ಅಂಕಣಗಳು

'ಇನ್ಫಿ'ಯ ಇನ್ಫೆಕ್ಷನ್‌ಗೆ ಮದ್ದು ಹಚ್ಚುವರೇ ಮೂರ್ತಿ?

'ಇನ್ಫಿ'ಯ ಇನ್ಫೆಕ್ಷನ್‌ಗೆ ಮದ್ದು ಹಚ್ಚುವರೇ ಮೂರ್ತಿ?
ಎನ್. ಆರ್. ನಾರಾಯಣಮೂರ್ತಿ
Published On :

ಎನ್. ಆರ್. ನಾರಾಯಣಮೂರ್ತಿಯವರು ಇನ್ಫೋಸಿಸ್‌ನ ಕಾರ್ಯಾಧ್ಯಕ್ಷರಾಗಿ ಮರಳಿದ್ದಾರೆ. ಇನ್ಫೋಸಿಸ್ ಕಳೆಗುಂದಿರುವುದಕ್ಕೆ ಹಲವಾರು ಕಾರಣಗಳಿವೆ. ಮಾರುಕಟ್ಟೆಯಲ್ಲಿ ಅದರ ವರ್ಚಸ್ಸು ಕಡಿಮೆಯಾಗಿದೆ ಅನ್ನುವುದಕ್ಕಿಂತ ಮುಖ್ಯವಾಗಿ ಹಲವಾರು ರಚನಾತ್ಮಕ ಸಮಸ್ಯೆಗಳು ಅದನ್ನು ಅಲ್ಲಾಡಿಸುತ್ತಿವೆ.
ಅಲ್ಲದೆ ಮೂರ್ತಿಯವರನ್ನು ವಾಪಸ್ ಕರೆದು ತಂದಿರುವ ಇನ್ಫೋಸಿಸ್ ಆಡಳಿತ ಮಂಡಳಿ ತನ್ನ ವೈಫಲ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ನಿಸ್ಸಂಶಯವಾಗಿಯೂ ಇನ್ಫೋಸಿಸ್‌ನ ಸದ್ಯದ ಯೋಜನೆಗಳಿಗೆ ಸುಧಾರಣೆಯ ಅವಶ್ಯಕತೆಯಿದೆ. ಅದರ ಪ್ರಸ್ತುತ ನಾಯಕತ್ವಕ್ಕೆ ಸಹಾಯ ಬೇಕಿದೆ. ಎಲ್ಲವೂ ಸರಿಯಿದ್ದರೆ ನಿವೃತ್ತ ಜೀವನ ನಡೆಸುತ್ತಿರುವ ನಾರಾಯಣ ಮೂರ್ತಿಯವರನ್ನೇಕೆ ವಾಪಸ್ ಕರೆತರಲಾಗುತ್ತಿತ್ತು?
ಕಳೆದ ಕೆಲವು ವರ್ಷಗಳಿಂದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್), ಕಾಗ್ನಿಜಂಟ್ ಟೆಕ್ನಾಲಜೀಸ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್‌ಗಳು ಜಾಗತಿಕ ಮಾರುಕಟ್ಟೆಯ ಮಂದಗತಿಯ ನಡುವೆಯೂ ಬಿರುಸಿನಿಂದ ವೃದ್ಧಿಯಾಗುತ್ತಾ ಸಾಗಿವೆ. ಇನ್ನೊಂದೆಡೆ ಸೂಕ್ತ ಮಾರ್ಗದರ್ಶನವಿಲ್ಲದೆ ಇನ್ಫೋಸಿಸ್ ಹಿಂದೆ ಬಿದ್ದಿದೆ.
ಈಗ ಎದುರಾಗಿರುವ ಪ್ರಶ್ನೆಯೆಂದರೆ, ಮೂರ್ತಿ ಎಲ್ಲವನ್ನು ಸರಿ ಮಾಡಬಲ್ಲರೇ? ಹಾಗಂತ ಇದುವರೆಗೂ ಯಾವ ಕಾರ್ಪೊರೇಟ್ ಬೋರ್ಡ್‌ಗಳೂ ಕಂಪನಿಯ ಹಿರಿಯ ನಾಯಕರನ್ನು ವಾಪಸ್ ತಂದ ಉದಾಹರಣೆಗಳಿಲ್ಲ ಎಂದಲ್ಲ. ಗಾಳಿಗೆ ಸಿಲುಕಿ ಹಡಗು ಎತ್ತೆತ್ತಲೋ ಸಾಗತೊಡಗಿದಾಗ ಅದನ್ನು ಹತೋಟಿಗೆ ತರಲು ಬಲಿಷ್ಠ, ಬುದ್ಧಿವಂತ ಕ್ಯಾಪ್ಟನ್‌ನ ಅವಶ್ಯಕತೆಯಿರುತ್ತದೆ. 'ಆ್ಯಪಲ್‌' ಕಂಪನಿಯ ಆಡಳಿತ ಮಂಡಳಿ ಸ್ಟೀವ್ ಜಾಬ್ಸ್‌ರನ್ನು ಮತ್ತೆ ಕರೆತಂದಿತು. ಅದಕಿಂತ ದೊಡ್ಡ Come back story ಮತ್ತೊಂದು ಇಲ್ಲವೇನೋ? ಸ್ಟೀವ್ ಅಧಿಕಾರದಲ್ಲಿರುವವರೆಗೆ ಆ್ಯಪಲ್ ಕಂಪನಿ ಹಿಂದಿರುಗಿ ನೋಡಲಿಲ್ಲ. ಐಮ್ಯಾಕ್, ಐಟ್ಯೂನ್ಸ್, ಐಪಾಡ್, ಐಫೋನ್ ಮತ್ತು ಐಪ್ಯಾಡ್‌ನಂತಹ ಉತ್ಕೃಷ್ಟ ಉತ್ಪನ್ನಗಳು ಆ ಕಂಪನಿಯಿಂದ ಹೊರಬಂದವು.  ಕಳೆದ ಕೆಲವು ಸಮಯದ ಹಿಂದಷ್ಟೇ ಅಮೆರಿಕದ 'ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್‌'(ಪಿ ಆ್ಯಂಡ್ ಜಿ) ಕಂಪನಿ ತನ್ನ ಹಳೆಯ ಯುದ್ಧ ಕುದುರೆ, ಮಾಜಿ ಸಿಇಓ ಲ್ಯಾಫ್ಲೆ ಅವರನ್ನು ವಾಪಸ್ ಕೆಲಸಕ್ಕೆ ಕರೆತಂದಿತು. ಲ್ಯಾಫ್ಲೆಯ ಆಗಮನದ ನಂತರ ಆ ಕಂಪನಿ ತುಸು ಚೇತರಿಸಿಕೊಂಡಿತಾದರೂ ಮತ್ತೆ ಕೆಲವೇ ದಿನಗಳಲ್ಲಿ ಮುಗ್ಗರಿಸಿಬಿದ್ದಿತು.
 ವ್ಯತ್ಯಾಸವಿಷ್ಟೆ. 1996ರಲ್ಲಿ ಸ್ಟೀವ್ ಜಾಬ್ಸ್ ಆ್ಯಪಲ್ ಕಂಪನಿಗೆ ಮರಳಿದಾಗ ಅವರ ವಯಸ್ಸು 41. ತಮ್ಮ ಕಂಪನಿಯನ್ನು ಮೇಲೆತ್ತಲು ಅದಮ್ಯ ಉತ್ಸಾಹ, ಕ್ರಿಯಾಶೀಲತೆ ಮತ್ತು ಬಹಳಷ್ಟು ಸಮಯವೂ ಅವರ ಬಳಿ ಇತ್ತು. ಆದರೆ ಲ್ಯಾಫ್ಲೆಗೀಗ 65 ವರ್ಷ ವಯಸ್ಸು. ಬರುವ ಆಗಸ್ಟ್‌ನಲ್ಲಿ ನಾರಾಯಣ ಮೂರ್ತಿಯವರು 67ನೇ ವಸಂತಕ್ಕೆ ಕಾಲಿಡಲಿದ್ದಾರೆ. 67 ವರ್ಷದ ಮೂರ್ತಿ ಸ್ಟೀವ್ ಜಾಬ್ಸ್‌ರಂತೆ ಮ್ಯಾಜಿಕ್ ಮಾಡಬಲ್ಲರೇ? ಹಾಗಂತ ವಯಸ್ಸೇ ಎಲ್ಲದಕ್ಕೂ ಮಾಪನವಾಗಬಾರದು. ಒಬ್ಬ ವ್ಯಕ್ತಿಯ ಕ್ರಿಯಾಶೀಲತೆಯನ್ನು ವಯಸ್ಸಿನಿಂದ ಅಳೆಯಲಾಗದು. ಆದರೆ ಮೂರ್ತಿಯವರು 1981ರಲ್ಲಿ ಇನ್ಫೋಸಿಸ್ ಅನ್ನು ಶುರುಮಾಡಿದಾಗ ಅವರಿಗೆ ಎದುರಾಗಿದ್ದ ಸಮಸ್ಯೆಗಳಿಗಿಂತ ಈಗಿನ ಸಮಸ್ಯೆಗಳು ವಿಭಿನ್ನ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮೂರ್ತಿ, 'ತಮ್ಮ ಗುರಿ ಸಿಇಓ ಎಸ್‌ಡಿ ಶಿಬುಲಾಲ್ ಅವರೊಂದಿಗೆ ಸೇರಿ ಕಂಪನಿಯ ಮೌಲ್ಯವನ್ನು ಹೆಚ್ಚಿಸುವುದೇ ಹೊರತು ನೇರವಾಗಿ ನಿರ್ದೇಶನಕ್ಕೆ ಇಳಿಯುವುದಲ್ಲ' ಎಂದು ಹೇಳಿದ್ದಾರೆ.
1981ರಲ್ಲಿ ಮೂರ್ತಿ ಮತ್ತುವರ ಗೆಳೆಯರಿಗೆ ಅರಿವಾಗಿದ್ದೇನೆಂದರೆ, ಅಮೆರಿಕದಲ್ಲಿ ಸಾಫ್ಟವೇರ್ ಕೆಲಸಗಳನ್ನು ಮಾಡಲು ಇಲ್ಲಿಂದ(ಭಾರತದಿಂದ) ಭಾರತೀಯರನ್ನು ಕಳುಹಿಸುವ ಬದಲು, ಅವರಿಗೆ ಇಲ್ಲೇ ಉದ್ಯೋಗ ಕೊಟ್ಟು ವಿವಿಧ ಕಾಲಮಾನಗಳಲ್ಲಿ ಕೆಲಸ ನಿರ್ವಹಿಸುವಂತೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಮೊದಲಿನಂತೆಯೇ ಫಲಿತಾಂಶ ಪಡೆಯಬಹುದು ಎಂಬುದು! ಅವರ ಸಾಹಸ ಮತ್ತು ಅದೃಷ್ಟದಿಂದಾಗಿ ಇನ್ಫೋಸಿಸ್ ಕೆಲವೇ ವರ್ಷಗಳಲ್ಲಿ ಪ್ರಪಂಚದ ಅತಿದೊಡ್ಡ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾಗಿ ಬೆಳೆಯಿತು.
ಇನ್ನು 1990ರ ವೇಳೆಗೆ ಯಾವಾಗ ಭಾರತ ಮುಕ್ತ ಬಂಡವಾಳ ಮಾರುಕಟ್ಟೆಗೆ ಬಾಗಿಲು ತೆರೆಯಿತೋ, ಆಗ ಅದರ ಸದುಪಯೋಗ ಪಡೆದ ಕಂಪನಿಗಳಲ್ಲಿ ಇನ್ಫೋಸಿಸ್ ಮುಂಚೂಣಿಯಲ್ಲಿತ್ತು. ಇನ್ನು ಅದೇ ದಶಕದಲ್ಲಿ, ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದ ಕಂಪನಿಗಳಲ್ಲಿ ಹಣ ಹೂಡಲು ಉತ್ಸುಕತೆ ತೋರಲಾರಂಭಿಸಿದರು. ಆದರೆ ಭಾರತದ ಕಾರ್ಪೊರೇಟ್ ಆಡಳಿತಗಳಿಂದ ಅವರಿಗೆ ಹೆಚ್ಚು ಪ್ರೋತ್ಸಾಹ ಸಿಗಲಿಲ್ಲ. ಆಗ ಮೂರ್ತಿಇನ್ಫೋಸಿಸ್ ಅನ್ನು ಭಾರತದ ಅತ್ಯಂತ ಪಾರದರ್ಶಕ ಕಂಪನಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿ, ಅದನ್ನು ಮಾರುಕಟ್ಟೆಯ 'ಡಾರ್ಲಿಂಗ್‌' ಮಾಡಿದರು. ಇನ್ನು ಜಗತ್ತಿನ ಸಾಫ್ಟ್‌ವೇರ್ ವಲಯವನ್ನು ಕಾಡಿದ ವೈ2ಕೆ ಸಮಸ್ಯೆಯನ್ನು ಬಗೆಹರಿಸಲು ಇನ್ಫೋಸಿಸ್ ಸೇರಿದಂತೆ ಭಾರತದ ಹಲವಾರು ಕಂಪನಿಗಳು ಹಳೆಯ ಕೋಡ್‌ಗಳನ್ನು ಪುನರ್ರಚಿಸಿ ಪಶ್ಚಿಮ ರಾಷ್ಟ್ರಗಳನ್ನು 'ಮಿಲೇನಿಯಮ್ ಬಗ್‌'ನಿಂದ ಪಾರುಮಾಡಿದವು. ಇದೇನೇ ಇರಲಿ, ಈಗ ಇನ್ಫೋಸಿಸ್ ಎದುರಿಸುತ್ತಿರುವ ಸಮಸ್ಯೆಗಳು ಸಂಪೂರ್ಣವಾಗಿ ಭಿನ್ನವಾಗಿವೆ.
ಮೊದಲನೆಯದಾಗಿ, ಅಪ್ಲಿಕೇಶನ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ವ್ಯಾಪಾರಿಕರಣ. ಈ ಉದ್ಯೋಗವನ್ನು ಉಳಿಸಲು ಹಾಗೂ ಬೆಳೆಸಲು ಕ್ಷಿಪ್ರ ಮಾರ್ಕೆಟಿಂಗ್ ಮತ್ತು ಬೆಲೆಗಳನ್ನು ಇಳಿಸುವುದರ ಅಗತ್ಯವಿದೆ. ಆದರೆ ಇನ್ಫೋಸಿಸ್, ಮಾರುಕಟ್ಟೆಯ ತ್ವರಿತ ಬದಲಾವಣೆಗಳಿಗೆ ಹೊಂದಿಕೊಳ್ಳಲು ಮಂದಗತಿ ತೋರಿಸುತ್ತಿದೆ. ಈಗ ಮೂರ್ತಿ, ಬೆಲೆಯಲ್ಲಿ ರಿಯಾಯತಿ ತರುವರೆ? ಇದುವರೆಗೂ ಈ ಪ್ರಯತ್ನಕ್ಕೆ ಮುಂದಾಗಲು ಹಿಂದೇಟು ಹಾಕುತ್ತಿದ್ದ ಅವರ ಸಹೋದ್ಯೋಗಿಗಳು ಇದಕ್ಕೆ ಒಪ್ಪುತ್ತಾರಾ?
ಎರಡನೆಯದಾಗಿ, ಇನ್ಫೋಸಿಸ್‌ಗೆ ಹಳೆಯ ನಿಷ್ಠಾವಂತ ವ್ಯಕ್ತಿ ಬರಬೇಕೋ ಅಥವಾ ಹೊಸ ನಾಯಕರನ್ನು ಕರೆತರಬೇಕೋ ಎನ್ನುವ ಗೊಂದಲ ಹಲವರಲ್ಲಿದೆ. ಐಬಿಎಮ್ ಕಂಪನಿ 1990ರಲ್ಲಿ  ಸಂಕಷ್ಟಕ್ಕೆ ಸಿಲುಕಿದಾಗ ಅದರ ಆಡಳಿತ ಮಂಡಳಿ 'ನಬಿಸ್ಕೊ' ಕಂಪನಿಯ ಮಾಜಿ ಸಿಇಓ ಗರ್ಸ್ಟನರ್ ಅವರನ್ನು ಕರೆತಂದಿತು. ಹೊರಗಿನವರಾದ ಗರ್ಸ್ಟನರ್ ಬದಲಾಗಿರುವ ಮಾರುಕಟ್ಟೆಯನ್ನು ಗಮನಿಸಿ ಅದಕ್ಕೆ ತಕ್ಕಂತೆ ಐಬಿಎಮ್‌ನ ವಹಿವಾಟು ರೀತಿಯನ್ನು ಪುನರ್ರಚಿಸಲೇಬೇಕು ಎಂದು ತೀರ್ಮಾನಿಸಿದರು. ಆ ಕಂಪನಿಯ PC ಬಿಸಿನೆಸ್ ಅನ್ನು ಚೀನಾದ 'ಲಿನೋವೋ' ಕಂಪನಿಗೆ ಮಾರಾಟ ಮಾಡಿ ಐಬಿಎಮ್‌ನ ದೃಷ್ಟಿಯನ್ನೆಲ್ಲ ಕನ್ಸಲ್‌ಟಿಂಗ್‌ನತ್ತ ಕೇಂದ್ರೀಕರಿಸಿ ಅದು ಬೆಳೆಯುವಂತೆ ಮಾಡಿದರು.
32ವರ್ಷಗಳ ಹಿಂದೆ ವಿಭಿನ್ನ ಹಾಲಾತಿನಲ್ಲಿ ಹುಟ್ಟುಹಾಕಿದ ಇನ್ಫೋಸಿಸ್‌ಗೆ ಅವರು ಮರುಹುಟ್ಟು ಕೊಡಬಲ್ಲರೇ? 'ಪ್ರಸಕ್ತ ಬದಲಾವಣೆಗಳಿಂದ ದೂರ ಉಳಿದಿದ್ದಕ್ಕಾಗಿಯೇ ರೋಹನ್‌ನನ್ನು(ಮಗ)  ಕಾರ್ಯನಿರ್ವಾಹಕ ಸಹಾಯಕರಾಗಿ ಕೆಲಸ ಮಾಡುವಂತೆ ಕೇಳಿಕೊಂಡಿದ್ದಾಗಿ' ಮೂರ್ತಿ ಹೇಳಿದ್ದಾರೆ.
ಮೂರನೆಯದಾಗಿ, ಇನ್ಫೋಸಿಸ್  ಪ್ರತಿಸ್ಪರ್ಧಿಗಳ ವೇಗಕ್ಕೆ ಹೊಂದಿಕೊಳ್ಳುವಲ್ಲಿ ನಿಧಾನಗತಿ ತೋರಿಸುತ್ತದೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗಂತ ಐದು ವರ್ಷದ ಹಿಂದೆ ಔದ್ಯಮಿಕ ವಲಯದಲ್ಲಿ ಬಂದ ಬೃಹತ್ ಬದಲಾವಣೆಯ ಅರಿವು ಅದಕ್ಕೆ ಇರಲಿಲ್ಲವೆಂದೇನೂ ಅಲ್ಲ! ಈ ಕುರಿತು ಬರೆಯುತ್ತಾ 'ಫೋರ್ಬ್ಸ್ ಇಂಡಿಯಾ' ಹೀಗೆ ಹೇಳಿತ್ತು: 'ಐದು ವರ್ಷದ ಹಿಂದೆ ಎಲ್ಲಾ ದೊಡ್ಡ ಕಂಪನಿಗಳು ತಮ್ಮ ರಣತಂತ್ರವನ್ನು ಬದಲಾಯಿಸಿದವು. ಎಚ್‌ಸಿಎಲ್, ಕಾಗ್ನಿಜಂಟ್ ಈ ಬದಲಾವಣೆಗೆ ತಕ್ಕಂತೆ ಬದಲಾದವು. ಇನ್ನು ಟಿಸಿಎಸ್‌ನ ಸಿಇಓ ಆರ್. ಚಂದ್ರಶೇಖರನ್ ಅಂತೂ ತಮ್ಮ ಕಂಪನಿಯನ್ನು ಚಿಕ್ಕ ಚಿಕ್ಕ ಘಟಕಗಳಾಗಿ ವಿಂಗಡಿಸಿ ಬದಲಾವಣೆಗೆ ಹೊಂದಿಕೊಂಡರು. ಇದರಿಂದಾಗಿ ಎಲ್ಲಾ ಘಟಕಗಳು ಪ್ರತ್ಯೇಕವಾಗಿ ತ್ವರಿತ ಏಳಿಗೆ ಕಂಡವು. ಆದರೆ ಇನ್ಫೋಸಿಸ್ ತನ್ನ 'ಸ್ಟ್ರಾಟಜಿ 3.0'ದ ಮೂಲಕ ಕಠಿಣ ಮಾರ್ಗವನ್ನು ತುಳಿಯಿತು.'
ಮೂರ್ತಿಯವರಿಗೆ ಎದುರಾಗಿರುವ ಸವಾಲೆಂದರೆ, ಇನ್ಫೋಸಿಸ್‌ನಲ್ಲಿ ಬದಲಾವಣೆ ತಂದು ಅದು ಕ್ಷಿಪ್ರ ಅಭಿವೃದ್ಧಿ ಹೊಂದುವಂತೆ ಮಾಡಬೇಕೋ ಅಥವಾ ಎಲ್ಲಾ ಯೋಜನೆಯನ್ನು ಪುನಃ ರಚಿಸಬೇಕೋ ಎನ್ನುವುದು. ನಿವೃತ್ತಿ ಪಡೆದು ಮತ್ತೆ ತಮ್ಮ ಕಂಪನಿಗೆ ಹಿಂದಿರುಗಿ ಅದನ್ನು ಉಳಿಸಿದವರು ಅನೇಕರಿದ್ದಾರೆ. ಸ್ಟೀವ್ ಜಾಬ್ಸ್ ಮತ್ತು 'ಸ್ಟಾರ್‌ಬಕ್ಸ್‌'ನ ಹೆರಾಲ್ಡ್ ಶಲ್ಜ್ ಇದಕ್ಕೊಂದು ಉತ್ತಮ ಉದಾಹರಣೆ. ಆದರೆ 'ವಿಫಲ'ವಾದವರ ಸಂಖ್ಯೆಯೂ ಕಡಿಮೆಯೇನಿಲ್ಲ. ಎನ್ರಾನ್ ಕಂಪನಿಗೆ ಹಿಂದಿರುಗಿದ 'ಕೆನತ್ ಲೇ' ಆ ಕಂಪನಿಗೆ ದುರಂತವಾಗಿ ಪರಿಣಮಿಸಿದರು. ಇನ್ನು 'ಕ್ಸೆರಾಕ್ಸ್‌' ಕಂಪನಿಯನ್ನು ಉಳಿಸಲು ಹಿಂದಿರುಗಿದ ಅದರ ಮಾಜಿ ಸಿಇಓ ಪಾಲ್ ಅಲ್ಲೈರ್‌ಗೆ ತಮ್ಮ ಎರಡನೆ ಇನ್ನಿಂಗ್ಸನ್ನು ಕೇವಲ 15 ತಿಂಗಳುಗಳವರೆಗೆ ಮಾತ್ರ ನಿಭಾಯಿಸಲು ಸಾಧ್ಯವಾಯಿತು.
 ಇದೇನೇ ಇದ್ದರೂ ನಾರಾಯಣ ಮೂರ್ತಿ ಆಗಮನವನ್ನು ಮಾರುಕಟ್ಟೆ ಖುಷಿಯಿಂದಲೇ ಸ್ವೀಕರಿಸಲಿದೆ, ಆದರೆ ಹಿಂದಿನ ಮೂರ್ತಿಗಿಂತ ಇಂದಿನ ಮೂರ್ತಿಗೆ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಸಮಯವೇ ನಿರ್ಧರಿಸಲಿದೆ!

 -ಆರ್. ಜಗನ್ನಾಥನ್
ಸಂಪಾದಕರು, ಫಸ್ಟ್‌ಪೋಸ್ಟ್ ಜಾಲತಾಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.