ಅಂಕಣಗಳು

ಡೊನೇಷನ್ ಎಂಬ ಬೆಕ್ಕಿಗೆ ಗಂಟೆ ಕಟ್ಟುವರಾರು?

ಡೊನೇಷನ್ ಎಂಬ ಬೆಕ್ಕಿಗೆ ಗಂಟೆ ಕಟ್ಟುವರಾರು?
Published On :

ಆಣೆ ಇಡುವುದು, ಪ್ರಮಾಣ ಮಾಡುವುದು, ಭಾಷೆ ನೀಡುವುದು ಮುಂತಾದವೆಲ್ಲ ವಾಸ್ತವ ಪರಿಸ್ಥಿತಿ ಇಲ್ಲವೇ ಸನ್ನಿವೇಶ ಅಥವಾ ವಿದ್ಯಮಾನವೊಂದನ್ನು ದೃಢೀಕರಿಸುವುದಕ್ಕಾಗಿ ಪ್ರಾಮಾಣಿಕ ಮತ್ತು ನಿಷ್ಠಾವಂತ ಮಂದಿ ಅನುಸರಿಸುತ್ತಿದ್ದ ಸಚ್ಚಾರಿತ್ರ್ಯ ವಿಶೇಷಗಳು. ನ್ಯಾಯಾಲಯವೊಂದರಲ್ಲಿನ ಕಟಕಟೆಯಲ್ಲಿ ನಿಂತ ವ್ಯಕ್ತಿಯೊಬ್ಬನಿಂದ ಭಗವದ್ಗೀತೆ ಪುಸ್ತಕವನ್ನೋ, ಬೈಬಲ್ಲಿನ ಪುಸ್ತಕವನ್ನೋ, ಕುರಾನ್ ಪುಸ್ತಕವನ್ನೋ ಹಿಡಿಸುತ್ತ 'ನಾನು ಸತ್ಯವನ್ನೇ ಹೇಳುತ್ತೇನೆ, ಸತ್ಯವಲ್ಲದ್ದನ್ನು ಹೇಳುವುದಿಲ್ಲ, ನಾನು ಹೇಳುವುದೆಲ್ಲ ಸತ್ಯ ಎಂದು ಪ್ರಮಾಣ ಮಾಡಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಮಂತ್ರಿ ಮಹೋದಯರುಗಳು ಪ್ರಮಾಣ ವಚನ ಸ್ವೀಕರಿಸುವಾಗ ದೇವರ ಹೆಸರಿನಲ್ಲಿ, ರಾಜ್ಯದ ಹೆಸರಿನಲ್ಲಿ, ತಾಯಿ ತಂದೆ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಇತ್ಯಾದಿ ಇತ್ಯಾದಿಯಾಗಿ ರಾಜ್ಯದ ಒಳಿತಿಗೆ ಬದ್ಧವೆಂದು ಪ್ರಮಾಣ ಮಾಡುವುದನ್ನು ನಾವು ನೋಡಿದ್ದೇವೆ. ಬಹಳ ಪ್ರಾಚೀನದಲ್ಲಿ ಬಲು ಕಠಿಣವಾದ ಪರೀಕ್ಷೆ 'ದಿವ್ಯ' ಎಂಬುದರ ಮೂಲಕ ಮಾತಿನ ದೃಢೀಕರಣ ನಡೆಯುತ್ತಿತ್ತಂತೆ. ನಾನು ಹೇಳುವುದು ನಿಜವಲ್ಲದ್ದಾದರೆ ಈ ಕೊಡದಲ್ಲಿರುವ ಹಾವು ನನ್ನ ಕೈಯನ್ನು ಕಚ್ಚಲಿ, ನನ್ನ ಪ್ರಾಣ ಹೋಗಲಿ' ಎಂದು ಕೊಡದ ಒಳಗೆ ಕೈ ಹಾಕುತ್ತಿದ್ದರಂತೆ. ಹಾವು ಕಚ್ಚಿತೋ ಬಿಟ್ಟಿತೋ ಆ ಮಾತು ಬೇರೆ. ಒಟ್ಟಾರೆ ಕೊಟ್ಟ, ಆಡಿದ ಮಾತನ್ನು ಸಾರ್ಥಕ್ಯ ಪಡಿಸಿಕೊಳ್ಳಲು ಇರುವ ಹಲವಾರು ವಿಧಾನಗಳ ಪೈಕಿ ಆಣೆ, ಪ್ರಮಾಣಗಳು ತಮ್ಮ ನಿಜ ಮೌಲ್ಯವನ್ನು ಸಾರುವಂಥ ಸನ್ನಿವೇಶಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಅಫಿಡವಿಟ್ಟುಗಳು, ಹೇಳಿಕೆಗಳು, ಒಪ್ಪಂದಗಳು ಮುಂತಾದವು ಕೂಡಾ ಈ ಆಣೆ ಪ್ರಮಾಣದ ಪರಿಧಿಯೊಳಗೇ ಬರುವಂಥವೇ.
ಶಾಲಾ ಕಾಲೇಜುಗಳನ್ನು ನಡೆಸಬೇಕಾದರೆ ಹಣದ ಅಗತ್ಯ ಇರುತ್ತದಷ್ಟೇ. ಸರ್ಕಾರವೇ ನಡೆಸಿಕೊಂಡು ಬರುವ ಶಾಲಾ ಕಾಲೇಜುಗಳಲ್ಲಿ ಕೂಡ ಹಣದ ಮುಗ್ಗಟ್ಟು ಏರ್ಪಟ್ಟು ಶಿಕ್ಷಣದ ಗುಣಮಟ್ಟದಲ್ಲಿ ಏರಿಳಿತವಾಗುವ ಸನ್ನಿವೇಶಗಳನ್ನು ನೋಡಿದ್ದೇವೆ. ಶಿಕ್ಷಣ ನೀಡಲು ಕೆಲವೊಂದು ಸಂದರ್ಭಗಳನ್ನು ಹೊರತುಪಡಿಸಿ, ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿ ಶಾಲೆಯ ಆಡಳಿತ ನಡೆಸುವ ಪರಿ ಒಂದು; ಇದರೊಂದಿಗೆ ಪೂರಕವಾಗಿ ತಮ್ಮ ಸಂಸ್ಥೆಗಳಿಗೆ ಅನುದಾನ ರೂಪದಲ್ಲಿ ಹಣ ಸಹಾಯ ಒದಗಿಸುವುದು ಇನ್ನೊಂದು. ಇವೆರಡರ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳು ಇಂದು ನಡೆಯುತ್ತಿವೆ. ಶಿಕ್ಷಕರಿಗೆ ಸಂಬಳ, ಬೋಧನ ಸಾಮಗ್ರಿಗಳ ಸಂಗ್ರಹಣೆ, ಪೀಠೋಪಕರಣಗಳ ಖರೀದಿ, ಕಟ್ಟಡದ ವಾರ್ಷಿಕ ದುರಸ್ತಿ, ಅನಿರೀಕ್ಷಿತ ದುರ್ಘಟನೆಗಳಿಗೆ ಒಂದಷ್ಟು ಹಣ ಮೀಸಲಾತಿ, ಹೊಸ ಹೊಸ ಶಿಕ್ಷಣಗಳ ನೀಡಿಕೆ, ಸಂಸ್ಥೆಯ ಕಟ್ಟಡದ ವಿಸ್ತರಣೆ ಮುಂತಾದವಕ್ಕೆಲ್ಲ ಹಣ ಬೇಕೇ ಬೇಕು. ಇನ್ನು ಅಭಿವೃದ್ಧಿಗೊಳ್ಳುತ್ತಿರುವ ಶಿಕ್ಷಣ ಕ್ಷೇತ್ರದ ಗತಿಶೀಲತೆಗೆ ಅನುಗುಣವಾಗಿ ಬೋಧನೆಯಲ್ಲಿ ಪರಿಷ್ಕರಣೆ, ಅತ್ಯಾಧುನಿಕ ಬೋಧನ ಸಲಕರಣೆಗಳ ಖರೀದಿ ಇತ್ಯಾದಿಗಳು ಮುಂತಾದವಕ್ಕೆ ಹೆಚ್ಚಿನ ಹಣದ ಅಗತ್ಯವನ್ನು ಗಮನಿಸಿ ಸರ್ಕಾರ ಯುಕ್ತ ಕ್ರಮವನ್ನು ಕೈಗೊಳ್ಳುತ್ತದೆ. ನಮ್ಮದೇ ರಾಜ್ಯ, ನಮ್ಮದೇ ಶಾಲೆ, ಕಾಲೇಜು, ನಮ್ಮದೇ ಹಣ ವಿತರಣೆ ಎಂಬುದು ಸರ್ಕಾರದ ನಿಲವು.
ಯಾವುದೇ ವಿಧದಲ್ಲೂ ಸರ್ಕಾರದಿಂದ ಅನುದಾನ ಪಡೆಯದ ಖಾಸಗಿ ವಿದ್ಯಾ ಸಂಸ್ಥೆಗಳ ಪರಿಸ್ಥಿತಿಯಾದರೂ ಏನು? ಸರ್ಕಾರಿ ವಿದ್ಯಾಸಂಸ್ಥೆಗಳ ಎಲ್ಲ ಅಗತ್ಯಗಳನ್ನು ತಾವೂ ಪೂರೈಸಿಕೊಂಡು ಮತ್ತಷ್ಟೂ, ಉತ್ತಮ ಮಟ್ಟದ ಶಿಕ್ಷಣ ನೀಡಬೇಕೆಂಬ ಆಕಾಂಕ್ಷೆಯನ್ನು ಇಟ್ಟುಕೊಂಡಿರುವ ಖಾಸಗೀ ವಿದ್ಯಾಸಂಸ್ಥೆಗಳ ಪರಿಸ್ಥಿತಿಯನ್ನು ವಿಚಾರ ಮಾಡ ಹೊರಟರೆ ಆ ದೃಶ್ಯಾವಳಿಯಾದರೋ ಒಂದೆಡೆ ರೋಚಕತೆಯನ್ನು ಮತ್ತೊಂದೆಡೆ ಚಿಂತಾಜನಕ ಸ್ಥಿತಿಯನ್ನೂ ಪ್ರದರ್ಶಿಸುವಂತಿದೆ. ಯಾರೋ ಮಹಾತ್ಮರು ಹಣ ಹೂಡಿ ವಿದ್ಯಾಸಂಸ್ಥೆಯೊಂದನ್ನು ಸ್ಥಾಪಿಸಿರುತ್ತಾರೆ. ಕಾಲಕ್ರಮೇಣ ಸರ್ಕಾರದ ರೀತಿ ನೀತಿಗಳಿಗೆ ಅನುಸಾರವಾಗಿ ಶಿಕ್ಷಣ ನೀಡುವ ಪರಿಸ್ಥಿತಿ ಏರ್ಪಟ್ಟಿರುತ್ತದೆ. ಮೇಲಾಗಿ ಸರ್ಕಾರಿ ವಿದ್ಯಾಸಂಸ್ಥೆಯಲ್ಲಿ ದೊರೆಯುವ ಮೌಲ್ಯಯುತ ಶಿಕ್ಷಣಕ್ಕಿಂತಲೂ ಬಲು ಹೆಚ್ಚಿನ ಮಟ್ಟದ ಶಿಕ್ಷಣ ನೀಡುವುದು ಅಂತೆಯೇ ಫಲಿತಾಂಶಗಳನ್ನು ಪಡೆಯುವುದು ಖಾಸಗೀ ವಿದ್ಯಾಸಂಸ್ಥೆಗಳ ಉದ್ದೇಶ. ಇದರ ಈಡೇರಿಕೆಗಾಗಿ, ಸರ್ಕಾರದಿಂದ ಯಾವುದೇ ಪ್ರಕಾರದ ಅನುದಾನವೂ ಇರದಿದ್ದ ಸಂದರ್ಭದಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುವುದಾದರೂ ಎಂತು? ಆಧುನಿಕ ಬೋಧನಾನುಪಕರಣಗಳನ್ನು ಅಳವಡಿಸುವುದು, ತರಗತಿ ವಾತಾವರಣವನ್ನು ಉತ್ತಮ ಪಡಿಸುವುದು, ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು, ಪ್ರವೇಶಾತಿ ಸಂಖ್ಯೆಗೆ ಅನುಗುಣವಾಗಿ ತರಗತಿಗಳನ್ನು ಹೆಚ್ಚಿಸುವುದು, ಕಟ್ಟಡ ವಿಸ್ತರಣೆ, ಸ್ಥಳ ಅಭಾವ ನಿವಾರಣೆಗಾಗಿ ಬಹುಮಹಡಿ ಕಟ್ಟಡ ನಿರ್ಮಾಣ, ನಗರ ಬಡಾಯಿಸುತ್ತಿರುವುದರಿಂದ ಶಾಖಾ ವಿದ್ಯಾ ಸಂಸ್ಥೆಗಳ ಸ್ಥಾಪನೆ, ಹೆಚ್ಚಾಗುತ್ತಿರುವ ಜೀವನವೆಚ್ಚಕ್ಕೆ ಅನುಗುಣವಾಗಿ ಶಿಕ್ಷಕರಿಗೆ ಸಂಬಳದ ಹೆಚ್ಚುವರಿ, ವಿದ್ಯಾರ್ಥಿಗಳಲ್ಲಿ ಸಮತೆ-ಏಕರೂಪತೆಯ ಮನೋಭಾವ ವೃದ್ಧಿಸಲು ಅವರಿಗೆ ಸಮವಸ್ತ್ರದ ಏರ್ಪಾಡು-ಒಂದೇ ಎರಡೇ? ವೆಚ್ಚಗಳನ್ನು ಸರಿತೂಗಿಸುವ ವಿವಿಧ ಪರಿಯ ವಿಧಿ ವಿಧಾನಗಳನ್ನು ಅನುಸರಿಸುವುದು ಅನಿವಾರ್ಯವೇ ಆಗಿದೆ.
ಅತ್ಯುತ್ತಮ ಫಲಿತಾಂಶ ಬಂದಿರುವ ವಿದ್ಯಾ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ದುಂಬಾಲು, ತೇರ್ಗಡೆ ವರ್ಗದ ಆದ್ಯತೆ, ಮೇಲಧಿಕಾರಿಗಳ ಶಿಫಾರಸ್ಸುಗಳನ್ನು ಮಾನ್ಯ ಮಾಡುವುದು- ಈ ಮುಂತಾದವಕ್ಕೆಲ್ಲ ಆಗಬೇಕಾದ ವ್ಯವಸ್ಥೆಗಳು- ಏರ್ಪಾಡುಗಳನ್ನು ಮಾಡಿಕೊಳ್ಳಲು ಖಾಸಗಿ ಸಂಸ್ಥೆಗಳು ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳಬೇಕಾಗುತ್ತದೆ. ಇದು ವಿಧಿಯಿಲ್ಲದ ಪರಿಸ್ಥಿತಿ.
ಕೆಲವೊಂದು ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಕನಿಷ್ಠ ವಿದ್ಯಾರ್ಥಿ ಸಂಖ್ಯೆ ಇಲ್ಲವೆಂದು ಸಂಸ್ಥೆಯನ್ನೇ ಮುಚ್ಚಿದಂಥ ಸಂದರ್ಭಗಳನ್ನು ನಾವು ಕೇಳಿದ್ದೇವೆ. ಆದರೆ ಸರ್ಕಾರದ ಯಾವುದೇ ಅನುದಾನ ಪಡೆಯಲು ಅವಕಾಶವಿಲ್ಲದೆ ತಾವೇ ಸ್ವತಃ ಶಾಲೆಯನ್ನು ಯುಕ್ತವಾಗಿ ನಡೆಸುತ್ತಿರುವ ಖಾಸಗೀ ಆಡಳಿತ ಮಂಡಳಿಯ ನೀತಿ-ನಿಯಮಗಳೇನು? ಶಿಕ್ಷಣದ ಎಲ್ಲ ಸೌಕರ್ಯ-ಸೌಲಭ್ಯಗಳನ್ನು ಒದಗಿಸುವುದಕ್ಕೆ ಅಗತ್ಯವಿರುವ ಹಣ ಬರುತ್ತಿರುವುದಾದರೂ ಎಲ್ಲಿಂದ? ವಿದ್ಯಾಸಂಸ್ಥೆಯ ಕಟ್ಟಡದ ವಿಸ್ತರಣೆ, ಶಾಖಾ ಸಂಸ್ಥೆಗಳ ಸ್ಥಾಪನೆ, ಸರ್ಕಾರದೊಂದಿಗಿನ ದೃಗ್ಗೋಚರವಲ್ಲದೆಂದೆನಿಸುವ ಸಂಪರ್ಕ ಒಡನಾಟ, ಆಡಳಿತ ಮಂಡಳಿಯ ಸಭೆ-ಸಮಾರಂಭಗಳಿಗೆ ತಗುಲುವ ವೆಚ್ಚ, ವಾಹನ-ದೂರವಾಣಿ-ಪತ್ರ ವ್ಯವಹಾರ ಮುಂತಾದವುಗಳಿಗೆ ಅಗತ್ಯ ವೆಚ್ಚ, ಮುಂತಾದವುಗಳಿಗೆ ಅಗತ್ಯವಿರುವ ಹಣ ತಾನೇ ಎಲ್ಲಿಂದ ಬರುತ್ತದೆ? ವಿದ್ಯಾಸಂಸ್ಥೆಗಳಲ್ಲಿ ಏನಾದರೂ ಹಣ ಬಿಡುವ ಸಸಿಗಳನ್ನು ಬೆಳೆಸಿದ್ದಾರೆಯೇ? ಹಣ ಲೀಲಾಜಾಲವಾಗಿ ಬರುತ್ತಿದೆ; ಪ್ರವೇಶಾತಿ ದೊರೆಯುತ್ತಿದೆ. ಪಾಠ ಪ್ರವಚನಗಳು ಯಥಾ ಯೋಗ್ಯವಾಗಿ ಜರುಗುತ್ತಿದೆ. ಒಳ್ಳೆಯ ಫಲಿತಾಂಶ ಬರುತ್ತದೆ; ದೈನಂದಿನ ಪತ್ರಿಕೆಗಳಲ್ಲಿ ಇಡೀ ಪುಟದಷ್ಟು (ಕೆಲವೊಮ್ಮೆ ಮುಂದಿನ ಪುಟಗಳಿಗೂ ವಿಸ್ತರಿಸಿಕೊಳ್ಳುವಂಥ) ಜಾಹೀರಾತುಗಳು ಕಾಣ ಬರುತ್ತಿವೆ. ಎಲ್ಲವೂ ಸುಸೂತ್ರವಾಗಿ ನಡೆದು ಬರುತ್ತಿದೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗಿ ಹೋಗಿದೆ?
ಖಾಸಗೀ ಸಂಸ್ಥೆಗಳಿಗೆ ಹಣ ಬರುವುದಾದರೂ ಎಲ್ಲಿಂದ? ಕೇವಲ ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಶಿಕ್ಷಣ ಶುಲ್ಕದಿಂದ ಇಂಥ ಕೆಲಸಗಳು ಸಾಧ್ಯವೇ? ಪ್ರವೇಶಾತಿಗಾಗಿ ಪರಿತಪಿಸುತ್ತಿರುವ ವಿದ್ಯಾರ್ಥಿ ಪೋಷಕ- ಪಾಲಕರ ಪಾಡು ಹೇಳತೀರದು. ಕೊಟ್ಟವರಿಗುಂಟು ಕೊಡದವರಿಗಿಲ್ಲ ಎಂಬ ಮಾತಿನ ಅನ್ವಯವೇ ಹೆಚ್ಚು. ಕೊಡುವುದು ಏನನ್ನು, ಪಡೆಯುವುದು ಏನನ್ನು? ಶಿಕ್ಷಣ ಶುಲ್ಕಕ್ಕೆ ರಸೀತಿ ಉಂಟು. ಆದರೆ ಕೊಟ್ಟಿದ್ದಕ್ಕೆ?
ಪಾಲಕರು ಹಠ ಬಿಟ್ಟರೆ, ಮನಸ್ಸು ಮಾಡಿದರೆ ಡೊನೇಷನ್ನಿಗೆ ಗುಡ್‌ಬೈ ಹೇಳಬಹುದು ಎಂಬುದು ಸರ್ಕಾರದ ಅಂಬೋಣ.
ಪ್ರತಿಯೊಂದು ವರ್ಷವೂ ಫಲಿತಾಂಶ ಹೊರಬಿದ್ದಾಗ ಉತ್ತೀರ್ಣಗೊಂಡ ವಿದ್ಯಾರ್ಥಿಗಳ ಪರದಾಟ, ಮುಂದಿನ ತರಗತಿ ಸೇರಲು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ದುಂಬಾಲು, ಒಂದೊಂದು ಸಂಸ್ಥೆಯಲ್ಲಿ ಒಂದೊಂದು ಮೌಲ್ಯದ ಡೊನೇಷನ್, ಗಳಿಸಿದ ಅಂಕಗಳು, ಶಿಫಾರಸ್ಸು ಮತ್ತು ಚೌಕಾಸಿಗಳನ್ನು ಅನುಸರಿಸಿ ೆಡೊನೇಷನ್ ನೀಡುವ ಪಾಲಕರ ಮನಸ್ಸಿಲ್ಲದ ಪ್ರವೃತ್ತಿಗಳು, ಡೊನೇಷನ್ ನಿಷಿದ್ಧ ಎಂದು ಸಾರುವ ವಿದ್ಯಾ ಇಲಾಖೆ, ವಾರ್ಷಿಕ ಕಟ್ಟಲೆಯೋ ಎಂಬಂತೆ ಇರುವ ವಿಚಾರಣಾ ಪ್ರಹಸನಗಳು, ಸಂಸ್ಥೆಗಳಿಗೆ ಎಚ್ಚರಿಕೆ-ಮುಂತಾದವೆಲ್ಲ ಸಾಂಗೋಪಸಾಂಗವಾಗಿ ನಡೆದು ಬರುತ್ತಲೇ ಇವೆ. ಪ್ರತಿಯೊಂದು ವರ್ಷವೂ ನಡೆಯುವ ಈ ಶಿಕ್ಷಣ ಜಾತ್ರಾ ಉತ್ಸವ ಪರಿಗಳು ವಿದ್ಯಾ ಇಲಾಖೆಗೆ ತಿಳಿಯದ ವಿಷಯವೇ? ಏಕೆ ಹೀಗೆ? ಡೊನೇಷನ್ ಇಲ್ಲದೆ ಅಡ್ಮಿಷನ್ ಇಲ್ಲವೇ? ಎಂಬುದೇ ಸಾವಿರ ಡಾಲರ್‌ಗಳ ಪ್ರಶ್ನೆ.
 ಡೊನೇಷನ್ ಸಂಗ್ರಹ ನಿಷಿದ್ಧ. ಸಂಗ್ರಹಣೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ಡೊನೇಷನ್‌ಗಾಗಿ ಒತ್ತಾಯಿಸಿದವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ. ಡೊನೇಷನ್ನಿಗಾಗಿ ಒತ್ತಾಯಿಸಿದವರ ಮೇಲೆ ಅದು ಲಿಖಿತ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳುತ್ತೇವೆ ಇತ್ಯಾದಿ ಇತ್ಯಾದಿಯಾಗಿ ಸರ್ಕಾರದ ವಿದ್ಯಾ ಇಲಾಖೆಗಳ  ಅಧಿಕಾರಿಗಳ ಘೋಷಣೆ.
ಯಾವ ಪಾಲಕನಿಗೆ ತಾನೇ ತನ್ನ ಮಕ್ಕಳ ಶ್ರೇಯೋಭಿವೃದ್ಧಿಯನ್ನು ಬದಿಗಿಟ್ಟು ಡೊನೇಷನ್ ಕೊಟ್ಟು ಸೇರಿಸಿದೆ ಎಂದು ಹೇಳುವ ಮನೋಧೈರ್ಯ ಇದೆ? ಡೊನೇಷನ್ ಪಡೆಯುವ ಯಾವ ಸಂಸ್ಥೆ ತಾನೇ ತಾನು ಡೊನೇಷನ್ ಪಡೆಯುತ್ತಿಲ್ಲ ಎಂದು ಪ್ರಮಾಣ ಮಾಡುತ್ತದೆ? ಆಣೆ ಪ್ರಮಾಣ ಮಾಡುವುದು ಕೇವಲ ವ್ಯವಹಾರವನ್ನು ಚಾಲೂ ಮಾಡಲು ಮಾತ್ರ ಎಂದೆನ್ನುವ ಮನೋಭಾವ ಖಾಸಗಿಯವರದು. ಒಂದು ಕಾಲಕ್ಕೆ ವಿದ್ಯಾಕ್ರಯ ಎನ್ನುವುದನ್ನು ಶಿಶುಹತ್ಯೆಯಂಥ ಪಾಪದ ಕೆಲಸವೆಂದೇ ಬಗೆಯಲಾಗಿತ್ತು.
ಆದರೆ ಇಂದು ಡೊನೇಷನ್ ರಹಿತವಾದ ವಿದ್ಯಾದಾಸೋಹ ಕೇವಲ ಬೆರಳೆಣಿಕೆಯ ವಿದ್ಯಾ ಸಂಸ್ಥೆಗಳಿಗೆ ಮಾತ್ರ ಮೀಸಲಾಗಿದೆ. ಆಣೆ ಪ್ರಮಾಣ ಮಾಡಿ ಹೇಳಬಲ್ಲರೆ ಖಾಸಗಿ ವಿದ್ಯಾ ಸಂಸ್ಥೆಯವರು 'ತಾವು ಡೊನೇಷನ್ ಸ್ವೀಕರಿಸುತ್ತಿಲ್ಲ' ಎಂದು? ಶಾಂತಂ ಪಾಪಂ, ಶಾಂತಂ ಪಾಪಂ!

- ಪ್ರೊ. ಎಸ್. ರಾಮಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.