ಮುಂಗಡಪತ್ರಗಳನ್ನು ನಿರ್ವಹಿಸುವಲ್ಲಿ ಇಂದು ಒಂದು ಸಿದ್ಧಸೂತ್ರವಿದೆ, 'ಭಾರತೀಯ ಹಾದಿ' ಇದೆ. ನಮ್ಮ ಬಜೆಟ್‌ಗಳು ಆರ್ಥಿಕ ಪರಿಣತರು ಅಥವಾ ರೇಲ್ವೆ ತಜ್ಞರು ಸಿದ್ಧಪಡಿಸಿದವುಗಳಲ್ಲ. ಬದಲಾಗಿ, ರಾಜಕಾರಣಿಗಳ ಸೃಷ್ಟಿ. ಹಾಗಾಗಿ ಸಾರ್ವಜನಿಕ ಹಿತದ ಗುರಿಯುಳ್ಳ ದೀರ್ಘಾವಧಿ ಯೋಜನೆಗಳು ಅವುಗಳಲ್ಲಿ ಕಂಡುಬರುವುದಿಲ್ಲ. ಕೆಲ ಸಚಿವರು ಚತುರರಿರುತ್ತಾರೆ, ಇನ್ನು ಕೆಲವರು ದಡ್ಡರಾಗಿರುತ್ತಾರೆ. ಆದರೆ, ಇವರೆಲ್ಲರೂ ಗಮನ ಕೇಂದ್ರೀಕರಿಸುವುದು ಕೇವಲ ಅಲ್ಪಾವಧಿಯ ಲಾಭದತ್ತ ಮಾತ್ರ. ಬಜೆಟ್‌ಗಳು ನಮ್ಮ ದೇಶದ 'ತಪ್ಪಿಹೋದ ಸದವಕಾಶ'ಗಳಾಗಿ ಪರಿವರ್ತಿತವಾಗಿವೆ ಎಂಬುದು ನಿಜ.
ರೇಲ್ವೆ ಸಚಿವ ಬನ್ಸಲ್ ಅವರ ಬಜೆಟ್ ನಿರ್ವಹಣೆ ಹೇಗಿತ್ತು ಎಂಬುದನ್ನು ಒಮ್ಮೆ ಗಮನಿಸಿ ನೋಡಿ. ಇದು ಅವರ ಚೊಚ್ಚಲ ಬಜೆಟ್ ಆಗಿತ್ತು, ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಅವರು ಎಲ್ಲರ ಕಣ್ಣಿಗೆ ಆಕರ್ಷಣೆಯ ಕೇಂದ್ರವಾಗಿದ್ದರು. ಒಂದಷ್ಟು ಬುದ್ಧಿವಂತಿಕೆಯನ್ನು, ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಲು ಅವರಿಗೆ ಒಂದು ಉತ್ತಮ ಅವಕಾಶ ಒದಗಿಬಂದಿತ್ತು. ಆದರೆ, ಬನ್ಸಲ್ ಮಾಡಿದ್ದಾದರೂ ಏನು? ತಮ್ಮ 'ಬಾಸ್'ಗಳನ್ನು ಸಂತುಷ್ಟಗೊಳಿಸುವುದೇ ತಮ್ಮ ಆದ್ಯತೆ ಎಂಬುದನ್ನು ಸಾಬೀತುಪಡಿಸಿದರು ಅವರು. ಅತ್ಯಂತ ಪವಿತ್ರವಾದ ಪ್ರಜಾಪ್ರಭುತ್ವದ ದೇಗುಲಕ್ಕೆ ತಮ್ಮನ್ನು ಪರಿಚಯಿಸಿಕೊಟ್ಟವರೇ ರಾಜೀವ್‌ಗಾಂಧಿ ಎಂದು ನೆನಪಿಸಿಕೊಂಡರು. ಭಾರತವನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯರಾಷ್ಟ್ರವನ್ನಾಗಿ ಪರಿವರ್ತಿಸಿದವರೇ ರಾಜೀವ್ ಎಂದು ಬಣ್ಣಿಸಿದರು. ಇದಕ್ಕೂ ತಮ್ಮ ಖಾತೆಗೂ ಸಂಬಂಧ ಕಲ್ಪಿಸಲು ಯತ್ನಿಸಿದರು. ಮಾಹಿತಿ ತಂತ್ರಜ್ಞಾನದಿಂದ ರೇಲ್ವೆಗೆ ಕೂಡಾ ಲಾಭವಾಗಿದೆ ಎಂದು ವಿವರಿಸಿ ಹೇಳಿದರು. ನಮ್ಮ ರಾಜಕೀಯ ಯಾವ ಮಟ್ಟಕ್ಕೆ ತಲುಪುತ್ತದೆ ನೋಡಿ!
ಆಡಳಿತಾರೂಢ ಕಾಂಗ್ರೆಸ್ ವಂಶದ ಆರಾಧ್ಯ ದೈವವನ್ನು ಹಾಡಿಹೊಗಳುವುದಕ್ಕಷ್ಟೇ ಅವರು ತಮ್ಮನ್ನು ಸೀಮಿತಗೊಳಿಸಲಿಲ್ಲ. ಸೋನಿಯಾಗಾಂಧಿಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ವಿಶೇಷ ಕೊಡುಗೆ ಸಲ್ಲುವಂತೆಯೂ ನೋಡಿಕೊಂಡರು. ತನ್ಮೂಲಕ, ಈ ಮುಂಗಡಪತ್ರವು ರಾಯ್‌ಬರೇಲಿ ಬಜೆಟ್ ಎಂದು ವಿರೋಧಪಕ್ಷಗಳ ಸದಸ್ಯರು ಗೇಲಿ ಮಾಡುವುದಕ್ಕೂ ಅವಕಾಶ ಕಲ್ಪಿಸಿಕೊಟ್ಟರು. ಜನಸಾಮಾನ್ಯರನ್ನು ಮರುಳು ಮಾಡಲು ರೈಲು ಭವನ ಅಧಿಕಾರಿಗಳಿಗೆ ಅಧಿಕಾರ ನೀಡಿದರು. ಅವರು ಪ್ರಯಾಣ ದರ ಏರಿಕೆ ಇಲ್ಲ ಎನ್ನುತ್ತಲೇ ಮೇಲ್ತೆರಿಗೆ ಹೇರಿದರು, ರಿಸರ್ವೇಶನ್ ಶುಲ್ಕ ಏರಿಸಿದರು. ಇದೆಲ್ಲ 'ದರೋಡೆಯೇನೂ ನಡೆದಿಲ್ಲ, ನಡೆದಿರುವುದು ಕೇವಲ ಕಳ್ಳತನ ಅಷ್ಟೆ' ಎಂದಂತೆ.
ಚಿದಂಬರಂ ಅವರ ಬಜೆಟ್ ಕೂಡಾ ಅಷ್ಟೆ. ಮೇಲ್ನೋಟಕ್ಕೆ ಬುದ್ಧಿವಂತಿಕೆ ಕಂಡರೂ ಮೂಲ ಸೂತ್ರ ಮಾತ್ರ ಅದೇ- ಬಾಸ್‌ಗಳಿಗೆ ಮನ್ನಣೆ, ಜನಸಾಮಾನ್ಯರಿಗೆ ಹೊರನೋಟಕ್ಕೆ ಹಿತಾನುಭವ. ಚುನಾವಣೆ ಸಮೀಪಿಸುತ್ತಿರುವಂತೆ, ರಾಜಕೀಯವಾಗಿ ಅವರು ಸರಿಯಾದುದನ್ನೇ ಮಾಡಿರಬಹುದು. ಏನೋ ಒಂದಷ್ಟು ಆಟ ಕೂಡಾ ಆಡಿದ್ದಾರೆ. ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಯನ್ನು ಯಾರು ತಾನೇ ಮೆಚ್ಚಲಾರರು? ಸುಷ್ಮಾ ಸ್ವರಾಜ್ ಕೂಡಾ ಮೇಜು ಕುಟ್ಟಿ ಹರ್ಷದ ನಗೆ ಬೀರಿದ್ದರು. ಮಹಿಳೆಯರಿಗಾಗಿ ನಿರ್ಭಯ ನಿಧಿ, ಭಾರಿ ಸಿರಿವಂತರಿಗೆ ಮೇಲ್ತೆರಿಗೆ ಹೊರೆ, ಕಡು ಬಡವರಿಗೆ ರಿಯಾಯಿತಿಗಳು- ಹೀಗೆ ಒಂದಷ್ಟು ಆಶಾವಾದದ ಬಜೆಟನ್ನು ಮಂಡಿಸುವಲ್ಲಿ ಯಶಸ್ವಿ ಆಗಿದ್ದಾರೆ ಚಿದಂಬರಂ.
ಆದರೆ, ದೂರದೃಷ್ಟಿ ಎಂಬುದು ಎಲ್ಲಿದೆ? ದಿಶೆಯಲ್ಲಿ ಬದಲಾವಣೆ ಆಗಿದೆಯೇ? ಇತ್ತೀಚಿನ ವರ್ಷಗಳಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಎಂಬುದು ಬಹು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕೆ ಪರಿಹಾರವಾದರೂ ಎಲ್ಲಿದೆ? ಈ ಹಿಂದಿನ ಕೆಲ ಬಜೆಟ್‌ಗಳು ಇತಿಹಾಸದ ಪುಸ್ತಕದಲ್ಲಿ ದಾಖಲಾದಂತೆ ಈ ಬಜೆಟ್ ಖಂಡಿತ ದಾಖಲಾಗದು. ಚಿದಂಬರಂ ಅವರದೇ ಆದ 1997ರ ಬಜೆಟ್ ಅನ್ನು 'ಕನಸಿನ ಬಜೆಟ್' ಎಂದು ಬಣ್ಣಿಸಲಾಗಿತ್ತು. ತೆರಿಗೆಗಳನ್ನು ಇಳಿಸಿ, ಆದಾಯವನ್ನು ಹೆಚ್ಚಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 2000ದ ಯಶವಂತ ಸಿನ್ಹಾ ಅವರ ಬಜೆಟ್ 'ಮಿಲೇನಿಯಂ ಬಜೆಟ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದನ್ನು ಮಂಡಿಸಿದ ಸಂದರ್ಭವೇ ಆ ಹೆಸರಿಗೆ ಕಾರಣವಾಗಿತ್ತು. 'ಹೊಸಯುಗದ ಬಜೆಟ್' ಎಂಬ ಖ್ಯಾತಿಗೆ ಪಾತ್ರವಾಗಿದ್ದು 1991ರ ಮನಮೋಹನ್ ಸಿಂಗ್ ಬಜೆಟ್. ನರಸಿಂಹರಾವ್ ಅವರ ಆರ್ಥಿಕ ಉದಾರೀಕರಣದ ಚಿಂತನೆಗಳನ್ನು ಅದು ಅನುಷ್ಠಾನಗೊಳಿಸಿತ್ತು.
ಅತ್ಯುತ್ತಮ ಬಜೆಟ್ ರೂಪಿಸಿದವರು ಸ್ವಾತಂತ್ರ್ಯಾನಂತರದ ಮೊದಮೊದಲ ವರ್ಷಗಳಲ್ಲಿದ್ದರು. ಷಣ್ಮುಖಂ ಚೆಟ್ಟಿ ಮತ್ತು ಜಾನ್ ಮಥಾಯ್ ಹೊಸ ಹಾದಿ ತೋರಿದ್ದರು. ಜವಾಹರಲಾಲ್ ನೆಹರೂ ಅವರ ಅಂದಿನ ಜನಪ್ರಿಯ ಸಮಾಜವಾದಿ ಜೀವನಕ್ರಮಕ್ಕೆ ತಕ್ಕಂತೆ ಬಜೆಟ್ ರೂಪಿಸಲಾಗಿತ್ತು. ಇವರನ್ನೇ ಅನುಸರಿಸಿದವರು ಸಿ.ಡಿ. ದೇಶ್‌ಮುಖ್ ಮತ್ತು ಟಿ.ಟಿ. ಕೃಷ್ಣಮಾಚಾರಿ. ನವಭಾರತದ ಆರ್ಥಿಕತೆಗೆ ಒಂದು ಹೊಸ ರೂಪ ಕೊಟ್ಟವರು ಎಂಬ ಖ್ಯಾತಿಗೆ ಅವರು ಪಾತ್ರರಾದರು. ದೇಶಮುಖ್ ಅವರೊಬ್ಬ ಐಸಿಎಸ್ ಅಧಿಕಾರಿಯಾಗಿದ್ದವರು ಮತ್ತು ರಿಸರ್ವ್ ಬ್ಯಾಂಕ್‌ನ ಮೊದಲ ಭಾರತೀಯ ಗವರ್ನರ್. ಆರ್ಥಿಕ ಕ್ಷೇತ್ರದ ಸಾಮಾಜಿಕ ನಿಯಂತ್ರಣ ಅವರ ಚಿಂತನೆಗಳಲ್ಲೊಂದಾಗಿತ್ತು. ಸ್ವತಃ ಒಬ್ಬ ಕೈಗಾರಿಕೋದ್ಯಮಿಯಾಗಿದ್ದ ಟಿಟಿಕೆ ಅವರನ್ನು ಅನೇಕ ಉದ್ಯಮಿಗಳೇ ಟೀಕಿಸಿದ್ದುಂಟು. ಕರಾಕರಣೆ ಮತ್ತು ನಿಯಂತ್ರಣ ಕ್ರಮಗಳ ಮೇಲೆ ಅವರಿಗಿದ್ದ ಒಲವೇ ಇದಕ್ಕೆ ಕಾರಣವಾಗಿತ್ತು. 1958ರಲ್ಲಿ ಮೊರಾರ್ಜಿ ದೇಸಾಯಿಯವರ ಆಗಮನದೊಂದಿಗೆ ಅಪ್ರಿಯ ಬಜೆಟ್‌ಗಳ ಯುಗ ಆರಂಭವಾಯಿತು. ಆದರೂ ತಮ್ಮ ವೃತ್ತಿ ಜೀವನದಲ್ಲಿ ಹತ್ತು ಬಜೆಟ್‌ಗಳನ್ನು ಮಂಡಿಸುವ ಮೂಲಕ ಅವರು ದಾಖಲೆಯನ್ನೇ ಸೃಷ್ಟಿಸಿದರು.
ರಾಜಕೀಯ ಸಂಸ್ಕೃತಿಯಂತೆ ಬಜೆಟ್ ಸಂಸ್ಕೃತಿ ಕೂಡಾ ಇಂದಿರಾ ಗಾಂಧಿಯವರ ಕಾಲದಲ್ಲಿ ಬದಲಾವಣೆ ಕಂಡಿತು. ಟಿಟಿಕೆ ಮತ್ತು ಮೊರಾರ್ಜಿ ದೇಸಾಯಿ ತಮ್ಮ ವಿವೇಚನೆಗೆ ತಕ್ಕಂತೆ ಆರ್ಥಿಕ ನೀತಿಗಳನ್ನು ರೂಪಿಸುವ ಸ್ವಾತಂತ್ರ್ಯವನ್ನು ಹೊಂದಿದ್ದರು. ಇಂದು ಕಾಂಗ್ರೆಸ್ ಸಚಿವರು ಅಂಥ ಸ್ವಾತಂತ್ರ್ಯವನ್ನೇ ಹೊಂದಿಲ್ಲ. ಅವರು ವಂಶಪಾರಂಪರ್ಯ ರಾಜಕೀಯದ ನೀತಿಗೆ ತಕ್ಕಂತೆ ತಮ್ಮ ಚಿಂತನೆಗಳನ್ನು ಅಳವಡಿಸಬೇಕಾಗುತ್ತದೆ. ಪ್ರಭಾವಶಾಲಿ ಕಾರ್ಪೊರೇಟ್ ಪ್ರಮುಖರು ಹೇಳಿದಂತೆಯೂ ಅವರು ಕೇಳಬೇಕಾಗುತ್ತದೆ. ಪ್ರಣಬ್ ಮುಖರ್ಜಿಯವರ ಅವಧಿಯಲ್ಲಿ ಇಂಥವರ ಪ್ರಭಾವ ಅತಿಯಾಗಿ ಕಂಡುಬಂದಿತ್ತು. ಚಿದಂಬರಂ ಅವರ ಮೇಲೂ ಬಂಡವಾಳಶಾಹಿಗಳ ಪ್ರಭಾವ ಬಿದ್ದಿದೆ. ಅವರ ಮೇಲೆ ಹೆಚ್ಚುವರಿ ಒತ್ತಡವೊಂದಿದೆ- ಪ್ರಧಾನಿ ಸ್ಥಾನಕ್ಕೆ ಸೋನಿಯಾ ಗಾಂಧಿಯ ಮುಂದಿನ ಆಯ್ಕೆ. ತಮ್ಮ ಬಜೆಟ್ ಭಾಷಣವನ್ನು ಕೊನೆಗೊಳಿಸುತ್ತಾ ಚಿದಂಬರಂ ಹೇಳಿದರು- 'ಭಾರತವು ವಿಶ್ವದ ಬೃಹತ್ ಆರ್ಥಿಕ ರಾಷ್ಟ್ರಗಳಲ್ಲಿ ಒಂದು. ನಾವು ಇನ್ನಷ್ಟು, ಮತ್ತಷ್ಟು ದೊಡ್ಡದಾಗಿ ಬೆಳೆಯಬಹುದು. ಇದೆಲ್ಲವೂ ನಮ್ಮನ್ನೇ ಅವಲಂಬಿಸಿರುತ್ತದೆ'.
ನಿಜ. ಇಲ್ಲಿ 'ನಮ್ಮನ್ನು' ಎಂದರೆ 'ಅವರನ್ನು' ಎಂದಿರಬೇಕು. ಅದೇ ಇಂದಿನ ಸಮಸ್ಯೆ!
-ಟಿ.ಜೆ.ಎಸ್.ಜಾರ್ಜ್