ಜನಪ್ರತಿನಿಧಿಯಾಗಿ ನ್ಯಾಯ ಕೊಡಿಸುವಾಸೆ
ನ್ಯಾಯಾಂಗ ಕ್ಷೇತ್ರದಲ್ಲಿ ಎಚ್.ಎಸ್.ಚಂದ್ರಮೌಳಿ ಅವರ ಹೆಸರು ಚಿರಪರಿಚಿತ. ಕಳೆದ 31 ವರ್ಷದಿಂದ ಆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅವರು, 12 ವರ್ಷಗಳ ಕಾಲ ಸರ್ಕಾರಿ ಅಭಿಯೋಜಕರಾಗಿಯೂ ಕಾರ್ಯ ನಿರ್ವಹಿಸಿ ಹೆಸರು ಮಾಡಿದವರು. ಅಷ್ಟೇ ಅಲ್ಲ, ಸತತವಾಗಿ ನಾಲ್ಕು ಬಾರಿ ಆ ಹುದ್ದೆಗೆ ನೇಮಕವಾಗಿ ದಾಖಲೆ ನಿರ್ಮಿಸಿದ್ದಾರೆ. ಕಾಡುಗಳ್ಳ ವೀರಪ್ಪನ್, ವಿವಾದಿತ ಸ್ವಾಮಿ ನಿತ್ಯಾನಂದನ ಪ್ರಕರಣ ಸೇರಿದಂತೆ ಅತ್ಯಂತ ಸೂಕ್ಷ್ಮವಾದ ಕೇಸುಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದ ಅವರು, ನ್ಯಾಯಾಲಯದಲ್ಲಿ ಸರ್ಕಾರವನ್ನು ಎಂದೂ ಮುಜುಗರಕ್ಕೆ ಸಿಲುಕಿಸಿದವರಲ್ಲ. ಅಂದಹಾಗೆ ತಮ್ಮ ಅವಧಿಯಲ್ಲಿ 16 ಮಂದಿಗೆ ಗಲ್ಲು ಶಿಕ್ಷೆ ಕೊಡಿಸಿ ರಾಷ್ಟ್ರಮಟ್ಟದಲ್ಲಿ ದಾಖಲೆ ಮಾಡಿದವರು ಚಂದ್ರಮೌಳಿ. ಸರ್ಕಾರಿ ಆಭಿಯೋಜಕ ಹುದ್ದೆಗೆ ಅವರು ಇತ್ತೀಚೆಗೆ ರಾಜಿನಾಮೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ 'ಕನ್ನಡಪ್ರಭ' ಮಾತಿಗೆಳೆದಾಗ ಅವರು ಹೇಳಿದ್ದಿಷ್ಟು...
ನಿಮ್ಮ ಕೌಟುಂಬಿಕ ಹಿನ್ನೆಲೆ ಏನು?
ಹುಟ್ಟೂರು ಕೊಡಗು ಜಿಲ್ಲೆಯ ಕೊಡ್ಲಿಪೇಟೆ. ನಮ್ಮದು ಕೃಷಿ ಪ್ರಧಾನ ಕುಟುಂಬ. ಹೈಸ್ಕೂಲ್ವರೆಗೆ ಓದಿದ್ದು ಅಲ್ಲಿಯೇ. ಮುಂದಿನ ವಿದ್ಯಾಭ್ಯಾಸ ತಿಪಟೂರು. ಬಳಿಕ ಬೆಂಗಳೂರಿನ ವಿವಿ ಪುರಂನ ಕಾನೂನು ಕಾಲೇಜಿನಲ್ಲಿ ಪದವಿ.
ನ್ಯಾಯಾಂಗ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಹೇಗೆ ?
ಮನೆಯಲ್ಲಿ ಮೂವರು ಮಕ್ಕಳಿದ್ದರೆ ಒಬ್ಬರು ದೇಶಸೇವೆಗೆ ಅಂದರೆ ಮಿಲಿಟರಿಗೆ ಸೇರ್ಪಡೆ, ಮತ್ತೊಬ್ಬರು ಪೊಲೀಸ್ ಇಲಾಖೆಗೆ ಮೂರನೆಯವರು ಕಾಫಿ ತೋಟ ನೋಡಿಕೊಳ್ಳಲು ಮೀಸಲು ಎಂಬ ಪ್ರತೀತಿ ಇತ್ತು. ಅಂದಿನ ಕಾಲದಲ್ಲಿ ಪೊಲೀಸ್ ಇಲಾಖೆ ಮತ್ತು ಮಿಲಿಟರಿ ಕೊಡಗಿನ ಜನರ ಮೇಲೆ ಆಗಾಧ ಪ್ರಭಾವ ಬೀರಿತ್ತು. ಇದಕ್ಕೆ ಕಾರಣ, ನಮಗೆಲ್ಲ ಪ್ರೇರಕ ಶಕ್ತಿಯಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು. ಹೀಗಾಗಿ ನಾನು ಮೊದಲು ಪೊಲೀಸ್ ಇಲಾಖೆಗೆ ಸೇರುವ ನಿರ್ಧಾರ ಮಾಡಿದ್ದೆ.
ನಿಮ್ಮ ನಿರ್ಧಾರದಲ್ಲಿ ಬದಲಾವಣೆ ಹೇಗಾಯಿತು?
ಕೊಡಗಿನಲ್ಲಿ ಆಗ ಮೊಟಯ್ಯ ಎಂಬ ಪ್ರಸಿದ್ಧ ವಕೀಲರಿದ್ದರು. ಅವರು ಸಾಕಷ್ಟು ಕಕ್ಷಿದಾರರನ್ನೂ ಹೊಂದಿದ್ದರು. ಅವರ ಸಂಪರ್ಕದಿಂದಾಗಿ ನನಗೆ ವಕೀಲ ವೃತ್ತಿ ಬಗ್ಗೆ ವ್ಯಾಮೋಹ ಬೆಳೆಯಿತು. ಹೀಗಾಗಿ ನ್ಯಾಯವಾದಿಯಾಗುವ ನಿರ್ಣಯ ಮಾಡಿ ನ್ಯಾಯಾಂಗ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದೆ.
ಆರಂಭದಲ್ಲಿ ಅನುಭವ ಹೇಗಿತ್ತು ?
ಮೋಟಯ್ಯ ಅವರ ಮಾರ್ಗದರ್ಶನದ ಫಲವಾಗಿ ವಕೀಲ ವೃತ್ತಿಯಲ್ಲಿ ಪರಿಣಿತಿ ಸಾಧಿಸಿದೆ. ಅಲ್ಲದೇ, ಜನಪ್ರಿಯತೆ ಪಡೆದುಕೊಳ್ಳುವಲ್ಲಿ ಸಫಲನಾದೆ. ಹಲವಾರು ಸೂಕ್ಷ್ಮ ಪ್ರಕರಣಗಳಲ್ಲಿ ಆರೋಪಿ ಪರ ವಕೀಲನಾಗಿ ಕರ್ತವ್ಯ ನಿರ್ವಹಿಸಿದೆ. ಈ ಮಧ್ಯೆ ಕಾರಾಗೃಹಗಳಿಗೆ ಭೇಟಿ ಕೊಟ್ಟು ಅಲ್ಲಿನ ಬಡ ಕೈದಿಗಳಿಗೆ ಉಚಿತವಾಗಿ ಕಾನೂನು ಸೇವೆ ಒದಗಿಸುವತ್ತ ಗಮನ ಹರಿಸಿದೆ.
ಸರ್ಕಾರಿ ಆಭಿಯೋಜಕ ಹುದ್ದೆಗೆ ಬಂದಿದ್ದು ಹೇಗೆ ?
2002ರಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿತ್ತು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಗೃಹ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರಿಂದಾಗಿ ಸರ್ಕಾರಿ ಅಭಿಯೋಜಕ ಹುದ್ದೆಗೆ ಪದಾರ್ಪಣೆ ಮಾಡಿದೆ. ಆ ಸಂದರ್ಭದಲ್ಲಿ ಡಾ.ರಾಜ್ ಅವರನ್ನು ವೀರಪ್ಪನ್ನ ಅಪಹರಿಸಿದ ಕೇಸು ಸೇರಿದಂತೆ ಹಲವಾರು ಸೂಕ್ಷ್ಮ ಪ್ರಕರಣಗಳು ನ್ಯಾಯಾಲಯದಲ್ಲಿತ್ತು. ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲೂ ಅಭಿಯೋಜಕನಾದೆ. ಆಗ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಪ್ರಕರಣ ನ್ಯಾಯಾಲಯದಲ್ಲಿ ಇತ್ತು. ಆದನ್ನೂ ಯಶಸ್ವಿಯಾಗಿ ನಿಭಾಯಿಸಿದೆ. ಬಳಿಕ ಪ್ರಾಸಿಕ್ಯೂಷನ್ ಕಡೆಗೆ ನನ್ನ ಚಿತ್ತ ಹರಿಯಿತು. ನಂತರ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ, ನಂತರ ಬಂದ ಬಿ.ಎಸ್.ಯಡಿಯೂರಪ್ಪ ಅವರೂ ನನ್ನನ್ನು ಅಭಿಯೋಜಕ ಹುದ್ದೆಗೆ ನೇಮಕ ಮಾಡಿದರು. ಒಟ್ಟು ನಾಲ್ಕು ಬಾರಿ ನೇಮಕವಾದ ನಾನು ಇತ್ತೀಚೆಗೆ ಆ ಹುದ್ದೆಗೆ ಸ್ವಯಂಪ್ರೇರಿತನಾಗಿ ರಾಜಿನಾಮೆ ಕೊಟ್ಟಿದ್ದೇನೆ.
ರಾಜಕೀಯ ಪ್ರವೇಶ ಮಾಡುವ ಉದ್ದೇಶ ಇದೆಯೇ ?
ಖಂಡಿತಾ ಇದೆ. ರಾಜಕೀಯದ ಮೂಲಕ ಹುಟ್ಟೂರಿನ ಜನರ ಸೇವೆ ಮಾಡಬೇಕು ಎಂಬುದು ನನ್ನ ಉದ್ದೇಶ. ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೊಡಗು ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ಆಲೋಚನೆಯೂ ಇದೆ.
ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ ?
ಸರ್ಕಾರಿ ಅಭಿಯೋಜಕ ಹುದ್ದೆಗೆ ಎರಡು ಬಾರಿ ನೇಮಕ ಮಾಡುವ ಮೂಲಕ ನನ್ನ ವರ್ಚಸ್ಸು ಮತ್ತು ಜನಪ್ರಿಯತೆ ಬೆಳೆಯುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದ್ದರಿಂದ ಆ ಪಕ್ಷಕ್ಕೆ ನಾನು ಏನಾದರೂ ಕೊಡಬೇಕಲ್ಲವೇ ? ಹೀಗಾಗಿ ಅದೇ ಪಕ್ಷದಿಂದ ಸ್ಪರ್ಧಿಸುವ ಚಿಂತನೆ ನಡೆಸಿದ್ದೇನೆ. ಕೊಡಗು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದೇನೆ. ಹಿಂದಿನಿಂದಲೂ ಈ ಯೋಚನೆ ಇತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಹೀಗಾಗಿಯೇ ಅಭಿಯೋಜಕ ಹುದ್ದೆಗೆ ರಾಜಿನಾಮೆ ನೀಡಿದ್ದು.
ಸ್ಪರ್ಧೆಗೆ ಕೊಡಗು ಆಯ್ಕೆ ಮಾಡಿಕೊಂಡಿರುವುದೇಕೆ?
ಹುಟ್ಟೂರಿನ ಸೆಳೆತ ಮುಖ್ಯ ಕಾರಣ. ಕಳೆದು ಹೋಗಿರುವ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಲ್ಲಿ ಮರು ಸ್ಥಾಪಿಸಬೇಕು. ಜಿಲ್ಲೆಯನ್ನು ಭ್ರಷ್ಟಾಚಾರ ರಹಿತವಾಗಿ ಮಾಡಬೇಕು. ಜೊತೆಗೆ ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿ ಮಾಡಬೇಕು ಎಂಬ ಕಾರಣಕ್ಕೆ ಈ ಆಯ್ಕೆ.
30 ವರ್ಷ ಜಿಲ್ಲೆಯಿಂದ ಹೊರಗಿದ್ದು ಈಗ ಹೋದರೆ ಹೊಸಬರಾಗುವುದಿಲ್ಲವೇ ?
ಸಾಧ್ಯವೇ ಇಲ್ಲ. ಏಕೆಂದರೆ ನನ್ನ ಒಡನಾಟ ಜಿಲ್ಲೆಯೊಂದಿಗೆ ಸದಾ ಇತ್ತು. ಅಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ನಾನು ಭಾಗವಹಿಸಿದ್ದೇನೆ. ಇತ್ತೀಚೆಗೆ ಕೆ.ಎಂ. ಕಾರ್ಯಪ್ಪ ಅವರ ಹುಟ್ಟುಹಬ್ಬವನ್ನು ಅವರ ಹುಟ್ಟೂರಾದ ಶನಿವಾರ ಸಂತೆಯಲ್ಲಿ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನಡೆಸಿದ್ದೇನೆ. ಬಂದಿದ್ದ ಸಾವಿರಾರು ಜನರೇ ಇದಕ್ಕೆ ಸಾಕ್ಷಿ. ಜಿಲ್ಲೆ ಮತ್ತು ಜಿಲ್ಲೆಯ ಜನರನ್ನು ನಾನು ಎಂದೂ ಪ್ರೀತಿಸುತ್ತೇನೆ.
ಚುನಾವಣೆಗೆ ನಿಮ್ಮ ತಯಾರಿ ಹೇಗಿದೆ ?
ಎಲ್ಲಿಯೂ ನಾನು ಆಭ್ಯರ್ಥಿ ಎಂದು ಹೇಳಿಕೊಂಡಿಲ್ಲ. ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಪ್ರವಾಸದ ವೇಳೆ ಜನರ ನಾಡಿ ಮಿಡಿತ ನೋಡಿದಾಗ ಅವರು ನನ್ನನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಮತ್ತು ವಿಶ್ವಾಸವಿದೆ. ಬೇರೆ ಆಕಾಂಕ್ಷಿಗಳು ಇದ್ದರೂ ನಾನು ಅವರಿಗಿಂತ ಮುಂದೆ ಇದ್ದೇನೆ. ನನ್ನದೇ ಆದ ವರ್ಚಸ್ಸು, ಪ್ರಾಮಾಣಿಕತೆಯನ್ನು ಜನ ಹತ್ತಿರದಿಂದ ನೋಡಿದ್ದಾರೆ.
ಚುನಾವಣಾ ಕಣಕ್ಕಿಳಿಯಲು ಬೇರೆ ಕಾರಣಗಳಿವೆಯೇ ?
ಕೊಡಗಿನವರೇ ಆದ ಗುಂಡೂರಾವ್, ಬೆಳ್ಳಿಯಪ್ಪ ಅವರಂತಹ ಮಹಾನ್ ನಾಯಕರು ಅಧಿಕಾರ ನಡೆಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಮೂಲ ಕಾಂಗ್ರೆಸ್ಸಿಗರು ಇದ್ದಾರೆ. ಟಿ.ಜಾನ್, ಸುಮಾವಸಂತ್, ಎಂ.ಎಂ.ನಾಣಯ್ಯ ಮತ್ತಿತರರು ಇದಕ್ಕೆ ಉದಾಹರಣೆ. ಪಕ್ಷದ ಮತಬ್ಯಾಂಕ್ ಗಟ್ಟಿಯಾಗಿದೆ ಎಂಬುದಕ್ಕೆ ಜಿಲ್ಲಾ ಪಂಚಾಯಿತಿಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 40 ಸಾವಿರದ ವರೆಗೂ ಮತಗಳನ್ನು ಪಡೆದುಕೊಂಡಿರುವುದೇ ಸಾಕ್ಷಿ. ಅದರೊಂದಿಗೆ ನನ್ನ ವರ್ಚಸ್ಸು, ಕುಶಾಲನಗರ, ಸೋಮವಾರ ಪೇಟೆ ಸುತ್ತಮುತ್ತ ಇರುವ ಸ್ನೇಹಿತರ ಬಳಗ ಸೇರಿದರೆ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ನಿರೀಕ್ಷೆ ಇದೆ.
ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ ಇದೆಯೇ?
ಖಂಡಿತಾ ಇದೆ. ಏಕೆಂದರೆ ನಾನು ಮೂಲತ: ಕೊಡಗಿನವನು. ಮನೆ, ಅಸ್ತಿಪಾಸ್ತಿ, ಸಹೋದರರು, ಬಂಧು ಬಳಗ ಸೇರಿದಂತೆ ಎಲ್ಲವೂ ಅಲ್ಲಿದೆ ಹೀಗಾಗಿ ಹೊರಗಿನವನು ಎಂಬ ಭಾವನೆ ಬರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ನಾಯಕರ ಒಡನಾಟವೂ ಇರುವುದರಿಂದ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದೇನೆ.
ಕೊಡಗಿನಲ್ಲಿ ಏನಾಗಬೇಕಿದೆ ?
ಕೊಡಗಿನ ಜನ ಎಂದೂ ಶಿಸ್ತಿಗೆ ಹೆಸರುವಾಸಿ. ಆದರೆ ಈಗ ಶಿಸ್ತು ಕಡಿಮೆಯಾಗಿದ್ದು ಅದನ್ನು ಮರು ಸ್ಥಾಪಿಸುವ ಕೆಲಸ ಜರೂರಾಗಿ ಆಗಬೇಕಿದೆ. ಇದಕ್ಕಾಗಿ ಮಿಲಿಟರಿ ರೆಜಿಮೆಂಟ್ನ್ನು ಮತ್ತೆ ತರುವ ಕೆಲಸ ಮಾಡುತ್ತೇನೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಕೊಡಗು ಮುಂದುವರಿಯಬೇಕಿದೆ. ಭ್ರಷ್ಟಾಚಾರ ರಹಿತವಾದ ಒಳ್ಳೆಯ ಆಡಳಿತವನ್ನು ಜನ ನಿರೀಕ್ಷೆ ಮಾಡುತ್ತಿದ್ದಾರೆ. ಚುನಾವಣೆ ಮತ್ತು ರಾಜಕೀಯ ಬೇರೆ ಬೇರೆ. ಆಭಿವೃದ್ಧಿ ವಿಚಾರದಲ್ಲಿ ರಾಜಕಾರಣವನ್ನು ಬೆರೆಸುವ ಕೆಲಸವನ್ನು ನಾನು ಮಾಡುವುದಿಲ್ಲ. ಒಟ್ಟಾರೆ ಹೇಳುವುದಾದರೆ ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾನು ರಾಜಕೀಯದ ಕಡೆ ನೋಡುತ್ತಿಲ್ಲ. ಕೊಡಗಿನ ಜನರ ಸೇವೆಯೇ ನನ್ನ ಗುರಿ.
- ಕೆ.ವಿ.ಪ್ರಭಾಕರ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

