ಜಮಾತೆ ಇಸ್ಲಾಮಿಯ ಸಿಟ್ಟಿಗೆ ಬಲಿಯಾಗುತ್ತಿರುವ ಹಿಂದುಗಳು
1971ರ ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಯುದ್ಧಾಪರಾಧ ಮತ್ತು ನರಮೇಧ ಎಸಗಿದ ಆರೋಪ ಹೊತ್ತಿರುವ ಅಬ್ದುಲ್ ಕ್ವಾದರ್ ಮುಲ್ಹಾ ಮತ್ತು ಇನ್ನಿತರರಿಗೆ ಮರಣದಂಡನೆಯಾಗಬೇಕು ಎಂದು ಭುಗಿಲೆದ್ದಿರುವ ಪ್ರತಿಭಟನೆ, ಜಮಾತೆ ಇಸ್ಲಾಮಿ ಸಂಘಟನೆಯ ಹೊಟ್ಟೆಗೆ ಕಿಚ್ಚು ಹಚ್ಚಿದೆ. ವಿಪರ್ಯಾಸವೆಂದರೆ ಜಮಾತ್ ಶಿಬಿರದ ಮತಾಂಧರು ತಮ್ಮ ಕೋಪವನ್ನು ಬಾಂಗ್ಲಾದಲ್ಲಿನ ಹಿಂದುಗಳ ಮೇಲೆ ತಿರುಗಿಸಿರುವುದು. ನೌಖಾಲಿ, ಗಾಯ್ಬಂಧಾ, ಚಿತ್ತಗಾಂಗ್, ರಂಗ್ಪುರ್, ಸಿಲ್ಹಟ್, ಚೈಪಾನವಾಬ್ಗಂಜ್ ಸೇರಿದಂತೆ ಬಾಂಗ್ಲಾದ ಹಲವಾರು ಪ್ರದೇಶಗಳಿಗೆ ನುಗ್ಗಿ ಹಿಂದುಗಳ ಮನೆಗಳು, ದೇವಾಲಯಗಳನ್ನು ಅವರು ಸುಟ್ಟುಹಾಕುತ್ತಿದ್ದಾರೆ. ಇದುವರೆಗೂ ಸುಮಾರು ಆರು ಮಂದಿರಗಳು ಮುಸ್ಲಿಂ ಮತಾಂಧರ ಕ್ರೋಧಾಗ್ನಿಗೆ ಆಹುತಿಯಾಗಿದ್ದು, ಒಂದು ಬೌದ್ಧ ಮಂದಿರವೂ ದಾಳಿಯಲ್ಲಿ ನಾಶವಾಗಿದೆ. ಈ ಕುರಿತು ಬಾಂಗ್ಲಾದ ಡೈಲಿ ಸ್ಟಾರ್ ಪತ್ರಿಕೆ ಪ್ರಕಟಿಸಿರುವ ವರದಿಯ ಆಯ್ದ ಭಾಗ ಇಲ್ಲಿದೆ:
ಮೊದಲು ನೌಖಾಲಿಯ ರಾಜ್ಗಂಜ್ಗೆ ನುಗ್ಗಿದ ಜಮಾತ್ ಶಿಬಿರದ ಕಾರ್ಯಕರ್ತರು, ಹಿಂದೂಗಳ ಒಂದು ಮಂದಿರವೂ ಸೇರಿದಂತೆ, 8 ಮನೆಗಳನ್ನು ಸುಟ್ಟುಹಾಕಿದ್ದಾರೆ. ಅಲ್ಲದೆ ಬೇಗಂ ಗಂಜ್ನಲ್ಲಿ ವಿಪ್ಲವ್ ಸರ್ಕಾರ ಎನ್ನುವವರ ಆಭರಣ ಮಳಿಗೆಯ ಬೀಗ ಒಡೆದು ಕೈಗೆ ಸಿಕ್ಕದ್ದನ್ನೆಲ್ಲಾ ದೋಚಿದ್ದಾರೆ.
ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಹೇಳುವಂತೆ, ಬಾಂಗ್ಲಾ ನ್ಯಾಯಾಲಯ ಜಮಾತ್ನ ಪ್ರಮುಖ ನಾಯಕ ದೆಲಾವರ್ ಹುಸ್ಸೇನ್ ಸಯೀದೀಗೆ ಮರಣದಂಡನೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ಶುರುವಾಗಿದೆ. ಸುದ್ದಿ ತಿಳಿದು ರೊಚ್ಚಿಗೆದ್ದ ಜಮಾತ್ ಕಾರ್ಯಕರ್ತರ ಕೋಪಕ್ಕೆ ಮೊದಲು ಆಹುತಿಯಾದದ್ದು ರಾಜ್ಗಂಜ್ ಮಾರುಕಟ್ಟೆಯಲ್ಲಿನ 'ಹರಿಶಿವ' ಮಂದಿರ.
'ನಮಗೆ ಏನಾಗುತ್ತಿದೆ ಅನ್ನುವುದೇ ತಿಳಿಯಲಿಲ್ಲ. ಮೊದಲು ನಮ್ಮ ಮಂದಿರಕ್ಕೆ ಬೆಂಕಿ ಹಚ್ಚಿದ ಅವರು, ಕೆಲವು ಕ್ಷಣಗಳ ನಂತರ ನಮ್ಮ ಮನೆಗಳ ಮೇಲೆ ದಾಳಿ ಮಾಡಿದರು. ನಮಗೆ ಬೇರೆ ಆಯ್ಕೆಯೇ ಇರಲಿಲ್ಲ, ಹಾಗಾಗಿ ಊರು ಬಿಟ್ಟು ಓಡಿ ಬಂದಿದ್ದೇವೆ' ಎನ್ನುತ್ತಾರೆ ಮನೆ ಕಳೆದುಕೊಂಡ ಶಾಲಾ ಶಿಕ್ಷಕ ಶಂಕರ್ ಚಂದ್ರ.
'ಸುಮಾರು 50 ಜನ ಹಿಂದುಗಳು ಆ ಮನೆಗಳಲ್ಲಿ ವಾಸಿಸುತ್ತಿದ್ದೆವು , ನಮ್ಮಲ್ಲಿ ಬಹುತೇಕರು ಮುನ್ನೆಚ್ಚರಿಕೆ ವಹಿಸಿ ಓಡಿ ಬಂದು ಬಿಟ್ಟೆವು. ಅಲ್ಲೇ ಉಳಿದವರನ್ನು ಜಮಾತ್ನ ಕಾರ್ಯಕರ್ತರು ಹೊರಗೆಳೆದು ಭಯಂಕರವಾಗಿ ಥಳಿಸಿದ್ದಾರೆ. 1971ರಲ್ಲಿ ನಾನು 7 ವರ್ಷದವನಾಗಿದ್ದೆ, ಆದರೆ ಈ ಪರಿ ಆತಂಕ ನನಗಾಗ ಕಾಡಿರಲಿಲ್ಲ' ಎಂದು ಗಾಬರಿಯಿಂದ ಅವರು ತಲೆಗೆ ಕೈಹೊತ್ತು ಕುಳಿತುಕೊಳ್ಳುತ್ತಾರೆ.
ಇದಷ್ಟೇ ಅಲ್ಲದೆ ಜಮಾತ್ ಕಾರ್ಯಕರ್ತರು ದಾಳಿಯ ವೇಳೆ ನೆರೆದಿದ್ದ ಪತ್ರಿಕಾ ಛಾಯಾಗ್ರಾಹಕರನ್ನೂ ಥಳಿಸಿ, ಅವರ ಕ್ಯಾಮೆರಾಗಳನ್ನೆಲ್ಲ ಪುಡಿ ಮಾಡಿದ್ದಾರೆ. ಮೊಹತಸೀಮ್ ಬಿಲ್ಹಾ ಸಬೂಜ್ ಎನ್ನುವ ಪತ್ರಕರ್ತನನ್ನು ಅವರು ಬಲವಂತವಾಗಿ ಎಳೆದೊಯ್ಯುತ್ತಿದ್ದಾಗ, ಊರ ಜನರೇ ಅವರನ್ನು ಬಿಡಿಸಿಕೊಂಡು ಬಂದಿದ್ದಾರೆ.
ಬೇಗಂ ಗಂಜ್ ವೃತ್ತದ ಅಸಿಸ್ಟೆಂಟ್ ಪೊಲೀಸ್ ಸೂಪರ್ಇಂಟೆಂಡೆಂಟ್ ಮೆಹಬೂಬ್ ಆಲಂ 'ಡೈಲಿ ಸ್ಟಾರ್ ಪತ್ರಿಕೆಗೆ' ದಾಳಿಯ ಕುರಿತು ವಿಸ್ತೃತ ಮಾಹಿತಿ ನೀಡಿದ್ದಾರೆ. 'ಅಗ್ನಿಶಾಮಕ ದಳದವರು ಮತ್ತು ನಾವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದೆವು. ಆದರೆ ಜಮಾತ್ನವರು ನಮಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ನಾವು ತುಂಬಾ ಪ್ರಯಾಸ ಪಡಬೇಕಾಯಿತು. ತುಸು ಹೊತ್ತಿನ ನಂತರ ಅವರು ನಮ್ಮ ಮೇಲೆ ಗುಂಡಿನ ದಾಳಿ ನಡೆಸತೊಡಗಿದರು. ಚಕಮಕಿ ಶುರುವಾಗಿ, ಸ್ಥಳದಲ್ಲೇ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.'
ಚಿತ್ತಗಾಂಗ್: ಬನ್ಖಾಲಿ ಮತ್ತು ಸತ್ಕಾನಿಯಾ ಉಪಜಿಲ್ಲಾದ ಹಿಂದು ಬಾಹುಳ್ಯವಿರುವ ಪ್ರದೇಶಗಳ ಮೇಲೆ ದಾಳಿ ಮಾಡಿರುವ ಜಮಾತ್ ಶಿಬಿರ್ದ ಕಾರ್ಯಕರ್ತರು ಬೌದ್ಧ ದೇವಾಲಯವೊಂದನ್ನು ಸುಟ್ಟುಹಾಕಿದ್ದಾರೆ.
'ಧೋಪಾರಾ ಮತ್ತು ಮಹಜನ್ಪುರಾದ ಹಿಂದುಗಳ ಮೇಲೆ ಕಬ್ಬಿಣದ ರಾಡ್, ದೊಣ್ಣೆಗಳಿಂದ ದಾಳಿ ಮಾಡಿ, ಅವರ ಅಂಗಡಿ, ಮನೆಗಳನ್ನೆಲ್ಲ ಸುಟ್ಟುಹಾಕಿದ್ದಾರೆ' ಎಂದು ಚಿತ್ತಗಾಂಗ್ ಮೆಟ್ರೋಪಾಲಿಟನ್ ಪೊಲೀಸ್ ಕಚೇರಿಯ ಎಸಿಪಿ ಮೊಹಮ್ಮದ್ ಇಲ್ತುಮಿಶ್ ತಿಳಿಸಿದ್ದಾರೆ.
ಗಾಯ್ಬಂಧಾ: ಜಮಾತೆ ಇಸ್ಲಾಮಿ ಮತ್ತು ಇಸ್ಲಾಂ ಛತ್ರ ಶಿಬಿರದ ವಿದ್ಯಾರ್ಥಿ ಸಂಘಟನೆಗಳು ಇಲ್ಲಿನ ಮಂದಿರವೊಂದನ್ನು ನೆಲಸಮ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಾಳಿಕೋರರು ಮಿಥೋಪುಕಾರ್ ಉಪಜಿಲ್ಲೆಯಲ್ಲಿರುವ ಪ್ರಖ್ಯಾತ ಕಾಳಿ ಮಂದಿರಕ್ಕೂ ಬೆಂಕಿ ಹಚ್ಚಿದ್ದಾರೆ.
'ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ಅದಾಗಲೇ ಜಮಾತ್ನ ಉಗ್ರರು ಸುಮಾರು 10 ಜಿಲ್ಲೆಗಳಲ್ಲಿ ಹಿಂದು ಗಳ ಮೇಲೆ ವಿಧ್ವಂಸವೆಸಗಿದ್ದಾರೆ. ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ನಾವು ಸರ್ಕಾರವನ್ನು ಕೇಳಿಕೊಂಡಿದ್ದೇವೆ' ಎನ್ನುತ್ತಾರೆ ಢಾಕಾ ಮಹಾನಗರ ಪೂಜಾ ಸಮಿತಿಯ ಮಹಾ ಕಾರ್ಯದರ್ಶಿ ನಿರ್ಮಲ್ ಚಟರ್ಜಿ.
-ಡೈಲಿ ಸ್ಟಾರ್ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

