ಅಂಕಣಗಳು

ನಿರ್ವೀರ್ಯರನ್ನಾಗಿಸುವ ಮದ್ಯವೂ ರಾಜ್ಯದಿಂದ ಮಾಯವಾಗಲಿ

Published On :

ಗುಟ್ಕಾ ನಿಷೇಧಿಸಿ ಮುಖ್ಯಮಂತ್ರಿಗಳು ಕರ್ನಾಟಕದ ಜನರಿಗೆ ಉಪಕಾರ ಮಾಡಿದ್ದಾರೆಂದೇ ಹೇಳಬೇಕು.  ಮುಖ್ಯಮಂತ್ರಿಗಳಾದವರು ಸದಾ ಒತ್ತಡದಲ್ಲೇ ಕೆಲಸ ಮಾಡಬೇಕು. ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಹಣ ನೀಡುವ ವಿವಿಧ ಲಾಬಿಗಳು ಸರಕಾರ ತಮ್ಮ ಪರ ನಿರ್ಣಯ ತೆಗೆದುಕೊಳ್ಳುವಂತೆ ಮಾಡಲು ಹಾಕುವ ಪ್ರತ್ಯಕ್ಷ ಹಾಗೂ ಪರೋಕ್ಷ ಒತ್ತಡಗಳು ಸಂಕೀರ್ಣವಾದವು. ಅವುಗಳ ಗೋಜಲಿನಿಂದ ಬಿಡಿಸಿಕೊಂಡು ಗಟ್ಟಿಯಾದ ಹಾಗೂ ಜನಪರವಾದ ನಿರ್ಧಾರಗಳನ್ನು ಕೈಗೊಳ್ಳುವುದು ಸುಲಭದ ಮಾತೇನಲ್ಲ. ಈ ಮಧ್ಯೆ  ಕೈಗೊಳ್ಳಬೇಕಾದ ನಿರ್ಣಯಗಳು ತಮ್ಮ ಪಕ್ಷದ ಪ್ರಣಾಳಿಕೆಗೆ, ಸಿದ್ಧಾಂತಕ್ಕೆ ಹಾಗೂ ಒಲವು-ನಿಲುವುಗಳಿಗೆ ವ್ಯತಿರಿಕ್ತವಾಗದಂತೆ ನೋಡಿಕೊಳ್ಳಬೇಕು. ಸಂಪುಟದಲ್ಲಿ ಅವು ಭಿನ್ನಾಭಿಪ್ರಾಯಕ್ಕೆ, ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸಮತೋಲನ ಕಾಯ್ದುಕೊಳ್ಳಬೇಕು. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಗುಟ್ಕಾ ವಿರುದ್ಧ ಸಿಎಂ ಇಟ್ಟ ಹೆಜ್ಜೆ ಸಾಹಸದ್ದೆಂದೇ ಹೇಳಬೇಕು.
ಗುಟ್ಕಾ ಮನುಷ್ಯನ ದೇಹದ ಮೇಲೆ ಮಾಡುವ ದುಷ್ಪರಿಣಾಮ ಅಸದಳ. ನನ್ನ ಸ್ನೇಹಿತನೊಬ್ಬ ದಿಲ್ಲಿಯ ಓರ್ವ ಉದ್ಯಮಿ. ಆತನನ್ನು ಭೇಟಿಯಾದ ಸಂದರ್ಭದಲ್ಲಿ ಆತ ಬಾಳೇಹಣ್ಣು ತಿನ್ನುತ್ತಿದ್ದ. ತಿನ್ನುತ್ತಿದ್ದ ರೀತಿ ವಿಚಿತ್ರವಾಗಿತ್ತು. ಒಂದು ಚಾಕುವಿನಿಂದ ಬಾಳೇಹಣ್ಣನ್ನು ಕತ್ತರಿಸಿ ಒಂದೊಂದೇ ಹೋಳನ್ನು ಬಾಯೊಳಗೆ ಸೇರಿಸುತ್ತಿದ್ದ. ಏಕೆ ಎಂದು ಕೇಳಿದಾಗ, ಆತ ಕೊಟ್ಟ ಉತ್ತರದಿಂದ ನಾನು ದಿಗ್ಭ್ರಮೆಗೊಂಡೆ. ಆತ ಗುಟ್ಕಾ ಸೇವನೆಯಿಂದ ಆತನ ಕೆಳದವಡೆಯ ನರಗಳು ನಿಶ್ಚೇಷ್ಟಿತಗೊಂಡಿದ್ದವು! ಹಾಗಾಗೆ ಬಾಯಿಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸಾಧ್ಯವಾಗುತ್ತಿರಲಿಲ್ಲ.
ಗುಟ್ಕಾದ ದುಷ್ಪರಿಣಾಮಗಳಿಗೆ ಇನ್ನೂ ಬಗೆಬಗೆಯ ನಿದರ್ಶನಗಳು ಸಿಕ್ಕಾವು. ಮೊನ್ನೆ ದಾವಣಗೆರೆಗೆ, 'ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ' ಅತಿಥಿಯಾಗಿ ಹೋಗಿದ್ದೆ. ಆ ಸಂಸ್ಥೆ ಪರಿಸರ ರಕ್ಷಣೆಯ ಕ್ಷೇತ್ರದಲ್ಲಿ, ದುಶ್ಚಟಗಳ ನಿವಾರಣೆಯ ಚಟುವಟಿಕೆಗಳಲ್ಲಿ ಮತ್ತು ಅನಾಥರಿಗೆ ಸಹಾಯಹಸ್ತ ನೀಡುವ ಕಾರ್ಯದಲ್ಲಿ ಬಹುವಾಗಿ ತೊಡಗಿಕೊಂಡಿದೆ. ಅದರ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅವರೊಂದು ಕರಪತ್ರ ಹೊರಡಿಸಿದ್ದಾರೆ. ಅದರ ಶೀರ್ಷಿಕೆ ಹೀಗಿದೆ- 'ತಂಬಾಕಿನಿಂದ ಶಿಶ್ನ ನಿಮಿರುವಿಕೆಗೆ ತೊಂದರೆ'. ಕರಪತ್ರದ ಒಟ್ಟಾರೆ ವಿಷಯ:  'ಆತ್ಮೀಯ ಯುವ ಸ್ನೇಹಿತರೇ, ಯಾವುದೇ ರೀತಿಯಲ್ಲಿ ತಂಬಾಕು ಸೇವಿಸುವುದರಿಂದ ಶಿಶ್ನ ನಿಮಿರದ ನಪುಂಸಕತೆ ಬರುತ್ತದೆ ಎಂದು ಅಮೇರಿಕದ ಡಾ. ಡ್ರೋಗೋ ಮೊಂಟಾಗ್ಯು ವೈದ್ಯ ವಿಜ್ಞಾನ ಸಂಸ್ಥೆ ತಿಳಿಸಿದೆ. ಕ್ಯಾನ್ಸರ್, ಹೃದಯಾಘಾತ, ಕಿಡ್ನಿ ವಿಫಲತೆ ಈ ಎಲ್ಲ ರೋಗಗಳು ಹೆಚ್ಚಾಗಿ ತಂಬಾಕು ಸೇವಿಸುವವರಿಗೆ ಬರುತ್ತವೆ. ಅಲ್ಲದೇ ತಂಬಾಕು ಸೇವಿಸದೇ ಇರುವ ಮುಗ್ಧರಾದ ನಿಮ್ಮ ಗೆಳೆಯರು ಅಥವಾ ಅವರ ಕುಟುಂಬದ ಸದಸ್ಯರಿಗೆ, ನೀವು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸುವುದರಿಂದ ನಿಮಗಾಗುವ ದುಷ್ಪರಿಣಾಮದ ಎರಡು ಪಟ್ಟು ನಷ್ಟ ಅವರಿಗೆ ಆಗುತ್ತದೆ. ಯುವಕರೇ, ನೀವು ತಂಬಾಕು ಸೇವಿಸುವುದರಿಂದ, ಮದುವೆ ಆದಾಗ ರತಿಸುಖದ ಸಮಯದಲ್ಲಿ ಶಿಶ್ನ ನಿಮಿರದೇ ಸಮಾಗಮದಿಂದ ವಂಚಿತರಾಗಲಿದ್ದೀರಿ. ಕಾರಣ ಈ ಕೂಡಲೇ ಬೀಡಿ, ಸಿಗರೇಟ್ ಸೇದುವುದನ್ನು ಹಾಗೂ ತಂಬಾಕು, ಗುಟ್ಕಾ ತಿನ್ನುವುದನ್ನು ನಿಲ್ಲಿಸಿರಿ ಹಾಗೂ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಿರಿ.' ಗುಟ್ಕಾವನ್ನು ನಿರಂತರ ಜಗಿಯುವ ಯುವಕರು ಹೇಗೆ ತಮ್ಮ ಯೌವನದ ಬಂಗಾರದ ದಿನಗಳನ್ನು ಕಳೆದುಕೊಳ್ಳುತ್ತಾರೆಂಬುದನ್ನು ಈ ಕರಪತ್ರ ವಿವರಿಸುತ್ತದೆ.
ನಮ್ಮ ದೇಶದಲ್ಲಿ ಗುಟ್ಕಾ ಲಾಬಿ ಕಡಿಮೆ ಶಕ್ತಿಶಾಲಿಯದೆಂದು ಭಾವಿಸಬೇಕಾಗಿಲ್ಲ. ಅಂಥಾದ್ದರಲ್ಲಿ ಅದನ್ನು ಎದುರುಹಾಕಿಕೊಂಡು ಸಿದ್ಧರಾಮಯ್ಯನವರು ಗುಟ್ಕಾವನ್ನು ನಿಷೇಧಿಸಿ ಇಡೀ ರಾಜ್ಯದ ಸಜ್ಜನ-ಸಾತ್ವಿಕರೆಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಅದೇ ಎದೆಗಾರಿಕೆಯನ್ನು ಮುಖ್ಯಮಂತ್ರಿಗಳು ಇತರ ದುಶ್ಚಟಗಳಾದ ಮದ್ಯಪಾನ, ಬೀಡಿ, ಸಿಗರೇಟ್ ಮುಂತಾದ ತಂಬಾಕಿನ ಇತರ ಉತ್ಪನ್ನಗಳ ಬಳಕೆಯನ್ನು ದೂರೀಕರಿಸಲು ತೋರಿಸುವುದು ಅಗತ್ಯ. ಮದ್ಯಪಾನವು ಲೈಂಗಿಕವಾಗಿ ಕೇವಲ ಪ್ರಚೋದಿಸುತ್ತದೆ. ಆದರೆ ಲೈಂಗಿಕ ಶಕ್ತಿಯನ್ನೇ ಕಸಿದುಕೊಂಡುಬಿಡುತ್ತದೆ. ಯುವ ಜನಾಂಗವನ್ನು ನಪುಂಸಕರನ್ನಾಗಿ ಮಾಡುವಲ್ಲಿ ಗುಟ್ಕಾ ಹೇಗೆ ಮುಂಚೂಣಿಯಲ್ಲಿದೆಯೋ, ಅದರ ಬೆನ್ನಹಿಂದೆಯೇ ಇದೆ ಮದ್ಯಪಾನ ಕೂಡ. ಸಿದ್ಧರಾಮಯ್ಯನವರು ಮದ್ಯದ ಲಾಬಿಗೆ ಮಣಿದಿದ್ದಾರೆಂದು ಅವರ ವಿರೋಧಿಗಳು ಆಪಾದನೆ ಮಾಡಿದ್ದಾರೆ. ಆದರೆ ಅವರ ಸ್ವಭಾವವನ್ನು ಬಲ್ಲವರು ಹೇಳುವುದೇನೆಂದರೆ ಅವರೊಬ್ಬ ಕಠಿಣ ವ್ಯಕ್ತಿ ಹಾಗೂ ಅವರನ್ನು ಬಗ್ಗಿಸಲು ಸುಲಭವಾಗಿ ಸಾಧ್ಯವಾಗುವುದಿಲ್ಲ. ಗುಟ್ಕಾದ ವಿಷಯದಲ್ಲಿ ತೆಗೆದುಕೊಂಡಂತಹ ಗಟ್ಟಿ ನಿರ್ಧಾರವನ್ನೇ ಅವರು ಮದ್ಯಪಾನವನ್ನು ನಿರುತ್ತೇಜನಗೊಳಿಸಲು ತೆಗೆದುಕೊಳ್ಳುತ್ತಾರೆಂಬ ನಿರೀಕ್ಷೆ ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರದ್ದು.
ಮುಖ್ಯಮಂತ್ರಿಗಳು ಅಗ್ಗದ ಮದ್ಯ, ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮದ್ಯದಂಗಡಿಗಳಿಗೆ ಮತ್ತು ಬಾರ್‌ಗಳಿಗೆ ಅನುಮತಿ ನೀಡಿಕೆ, ನಿರುದ್ಯೋಗಿ ಪದವೀಧರರಿಗೆ ಮದ್ಯದಂಗಡಿ ಶುರು ಮಾಡಲು ಉತ್ತೇಜನ ಮುಂತಾದ ತಮ್ಮ ಚಿಂತನೆಗಳನ್ನು ಹರಿಬಿಟ್ಟಿದ್ದಾರೆ. ಕಳ್ಳಭಟ್ಟಿ ತಯಾರಿಕೆ ಇನ್ನೂ ಮುಂದುವರಿದಿದೆ, ಅಧಿಕೃತ ಮದ್ಯದಂಗಡಿಗಳಿಲ್ಲದಿರುವಲ್ಲಿ ಮದ್ಯದ ವ್ಯಾಪಕ ಅಕ್ರಮ ಮಾರಾಟ ಜಾಲ ಇದೆ ಇತ್ಯಾದಿ ಕಾರಣಗಳನ್ನು ಅವರು ತಮ್ಮ ಚಿಂತನೆಗಳಿಗೆ ಸಮರ್ಥವಾಗಿ ಮುಂದಿಟ್ಟಿದ್ದಾರೆ. ನಿಜ, ಜನಸಂಖ್ಯೆ ಏರಿದೆ ಮತ್ತು ಅದಕ್ಕನುಗುಣವಾದ ಪೂರೈಕೆಯ ವ್ಯವಸ್ಥೆ ಇಲ್ಲದಿದ್ದ ಪಕ್ಷದಲ್ಲಿ ಅಕ್ರಮ ಮಾರಾಟ ಜಾಲ ಹುಟ್ಟಿಕೊಳ್ಳುವುದು ಸಹಜ.
ಆದರೆ ಈ ಅಕ್ರಮ ಮಾರಾಟ ಜಾಲವನ್ನು ಮಟ್ಟಹಾಕಲು ಮತ್ತು ಕಳ್ಳಭಟ್ಟಿಯನ್ನು ನಿಯಂತ್ರಿಸಲು ಹೆಚ್ಚಿನ ಮದ್ಯದಂಗಡಿಗಳಿಗೆ ಮತ್ತು ಬಾರ್‌ಗಳಿಗೆ ಅನುಮತಿ ನೀಡಬೇಕಾಗುತ್ತದೆನ್ನಲು ಇದೇನು ಜೀವನಾವಶ್ಯಕ ಸಾಮಗ್ರಿ ಅಲ್ಲವಲ್ಲ? ಆದ್ದರಿಂದ ಇದಕ್ಕೆ ಪ್ರೋತ್ಸಾಹ ನೀಡುವ ವಾತಾವರಣ ನಿರ್ಮಿಸುವುದು ಅದೆಷ್ಟರಮಟ್ಟಿಗೆ ಸಮರ್ಥನೀಯ ಮದ್ಯದ ಅಕ್ರಮ ಮಾರಾಟ ಜಾಲವನ್ನು ಮತ್ತು ಕಳ್ಳಭಟ್ಟಿಯನ್ನು ದಮನಗೊಳಿಸಲು ಕಾನೂನಿನ ಉಕ್ಕಿನ ಹಸ್ತವನ್ನು ಬಳಸಬೇಕೇ ವಿನಾ ಬೇರೆ ಮಾರ್ಗವಿಲ್ಲ.
ಹಾಲೀ ಪರಿಸ್ಥಿತಿಯಲ್ಲಿ ದೂರದ ಹಳ್ಳಿಗಾಡಿನ ಕುಡುಕನೊಬ್ಬ ತನ್ನ ಚಟ ತೀರಿಸಿಕೊಳ್ಳಬೇಕಾದಲ್ಲಿ ಕೆಲವು ಕಿಲೋಮೀಟರ್‌ನಷ್ಟು ದೂರ ನಡೆಯಬೇಕಾಗಿದೆ. ಆ ದೂರವನ್ನು ಕಡಿತಗೊಳಿಸಿದರೆ ಆತನ ಚಟ ಇನ್ನಷ್ಟು ಜಾಸ್ತಿಯಾಗುತ್ತದೆ, ಮಾತ್ರವಲ್ಲ, ಇನ್ನಷ್ಟು ಚಟವಾನರು ಹುಟ್ಟಿಕೊಳ್ಳುತ್ತಾರೆ. ಚಟ ಮತ್ತು ಚಟ್ಟಕ್ಕೆ ಬಹಳ ಸಮೀಪದ ಸಂಬಂಧ. ತನ್ನನ್ನು ಅಂಟಿಸಿಕೊಂಡವನನ್ನು ಚಟ್ಟಕ್ಕೆ ಹತ್ತಿಸುವತನಕ ವಿರಮಿಸುವುದಿಲ್ಲ ಚಟ. ಹೀಗಿರುವಾಗ ಚಟವಾನರ ಸಂಖ್ಯೆಯನ್ನು ಜಾಸ್ತಿ ಮಾಡುವ ನಿರ್ಧಾರ ಕೈಗೊಳ್ಳಬೇಕೇ?
ಆದ್ದರಿಂದ ಮುಖ್ಯಮಂತ್ರಿಗಳು ಮದ್ಯಪಾನವನ್ನು ಪ್ರೋತ್ಸಾಹಿಸುವ ಬದಲು ಅವರು ಅದನ್ನು ನಿರುತ್ತೇಜನಗೊಳಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯನ್ನು ಇನ್ನಷ್ಟು ಬಲಪಡಿಸಲಿ. ಗಾಂಧಿವಾದದಲ್ಲಿ ಅಚಲ ನಿಷ್ಠೆ ಇರುವ, ಶುದ್ಧ ಚಾರಿತ್ರ್ಯ ಹೊಂದಿರುವ ಕ್ರಿಯಾಶೀಲ ವ್ಯಕ್ತಿಯೊಬ್ಬನನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಲಿ. ಗುಟ್ಕಾ ನಿಷೇಧ ಕೇವಲ ಆದೇಶವಾದರೆ ಸಾಲದು, ಅದು ಕಾರ್ಯತಃ ಜಾರಿಗೆ ಬರುವ ದೃಷ್ಟಿಯಿಂದ ಮದ್ಯಪಾನದ ಜೊತೆಗೆ ಗುಟ್ಕಾವೂ ಸೇರಿದಂತೆ ತಂಬಾಕಿನ ಉತ್ಪನ್ನಗಳ ಬಗೆಗೆ ಅರಿವು ಮೂಡಿಸುವ ಜವಾಬ್ದಾರಿಯನ್ನೂ ಮದ್ಯಪಾನ ಸಂಯಮ ಮಂಡಳಿಗೆ ವಹಿಸಲಿ. ಆಗ ಕೇವಲ ಅಹಿಂದ ನಾಯಕನೆಂಬ ಬಿರುದಾಂಕಿತ ಸಿದ್ಧರಾಮಯ್ಯ ಇಡೀ ಕರ್ನಾಟಕದ ಜನ ಮೆಚ್ಚಿದ ನಾಯಕರಾಗುತ್ತಾರೆ

- ಸಚ್ಚಿದಾನಂದ ಹೆಗಡೆ, ಮಾಜಿ ಅಧ್ಯಕ್ಷರು
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.