ಅಂಕಣಗಳು

ಕಾಂಗ್ರೆಸ್ ಮತ್ತು ಬಿಜೆಪಿಗೆ ಐಡೆಂಟಿಟಿ ಟ್ಯಾಗ್‌ನದ್ದೇ ಚಿಂತೆ!

Published On :

ಕಾಂಗ್ರೆಸ್ ಕೂಡ ಬಿಜೆಪಿಯಂತೆಯೇ ಗೊಂದಲದ ಗೂಡು. ರುಪಾಯಿ ಬೆಲೆ ಕುಸಿತಕ್ಕೆ ಪ್ರಧಾನಿಗಳು ಸಮರ್ಥನೆ ನೀಡುವಲ್ಲಿ ನಿರತರಾಗಿರುವ ವೇಳೆಯಲ್ಲಿಯೇ, ಕಾಂಗ್ರೆಸ್‌ನ ಇನ್ನುಳಿದ ನಾಯಕರು 'ಇದೇ ವಿಷಯದಿಂದಾಗಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹೊಡೆತ ಬೀಳಲಿದೆ' ಎಂದು ಹೇಳುತ್ತಿದ್ದಾರೆ.

ಇದು ಭಾರತದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಕಥೆ. ಈ ಕಥೆಯನ್ನು ತಮ್ಮ ಕೇಳುಗರಿಗೆ ಅರ್ಥಮಾಡಿಸುವುದಕ್ಕೆ ದೊಡ್ಡ ದೊಡ್ಡ ಕಥೆಗಾರರೇ ಹೆಣಗುತ್ತಿದ್ದಾರೆ. ಕಾಂಗ್ರೆಸ್ ಬಡವರ ಪರವಾಗಿದೆಯೋ ಅಥವಾ ಬಡವರ ವಿರೋಧಿಯೋ? ಬಿಜೆಪಿ ಕೇವಲ ಹಿಂದುಗಳಿಗಷ್ಟೇ ಸೀಮಿತವಾದ ಪಕ್ಷವೇ ಅಥವಾ ಎಲ್ಲಾ ಭಾರತೀಯರಿಗೋ? ಕಾಂಗ್ರೆಸ್ ಅತಿಯಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆಯೋ ಅಥವಾ ಇದು ಭಯೋತ್ಪಾದನಾ ವಿಷಯವನ್ನು ಮುಚ್ಚಿಡಲು ಮಾಡುತ್ತಿರುವ ನಾಟಕವೋ? ಎರಡೂ ಪಕ್ಷಗಳ ಆರ್ಥಿಕ ಸುಧಾರಣಾ ನೀತಿಗಳು ಒಂದೇ ತೆರನಾಗಿವೆಯೇ? ತನ್ನ ಸ್ವದೇಶಿ ಅಜೆಂಡಾವನ್ನು ಮರೆತು ಬಿಜೆಪಿ, ಕಾಂಗ್ರೆಸ್‌ನ ಇನ್ನೊಂದು ದುರ್ಬಲ ರೂಪವಾಗಿ ಬದಲಾಗಿದೆಯೇ? ಅಯೋಧ್ಯೆ, ಆರ್ಟಿಕಲ್ 370, ಏಕರೂಪ ನಾಗರಿಕ ಸಂಹಿತೆಯಂಥ ವಿಷಯಗಳಿಂದ ಬಿಜೆಪಿ ದೂರ ಸರಿದಿದೆಯೇ? ಚುನಾಣೆಗಳು ಹತ್ತಿರವಾಗುತ್ತಿರುವಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಒಬ್ಬರನ್ನೊಬ್ಬರು ಹಣಿಯಲು ಐಡೆಂಟಿಟಿ ಟ್ಯಾಗ್ ಗಳಿಸಿಕೊಳ್ಳುವ ಹವಣಿಕೆಯಲ್ಲಿ ತೊಡಗಿವೆ. ಕೆಲವು ದಿನಗಳಿಂದ ಎರಡೂ ಪಕ್ಷಗಳ ಬತ್ತಳಿಕೆಯಿಂದ ಬರುತ್ತಿರುವ ಟೀಕೆಗಳೆಲ್ಲವೂ ತಮ್ಮ ಸಾಧನೆ ಅಥವಾ ವೈಫಲ್ಯಗಳಿಗೆ ಸಂಬಂಧಪಟ್ಟಿರದೆ, ಪರಸ್ಪರರ ಸಾಂಪ್ರದಾಯಿಕ ಗುರುತುಗಳಿಗೆ ಮಸಿ ಬಳಿಯುವ ಪ್ರಯತ್ನವೇ ಆಗಿದೆ. ಇಷ್ಟಾದರೂ ಈ ಪಕ್ಷಗಳಲ್ಲಿ ಆಂತರಿಕ ದ್ವಂದ್ವವೂ ಶುರುವಾಗಿದೆ. ಪ್ರಧಾನಿ ಸೇರಿದಂತೆ ಕಾಂಗ್ರೆಸ್‌ನ ಇನ್ನಿತರ ಹಿರಿಯ ನಾಯಕರು ಭಾರತೀಯ ಮಾರುಕಟ್ಟೆಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಜಾಗ ಕೊಡುವುದು, ಶ್ರೀಮಂತ ವರ್ಗಕ್ಕೆ ಅನುಕೂಲವಾಗುವಂಥ ನೀತಿಗಳನ್ನು ಜಾರಿಗೆ ತರುವುದು ಮತ್ತು ಇನ್ನಿತರ ಆರ್ಥಿಕ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದ್ದರೆ, ಉಳಿದ ನಾಯಕರು ಆಹಾರ ಭದ್ರತಾ ಮಸೂದೆ, ನರೇಗಾ, ಅಲ್ಪಸಂಖ್ಯಾತರಿಗೆ ಉದ್ಯೋಗ ಮೀಸಲಾತಿಯಿಂದ ಮಾತ್ರ ತಮ್ಮ ಓಟ್ ಬ್ಯಾಂಕ್ ಗಟ್ಟಿಯಾಗಬಲ್ಲದು ಎಂದು ಭಾವಿಸುತ್ತಾರೆ. ಇನ್ನು ಬಿಜೆಯ ವಿಷಯವೂ ಭಿನ್ನವಾಗಿಲ್ಲ. ಬಿಜೆಪಿಯ ಹಿರಿಯ ತಲೆಗಳ ವಿಚಾರಧಾರೆಗಳಿಗಿಂತ ಭಿನ್ನವಾಗಿ ಯೋಚಿಸುತ್ತಾರೆ ನರೇಂದ್ರ ಮೋದಿ ಮತ್ತು ಅವರಂಥ ಇನ್ನೂ ಕೆಲವರು. ಹಿಂದುತ್ವ ಮತ್ತು ಮಂದಿರದ ವಿಷಯವನ್ನು ಮುಂದಿಟ್ಟುಕೊಂಡು ತಮ್ಮ ಐಡೆಂಟಿಟಿ ಟ್ಯಾಗ್ ಗಳಿಸಲು ಅಮಿತ್ ಶಾರಂಥವರು ಪ್ರಯತ್ನಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ರಾಜ್‌ನಾಥ್ ಸಿಂಗ್ ಅವರು, ಮಂದಿರ ಮತ್ತು ಆರ್ಟಿಕಲ್ 370 ತಮ್ಮ ರಾಜಕೀಯ ಅಜೆಂಡಾದ ಭಾಗವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸಾಧನೆ ಮತ್ತು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮತ ಗಳಿಸುವುದು ಕಷ್ಟ ಎನ್ನುವುದು ಎರಡೂ ಪಕ್ಷಗಳ ನಾಯಕರಿಗೆ ಅರಿವಾಗಿದೆ. ಜನರನ್ನು ಆಕರ್ಷಿಸಲು, ಏನಾದರೂ ಅಸ್ತ್ರಗಳು ಸಿಗುತ್ತವೇನೋ ಎಂದು ರಾಜಕೀಯ ಕೆಸರಿನಲ್ಲಿ ಹುಡುಕುತ್ತಲೇ ಇದ್ದಾರೆ, ಈ ಹುಡುಕಾಟದಲ್ಲಿ ಅವರ ಮೈಯೆಲ್ಲ ಕೆಸರಾಗುತ್ತಿದೆ ಅಥವಾ ಅದರಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಆದಾಗ್ಯೂ ಭಾರತದಲ್ಲಿ ರಾಜಕೀಯವೆನ್ನುವುದು ಕೋಮುವಾದ ಮತ್ತು ಜಾತ್ಯತೀತತೆ ಎನ್ನುವ ಎರಡು ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತದೆಯಾದರೂ, ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆಯಲ್ಲಿ ತಮಗೆ ಲಾಭ ತಂದುಕೊಡಬಹುದಾದ ಇನ್ನಿತರ ಸಾಧ್ಯತೆಗಳ ಅನ್ವೇಷಣೆಯಲ್ಲೂ ಇವೆ.
ಊಹಿಸಿದಂತೆ, ಹಿಂದುತ್ವ ಮತ್ತು ಅಭಿವೃದ್ಧಿಯ ಸಂಕೇತವಾದ ನರೇಂದ್ರ ಮೋದಿಯವರು, ತಾವು ಹಿಂದು ರಾಷ್ಟ್ರೀಯವಾದಿ ಎಂದು ಹೇಳಿದ್ದಾರೆ. ಸರಿಯಾದ ಸಮಯದಲ್ಲಿ, ಸರಿಯಾದ ಜನರಿಗಾಗಿ, ಸರಿಯಾದ ಪದಗಳನ್ನು ಬಳಸುವುದರಲ್ಲಿ ಅವರು ಸಿದ್ದ ಹಸ್ತರು. ತಮ್ಮ ರಾಜಕೀಯ-ಧಾರ್ಮಿಕ ಗುರುತಿನ ಬಗ್ಗೆ ಅವರು ಉಲ್ಲೇಖ ನೀಡಿದ್ದು ವಿದೇಶಿ ಮಾಧ್ಯಮ ಏಜೆನ್ಸಿಯ ಮುಂದೆ, ಭಾರತೀಯ ಮಾಧ್ಯಮಗಳ ಮುಂದಲ್ಲ! ಇದಾದ ನಂತರ ಅವರು 'ಕಾಂಗ್ರೆಸ್ ತನ್ನ ವೈಫಲ್ಯಗಳನ್ನೆಲ್ಲ ಮುಚ್ಚಿಹಾಕಲು ಸೆಕ್ಯುಲರ್ ಬುರ್ಖಾ ಧರಿಸುತ್ತಿದೆ' ಎಂದು ಟೀಕಿಸಿದರು. ಮೋದಿಯವರ ಈ ಹೊಸ ಮಂತ್ರದಿಂದಾಗಿ, ಸೈದ್ಧಾಂತಿಕವಾಗಿ ಬರಡಾಗಿ ಹೋಗಿದ್ದ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಇನ್ನು ಎದುರಾಳಿ ಪಕ್ಷ ಕಾಂಗ್ರೆಸ್ ಐಡೆಂಟಿಟಿ ಟ್ಯಾಗ್ ಪಡೆಯುವ ಕೆಲಸದಲ್ಲಿ ನಿರತವಾಗಿದೆ. ರಾಷ್ಟ್ರೀಯತೆಯ ಉಲ್ಲೇಖವನ್ನು 'ಧರ್ಮಕ್ಕೆ' ಇಳಿಸಿ ದೇಶವನ್ನು ಇಬ್ಭಾಗ ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ವಕ್ತಾರ ಅಜಯ್ ಮಕೆನ್ ಮೋದಿಯವರನ್ನು ದೂಷಿಸಿದ್ದಾರೆ. ದೇಶದ ಚರ್ಚೆಯೆಲ್ಲ ಹಿಂದು ಅಥವಾ ಹಿಂದೂಯೇತರ ರಾಷ್ಟ್ರೀಯತೆಯತ್ತಲೇ ವಾಲತೊಡಗಿದಾಗ, ಮೋದಿಯವರ ಸೇನೆ ತಕ್ಷಣವೇ ಇನ್ನಿತರ ವಿಷಯಗಳತ್ತ ಮುಖ ಮಾಡಿತು. ಖುದ್ದು ಬಿಜೆಪಿಯೇ, ಗುಜರಾತ್ ಮುಖ್ಯಮಂತ್ರಿ ತಮ್ಮನ್ನು ತಾವು ಹೆಮ್ಮೆಯ ಹಿಂದು ರಾಷ್ಟ್ರೀಯತಾವಾದಿ ಎಂದು ಬಿಂಬಿಸಿಕೊಂಡಿದ್ದ ಪೋಸ್ಟರ್‌ಗಳನ್ನು ತೆಗೆಸಿಹಾಕಿತು. ಮುಂಬೈನ ಪ್ರಮುಖ ಗಲ್ಲಿಗಳಲ್ಲಿ ಆ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಿಂತ ತ್ವರಿತವಾಗಿ ಅವುಗಳನ್ನು ತೆಗೆಯುವ ಕೆಲಸವಾಯಿತು.
ತಮ್ಮ ಆರ್ಥಿಕ ಸಿದ್ಧಾಂತಗಳಿಗೆ ಒತ್ತುಕೊಡಲು ಕಾಂಗ್ರೆಸ್ ಮತ್ತು ಬಿಜೆಪಿ, ವಿದೇಶದಲ್ಲಿ ಶಿಕ್ಷಣ ಪಡೆದ ಭಾರತದ ಅರ್ಥಶಾಸ್ತ್ರಜ್ಞರ ಬೆಂಬಲ ಪಡೆಯಲು ಸ್ಪರ್ಧೆ ನಡೆಸಿವೆ. ಇತ್ತೀಚೆಗೆ ಬಿಜೆಪಿ, ಅರ್ಥಶಾಸ್ತ್ರಜ್ಞರೊಬ್ಬರಿಗಾಗಿ ಫೈವ್‌ಸ್ಟಾರ್ ಹೊಟೆಲ್‌ನಲ್ಲಿ ಡಿನ್ನರ್ ಆಯೋಜಿಸಿತ್ತು. ಕೆಲವು ಕಾರ್ಪೊರೇಟ್ ನಾಯಕರು ಮತ್ತು ಬಿಜೆಪಿಯ ಕೆಲವು ಆಪ್ತರನ್ನೂ ಅಲ್ಲಿ ಆಹ್ವಾನಿಸಲಾಗಿತ್ತು. ಆ ಅರ್ಥಶಾಸ್ತ್ರಜ್ಞನ ಏಕೈಕ ಅರ್ಹತೆಯೆಂದರೆ, ಅವರ ಹೆಸರು 'ಭಾರತದ ಅತ್ಯುತ್ತಮ ಅರ್ಥಶಾಸ್ತ್ರಜ್ಞರ' ಪಟ್ಟಿಯಲ್ಲಿ ಜಾಗ ಪಡೆದಿದೆ ಎನ್ನುವುದು. ಅವರೇ ಪ್ರೊಫೆಸರ್ ಭಗವತಿ. ಇನ್ನು ಕೆಲವು ವಿಶ್ವಾಸಾರ್ಹ ಅರ್ಥಶಾಸ್ತ್ರಜ್ಞರ ಪ್ರಕಾರ, ಭಗವತಿ ಅವರು ಆರ್ಥಿಕ ರಾಷ್ಟ್ರವಾದದ ಪ್ರತಿಪಾದಕರು, ಹಾಗಾಗೆ ಅಮರ್ತ್ಯ ಸೇನ್‌ರ ಎದುರು ನೊಬೆಲ್ ಸ್ಪರ್ಧೆಯಲ್ಲಿ ಅವರು ಸೋತರು ಎನ್ನಲಾಗುತ್ತದೆ.  ಪ್ರಸಕ್ತ ಆರ್ಥಿಕ ನೀತಿಗಳ ಬಗ್ಗೆ ಬಿಜೆಪಿಯ ನಾಯಕತ್ವ ಮತ್ತು ಮೋದಿಯವರ ಪ್ರಮೋಟರ್‌ಗಳ ನಡುವಿನ ಭಿನ್ನಾಭಿಪ್ರಾಯ ಹೊರಬಂದದ್ದು ಇತ್ತೀಚೆಗೆ- ಕೇಂದ್ರದ ಮಾಜಿ ಸಚಿವರೊಬ್ಬರು, ಬಡವರಿಗೆ ಸಬ್ಸಿಡಿ ಕೊಡುವುದನ್ನು ನಿಷೇಧಿಸಬೇಕು ಎನ್ನುವ ಮಾತನ್ನು ಭಾವೋದ್ವೇಗದಿಂದ ಪ್ರಶ್ನಿಸಿದಾಗ.  ಯುಪಿಎದ ಪ್ರಸಕ್ತ ಆರ್ಥಿಕ ನಿರ್ಧಾರಗಳ ಮೇಲೆ ಬಿಜೆಪಿ ಎರಡು ತಂಡಗಳಾಗಿ ಭಾಗವಾಗಿದೆ. ಪೆಟ್ರೋಲಿಯಂ ದರಗಳ ಹೆಚ್ಚಳದಿಂದಾಗಿ ಸಾರ್ವಜನಿಕರು ಸಿಟ್ಟಿಗೆದ್ದಿದ್ದರೂ ಕೂಡ, ಬಿಜೆಪಿಯ ನಾಯಕತ್ವ ಅನಿಲ ದರವನ್ನು ನೂರು ಪ್ರತಿಶತದಷ್ಟು ಹೆಚ್ಚಸುವ ಸರ್ಕಾರದ ನಿರ್ಧಾರದ ಬಗ್ಗೆ ತುಟಿಬಿಚ್ಚುತ್ತಿಲ್ಲ.
ಕಾಂಗ್ರೆಸ್ ಕೂಡ ಬಿಜೆಪಿಯಂತೆಯೇ ಗೊಂದಲದ ಗೂಡಾಗಿದೆ. ರುಪಾಯಿ ಬೆಲೆ ಕುಸಿತಕ್ಕೆ ಪ್ರಧಾನಿಗಳು ಸಮರ್ಥನೆ ನೀಡುವಲ್ಲಿ ನಿರತರಾಗಿರುವ ವೇಳೆಯಲ್ಲಿಯೇ, ಕಾಂಗ್ರೆಸ್‌ನ ಇನ್ನುಳಿದ ನಾಯಕರು 'ಇದೇ ವಿಷಯದಿಂದಾಗಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹೊಡೆತ ಬೀಳಲಿದೆ' ಎಂದು ಹೇಳುತ್ತಿದ್ದಾರೆ. ಇನ್ನು ಇಶ್ರತ್ ಜಹಾನ್ ಪ್ರಕರಣದ ವಿಷಯದಲ್ಲೂ ಅಷ್ಟೇ. ಸರ್ಕಾರ ಮತ್ತು ಪಕ್ಷ ಕಾನೂನು ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೊನೆಗೆ ಎಲ್ಲವನ್ನೂ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯವರಿಗೆ ಬಿಟ್ಟುಬಿಡಲಾಯಿತು. ಭಾರತಕ್ಕೆ ಭಯೋತ್ಪಾದನೆಯ ಕುರಿತಾಗಿ ಅಮೆರಿಕದಿಂದ ಮಾಹಿತಿಗಳನ್ನು ಹೊರಗೆ ಹಾಕುವಂತಿಲ್ಲ ಎಂದು ಒಪ್ಪಂದವಾಗಿದೆ ಎನ್ನುತ್ತಾ ಬಚಾವಾದರು. ಐಡೆಂಟಿಟಿ ಟ್ಯಾಗ್ ಪಡೆಯುವ ಕಾತರದಲ್ಲಿ ಇವೆರಡೂ ಪಕ್ಷಗಳು ನೀತಿ ನಿಯಮಗಳನ್ನು ಗಾಳಿಗೆ ತೂರಿ ಮುನ್ನುಗ್ಗುತ್ತಿವೆ. ಅಪಶಕುನದ ಗೆರೆಗಳನ್ನು ಗೀಚಿ ಭಾರತವನ್ನು ಇಬ್ಭಾಗ ಮಾಡಲು ಪ್ರಯತ್ನಿಸುತ್ತಿವೆ. 'ಇಂಡಿಯಾ ಶೈನಿಂಗ್‌' ಮತ್ತು 'ಗ್ರೇಟ್ ಇಂಡಿಯಾ ಸ್ಟೋರಿ' ಎಂಬ ಕಥೆಗಳ ಕೊನೆ ಏನಾಗಲಿದೆಯೋ ಎನ್ನುವುದನ್ನು ಯಾರಿಗೂ ಉಲ್ಲೇಖಿಸಲು ಸಾಧ್ಯವಿಲ್ಲ.

-ಪ್ರಭು ಚಾವ್ಲಾ
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಸಂಪಾದಕೀಯ ನಿರ್ದೇಶಕರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.