿಗುವುದಿಲ್ಲ ಎನ್ನುತ್ತಾರೆ ಸುಬ್ರಮಣಿಯನ್. ಇದರ ಬದಲು ಶಿಕ್ಷಕರು ತಮ್ಮ ಕೆಲಸದತ್ತ ಹೆಚ್ಚು ಗಮನ ಹರಿಸುವಂಥ ನಿಯಮಗಳನ್ನು ಜಾರಿ ಮಾಡಿದ್ದರೆ, ಮಕ್ಕಳೂ ಶಿಕ್ಷಣದತ್ತ ಒಲವು ತೋರುತ್ತಿದ್ದರು. ಕಡಿಮೆ ಖರ್ಚಿನ ಹಾಗೂ ಸುಲಭ ಮಾರ್ಗಗಳಿರುವಾಗ ಆರ್‌ಟಿಇ ಎಂಬ ಈ ಫಿಜೂ ಖರ್ಚಿನ ಯೋಜನೆಯ ಅಗತ್ಯವೇ ಇರಲಿಲ್ಲ. ಈಗ ಖರ್ಚು ಮಾಡಿದ ಹಣದಿಂದ ಬೇರೆ ಯಾವ ಪರಿಹಾರಗಳತ್ತ ಮುಖಮಾಡಬಹುದಿತ್ತು  ಎನ್ನುವ ಬಗ್ಗೆ ಯುಪಿಎ ಚಿಂತಿಸುತ್ತಲೇ ಇಲ್ಲ. ಹಾಗಾಗಿ ದೊಡ್ಡ ಅವಕಾಶವೊಂದು ಅರಿವಿಲ್ಲದೇ ಕೈ ಜಾರಿಹೋಗಿದೆ. ನಾಲ್ಕು. 'ಹಕ್ಕಿನ' ಹೆಸರಿನಲ್ಲಿ ರೂಪಿತವಾದ ನೀತಿಗಳು ಸರ್ಕಾರಗಳ ಸಾಮರ್ಥ್ಯವನ್ನು ಕುಂದಿಸುತ್ತವೆ ಎನ್ನುತ್ತಾರೆ ಸುಬ್ರಮಣಿಯನ್. ರಾಜ್ಯ ಸರ್ಕಾರಗಳ ಪ್ರಮುಖ ಕೆಲಸ ತಮ್ಮ ಜನರಿಗೆ ರಕ್ಷಣೆ ನೀಡುವುದು, ಕಾನೂನು ಸುವ್ಯವಸ್ಥೆಯನ್ನು ಜಾರಿಯಲ್ಲಿಡುವುದು, ಸಾರ್ವಜನಿಕ ಸೌಲಭ್ಯಗಳ ಪೂರೈಕೆ ಮತ್ತು ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವುದು. ಆದರೆ ಯಾವಾಗ ಸರ್ಕಾರಗಳ ಸಂಪೂರ್ಣ ಗಮನ ಆಹಾರ ಭದ್ರತೆಯಂಥ ಖಾಸಗಿ ಕಲ್ಯಾಣ ಯೋಜನೆಗಳತ್ತ ಹರಿಯುತ್ತದೆಯೋ ಆಗ ಅವುಗಳಿಗೆ ಉಳಿದ ವಿಷಯಗಳತ್ತ ಚಿತ್ತ ಹರಿಸುವುದಕ್ಕೆ ಸುಲಭವಾಗಿ ಸಾಧ್ಯವಾಗುವುದಿಲ್ಲ.
ಐದು. ರಾಜ್ಯ ಸರ್ಕಾರಗಳ ಮೇಲೆ ಹೆಚ್ಚು ಒತ್ತಡ ಬಿದ್ದಂತೆಲ್ಲ ಅವು ದುರ್ಬಲವಾಗುತ್ತಾ ಹೋಗುತ್ತವೆ. ಯಾವಾಗ ಸರ್ಕಾರವೊಂದು ಆರೋಗ್ಯ ಮತ್ತು ಶಿಕ್ಷಣದಂಥ ಸೇವೆಗಳ ಬದಲಾಗಿ ತನ್ನೆಲ್ಲಾ ಗಮನವನ್ನು ಪುನರ್ವಿತರಣೆಯತ್ತ ಕೇಂದ್ರೀಕರಿಸುತ್ತದೋ ಆಗ ಮಧ್ಯಮ ವರ್ಗ ಸರ್ಕಾರದ ಮೇಲಿನ ನಿಷ್ಠೆಯನ್ನು, ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ತೆರಿಗೆ ಕಟ್ಟುವುದರಿಂದ ಅವರು ತಪ್ಪಿಸಿಕೊಳ್ಳುತ್ತಾರೆ, ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ವಿದೇಶಗಳಿಗೆ ಕಳುಹಿಸುತ್ತಾರೆ, ಸರ್ಕಾರದಿಂದ ವಿಮುಖರಾಗುತ್ತಾರೆ.
ಒಂದೊಮ್ಮೆ ಅಮರ್ತ್ಯ ಸೇನ್‌ರ ಅಭಿಮಾನಿಯಾಗಿದ್ದ ಸುಬ್ರಮಣಿಯನ್ ತಮ್ಮ ಲೇಖನದ ಕೊನೆಯಲ್ಲಿ ಹೇಳುವುದು ಹೀಗೆ: 'ಪ್ರೊಫೆಸರ್ ಅಮರ್ತ್ಯ ಸೇನ್‌ರ ಅದ್ಭುತ ಕಾರ್ಯವನ್ನು ಮೆಚ್ಚುತ್ತಿದ್ದ ನನ್ನ ಮುಂದೆ ಈಗ ಎರಡು ವಿಡಂಬನೆಗಳು ಎದುರಾಗಿವೆ. ಕ್ಷಾಮ ಮತ್ತು ಹಸಿವನ್ನು ತಡೆಗಟ್ಟಲು ನೇರ ಆಹಾರ ಪೂರೈಕೆಯ ಬದಲಾಗಿ ವಿಶಾಲ ಖರೀದಿ ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕು ಎಂಬುದು ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್‌ರ ಅಂತರ್ದೃಷ್ಟಿಯಾಗಿತ್ತು. ಆದರೆ ಈಗ ಅವರು, ಜನರ ಆಹಾರ ಸೇವನಾ ಕ್ರಮದಿಂದ ದೂರವಾಗುತ್ತಿರುವ ಧಾನ್ಯಗಳ ಪೂರೈಕೆಯಿಂದ ಅಪೌಷ್ಟಿಕತೆಯನ್ನು ದೂರಮಾಡಬಹುದು ಎನ್ನುತ್ತಿರುವುದು ನಿಜಕ್ಕೂ ಕುತೂಹಲಕರ ಮತ್ತು ರಹಸ್ಯಮಯ ಸಂಗತಿಯಾಗಿ ಗೋಚರಿಸುತ್ತಿದೆ. ಖರೀದಿ ಸಾಮರ್ಥ್ಯ ಬೆಳೆಯಬೇಕು ಎನ್ನುತ್ತಿದ್ದವರು, ನೇರ ಆಹಾರ ಪೂರೈಕೆಯ ಪ್ರತಿಪಾದಕರಾಗಿ ಬದಲಾಗಿರುವುದು ನಿಜಕ್ಕೂ ನಿಗೂಢ ಮತ್ತು ಆಶ್ಚರ್ಯಕರ ಸಂಗತಿ'.
***
ಯುಪಿಎ ಸರ್ಕಾರದ ಮಾಯಾದಂಡದ ಆರ್ಥಿಕ ನೀತಿಗಳು ಮತ್ತು ಅದಕ್ಕೆ ಬೌದ್ಧಿಕ ಬೆಂಬಲ ನೀಡುತ್ತಿರುವ ಅಮರ್ತ್ಯ ಸೇನ್‌ರನಡೆಯಿಂದಾಗಿ ಗೊಂದಲಗೊಂಡಿರುವುದು ಕೇವಲ ಸುಬ್ರಮಣಿಯನ್ ಅಷ್ಟೇ ಅಲ್ಲ. ಇದಕ್ಕೂ ಮುನ್ನ, 'ಆಹಾರ ಭದ್ರತಾ ಮಸೂದೆ ಜಾರಿಯಾಗುವುದು ತಡವಾಗುತ್ತಿರುವುದರಿಂದ, ಪ್ರತಿ ವಾರ  1000 ಮಕ್ಕಳು ಸಾಯುತ್ತಿದ್ದಾರೆ' ಎಂದು ಅಮರ್ತ್ಯ ಸೇನ್ ಹೇಳಿದ್ದರು. ಕೊಲಂಬಿಯಾ ವಿಶ್ವವಿದ್ಯಾಲಯದ ಅರವಿಂದ್ ಪನಗರಿಯಾ, ಸೇನ್‌ರ ಈ ಮೂರ್ಖತನಕ್ಕೆ ಮಂಗಳಾರತಿ ಮಾಡಿದ್ದರು.
ಎಕನಾಮಿಕ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಪನಗರಿಯಾ: "ಟಿ.ವಿ. ಚರ್ಚೆಯೊಂದರಲ್ಲಿ ಸೇನ್, ಈ ಮಸೂದೆ ಜಾರಿಯ ವಿಳಂಬದಿಂದಾಗಿ ಪ್ರತಿ ವಾರ 1000 ಮಕ್ಕಳು ಸಾಯುತ್ತಿದ್ದಾರೆ ಎಂದು ಹೇಳಿದಾಗ ನನಗೆ ಗಾಬರಿಯಾಯಿತು. ಹಾಗೆ ನೋಡಿದರೆ ಆ ಕಾಯ್ದೆ ಜಾರಿಗೇ ಬಂದಿಲ್ಲ. ಆದರೂ ಅದರ ಅಭಾವದಿಂದಾಗಿಯೇ 1000 ಮಕ್ಕಳು ಸಾಯುತ್ತಿದ್ದಾರೆ ಎಂದು ಅದ್ಹೇಗೆ ಸೇನ್ ಖಚಿತವಾಗಿ ಹೇಳಬಲ್ಲರು? ಕಡತಗಳಲ್ಲಿರುವಾಗಲೇ ಹಲವಾರು ಹುಳುಕುಗಳನ್ನು ಹೊರಗೆಡವಿಕೊಂಡ ಆ ಬಿಲ್ ಒಂದು ವೇಳೆ ಜಾರಿಯಾದರೂ ಜನರ ಕ್ಯಾಲೋರಿ ಮಟ್ಟದಲ್ಲಿ ತುಸು ಬದಲಾವಣೆ ತರಬಲ್ಲದಷ್ಟೇ ಹೊರತು, ಅವರ ಸಾವಿನ ಸಂಖ್ಯೆಯಲ್ಲಲ್ಲ. ಇನ್ನು ಫಲಾನುಭವಿಗಳು ಪೂರೈಕೆಗೆ ತಕ್ಕಂತೆ ತಮ್ಮ ಆಹಾರ ಸೇವನಾ ವಿಧಾನವನ್ನು ಹೇಗೆ ಬದಲಿಸಿಕೊಳ್ಳಲಿದ್ದಾರೆ ಎನ್ನುವುದೂ ಖಚಿತವಾಗಿಲ್ಲ" ಎಂದಿದ್ದರು.
ಸ್ವಾಮಿನಾಥನ್ ಅಯ್ಯರ್ ಕೂಡ ಸೇನ್‌ರ ಈ ಹೇಳಿಕೆಯನ್ನು ಅವರ ಅಂಕಿ ಅಂಶಗಳ ಆಧಾರದ ಮೇಲೆಯೇ ಜಾಡಿಸಿದ್ದರು. "ಆಹಾರ ಭದ್ರತಾ ಮಸೂದೆ ಜಾರಿಯಾಗದೇ ಇರುವುದರಿಂದ ವಾರಕ್ಕೆ 1000 ಮಕ್ಕಳು ಸಾಯುತ್ತಿದ್ದಾರೆ ಎನ್ನುವ ಸೇನ್‌ರ ವಾದವನ್ನು ಒಮ್ಮೆ ಒಪ್ಪಿಕೊಂಡರೂ, ವಾರಕ್ಕೆ ಸಾವಿರ ಅಂದರೆ, ವರ್ಷಕ್ಕೆ ಸುಮಾರು 50,000 ಮಕ್ಕಳು ಸಾಯುತ್ತವೆ ಎಂದಂತಾಯಿತು. ಇದರಿಂದಾಗಿ ಹೆಚ್ಚುವರಿ 50,000 ಕೋಟಿ ರುಪಾಯಿಗಳನ್ನು, ಆ ಕಾಯ್ದೆ ಅನುಷ್ಠಾನಕ್ಕೆ ಬಂದನಂತರ ಖರ್ಚು ಮಾಡಬೇಕಾಗುತ್ತದೆ. 50,000 ಮಕ್ಕಳ ಪ್ರಾಣವನ್ನು ಉಳಿಸಿದರೂ, 50,000 ಕೋಟಿ ರುಪಾಯಿಗಳ ಹೆಚ್ಚುವರಿ ಖರ್ಚು! ಒಂದು ಮಗುವನ್ನು ಉಳಿಸಲು 1 ಕೋಟಿ ರುಪಾಯಿ ಖರ್ಚು ಮಾಡುವ ಬದಲು, ಅದಕ್ಕಿಂತಲೂ ಕಡಿಮೆ ಖರ್ಚಿನ, ಸುಲಭ ಮಾರ್ಗಗಳು ಇಲ್ಲವೇ?!"

- ಆರ್.ಜಗನ್ನಾಥನ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.