ಅಂಕಣಗಳು

ಬಿಳಿ ಟೋಪಿಗಾಗಿ ಬೇಡಿಕೆ ಭಾರತದಲ್ಲಿ ಚೀನಾ ಹೂಡಿಕೆ!

Published On :

ಪ್ರಚಲಿತ ವಿದ್ಯಮಾನಗಳಿಗೆ ಹಾಸ್ಯದ ಮೆರುಗನ್ನು ನೀಡುವಲ್ಲಿ 'ಫೇಕಿಂಗ್ ನ್ಯೂಸ್' ಯಾವಾಗಲೂ ಮುಂದು. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಭಾರತದಲ್ಲಿ 'ಜಾತ್ಯತೀತ'ರ ಸಂಖ್ಯೆ ಏರುತ್ತಾ ಹೋಗುತ್ತದೆ. ಇಂತಿಪ್ಪ ಭಾರತದ ಜಾತ್ಯತೀತ ಮಾರುಕಟ್ಟೆಯಲ್ಲಿ ಹೇಗಾದರೂ ಮಾಡಿ ಲಾಭ ಮಾಡಿಕೊಳ್ಳಬೇಕು ಎಂಬ ಹಪಾಹಪಿಯಿಂದ ಚೀನಾ ಹೊಸ ಉತ್ಪನ್ನವೊಂದನ್ನು ತಯಾರಿಸಿದೆ. ಅದು ಯಾವುದೆಂದರೆ...
ಬೀಜಿಂಗ್: ಭಾರತದ ರಾಜಕಾರಣಿಗಳಿಂದ 'ಜಾತ್ಯತೀತ ಉತ್ಪನ್ನಗಳಿಗೆ' ಬೇಡಿಕೆ ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ಚೀನಾ, ರಾಜಕೀಯ ಮಾರುಕಟ್ಟೆಯಲ್ಲಿ ಬಿಸಿ ಬೋಂಡದಂತೆ ಖರ್ಚಾಗುತ್ತಿರುವ 'ಬಿಳಿ ಟೊಪ್ಪಿಗೆಗಳನ್ನು' ಭಾರೀ ಪ್ರಮಾಣದಲ್ಲಿ ಉತ್ಪಾದಿಸಲು ನಿರ್ಧರಿಸಿದೆ.
ಈ ಬಗ್ಗೆ ಫೇಕಿಂಗ್ ನ್ಯೂಸ್ನೊಂದಿಗೆ ಮಾತಿಗಿಳಿದ ಚೀನಿ ಉದ್ಯಮಿ ಟು ಪೈ, 'ಭಾರತದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿವೆ ಮತ್ತು ಅದಾಗಲೇ ರಾಜಕಾರಣಿಗಳಲ್ಲಿ 'ಯಾರು ಹೆಚ್ಚು ಜಾತ್ಯತೀತರು' ಎಂದು ತೋರಿಸಿಕೊಳ್ಳುವ ಬಿರುಸಿನ ಸ್ಪರ್ಧೆ ಶುರುವಾಗಿದೆ. ಕಡೆಗೆ ಎಲ್.ಕೆ. ಆಡ್ವಾಣಿಯವರೂ ಕೂಡ 'ಸೆಕ್ಯುಲರ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ನೀವೇ ಲೆಕ್ಕ ಹಾಕಿ! ಇಂತಹ ಸಂದರ್ಭದಲ್ಲಿ ರಾಜಕಾರಣಿಗಳು ತಮ್ಮ ಜಾತ್ಯತೀತ ರುಜುವಾತುಗಳನ್ನು ಸ್ಪಷ್ಟಪಡಿಸಲು ಇನ್ನಷ್ಟು ಪ್ರಯತ್ನಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆ ಪ್ರಯತ್ನ ಯಶಸ್ವಿಯಾಗಲು ನಾವು 'ಬಿಳಿ ಟೊಪ್ಪಿಗೆಗಳನ್ನು' ಮಾರುಕಟ್ಟೆಗೆ ಬಿಡುತ್ತಿದ್ದೇವೆ' ಎಂದರು.
ಮೊದಲ ಅವಕಾಶದಲ್ಲಿ ಬಂಪರ್ ಲಾಭ ಮಾಡಿಕೊಳ್ಳಬೇಕು ಎಂಬ ಉಮೇದಿನಲ್ಲಿರುವ ಟುಪೈ ತಮ್ಮ ಕಂಪನಿ ಉತ್ಪಾದಿಸುವ ಡಿಸೈನರ್ ಟೊಪ್ಪಿಗೆಗಳನ್ನೆಲ್ಲ ನಮ್ಮ ಮುಂದೆ ಹರಿವಿಟ್ಟರು. ಅದಕ್ಕವರು 'ಬಿಟೋ'(ಬಿಳಿ ಟೋಪಿ) ಎಂದು ಹೆಸರಿಟ್ಟಿದ್ದಾರೆ.
ಭಾರತದ ಮಾರುಕಟ್ಟೆಯಲ್ಲಿ ಸಂಚಲನವುಂಟುಮಾಡಿರುವ ಅತ್ಯಾಧುನಿಕ ಎಲೆಕ್ಟ್ರಾನಿಕ್ ಟೋಪಿಗಳ ಬಗ್ಗೆ ಕೇಳಿದಾಗ- 'ಈ ಟೋಪಿಗಳಿಗೆ ಎಲ್ಇಡಿ ಬಲ್ಬ್ಗಳನ್ನೂ ಜೋಡಿಸಿದ್ದೇವೆ. ಸಮಾರಂಭಗಳಲ್ಲಿ ಕರೆಂಟ್ ಕೈ ಕೊಡಲಿ ಅಥವಾ ಪತ್ರಕರ್ತರ ಕ್ಯಾಮೆರಾದ ಫ್ಲಾಷ್ ಕೆಟ್ಟು ಹೋಗಲಿ, ನಮ್ಮ ಈ ಟೋಪಿಗಳು ಮಾತ್ರ ಸ್ಪಷ್ಟವಾಗಿ ಹೊಳೆಯುತ್ತಿರುತ್ತವೆ. ಆ ಮೂಲಕ, ಅದನ್ನು ಧರಿಸಿದವನ ಜಾತ್ಯತೀತತೆಯನ್ನು ಸಾರುತ್ತವೆ'  ಎಂದು ಹೇಳುತ್ತಾರೆ ಟು ಪೈ.
ಹಿಂದೆ ಭಾರತದಲ್ಲಿ ಅಣ್ಣಾ ಹಜಾರೆಯವರ ಹವಾ ಎದ್ದು, 'ನಾನು ಅಣ್ಣಾ' ಎಂಬ ಟೋಪಿಗೆ ಭಯಂಕರ ಬೇಡಿಕೆ ಬಂದಿತ್ತು. ಆದರೆ ಆ ಅವಕಾಶವನ್ನು ತಾವು ಕೈಚೆಲ್ಲಿದನ್ನು ನೆನೆದು ಟುಪೈ ಈಗಲೂ ಕೈ ಕೈ ಹಿಚುಕಿಕೊಳ್ಳುತ್ತಾರೆ.  'ಇನ್ನೊಂದು ಅವಕಾಶವನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ' ಎನ್ನುವ ಪೈ, 'ಅದಾಗಲೇ ನಮಗೆ ಕಾಂಗ್ರೆಸ್ನಿಂದ ಸರಕು ಪೂರೈಕೆಗಾಗಿ ಕೋರಿಕೆ ಬಂದಿದೆ. ಅಲ್ಲದೆ ನಿತೀಶ್ ಕುಮಾರ್ ಅವರ ನಡೆ ನೋಡಿದರೆ ಇನ್ನೂ ಹೆಚ್ಚಿನ ಆರ್ಡರ್ಗಳು ನಮ್ಮ ಕೈಸೇರಲಿವೆ ಎನ್ನುವ ನಂಬಿಕೆ ಇದೆ' ಎಂದು ನಗುತ್ತಾರೆ.
ಆದರೆ ಈ ಕೆಲಸಕ್ಕಾಗಿ ಚೀನಾ ಪಾಕಿಸ್ತಾನದಿಂದ ಕೆಲಸಗಾರರನ್ನು ಕರೆಸಿಕೊಂಡಿದೆ ಎಂದು ಕೆಲವು ನಂಬಲಾಗದ ಮೂಲಗಳು ಹೇಳುತ್ತಿವೆ. ಈ ಬಗ್ಗೆ ಪ್ರಶ್ನಿಸಿದಾಗ ಮೂಲವೊಂದು ಹೇಳಿದ್ದು ಹೀಗೆ: 'ಟೋಪಿ ತಯಾರಿಸೋದು ನಮಗೂ ಬರುತ್ತೆ, ಅದಕ್ಕೆ ಪಾಕಿಸ್ತಾನದವರ್ಯಾಕೆ ಬೇಕು? ಅದೇನಂದ್ರೆ, ಕೆಲವರಿಗೆ 'ನಕಲಿ ಒಸಾಮಾ ಬಿನ್ ಲ್ಯಾಡೆನ್'ನನ್ನು ತಯಾರಿಸಿ ಭಾರತಕ್ಕೆ ಮಾರುವ ಯೋಚನೆ ಬಂದಿದೆ. ಪಾಕಿಸ್ತಾನಿಯರಾದರೆ ಒಸಾಮಾನ ಯಥಾವತ್ ನಕಲಿಗಳನ್ನು ತಯಾರಿಸಬಲ್ಲರು. ಬಿಹಾರ್ ವಿಧಾನ ಸಭಾ ಚುನಾವಣೆಗಳಲ್ಲಿ ಲ್ಯಾಡೆನ್ ಥರ ಕಾಣ್ಸೋ ವ್ಯಕ್ತಿಯನ್ನ ಲಾಲು ಪ್ರಸಾದ್ ಯಾದವ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಪ್ರಚಾರಕ್ಕೆ ಬಳಸಿಕೊಂಡಿದ್ರು. ಈ ಸರ್ತೀನೂ ಅವರಿಂದ ಆರ್ಡರ್ ಬರಬಹುದು ಅನ್ನೋ ಲೆಕ್ಕಾಚಾರ ಅಷ್ಟೆ ಇದು'
ಮುಂಬರುವ ಚುನಾವಣೆಗಳಲ್ಲಿ ಕೇವಲ ಜಾತ್ಯತೀತ ಉತ್ಪನ್ನಗಳಷ್ಟೇ ಅಲ್ಲದೆ, ಹೆಚ್ಚು ಬೇಡಿಕೆಯಲ್ಲಿರುವ 'ಮೋದಿ ಮುಖವಾಡ', 'ಚಪ್ಪಾಳೆ ಮತ್ತು ಜಿಂದಾಬಾದ್' ಸದ್ದು ಹೊರಡಿಸುವ ಮೈಕುಗಳನ್ನೂ ಮಾರಲಿದ್ದೇವೆ ಎನ್ನುವ ಪೈ, 'ನಮ್ಮದು(ಚೀನಾ) ಪ್ರಜಾಪ್ರಭುತ್ವ ರಾಷ್ಟ್ರವಲ್ಲದಿರಬಹುದು, ಆದರೆ ನೆರೆರಾಷ್ಟ್ರದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂಬ ಆಸೆ ನಮಗೂ ಇದೆ' ಎಂದು ಹೇಳಿ ತಮ್ಮ ಮಾರುಕಟ್ಟೆಗೆ ಎಮೋಷನಲ್ ಟಚ್ ಕೊಡುವ ಪ್ರಯತ್ನ ಮಾಡಿ ಮಾತು ಮುಗಿಸುತ್ತಾರೆ.

- ಸಂದೀಪ್ ಕಡಿಯನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.