ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸದಾನಂದಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಾಲ್ಕು ತಿಂಗಳು ಕಳೆಯುತ್ತಿತ್ತು
ಎಲ್ಲಾ ಕ್ಷೇತ್ರಗಳಂತೆ ರಾಜಕೀಯ ಕ್ಷೇತ್ರವೂ ಬದಲಾಗಿದೆ. ಇನ್ನೊಬ್ಬನ ತಾಕತ್ತು ನನ್ನ ತಾಕತ್ತನ್ನು ಎಲ್ಲಿ ಮುಚ್ಚಿ ಹಾಕಿಬಿಡುತ್ತದೋ ಎಂಬ ಆತಂಕ. ಅವನು ಬೆಳೆದು ನಾನು ಎಲ್ಲಿ ಅಪ್ರಸ್ತುತ ಆಗುತ್ತೇನೋ ಎಂಬ ಭೀತಿ ನಾಯಕತ್ವ ಹೋರಾಟದ 'ಆತ್ಮ' ವಾದಸರಣಿಗೆ ಕಾರಣವಾಗಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅದುವೇ ಪ್ರಮುಖವಾಗಿ ಕೆಲಸ ಮಾಡುತ್ತಿದೆ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಎಂಬ ಸಂಗತಿ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ದೊಡ್ಡ ಸವಾಲಾಗಿ ನಿಂತಿರುವುದು. ಹಾಗೆಂದು ರಾಜ್ಯಾಧ್ಯಕ್ಷರ ಹುದ್ದೆಯ ರೇಸ್‌ನಲ್ಲಿದ್ದವರೆಲ್ಲರೂ ಈ ಸ್ಥಾನದ ಬಗ್ಗೆ ಆಸಕ್ತಿ ಹೊಂದಿಲ್ಲ. ತಮ್ಮ ತಾಕತ್ತಿನ ಬಗ್ಗೆ ಅನುಮಾನ ಹೊಂದಿರುವವರ ಕಾರಣಕ್ಕಾಗಿ ಕಣದಲ್ಲಿದ್ದಾರೆ.
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ರಾಜ್ಯಾಧ್ಯಕ್ಷರ ಹುದ್ದೆ ಎಂಬುದು ಮುಳ್ಳಿನ ಪೀಠ. ಅದರಲ್ಲೂ ಬಿಜೆಪಿಯಲ್ಲಂತೂ ಈ ಹುದ್ದೆ ಹೆಚ್ಚಿನವರಿಗೆ ಬೇಡವಾದ ಕೂಸು. ಈಗಾಗಲೇ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆ ಇದೆ. ಇನ್ನೊಂದೆಡೆ ಭ್ರಷ್ಟಾಚಾರದ ಆರೋಪ, ಆಂತರಿಕ ಬಿಕ್ಕಟ್ಟಿನಿಂದ ಪಕ್ಷ ಒಡೆದು ಹೋಳಾಗಿರುವುದು.. ಹೀಗೆ ಹಲವು ಕಾರಣಗಳಿಂದ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಇಲ್ಲ. ಹೀಗಾಗಿ ಅಧ್ಯಕ್ಷರಾದ ಮೇಲೆ ಚುನಾವಣೆಯಲ್ಲಿ ಸೋತರೆ ಅದರ ಅಪವಾದ ತಮ್ಮ ಮೇಲೆ ಬರುತ್ತದೆ ಎಂಬ ಆತಂಕ ಕಾಡುತ್ತಿದೆ. ಇನ್ನೊಂದೆಡೆ ಚುನಾವಣೆಗೆ ಸಂಪನ್ಮೂಲ ಕ್ರೋಢೀಕರಣ ಮಾಡಬೇಕಾದ ಜವಾಬ್ದಾರಿಯೂ ಅಧ್ಯಕ್ಷರದ್ದೇ ಆಗಿರುತ್ತದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇಷ್ಟೆಲ್ಲಾ ತೊಂದರೆ ತೆಗೆದುಕೊಂಡು ಅಧ್ಯಕ್ಷರಾಗುವುದಾದರೂ ಏಕೆ ಎಂಬ ಪ್ರಶ್ನೆ ಎದುರಾಗಿದೆ. ಆದರೂ ತಮಗೆ ಬೇಡದವರು ಅಧ್ಯಕ್ಷರಾಗಬಾರದು ಎಂಬ ಕಾರಣಕ್ಕಾಗಿಯಾದರೂ ಅಧ್ಯಕ್ಷರ ಹುದ್ದೆಗೆ ಬಲವಂತದ ಸ್ಪರ್ಧೆ ಏರ್ಪಡಿಸಿ, ಈ ಸ್ಥಾನಕ್ಕೆ ಬೇರೆಯವರನ್ನು ಕುಳ್ಳಿರಿಸುವ ಪ್ರಯತ್ನ ನಡೆಯುತ್ತಿದೆ.
ಪ್ರಸ್ತುತ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಡೆಯುತ್ತಿರುವುದು ಕೂಡ ಇದೇ ರಾಜಕೀಯ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಬಾರದು ಎಂಬ ಒಂದೇ ಉದ್ದೇಶ ಆಯ್ಕೆಯನ್ನು ಕಗ್ಗಂಟು ಮಾಡಿದೆ. ಒಬ್ಬರ ನಂತರ ಒಬ್ಬರು ಆಕಾಂಕ್ಷಿಗಳ ಹೆಸರು ಪ್ರಕಟವಾಗುತ್ತಲೇ ಇದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸದಾನಂದಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಾಲ್ಕು ತಿಂಗಳು ಕಳೆಯುತ್ತಿತ್ತು. ಅವರ ಹೆಸರು ಅಂತಿಮಗೊಂಡು ಪಕ್ಷದ ವರಿಷ್ಠರೂ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಇನ್ನೇನು ಸದಾನಂದಗೌಡ ಅವರ ಹೆಸರು ಘೋಷಣೆಯಾಗಬೇಕು ಎನ್ನುವಷ್ಟರಲ್ಲಿ ಅದಕ್ಕೆ ಅಡ್ಡಗಾಲು ಹಾಕಲಾಯಿತು. ಹೀಗಾಗಿ ಆಯ್ಕೆ ನೆನೆಗುದಿಗೆ ಬಿತ್ತು. ಈಗಲೂ ವರಿಷ್ಠರ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಲಾಲ್‌ಕೃಷ್ಣ ಆಡ್ವಾಣಿ, ರಾಜನಾಥ್ ಸಿಂಗ್ ಸೇರಿದಂತೆ ಬಹುತೇಕ ನಾಯಕರಿಗೆ ಸದಾನಂದಗೌಡರು ಅಧ್ಯಕ್ಷರಾಗುವ ಬಗ್ಗೆ ಸಹಮತ ಇದೆ. ಆದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅನಂತ ಕುಮಾರ್ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರಿಗೆ ಮಾತ್ರ ಸದಾನಂದಗೌಡರ ಆಯ್ಕೆ ಎಂಬುದು ಮೊಸರೊಳಗಿನ ಕಲ್ಲು. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ 11 ತಿಂಗಳ ಅವಧಿಯಲ್ಲಿ ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲವಾದರೂ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸಿದ್ದರು. ಅಧಿಕಾರದಲ್ಲಿದ್ದಾಗ ಯಾರ ಹದ್ದುಬಸ್ತಿನಲ್ಲೂ ಇರಲಿಲ್ಲ. ಹೀಗಿರುವಾಗ ಅಧ್ಯಕ್ಷರಾದ ಮೇಲೆ ಯಾರ ಮೂಲಾಜಿಗೂ ಒಳಗಾಗುವುದಿಲ್ಲ. ತಮ್ಮ ಬೇಳೆ ಬೇಯುವುದಿಲ್ಲ ಎಂಬ ಕಾರಣಕ್ಕೆ ಸದಾನಂದಗೌಡರು ರಾಜ್ಯಾಧ್ಯಕ್ಷರಾಗುವುದನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಅನಂತಕುಮಾರ್ ಅವರಿಗೆ ನೆನಪಾದದ್ದು ಹುಬ್ಬಳ್ಳಿ ಸಂಸದ ಪ್ರಹ್ಲಾದ ಜೋಶಿ. ಆರಂಭದಲ್ಲಿ ಹೆಸರು ಪ್ರಸ್ತಾಪಿಸಿದರಾದರೂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ಜೋಶಿ ಹೆಸರು ಕೈಬಿಟ್ಟರು. ಶೆಟ್ಟರ್ ಮತ್ತು ಜೋಶಿ ಒಂದೇ ಜಿಲ್ಲೆಯವರಾಗುತ್ತಾರೆ ಎಂಬುದು ಒಂದು ಕಾರಣವಾರೂ ಅನಂತಕುಮಾರ್ ಮತ್ತು ಜೋಶಿ ಒಂದೇ ಜನಾಂಗಕ್ಕೆ ಸೇರಿದವರು. ಜನಾಂಗದಲ್ಲಿ ತಮಗೆ ಪರ್ಯಾಯವಾಗಿ ಇನ್ನೊಬ್ಬ ಬೆಳೆಯುವುದು ಅವರಿಗೆ ಬೇಕಾಗಿರಲಿಲ್ಲ. ಹೀಗಾಗಿ ಜೋಶಿ ಹೆಸರು ಭೂಗತವಾಗಿ ಗೋವಿಂದ ಕಾರಜೋಳ ಅವರ ಹೆಸರು ಕೇಳಿಬಂತು. ಆದರೆ, ಈ ಹೆಸರು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಜತೆಗೆ ಆರ್‌ಎಸ್‌ಎಸ್ ಅಭಿಪ್ರಾಯವೂ ಬಹುಮುಖ್ಯವಾಗುತ್ತದೆ. ಮೇಲಾಗಿ ಸಂಘ ಪರಿವಾರದ ಮೂಲದಿಂದ ಬಂದವರಿಗೆ ಮಾತ್ರ ಅಧ್ಯಕ್ಷ ಸ್ಥಾನ ನೀಡುವುದು ಇದುವರೆಗೆ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಹೀಗಾಗಿ ಕಾರಜೋಳ ಅವರ ಹೆಸರಿಗೆ ಆರ್‌ಎಸ್‌ಎಸ್ ಆಗಲೀ, ಪಕ್ಷದ ವರಿಷ್ಠರಾಗಲೀ ಸ್ಪಂದಿಸಲೇ ಇಲ್ಲ.
ಇಷ್ಟರ ಮಧ್ಯೆ ಸದಾನಂದಗೌಡರ ಬಗ್ಗೆ ಸಹಮತ ಹೊಂದಿರದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಅಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಪ್ರಸ್ತಾಪಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪ್ರಬಲರಾಗಿರುವ ಬಂಟರ ಜನಾಂಗಕ್ಕೆ ಸೇರಿದ ಕಟೀಲ್ ಅವರು ಕಟ್ಟರ್ ಹಿಂದುತ್ವವಾದಿ. ಜತೆಗೆ ಯುವಕರೂ ಹೌದು. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಕಟೀಲ್ ಆಯ್ಕೆ ಒಳ್ಳೆಯದು ಎಂಬ ಪ್ರಸ್ತಾಪವನ್ನು ಮುಂದಿಟ್ಟರು. ಇದರ ಹಿಂದೆ ಸದಾನಂದಗೌಡರು ಪಕ್ಷದ ಅಧ್ಯಕ್ಷರಾಗಬಾರದು ಎಂಬ ಉದ್ದೇಶವಿತ್ತೇ ಹೊರತು ಕಟೀಲ್ ಅವರ ಬಗ್ಗೆ ವಿಶೇಷ ಪ್ರೀತಿಯೇನೂ ಇರಲಿಲ್ಲ. ಏಕೆಂದರೆ, ಯಡಿಯೂರಪ್ಪ ಅವರು ಬಿಜೆಪಿಯಿಂದ ದೂರವಾದ ಬಳಿಕ ಪಕ್ಷದ ಹಿಡಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವ ಸಂತೋಷ್ ಅವರಿಗೆ ಸದಾನಂದಗೌಡರು ಮಗ್ಗುಲ ಮುಳ್ಳಾಗುವ ಸಾಧ್ಯತೆ ಇದೆ ಎಂಬ ಆತಂಕ ಕಾಣಿಸಿಕೊಳ್ಳಲಾರಂಭಿಸಿತು. ಹೀಗಾಗಿ ಹೇಗಾದರೂ ಮಾಡಿ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಪ್ರಯತ್ನ ಆರಂಭಿಸಿದರು. ತಮಗೆ ಬೆಂಬಲವಾಗಿ ಪಕ್ಷದ ವಿಭಾಗ ಪ್ರಭಾರಿಗಳ ನೆರವು ಪಡೆದುಕೊಂಡರು.
ಇದೆಲ್ಲದರ ಮಧ್ಯೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಉಪಮುಖ್ಯಮಂತ್ರಿ ಆರ್. ಅಶೋಕ ಅವರ ಹೆಸರನ್ನು ಪ್ರಸ್ತಾಪಿಸಲಾಯಿತು. ಈ ಹೆಸರನ್ನು ತೇಲಿಬಿಟ್ಟವರು ಕೂಡ ಅನಂತಕುಮಾರ್ ಕಡೆಯವರು ಎನ್ನುವುದು ಮುಖ್ಯ. ಏಕೆಂದರೆ, ಪ್ರಹ್ಲಾದ ಜೋಷಿ ಮತ್ತು ಗೋವಿಂದ ಕಾರಜೋಳ ಅವರ ಹೆಸರು ಭೂಗತವಾದ ಮೇಲೆ ಸದಾನಂದಗೌಡರಿಗೆ ಪ್ರತಿಸ್ಪರ್ಧಿಯಾಗಿ ಯಾರಾದರೂ ಒಬ್ಬರು ಬೇಕಿತ್ತು. ನಳಿನ್‌ಕುಮಾರ್ ಕಟೀಲ್ ಬಗ್ಗೆ ಬೇಸರವಿಲ್ಲವಾದರೂ ಅವರು ಸಂತೋಷ್ ಕಡೆಯ ಅಭ್ಯರ್ಥಿ ಎಂಬ ಒಂದೇ ಕಾರಣ ಈ ಹೆಸರು ಅನಂತ್‌ಕುಮಾರ್ ಬಣಕ್ಕೆ ಅಪಥ್ಯವಾಯಿತು. ಆದರೆ, ಅಶೋಕ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಬೇಡವಾಗಿತ್ತು. ಏಕೆಂದರೆ, ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡುವುದು, ಸಂಪನ್ಮೂಲ ಕ್ರೋಢೀಕರಣ ಮುಂತಾದ ಜವಾಬ್ದಾರಿಗಳು ಅವರಿಗೆ ಕಷ್ಟ ಎನ್ನುವಂತಿತ್ತು. ಅದಕ್ಕಿಂತಲೂ ಮುಖ್ಯವಾಗಿ ಚುನಾವಣೆಯಲ್ಲಿ ಸೋತರೆ ಆ ಅಪವಾದವನ್ನೂ ಹೊತ್ತುಕೊಳ್ಳಬೇಕಾಗುತ್ತದೆ ಎಂಬ ಆತಂಕವೂ ಇತ್ತು. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದ ಜತೆಗೆ ಗೃಹ ಅಥವಾ ಸಾರಿಗೆ ಖಾತೆಯನ್ನು ಇಟ್ಟುಕೊಳ್ಳುತ್ತೇನೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಕಿದ್ದರೆ ರಾಜಿನಾಮೆ ಕೊಡುತ್ತೇನೆ ಎಂದರು. ಆದರೆ, ರಾಜ್ಯಾಧ್ಯಕ್ಷರಾದವರು ಬೇರೆ ಯಾವ ಜವಾಬ್ದಾರಿಯನ್ನೂ ಇಟ್ಟುಕೊಳ್ಳದೆ ಚುನಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಅಶೋಕ ಅವರ ಹೆಸರೂ ಕೈಬಿಟ್ಟುಹೋಯಿತು.
ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಉಳಿದದ್ದು ಸದಾನಂದಗೌಡ ಮತ್ತು ನಳಿನ್‌ಕುಮಾರ್ ಕಟೀಲ್ ಅವರ ಹೆಸರು ಮಾತ್ರ. ಸದಾನಂದಗೌಡರಿಗೆ ರಾಜ್ಯ ಬಿಜೆಪಿಯ ನಾಯಕರು ಮತ್ತು ಸಂಘ ಪರಿವಾರದ ಬೆಂಬಲವಿದ್ದರೆ, ಕಟೀಲ್ ಅವರ ಪರವಾಗಿ ಸಂತೋಷ್ ನಿಂತಿದ್ದಾರೆ. ಸಂತೋಷ್ ಅವರ ಮಾತಿಗೆ ವರಿಷ್ಠರು ಕೂಡ ಎದುರು ಮಾತನಾಡುವುದಿಲ್ಲ. ಹೀಗಾಗಿ ಈ ಇಬ್ಬರ ಪೈಕಿ ಒಬ್ಬರು ಆಯ್ಕೆಯಾಗುವುದು ನಿಶ್ಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ಇವರಿಬ್ಬರೂ ಕರಾವಳಿಯವರು ಮತ್ತು ಕಟ್ಟಾ ಸಂಘ ಪರಿವಾರದವರು. ಹೀಗಾಗಿ ಇವರು ಅಧ್ಯಕ್ಷರಾದರೆ ಕಷ್ಟ ಎನ್ನುವಾಗ ಮತ್ತೆ ಅನಂತಕುಮಾರ್ ಮತ್ತು ಅವರ ಬಣಕ್ಕೆ ನೆನಪಾಗಿದ್ದು ಗೋವಿಂದ ಕಾರಜೋಳ ಅವರ ಹೆಸರು. ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಣಾಯಕವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಕಾರಜೋಳ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಆ ಜನಾಂಗದ ಒಂದು ಗುಂಪು ಬಿಜೆಪಿ ಜತೆ ನಿಲ್ಲುತ್ತದೆ ಎಂಬ ವಿಚಾರವನ್ನಿಟ್ಟುಕೊಂಡು ವರಿಷ್ಠರ ಮುಂದೆ ನಿಂತಿದ್ದಾರೆ.
ಇನ್ನೊಂದೆಡೆ ಪಕ್ಷದ ರಾಜ್ಯ ಮುಖಂಡರು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂಬ ನಿರ್ಣಯ ಕೈಗೊಂಡು ವರಿಷ್ಠರಿಗೆ ರವಾನಿಸಿದ್ದಾರೆ. ಅಲ್ಲದೆ, ಈ ಕುರಿತು ವರಿಷ್ಠರೇ ಒಂದು ನಿರ್ಧಾರ ಕೈಗೊಳ್ಳಬೇಕು. ಅದಕ್ಕೆ ಎಲ್ಲರ ಸಹಮತವೂ ಇದೆ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯ ರಾಷ್ಟ್ರೀಯ ನಾಯಕರು ಮತ್ತು ಆರ್‌ಎಸ್‌ಎಸ್ ಮಾತ್ರ ಸಂಘ ಪರಿವಾರದಿಂದ ಬಂದವರೇ ರಾಜ್ಯಾಧ್ಯಕ್ಷರಾಗಬೇಕು ಎಂಬ ಸ್ಪಷ್ಟ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷರ ಆಯ್ಕೆ ಎಂಬುದು ಅವರ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಆದ್ದರಿಂದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸದಾನಂದಗೌಡ ಅಥವಾ ನಳಿನ್‌ಕುಮಾರ್ ಕಟೀಲ್ ಅವರಲ್ಲಿ ಒಬ್ಬರ ಬಗ್ಗೆ ಸಹಮತ ವ್ಯಕ್ತವಾಗದೇ ಇದ್ದಲ್ಲಿ ಹಾಲಿ ಅಧ್ಯಕ್ಷರಾಗಿರುವ ಕೆ.ಎಸ್. ಈಶ್ವರಪ್ಪ ಅವರೇ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಮುಂದುವರಿಯಲಿ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದ್ದರಿಂದ ಸೋಮವಾರ ಅಥವಾ ಮಂಗಳವಾರದವರೆಗೆ ಕಾದು ಅಧ್ಯಕ್ಷರ ಆಯ್ಕೆ ಕುರಿತಂತೆ ಸಹಮತ ಮೂಡಿಸುವ ಪ್ರಯತ್ನ ಮಾಡಲಿದ್ದಾರೆ. ನಂತರವಷ್ಟೇ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಇದೆಲ್ಲದರ ನಡುವೆ ರಾಜ್ಯ ಬಿಜೆಪಿಯಲ್ಲಿ ಹೊಸ ಆತಂಕ ಕಾಣಿಸಿಕೊಂಡಿದೆ. ಇಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠರಾಗಿರುವವರಿಗೇ ಆದ್ಯತೆ ಸಿಗುತ್ತಿದೆ ಎಂಬ ಮಾತು ಕೇಳಿಬರಲಾರಂಭಿಸಿದೆ. ಏಕೆಂದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊಸ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದಾಗ ಪಕ್ಷದ ಅಭ್ಯರ್ಥಿಯಾಗಿದ್ದವರು ಜಗದೀಶ್ ಶೆಟ್ಟರ್. ಆದರೆ, ಯಡಿಯೂರಪ್ಪ ಮತ್ತು ಅವರಿಗೆ ನಿಷ್ಠರಾಗಿದ್ದ ಶಾಸಕರು ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದರು. ನಂತರದಲ್ಲಿ ಸದಾನಂದಗೌಡರಿಗೆ ಪಕ್ಷ ಬೆಂಬಲಕ್ಕಿತ್ತಾದರೂ ಯಡಿಯೂರಪ್ಪ ಮತ್ತು ಅವರ ನಿಷ್ಠ ಶಾಸಕರು ಕಾರಣಾಂತರಗಳಿಂದ ಪಕ್ಷದ ಆಶಯಗಳಿಗೆ ವಿರುದ್ಧವಾಗಿ ಸದಾನಂದಗೌಡರನ್ನು ಅಧಿಕಾರದಿಂದ ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದರು. ಇದೀಗ ಯಡಿಯೂರಪ್ಪ ಅವರು ಪಕ್ಷ ತ್ಯಜಿಸಿದ ಬಳಿಕ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲೂ ಅದೇ ಪರಿಸ್ಥಿತಿ ಇದೆ. ಕಾರ್ಯಕರ್ತರ ಈ ಆತಂಕಕ್ಕೆ ಕಾರಣ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅನಂತಕುಮಾರ್ ಮತ್ತು ಸಂತೋಷ್ ಅವರ ವೈಯಕ್ತಿಕ ಪ್ರತಿಷ್ಠೆ ಕೆಲಸ ಮಾಡುತ್ತಿರುವುದು. ಇದರಿಂದ ಪಕ್ಷಕ್ಕೆ ಹಾನಿಯುಂಟಾಗುವುದೋ ಎಂಬ ಭೀತಿ ಅವರನ್ನು ಕಾಡುತ್ತಿದೆ.
ಲಗೋರಿ: ಸ್ವಂತ ಶಕ್ತಿಯ ಮೇಲೆ ನಂಬಿಕೆ ಇಲ್ಲದವನು ಪರಾಶಕ್ತಿಯ ಬಗ್ಗೆ ಚಿಂತಿತನಾಗಿರುತ್ತಾನೆ.
- ಪಿ. ತ್ಯಾಗರಾಜ್
thyagarjun@gmail.com