ಸರ್ಕಾರದ ಅನುದಾನ ಪಡೆಯುವ ನಕಲಿ ಸಂಸ್ಥೆಗಳ ಹುಂಬತನ
ರಜನೀಶ್: ನಾನು ಆಸ್ಟ್ರೇಲಿಯಾಗೆ ಶಾಲಿನಿಯ ಜೊತೆ ಸ್ವಲ್ಪ ಸಮಯ ಕಳೆದು ವಾಪಸ್ ಬರುತ್ತಿದ್ದಂತೆ ಹಿಂದುಳಿದ ವರ್ಗಗಳ ನಿರ್ದೇಶನಾಲಯದ ನಿರ್ದೇಶಕನನ್ನಾಗಿ ವರ್ಗಾವಣೆ ಮಾಡಿದರು. ಆಗ ಎಸ್.ಎಂ. ಕೃಷ್ಣ ಅವರು ಮುಖ್ಯ ಮಂತ್ರಿಗಳಾಗಿದ್ದರು. ಬಹಳ ಸಂತೋಷದಿಂದಲೇ ಹುದ್ದೆಯನ್ನು ಅಲಂಕರಿಸಿದೆ. ಆ ಹುದ್ದೆಯಲ್ಲಿ ನನಗಿಂತ ಮೊದಲು ನಾರಾಯಣ ಎನ್ನುವ ಐ.ಪಿ.ಎಸ್. ಅಧಿಕಾರಿ ಇದ್ದರು. ನ್ಯಾಯವಾದಿ ಜಾಲಪ್ಪನವರ ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಅವರು ಕೆಲಸದಿಂದ ವಜಾಗೊಂಡರು. ಅಲ್ಲಿನ ಸಿಬ್ಬಂದಿ ವರ್ಗವೆಲ್ಲ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಂಡಿತ್ತು. ಅವರೆಲ್ಲರಿಗೂ ಆಸಕ್ತಿ ಹುಟ್ಟುವಂತೆ ಮಾಡುವುದು, ಉತ್ಸಾಹದಿಂದ ಕೆಲಸ ಮಾಡುವಂತೆ ಪ್ರೇರೇಪಿಸುವುದು ನನ್ನ ಮೊದಲ ಗುರಿಯಾಯಿತು.
ಮೂವತ್ತರಿಂದ ನಲವತ್ತು ನಕಲೀ ಸಂಸ್ಥೆಗಳು ಸರ್ಕಾರದಿಂದ ಅನುದಾನ (ಸಹಾಯಧನ) ಪಡೆಯುತ್ತಿದ್ದುದು ಆ ಸಮಯದಲ್ಲಿ ನನ್ನ ಗಮನಕ್ಕೆ ಬಂತು. ಹಾಗಾಗಿ ಹಲವಾರು ತನಿಖಾ ದಳಗಳನ್ನು ರಚಿಸಲಾಯಿತು. ಪ್ರತಿಯೊಂದು ಸಂಸ್ಥೆಗೂ ಭೇಟಿ ಕೊಟ್ಟ ತನಿಖಾ ದಳ ಅವ್ಯವಹಾರಗಳನ್ನು ಪತ್ತೆ ಹಚ್ಚಿತು. ಗುಲ್ಬರ್ಗಾ ಮತ್ತು ಬಿಜಾಪುರದಲ್ಲಿ ಇಂತಹ ಸಂಸ್ಥೆಗಳು ಹೆಚ್ಚಿದ್ದವು. ಆಗ ಸಮಾಜ ಕಲ್ಯಾಣ ಇಲಾಖೆಯ ನಿದೇರ್ಶಕರಾಗಿ, ನನ್ನ ಬ್ಯಾಚ್ಮೆಟ್ ಆಗಿದ್ದ ಕಾಂಬ್ಲೆಯವರು ಇಲಾಖಾ ಕಾರ್ಯದರ್ಶಿಯಾಗಿದ್ದರು.
ನಾವೆಲ್ಲ ಸೇರಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿಯೇ ಮೀಸಲಾದ ವಿಶೇಷ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆವು. ಉತ್ತಮ ಶಿಕ್ಷಣವೇ ಅವರುಗಳ ಅಭಿವೃದ್ದಿಗೆ ಮೂಲಮಂತ್ರ ಎಂದು ನಿರ್ಧರಿಸಿ ಹೊಸ ಸೊಸೈಟಿಯನ್ನು ಸ್ಥಾಪಿಸಲಾಯಿತು. ಇಂದಿಗೂ ಆ ಯೋಜನೆ ಉತ್ತಮವಾಗಿ ನಡೆಯುತ್ತಿದೆ. ಜಾಗತೀಕರಣದ ಈ ಸಮಯದಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಎಲ್ಲರ ಜೊತೆ ಸಮಾನವಾಗಿ ನಿಲ್ಲಬೇಕಾದರೆ ಕೇವಲ ಅವರಿಗೆ ಹೊಟ್ಟೆ-ಬಟ್ಟೆಗೆ ಮಾತ್ರ ಕೊಟ್ಟರೆ ಸಾಕಾಗುವುದಿಲ್ಲ. ಶೈಕ್ಷಣಿಕವಾಗಿ ಹಾಗೂ ಮಾನಸಿಕವಾಗಿಯೂ ಅವರು ಬೆಳೆಯುವಂತಾಗಬೇಕು. ಅವರನ್ನು ಬೆಳಸುವುದು ಸರ್ಕಾರ ಮತ್ತು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು.
ಶಾಲಿನಿ: ಆಸ್ಟ್ರೇಲಿಯಾದಿಂದ ಬಂದ ನಂತರ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ತೋಟಗಾರಿಕೆ ಇಲಾಖೆಯ ಡೆಪ್ಯುಟಿ ಕಮೀಷನರ್ ಆಗಿ ನೇಮಕಗೊಂಡೆ. ಆಗ ಬೆಂಗಳೂರು ಮಹಾ ನಗರ ಪಾಲಿಕೆಯಲ್ಲಿ ಜಯರಾಜ್ ಅವರು ಆಯುಕ್ತರಾಗಿಯೂ, ಅಶೋಕ್ ದಳವಾಯಿಯವರು ಒರಿಸ್ಸಾದಿಂದ ಅಂತರ ರಾಜ್ಯ ಪ್ರತಿನಿಯೋಜನೆಯ ಅಂಗವಾಗಿ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಾಲಿಕೆ ಆಗ ಸ್ವಚ್ಛ ಬೆಂಗಳೂರು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೊಟ್ಟ ಮೊದಲನೇ ಸಲ ಮನೆ ಮನೆಯಿಂದ ಕಸ ಸಂಗ್ರಹಿಸುವ ಪದ್ಧತಿ ಪ್ರಾರಂಭವಾಯಿತು. ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೂರು ಸಮುದಾಯ ಶೌಚಗೃಹಗಳನ್ನು ಕಟ್ಟಿಸಿಕೊಡಲು ಇನ್ಫೋಸಿಸ್ ಫೌಂಡೇಷನ್ನಿನ ಅಧ್ಯಕ್ಷರಾದ ಸುಧಾ ಮೂರ್ತಿಯವರು ಒಪ್ಪಿಕೊಂಡರು.
ನಗರ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿದ್ದಿತು. ಬೆಳಗ್ಗೆ ಆರು ಗಂಟೆಗೆ ಕರ್ಮಚಾರಿಗಳು ಹಾಜರಿರಬೇಕಾಗಿತ್ತು. ಅವರ ಹಾಜರಾತಿಯನ್ನು ಆ ಸಮಯದಲ್ಲಿ ತೆಗೆದುಕೊಂಡು ಮನೆಗಳ ಮುಂದೆ, ರಸ್ತೆಗಳು, ತೊಟ್ಟಿಗಳಿಂದ ತ್ಯಾಜ್ಯಗಳನ್ನು ತೆಗೆದು ಕೆಲಸ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಪರೀಕ್ಷಿಸಬೇಕಾಗುತ್ತಿತ್ತು. ಪ್ರತಿ ದಿನವೂ ಬೆಳಗ್ಗೆ ಆರು ಗಂಟೆಗೆ ಬೇರೆ ಬೇರೆ ಜಾಗಗಳಿಗೆ ಹೋಗಿ ಪರಿಶೀಲಿಸುತ್ತಿದ್ದೆ. ನನ್ನ ಜೊತೆಗೆ ಹಲವಾರು ಅಧಿಕಾರಿಗಳು ಹಾಜರಿರುತ್ತಿದ್ದರು.
ತೋಟಗಾರಿಕಾ ಇಲಾಖೆಯನ್ನು ಹಸಿ ಕಸ ಮತ್ತಿತರ ತ್ಯಾಜ್ಯವನ್ನು ತೆಗೆದು ನಗರವನ್ನು ಸ್ವಚ್ಛವಾಗಿಡುವ ಕೆಲಸಕ್ಕೆ ಹಚ್ಚಲಾಯಿತು. ಇದಕ್ಕೆ ಬೇಕಾದ ತರಬೇತಿಯನ್ನೂ ಕೊಡಲಾಯಿತು. ವಾರದಲ್ಲಿ ಒಂದು ದಿನ ಗಿಡ, ಮರ, ತೋಟಗಳ ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ಗೊಬ್ಬರವನ್ನಾಗಿ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ಸಾವಿರ ತೋಟಗಳಿಗೆ ಬಳಸಿಕೊಳ್ಳಲು ಸೂಚನೆ ನೀಡಲಾಯಿತು. ಮತ್ತೊಂದು ದಿನ ಕಟ್ಟಡ ನಿರ್ಮಾಣಗಳು ನಡೆಯುತ್ತಿರುವ ಸ್ಥಳಗಳಲ್ಲಿರುವ ತ್ಯಾಜ್ಯವನ್ನು ಸಂಗ್ರಹಿಸಿ ಅವುಗಳನ್ನು ವಿಲೇವಾರಿ ಮಾಡಲು ವ್ಯವಸ್ಥೆ ಮಾಡಬೇಕಾಗಿತ್ತು. ಇಲ್ಲದಿದ್ದರೆ ಕಸ ಮೋರಿಗಳಲ್ಲಿ ಸೇರಿಕೊಂಡು, ಮೋರಿಗಳು ಕಟ್ಟಿಕೊಂಡು ತೊಂದರೆ ಉಂಟಾಗುತ್ತಿತ್ತು. ಈ ಕೆಲಸಕ್ಕಾಗಿ ನೈರ್ಮಲ್ಯ ಮತ್ತು ಇಂಜಿನಿಯರಿಂಗ್ ವಿಭಾಗದವರನ್ನು ಸಂಪರ್ಕಿಸಿ, ಅವರ ಸಹಕಾರದೊಂದಿಗೆ ಕೆಲಸ ಮಾಡಬೇಕಾಗುತ್ತಿತ್ತು. ಇದರೊಟ್ಟಿಗೆ ಬೀದಿ ನಾಯಿಗಳ ಕಾಟ ಬರುಬರುತ್ತಾ ಜಾಸ್ತಿಯಾಗ ಹತ್ತಿತ್ತು. ಹಾಗಾಗಿ ಸರ್ಕಾರೇತರ ಸಂಸ್ಥೆಗಳ ಸಹಾಯದಿಂದ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಲಸಿಕೆ ಹಾಕುವುದು ಮತ್ತು ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸಲಾಗುತ್ತಿತ್ತು. ಸೊಳ್ಳೆಗಳ ನಿಯಂತ್ರಣವೂ ಒಂದು ಸವಾಲಿನ ಸಮಸ್ಯೆಯೇ ಆಗಿತ್ತು. ಅದರ ಬಗ್ಗೆಯೂ ಸಾಕಷ್ಟು ಗಮನ ಹರಿಸಿ ಅದರ ನಿವಾರಣೆಗೆ ಉತ್ತಮ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು ಮಹಾನಗರ ಪಾಲಿಕೆ ಹಲವು ಶಾಲೆಗಳು ಹಾಗೂ ಆರೋಗ್ಯ ಕೇಂದ್ರಗಳನ್ನು ನಡೆಸುತ್ತಿತ್ತು ಆದರೆ ಸಿಬ್ಬಂದಿಗಳ ಕೊರತೆಯಿಂದ ಎಲ್ಲೆಡೆ ಸೇವೆಗಳ ಗುಣಮಟ್ಟ ಕಡಿಮೆಯಾಗುತ್ತಿತ್ತು. ಆಗ ಆರೋಗ್ಯ ಇಲಾಖೆಗೆ ಮನವಿ ಮಾಡಿ ಕೆಲವು ದಾದಿಯರನ್ನು ನಿಯೋಜಿಸಲಾಯಿತು. ಮಂಗಳೂರಿನಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾಗ ನಾನು ಕೆಲವು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ವೈದ್ಯರನ್ನು ಹಳ್ಳಿಗಳಿಗೆ ನಿಗದಿತ ದಿನಗಳಂದು ಕಳುಹಿಸುತ್ತಿದ್ದೆ. ಇದರಿಂದ ಬಡವರಿಗೆ ಮನೆ ಬಾಗಿಲಲ್ಲೇ ಉತ್ತಮ ವೈದ್ಯಕೀಯ ಸೇವೆ ಸಿಗುವಂತಾಯಿತು. ಮಂಗಳೂರಿನ ಮಾದರಿಯಂತೆ ಬೆಂಗಳೂರಿನಲ್ಲಿ ಸಹ ಕೆಲವು ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿ ನಮ್ಮ ವ್ಯವಸ್ಥೆಯನ್ನು ಸುಧಾರಿಸಬಹುದು ಎಂದು ಯೋಚಿಸುತ್ತಿದ್ದೆ. ಆದರೆ ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಇದ್ದ ಕೆಲವು ಸಿಬ್ಬಂದಿಗಳು ಪ್ರತಿಯೊಬ್ಬ ರೋಗಿಯಿಂದಲೂ ಹಣ ವಸೂಲಿ ಮಾಡುತ್ತಾರೆ ಎಂಬುದನ್ನು ಕೇಳಿ ತುಂಬಾ ಬೇಸರವಾಯಿತು.
'ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್' ಎನ್ನುವ ಒಂದು ಹೊಸ ಆಲೋಚನೆಗೆ ನಂದನ್ ನಿಲೇಕಣಿಯವರು ನೇತೃತ್ವ ವಹಿಸಿದ್ದರು. ಧೀಮಂತ ವ್ಯಕ್ತಿತ್ವದ ನಿಲೇಕಣಿ ಎಲ್ಲರೊಡನೆ ಬಹಳ ಚೆನ್ನಾಗಿ ಬೆರೆಯುತ್ತಾರೆ. ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆಲಸ ನಡೆಯುತ್ತಿತ್ತು. ಖಾಸಗಿ ಸಂಸ್ಥೆಗಳೊಂದಿಗೆ ಹತ್ತಿರದಿಂದ ಕೆಲಸ ಮಾಡುವ ಅವಕಾಶ ದೊರಕಿತ್ತು. ಸ್ವತಃ ಮೌಲ್ಯಮಾಪನ ಯೋಜನೆಯ ಮೂಲಕ ಆಸ್ತಿಗಳ ತೆರಿಗೆ ವಸೂಲಾತಿ, ಹಣಕಾಸಿನ ವ್ಯವಹಾರಗಳನ್ನು ಸುವ್ಯವಸ್ಥಿತವಾಗಿ ಮಾಡಲು ಒಂದು ಒಳ್ಳೆಯ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಜಯರಾಜ್ರವರ ನೇತೃತ್ವದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಒಬ್ಬ ಹಿರಿಯ ಅಧಿಕಾರಿ ತಮ್ಮ ಅಧೀನದಲ್ಲಿ ಇರುವ ಅಧಿಕಾರಿಗಳ ತಂಡವನ್ನು ಹೇಗೆ ಸಧೃಢವಾಗಿ ಕಟ್ಟಿ ಬೆಳೆಸುತ್ತಾರೆ, ಅದರಿಂದ ಇಡೀ ವ್ಯವಸ್ಥೆ ಚುರುಕಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅವರಿಂದ ಅರಿತೆ.
ಕೇಂದ್ರ ಸರ್ಕಾರದಲ್ಲಿ ರಾಜ್ಯ ವಿತ್ತ ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದ ಅನೂಪ್ ಪೂಜಾರಿ ಯವರು ಒಂದು ದಿನ ದೆಹಲಿಯಿಂದ ಕರೆ ಮಾಡಿದರು. ಕೇಂದ್ರ ಸರ್ಕಾರದ ರಾಜ್ಯ ವಿತ್ತ ಸಚಿವರಿಗೆ ರಜನೀಶ್ ಅವರ ಹೆಸರನ್ನು ಸೂಚಿಸಿರುವುದಾಗಿ, ಹಾಗಾಗಿ ಅವರು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಬೇಕೆಂದು ಅವರು ಕೇಳಿಕೊಂಡರು. ಭಾರತ ಸರ್ಕಾರದ ಅರ್ಥ ಇಲಾಖೆಯಲ್ಲಿ ಕೆಲಸ ಮಾಡುವಂಥಹ ಅವಕಾಶ ಸಿಗುವುದು ಬಹು ದೊಡ್ಡ ಅದೃಷ್ಟವೆಂದೇ ಹೇಳಬಹುದು. ಇದರ ಬಗ್ಗೆ ನಾವಿಬ್ಬರೂ ಆಲೋಚಿಸಿದೆವು. ಹೇಗಿದ್ದರೂ ಒಂಭತ್ತು ವರ್ಷಗಳ ರಾಜ್ಯ ಸೇವೆಯ ನಂತರ ಐದು ವರ್ಷಗಳ ಕಾಲ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುವುದು ನಮಗೆ ಅನಿವಾರ್ಯ. ರಾಜ್ಯ ಮತ್ತು ಕೇಂದ್ರ ಸರ್ಕಾರ, ಇವೆರಡರಲ್ಲೂ ಸೇವೆ ಸಲ್ಲಿಸುವುದು ಭಾರತೀಯ ಆಡಳಿತ ಸೇವೆಯ ನಿಯಮವಾಗಿದೆ. ಹಾಗಾಗಿ ನಾವಿಬ್ಬರೂ ದೆಹಲಿಗೆ ಕೇಂದ್ರ ಸರ್ಕಾರದ ಸೇವೆಗೆ ಹೋಗಲು ನಿರ್ಧರಿಸಿದೆವು. ನಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದೆವು. ಒಂದು ವಾರದೊಳಗೆ ಹೋಗಿ ಅಲ್ಲಿ ಅಧಿಕಾರವನ್ನು ವಹಿಸಿಕೊಂಡೆವು. ನಾನು ಕೃಷಿ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದೆ.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

