ಅಂಕಣಗಳು

ಉಗ್ರ ಪ್ರಕರಣ ತನಿಖೆ: ಮುಸ್ಲಿಮರಷ್ಟೇ ಗುರಿ ಎಂಬ ಮಿಥ್ಯೆ

Published On :

ಡಿಸೆಂಬರ್ 2012ರ ಪ್ರಚೋದನಕಾರಿ ಭಾಷಣಕ್ಕಾಗಿ ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅಕ್ಬರುದ್ದೀನ್ ಓವೈಸಿ ಮಾತುಗಳನ್ನು ನಂಬುವುದಾದರೆ- ಬಾಬರಿ ಮಸೀದಿ ಧ್ವಂಸವಾಗದಿದ್ದರೆ ಹಾಗೂ ಗುಜರಾತ್‌ನಲ್ಲಿ ಮುಸ್ಲಿಮರು ಹತ್ಯೆಗೆ ಅತ್ಯಾಚಾರಕ್ಕೆ ಒಳಗಾಗದಿದ್ದರೆ ಭಾರತದಲ್ಲಿ ಜಿಹಾದಿ ಭಯೋತ್ಪಾದನೆ ಎಂಬುದೇ ಇರುತ್ತಿರಲಿಲ್ಲ. ಓವೈಸಿಯ ಮಜ್ಲಿಸ್ ಇತ್ತೆಹಾದ್ ಇ ಮುಸ್ಲಿಮಿನ್ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಆರೋಪಿಸುವುದೇನೆಂದರೆ ಮುಸ್ಲಿಂ ಯುವಕರನ್ನು ದಿನಂಪ್ರತಿ ಬಂಧನಕ್ಕೆ ಒಳಪಡಿಸಿ ಹಿಂಸೆ ಕೊಡಲಾಗುತ್ತದೆ. ಆನಂತರ ಸಾಕ್ಷ್ಯಾಧಾರಗಳ ಕೊರತೆ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಇದೇ ಸಿದ್ಧಾಂತವನ್ನು ಭಾರತದಲ್ಲಿ ಉದಾರವಾದಿಗಳು- ಪ್ರಗತಿಪರರು ಎಂದು ಕರೆಸಿಕೊಳ್ಳುವವರೂ ನಂಬುತ್ತಾರೆ.
ಕೆಲದಿನಗಳ ಹಿಂದೆ ಬೆಂಗಳೂರಿನ ಜಿಹಾದಿ ಯೋಜನೆಯ ಪ್ರಕರಣವೊಂದರ ಮೂವರು ಶಂಕಿತರನ್ನು ಆರೋಪಪಟ್ಟಿಯಿಂದ ಕೈಬಿಡುವುದಕ್ಕೆ ನ್ಯಾಷನಲ್ ಇನ್‌ವೆಸ್ಟಿಗೇಟಿಂಗ್ ಏಜೆನ್ಸಿ (ಎನ್‌ಐಎ) ನಿರ್ಧರಿಸಿತು. ಆ ಪೈಕಿ ರಕ್ಷಣಾ ವಿಜ್ಞಾನಿ ಐಜಾಜ್ ಅಹ್ಮದ್ ಮಿರ್ಜಾ ಹಾಗೂ ಪತ್ರಕರ್ತ ಮಾತಿಉರ್ ರೆಹ್ಮಾನ್ ಸಿದ್ಧಿಕಿ ಇದ್ದಾರೆ. ಇದನ್ನು ಪೊಲೀಸರು ಮುಸ್ಲಿಮರನ್ನು ಹಿಂಸಿಸುತ್ತಿರುವುದರ ಕಥನವಾಗಿ ಹೇಳಲಾಗುತ್ತಿದೆ. ಉದಾರವಾದಿಗಳೂ ಇದನ್ನು ನಂಬಿದ್ದಾರೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಂಡವರ ಉದಾಹರಣೆಯನ್ನು ಮುಂದಿಟ್ಟುಕೊಂಡು ಇದನ್ನು ಪೊಲೀಸ್ ತಾರತಮ್ಯದ ದೃಷ್ಟಾಂತವಾಗಿ ಬಿಂಬಿಸುವ ಉದಾರವಾದಿಗಳಿಂದ ಜಿಹಾದಿ ಭಯೋತ್ಪಾದನೆಯನ್ನು ಎದುರಿಸುವ ಭಾರತದ ಸಾಮರ್ಥ್ಯವನ್ನು ಕುಗ್ಗಿಸಿದಂತಾಗುತ್ತದೆ. ಮಿರ್ಜಾ ಹಾಗೂ ಸಿದ್ಧಿಕಿ ಬಿಡುಗಡೆಯನ್ನು ಮಾತ್ರ ಗಮನಿಸುತ್ತಿರುವ ಮಾಧ್ಯಮವು ಈ ಸಂಚಿನಲ್ಲಿ ಪಾಲ್ಗೊಂಡಿದ್ದ ಒಟ್ಟೂ 15 ಮಂದಿ ಪೈಕಿ 12 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧವಾಗಿದೆ ಎಂಬುದನ್ನು ಮರೆಮಾಚುತ್ತದೆ. 26/11ರ ನಂತರದ ಮಹಾತ್ವಾಕಾಂಕ್ಷೆಯ ಜಿಹಾದಿ ಪ್ರೊಜೆಕ್ಟ್ ಇದು ಹಾಗೂ ಅಂತರ್ಜಾಲದ ಮೂಲಕ ಮೂಲಭೂತವಾದಕ್ಕೆ ಎಳಸುತ್ತಿರುವ ಭಾರತದ ಪ್ರಥಮ ಉದಾಹರಣೆ ಈ ಪ್ರಕರಣ ಎಂಬುದನ್ನು ಪಕ್ಕಕ್ಕೆ ಸರಿಸುವಂತಿಲ್ಲ.
2011-12ರಲ್ಲಿ ಬೆಂಗಳೂರಿನ ನಿವಾಸಿಗಳಾದ ಅಬ್ದುಲ್ ಹಕೀಮ್ ಜಾಮ್ದಾರ್ ಮತ್ತು ಜಾಫರ್ ಇಕ್ಬಾಲ್ ಶೋಲಾಪುರ ಇವರು ಪಾಕಿಸ್ತಾನಕ್ಕೆ ಭೇಟಿ ಕೊಚ್ಚಿದ್ದರು, ಆನ್‌ಲೈನ್‌ನ ಜಿಹಾದಿ ಸಾಹಿತ್ಯಕ್ಕೆ ಮರುಳಾಗಿ ಅಫಘಾನಿಸ್ತಾನದ ಜಿಹಾದ್ ಪಡೆ ಸೇರುವುದಕ್ಕೆ ಉತ್ಸುಕರಾಗಿದ್ದರು ಎಂದು ಆರೋಪ ಸಾರುತ್ತದೆ. ಕರಾಚಿಯಲ್ಲಿ ಜಿಹಾದ್ ಸಂಘಟಕ ಫರ್ಹತುಲ್ಲಾ ಘೋರಿ ಈ ಇಬ್ಬರನ್ನು ಭಾರತದ ವಿರುದ್ಧ ಸೆಣೆಸುವಂತೆ ಕೇಳಿಕೊಳ್ಳುತ್ತಾನೆ ಎಂದಿರುವ ಎನ್‌ಐಎ, ಮುಂದುವರಿದು- ನಂತರ ಇವರಿಬ್ಬರೂ ಪಾಕಿಸ್ತಾನದ ಗುಪ್ತಚರ ವಿಭಾಗ ಹಾಗೂ ಲಷ್ಕರ್‌ಗೆ ಪರಿಚಿತರಾಗುತ್ತಾರೆ. ಅವರಿಬ್ಬರೇ ಇವರಿಗೆ ಗೂಢಚಾರಿಕೆ, ಸೈಬರ್ ಕ್ರೈಂ ಹಾಗೂ ಶಸ್ತ್ರ ಚಲಾವಣೆ ತರಬೇತಿ ನೀಡುತ್ತಾರೆ ಎಂದಿದೆ.
ಹಿಂದು ಬಲಪಂಥೀಯ ಸಂಘಟನೆಗಳಿಗೆ ಸೇರಿದ ಕೆಲ ಗಣ್ಯರು ಹಾಗೂ ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಲ್ಲುವುದಕ್ಕೆ ಬೆಂಗಳೂರಿನ ಜಿಹಾದ್ ಗುಂಪು ಸಂಚು ಹೂಡಿತ್ತು ಎಂದು ಎನ್‌ಐಎ ಆರೋಪಿಸಿದೆ. ಅಲ್ಲದೇ ಈ ಗುಂಪಿನ ಸದಸ್ಯರು ಜಿಹಾದಿ ಕಾರ್ಯಗಳಿಗೆ ಹಣ ಸಂಗ್ರಹಿಸುವ ಸಲುವಾಗಿ ಶಸ್ತ್ರಸಜ್ಜಿತ ದರೋಡೆ ಹಾಗೂ ಪಾಕಿಸ್ತಾನಕ್ಕೆ ಬೇಹುಗಾರಿಕೆ ಸಹಕಾರ ನೀಡುವುದಕ್ಕೂ ಯೋಜಿಸಿದ್ದರು ಎಂದು ಎನ್‌ಐಎ ಹೇಳುತ್ತದೆ.
ಐಜಾಜ್ ಮಿರ್ಜಾ, ಸಿದ್ದಿಕಿ ಹಾಗೂ ಯುಸೂಫ್ ನಲಬಂದ್ ಅವರು ಈ ಸಂಚಿನಲ್ಲಿ ಭಾಗಿಯಾಗಿದ್ದಕ್ಕೆ ಸಾಕ್ಷ್ಯಾಧಾರಗಳು ಸಿಗಲಿಲ್ಲ. ಆದರೆ ಸಂಶಯದ ಆಧಾರದಲ್ಲಿ ಅವರನ್ನು ಸೆರೆ ಹಿಡಿದಿದ್ದು ತಪ್ಪಾಗುತ್ತದೆಯೇ? ಶೋಹಿಬ್ ಮಿರ್ಜಾ ಎಂಬ ಆರೋಪಿ ತನ್ನ ಲ್ಯಾಪ್‌ಟಾಪ್ ಬಳಸಿ ಸಂಚು ರೂಪಿಸುವುದಕ್ಕೆ ಬಳಸಿದ ಕೊಠಡಿಯನ್ನೇ ಇವರಿಬ್ಬರೂ ಹಂಚಿಕೊಂಡಿದ್ದರು. ಜಾಮ್ದಾರ್ ಹಾಗೂ ಶೋಲಾಪುರ್ ಮೇಲಿರುವುದು ಗೂಢಚಾರಿಕೆ ನಡೆಸಿದ ಆರೋಪ. ಐಜಾಜ್ ಅಹ್ಮದ್ ಬಳಿ ಸೂಕ್ಷ್ಮ ಮಾಹಿತಿಗಳಿದ್ದವು. ಸಿದ್ಧಿಕಿ ಜಿಹಾದಿ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟಿದ್ದರು.
ನಿಜ, ರಾಷ್ಟ್ರೀಯ ವಿಷಯಗಳನ್ನು ವರದಿ ಮಾಡುವ ಪತ್ರಕರ್ತರು ಹೀಗೆ ಎಲ್ಲ ಮೂಲಗಳನ್ನೂ ತಡಕಾಡುವುದಿದೆ. ಆದರೆ ಅವರಿದ್ದ ಕೊಠಡಿಯಲ್ಲೇ ಸಂಚು ರೂಪುಗೊಂಡ ವಿದ್ಯಮಾನಗಳಿಲ್ಲ. ಈ ಎಲ್ಲವೂ ಸೇರಿಕೊಂಡಿದ್ದರಿಂದ ಅವರನ್ನು ತನಿಖೆಯ ಭಾಗವಾಗಿ ವಿಚಾರಣೆಗೆ ಒಳಪಡಿಸುವುದು ಅಗತ್ಯವಾಗಿತ್ತು.
ಹೀಗಾಗಿ ಎನ್‌ಐಎ ಮತ್ತು ಬೆಂಗಳೂರು ಪೊಲೀಸರು ನಡೆದುಕೊಂಡಿರುವ ರೀತಿ ಸರಿಯಾಗಿಯೇ ಇದೆ. ಶಂಕಿತರನ್ನು ಅವರು ಬಂಧಿಸಿದರು, ಸಾಕ್ಷ್ಯಗಳನ್ನು ಪರಿಶೀಲನೆಗೆ ಒಳಪಡಿಸಿದರು, ಯಾರ ವಿರುದ್ಧ ಪುರಾವೆಗಳಿಲ್ಲವೋ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದರು. ಅವರು ಸಾಕ್ಷ್ಯಗಳನ್ನು ತಿರುಚುವುದಕ್ಕೂ ಹೋಗಲಿಲ್ಲ ಅಥವಾ ಬಲವಂತದಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆಯಲೂ ಇಲ್ಲ.
ಈ ಪ್ರಕ್ರಿಯೆಯಲ್ಲಿ ಆ ಮೂವರಿಗೂ ತುಂಬ ಕೆಟ್ಟ ಸಂಗತಿಗಳೇ ಘಟಿಸಿದವು. ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸಿಲುಕಿಕೊಂಡ ಯಾವುದೇ ಮುಗ್ಧ ಅನುಭವಿಸುವಂಥ ಸಂಕಷ್ಟಗಳು ಅವು. ತನ್ನ ಕುಟುಂಬಕ್ಕೆ ಎಂತಹ ಬಾಧೆ ಒದಗಿತ್ತು ಎಂಬುದನ್ನು ಮಿರ್ಜಾ ಅವರು ಮನಕರಗುವಂತೆ ವಿವರಿಸಿದ್ದಾರೆ. ಆದರೆ ತನಿಖಾಧಿಕಾರಿಗಳು ಬಂಧನ ಪ್ರಕ್ರಿಯೆಗಳಿಂದ ದೂರ ಉಳಿದಿದ್ದರೆ ನಷ್ಟವಾಗಬಹುದಾಗಿದ್ದ ಜೀವಗಳ ಹಿನ್ನೆಲೆಯಲ್ಲಿ ಈ ತೊಂದರೆಯನ್ನು ವಿಮರ್ಶಿಸಬೇಕಾಗುತ್ತದೆ. ಇದೇ ಕಾರಣಕ್ಕಾಗಿಯೇ ಜಗತ್ತಿನಲ್ಲಿ ಬಹುತೇಕ ಎಲ್ಲ ಪೊಲೀಸರಿಗೂ ಶಂಕಿತರನ್ನು ಬಂಧಿಸಿ ತನಿಖೆ ನಡೆಸುವ ಅಧಿಕಾರವಿದೆ. ಹೀಗೆ ಶಂಕೆಯ ಆರೋಪದ ಮೇಲೆ ಬಂಧಿಸಿದ ಈ ಹಿಂದಿನ ಯಾವ ಪ್ರಕರಣಗಳ ಬಗ್ಗೆಯೂ ಬೊಬ್ಬೆಯಿಲ್ಲ. ಉದಾಹರಣೆಗೆ ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳು ವಿಧಿವಿಜ್ಞಾನ ಪುರಾವೆಗಳು ಸಿಗುವುದಕ್ಕೂ ಮೊದಲೇ ಬಂಧಿತರಾಗಿದ್ದರು.
ಇಂಥ ಪ್ರಕರಣಗಳ ಬಗ್ಗೆ ಕಣ್ಮುಚ್ಚಿಕೊಂಡಿರುವುದೇಕೆ? ಎನ್‌ಐಎ ಪ್ರಕರಣದಲ್ಲೂ ಉದಾರವಾದಿಗಳು ಮುಕ್ತ ಮನಸ್ಸಿನ ದೃಷ್ಟಿ ಹೊಂದಬಾರದೇಕೆ? ತನಿಖಾಧಿಕಾರಿಗಳು ಮುಸ್ಲಿಮರ ವಿರುದ್ಧ ಪೂರ್ವಗ್ರಹ ದೃಷ್ಟಿಕೋನ ಹೊಂದಿದ್ದಾರೆ ಎಂಬುದು ಇವರ ಆರೋಪ. ಇದು ಶುದ್ಧಸುಳ್ಳು. ಸಿದ್ಧಿಕಿ ಕೂಡ 'ಮುಸ್ಲಿಂ ಅಲ್ಲದಿದ್ದರೆ ಪೊಲೀಸರು ನನ್ನನ್ನು ಬಂಧಿಸುತ್ತಿರಲಿಲ್ಲ' ಎಂದಿದ್ದಾರೆ.
ಆದರೆ......
ಕಳೆದ ವರ್ಷ ಜೂನ್‌ನಲ್ಲಿ 2008ರ ಮಾಲೆಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಲೋಕೇಂದ್ರ ಶರ್ಮಾ ಹಾಗೂ ದೇವೇಂದರ್ ಗುಪ್ತ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಏಕೆಂದರೆ ನಿಗದಿತ ಅವಧಿಯೊಳಗೆ ಎನ್‌ಐಎಗೆ ಇವರ ವಿರುದ್ಧ ಆರೋಪಪಟ್ಟಿ ಸಲ್ಲಿಸುವುದಕ್ಕೆ ಆಗಲಿಲ್ಲ. ಇದೇ ಕಾರಣಕ್ಕೆ ಮೆಕ್ಕಾ ಮಸ್ಜಿದ್ ಬಾಂಬ್ ಪ್ರಕರಣದಲ್ಲಿ ಭರತ್ ರತೇಶ್ವರ್ ಎಂಬುವವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಎನ್‌ಐಎಯ ಈಶಾನ್ಯ ರಾಜ್ಯಗಳ ತನಿಖೆಯಲ್ಲಂತೂ ಇಂಥ ಉದಾಹರಣೆಗಳು ಹೇರಳ.
ಇಂಥ ಗೊಂದಲಗಳನ್ನು ಜಗತ್ತಿನ ಪೊಲೀಸ್ ಪಡೆಗಳೆಲ್ಲ ಎದುರಿಸುತ್ತವೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಯೋತ್ಪಾದನೆ ತನಿಖೆ ಸಂಬಂಧ ಬಂಧನ ಎದುರಿಸುವ ಮೂರನೇ ಎರಡರಷ್ಟು ಶಂಕಿತರು ಆರೋಪಪಟ್ಟಿಯಿಂದ ಹೊರಗುಳಿಯುತ್ತಾರೆ. ಆರೋಪಿತರಲ್ಲಿ ಶೇಕಡ 14ರಷ್ಟು ಮಂದಿ ಮಾತ್ರ ಅಂತಿಮವಾಗಿ ಬಂಧಿತರಾಗುತ್ತಾರೆ. ಈ ಪೈಕಿ ತಪ್ಪಿತಸ್ಥರೆಂದು ಸಾಬೀತುಗೊಳ್ಳುವವರ ಪ್ರಮಾಣ 50 ಶೇಕಡಕ್ಕಿಂತಲೂ ಕಡಿಮೆ.
ಮೆಕ್ಕಾ ಮಸೀದಿ ಬಾಂಬ್ ಪ್ರಕರಣದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಬಂಧನ ಮಾಡಲಾಯಿತು ಎಂಬುದನ್ನು ಪದೇ ಪದೆ ಹೇಳುವ ಮೂಲಕ ಅದನ್ನು ಸತ್ಯವನ್ನಾಗಿಸಿಬಿಡಲಾಗಿದೆ. ಪತ್ರಕರ್ತೆ ಸಾಗರಿಕಾ ಘೋಷ್ ಅವರು ಮೆಕ್ಕಾ ಮಸೀದಿ ಸ್ಫೋಟದಲ್ಲಿ ಬಂಧನಕ್ಕೊಳಗಾದ ಹೈದರಾಬಾದ್‌ನ ವಿದ್ಯಾರ್ಥಿ ಇಮ್ರಾನ್ ಸಯ್ಯದ್‌ಗೆ ಥರ್ಡ್ ಡಿಗ್ರಿ ಹಿಂಸೆ ಹಾಗೂ ಎಲೆಕ್ಟ್ರಿಕ್ ಶಾಕ್‌ಗಳನ್ನು ಕೊಟ್ಟ ಬಗ್ಗೆ ವಿವರವಾಗಿ ಬರೆದಿದ್ದಾರೆ. ಮೆಕ್ಕಾ ಮಸೀದಿ ಸ್ಫೋಟದಲ್ಲಿ 21 ಮುಸ್ಲಿಂ ಯುವಕರನ್ನು ತಪ್ಪಾಗಿ ಬಂಧಿಸಿರುವುದರತ್ತ ಬೊಟ್ಟು ಮಾಡುತ್ತ ಕುಲದೀಪ್ ನಯ್ಯರ್ ಅವರು 'ಮುಸ್ಲಿಮರು ಹಿಂಸೆಗೆ ಒಳಗಾಗುತ್ತಿರುವುದರ' ಕುರಿತು ಬರೆಯುತ್ತಾರೆ.
ವಾಸ್ತವ ಏನೆಂದರೆ, 22 ಮುಸ್ಲಿಂ ಯುವಕರು ಬಂಧಿತರಾಗಿದ್ದೂ ಹೌದು, ನಂತರ ನಿರ್ದೋಷಿಗಳೆಂದು ಬಿಡುಗಡೆ ಆಗಿದ್ದೂ ಹೌದು. ಆದರೆ ಗೋಪಾಲಪುರಂ ಪೊಲೀಸ್ ಠಾಣೆಯಲ್ಲಿ 2007ರಲ್ಲಿ ಈ ಬಗ್ಗೆ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಅನ್ನು ಓದುವ ಶ್ರಮವನ್ನು ಯಾರಾದರೂ ತೆಗೆದುಕೊಂಡಿದ್ದೇ ಆದಲ್ಲಿ ತಿಳಿಯುವ ಅಂಶವೆಂದರೆ ಈ ಯಾವ ಬಂಧನಗಳೂ ಮೆಕ್ಕಾ ಮಸೀದೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ್ದೇ ಅಲ್ಲ!
ಪೊಲೀಸರು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಡುವುದಕ್ಕೆ ಇವರ ವಿರುದ್ಧ ಮೆಕ್ಕಾ ಮಸೀದಿ ಸ್ಫೋಟದ ಸುಳ್ಳು ಆರೋಪಗಳನ್ನು ಹೊರಿಸಿದ್ದನ್ನು ತಳ್ಳಿಹಾಕುವಂತಿಲ್ಲ. ಆದರೆ ಮನದಟ್ಟು ಮಾಡಿಕೊಳ್ಳಬೇಕಾದ ಅಂಶ ಎಂದರೆ- ಪೊಲೀಸರು ತಮ್ಮ ಅದಕ್ಷತೆಯನ್ನು ಮರೆಮಾಚಿಕೊಳ್ಳುವುದಕ್ಕೆ ಜಳಪಳಿಸುವ ಖಡ್ಗ ಯಾವುದೋ ಒಂದು ಸಮುದಾಯವನ್ನು ಗುರಿ ಮಾಡದೇ ಎಲ್ಲರನ್ನೂ ಸೀಳುತ್ತಿದೆ ಎಂಬುದು. ಉದಾಹರಣೆಗೆ ಮಧ್ಯಪ್ರದೇಶದ ಪೊಲೀಸರಿಂದ ಬಂಧನಕ್ಕೊಳಗಾದ ಪ್ರಜ್ಞಾಸಿಂಗ್ ಠಾಕೂರ್ ಅವರನ್ನು ಹಾಗೂ ಸಂಝೌತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಬಂಧಿಸಲಾದ ಸುನಿಲ್ ಜೋಶಿ ಅವರನ್ನು ಹಿಂಸೆಗೊಳಪಡಿಸಲಾಗುತ್ತಿದೆ ಎಂಬ ಆರೋಪದ ಕುರಿತು ದೆಹಲಿಯ ಯಾವ ಮಾನವಹಕ್ಕು ಸಂಘಟನೆಗಳೂ ಧ್ವನಿ ಮೊಳಗಿಸಿಲ್ಲ, ಯಾಕೆ? 2011ರಿಂದ ಈ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡಿದ್ದು ಈಗ ಬೇರೆ ಬೇರೆ ಆರೋಪಿಗಳತ್ತ ಗಮನ ಹರಿದಿದೆ.
ಹಾಗೆಂದು ಪೊಲೀಸರು ಪ್ರತಿ ಬಾರಿಯೂ ತಪ್ಪೆಸಗುವುದಿಲ್ಲ. ಕಳೆದ ವರ್ಷ ಜಾಮಿಯಾ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೇಷನ್ ಎಂಬ ಮಾನವ ಹಕ್ಕು ಸಂಘಟನೆ ವರದಿಯೊಂದನ್ನು ಹೊರತಂದು, ದೆಹಲಿ ಪೊಲೀಸರ ಭಯೋತ್ಪಾದನಾ ನಿಗ್ರಹ ದಳದ ವಿಶೇಷ ಘಟಕ 16 ಮಂದಿಯನ್ನು ಅಕ್ರಮವಾಗಿ ಬಂಧಿಸಿದ್ದಕ್ಕೆ ತೀವ್ರ ಟೀಕೆ ಮಾಡಿತು. ಆ ಬಂಧಿತರೆಲ್ಲರೂ ಖುಲಾಸೆಯಾಗಿದ್ದರು. ಪೊಲೀಸರ ವಿರುದ್ಧ ಸಾಕ್ಷ್ಯಗಳನ್ನು ತಿರುಚಿದ ಹಾಗೂ ಹಿಂಸೆ ನೀಡಿದ ಆರೋಪಗಳಿದ್ದವು. ಆದರೆ ದೆಹಲಿ ಪೊಲೀಸರು ತಾವು ಉಗ್ರವಾದದ ಪ್ರಕರಣಗಳಲ್ಲಿ ಶೇ. 68ರಷ್ಟು ಮಂದಿಯನ್ನು ದೋಷಿಗಳೆಂದು ಸಾಬೀತುಗೊಳಿಸಿದ ಉದಾಹರಣೆ ತೆರೆದಿಟ್ಟರು. ಅಮೆರಿಕದಂಥ ಸುಸಜ್ಜಿತ ಪೊಲೀಸ್ ಪಡೆಯೇ ಈ ವಿಷಯದಲ್ಲಿ ಶೇ.87ರ ಪ್ರಗತಿ ಸಾಧಿಸಿರುವಾಗ ದೆಹಲಿ ಪೊಲೀಸರ ಸಾಧನೆ ಗಮನಾರ್ಹವೇ ಆಗುತ್ತದೆ.
ಭಾರತದ ಪೊಲೀಸ್ ಪಡೆ ಕಳಪೆ ತರಬೇತಿ, ಕೆಳಮಟ್ಟದ ವಿಧಿವಿಜ್ಞಾನ ಸಂಪನ್ಮೂಲ, ಸಿಬ್ಬಂದಿ ಕೊರತೆ ಮುಂತಾದ ಕಾರಣಗಳಿಂದ ಗಂಭೀರ ಅಪರಾಧಗಳಲ್ಲಿ ಆರೋಪಿಗಳನ್ನು ದೋಷಿಗಳೆಂದು ಸಾಬೀತುಪಡಿಸುವಲ್ಲಿ ಬಹಳ ಹಿಂದಿದೆ. ಆದರೆ ಇದು ಹಿಂದು, ಮುಸ್ಲಿಂ ಎಲ್ಲರಿಗೂ ಒಂದೇ ವಿಧದಲ್ಲಿ ಬಾಧಿಸುತ್ತಿದೆ. ಸೌತ್ ಏಷ್ಯ ಟೆರರರಿಸಂ ಪೋರ್ಟಲ್ ವೀಕ್ಷಿಸಿದ್ದೇ ಆದಲ್ಲಿ ಒಂದು ಸತ್ಯ ಢಾಳಾಗಿ ಗೋಚರಿಸುತ್ತದೆ. ಅದೆಂದರೆ: ಉಗ್ರವಾದದ ವಿಷಯದಲ್ಲಿ ಮುಸ್ಲಿಮರಿಗಿಂತ ಹಿಂದುಗಳು, ಕ್ರೈಸ್ತರು ಹಾಗೂ ಬುಡಕಟ್ಟು ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳಾಗಿದ್ದಾರೆ.
2012ರಲ್ಲಿ 914 ಮಾವೋವಾದಿಗಳನ್ನು ಬಂಧಿಸಲಾಗಿದೆ. ಇಸ್ಲಾಂ ಉಗ್ರವಾದದ ಸಂಬಂಧ ಇದರ ಹತ್ತನೇ ಒಂದಂಶದ ಬಂಧನವೂ ಆಗಿಲ್ಲ. ಹಿಂದು ನೇತೃತ್ವದ ಬಂಡುಕೋರ ಸಮಸ್ಯೆಯೇ ಅಧಿಕವಾಗಿರುವ ಅಸ್ಸಾಂ ಮತ್ತು ಮಣಿಪುರಗಳಲ್ಲಿ ಬಂಧನವಾದವರ ಲೆಕ್ಕವನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ.
ಈ ಎಲ್ಲ ಅಂಕಿಅಂಶಗಳು ಉದಾರವಾದಿ ಬುದ್ಧಿಜೀವಿಗಳಿಗೆ ಗೊತ್ತಿಲ್ಲ ಎಂದೇನಲ್ಲ. ಆದರೆ ಸಿದ್ಧಾಂತದ ಹಣೆಪಟ್ಟಿ ಇವರ ಕಣ್ಣಿಗೆ ಜಾರಿರುವುದರಿಂದ ಇಂಥ ವಾಸ್ತವಗಳನ್ನು ಕಣ್ಣುಬಿಟ್ಟು ನೋಡುವ ಮನಸ್ಸಾಗುತ್ತಿಲ್ಲ. ದಿಗ್ವಿಜಯ್ ಸಿಂಗ್ ಅಂಥವರು ಮುಂಬಯಿ ದಾಳಿ ಕೂಡ ಸಿಐಎ, ಎಫ್‌ಬಿಐಗಳು ಸೇರಿಕೊಂಡು ಹೆಣೆದ ಸಂಚು ಎಂದೆಲ್ಲ ಮಾತನಾಡುತ್ತಾರೆ. ಹಿಂದುತ್ವ ಚಳವಳಿಯನ್ನು ವಿರೋಧಿಸುವ ಭರದಲ್ಲಿ ಎಡಪಂಥೀಯ ಉದಾರವಾದಿಗಳು ಜಿಹಾದ್ ವಿಷಯದಲ್ಲಿ ಪೊಲೀಸರ ವಿರುದ್ಧ ಮುಗಿಬೀಳುವುದೇ ಸೆಕ್ಯುಲರಿಸಂ ರಕ್ಷಣೆ ಎಂದುಕೊಂಡಿದ್ದಾರೆ. ಇದರ ಅತಿಘೋರ ಪರಿಣಾಮ ಎಂದರೆ ಉಗ್ರವಾದದ ಕುರಿತ ರಾಷ್ಟ್ರೀಯ ಸಂವಾದವೇ ಕೋಮುವಾದದ ಬಣ್ಣ ಪಡೆದುಕೊಂಡಿದೆ.
ಪೊಲೀಸರ ಅದಕ್ಷತೆಯನ್ನು ಪ್ರಶ್ನಿಸುವ, ಅವರ ಅಸಾಮರ್ಥ್ಯಕ್ಕೆ ಕಾರಣಗಳನ್ನು ವಿಮರ್ಶಿಸಿ ಸುಧಾರಣೆಗೆ ಆಗ್ರಹಿಸುವ, ಜೈಲಿನಲ್ಲಿ ಹಿಂಸಿಸುವುದು ಸಮ್ಮತ ಸಂಸ್ಕೃತಿ ಎಂಬಂತೆ ಅಪರಾಧ ನ್ಯಾಯ ವ್ಯವಸ್ಥೆ ಸಂಸ್ಕೃತಿ ರೂಪುಗೊಡಿರುವುದರ ಪರಾಮರ್ಶೆ ಎಲ್ಲವೂ ಆಗಬೇಕಿದೆ. ಜಿಹಾದಿ ಉಗ್ರವಾದಕ್ಕೆ ಮಾತ್ರ ಸಂವೇದನೆ ಮೆರೆಯುತ್ತಿರುವ ಎಡಪಂಥೀಯ ಉದಾರವಾದಿ ಚಿಂತಕರು ಈ ಸವಾಲನ್ನೇ ಸ್ವೀಕರಿಸುತ್ತಿಲ್ಲ.
(ಮೂಲತಃ ಫಸ್ಟ್‌ಪೋಸ್ಟ್ ಜಾಲತಾಣದಲ್ಲಿ ಪ್ರಕಟಗೊಂಡ ಲೇಖನ)

 -ಪ್ರವೀಣ್ ಸ್ವಾಮಿ
ಖ್ಯಾತ ಪತ್ರಕರ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.