Hmmm... ಪಾಂಚ್ ಅಂಬರೀಶ್

Updated on: 

-    ವಸತಿ ಖಾತೆ ಸಚಿವ ಆದಮೇಲೆ ಎಲ್ಲರಿಗೂ ಮನೆ ಕಟ್ಟಿಸಿಕೊಡ್ತಿದೀರಂತೆ?
ಹೌದು, ಸಚಿವ ಆಗಿ ಮನೆ ಏನೋ ಕಟ್ಟಿಸ್‌ಕೊಡ್ತೀನಿ. ಹಾಗಂತ ಮನೇಲಿ ಕೂತು ಟಿವಿಯಲ್ಲೇ ಸಿನಿಮಾ ನೋಡೋಕ್ ಶುರುಮಾಡಿದ್ರೆ ಅಷ್ಟೆ...ಕುತ್ತೇ..
- ಓಕೆ ಓಕೆ, ಕನ್ವರ್‌ಲಾಲ್ ಅವ್ರೇ, ಈ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಹಾವಳಿ ಜಾಸ್ತಿ ಆಯ್ತಲ್ವೇ?
ರೇಸ್‌ಕೋರ್ಸ್‌ನಲ್ಲೂ ಬೆಟ್ಟಿಂಗ್ ಇದೆ. ಈ ವಿಷಯದಲ್ಲಿ ಕುದುರೆ ಬಾಲನೂ ಡೊಂಕೆ. ಅಲ್ಲಿ ಬಾಲದ ಮೇಲೆ ಬೆಟ್ಟಿಂಗ್ ಕಟ್ತಾರೆ, ಇಲ್ಲಿ ಬಾಲ್ ಮೇಲೆ ಕಟ್ತಾರೆ ಅಷ್ಟೆ. ಬಟ್ ಐ ಹೇಟ್ ಫಿಕ್ಸಿಂಗ್.
- ಹೋಗ್ಲಿ ಬಿಡಿ. ನಿಮ್ಮ ಸಿಎಂ ಏನು, ಮಾತು ಮಾತಿಗೆ ಸಿಕ್‌ಸಿಕ್ಕಿದ್ದೆಲ್ಲಾ ಬ್ಯಾನ್ ಮಾಡ್ತಿನಿ ಅಂತಿರ್ತಾರಲ್ಲ್ಲ?
ಹಿಂದೊಬ್ಬ ಸಿಎಂ ಬೆಂಗಳೂರ್‌ನ ಸಿಂಗಾಪೂರ್ ಮಾಡ್ತೀನಿ ಅಂದಿದ್ರು, ಇವರದ್ದು ಬೆಂಗಳೂರ್‌ನ
ಬ್ಯಾನ್-ಗಲೋರ್ ಮಾಡೋ ಪ್ಲ್ಯಾನ್ ಇರಬಹುದು.
- ಹೀಗೆ ಸಿಕ್‌ಸಿಕ್ಕಿದ್ದೆಲ್ಲಾ ಬ್ಯಾನ್ ಮಾಡ್ತಿರೋದ್ ನೋಡಿದ್ರೆ ಅವ್ರು ಮೊದ್ಲು ಯಾವಾಗ್ಲಾದ್ರೂ ಚಲನಚಿತ್ರ ವಾಣಿಜ್ಯ  ಮಂಡಳಿಯ ಅಧ್ಯಕ್ಷರಾಗಿದ್ರಾ ಅಂತ ಅನುಮಾನ?
ಹಂಗೇನಿಲ್ಲ. ಮಗ ಅಂತೂ ಸಿನಿಮಾದಲ್ಲಿ ಹೀರೋ ಆಗೋಕೆ ಒಳ್ಳೆ ಬ್ಯಾನರ್ ಸಿಗಲಿಲ್ಲ, ಅಟ್‌ಲೀಸ್ಟ್ ನಾನೇ
'ಬ್ಯಾನರ್‌' ಆಗಿ ನಿಜವಾದ ಹೀರೋ ಆಗೋಣ ಅಂತಿರಬಹುದು ಅಷ್ಟೆ.
- ಅದ್ಸರಿ, ನೀವು ಸಿಎಂ ಆಗೋಕೆ ಯಾರೂ ನಿಮಗೆ ಸಪೋರ್ಟ್ ಮಾಡ್‌ಲಿಲ್ವಾ?
ಅಯ್ಯೋ ನಂಗೂ ಅವಕಾಶ ಇತ್ತು. ಬಟ್ ಕರೆಕ್ಟ್ ಟೈಮಲ್ಲಿ ಯಾವನೋ ಬಡ್ಡೀಮಗ ಎಲ್ಲರ್ಗೂ ನನ್ 'ಚಕ್ರವ್ಯೂಹ' ಪಿಕ್ಚರ್ ತೋರ್ಸಿ ಎಲ್ಲಾರ್ನೂ ಹೆದ್‌ರಿಸ್‌ಬುಟ್ಟ. ಹಂಗಾಗಿ ಛಾನ್ಸ್ ಮಿಸ್ ಆಗ್‌ಬಿಡ್ತು.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಇದು ಎಲ್ಲದರಲ್ಲೂ ಲಾಜಿಕ್ ಹುಡುಕುವ ಕಾಲ. ಯಾರೂ ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಇಲ್ಲಿರುವುದು, ಒಂದು ವಿಷಯದ ಬಗ್ಗೆ ಲಾಜಿಕಲ್ ಆದ ಮೈಂಡ್‌ಸೆಟ್ ಅನ್ನು ಬೆಳೆಸಿಕೊಳ್ಳುವುದು ಹೇಗೆ, ನಿಮ್ಮ ಮೆದುಳನ್ನು ಈ ರೀತಿಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳಿಕೊಡುವ ವೆಬ್‌ಸೈಟ್‌ಗಳು. ಜೊತೆಗೊಂದಿಷ್ಟು ಟೆಸ್ಟ್‌ಗಳೂ ಇವೆ. ಓದಿ ನೋಡಿ.
l tek.io/nlb2Gk, l bit.ly/ZS6Wjr
l bit.ly/6LNk l bit.ly/yBhauB
l bit.ly/IeRggT
ಹರಿ-ಕಥೆ
ಶ್ರೀಮಂತನೊಬ್ಬನಿಗೆ ಒಂದು ಸಮಸ್ಯೆ ಇತ್ತು. ಮಾನಸಿಕ ತಜ್ಞರ ಬಳಿಗೆ ಹೋಗಿ ತನ್ನ ಸಮಸ್ಯೆ ಹೇಳಿಕೊಂಡು 'ಡಾಕ್ಟ್ರೇ ನಂಗೆ ಪ್ರತಿದಿನ ರಾತ್ರಿ ಮಲಗಿದಾಗ ನನ್ನ ಮಂಚದ ಅಡಿಯಲ್ಲಿ ಯಾರೋ ಮಲಗಿದ್ದಾನೆ, ಅವನು ನನ್ನನ್ನು ಕೊಲ್ಲುತ್ತಾನೆ ಎಂಬ ಭಯ ಕಾಡುತ್ತದೆ. ಎಷ್ಟು ಸಲ ಮಂಚದ ಕೆಳಗೆ ಬಗ್ಗಿ ನೋಡಿದರೂ ನನ್ನ ಅನುಮಾನ ಬಗೆಹರಿಯುವುದಿಲ್ಲ, ಏನು ಮಾಡಲಿ' ಎಂದು ಪೇಚಾಡಿದ. ಡಾಕ್ಟರ್ ತಮಗೆ ಗೊತ್ತಿದ್ದ ಎಲ್ಲಾ ವಿದ್ಯೆ ಬಳಸಿ ಅವನಿಗೆ ಪರಿಹಾರ ಸೂಚಿಸಿದರೂ ಅದು ವರ್ಕ್ ಔಟ್ ಆಗಲಿಲ್ಲ. ಕೊನೆಗೆ ಮುಂದಿನ ವಾರ ನನ್ನ ಸ್ನೇಹಿತನೊಬ್ಬ ಫಾರಿನ್ನಿಂದ ಬರ್ತಿದಾನೆ. ಅವನು ನಿನಗೆ ಖಂಡಿತಾ ಪರಿಹಾರ ಕೊಡಬಲ್ಲ. ಆದರೆ ಅವನ ಫೀಸು 10 ಲಕ್ಷ ರುಪಾಯಿ ಎಂದರು. ಅದಕ್ಕೆ ಒಪ್ಪಿದ ಶ್ರೀಮಂತ, ಸರಿ ಹಾಗಿದ್ರೆ ಮುಂದಿನ ವಾರ ಬರ್ತೀನಿ ಎಂದು ಹೊರಟು ಹೋದವನು ಮತ್ತೆ ತಿಂಗಳಾದರೂ ಪತ್ತೆಯೇ ಇಲ್ಲ. ಒಂದು ದಿನ ಡಾಕ್ಟರ್ ಹೀಗೆ ಬೆಳಿಗ್ಗೆ ವಾಕಿಂಗ್ ಹೋಗುವಾಗ 'ಬಾರ್‌ಟೆಂಡರ್‌ಗಿಂತ ಒಳ್ಳೆ ಡಾಕ್ಟರ್ ಇಲ್ಲ' ಎಂದು ಹಾಡಿಕೊಂಡು ಹೋಗುತ್ತಿದ್ದ ಅದೇ ಶ್ರೀಮಂತ ಸಿಕ್ಕಿದ. ಡಾಕ್ಟರ್ ಕೇಳಿದರು 'ಏನ್ರೀ, ಮುಂದಿನ ವಾರ ಬರ್ತೀನಂದವ್ರು ಬರಲೇ ಇಲ್ಲ?'. ಇದಕ್ಕೆ ಶ್ರೀಮಂತ ಹೇಳಿದ, 'ಇಲ್ಲ ಡಾಕ್ಟರ್, ನನಗೀಗ ಯಾವ ಭಯವೂ ಇಲ್ಲ. ನನ್ನ ಸಮಸ್ಯೆಗೆ ನಾನು ರೆಗ್ಯುಲರ್ ಆಗಿ ಕುಡಿಯಲು ಹೋಗುವ ಬಾರ್‌ಟೆಂಡರ್ ಒಬ್ಬ ಪರಿಹಾರ ಸೂಚಿಸಿದ' ಎಂದ. ಡಾಕ್ಟರ್‌ಗೆ ಗಾಬರಿ. 'ನನ್ನಂಥ ಡಾಕ್ಟರ್‌ನಿಂದ ಆಗಲಿಲ್ಲ, ಒಬ್ಬ ಬಾರ್‌ಟೆಂಡರ್‌ನಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿತೇ?' ಎಂದು ಮತ್ತೆ ಮತ್ತೆ ಅನುಮಾನದಿಂದ ಕೇಳಿದರು. ಅದಕ್ಕೆ ಶ್ರೀಮಂತ ಹೇಳಿದ 'ಹೌದು ಡಾಕ್ಟರ್, ಎಲ್ಲಾ ಸರಿ ಹೋಯ್ತು. ಈಗ ಯಾವ ಅನುಮಾನವೂ ಬರೋಕೆ ಸಾಧ್ಯವೇ ಇಲ್ಲ. ಅವನು ಹೇಳಿದಂತೆ ನನ್ನ ಮಂಚದ ನಾಲ್ಕು ಕಾಲು ಕಳಚಿಟ್ಟು ಮಲಗುತ್ತಿದ್ದೇನೆ'
ಸ್ಯಾಂಡಲ್‌ವುಡ್
ಇತ್ತೀಚೆಗೆ 'ಮಂಜುನಾಥ ಬಿಎಎಲ್‌ಎಲ್‌ಬಿ' ಚಿತ್ರದ ಸಮಯದಲ್ಲಿ 'ಎದ್ದೇಳು ಮಂಜುನಾಥ'ನನ್ನು ನೆನೆಸಿಕೊಂಡು 'ಅದ್ಯಾವ ಗಳಿಗೇಲಿ ಆ ಸಿನಿಮಾ ಮಾಡಿದೆನೋ ಐದು ವರ್ಷ ಆದ್ರೂ ಇನ್ನೂ ಆ ಹೆಸರು ನಮ್ಮನ್ನ ಕಾಪಾಡ್ತಾ ಇದೆ' ಎಂದು ಹೇಳಿಕೊಳ್ಳುವಷ್ಟು ಸಜ್ಜನಿಕೆ ಮೆರೆದಿದ್ದರು ಜಗ್ಗೇಶ್. ಆದರೆ ಇತ್ತೀಚೆಗೆ ಜಗ್ಗೇಶ್ ಅವರಿಗೆ ಮಠ, ಎದ್ದೇಳು ಮಂಜುನಾಥನ ಯಶಸ್ಸು ಬೋರು ಹೊಡೆಸಿದೆಯೇ ಎಂಬ ಅನುಮಾನ ಮೂಡಲು ಕಾರಣಗಳಿದ್ದವು. ಜಗ್ಗೇಶ್ ಅವರನ್ನು ಕೇವಲ ಈ ಎರಡು ಚಿತ್ರಗಳಿಂದ ಮಾತ್ರ ಗುರುತಿಸುತ್ತಿರುವುದು ಅವರಿಗೆ ಹಿಂಸೆ ತಂದಿರಬಹುದು. ಇತ್ತೀಚೆಗೆ ಕೂಲ್ ಗಣೇಶ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, 'ಈ ಚಾನೆಲ್‌ನವ್ರಂತೂ ಅದೇನ್ ಮಾತೆತ್ತಿದರೆ ಅವರೆಡೇ ಸಿನಿಮಾ ಹೆಸರು ಹೇಳ್ತಾರೆ. ನಾನ್ ಹೇಳ್ತಿನಿ, ಅಯ್ಯೋ ಅವೆರಡು ಏನ್ ಮಹಾ, ಅದಕ್ಕೂ ಮುಂಚೆ ಅದರಪ್ಪನಂಥ ಸಿನಿಮಾ ಮಾಡಿದೀನಿ, ಅವನ್ನೂ ನೋಡ್ರಿ ಅಂತ ಹೇಳ್ತೀನಿ' ಎಂದು ಹಾಟ್ ಆದ ಜಗ್ಗೇಶ್ 'ಸ್ಪೆಷಲ್ ಡೈರೆಕ್ಟರ್‌' ಬಗ್ಗೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಕೆಲವು ಮಾತುಗಳನ್ನು ಹೇಳಿದರು. 'ಅಲ್ರೀ, ಡಾ. ರಾಜ್‌ಕುಮಾರ್ ಅವರು ಎಂಥೆಂಥಾ ಸಿನಿಮಾ ಮಾಡಿ, ಎಷ್ಟೇ ಹೆಸರು ಮಾಡಿದ್ರೂ ಕೂಡ, ಯಾವತ್ತೂ 'ಹಾ, ಏನೀಗ' ಅನ್ನೋ ಗತ್ತಲ್ಲಿ ಯಾರನ್ನೂ ಮಾತಾಡಿಸಲಿಲ್ಲ. ಅವರನ್ನು ನೋಡಿ ನೋಡಿ ನಮಗೂ ಅದೇ ಬುದ್ಧಿ ಬಂತೋ ಏನೋ, ಎಷ್ಟೇ ಸಕ್ಸಸ್ ಕೊಟ್ರೂ, ಎದೆ ಎತ್ಕೊಂಡ್ ಪೋಸ್ ಕೊಡೋದೂ ಬರಲಿಲ್ಲ. ಈಗಿನವರು, ಮಾಡಿರೋದ್ ಎರಡು ಸಿನಿಮಾ, ಮಾತು ಮಾತ್ರ ಊರಗಲ. ಯಾಕ್ ಬೇಕು ಹೇಳಿ. ನನ್‌ಗೊಬ್ನಿಗೇ ಸಿನಿಮಾ ಮಾಡೋಕ್ ಬರೋದು ಉಳಿದೋರ್ ಯಾರ್ಗೂ ಬರಲ್ಲ ಅಂತೆಲ್ಲಾ ಮಾತಾಡ್ಕಂಡ್ರೆ ಅದು ಸರಿಯೇ?' ಎಂದು ಜಗ್ಗೇಶ್ ಹೇಳುತ್ತಿದ್ದರೆ 'ಹೌದು ಸ್ವಾಮಿ' ಎನ್ನುವುದೊಂದೇ ಎಲ್ಲರ ಉತ್ತರವಾಗಿತ್ತು.  
ಡಬ್ಕುಡಬಲ್ ತುದಾಂಡಲ್...
ಕನ್ನಡ ಸಿನಿಮಾ ಸ್ಟಾರ್‌ಗಳು ಕ್ರಿಕೆಟರ್‌ಗಳಾದ್ರೆ
ಯೋಗೀಶ್: ಎಷ್ಟು ಒಳ್ಳೆ ಶಾಟ್ ಹೊಡೆದ್ರೂ ಅದು 'ಲೂಸ್‌' ಶಾಟ್ ಆಗಿರುತ್ತೆ.
'ದುನಿಯಾ' ವಿಜಿ: ಇವರು ಬರೀ 'ವರ್ಲ್ಡ್‌'ಕಪ್‌ನಲ್ಲಿ ಮಾತ್ರ ಆಡೋದಂತೆ
ಗಣೇಶ್: ಫಾರ್ಮ್‌ನಲ್ಲಿ ಇಲ್ಲದಿದ್ರೂ ಟೀಮ್‌ಗೆ ಮಾತ್ರ ಸೆಲೆಕ್ಟ್ ಆಗ್ತಾನೇ ಇರ್ತಾರೆ. ನಾನು ಚೆನ್ನಾಗೇ ಆಡ್ತೀನಿ. ಟೀಮ್ ಸೋತ್ರೆ ನಾನೇನ್ ಮಾಡ್ಲಿ ಅಂತಾರೆ.
ಶಿವರಾಜ್‌ಕುಮಾರ್ : ಬ್ಯಾಟ್ ಹಿಡಿಯೋ ಸ್ಟೈಲ್ ನೋಡೋಕೇ ಜನ ಬರ್ತಾರೆ.
ಎಸ್.ನಾರಾಯಣ್: ಫಸ್ಟ್ ಮ್ಯಾಚಲ್ಲೇ ನಾನು ರಿಟೈರ್ ಆಗ್ತೀನಿ ಅಂತ ಹೆದರಿಸ್ತಾರೆ. ತೆಂಡೂಲ್ಕರ್‌ನನ್ನೂ ನಾಚಿಸ್ತಾರೆ.
ರಾಮು: 'ಚೇಸಿಂಗ್‌' ಟೈಮಲ್ಲಿ ಮಾತ್ರ ಇವರದ್ದು ಅದ್ಭುತ ಬ್ಯಾಟಿಂಗ್.
ಯೋಗರಾಜ್ ಭಟ್: ಇವರದ್ದೇನಿದ್ರೂ ಬರೀ ಕಾಮೆಂಟರಿ
ಸೃಜನ್ ಲೋಕೇಶ್: ಕಾಸು 'ಟಾಸ್‌' ಮಾಡೋ ಟೈಮಲ್ಲಿ ಮಾತ್ರ ಬರ್ತಾರೆ.
ಕಿಚ್ಚ ಸುದೀಪ್ : ಆಟಕ್ಕಿಂತ ಕಿಚಾಯಿಸುವುದೇ (ಸ್ಲೆಡ್ಜಿಂಗ್) ಜಾಸ್ತಿ ಸುದ್ದಿ ಮಾಡುತ್ತೆ.
ರಮ್ಯಾ: ಬೌಲರ್ ಬೌನ್ಸರ್ ಹಾಕಿದ್ರೆ ಅದಕ್ಕೂ ಮಾನನಷ್ಟ ಮೊಕದ್ದಮೆ ಹಾಕ್ತಾರೆ.
ಕೊನೆಯಲ್ಲಿ ಒಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ,
ಅಂಬರೀಶ್ 'ಅಂಪೈರ್‌' ಆದ್ರೆ ಮಾತ್ರ ಇವರೆಲ್ಲರೂ ಆಡೋದು. ಜಗಳ ಬಿಡಿಸೋಕೆ ಅವ್ರೇ ಬೇಕಲ್ಲ.

   ಹರಿ
harikannadaprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com