ಅಂಕಣಗಳು

ಇಂದಿಗೂ ನಿಲ್ಲದ ದಾಳಿ

Published On :

20.6.13 ರಂದು ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ಏರ್‌ಮಾರ್ಷಲ್ ಆರ್.ಕೆ. ನೆಹ್ರಾ ಅವರ ಲೇಖನ ನಿಜಕ್ಕೂ ಕಣ್ತೆರೆಸುವಂತಿದೆ. ಹಿಂದುಗಳ ಸೋಲಿಗೆ ಅನೇಕ ಕಾರಣಗಳನ್ನು ಪಟ್ಟಿ ಮಾಡಿರುವ ಲೇಖಕರು ಯುದ್ಧದ ವಿಷಯಕ್ಕೆ ಬಂದಾಗ, ಬಲಿಷ್ಠರಾಗಿದ್ದ ಹಿಂದುಗಳ ಕೈ ಕ್ರಮೇಣ ಹೇಗೆ ಬೀಳಾಯಿತೆಂಬುದನ್ನು ವಿಶದವಾಗಿ ವಿಶ್ಲೇಷಿಸಿದ್ದಾರೆ. ಚಾಣಕ್ಯನಂತಹ ಮಹಾ ಮೇಧಾವಿ ಹಾಗೂ ಮುತ್ಸದ್ಧಿಯು ರೂಪಿಸಿದ್ದ ಯುದ್ಧತಂತ್ರವು ಕ್ರಮೇಣ ಶಿಥಿಲವಾದದ್ದು ದೌರ್ಭಾಗ್ಯವೇ ಸರಿ ಎಂದಿದ್ದಾರೆ. ಅನೇಕ ಶತಮಾನಗಳಿಂದಲೂ ಭಾರತದ ಮೇಲೆ ವಿದೇಶೀ ಆಕ್ರಮಣಕಾರರು ದಾಳಿ ಮಾಡುತ್ತಲೇ ಬಂದಿದ್ದಾರೆ. ಹೂಣರು, ಗ್ರೀಕರು, ಶಕರು ಮೊದಲಾದವರು ಭಾರೀ ವಿಜಯದ ಕನಸು ಕಂಡಿದ್ದರೂ, ಭಾರತದ ಅಂದಿನ ಅಂತಃಸ್ಸತ್ವದ ಮುಂದೆ ಸೋತು ನಿಸ್ತೇಜರಾದರು. ವಿಶ್ವ ವಿಜೇತನೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡು ಬಂದ ಅಲೆಕ್ಸಾಂಡರನೂ ಇಲ್ಲಿ ತನ್ನ ಬೇಳೆ ಬೇಯದಿದ್ದಾಗ, ನಿರಾಶನಾಗಿ ಸ್ವದೇಶಕ್ಕೆ ಮರಳುವಾಗ ದಾರಿಯಲ್ಲೇ ಮೃತನಾದ.
ಹೀಗೆ ಅನೇಕ ವಿದೇಶೀ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದ್ದರೂ, ಹಿಂದುಗಳ ಸೋಲಿನ ಪರ್ವ ಆರಂಭವಾದದ್ದು ಮುಸಲ್ಮಾನರ ಆಗಮನದ ನಂತರವೇ. ಉದಾಹರಣೆಗೆ 1192ರಲ್ಲಿ ಮಹಾರಾಜ ಪೃಥ್ವಿರಾಜ ಚೌಹಾಣನನಿಗೆ ಮಹಮ್ಮದ್ ಘೋರಿಯನ್ನು ಗೆಲ್ಲಲು ಅಂತಹುದೇನೂ ಕಷ್ಟವಿರಲಿಲ್ಲ. ಈ ಯುದ್ಧದಲ್ಲಿ ಘೋರಿಗೆ 'ಅನುಕೂಲ'ವಾಗಿ ಬಂದಿದ್ದು ಒಂದು ಸಣ್ಣ ಉಪಾಯ. ಅವನು ತನ್ನ ಸೇನೆಯ ಮುಂಭಾಗದಲ್ಲಿ ಸಾಲಾಗಿ ಗೋವುಗಳನ್ನು ನಿಲ್ಲಿಸಿಕೊಂಡಿದ್ದನೆಂದೂ ಕೇಳಿದ್ದೇವೆ. ಗೋವುಗಳನ್ನು ಬಡಿದು ಮುಂದೆ ಹೋಗುವುದು ಹಿಂದುಗಳ ಕಲ್ಪನೆಗೂ ಸಾಧ್ಯವಾಗದ ವಿಷಯವಾಯಿತು. ಹೀಗೆ ಹಠಾತ್ತನೆ ಎದುರಾದ ಒಂದು sentimental ವಿಷಯವು ಸೋಲಿಗೆ ಕಾರಣವಾಯಿತು!  ಅಂತೆಯೇ ಸೋಲಿಗೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಹಿಂದುಗಳಿಗಿದ್ದ 'ಧರ್ಮಯುದ್ಧ'ದ ಕಲ್ಪನೆ. ಈ ಕಲ್ಪನೆಯಿಂದ ಬಿಡಿಸಿಕೊಂಡು ವಾಸ್ತವಕ್ಕೆ ಬರುವಷ್ಟರಲ್ಲಿ ಎಷ್ಟೋ ಯುದ್ಧಗಳಲ್ಲಿ ಸೋಲಾಯಿತು. ಮುಂದಿನ ಕೆಲವು ಯುದ್ಧಗಳಲ್ಲಿ ಸೋಲಾಗಿರುವುದು ಮತ್ತೊಂದು ಅನಿರೀಕ್ಷಿತ ಹಾಗೂ ಅನೂಹ್ಯ ಕಾರಣದಿಂದ. ಹಿಡಿಯಷ್ಟು ದೇಶದ್ರೋಹಿಗಳು ಆಕ್ರಮಣಕಾರರ ಕಡೆ ಸೇರಿಕೊಂಡು, ಹಿಂದುಗಳ ಬಹುಮುಖ್ಯ ವಿಷಯಗಳನ್ನು ಶತ್ರುಗಳಿಗೆ ತಿಳಿಸಿ, ಅವರನ್ನು 'ಬರಮಾಡಿಕೊಂಡದ್ದು' ಮತ್ತು ಅವರಿಗೆ ಸಹಾಯ ಮಾಡಿದ್ದು. ರಾಜಾ ಜಯಚಂದ್ರನು ಇಂತಹವರಲ್ಲಿ ಅಗ್ರಗಣ್ಯ.  ಹಿಂದು ವೀರರಿಗೆ ರಣರಂಗದಲ್ಲಿ ತಮ್ಮ ರಾಜನಿಗಾಗಿ ಜೀವವನ್ನೊಪ್ಪಿಸುವುದು ಹೆಮ್ಮೆಯ ವಿಷಯವಾಗಿತ್ತು. ಆದರೆ ಜಗತ್ತಿನ ಇತಿಹಾಸದಲ್ಲಿ ಕಂಡು ಕೇಳರಿಯದ ಕ್ರೌರ್ಯ, ದೌರ್ಜನ್ಯಗಳನ್ನು ಮುಸಲ್ಮಾನ ಆಕ್ರಮಣಕಾರರು ಈ ದೇಶದಲ್ಲಿ ನಡೆಸಿದ್ದು ಅವರನ್ನು ಕಂಗೆಡಿಸಿ ಬಿಟ್ಟಿತ್ತು. ಈ ಬಗ್ಗೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ಬಾಲಕರಾದ ಫತೇಸಿಂಗ್ ಹಾಗೂ ಜೋರಾವರ್‌ಸಿಂಗ್, ಇಸ್ಲಾಮಿಗೆ ಮತಾಂತರಗೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಸಜೀವ ಸಮಾಧಿ ಮಾಡಲಾಯಿತು!
ಬ್ರಿಟಿಷರು ತಾವೂ ಏನೂ ಕಮ್ಮಿ ಇಲ್ಲ ಎಂಬಂತೆ ಹಿಂದುಗಳು ಬೌದ್ಧಿಕವಾಗಿಯೂ ದಿವಾಳಿ ಏಳುವಂತೆ ಮಾಡುವುದರಲ್ಲಿ ಸಾಕಷ್ಟು ಸಫಲರಾದರು. ಬೇರೆ ಇನ್ನಾವುದೇ ದೇಶದ ಮೇಲೆ ಈ ಪರಿಯ ಕ್ರೌರ್ಯ, ವಂಚನೆ ಹಾಗೂ ದ್ರೋಹಗಳು ನಡೆದಿದ್ದಲ್ಲಿ ಆ ದೇಶದ ಜನಾಂಗವಾಗಲೀ ಸಂಸ್ಕೃತಿಯಾಗಲೀ ಉಳಿಯುತ್ತಲೇ ಇರಲಿಲ್ಲ. ಈ ದೇಶದ ಅಂತಃಸ್ಸತ್ವ ಸಮೃದ್ಧವಾಗಿದೆ ಮತ್ತು ಗಟ್ಟಿಯಾಗಿದೆ. ಅನಾದಿ ಕಾಲದಿಂದ ಆಯಾ ಸಮಯದಲ್ಲಿ ಮಹಾಪುರುಷರು, ವೀರರು ಹಾಗೂ ಸಂತ ಮಹಾಂತರು ಹುಟ್ಟಿ ಬಂದು ಹಿಂದುಗಳಿಗೆ ದಾರಿದೀಪವಾಗಿದ್ದಾರೆ.  ಇಷ್ಟೆಲ್ಲಾ ಭವ್ಯ ಇತಿಹಾಸವಿದ್ದರೂ ಹಿಂದುಗಳು ಬಹುವಾಗಿ ಮೈಮರೆತವರೇ ಆಗಿದ್ದಾರೆ. ನೆಹ್ರಾ ಅವರು 'ಸತ್ತರೆ ಸ್ವರ್ಗ ಪಡೆಯುವೆ, ಗೆದ್ದರೆ ಭೂಮಿಯನ್ನು ಆಳುವೆ' ಎಂದು ಕೃಷ್ಣನು ಗೀತೆಯಲ್ಲಿ ಹೇಳಿರುವ ಮಾತನ್ನು ಉಲ್ಲೇಖಿಸಿದ್ದಾರೆ. "ವಿಪರ್ಯಾಸವೆಂದರೆ ಕ್ರಿಸ್ತನು 'Show the enemy the other cheek' ಎಂದಿದ್ದಾನೆ. ಆದರೆ ಆಚರಣೆಯಲ್ಲಿ ಪಾಶ್ಚಾತ್ಯರು ಹಿಂಸಾತ್ಮಕ ಆಕ್ರಮಣಗಳನ್ನು ಸಾಕಷ್ಟು ಮಾಡಿದ್ದಾರೆ. ಹಿಂದುಗಳಾದರೋ ಶಕ್ತಿಹೀನರಂತೆ ನಡೆದುಕೊಂಡಿದ್ದಾರೆ. ಏನಿದು ವಿಪರ್ಯಾಸ?" ಎಂದು ವಿವೇಕಾನಂದರು ಕೇಳುತ್ತಾರೆ. ಹಿಂದುಗಳ ವರ್ತನೆಯನ್ನು ಕಂಡು ರೋಸಿ ಹೋದ ಒಬ್ಬ ಮಹಾ ದೇಶಭಕ್ತರು 'This ungrateful Hindu Society deserves a beating' ಎಂದು ನೊಂದು ನುಡಿದಿದ್ದಾರೆ!'.
"ಸರಿ, ಈಗ ಏಕೆ ಅದೆಲ್ಲಾ? ಈಗ ತಕ್ಕಮಟ್ಟಿಗೆ ಹಿಂದುಗಳು ಚೆನ್ನಾಗಿಯೇ ಇದ್ದಾರಲ್ಲಾ" ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ ವಾಸ್ತವ ಮಾತ್ರ ಬೆಚ್ಚಿ ಬೀಳಿಸುವಂತಿದೆ. ಈಗಲೂ ನಿರಂತರವಾಗಿ ಹಿಂದುಗಳ ಮೇಲೆ ನಾನಾ 'ದಾಳಿ'ಗಳು ನಡೆಯುತ್ತಲೇ ಇವೆ. ಇವುಗಳಲ್ಲಿ ಹೆಚ್ಚಿನವು 'Proxy war' ವರ್ಗಕ್ಕೆ ಸೇರಿದುವು. ಈ ಎಲ್ಲ ಆಕ್ರಮಣಗಳ ಉದ್ದೇಶ ಸ್ಪಷ್ಟ. ಅದೆಂದರೆ ಹಿಂದುಗಳನ್ನು ಆದಷ್ಟು ನಿವೀರ್ಯರನ್ನಾಗಿ ಮಾಡುವುದು. ಮತ್ತು ತಮ್ಮ ಪೂರ್ವಿಕರ ಸಾಧನೆಗಳನ್ನು ಮರೆತು ಅಭಿಮಾನಹೀನರನ್ನಾಗಿ ಮಾಡುವುದು. ತಿಳಿದೋ ತಿಳಿಯದೆಯೋ ಹಿಂದು ಸಮಾಜದ ಬಹುಭಾಗ ಈ ಷಡ್ಯಂತ್ರಕ್ಕೆ ಸಿಕ್ಕಿ ಆತ್ಮ ವಿಸ್ಮೃತಿಗೆ ಒಳಗಾಗಿದೆ. ಈ ಷಡ್ಯಂತ್ರದ ಒಂದು ಭಾಗವಾಗಿ ಪ್ರಭಾವಿ ಮಾಧ್ಯಮಗಳ ಮೂಲಕ ಹಿಂದುಗಳನ್ನು ಕುಲಗೆಟ್ಟವರನ್ನಾಗಿ ಮಾಡುವುದೂ ಸೇರಿದೆ. ಆದ್ದರಿಂದ ನಮಗೆಲ್ಲ ಉಳಿದ ದಾರಿಯೆಂದರೆ ಸ್ವಲ್ಪ Practicalಆಗಿ ಆಲೋಚಿಸಿ ಕೆಲವು ಸಮಸ್ಯೆಗಳಿಂದ ಬಿಡಿಸಿಕೊಳ್ಳುವುದು. ಮುಖ್ಯವಾದ ಆ ಸಮಸ್ಯೆಗಳೆಂದರೆ, ನಿಷ್ಪ್ರಯೋಜಕವಾದ, ಆಸ್ಥಾನದಲ್ಲಿರುವ ಹಾಗೂ ಕಾಲಬಾಹಿರವಾದ ಶಾಂತಿ ಅಹಿಂಸೆಯ ಜಪಗಳು, ಅನುಷ್ಠಾನಗಳು!
ಇಂತಹ ಹೀನ ಮಾನಸಿಕತೆಯನ್ನು ತೊರೆದು ಸರಿಯಾದ 'ರಣನೀತಿ'ಯನ್ನು ಅನುಸರಿಸಿದರೆ, ಯಾವುದೇ ಯುದ್ಧವನ್ನಾದರೂ ಗೆದ್ದು, ನೆಹ್ರಾ ಅವರು ಹೇಳಿರುವಂತೆ, ಜಗತ್ತಿನಲ್ಲಿ ಹಿಂದುಗಳು ನಂಬರ್ ಓನ್ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ.

- ಕೆ.ಎಸ್. ಶ್ರೀಧರನ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.