'ಕೋಟೆ' ಯೋಧರ ವೀರಗಾಥೆ
ನಿನ್ನೆ ಕಾರ್ಗಿಲ್ ವಿಜಯ ದಿನ ಆಚರಿಸಿದ್ದೆವು. ಭಾರತೀಯ ಸೇನೆ ಹಲವು ವಿಕ್ರಮಗಳನ್ನು ಸಾಧಿಸಿದ್ದರೂ ಹೊಸ ಪೀಳಿಗೆಯ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಕದನವೆಂದರೆ ಕಾರ್ಗಿಲ್ನದ್ದು. ಹೀಗಾಗಿ ಕಾರ್ಗಿಲ್ ಕನವರಿಕೆಯ ಈ ಸಂದರ್ಭದಲ್ಲಿ ಆ ಸ್ಫೂರ್ತಿಗಾಥೆಯನ್ನು ನೆನಪಿಸಿಕೊಳ್ಳುತ್ತಲೇ, ಸೇನೆಯ ಶೌರ್ಯಭಾವ ಮತ್ತು ಈ ಬಗ್ಗೆ ನಮ್ಮ ನಾಡಿನ ಮನೋಭಾವ ಇವೆಲ್ಲದರ ಮನನವೂ ಅಗತ್ಯ. ಈ ಹಿನ್ನೆಲೆಯಲ್ಲಿ ಸೇನೆಯ ಕುರಿತು ಸಮಾಜದ ಸಕಾರಾತ್ಮಕ ಮತ್ತು ನಕಾರಾತ್ಮಕ ಮುಖಗಳನ್ನೆಲ್ಲ ಸೆರೆಹಿಡಿಯುತ್ತಿರುವ ಎರಡನೇ ಕಂತು ಇಲ್ಲಿದೆ.
ಈ ನೆಲದ ವೀರಗಾಥೆಗೆ ಸಾವಿರದ ನಾನೂರು ವರ್ಷಗಳ ಇತಿಹಾಸವಿದೆ.
ದಕ್ಷಿಣಾ ಪಥೇಶ್ವರ ಬಿರುದಾಂಕಿತ ಎರಡನೇ ಪುಲಕೇಶಿಯಿಂದ ಹಿಡಿದು ಇತ್ತೀಚೆಗಷ್ಟೇ ನಿವೃತ್ತರಾದ ಭಾರತೀಯ ಸೇನೆಯ ಉಪ ಮಹಾನಿರ್ದೇಶಕ ರಮೇಶ್ ಹಲಗಲಿಯವರೆಗೂ ಕ್ಷಾತ್ರತೇಜ ಪ್ರದರ್ಶಿಸಿದ, ಈ ನೆಲದ ರಕ್ಷಣೆಗಾಗಿ ಹೋರಾಡಿದ ಸಹಸ್ರಾರು ವೀರಯೋಧರಿದ್ದಾರೆ. ಹಲವರಂತೂ ದೇಶವನ್ನು ತಾಯಿಗಿಂತ ಹೆಚ್ಚು ಪ್ರೀತಿಸಿ ಎನ್ನುವ ಸಂದೇಶ ಬಿತ್ತಿ ಹೋಗಿದ್ದಾರೆ. ಈಗಲೂ ರಾಜ್ಯದ ಯಾವುದೇ ಭಾಗದಲ್ಲಿ ಸೇನಾ ರ್ಯಾಲಿ ನಡೆದರೂ ಜಿಲ್ಲೆಯ ಯೋಧರೇ ಹೆಚ್ಚು ಪಾಲ್ಗೊಳ್ಳುವುದು.
ಭಾರತೀಯ ಸೇನೆ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟುಕೊಂಡಿರುವ ಹೆಸರುಗಳಲ್ಲಿ ಜನರಲ್ ಕಾರ್ಯಪ್ಪ ಮೊದಲಿಗರು. ಎರಡನೇ ಹೆಸರೇ ಜನರಲ್ ಜಿ.ಜಿ. ಬೇವೂರು. ಈ ಬೇವೂರು ಇದೇ ಜಿಲ್ಲೆಯ ಬೇವೂರು ಗ್ರಾಮದ ವೀರರತ್ನ. ಅವರ ನಂತರ ಸೇನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು ರಮೇಶ್ ಹಲಗಲಿ. ಡಾ.ಪರ್ವತಿಕರ್ ಎರಡನೇ ಮಹಾಯುದ್ಧದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೂವರ ವೀರಮರಣ: ಈ ಮಧ್ಯೆ (1999) ಭಾರತವೇ ತಿರುಗಿ ನೋಡುವಂಥ ಸಾಹಸ, ದೇಶಪ್ರೇಮ ವ್ಯಕ್ತವಾಗಿದ್ದು ಇದೇ ಕೋಟೆಯ ನೆಲದಿಂದ. ಅದು ಕಾರ್ಗಿಲ್ ಕಾರ್ಯಾಚರಣೆ ಯುದ್ಧಭೂಮಿಯಲ್ಲಿ ಮೊದಲಿಗರಾಗಿ ವೀರಸ್ವರ್ಗ ಸೇರಿದವರು ಇಲ್ಲಿನ ಬಾದಾಮಿ ತಾಲೂಕು ಚೊಳಚಗುಡ್ಡದ ಶಿವಬಸಯ್ಯ ಕುಲಕರ್ಣಿ, ಗದ್ಯಾಳದ ದಿಲೀಪ ಪೋತದಾರ್, ಇಳಕಲ್ಲಿನ ಅಶೋಕ ಜಾಧವ್. ಹಿಮಾಚಲ ಕಣಿವೆಯಲ್ಲಿ ಪಾಕಿಸ್ತಾನದ ಉಗ್ರರೊಂದಿಗೆ ಸೆಣಸುವಾಗ ಗ್ರೆನೆಡ್ ದಾಳಿಗೆ ಶಿವಬಸಯ್ಯ ಮತ್ತು ದಿಲೀಪ್ ಹತರಾದರೆ, ಕೆಲವೇ ದಿನಗಳ ಅಂತರದಲ್ಲಿ ಇದೇ ಕಣಿವೆಯಲ್ಲಿ ಅಶೋಕ ಜಾಧವ್ ವೈರಿಗಳ ಗುಂಡಿಗೆ ಹುತಾತ್ಮರಾದರು.
2006ರಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಆಪರೇಷನ್ ಮೇಘದೂತದ ಮುಂಚೂಣಿಯಲ್ಲಿದ್ದ ಹುಲಸಗೇರಿಯ ರಂಗಪ್ಪ ಆಲೂರು ಒಂದು ಕೈ ಮತ್ತು ಒಂದು ಕಾಲು ಕಳೆದುಕೊಂಡಿದ್ದಾರೆ. ಈಗಲೂ ಜಿಲ್ಲೆಯ 2143 ಯೋಧರು ಭಾರತ ಮಾತೆಯ ಸೇವೆಯಲ್ಲಿದ್ದಾರೆ.
ವೀರಸ್ಮಾರಕಗಳ ಪ್ರೇರಣೆ: ಕಾರ್ಗಿಲ್ ಕದನದಲ್ಲಿ ವೀರಸ್ವರ್ಗ ಸೇರಿದ ಯೋಧರ ನೆನಪಿಗಾಗಿ ಚೊಳಚಗುಡ್ಡ, ಗದ್ಯಾಳ, ಇಳಕಲ್ಲನಲ್ಲಿ ವೀರಸ್ಮಾರಕ ನಿರ್ಮಿಸಲಾಗಿದೆ. ಅಲ್ಲದೇ ವಿಶೇಷ ಸಂದರ್ಭಗಳಲ್ಲಿ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮಗಳನ್ನೂ ನಡೆಸುವ ಮೂಲಕ ಆ ವೀರರನ್ನು ಸ್ಮರಿಸಲಾಗುತ್ತಿದೆ. ಈ ಮೂವರು ಯೋಧರ ಪತ್ನಿಯರಿಗೆ ಸರ್ಕಾರದಿಂದ ಸಿಗಬೇಕಿದ್ದ ಸೌಲಭ್ಯಗಳೂ ಸಿಕ್ಕಿವೆ.
ಕೈ-ಕಾಲು ಕಳೆದುಕೊಂಡಿರುವ ರಂಗಪ್ಪ ಆಲೂರು ಕೂಡ ಅಸಹಾಯಕನಾಗಿ ಮನೆಯಲ್ಲಿ ಕೂರದೇ ತಮ್ಮ ಕೈಲಾದಷ್ಟು ಭಾರತ ಮಾತೆಯ ಸೇವೆ ಮಾಡುತ್ತಿದ್ದಾರೆ.
ನಿವೃತ್ತ ಸೈನಿಕರ ಪಾಲಿಕ್ಲಿನಿಕ್ ಘಟಕ ಬೇಕು: ಸದ್ಯ ಜಿಲ್ಲೆಯಲ್ಲಿ 1696 ನಿವೃತ್ತ ಯೋಧರಿದ್ದಾರೆ. 558 ಮೃತ ಯೋಧರ ಪತ್ನಿಯರಿದ್ದಾರೆ. ಇವರ ಸುಖ-ದುಃಖ ಆಲಿಸಲು, ಅವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ಕೆಲಸ ಮಾಡುತ್ತಿದೆ. ಬಿಜಾಪುರದಲ್ಲಿ ಇರುವ ನಿವೃತ್ತ ಸೈನಿಕರ ಪಾಲಿಕ್ಲಿನಿಕ್ ಘಟಕವನ್ನು ಬಾಗಲಕೋಟೆಗೆ ಸ್ಥಳಾಂತರಿಸಿ ಆರೋಗ್ಯ ಸೇವೆಗಳನ್ನು ಸರಳ ಮತ್ತು ಸನಿಹ ಮಾಡಬೇಕೆನ್ನುವ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು ಇಷ್ಟರಲ್ಲಿಯೇ ಅದು ಸ್ಥಳಾಂತರವಾಗಲಿದೆ ಎನ್ನುತ್ತಾರೆ ಮಂಡಳಿ ಉಪ ನಿರ್ದೇಶಕ ಶಿವಾಜಿ ತುಕ್ಕಾರ.
- ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

