ಅರವತ್ತರಲ್ಲಿ ಒಂದೇ ತಿಂಗಳು ಕಳೆದಿರುವುದು

Updated on: 

ಕೇಂದ್ರ ಸರ್ಕಾರಕ್ಕೆ ಇದು ಅಂತಿಮ ಹಂತ. ಅಬ್ಬಬ್ಬ ಅಂದರೆ ಇನ್ನು ಒಂಬತ್ತು ತಿಂಗಳಷ್ಟೇ. ಯಾರೂ ಆ ಸರ್ಕಾರವನ್ನು ಮನಮೋಹನ ಸಿಂಗ್ ಸರ್ಕಾರವೆಂದು ಹೃದಯಪೂರ್ವಕವಾಗಿ ಕರೆಯುವುದಿಲ್ಲ. ಹಾಗೆಂದು ಕರೆದರೂ ಅದು ಅವಾಸ್ತವಿಕವಾದದ್ದು. ವಾಸ್ತವದಲ್ಲಿ ಅದು ಕಾಂಗ್ರೆಸ್ ಸರ್ಕಾರ. ಸಂಪೂರ್ಣವಾಗಿ ವಾಸ್ತವತೆಯನ್ನು ಪ್ರತಿಬಿಂಬಿಸಬೇಕಾದರೆ ಸೋನಿಯಾ ಗಾಂಧಿ ಪ್ರಣೀತ, ಮನಮೋಹನ ಸಿಂಗ್ ಪ್ರಧಾನಿಯಾಗಿರುವ, ಕಾಂಗ್ರೆಸ್ ಸರ್ಕಾರ ಎಂದೇ ಕರೆಯಬೇಕು.
ಕರ್ನಾಟಕ ಸರ್ಕಾರ ಈಗ ಜನರ ಆಡು ಮಾತಿನಲ್ಲಿ ಸಿದ್ದು ಸರ್ಕಾರವೇ ಆಗಿಬಿಟ್ಟಿದೆ. ಆ ಪ್ರಯೋಗ ಅತಿ ಪ್ರತಿಷ್ಠಿತ ಮಾಧ್ಯಮ ಪ್ರಪಂಚದಲ್ಲೂ ಬಳಕೆಗೆ ಬಂದಿದೆ. ಅದನ್ನು ಜನ ವಿಶ್ವಾಸದಿಂದ ಹೇಳುತ್ತಾರೋ ಅಥವಾ ಕಡೆಗಣ್ಣಿನಿಂದ ನೋಡುವ ರೀತಿಯಲ್ಲಿ ಹೇಳುತ್ತಾರೋ ಗೊತ್ತಿಲ್ಲ. ಇನ್ನು ಮುಂದಷ್ಟೇ ಗೊತ್ತಾಗಬೇಕು. ಸಿದ್ದರಾಮಯ್ಯ ಅವರ ಸರ್ಕಾರ ಚುನಾಯಿತವಾಗಿರುವುದು ಅರವತ್ತು ತಿಂಗಳ ಅವಧಿಗೆ. ಅದರಲ್ಲಿ ಈಗ ಉರುಳಿರುವುದು ಒಂದೇ ತಿಂಗಳು. ಮುಖ್ಯಮಂತ್ರಿಯಾದವರು ಮನೆಯನ್ನು ಈಗಷ್ಟೇ ಹುಡುಕಿಕೊಂಡಿದ್ದಾರೆ.
ರಾಜಕೀಯವಾಗಿ ಇದು ಕಾಂಗ್ರೆಸ್ ಸರ್ಕಾರ. ಅದನ್ನು ಲೇವಡಿ ಮಾಡಬೇಕಾದರೆ, ಸುಮಾರು ಮೂರು ದಶಕಗಳ ಹಿಂದೆ ಮುಂಬೈನ ಕಾಂಗ್ರೆಸ್ ಸಾಮ್ರಾಟ (ಖಜಾಂಚಿ), ಸಿಂಡಿಕೇಟ್ ಕಾಂಗ್ರೆಸ್ ಮುಖಂಡ ಎಸ್.ಕೆ. ಪಾಟೀಲ್ ಅವರು "ಕಾಂಗ್ರೆಸ್ ಅಂದರೆ ರೈಲ್ವೆ ಸ್ಟೇಷನ್ ಥರ್ಡ್ ಕ್ಲಾಸ್ ವೇಟಿಂಗ್ ರೂಂ. (ಅಂದರೆ ಪ್ಲ್ಯಾಟ್‌ಫಾರ್ಮ್) ಅಂದಿದ್ದನ್ನು ನೆನಪು ಮಾಡಿಕೊಳ್ಳಬಹುದು. ಅದರ ಅರ್ಥ ಆ ಪಕ್ಷದಲ್ಲಿ ಎಲ್ಲರಿಗೂ ಸೈದ್ಧಾಂತಿಕ ಬದ್ಧತೆ- ತತ್ವನಿಷ್ಠೆ ಇರಬೇಕಾಗಿಲ್ಲ ಎಂದೇ. ಆ ಮಾತು ಈಗಿನ ಕರ್ನಾಟಕ ಕಾಂಗ್ರೆಸ್ಸಿಗೆ ಬೇರೆ ರೀತಿಯಲ್ಲಿ ಅನ್ವಯವಾಗುತ್ತದೆ. ಇಲ್ಲಿ ಈಗ ಹಲವು ಸಮರಗಳ ಕಲಿಗಳೂ ಇದ್ದಾರೆ. ತಿಂಗಳ ಹಿಂದೆ ಬಂದು ಬಿದ್ದವರೂ ಇದ್ದಾರೆ. ಅಂತಹ ರಥವನ್ನು ಸಿದ್ದರಾಮಯ್ಯ ಅವರು ಮೊದಲ ತಿಂಗಳು ಮಾನಸಿಕ ತುಮುಲದಿಂದಲೇ ಎಳೆದಿದ್ದಾರೆ. ಅವರಿಗೆ ಇನ್ನೂ ದಿಲ್ಲಿಯ ಲಗಾಮಿನ ಬಿಗಿಯ ಪರಿಚಯವಾದಂತಿಲ್ಲ.
ಒಂದು ತಿಂಗಳಲ್ಲಿ ಸಿದ್ದರಾಮಯ್ಯ, ಮಂತ್ರಿಗಳು ಮಾಡಿದ್ದೇನು? ಅಂತರಂಗದಲ್ಲಿ ಅವರ ಕಾರ್ಯಾಲಯಗಳಲ್ಲಿ ಏನಾದರೂ ಮಾಡಿಕೊಂಡಿರಬಹುದು. ಆದರೆ ಬಹಿರಂಗವಾಗಿ ವಿಧಾನ ಮಂಡಲದ ಅಧಿವೇಶನವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಸಿಎಂ ಅಂತೂ ಮೊದಲ ದಿನಗಳಲ್ಲೇ ಆಡಬೇಕಾದ ಸೂಕ್ತ ಮಾತುಗಳನ್ನೇ ಆಡಿದ್ದಾರೆ. ತಮ್ಮ ಮನೆಯವರಿಗೆ, ಬಂಧುಗಳಿಗೆ ಸರ್ಕಾರದ ಕೆಲಸದಲ್ಲಿ ಪಾತ್ರವಿಲ್ಲ ಎಂದಿದ್ದಾರೆ. ರುಪಾಯಿಗೊಂದು ಕೇಜಿ ಅಕ್ಕಿ, ಅಗ್ಗದ ಮದ್ಯದ ಪೂರೈಕೆಯ ಚಿಂತನೆಯ ದಿಢೀರ್ ಪ್ರಸ್ತಾಪಗಳನ್ನು ಬಿಟ್ಟರೆ ಉಳಿದಂತೆ ಏನು ಹೇಳಬೇಕಾದರೂ ನಿಧಾನವಾಗಿ ಯೋಚಿಸಿದ ಅನಂತರವೇ ಹೇಳಿದ್ದಾರೆ.
ವೈಯಕ್ತಿಕವಾಗಿ, ಅವರ ಆಪ್ತ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಯಾವುದೇ ನಿರ್ದಿಷ್ಟ ವ್ಯಕ್ತಿಗಳಿಗೆ ಮಣೆ ಹಾಕಿಲ್ಲ. ಅಲ್ಲೂ ಸಾಮಾಜಿಕ ನ್ಯಾಯ ವಿತರಣೆಯ ನೀತಿಗೆ ಬದ್ಧವಾಗಿರುವಂತಿದೆ. ಇನ್ನು ಮುಂದೆ ನಿಜವಾದ ಜನಪರ ಕೆಲಸದ ಆರಂಭ. ಏಕ್‌ದಮ್ ಹಳೆಯದೆಲ್ಲವನ್ನೂ ಕಿತ್ತುಹಾಕಿ ಹೊಸದನ್ನು ತಂದುಹಾಕುವ ಹಾಗಿಲ್ಲ. ಆಡಳಿತದ ಶಿಸ್ತು- ಸಂಹಿತೆ, ಮರ್ಯಾದೆಯ ಚೌಕಟ್ಟಿನಲ್ಲೇ ಎಲ್ಲವೂ ಆಗಬೇಕು. ಸ್ವಲ್ಪ ಅಡ್ಡಾದಿಡ್ಡಿಯಾದರೂ ಕೋರ್ಟು-ಕಚೇರಿಯ ಮೆಟ್ಟಿಲನ್ನು ಹತ್ತಬೇಕಾದೀತು.

ಚುನಾವಣೆ ರಣದುಂದುಭಿ: ಈಗಾಗಲೇ ಕಾಂಗ್ರೆಸ್, ಕೇಂದ್ರ ಸರ್ಕಾರದಲ್ಲಿ ಲೋಕಸಭೆ ಚುನಾವಣೆಯಲ್ಲಿನ ರಣ ದುಂದುಭಿಯನ್ನು ಮೊಳಗಿಸಿದ್ದಾಗಿದೆ. ಆಹಾರ ಭದ್ರತೆಯ ಕಾಯಿದೆಯನ್ನು ಜಾರಿಗೆ ತಂದೇ ತೀರುವ ಪಣ ತೊಟ್ಟಿದೆ. ಅದಕ್ಕೆ ರಾಜ್ಯವೂ ಸ್ಪಂದಿಸಲೇಬೇಕು.  ಕೇಜಿಗೊಂದು ರುಪಾಯಿ ಅಕ್ಕಿ ಪೂರೈಕೆಯ ನೀತಿಯಂತೆ, ಪೇಟೆಯಲ್ಲಿ ಕೇಜಿಗೆ ಹೋಗಿ ಮೂವತ್ತು ರುಪಾಯಿ ಕೊಟ್ಟು ತಂದ ಅಕ್ಕಿಯನ್ನು ಬಡವರಿಗೆ ಒಂದು ರು.ಗೆ ಮಾರುವ ಕೆಲಸ ಬಹು ಕಾಲ ನಡೆಯುವಂತಹದ್ದಲ್ಲ. ಇದನ್ನು ಇತರ ವರ್ಗಗಳು ಬಹುಕಾಲ ಸಹಿಸುವುದೂ ಇಲ್ಲ.
 ಸದ್ಯಕ್ಕೆ ಸರ್ಕಾರದ ನಿರ್ಧಾರಗಳಲ್ಲಿ ಕೇಂದ್ರದ ಹಸ್ತಕ್ಷೇಪ ಕಂಡುಬರದೇ ಹೋದರೂ, ಆಳುವ ಕಾಂಗ್ರೆಸ್‌ನಲ್ಲಿನ ಕೆಲಸದ ವೈಖರಿ ಬದಲಾಗಲೇಬೇಕು. ಮಧುಸೂದನ ಮಿಸ್ತ್ರಿಯವರ ಜಾಗದಲ್ಲಿ ಪಳಗದ ಪೈಲ್ವಾನ್ ದಿಗ್ವಿಜಯ ಸಿಂಗ್ ಪ್ರಭಾರಿಯಾಗಿ ಬಂದಿದ್ದಾರೆ. ಇದರಿಂದ ಪಕ್ಷದ ಕಾರ್ಯಶೈಲಿಯೇ ಬದಲಾಗುವುದೇನೋ ಗೊತ್ತಿಲ್ಲ. ಅದಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಸ್ಪಂದಿಸುತ್ತಾರೋ ನೋಡಬೇಕು. ಈಚೆಗೆ ಪರಮೇಶ್ವರ ಅವರು ಮುಖ್ಯಮಂತ್ರಿ ಮಂತ್ರಿಗಳು, ಶಾಸಕರು ಸಾಧ್ಯವಾದಾಗಲೆಲ್ಲ ಕಾಂಗ್ರೆಸ್ ಕಾರ್ಯಾಲಯಕ್ಕೆ ಬರಬೇಕೆಂದು ಹೇಳಿದ್ದರು. ಮೊದಲ ತಿಂಗಳಲ್ಲಿ ಸಿದ್ದರಾಮಯ್ಯ ಪಕ್ಷದ ಕಾರ್ಯಾಲಯಕ್ಕೆ ಹೋಗಿದ್ದರೋ ಇಲ್ಲವೋ ಗೊತ್ತಿಲ್ಲ. ಅವರು ಹೋಗಿದ್ರೆ ಅದಕ್ಕೆ ಸಿಗಬೇಕಾದಷ್ಟು ಪ್ರಚಾರ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರ ಪೂರ್ವಾಶ್ರಮದ ಪಕ್ಷಗಳಲ್ಲಿ ಇಂತಹ ಪದ್ಧತಿ ಇರಲಿಲ್ಲವೇನೋ. ಈಗಲಾದರೂ ಮುಖ್ಯಮಂತ್ರಿಯಾಗಿ ಪಕ್ಷದ ಕಾರ್ಯಾಲಯಕ್ಕೆ ಆಗಾಗ ಭೇಟಿ ನೀಡುವುದು ಒಳ್ಳೆಯದು. ಸರ್ಕಾರ ಇನ್ನೂ ಹೊಸದು. ಯಾರೂ ಏನನ್ನೂ ಮಾತಾಡುತ್ತಿಲ್ಲ. ಆದರೆ ದಿನ ಕಳೆದಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಸಿಎಂ ನಡುವಣ ಸಂಬಂಧವನ್ನು ಕಾಂಗ್ರೆಸ್ ನಾಯಕರು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡುತ್ತಾರೆ. ನಿಜಲಿಂಗಪ್ಪ- ಸಾಹುಕಾರ್ ಚೆನ್ನಯ್ಯ, ದೇವರಾಜ ಅರಸು- ಕೆ.ಎಚ್. ಪಾಟೀಲರ ಕಾಲದ ದಿನಗಳಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿಯ ಜವಾಬ್ದಾರಿ. ಸಮಯ ಹಾಗೂ ಕೆಲಸದ ಒತ್ತಡ ಇರುವುದು ಅವರ ಮೇಲೇ ಹೆಚ್ಚು. ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಡಳಿತದ ಸೂತ್ರಗಳನ್ನು ಹಿಡಿದ ಪಕ್ಷದಲ್ಲಿನ ಸಂಘಟನಾಂಗ - ಶಾಸಕಾಂಗಗಳ ಸಂಬಂಧ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ- ಸಿಎಂ ನಡುವಣ ಸಂಬಂಧ ಚೆನ್ನಾಗಿರಬೇಕು. ಅಲ್ಲದೆ ಅದು ಚೆನ್ನಾಗಿದೆ ಎನ್ನುವುದು ಜನರಿಗೆ ಗೊತ್ತಾಗುವಂತಿರಬೇಕು. ಅದು ಕಣ್ಣಿಗೆ ಕಾಣಬೇಕು. ಸದ್ಯಕ್ಕೆ ಅದರ ಅಗತ್ಯ ಕಂಡುಬರದೇ ಹೋದರೂ, ಕೆಲವು ವಲಯಗಳಲ್ಲಿ ಈಗಾಗಲೇ ಸಂಘಟನಾಂಗ ಹಾಗೂ ಶಾಸಕಾಂಗಗಳ ಪ್ರತಿನಿಧಿಗಳನ್ನು ಒಳಗೊಂಡ ಒಂದು ಸಮನ್ವಯ ಸಮಿತಿಯ ಅವಶ್ಯಕತೆ ಕುರಿತ ಪ್ರಸ್ತಾಪವೂ ಕೇಳಿಬರುತ್ತಿದೆ. . ಆದರೆ ಇದೇ ವ್ಯವಸ್ಥೆ ಶಾಶ್ವತವೇ?

ರಾಜ್ಯದ ಮೇಲೆ ಹೆಚ್ಚು ಹೊರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಕೇಂದ್ರದ ನಾಯಕರನ್ನು ತೃಪ್ತಿ ಪಡಿಸಲು, ಅಗತ್ಯವಿರಲಿ, ಇಲ್ಲದೇ ಇರಲಿ, ಲೋಕಸಭೆ ಚುನಾವಣೆಗೆ ಸಿದ್ಧವಾಗುವ ಮಾತನ್ನು ಆಡುತ್ತಲೇ ಇರಬೇಕು. ಈಗಷ್ಟೇ ಮುಗಿದ ವಿಧಾನ ಸಭೆ ಚುನಾವಣೆಯ ಮತದಾನದ ವಿವರಗಳನ್ನು ಗಮನಿಸಿದರೆ, ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಜಾತ್ಯಾತೀತ ಜನತಾ ದಳಕ್ಕೆ ಮೂರು ಸ್ಥಾನಗಳು ಸಿಕ್ಕಿದರೆ, ಭಾರತೀಯ ಜನತಾ ಪಾರ್ಟಿಗೆ ಎರಡೇ ಸ್ಥಾನಗಳು ಸಿಗುವುದು ಸಾಧ್ಯ. ಉಳಿದ ಇಪ್ಪತ್ಮೂರು ಸ್ಥಾನಗಳು ಕಾಂಗ್ರೆಸ್ಸಿಗೆ ಹೋಗಬೇಕು. ಕೇಂದ್ರ ನಾಯಕರಿಗೆ ಕಳೆದ ಲೋಕಸಭೆಯ ಚುನಾವಣೆಯಲ್ಲಿ ಆಂಧ್ರದಲ್ಲಿ ಸಿಕ್ಕಿದ್ದ ಬಂಪರ್ ಈ ಬಾರಿ ಕರ್ನಾಟಕದಲ್ಲಿ ಸಿಗಲೇಬೇಕೆನ್ನುವ ಆಸೆ ಇದೆ.
 ಆ ಆಸೆಯನ್ನು ಈಡೇರಿಸುವ ರೀತಿಯಲ್ಲೇ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ, ಅದರ ಮಂತ್ರಿಗಳು ವರ್ತಿಸಬೇಕು. ಅದನ್ನು ಗಮನಿಸಲು ರಾಜ್ಯದಲ್ಲಿ ದಿಗ್ವಿಜಯ ಸಿಂಗ್ ಅವರ ಬಳಗ ಇರುತ್ತದೆ.

ಅಕಾಡಮಿ-ನಿಗಮ-ಮಂಡಳಿ: ಸರ್ಕಾರದ ಮುಂದೆ ಈಗ ರಾಜಕೀಯವಾಗಿ ಪ್ರಮುಖವಾಗಿ ಇರುವ ಸಮಸ್ಯೆ ಎಂದರೆ, ಸರ್ಕಾರದ ಕೃಪಾಪೋಷಿತ ಅಕಾಡಮಿಗಳು, ಸ್ವಾಯತ್ತ ನಿಗಮ- ಮಂಡಳಿ- ಸಮಿತಿಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಿಸುವುದು. ಈ ಸಂಸ್ಥೆಗಳಲ್ಲಿ ಕಾಂಗ್ರೆಸ್ಸಿಗರನ್ನೇ ತುಂಬುವುದು ನಿರೀಕ್ಷಿತವೇ. ಇಲ್ಲಿ ಎಡವಿದರೆ ಸರ್ಕಾರ ಪಕ್ಷದಲ್ಲೇ ವಿರೋಧವನ್ನು ಬಗೆ ಬಗೆಯ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ಸಿದ್ದರಾಮಯ್ಯ, ಅವರು ನಂಬಿದ ಸಿದ್ಧಾಂತ ಹಾಗೂ ಸಮುದಾಯಕ್ಕೆ ಬದ್ಧರಾಗಿರಬೇಕಾದರೆ, ಈ ನೇಮಕಗಳಲ್ಲಿ ಸಾಮಾಜಿಕ ನ್ಯಾಯ ವಿತರಣೆಯ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜತೆಯಲ್ಲೇ, ಕಾಂಗ್ರೆಸ್ಸಿಗೆ ದೀರ್ಘ ಕಾಲದಿಂದಲು ನಿಷ್ಠೆಯನ್ನು ಪ್ರದರ್ಶಿಸಿದ್ದವರಿಗೂ ಸಮುದಾಯಗಳಿಗೂ ನ್ಯಾಯ ದೊರಕಿಸಿಕೊಡಬೇಕು. ವಿಧಾನ ಸಭೆಯ ಚುನಾವಣೆಯ ಸಮಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ "ನ್ಯಾಯವಾದ ಪಾಲು" ಎನ್ನುವಷ್ಟು ಅವಕಾಶವನ್ನು ಒದಗಿಸುವುದು ಸಾಧ್ಯವಾಗಲಿಲ್ಲ. ಆದರೆ ಈಗ ನಿಗಮ- ಮಂಡಳಿಗಳಲ್ಲಿ ಮಹಿಳೆಯರಿಗೇ ಆದ್ಯತೆ ನೀಡುವುದು ಸಾಮಾಜಿಕ ನ್ಯಾಯ ವಿತರಣೆಯ  ನೀತಿಯ ಜಾರಿಯ ದೃಷ್ಟಿಯಿಂದಲೂ ಯೋಗ್ಯವಾದದ್ದು. ಮಹಿಳೆಯರಿಗೆ ಕನಿಷ್ಠ ಪಕ್ಷ ಶೇ. 20ರಷ್ಟಾದರೂ ಅವಕಾಶ- ಪ್ರಾತಿನಿಧ್ಯ ಸಿಗಲೇಬೇಕು.

ಬಸ್ ಪ್ರಯಾಣ ದರ: ಸಿಎಂ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊಟ್ಟ ಮೊದಲಿಗೆ ಜಾರಿಗೊಳಿಸಿದ ಪ್ರಾಮುಖ್ಯವಾದ ಹಾಗೂ ಜನಜೀವನವನ್ನು ನೇರವಾಗಿ ಮುಟ್ಟುವ ನಿರ್ಧಾರ ಎಂದರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಪ್ರಯಾಣಿಕರ ದರಗಳನ್ನು ದಿಢೀರನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಿದ್ದು. ನಿಜ. ಡೀಸೆಲ್ ಬೆಲೆಯ ಹೆಚ್ಚಳ, ಆಡಳಿತದ ವೆಚ್ಚದ ಏರಿಕೆ, ವೇತನ ವಿಮರ್ಶೆಯ ಹೊರೆಯ ಪರಿಣಾಮವಾಗಿ ಪ್ರಯಾಣಿಕರ ದರದ ಏರಿಕೆ ಅನಿವಾರ್ಯ ಎನ್ನುವುದನ್ನು ಒಪ್ಪಬಹುದು. ಆದರೆ ಆ ಹೂಡಿಕೆಯನ್ನು ಪ್ರಯಾಣಿಕರಲ್ಲಿನ ನಾನಾ ವರ್ಗಗಳ ನಡುವೆ ಯಾವ ರೀತಿ ಹಂಚಿದರೆ ಜನ ಸಾಮಾನ್ಯ ವರ್ಗಗಳ ಹಿತರಕ್ಷಣೆಯಾದೀತು ಎನ್ನುವ ಪ್ರಾಮುಖ್ಯವಾದ ಅಂಶವನ್ನು ಸಾರಿಗೆ ಸಂಸ್ಥೆ, ಸರ್ಕಾರ ಮರೆತೇ ಬಿಟ್ಟಿತ್ತು. ರಸ್ತೆ ಸಾರಿಗೆ ಸಂಸ್ಥೆಯ ನಿರ್ಧಾರಗಳನ್ನು ಪರಿಶೀಲಿಸಿ, ಅದನ್ನು ಜನಪರವಾಗಿರುವಂತೆ ನೋಡಿಕೊಳ್ಳುವುದಕ್ಕೆ ಇತರ ವಲಯಗಳಲ್ಲಿರುವಂತೆ ಯಾವುದೇ ರೀತಿಯ ನಿಯಂತ್ರಣ ಪ್ರಾಧಿಕಾರದ ವ್ಯವಸ್ಥೆ ಇಲ್ಲ. ಸಾಮಾನ್ಯವಾಗಿ, ಇಲ್ಲಿ ದರಗಳ ಏರಿಕೆ ಎಂದರೆ ತಲೆಗೆಲ್ಲ ಒಂದೇ ಮಂತ್ರ ಎನ್ನುವಂತೆ ಸರಾಸರಿ ಲೆಕ್ಕದಲ್ಲಿ ಶೇಕಡಾವಾರು ದರಗಳ ಏರಿಕೆ ಎಂದೇ ಅರ್ಥ. ಅದಕ್ಕೆ ಯಾವುದೇ ರೀತಿಯ ಆಧುನಿಕ ತಜ್ಞರ ಅಧ್ಯಯನ ಆಧರಿತ ವರದಿಯೂ ಬೇಡ, ಶಿಫಾರ್ಸೂ ಬೇಡ. (ರೈಲ್ವೆಯಲ್ಲಿ ಇದಕ್ಕೊಂದು ಸಂಘಟಿತವಾದ ವ್ಯವಸ್ಥೆ ಇದೆ. ಈಗ ವಿಮಾನಯಾನದ ದರಗಳ ವಿಮರ್ಶೆಗೂ ಹಲವು ಮಾನದಂಡಗಳಿವೆ).
ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಯಾರ ಸಲಹೆಯ ಅಗತ್ಯವೂ ಇಲ್ಲ. ಆ ಸಂಸ್ಥೆಯಲ್ಲಿ ಅಧಿಕಾರದ ಸ್ಥಾನಗಳಲ್ಲಿ ಕೂತವರೇ ಪಂಡಿತರು. ಅವರು ಹೇಳಿದ್ದೇ ವೇದವಾಕ್ಯ. ದರಗಳ ಏರಿಕೆ ಅನಿವಾರ್ಯ ಸರಿ. ಆದರೆ ಆ ಏರಿಕೆಯ ಪ್ರಮಾಣವನ್ನು ನಿಗದಿಪಡಿಸುವಾಗ ಗಮನಕ್ಕೆ ತೆಗೆದುಕೊಂಡ ವಿಷಯಗಳು ಯಾವುವು ಹಾಗೂ ದರ ನಿಗದಿಯ ಹಿನ್ನೆಲೆಯಲ್ಲಿರುವ ರುಪಾಯಿ- ಪೈಸೇ ಲೆಕ್ಕಾಚಾರವನ್ನು ಮುಕ್ತವಾಗಿ ಪ್ರಕಟಿಸಬೇಕೆನ್ನುವ ಕಲ್ಪನೆಯೂ ಸಂಸ್ಥೆಗೆ ಇರಲಿಲ್ಲ. ಹಿಂದೆ ಸಾವ್ಕಾರಿ ಜನ ಬಸ್ ಸರ್ವಿಸ್ ನಡಿಸಿದಂತೆಯೇ ಈಗ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಂಸ್ಥೆಯನ್ನು ನಡೆಸುತ್ತಿರವಂತಿದೆ. ಇದನ್ನು ಸರ್ಕಾರವೂ ಒಪ್ಪಿಕೊಂಡಂತೆ ಇದೆ. ಆದರೆ ಇದು ಜನಪರ ಧೋರಣೆ ಅಲ್ಲ.ಮುಂದೆ ಹಿಗಾಗಬಾರದು.

ಕಿಡಿಗೇಡಿತನ: ಸಿದ್ದರಾಮಯ್ಯ ಅವರು ಈಗ ಹಿಂದಿನಂತೆ ಕೇವಲ "ಇತರೆ ಹಿಂದುಳಿದ ಜಾತಿ-ಪಂಗಡಗಳ ನಾಯಕರಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಅವರ ಹೆಗಲಿಗೇರಿದೆ. ಅವರು ಈಗ ರಾಜಕೀಯ ಅಧಿಕಾರಕ್ಕಾಗಿ ನಡೆದ ವರ್ಣ ಸಂಘರ್ಷದಲ್ಲಿ, ರಾಜಕೀಯವಾಗಿ ಪ್ರಬಲವಾದ ಮಧ್ಯಮ ಜಾತಿಯೊಂದರ ಪ್ರತಿನಿಧಿಯೂ ಆಗಿದ್ದಾರೆ." ಆ ಸ್ಥಾನವನ್ನು (ಮಧ್ಯಮ ಜಾತಿ) ಜಾತಿ ಜನಗಣತಿಯ ಆರ್ಥಿಕ- ಸಾಮಾಜಿಕ- ರಾಜಕೀಯ ಸಮೀಕ್ಷೆ ಸ್ಥಿರಪಡಿಸುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ಆ ಪಟ್ಟ ಅಂಟಿಕೊಳ್ಳುವುದರಲ್ಲಿ ಅನುಮಾನವಿಲ್ಲ.
ಇಲ್ಲೇ ಅಸಧಾರಾವೃತದ ಆರಂಭವಾಗುವುದು. ಯಾವುದೇ ಪ್ರಾತಿನಿಧಿಕ ಸ್ಥಾನ- ಮಾನಗಳಿಗೆ ಹಿಂದುಳಿದ ಜಾತಿ- ಪಂಗಡಗಳ ಪ್ರತಿನಿಧಿಗಳನ್ನು ಆರಿಸುವಾಗ ಸಿದ್ದರಾಮಯ್ಯ ಇತರರಿಗಿಂತ ಹೆಚ್ಚು ಎಚ್ಚರಿಕೆಯಿಂದಿರಬೇಕು.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com