ಅಂಕಣಗಳು

ಚಿದು ನಮ್ಮನ್ನು ಮೂರ್ಖರೆಂದುಕೊಂಡಿದ್ದಾರೇಕೆ?

Published On :

ಇವರದೇ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರು ಇಕನಾಮಿಕ್ ಸರ್ವೇ ಸಿದ್ಧಪಡಿಸಿದ್ದಾರೆ. ಆ ಪ್ರಕಾರ ಜಾಗತಿಕ ಬಿಕ್ಕಟ್ಟು ಹುಟ್ಟುಹಾಕಿದ ಅಲೆಗಳಿಗೆ ನಮ್ಮ ಅರ್ಥವ್ಯವಸ್ಥೆ ಚೇತರಿಸಿಕೊಂಡಿಲ್ಲ

ಪಿ. ಚಿದಂಬರಂ ಅವರು ಬುದ್ಧಿವಂತರು ಖರೆ. ಆದರೆ ಅವರಂಥ ಬುದ್ಧಿವಂತರ ಸಮಸ್ಯೆ ಎಂದರೆ ತಮ್ಮನ್ನು ಬಿಟ್ಟರೆ ಜಗತ್ತೆಲ್ಲಾ ಮೂರ್ಖರ ಮೇಳ ಎಂದೇ ಅವರು ಭಾವಿಸುತ್ತಾರೆ.
ಸೋಮವಾರದ ತಮ್ಮ ಗೂಗಲ್ ಹ್ಯಾಂಗ್‌ಔಟ್‌ನ ಸಂವಾದದ ಸಂದರ್ಭದಲ್ಲೂ ಚಿದಂಬರಂ ಅವರು ವಿವಾದಾತ್ಮಕ ಅಂಶಗಳನ್ನೇ ಎತ್ತಿದರು. ಆದರೆ ಅದು ಗಮನಕ್ಕೆ ಬರುವಂತೆ ಇರಲಿಲ್ಲ. ಅಷ್ಟೇ ಅಲ್ಲ, ಕೆಲ ದಿನಗಳ ಹಿಂದೆ ತಾವೇ ಏನನ್ನು ಹೇಳಿದ್ದರೋ ಅದಕ್ಕೆ ಪಕ್ಕಾ ಉಲ್ಟಾ ಧಾಟಿಯ ಮಾತುಗಳನ್ನು ಉದುರಿಸಿದರು.
ನಾನೇ ನಾನು ಎಂಬಂತಿದ್ದ ಆ ಸಂವಾದದ ಕ್ಷಣಗಳ ಕೆಲ ಮಾದರಿಗಳನ್ನು ಗಮನಿಸೋಣ. 'ಆಯಾತ ನಿರ್ಯಾತ ಅನುಪಾತ ಕೊರತೆ ಬಗ್ಗೆ ನಾನು ಮಾತನಾಡುವುದಕ್ಕೆ ಮುಂಚೆ ಯಾರು ಬೆಳಕು ಚೆಲ್ಲಿದ್ದರು ಹೇಳಿ' ಎಂದರವರು. ಇದಕ್ಕೆ ಅವರಿಗೆ ಉತ್ತರ ಬೇಕಿರುವುದೇ ನಿಜವಾದರೆ ಫಸ್ಟ್‌ಪೋಸ್ಟ್ ಜಾಲತಾಣದಲ್ಲೇ ಪ್ರಕಟವಾಗಿರುವ ಅನೇಕ ಲೇಖನಗಳು ಈ ಪ್ರಶ್ನೆ ಎತ್ತಿರುವುದನ್ನು ನೋಡಬಹುದು.
'ನಾನು ಉಸ್ತುವಾರಿ ವಹಿಸಿಕೊಂಡ ಮೇಲೆ ಪ್ರತಿ ಬಂಡವಾಳ ಹಿಂತೆಗೆತವೂ ಯಶಸ್ಸನ್ನು ಕಂಡಿದೆ'. 'ನಾವು ಎಲ್ಲಿಯೂ ತಪ್ಪು ಹೆಜ್ಜೆ ಹಾಕಲೇ ಇಲ್ಲ. 2008ರಲ್ಲಿ ಈ ಬಗೆಯ ಕೊರತೆಗಳನ್ನು ತಪ್ಪಿಸುವುದಕ್ಕೆ ಉತ್ತಮ ಕಾರ್ಯವನ್ನೇ ಮಾಡಿದ್ದೇವೆ.' (ನಾವು ಈ ಪರಿ ಗೊಂದಲದಲ್ಲಿರುವುದು ಅದಕ್ಕೇನಾ ಹಾಗಾದರೆ?)
'ನಾವೇನೂ ಅತಿಯಾದ ತಪ್ಪು ಮಾರ್ಗದಲ್ಲಿ ಹೆಜ್ಜೆ ಹಾಕಿ ತೊಡಲು ಬಟ್ಟೆಯಿಲ್ಲದ ಬೂದಿಬಡುಕ ಸ್ಥಿತಿಗೆ ತಲುಪಿಲ್ಲ.' (ಹಾಗಾದರೆ ಜನರಲ್ ಆ್ಯಂಟಿ ಅವಾಯ್ಡನ್ಸ್ ರೂಲ್ ಅನ್ನು ಇನ್ನೂ ಎರಡು ವರ್ಷ ತಡೆ ಹಿಡಿದಿರುವುದು ಏಕೆ? ಮಾರಿಷಸ್‌ನ ಬಂಡವಾಳ ಹೂಡಿಕೆದಾರರ ಸಂಪ್ರೀತಿ ಗಳಿಸಿಕೊಳ್ಳುವುದಕ್ಕೆ ಆ ಪರಿ ಒದ್ದಾಡುತ್ತಿರುವುದೇಕೆ?)
ರೇಟಿಂಗ್ ಕೊಡುವ ಸಂಸ್ಥೆಗಳು ತಲೆದೂಗುವ ರೀತಿಯಲ್ಲೇನೂ ಈ ವರ್ಷದ ಬಜೆಟ್ ಇಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಇದಕ್ಕೆ ಚಿದು ಅವರ ಪ್ರತಿಕ್ರಿಯೆ ಹೀಗಿತ್ತು- 'ನಾನು ರೇಟಿಂಗ್ ಏಜೆನ್ಸಿಯ ಅಭಿಪ್ರಾಯವನ್ನು ಗೌರವಿಸುತ್ತೇನೆ. ಆದರೆ ನಾನು ಬಜೆಟ್ ಮಂಡಿಸುವುದು ರೇಟಿಂಗ್ ಏಜೆನ್ಸಿಗಳಿಗೆ ಅಲ್ಲ, ಜನರಿಗೆ. ನಮ್ಮನ್ನು ಉತ್ತಮ ಅಥವಾ ಕಳಪೆ ಎಂದು ರೇಟ್ ಮಾಡಬೇಕಾದವರು ಜನರು. ಉಳಿದಂತೆ ಭಾರತವು ಕಳಪೆ ದರದಲ್ಲಿ ಮುನ್ನಡೆಯುತ್ತಿದೆ ಎನ್ನುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.' ಇದು ಅಂದು ಹೇಳಿದ್ದ ಮಾತು.
ಸೋಮವಾರದ ಗೂಗಲ್ ಹ್ಯಾಂಗ್‌ಔಟ್‌ನಲ್ಲಿ ಚಿದು ಭಿನ್ನ ಧ್ವನಿಯಲ್ಲಿ ಮಾತನಾಡಿದರು. ಅವರು ಹೇಳಿದ್ದು-'ನಾವು ಎಂಥ ಸನ್ನಿವೇಶದಲ್ಲಿ ಇದ್ದೇವೆ ಎಂದರೆ ನಾವು ನಮ್ಮ ಬದ್ಧತೆಯನ್ನು ಪ್ರಕಟಿಸದಿದ್ದರೆ, ಈ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಡದಿದ್ದರೆ ನಾವು ತುಂಬ ಗಂಭೀರ ಪರಿಣಾಮಗಳನ್ನು ಎದುರಿಸಲಿದ್ದೇವೆ. ಬಜೆಟ್‌ನ ಮೂಲಭೂತ ಸಂದೇಶವೇ ದೇಶಕ್ಕೊಂದು ಸಂಕೇತವನ್ನು ರವಾನಿಸುವುದಾಗಿತ್ತು. ಭಾರತವು ಹಣಕಾಸಿನ ಸ್ಥಿರತೆಯನ್ನು ಸಾಧಿಸುವ ಹೆಜ್ಜೆಯಲ್ಲಿದೆ ಎಂಬುದನ್ನು ಜಗತ್ತಿಗೂ ಸಾರಿ, ಪ್ರಪಂಚದಾದ್ಯಂತದ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡುವಂತೆ ಮಾಡುವುದಾಗಿದೆ.'
ಹೀಗೆ ಹೇಳುತ್ತ ಚಿದಂಬರಂ ಅವರೇನೂ ತಮ್ಮ ಉದ್ದೇಶ ರೇಟಿಂಗ್ ಏಜೆನ್ಸಿಗಳನ್ನು ಮೆಚ್ಚಿಸುವುದಾಗಿತ್ತು ಎಂದು ನೇರವಾಗಿ ಉಲ್ಲೇಖಿಸಲಿಲ್ಲ ನಿಜ. ಆದರೆ, ಆದರೆ ಅರ್ಥ ಅದೇ ಆಗಿತ್ತು. ಬಜೆಟ್‌ನ ಬಗ್ಗೆ ರೇಟಿಂಗ್ ಏಜೆನ್ಸಿಗಳು ಭಾರಿ ಅಸಂತುಷ್ಟಗೊಂಡಿದ್ದೇ ಆದರೆ ಇವರು ವಿದೇಶಿ ಬಂಡವಾಳವನ್ನು ತರುವುದಕ್ಕೆ ಸಾಧ್ಯವಿದೆಯೇ? ವಿದೇಶಿ ಬಂಡವಾಳ ಬಹಳ ಅಗತ್ಯವಿದೆ ಎಂಬ ಪ್ರತಿಪಾದನೆಯನ್ನೇ ಚಿದಂಬರಂ ಮಾಡುತ್ತಿದ್ದಾರೆ. ಅಂದಮೇಲೆ, ನಾನು 'ಭಾರತದ ಜನತೆ'ಯನ್ನು ಉದ್ದೇಶಿಸಿ ಬಜೆಟ್ ಮಂಡಿಸಿದ್ದು ಎಂಬ ಅವರ ಮಾತು ಪೂರ್ಣಸತ್ಯವಾಗುತ್ತದೆಯೇ?
ಎರಡನೇ ಉದಾಹರಣೆ: ನಮ್ಮ ಗತದ ಅರ್ಥನೀತಿಯಲ್ಲಿ ಪ್ರಮಾದವಾಗಿರುವುದು ಎಲ್ಲಿ ಎಂದು ಹ್ಯಾಂಗ್‌ಔಟ್‌ನಲ್ಲಿ ಚಿದಂಬರಂ ಅವರನ್ನು ಕೇಳಲಾಯಿತು. ಅದಕ್ಕೆ ಅವರ ಉತ್ತರ- 'ಏನೋ ಬಹಳ ತಪ್ಪಾಗಿದೆ ಎಂದು ನನಗೇನೂ ಅನ್ನಿಸಿಲ್ಲ. ಆದರೆ ಕೆಲ ಸಂಗತಿಗಳನ್ನು ಸರಿಪಡಿಸಬೇಕಾಗಿದೆ ಎಂಬುದನ್ನು ಒಪ್ಪೋಣ. ಮೊದಲನೆಯದು ವಿತ್ತೀಯ ಕೊರತೆ ಎರಡನೆಯದು ಆಯಾತ ನಿರ್ಯಾತ ಅನುಪಾತ ಕೊರತೆ.'
ಇಲ್ಲಿ ಕೇಳಬೇಕಾದ ಪ್ರಶ್ನೆ ಎಂದರೆ- ಯಾವುದೂ ತೀರ ಪ್ರಮಾದಕ್ಕೆ ಹೋಗಿಲ್ಲ ಎಂಬುದೇ ನಿಜವಾಗಿದ್ದ ಪಕ್ಷದಲ್ಲಿ ಬಿಕ್ಕಟ್ಟಿನ ಭಾವನೆಯೊಂದನ್ನು ಅವರು ಕಟ್ಟಿಕೊಡುತ್ತಿರುವುದಾದರೂ ಏಕೆ? 'ಹಣವೇನೂ ಮರದ ಮೇಲೆ ಬೆಳೆಯದು' ಎಂದು ಪ್ರಧಾನಿ ಹೇಳಿಕೆ ನೀಡುವ ಅಗತ್ಯ ಬಂದಿದ್ದಾದರೂ ಏತಕ್ಕೆ?
ವಾಸ್ತವ ಏನೆಂದರೆ ಇವರದೇ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರು ಇಕನಾಮಿಕ್ ಸರ್ವೇ ಸಿದ್ಧಪಡಿಸಿದ್ದಾರೆ. ಆ ಪ್ರಕಾರ ಲೆಹ್ಮನ್ ಬ್ಯಾಂಕ್ ಬಿಕ್ಕಟ್ಟು ಜಾಗತಿಕ ಮಟ್ಟದಲ್ಲಿ ಹುಟ್ಟುಹಾಕಿದ ಅಲೆಗಳಿಗೆ ನಮ್ಮ ಅರ್ಥವ್ಯವಸ್ಥೆ ಇನ್ನೂ ಚೇತರಿಸಿಕೊಂಡಿಲ್ಲ. ಅದು ಹಣದುಬ್ಬರಕ್ಕೆ ಕಾರಣವಾಗಿದೆ. ಹಾಗೆಂದೇ ಖಾತೆ ಹೊಕ್ಕ ಮರುಕ್ಷಣದಿಂದಲೇ ಚಿದಂಬರಂ ಸಂಘರ್ಷ ಸನ್ನದ್ಧರಾಗಬೇಕಾಯಿತು. ಬಿಕ್ಕಟ್ಟಿಗೆ ಇಕನಾಮಿಕ್ ಸರ್ವೇ ಕಾರಣಗಳನ್ನೂ ನೀಡುತ್ತದೆ. 'ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಬೇಡಿಕೆಯನ್ನು ಚಿಗಿತುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ನೀಡಿದ ಹಣಕಾಸಿನ ಹರಿವು ದೊಡ್ಡದಾಗಿತ್ತು. ಹೀಗಾಗಿ 2009-10 ಮತ್ತು 2011-12ರ ನಡುವೆ ಶೇಕಡ 8ರ ಪ್ರಮಾಣದಲ್ಲಿ ಉಪಭೋಗವು ಬೆಳೆದಿದೆ. ಇದರ ಪರಿಣಾಮವೇ ಹಣದುಬ್ಬರ.'
ಇವೆಲ್ಲದರ ನಡುವೆಯೂ ಚಿದಂಬರಂ ಅವರು ನಾವೆಲ್ಲ 'ಅಂಥದ್ದೇನೂ ಆಗಿಯೇ ಇಲ್ಲ' ಎಂದೇ ನಂಬಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ!
ಮೂರನೇ ಉದಾಹರಣೆ: ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳ ಸುಂಕವನ್ನು ಏಕೆ ಹೆಚ್ಚಿಸಲಾಯಿತು ಎಂಬುದಕ್ಕೆ ಚಿದಂಬರಂ ಅವರು ನೀಡಿದ ಕಾರಣ ಎಂದರೆ- ಡೀಸೆಲ್ ಕಡಿಮೆ ದರದಲ್ಲಿ ಲಭ್ಯವಿರುವುದರಿಂದ ಇಂಥ ಐಷಾರಾಮಿ ವಾಹನಗಳ ಖರೀದಿ ಹೆಚ್ಚಿದೆ; ಅಲ್ಲದೇ ಮೂರು ಶೇಕಡ ದರದ ಏರಿಕೆ ಇವುಗಳನ್ನು ಕೊಳ್ಳುವವರ ಬೇಡಿಕೆಯನ್ನೇನೂ ಕುಗ್ಗಿಸುವುದಿಲ್ಲ.
ಆದರೆ ಈ ನಿಲುವನ್ನು ಅವರು ತಮ್ಮ ಎರಡನೇ ಹೇಳಿಕೆಯಲ್ಲೇ ವಿರೋಧಾಭಾಸಕ್ಕೆ ಈಡು ಮಾಡಿದರು. ಸಾಮಾನ್ಯ ವಾಹನಗಳ ಬೇಡಿಕೆಯಲ್ಲೇಕೆ ಇಳಿಕೆ ಆಗುತ್ತಿದೆ ಎಂದು ಕೇಳಿದಾಗ- ಈ ವಿಭಾಗಕ್ಕೆ ಸಹಾಯ ಬೇಕಿರುವುದು ನಿಜವಾದರೂ ಹೆಚ್ಚಿನ ಬಡ್ಡಿದರವೇ ವ್ಯಾಪಾರದ ಇಳಿಕೆಗೆ ಕಾರಣ ಎಂದರು. ಅಂದರೆ ಎಸ್‌ಯುವಿಗೆ ಕರ ಹೆಚ್ಚಿಸಿದರೆ ಬೇಡಿಕೆ ಕಡಿಮೆಯಾಗದು, ಆದರೆ ಬೇರೆ ವಿಭಾಗದಲ್ಲಿ ದರ ಹೆಚ್ಚಳವೇ ಬೇಡಿಕೆ ಕುಗ್ಗುವುದಕ್ಕೆ ಕಾರಣ....
ಹೀಗೇಕೆ ಮೂರ್ಖರನ್ನಾಗಿಸುವುದಕ್ಕೆ ನೋಡುತ್ತಿದ್ದಾರೆ ಚಿದು?

- ಆರ್. ಜಗನ್ನಾಥನ್
ಫಸ್ಟ್‌ಪೋಸ್ಟ್ ಡಾಟ್ ಕಾಂ
ಸಂಪಾದಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.