ಇಬ್ರಾಹಿಂರ ದೇಶಪ್ರೇಮ ನೋಡಿ ಕಂಗಾಲಾದ ಕಾಂಗ್ರೆಸ್!

ಸರಿಯಾದ ಹೋಮ್ವರ್ಕ್ ಮಾಡದೆ ಕಾರ್ಯರೂಪಕ್ಕೆ ತಂದ ಬಹುತೇಕ ರಾಜಕೀಯ ನಿರ್ಧಾರಗಳು ಉಲ್ಟಾ ಹೊಡೆಯುತ್ತವೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆಯೆಂದರೆ, ಕಳೆದ ನವೆಂಬರ್ನಲ್ಲಿ ಐಪಿಎಸ್ ಅಧಿಕಾರಿ ಆಸಿಫ್ ಇಬ್ರಾಹಿಂರನ್ನು ಯುಪಿಎ ಸರ್ಕಾರ 'ಕೇಂದ್ರೀಯ ಗುಪ್ತಚರ ವಿಭಾಗ'ದ(ಸಿಐಬಿ) ನಿರ್ದೇಶಕರನ್ನಾಗಿ ನೇಮಕ ಮಾಡಿದ್ದು. ಇಬ್ರಾಹಿಂ ಸಿಐಬಿಯ ಮೊಟ್ಟ ಮೊದಲ ಮುಸ್ಲಿಂ ನಿರ್ದೇಶಕರೂ ಹೌದು. ಮೊದಲಿನಿಂದಲೂ ಮುಸ್ಲಿಂ ಮತದಾರರ ಮನವೊಲಿಕೆಯಲ್ಲಿಯೇ ತೊಡಗಿರುವ ಮುಲಾಯಂ ಸಿಂಗ್ ಮತ್ತವರ ಸಮಾಜವಾದಿ ಪಕ್ಷದ ಇಂಗಿತದ ಮೇರೆಗೆ ಯುಪಿಎ ಸರ್ಕಾರ ಇಬ್ರಾಹಿಂರನ್ನು ಆ ಸ್ಥಾನಕ್ಕೆ ತಂದು ಕೂರಿಸಿತು. ಈ ಮೂಲಕ ಅದು ಮುಸ್ಲಿಂ ನಾಯಕರಿಗೆ ಮತ್ತು ಮತದಾರರಿಗೆ ಸಂದೇಶವೊಂದನ್ನು ಕಳುಹಿಸುವ ಪ್ರಯತ್ನ ಮಾಡಿತು: 'ನೋಡಿ ನಾವು ಮುಸ್ಲಿಂ ವ್ಯಕ್ತಿಯೊಬ್ಬನನ್ನು ಮೊಟ್ಟ ಮೊದಲ ಬಾರಿಗೆ ಕೇಂದ್ರೀಯ ಗುಪ್ತಚರ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ಸ್ವತಂತ್ರ ಭಾರತದ ಯಾವೊಂದು ಸರ್ಕಾರವೂ ಇಂಥ ಹೆಜ್ಜೆಯಿಟ್ಟಿರಲಿಲ್ಲ. ನೆಹರೂ ಮತ್ತು ಇಂದಿರಾ ಗಾಂಧಿ ಸರ್ಕಾರಗಳಿಂದಲೂ ಮಾಡಲಾಗದಿದ್ದ ಕೆಲಸವನ್ನು ನಾವು ಮಾಡಿದ್ದೇವೆ' ಎಂಬುದು ಆ ಗುಪ್ತ ಸಂದೇಶವಾಗಿತ್ತು. ಕೇಂದ್ರ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರಂತೂ, ಇಬ್ರಾಹಿಂ ಅವರ ನೇಮಕಾತಿಯಾದ ನಂತರ ಈ ಮಾತನ್ನು ಬಹಿರಂಗವಾಗಿ ಆಡಿಯೂ ಬಿಟ್ಟರು.
ಆದರೆ ತಾನು ಎಸೆದ ಈ ಮುಸ್ಲಿಂ ಕಾರ್ಡ್ ವಾಪಸ್ ಹಾರಿಕೊಂಡು ಬಂದು ತನ್ನ ಮುಖಕ್ಕೇ ಬಡಿಯಲಿದೆ ಎನ್ನುವುದು ಕಾಂಗ್ರೆಸ್ಗೆ ಗೊತ್ತಿರಲಿಲ್ಲ. ಅದರ ಎಲ್ಲಾ ಯೋಜನೆಗಳನ್ನೂ ತಲೆಕೆಳಗಾಗಿಸುತ್ತಿರುವ ಇಬ್ರಾಹಿಂ, ತಮ್ಮ ರಾಷ್ಟ್ರಭಕ್ತಿಯ ಮೂಲಕ ಕಾಂಗ್ರೆಸ್ ಅನ್ನು ತೀವ್ರ ಮುಜಗರಕ್ಕೆ ದೂಡಿದ್ದಾರೆ. 2004ರಲ್ಲಿ ನಡೆದ ಇಶ್ರತ್ ಜಹಾನ್ ಮತ್ತು ಮೂವರು ಉಗ್ರರ ಎನ್ಕೌಂಟರ್ ಪ್ರಕರಣವನ್ನು ಬಳಸಿಕೊಂಡು ಹೇಗಾದರೂ ಮಾಡಿ ನರೇಂದ್ರ ಮೋದಿಯವರನ್ನು ಖೆಡ್ಡಾಕ್ಕೆ ಕೆಡವಬೇಕು ಎಂದು ಕಾಂಗ್ರೆಸ್ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಅಂಗವಾಗಿ ಸಿಬಿಐ ಗುಜರಾತ್ ಪೊಲೀಸರಿಗೆ ಇಶ್ರತ್ ಬಗ್ಗೆ ಮಾಹಿತಿ ನೀಡಿದ ರಾಜೇಂದ್ರ ಕುಮಾರ್ ಎಂಬ ಅಧಿಕಾರಿಯ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿತ್ತು. ಆದರೆ ಸಿಐಬಿನ ಈ ನಡೆಯನ್ನು ಇಬ್ರಾಹಿಂ ಕಟುವಾಗಿ ವಿರೋಧಿಸುತ್ತಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆಯವರೊಂದಿಗೆ ಇಬ್ರಾಹಿಂ ಮಾತನಾಡಿದ್ದಾರೆ. 'ಲಷ್ಕರ್-ಎ-ತಯ್ಬಾದ ಭಾಗವಾಗಿದ್ದ ಇಶ್ರತ್ ಜಹಾನ್ ಐಎಸ್ಐನ ಆಜ್ಞೆಯ ಮೇರೆಗೆ ನರೇಂದ್ರ ಮೋದಿ ಮತ್ತು ಎಲ್.ಕೆ.ಆಡ್ವಾಣಿ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದಳು ಎನ್ನುವುದರ ಬಗ್ಗೆ ಸಿಐಬಿ ಬಳಿ ಸ್ಪಷ್ಟ ದಾಖಲೆಗಳಿವೆ. ಆದರೂ ಅದು ರಾಜೇಂದ್ರ ಸಿಂಗ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸುತ್ತಿರುವುದೇಕೆ? ಅಲ್ಲದೆ ಎಫ್ಬಿಐ ವಿಚಾರಣೆಯ ವೇಳೆ ಹೆಡ್ಲಿ ಕೂಡ ಇಶ್ರತ್ ಜಹಾನ್ ಉಗ್ರವಾದಿಯಾಗಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾನೆ' ಎಂದು ಅವರು ಪ್ರಶ್ನಿಸಿದ್ದಾರೆ.
ರಾಜೇಂದ್ರ ಕುಮಾರ್ರನ್ನು ಒಂದು ವೇಳೆ ಬಂಧಿಸಿದರೆ ಗುಪ್ತಚರ ದಳ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಗುಪ್ತಚರ ದಳದ ಯುವ ನಿಷ್ಠಾವಂತ ಅಧಿಕಾರಿಗಳೂ ಸಹ ಮುಂದೆ ತಮಗೂ ಅಪಾಯ ಒದಗಬಹುದು ಎನ್ನುವ ಭಯದಿಂದ ಮಾಹಿತಿ ಕಲೆ ಹಾಕುವಲ್ಲಿ ಹಿಂದೇಟು ಹಾಕಬಹುದು ಎನ್ನುತ್ತಾರೆ ಇಬ್ರಾಹಿಂ. ಈ ವಿಷಯವಾಗಿ ಸಿಬಿಐನ ನಿರ್ದೇಶಕ ಸಲೀಂ ಅಲಿ ಮತ್ತು ಸಿಐಬಿ ನಿರ್ದೇಶಕ ಇಬ್ರಾಹಿಂ ನಡುವೆ ಜಟಾಪಟಿ ನಡೆದಿದೆ. ಕುಮಾರ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲೇಬೇಕು ಎನ್ನುವುದು ಸಲೀಂ ಅಲಿಯವರ ವಾದ!
ಭದ್ರತೆ ಮತ್ತು ರಾಜಕೀಯ ವಿಶ್ಲೇಷಕ ವಿದ್ಯುತ್ ಠಾಕೂರ್, ಇಬ್ರಾಹಿಂ ಅವರನ್ನು ತುಂಬುಕಂಠದಿಂದ ಹೊಗಳುತ್ತಾರೆ. ಅವರನ್ನುತ್ತಾರೆ: 'ಆಸಿಫ್ ಇಬ್ರಾಹಿಂ ಅವರು 1761ರಲ್ಲಿ ಮರಾಠರ ಜೊತೆಗೂಡಿ ಪಾನಿಪತ್ ಯುದ್ಧದಲ್ಲಿ ಅಫ್ಘನ್ ಆಕ್ರಮಣಕಾರರ ವಿರುದ್ಧ ಹೋರಾಡಿದ 'ಇಬ್ರಾಹಿಂ ಖಾನ್ ಗರ್ದಿ'ಯನ್ನು ನೆನಪಿಸುತ್ತಾರೆ. ಮರಾಠರನ್ನು ಬಿಟ್ಟು ತಮ್ಮ ಜೊತೆ ಕೈಜೋಡಿಸಿದರೆ ಬೆಟ್ಟದಷ್ಟು ಬಂಗಾರವನ್ನು ದಾನ ಮಾಡುವುದಾಗಿ ಇಬ್ರಾಹಿಂಗೆ ಅಫ್ಘನ್ ದೊರೆ ಅಹಮದ್ ಶಾಹ್ ಅಬ್ದಾಲಿ ಆಮಿಷವೊಡ್ಡುತ್ತಾನೆ. ಆದರೆ 'ಉಂಡ ಮನೆಗೆ ಕನ್ನ ಹಾಕುವ ಗುಣ ತನ್ನಲ್ಲಿಲ್ಲ' ಎಂದು ಎದೆ ತಟ್ಟಿಕೊಂಡು ಹೇಳಿದ ಇಬ್ರಾಹಿಂ, ಅಬ್ದಾಲಿಯ ವಿರುದ್ಧ ಹೋರಾಟಕ್ಕಿಳಿಯುತ್ತಾನೆ. ಆದರೆ ಅಫ್ಘನ್ ಸೇನೆ ಆ ಯುದ್ಧದಲ್ಲಿ ಜಯಗಳಿಸುತ್ತದೆ. ಯುದ್ಧ ಖೈದಿಯಾಗಿ ಸಿಕ್ಕಿಬಿದ್ದ ಇಬ್ರಾಹಿಂನನ್ನು ಅಬ್ದಾಲಿ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಾನೆ.
ಮುಸ್ಲಿಮರಿಗೆ ರಾಷ್ಟ್ರದ ಹಿತಕ್ಕಿಂತ ತಮ್ಮ ಸಹೋದರರ(ಮುಸಲ್ಮಾನರ) ಹಿತವೇ ಮುಖ್ಯ ಎನ್ನುವ ಆಪಾದನೆಯನ್ನು ಆಸಿಫ್ ಇಬ್ರಾಹಿಂನಂತಹ ನಿಷ್ಠಾವಂತ ಅಧಿಕಾರಿಗಳು ಸುಳ್ಳಾಗಿಸುತ್ತಿದ್ದಾರೆ'.
----
ಇಬ್ರಾಹಿಂ ಮೊದಲಿನಿಂದಲೂ ನಿಷ್ಠೆಗೆ ಹೆಸರಾದವರು. 'ಭಯೋತ್ಪಾದನಾ ವಿರೋಧಿ ಗುಪ್ತಚರ ವಿಭಾಗದಲ್ಲಿ' ಅವರು ಸಲ್ಲಿಸಿರುವ ಸೇವೆ ಅಧ್ಬುತವಾಗಿದೆ. ದಿ. ಮಾಧವರಾವ್ ಸಿಂಧಿಯಾ ಅವರಿಗಂತೂ ಇಬ್ರಾಹಿಂ ಮೇಲೆ ವಿಶೇಷ ನಂಬಿಕೆಯಿತ್ತು. 1980ರಲ್ಲಿ ಸಿಂಧಿಯಾ ರೇಲ್ವೆ ಸಚಿವರಾಗಿದ್ದಾಗ, ಅವರ ಕಾರ್ಯದರ್ಶಿಯಾಗಿ ಇಬ್ರಾಹಿಂ ಕೆಲಸ ಮಾಡಿದ್ದರು.
- ಉದಯ್ ಮಾಹುರ್ಕರ್
ಇಂಡಿಯಾ ಟುಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


