ಈ ಕೈದಿಗಳನ್ನು ಕೇಳುವವರೇ ಇಲ್ಲ! ಸುದ್ದಿ ಕತೆ
ಇಟಲಿಯ ನಾಗರಿಕರು ನಿಜಕ್ಕೂ ಅದೃಷ್ಟವಂತರು.
ಅವರನ್ನು ಭಾರತಕ್ಕೆ ವಾಪಸ್ಸು ಕಳಿಸದೆ ರಾಜತಾಂತ್ರಿಕ ಬಿಸಿಯನ್ನು ಎದುರಿಸಲು ಇಟಲಿ ಸರ್ಕಾರ ಸಿದ್ಧವಾಯಿತು ಎನ್ನುವ ಕಾರಣಕ್ಕಷ್ಟೇ ಅಲ್ಲ. ಇಡೀ ಪ್ರಕ್ರಿಯೆಯಲ್ಲಿ ಅವರನ್ನು ವಿಶೇಷ ಕೈದಿಗಳಾಗಿ ನೋಡಿಕೊಳ್ಳಲಾಯಿತು, ಎನ್ನುವ ಕಾರಣಕ್ಕೆ. ಜೈಲಿನಲ್ಲಿ ಕೊಡಲಾಗುತ್ತಿರುವ ಚಿಕನ್ ಕರಿ ತಿಂದು ಅವರ ಹೊಟ್ಟೆ ಕೆಟ್ಟ ವಿಷಯವೂ ನಮ್ಮಲ್ಲಿ ಪ್ರಮುಖ ಸುದ್ದಿಯಾಯಿತು. ಕ್ರಿಸ್ಮಸ್ ಆಚರಿಸಲು ಒಮ್ಮೆ ಮತ್ತು ಮತದಾನ ಮಾಡಲು ಇನ್ನೊಮ್ಮೆ ದೇಶಕ್ಕೆ ತೆರಳುವ ಅವಕಾಶವನ್ನೂ ಅವರು ಪಡೆದರು.
ಆದರೆ ಭಾರತದ ಜೈಲುಗಳಲ್ಲಿರುವ ಎಲ್ಲಾ ವಿದೇಶಿಯರಿಗೂ ಈ ಥರದ್ದೇ ಸವಲತ್ತುಗಳಿರುತ್ತವೆಯೇ?
'ಶಿಕ್ಷೆಯ ಅವಧಿ ಮುಗಿಸಿದ ನಂತರವೂ ಅವರಿಗೆ ಮನಗೆ ಹೋಗಲಾಗುತ್ತಿಲ್ಲ. ಇನ್ನು ಹಬ್ಬಕ್ಕೆ ಮನೆಗೆ ಕಳಿಸಲಾಗುತ್ತದೆಯೇ?' ಎಂದು ಈ ಪ್ರಶ್ನೆಗೆ ಉತ್ತರಿಸುತ್ತಾರೆ ಸಿಎಚ್ಆರ್ಐದ ಸಂಯೋಜಕಿ ಸನಾ ದಾಸ್. 2011ರ ರಾಷ್ಟ್ರೀಯ ಅಪರಾಧ ಸಮಿತಿಯ ದಾಖಲೆಗಳಲ್ಲಿರುವ ಅಂಕಿ ಅಂಶಗಳ ಪ್ರಕಾರ, ಭಾರತದ ಜೈಲುಗಳಲ್ಲಿ ಸುಮಾರು 5,621 ವಿದೇಶಿ ಕೈದಿಗಳಿದ್ದಾರೆ, ಆದರೆ ಇವರ್ಯಾರಿಗೂ 'ಇಟಾಲಿಯನ್ ಸತ್ಕಾರ' ಅನುಭವಿಸುವ ಪುಣ್ಯವಿಲ್ಲ.
ಭಾರತದ ಜೈಲುಗಳಲ್ಲಿರುವ ಸಾಮಾನ್ಯ ವಿದೇಶಿ ಕೈದಿಗಳ ವೇದನೆ ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ. ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಶಿಕ್ಷೆಯ ಅವಧಿ ಮುಗಿದ ನಂತರವೂ 320 ಜನ ಹಲವು ವರ್ಷಗಳಿಂದ ಜೈಲಿನಲ್ಲೇ ಇದ್ದಾರೆ. ಇಬ್ಬರು ನೈಜೀರಿಯನ್ನರು, ಇಬ್ಬರು ಮ್ಯಾನ್ಮಾರ್ ನಾಗರಿಕರು, ಒಬ್ಬ ಉಕ್ರೇನಿಯನ್ ಮತ್ತು ಒಬ್ಬ ಲೆಸೋಥೋ ಪ್ರಜೆಯನ್ನು ಬಿಟ್ಟರೆ ಉಳಿದವರೆಲ್ಲರೂ ಬಾಂಗ್ಲಾದೇಶಿಯರೇ.
ಈ ಮ್ಯಾನ್ಮಾರಿಗರು ಹೆಚ್ಚುವರಿ 9 ವರ್ಷ ಜೈಲು ವಾಸ ಅನುಭವಿಸಿದ್ದರೆ, ಉಕ್ರೇನಿಯನ್ ನಾಗರಿಕನ ಶಿಕ್ಷಾವಧಿ ಮುಗಿದು 12 ವರ್ಷಗಳಾದರೂ ಇನ್ನೂ ಜೈಲಿನಲ್ಲೇ ಇದ್ದಾನೆ. 2012ರಲ್ಲಿ ಸುಪ್ರೀಂ ಕೋರ್ಟ್ ಭಾರತದ ಜೈಲುಗಳಲ್ಲಿರುವ ವಿದೇಶಿಯರ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕೆಂದು ಸರ್ಕಾರಕ್ಕೆ ಆಜ್ಞೆ ನೀಡಿತ್ತು. ಮೂವರು ಪಾಕಿಸ್ತಾನಿಗಳು ಕಳೆದ 45 ವರ್ಷಗಳಿಂದ ಜಮ್ಮು ಜೈಲಿನಲ್ಲಿ ಬಂಧಿಯಾಗಿರುವ ಸುದ್ದಿ ಆಗ ಹೊರಬಂದಿತು.
'ಒಂದು ಸ್ಪಷ್ಟ ಕಾರ್ಯನಿರ್ವಹಣಾ ವಿಧಾನದ ಕೊರತೆಯೇ ವಿದೇಶಿ ಕೈದಿಗಳ ವಾಪಸಾತಿಗೆ ಅಡ್ಡಿಯಾಗುತ್ತಿದೆ' ಎನ್ನುತ್ತಾರೆ ಸನಾ ದಾಸ್. 'ಆದರೆ ಬಾಂಗ್ಲಾದೇಶದ ವಿಷಯವಂತೂ ಭಿನ್ನವಾಗಿದೆ' ಎನ್ನುವ ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿ ಶಶಾಂಕ್ 'ಈ ಕೈದಿಗಳು ನಮ್ಮ ದೇಶದವರಲ್ಲ ಎಂದು ಬಾಂಗ್ಲಾದೇಶ ಹೇಳುತ್ತದೆ. ಶುಕ್ಲಾ ಘೋಷ್ ಎನ್ನುವ ಮಹಿಳೆಯ ಶಿಕ್ಷೆಯ ಅವಧಿ ಕೊನೆಗೊಂಡು 13 ವರ್ಷಗಳೇ ಕಳೆದುಹೋದವು. ಆದರೆ ಆಕೆಯನ್ನು ತಮ್ಮ ದೇಶದವಳು ಎಂದು ಅತ್ತ ಪಾಕಿಸ್ತಾನವೂ ಒಪ್ಪಿಕೊಳ್ಳುತ್ತಿಲ್ಲ, ಇತ್ತ ಬಾಂಗ್ಲಾದೇಶವೂ ಒಪ್ಪಿಕೊಳ್ಳುತ್ತಿಲ್ಲ. ಆಕೆಯ ಜವಾಬ್ದಾರಿ ತೆಗೆದುಕೊಳ್ಳಲು ಯಾವುದಾದರೂ ಎನ್ಜಿಒ ಅಥವಾ ಯಾರಾದರೂ ಭಾರತೀಯ ನಾಗರಿಕರು ಮುಂದೆ ಬರುತ್ತಾರೇನೋ ಎಂದು ಗೃಹ ಸಚಿವಾಲಯ ಕಾಯುತ್ತಿದೆ ಎಂದು 2012ರಲ್ಲಿ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿತ್ತು' ಎನ್ನುತ್ತಾರೆ. ಈ ನಡುವೆ ನ್ಯಾಯಾಲಯದ ಆದೇಶದಂತೆ ಪಂಜಾಬ್ ಸರ್ಕಾರ 2006 ರಿಂದ ಆಕೆಯ ಖಾತೆಗೆ ಪ್ರತಿದಿನವೂ 100 ರುಪಾಯಿ ಜಮೆ ಮಾಡುತ್ತಿದೆ. 'ವಿರೋಧಾಭಾಸವೆಂದರೆ, ಬಂಧಿಸುವಾಗ ಅವರನ್ನು ಬಾಂಗ್ಲಾದೇಶಿಯೆಂದೇ ಪರಿಗಣಿಸಲಾಗುತ್ತದೆ ಆದರೆ ಬಿಡುಗಡೆ ಮಾಡಬೇಕು ಎಂದುಕೊಳ್ಳುವಾಗ ಮಾತ್ರ ಅವರ ರಾಷ್ಟ್ರೀಯತೆ ಯಾವುದೆಂದು ತಿಳಿಯುವುದಿಲ್ಲ! ಹಾಗಾಗೇ ಅವರು ಎಲ್ಲಿಗೂ ಹೋಗಲಾರರು. ಗೃಹ ಸಚಿವಾಲಯದಿಂದ ಹಿಡಿದು ವಿದೇಶಾಂಗ ಸಚಿವಾಲಯದವರೆಗಿನ ಬಹಳಷ್ಟು ಇಲಾಖೆಗಳನ್ನು ಈ ವಿಷಯ ಹಾದು ಹೋಗಬೇಕಾಗಿರುವುದರಿಂದ ಕೈದಿಯೊಬ್ಬ ಬಿಡುಗಡೆಯಾಗುವುದಕ್ಕೂ 3-6 ತಿಂಗಳ ಮೊದಲೇ ಎಲ್ಲಾ ಪ್ರಕ್ರಿಯೆಗಳೂ ಆರಂಭಿಸಬೇಕು' ಎನ್ನುತ್ತಾರೆ ದಾಸ್.
ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ, ಕೆ.ಟಿ.ಎಸ್. ತುಳಸಿ-'ಭಾರತೀಯ ನ್ಯಾಯ ವ್ಯವಸ್ಥೆಯ ಕರುಳಿನಲ್ಲಿ ಸಿಕ್ಕಿಹಾಕಿಕೊಳ್ಳುವ ವಿದೇಶಿಗರು ಹೊರಬರಲಾರದೆ ಒದ್ದಾಡಿಹೋಗುತ್ತಾರೆ. ಭಯೋತ್ಪಾದನೆ ಅಥವಾ ಬೃಹತ್ ಪ್ರಮಾಣದ ಮಾದಕ ವಸ್ತು ಸಾಗಣೆಯ ವಿಷಯದಲ್ಲಿ ಇವರುಗಳು ಸಿಕ್ಕಿಬಿದ್ದಿರುವುದಿಲ್ಲ. ಸರಿಯಾದ ಗುರುತು ಪತ್ರಗಳಿಲ್ಲದೆ ಅಥವಾ ಚಿಕ್ಕ ಪುಟ್ಟ ಮಾದಕ ವ್ಯವಹಾರವೆಸಗಿ ಜೈಲಿಗೆ ಬಂದಿರುತ್ತಾರೆ. ವಿಚಾರಣೆಗಾಗಿ ಕಾಯುವುದರಲ್ಲೇ ತಾವೆಸಗಿದ ಅಪರಾಧಕ್ಕಿಂತ ಹೆಚ್ಚಿನ ಶಿಕ್ಷೆ ಅನುಭವಿಸಿಬಿಟ್ಟಿರುತ್ತಾರೆ' ಎನ್ನುತ್ತಾರೆ.
2011ರ ಎನ್ಸಿಆರ್ಬಿ ಅಂಕಿಅಂಶಗಳು ಭಾರತದಲ್ಲಿ ಅಪರಾಧಿಯೆಂದು ಪರಿಗಣಿತವಾದ ವಿದೇಶಿಯರು 2,020 ಮಂದಿಯಿದ್ದರೆ, ವಿಚಾರಣಾಧೀನ ಕೈದಿಗಳ ಸಂಖ್ಯೆ 3,601 ಎಂದು ಹೇಳುತ್ತದೆ. ಇಟಾಲಿಯನ್ ಕೈದಿಗಳಂತೆ ಜಾಮೀನು ಅರ್ಜಿಯನ್ನು ತೋರಿಸಿ ಎದ್ದು ಹೋಗುವುದು ಉಳಿದವರಿಗೆ ಸಾಧ್ಯವಿಲ್ಲ. 'ತನ್ನ ನಾಲ್ಕು ವರ್ಷದ ಮಗಳ ಮೇಲೆ ದೌರ್ಜನ್ಯ ಎಸಗಿದ ಕಾರಣಕ್ಕಾಗಿ ಜೈಲಿನಲ್ಲಿರುವ ಫ್ರೆಂಚ್ ರಾಯಭಾರಿ ಪ್ಯಾಸ್ಕಲ್ ಕೂಡ ಬೆಂಗಳೂರನ್ನು ಬಿಟ್ಟು ಹೊರಗೆ ಹೋಗಲಾರ' ಎನ್ನುತ್ತಾರೆ ವಕೀಲ ಅಜಯ್ ವರ್ಮ.
'ಬಹುತೇಕ ವಿದೇಶಿಯರು ನಿರ್ಲಜ್ಜ ವಕೀಲರಿಂದ ಲೂಟಿಗೊಳಲಾಗುತ್ತಾರೆ. ಹಾಗೆ ನೋಡಿದರೆ ಈ ವಿದೇಶಿಯರಲ್ಲಿ ಬಹುತೇಕರು ಕೆಲಸ ಹುಡುಕಿಕೊಂಡು ಬಂದವರೋ ಅಥವಾ ಮೀನುಗಾರರೋ ಇಲ್ಲವೇ ವಿದ್ಯಾರ್ಥಿಗಳೇ ಇರುತ್ತಾರೆ. ಬಹಳಷ್ಟು ಜನ ದಂಡ ತೆರುವುದಕ್ಕೆ ಅಸಮರ್ಥರಾಗಿರುವ ಕಾರಣ ಜೈಲು ಸೇರುತ್ತಾರೆ.' ಸರಿಯಾದ ಕಾಗದ ಪತ್ರಗಳಿಲ್ಲವೆಂಬ ಕಾರಣಕ್ಕೆ ಅವರನ್ನು ಬಂಧಿಸಲಾಗುತ್ತದೆ, ಅದರ ಬದಲು ಅವರನ್ನು ಅವರ ದೇಶಕ್ಕೆ ವಾಪಸ್ ಕಳಿಸಿಬಿಟ್ಟರೆ ಸಮಸ್ಯೆಯೇ ಇರುವುದಿಲ್ಲ' ಎನ್ನುತ್ತಾರೆ ದಾಸ್. ಅವರಿಗಾಗಿ ಜೈಲಿನ ಹೊರಗೆ ಕಾದು ಕುಳಿತುಕೊಳ್ಳುವ ಕುಟುಂಬವಿರುವುದಿಲ್ಲ, ಹೊರ ಬರುವ ತೀವ್ರ ತುಡಿತ ಇವರಲ್ಲಿರುತ್ತದೆ. ಹಾಗಾಗೇ ಸುಲಭವಾಗಿ ದುಡ್ಡು ಮಾಡಿಕೊಳ್ಳುವ ವಕೀಲರುಗಳಿಗೆ ಇವರು ಸಿಕ್ಕಿಬೀಳುತ್ತಾರೆ.
ಭಾರತದ ಜೈಲುಗಳಲ್ಲಿರುವ ವಿದೇಶಿ ಕೈದಿಗಳ ಕುರಿತಾದ ಕತೆಗಳೆಲ್ಲ ಆಹಾರ ಮತ್ತು ಭಾಷೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಸಾಬರಮತಿ ಜೈಲಿನಲ್ಲಿರುವ ನೈಜೇರಿಯಾದ ಕೈದಿಯೊಬ್ಬ ವೆಜಿಟೇರಿಯನ್ ಫುಡ್ನಿಂದ ಎಷ್ಟೊಂದು ಬೇಸತ್ತಿದ್ದನೆಂದರೆ, 2010ರಲ್ಲಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದ! 'ಬಹಳಷ್ಟು ವಿದೇಶಿ ಕೈದಿಗಳಿಗೆ ನಾವು ಕೊಡುವ ಊಟ ಸೇರುವುದೇ ಇಲ್ಲ. ಹಾಗಾಗಿ ಸಿಟ್ಟು ಬಂದಾಗಲೆಲ್ಲ ತಟ್ಟೆಯನ್ನು ಬಿಸಾಡುವುದು ಸಾಮಾನ್ಯ ದೃಶ್ಯ' ಎನ್ನುತ್ತಾರೆ ಚಂಚಲಗೂಡಾ ಜೈಲಿನ ಅಧಿಕಾರಿಗಳು. ಜೈಲಿನ ಅನಾನುಕೂಲತೆಗಳು ವಿದೇಶಿ ಕೈದಿಗಳಿಗೆ ದೊಡ್ಡ ಸಮಸ್ಯೆಯೇ ಅಲ್ಲ ಎನ್ನುತ್ತಾರೆ ವರ್ಮಾ- 'ಕೆಲವೊಂದು ಸಂದರ್ಭದಲ್ಲಿ ಉಳಿದ ಕೈದಿಗಳಿಗಿಂತ ಅವರ ಬಗ್ಗೆಯೇ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ದೆಹಲಿಯ ಜೈಲೊಂದರಲ್ಲಿ ಹೆಚ್ಐವಿ ಪೀಡಿತ ನೈಜೀರಿಯಾದ ಮಹಿಳಾ ಕೈದಿಯನ್ನು ಭೇಟಿಯಾಗಿದ್ದೆ. ಜೈಲಿನ ಅಧಿಕಾರಿಗಳು ಉತ್ತಮವಾಗಿ ಆಕೆಯ ಆರೈಕೆ ಮಾಡುತ್ತಿದ್ದರು. ಆದರೆ ನೈಜಿರಿಯಾದ ರಾಯಭಾರಿಗೆ ಆಕೆಯ ಪರಿಸ್ಥಿತಿಯ ಅರಿವಿದ್ದರೂ, ತಲೆಕೆಸಿಕೊಂಡಿಲ್ಲ. ಎಲ್ಲಾ ರಾಷ್ಟ್ರಗಳ ಪ್ರತಿಕ್ರಿಯೆ ಒಂದೇ ತೆರನಾಗಿರುವುದಿಲ್ಲ. ಯುರೋಪಿಯನ್ ನಾಗರಿಕನೊಬ್ಬ ವಿದೇಶದಲ್ಲಿ ಬಂಧಿತನಾದರೆ ಆ ವಿಷಯವನ್ನು ಆ ರಾಷ್ಟ್ರಗಳು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತವೆ. ಆದರೆ ಕೀನ್ಯಾ ಮತ್ತು ನೈಜೀರಿಯನ್ ರಾಷ್ಟ್ರಗಳಿಗೆ ಈ ವಿಷಯದಲ್ಲಿ ಹೆಚ್ಚು ಅಸಡ್ಡೆ. ಚಂಚಲಗೂಡಾ ಜೈಲಿನ ಸೂಪರಿಂಟೆಂಡೆಂಟ್, ತಮ್ಮ ಜೈಲಿನಲ್ಲಿರುವ ನೈಜೀರಿಯಾ, ಶ್ರೀಲಂಕಾ, ಪಾಕಿಸ್ತಾನ, ಜಪಾನ್ ಮತ್ತು ಯೂರೋಪ್ನ ವಿಚಾರಣಾಧೀನ ಕೈದಿಗಳ ಬಗ್ಗೆ ಆಯಾ ರಾಯಭಾರ ಕಚೇರಿಗಳಿಗೆ ಹಲವಾರು ಬಾರಿ ಪತ್ರ ಬರೆದಿದ್ದಾರಂತೆ, ಆದರೆ ಯಾರೋ ಒಬ್ಬರು ತುಸು ಆಸಕ್ತಿ ತೋರಿಸುತ್ತಾರಾದರೂ ಉಳಿದೆಲ್ಲ ಪತ್ರಗಳಿಗೆ ಉತ್ತರವೇ ಸಿಕ್ಕಿಲ್ಲ' ಎನ್ನುತ್ತಾರೆ.
ಈ ವಿಷಯದಲ್ಲಿ ಭಾರತದ ಗುಣವೂ ಭಿನ್ನವಾಗಿಲ್ಲ. 'ಇಟಲಿ ಸರ್ಕಾರ ಬಹಳ ಚತುರಮತಿ, ಅದು ತನ್ನ ಪ್ರಜೆಗಳನ್ನು ರಕ್ಷಿಸಿತು. ವಿದೇಶಿ ಜೈಲುಗಳಲ್ಲಿರುವ ಭಾರತೀಯರ ಬಗ್ಗೆ ನಮ್ಮ ಸರ್ಕಾರವೂ ಇದೇ ರೀತಿ ನಡೆದುಕೊಳ್ಳಬೇಕೆಂದು ಆಶಿಸುತ್ತೇನೆ' ಎಂದು ಪ್ರಿತೀಶ್ ನಂದಿ ಟ್ವೀಟ್ ಮಾಡಿದ್ದಾರೆ. ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುತ್ತಾ, ವಿದೇಶಗಳಲ್ಲಿರುವ ಭಾರತೀಯ ಕೈದಿಗಳ ಸಂಖ್ಯೆ 6,293. ಸೌದಿ ಅರೇಬಿಯಾದ ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರಿದ್ದಾರೆ ಎಂದು ಒಪ್ಪಿಕೊಂಡಿದ್ದರು.
ಬಹುತೇಕರು ವೀಸಾ ನಿಯಮಗಳನ್ನು ಮತ್ತು ಉದ್ಯೋಗ ಕಾಂಟ್ರಾಕ್ಟ್ಗಳನ್ನು ಮುರಿದಿದ್ದಕ್ಕಾಗಿ ಜೈಲಿನಲ್ಲಿದ್ದಾರೆ. ಇನ್ನು ಹಲವಾರು ಸಂದರ್ಭಗಳಲ್ಲಿ ಕೈದಿಗಳೇ ರಾಯಭಾರ ಕಚೇರಿಯಿಂದ ಸಹಾಯ ಪಡೆಯಲು ನಿರಾಕರಿಸಿಬಿಡುತ್ತಾರೆ. ತಮ್ಮನ್ನು ಬಂಧಿಸಿದ ದೇಶಕ್ಕಿಂತ ದೂತವಾಸದ ಅಧಿಕಾರಿಗಳಿಗೇ ಅವರು ಹೆಚ್ಚು ಹೆದರುತ್ತಾರೆ.
ಇದೇನೇ ಇದ್ದರೂ ಒಂದಂತೂ ಸತ್ಯ. ಸೌದಿಅರೇಬಿಯಾದ ಜೈಲಿನಲ್ಲಿರುವ ಭಾರತೀಯ ಕಾರ್ಮಿಕರಿಗೆ ಅಥವಾ ಭಾರತದ ಜೈಲಿನಲ್ಲಿರುವ ಶ್ರೀಲಂಕಾದ ಮೀನುಗಾರರಿಗೆ ಇಟಲಿಯ ನಾವಿಕರಿಗೆ ಸಿಕ್ಕಂತಹ ಗಮನ, ಬೆಂಬಲ ಸಿಗಲಾರದು. ಹಾಗಾಗೇ ಈ ಸಂದರ್ಭದಲ್ಲಿ 'ಡಾರ್ಕರ್ ನೇಷನ್ಸ್'ನ ಲೇಖಕ ವಿಜಯ್ ಪ್ರಸಾದ್ ಮಾಡಿರುವ ಟ್ವೀಟ್ ಹೆಚ್ಚು ಚಿಂತನೆಗೆ ಹಚ್ಚುತ್ತದೆ: 'ಇಬ್ಬರು ಇಟಲಿ ನಾವಿಕರು ಭಾರತೀಯ ಜೈಲಿನಲ್ಲಿದ್ದಾಕ್ಷಣ;ಅದು ಮುಖಪುಟ ಸುದ್ದಿಯಾಗುತ್ತದೆ. 109 ಭಾರತೀಯರು ಇಟಲಿಯ ಜೈಲಿನಲ್ಲಿದ್ದಾರೆ. ಅವರಲ್ಲಿ ಒಬ್ಬರ ಹೆಸರಾದರೂ ನಮಗೆ ಗೊತ್ತೇ?'
- ಸಂದೀಪ್ ರಾಯ್
ಫಸ್ಟ್ಪೋಸ್ಟ್ ಡಾಟ್ ಕಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

