ಅಫ್ಘಾನಿಸ್ತಾನದಿಂದ ಅಮೆರಿಕ ಕಾಲ್ತೆಗೆದೊಡನೆ ಭಾರತದಲ್ಲಿ ಯುದ್ಧಪರ್ವ!

ಶ್ರೀನಗರದಲ್ಲಿ ಸೇನಾಪಡೆ ಮೇಲೆ ಆದ ಉಗ್ರರ ದಾಳಿಯಿಂದಾಗಿ ಐದು ವರ್ಷಗಳಲ್ಲೆ ಅತಿಹೆಚ್ಚಿನದಾದ ಜೀವಹಾನಿಯ ಸಂತಾಪದಲ್ಲಿದೆ ಭಾರತೀಯ ಪಡೆ. ಈ ಹಂತದಲ್ಲಿ ವಾಸ್ತವವೊಂದು ಅತಿಯಾಗಿ ಚುಚ್ಚುತ್ತಿದೆ. 2011-12ರ ಸಾಲಿನಲ್ಲಿ ಇನ್ನೇನು ಯುದ್ಧವಾಗಿ ಹೋಯಿತು ಎಂಬ ಪರಿಸ್ಥಿತಿಯ ನಂತರ ಭಾರತದ ಭದ್ರತಾ ಪಡೆಯಲ್ಲಿ ಜೀವಹಾನಿ ಹೆಚ್ಚುತ್ತಲೇ ಸಾಗಿದೆ. 2013ನೆ ಸಾಲಿನ ಕೇವಲ ಆರು ತಿಂಗಳ ಲೆಕ್ಕ ತೆಗೆದುಕೊಂಡರೂ ಭಾರತ ಕಳೆದುಕೊಂಡ ಪೊಲೀಸ್ ಮತ್ತು ಮಿಲಿಟರಿ ಸಿಬ್ಬಂದಿ ಸಂಖ್ಯೆ 2012ರ ಸಾಲಿನ ಒಟ್ಟೂ ಜೀವಹಾನಿಯನ್ನು ಮೀರಿಸುತ್ತದೆ. 2011ರ ಅಂಕಿ ಅಂಶಕ್ಕೆ ಹೋಲಿಸಿದಾಗಲೂ ಇದೇ ಚಿತ್ರಣ ದೊರಕುತ್ತದೆ.
ಆಫ್ಘಾನಿಸ್ತಾನದಿಂದ ಅಮೆರಿಕ ಕಾಲ್ತೆಗೆಯುತ್ತಿದ್ದಂತೆ ತಾವು ಎಲ್ಲ ಬಗೆಯ ಉಗ್ರ ಕಾರ್ಯಾಚರಣೆಗಳನ್ನು ಮರು ಆರಂಭಿಸುವುದಾಗಿ ಹುರಿಯತ್ ಕಾನ್ಫರೆನ್ಸ್ನ ಪ್ರತ್ಯೇಕತಾವಾದಿ ಸದಸ್ಯರಿಗೆ ಡಿಸೆಂಬರ್ನಲ್ಲಿ ಲಷ್ಕರೆ ತಯ್ಬಾದ ಮುಖ್ಯಸ್ಥ ಹಫೀಜ್ ಮಹಮದ್ ಸಯೀದ್ ಹೇಳಿದ್ದ. ಸೋಮವಾರ ಮಿಲಿಟರಿ ಕವಾಯತಿನ ಮೇಲೆ ಆದ ಉಗ್ರದಾಳಿ ಪೊಲೀಸರು ಶಂಕಿಸುತ್ತಿರುವಂತೆ ಲಷ್ಕರೆಯ ಕೃತ್ಯವೇ ಎಂದಾದರೆ ಹಫೀಜ್ ಹೇಳಿದ್ದ ಕಾರ್ಯಾಚರಣೆ ಶುರುವಾಗಿದೆ ಎಂದೇ ಅರ್ಥ.
ಕೇವಲ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡೇ ತೀರ್ಮಾನಕ್ಕೆ ಬರುವುದು ಸಾಧುವಲ್ಲದಿರಬಹುದು. ಈ ವರ್ಷದ ಭದ್ರತಾ ಸಿಬ್ಬಂದಿ ಜೀವಹಾನಿಗಳು ಮುಖ್ಯವಾಗಿ ಸಂಭವಿಸಿರುವುದು ಮೂರು ಘಟನೆಗಳಿಂದ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಶಸ್ತ್ರರಹಿತ ಸಿಬ್ಬಂದಿ ಮೇಲೆ ಆದ ದಾಳಿ, ತ್ರಾಲ್ನಲ್ಲಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಆದ ಜೀವಹಾನಿ ಹಾಗೂ ಸೋಮವಾರ ಶ್ರೀನಗರದಲ್ಲಿದ್ದ ಯೋಧರ ಮೇಲೆ ನಡೆದ ದಾಳಿ. ಸ್ವಲ್ಪ ಅದೃಷ್ಟ ಜತೆಗಿದ್ದರೆ ಈ ಮೂರೂ ಘಟನೆಗಳಲ್ಲಿ ಕಡಿಮೆ ಪ್ರಮಾಣದ ಜೀವಹಾನಿ ಆಗುತ್ತಿತ್ತೇನೊ. ಉದಾಹರಣೆಗೆ ಸೋಮವಾರದ ಘಟನೆಯಲ್ಲಿ ಸೇನೆಯ ಟ್ರಕ್ ಮೇಲೆ ಬಿದ್ದ ಗ್ರೆನೇಡ್, ರಸ್ತೆಗೆ ಬಿದ್ದಿದ್ದರೆ ಆ ಪ್ರಮಾಣದ ಹಾನಿ ಆಗುತ್ತಿರಲಿಲ್ಲ ಎನಿಸುತ್ತದೆ. ಆಗ ಅಂಕಿಸಂಖ್ಯೆಗಳೂ ಬದಲಾಗುತ್ತಿದ್ದವು.
ಅದೇನೆ ಇದ್ದರೂ ಆತಂಕ ಪಡುವುದಕ್ಕೆ ಸಾಕಷ್ಟು ಕಾರಣಗಳಂತೂ ಇವೆ. ಇನ್ನೊಂದು ತಿಂಗಳಿಗೆಲ್ಲ ಅಮೆರಿಕದ ಪಡೆ ಆಫ್ಘಾನಿಸ್ತಾನದಿಂದ ಹಿಂದಡಿ ಇಡುವುದು ಸ್ಪಷ್ಟವಾಗುತ್ತಿರುವಂತೆ ಕಾಶ್ಮೀರದಲ್ಲಿ ಜಿಹಾದಿ ಉಗ್ರರ ದಾಳಿಯೂ ತೀವ್ರವಾಗುವ ಸಾಧ್ಯತೆ ಇದೆ. 'ಅಮೆರಿಕವು ಹೇಗೆ ಆಫ್ಘಾನಿಸ್ತಾನದಿಂದ ಓಡಿ ಹೋಗಬೇಕಾಯಿತೊ ಅಂತೆಯೇ ಭಾರತ ಕೂಡ ಕಾಶ್ಮೀರದಿಂದ ಕಾಲು ತೆಗೆಯಲೇಬೇಕಾಗುತ್ತದೆ' ಎಂದಿದ್ದಾನೆ ಹಫೀಜ್ ಸಯೀದ್. 'ಹಿಂದುಗಳ ವಿಗ್ರಹ ಆರಾಧನೆಯೆ ತಮ್ಮ ಜಿಹಾದ್ಗೆ ಕಾರಣ' ಎಂದೂ ಭಾಷಣವೊಂದರಲ್ಲಿ ಹಫೀಜ್ ಹೇಳಿದ್ದಾನೆ. ಈ ಹಿಂದೆ ಇದೇ ಹಫೀಜ್, ಪಾಕಿಸ್ತಾನಿ ಸರ್ಕಾರಕ್ಕೆ ಜಿಹಾದಿಗಳ ಸಚಿವಾಲಯ ರಚಿಸುವುದಕ್ಕೆ ಕರೆ ನೀಡಿದ್ದನ್ನೂ, ಸರ್ಕಾರವು ಆತನ ಸಂಘಟನೆಗೆ ಉದಾರವಾಗಿ ಸಬ್ಸಿಡಿ ಮತ್ತು ಮೂಲಸೌಕರ್ಯದ ಬೆಂಬಲ ನೀಡಿರುವುದನ್ನು ವರದಿಗಳಲ್ಲಿ ತಿಳಿದುಕೊಂಡಿದ್ದೇವೆ.
ಸೋಮವಾರದ ದಾಳಿಯ ಕುರಿತ ಪ್ರಾಥಮಿಕ ತನಿಖೆ ನಡೆಸುತ್ತಿರುವ ಸಂಸ್ಥೆಗಳಿಂದ ಸೋರಿಕೆ ಆಗಿರುವ ಮಾಹಿತಿ ಪ್ರಕಾರ ಈ ದಾಳಿಯನ್ನು ಲಷ್ಕರೆ ಸಂಘಟನೆಯೇ ನಡೆಸಿರುವ ಬಗ್ಗೆ ಬಲವಾದ ಅನುಮಾನವಿದೆ. ಸ್ಥಳೀಯವಾಗಿ ಪ್ರಾಮುಖ್ಯ ಪಡೆದುಕೊಳ್ಳುವುದಕ್ಕೆ ಇಂಥ ದಾಳಿಗಳ ಹೊಣೆಯನ್ನು ಹಿಜ್ಬುಲ್ ಮುಜಾಹಿದೀನ್ ಹೊತ್ತುಕೊಳ್ಳುತ್ತಿದೆಯಾದರೂ ಈ ಕುರಿತ ಸ್ಪಷ್ಟ ಚಿತ್ರಣಕ್ಕೆ ಇರ್ಷದ್ ಶೇಖ್ ಎಂಬ ಪಡ್ಗಾಮ್ ಹಳ್ಳಿಯ ನಿವಾಸಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಈತ ಮತ್ತು ಅಬ್ದುಲ್ಲಾ ಎಂಬ ಕೋಡ್ನೇಮ್ ಹೊಂದಿದ ಪಾಕಿಸ್ತಾನಿಯೊಬ್ಬ ದಾಳಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ತನಿಖಾ ಸಂಸ್ಥೆಗಳಿಗೆ ದೊರೆತಿರುವ ಮಾಹಿತಿ.
ಹಿಜ್ಬುಲ್ ಮುಖ್ಯಸ್ಥನೂ ಆಗಾಗ ಯುದ್ಧದಾಹವನ್ನು ಪ್ರಕಟಿಸುತ್ತಾನಾದರೂ ಮಾರ್ಚ್ 2010ರಲ್ಲಿ ಹುರಿಯತ್ ನಾಯಕರು ಪಾಕಿಸ್ತಾನ ಭೇಟಿಗೆ ಹೋಗುವುದನ್ನು ಆತ ಆಕ್ಷೇಪಿಸಿದ್ದ ಎಂಬುದು ಗಮನಾರ್ಹ. ಆದರೆ ಲಷ್ಕರೆಯ ಮಿಲಿಟರಿ ಮುಖ್ಯಸ್ಥ ಅಬ್ದುಲ್ ವಾಹಿದ್ ಕಾಶ್ಮೀರಿಯದ್ದು ಮಾತ್ರ ಖಡಕ್ ನಿಲುವು. 'ತುಳಿಯುವವರಿಂದ ಮುಕ್ತಿ ಪಡೆಯುವುದಕ್ಕೆ ಯುದ್ದವೇ ಮಾರ್ಗ ಹೊರತು ಸಂಧಾನವಲ್ಲ' ಎಂಬುದನ್ನು ಆತ ಬಲವಾಗಿ ಪ್ರತಿಪಾದಿಸುತ್ತಾನೆ.
ಪಾಕಿಸ್ತಾನದ ಅಧೀನಕ್ಕೆ ಒಳಪಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಜಿಹಾದಿ ಗುಂಪುಗಳ ಒಳತೋಟಿಯನ್ನು ತುಫೈಲ್ ಅಹ್ಮದ್ರ ಸಂಶೋಧನಾ ಕೃತಿ ನಿಖರವಾಗಿ ಗುರುತಿಸುತ್ತದೆ. ಪಾಕಿಸ್ತಾನದೊಂದಿಗೆ ಸಲ್ಲಾಪ ಮಾಡುತ್ತಿರುವ ಲಷ್ಕರೆ ತಯ್ಬಾದಂತಿರದೆ ಈ ಪ್ರತ್ಯೇಕತಾವಾದಿ ಸಂಘಟನೆಗಳು ಕಾಶ್ಮೀರದ ವಿಷಯವನ್ನು ತಮ್ಮ ಪ್ರಗತಿಗೆ ಮಾತ್ರ ಬಳಸಿಕೊಳ್ಳುತ್ತಿವೆ.
ಒಟ್ಟಿನಲ್ಲಿ ನಮಗೆ ಕಾರ್ಯತಂತ್ರದ ಸ್ಪಷ್ಟ ಚಿತ್ರಣ ಸಿಗಬೇಕೆಂದರೆ ಇವರ ಮಾತುಗಳು ಮತ್ತು ಅಂಕಿಸಂಖ್ಯೆಗಳನ್ನು ಅಕ್ಕಪಕ್ಕದಲ್ಲಿ ಇಟ್ಟು ನೋಡಬೇಕು. 2002ರಲ್ಲಿ ಜೈಷೆ ಮೊಹಮದ್ ಉಗ್ರರು ಸಂಸತ್ತಿನ ಮೇಲೆ ದಾಳಿ ಮಾಡಿದಾಗ ಗಡಿಭಾಗದಲ್ಲಿ ಉಭಯ ದೇಶಗಳೂ ಬೃಹತ್ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಿದವು. ನ್ಯೂಕ್ಲಿಯರ್ ಯುದ್ಧದ ಉಸಾಬರಿ ಬೇಡ ಎಂಬ ಕಾರಣಕ್ಕೆ ಭಾರತ ದಾಳಿಯಿಂದ ಹಿಂತೆಗೆಯಿತಾದರೂ ಪಾಕಿಸ್ತಾನದ ಸೇನೆ ಕೂಡ ಇನ್ನೊಂದು ಬಿಕ್ಕಟ್ಟನ್ನು ಎದುರಿಸುವುದಕ್ಕೆ ಸನ್ನದ್ಧವಾಗಿರಲಿಲ್ಲ. ಅಮೆರಿಕ ಕೂಡ ಭಾರತ-ಪಾಕಿಸ್ತಾನ ಯುದ್ಧವಾದರೆ ಆಫ್ಘಾನಿಸ್ತಾನದಲ್ಲಿ ಪರಿಣಾಮವಾಗುತ್ತದೆ ಎಂಬ ಮುನ್ನೆಚ್ಚರಿಕೆಯಲ್ಲಿ ಜಿಹಾದಿ ಶಿಬಿರಗಳನ್ನು ನಿಯಂತ್ರಿಸುವಂತೆ ಪಾಕಿಸ್ತಾನದ ಮೇಲೆ ಒತ್ತಡವನ್ನು ತಂದಿತು. ಜನರಲ್ ಪರ್ವೇಜ್ ಮುಶರ್ರಫ್ ಸಚಿವಾಲಯದಲ್ಲಿ ಒಳಾಡಳಿತ ಸಚಿವರಾಗಿದ್ದ ಲೆಫ್ಟಿನೆಂಟ್ ಜನರಲ್ ಮೊಯಿನುದ್ದೀನ್ ಹೈದರ್ ಪರ್ವೇಜ್ಗೆ ಹೇಳಿದ್ದರು- 'ಅಧ್ಯಕ್ಷರೆ, ನಿಮ್ಮ ಆರ್ಥಿಕ ಕಾರ್ಯಸೂಚಿ ವಿಫಲವಾಗುತ್ತದೆ. ಏಕೆಂದರೆ ತೀವ್ರವಾದಿಗಳಿಂದ ಮುಕ್ತಿ ಪಡೆಯದ ಹೊರತೂ ಈ ದೇಶದಲ್ಲಿ ಬಂಡವಾಳ ಹೂಡುವುದಕ್ಕೆ ಯಾರೂ ಮುಂದೆ ಬರುವುದಿಲ್ಲ.' ಅವರ ಈ ಧ್ವನಿಗೆ ಹಲವರಿಂದ ಬೆಂಬಲವೂ ದೊರೆಯಿತು. 'ಜೈಷೆ ಸಂಘಟನೆ ಸಾವಿರಾರು ಕಾಶ್ಮೀರಿಗಳ ಮಾರಣಹೋಮಕ್ಕೆ, ಭಾರತದ ಸಂಸತ್ತಿನ ಮೇಲೆ ದಾಳಿಗೆ ಮತ್ತು ಡೇನಿಯಲ್ ಪರ್ಲ್ ಹತ್ಯೆಗೆ ಅಂತೆಯೇ ಮುಶರ್ರಫ್ ಕೊಲೆ ಯತ್ನಕ್ಕೆ ಕಾರಣವಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮುಜುಗರ ಬೇಡ' ಪಾಕ್ನ ನಿವೃತ್ತ ಲೆಫ್ಟಿನೆಂಟ್ ಜನರಲ್ ಜಾವೇದ್ ಅಶ್ರಫ್ ಕ್ವಾಜಿ ಹೇಳಿದ್ದರು.
2002ರ ಮಧ್ಯಭಾಗದಲ್ಲಿ ಭವಿಷ್ಯದ ಸಂಘರ್ಷವನ್ನು ತಪ್ಪಿಸುವುದು ಹೇಗೆ ಎಂಬ ಯೋಜನೆಗೆ ಹಲವಾರು ಗುಪ್ತ ಸಭೆಗಳು ನಡೆದವು. ಉಭಯ ರಾಷ್ಟ್ರಗಳೂ ಗಡಿಯಲ್ಲಿ ಕದನ ವಿರಾಮದ ರೂಪುರೇಷೆಗಳನ್ನು ಇನ್ನಷ್ಟು ನಿಖರವಾಗಿಸಿ ಹಲವಾರು ಪ್ರಾಣಗಳನ್ನು ಆಹುತಿ ತೆಗೆದುಕೊಂಡಿದ್ದ ಕ್ಷಿಪಣಿ ದಾಳಿ ನಿಲ್ಲುವಂತೆ ನೋಡಿಕೊಂಡವು. ಉಭಯ ದೇಶಗಳ ಗುಪ್ತಚರ ಮುಖ್ಯಸ್ಥರ ಭೇಟಿ ನಡೆದು ಮಾಹಿತಿಗಳು ವಿನಿಮಯವಾದವು. ಈ ಗುಪ್ತ ರಾಜತಾಂತ್ರಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮುಶರ್ರಫ್ ಮತ್ತು ವಾಜಪೇಯಿ ತಮ್ಮ ತಮ್ಮ ಕಡೆಗಳಿಂದ ರಚಿಸಿದ್ದ ಸಂಧಾನ ತಂಡಗಳು. ಭಾರತದ ಕಡೆಯಿಂದ ಎಸ್. ಕೆ. ಲಾಂಬಾ ಮತ್ತು ಪಾಕ್ ಕಡೆಯಿಂದ ತಾರೀಖ್ ಅಜೀಜ್ ಇದರ ನೇತೃತ್ವ ವಹಿಸಿದ್ದರು. ಲೈನ್ ಆಫ್ ಕಂಟ್ರೋಲ್ ಅನ್ನೆ ಗಡಿ ಎಂದು ಗೌರವಿಸಿಕೊಳ್ಳೋಣ, ಉಭಯ ದೇಶಗಳ ತೆಕ್ಕೆಯಲ್ಲಿರುವ ಜಮ್ಮು-ಕಾಶ್ಮೀರದ ಭಾಗಗಳಿಗೆ ಹೆಚ್ಚಿನ ಸ್ವಾಯತ್ತೆ, ಜಿಹಾದಿ ಹಿಂಸೆ ಕರಗುತ್ತಿದ್ದಂತೆ ಸೇನಾ ನಿಯೋಜನೆ ತಗ್ಗಿಸುವುದು ಎಂದೆಲ್ಲ ರಹಸ್ಯ ಒಪ್ಪಂದಗಳು ಆಗಿದ್ದವು. ಇದಕ್ಕೆ ಅಧಿಕೃತ ಮುದ್ರೆ ಬಿದ್ದಿರಲಿಲ್ಲವಾದರೂ ಏನೊ ಒಂದು ರೀತಿಯಲ್ಲಿ ಎಲ್ಲವನ್ನೂ ಸರಿಪಡಿಸುವ ಹೆಜ್ಜೆಯಾಗಿತ್ತು. 'ಸೆಪ್ಟೆಂಬರ್ 2007ರ ವೇಳೆಗೆ ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರದ ಕುರಿತು ಘೋಷಣೆ ಹೊರಡಿಸುವುದಕ್ಕೆ ಕಾಯುತ್ತಿವೆ' ಎಂದು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮಿರ್ವಾಯಿಜ್ ಉಮರ್ ಫಾರೂಕ್ ಹೇಳಿದ್ದ.
ಆದರೆ ಹಾಗಾಗಲಿಲ್ಲ. ಉತ್ತರ ಪ್ರದೇಶದ ಚುನಾವಣೆಗಳು ಮುಗಿಯಲಿ ಎಂದು ಮನಮೋಹನ್ ಸಿಂಗ್ ಕಾದರು. ಅಷ್ಟರಲ್ಲಿ ಮುಶರ್ರಫ್ರ ರಾಜಕೀಯ ಸ್ಥಾನ ಕಳೆಗುಂದಿತು. ಇಸ್ಲಾಮ್ವಾದಿಗಳಿಂದ ತಾನು ದ್ರೋಹದ ಆಪಾದನೆ ಎದುರಿಸಲಾರೆ ಎಂದು ಪಾಕ್ ಸೇನಾ ಮುಖ್ಯಸ್ಥ ಅಶ್ರಫ್ ಕಯಾನಿ ಹಿಂತೆಗೆದರು. ಇದೀಗ ಚಕ್ರ ಒಂದು ಸುತ್ತು ತಿರುಗಿದೆ! ಅಮೆರಿಕವು ಆಪ್ಘನ್ನಿಂದ ಕಾಲು ತೆಗೆಯುತ್ತಿದೆ. ಅದನ್ನು ನೋಡಿಕೊಳ್ಳುವ ಅವಕಾಶ ಪಾಕ್ ಗುಪ್ತಚರ ದಳ ಐಎಸ್ಐಗೆ. ಅಲ್ಲಿ ಭಾರತ ವಿರೋಧಿ ನಿಲುವು ತಾಳಿರುವ ಜಿಹಾದಿಗಳ ಜತೆ ವಿಶ್ವಾಸ ಕುದುರಿಸಿಕೊಳ್ಳುವ ತುರ್ತು ಪಾಕಿಸ್ತಾನಕ್ಕಿದೆ. ಸುಲಭದಲ್ಲಿ ಹೇಳುವುದಾದರೆ ಕಾಶ್ಮೀರದಲ್ಲಿ ಶಾಂತಿಗೆ ಕಾರಣವಾಗಿದ್ದ ಆಧಾರಸ್ತಂಭ ಶಿಥಿಲವಾಗಿದೆ.
ಇದೀಗ ಭಾರತದ ಎದುರು ಸೀಮಿತ ಆಯ್ಕೆಗಳಿವೆ. ಜಿಹಾದಿಗಳ ವಿರುದ್ಧದ ಆಕ್ರಮಣ ಹೆಚ್ಚಿಸುವುದು, ಆಫ್ಘಾನಿಸ್ತಾನದಲ್ಲಿರುವ ಐಎಸ್ಐ ವಿರೋಧಿ ಶಕ್ತಿಗಳನ್ನು ಬಲಪಡಿಸುವುದು, ಪಾಕಿಸ್ತಾನದ ಮಿಲಿಟರಿ ಮೇಲೆ ಒತ್ತಡ ಹೇರುವುದು, ನೇರ ಯುದ್ಧವನ್ನೆ ಅನುಸರಿಸಿ ಈಗಾಗಲೇ ಹದಗೆಟ್ಟಿರುವ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಬರ್ಬಾದ್ ಆಗಿಸುವುದು! ಇವೆಲ್ಲವೂ ಕಷ್ಟದ ದಾರಿಗಳೇ. ಹಾಗೆಂದು ಕೈಕಟ್ಟಿ ಕೂರುವಂತೆ ಇಲ್ಲ.
ತಮ್ಮ ಅವಧಿಯುದ್ದಕ್ಕೂ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನದೊಂದಿಗೆ ಶಾಂತಿ ಸ್ಥಾಪಿಸಿದ ಐತಿಹಾಸಿಕ ನೇತಾರನಾಗುವುದಕ್ಕೆ ಪ್ರಯತ್ನಿಸಿದರು. ಆದರೆ ಆ ಕಾಲವೀಗ ಮಿಂಚಿದೆ. ಹತ್ತು ವರ್ಷಗಳ ನಂತರ ಇನ್ನೊಂದು ಯುದ್ಧವನ್ನು ಎದುರಿಸುವುದಕ್ಕೆ ಭಾರತ ಸಿದ್ಧವಾಗಲೇಬೇಕಿದೆ.
- ಪ್ರವೀಣ್ ಸ್ವಾಮಿ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


