ಅಂಕಣಗಳು

ದರ್ಗಾ ಮುಖ್ಯಸ್ಥರ ಸ್ಥೈರ್ಯ ಸರ್ಕಾರಕ್ಕೇಕಿಲ್ಲ?

Published On :

ಭಾರತದ ಮೃದು ಧೋರಣೆಯ ಹೊರತಾಗಿಯೂ ಅತಿರೇಕದ ವರ್ತನೆ ಮೆರೆದಿದೆ ಪಾಕಿಸ್ತಾನ. ಕೇವಲ 2 ತಿಂಗಳ ಹಿಂದಷ್ಟೇ ಪಾಕ್ ಸೈನಿಕರು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿ ಭಾರತೀಯ ಸೈನ್ಯದ ಲಾನ್ಸ್ ನಾಯಕ್ ಹುದ್ದೆಯಲ್ಲಿದ್ದ ಹೇಮರಾಜ್ ಹಾಗೂ ಸುಧಾಕರ್ ಸಿಂಗ್‌ರನ್ನು ಬರ್ಭರವಾಗಿ ಹತ್ಯೆಗೈದು ರುಂಡ ಕತ್ತರಿಸಿ ಜೊತೆಗೊಯ್ದರು. ಈ ಅಮಾನುಷ ಕೃತ್ಯದ ಕುರಿತು ಭಾರತೀಯರ ಆಕ್ರೋಶವು ತಣ್ಣಗಾಗುವ ಮೊದಲೇ, ಅಂದರೆ ಮಾರ್ಚ್ 9ರಂದು ಪಾಕ್ ಪ್ರಧಾನಿ ಜೈಪುರದ ಅಜ್ಮೇರ್‌ಗೆ ಧಾರ್ಮಿಕ ಯಾತ್ರೆಗಾಗಿ ಆಗಮಿಸಿದರು. ಅಂದು ರಾಜಾ ಪರ್ವೇಜ್ ಅಶ್ರಫ್‌ರನ್ನು ಭೇಟಿಯಾಗದೆ ಪ್ರತಿಭಟಿಸಿದ ಅಜ್ಮೇರ್ ಷರೀಫ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೇದಿನ್ ಅಲಿ ಖಾನ್‌ರ ಪ್ರೌಢಪರಿ ಶ್ಲಾಘನೀಯವೊಂದೇ ಅಲ್ಲದೆ, ಪಾಕ್ ಕುರಿತು ಸಮಸ್ತ ದೇಶವಾಸಿಗಳ ಹೆಪ್ಪುಗಟ್ಟಿದ ಅಸಹನೆಯನ್ನು ಸೂಚಿಸುತ್ತಿತ್ತು. ವಿಪರ್ಯಾಸವೆಂದರೆ ಭಾರತ ಸರ್ಕಾರವು ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸಿತು. ನಮ್ಮ ವಿದೇಶಾಂಗ ಸಚಿವರಾದ ಸಲ್ಮಾನ್ ಖುರ್ಷಿದ್ ಅವರು ಪಾಕ್ ಪ್ರಧಾನಿ ಹಾಗೂ ಪರಿವಾರಕ್ಕೆ ಜೈಪುರದ ರಾಮ್‌ಬಾಗ್ ಪ್ಯಾಲೇಸ್‌ನಲ್ಲಿ ಔತಣಕೂಟವನ್ನು ಏರ್ಪಡಿಸಿ, ಪಾಕ್ ಕುತಂತ್ರಗಳ ಕುರಿತು ಸೊಲ್ಲೆತ್ತದೆ ಅನೌಪಚಾರಿಕ ಭೇಟಿಯೆಂಬ ನೆಪದ ತೆರೆಯೆಳೆದುಬಿಟ್ಟರು. ಆದರೆ ವಾರ ಕಳೆಯುವಷ್ಟರಲ್ಲಿಯೇ ಪಾಕಿಸ್ತಾನವು ಇದಕ್ಕೆ ಪ್ರತ್ಯುತ್ತರವಾಗಿ ಎರಡೆರಡು ಭರ್ಜರಿಯಾದ ಉಡುಗೊರೆಗಳನ್ನೇ ದಯಪಾಲಿಸಿದೆ!
ಮೊದಲನೆಯದೆಂದರೆ, ಕಾಶ್ಮೀರದ ಶ್ರೀನಗರದಲ್ಲಿನ ಕ್ರಿಕೆಟ್ ಮೈದಾನಕ್ಕೆ ಕ್ರಿಕೆಟಿಗರ ಸೋಗಿನಲ್ಲಿ ಬಂದ ಪಾಕ್ ಪ್ರಚೋದಿತ-ಪ್ರಾಯೋಜಿತ ಉಗ್ರರು ಇದೇ 13ರಂದು ಕೇಂದ್ರ ಮೀಸಲು ಪಡೆಯ ಸೈನಿಕರತ್ತ ದಾಳಿ ನಡೆಸಿದರು. ಇದರಲ್ಲಿ ಕರ್ನಾಟಕದ ಸತೀಶ್ ಸೇರಿದಂತೆ ಐವರು ವೀರಯೋಧರು ಹುತಾತ್ಮರಾದರು. ಎರಡನೆಯದೆಂದರೆ, ಈ ಘಟನೆ ಜರುಗಿದ ಮಾರನೆಯ ದಿನವೇ ಪಾಕ್ ಸಂಸತ್ತಿನ ಕೆಳಮನೆಯಲ್ಲಿ ಅಫ್ಜಲ್ ಗುರುವಿನ ಗಲ್ಲನ್ನು ಖಂಡಿಸಿ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ. ಜಮಿಯತ್ ಉಲೇಮಾ-ಎ-ಇಸ್ಲಾಂ ಸಂಘಟನೆಯ ನಾಯಕ ಮೌಲಾನಾ ಫಜಲುರ್ ರೆಹಮಾನ್ ಮಂಡಿಸಿದ ಈ ಗೊತ್ತುವಳಿಯು ಅಫ್ಜಲ್‌ಗೆ ನೀಡಿದ ಗಲ್ಲಿಗೆ ವಿರೋಧ, ಜಮ್ಮು ಕಾಶ್ಮೀರದಲ್ಲಿ ಕರ್ಫ್ಯೂ ಹಾಗೂ ಸೈನ್ಯದ ಹಿಂತೆಗೆತ, ಪ್ರತ್ಯೇಕತಾವಾದಿ ಕೈದಿಗಳ ಬಿಡುಗಡೆ ಹಾಗೂ ಕಾಶ್ಮೀರದ ಕುರಿತು ವಿಶ್ವಸಂಸ್ಥೆಯು ತೀರ್ಮಾನ ಕೈಗೊಳ್ಳುವಿಕೆ ಮೊದಲಾದ ವಿಷಯಗಳಿಗೆ ಭಾರತವನ್ನು ಆಗ್ರಹಿಸುವ ಪ್ರಮುಖಾಂಶಗಳನ್ನು ಒಳಗೊಂಡಿದೆ. ನೇರಾ ನೇರ ಯುದ್ಧ ಕೈಗೊಳ್ಳುವ ಧೈರ್ಯವಿಲ್ಲದೇ ರಣಹೇಡಿಯಂತೆ ಮಾರಾಮೋಸದಿಂದ ಭಾರತೀಯ ಸೈನಿಕರನ್ನು ಬಲಿತೆಗೆದುಕೊಳ್ಳುತ್ತಿರುವ ಪಾಕ್, ತಮ್ಮ ದೇಶದ ಪರವಾಗಿರುವ ಭಾರತದ ದೇಶದ್ರೋಹಿಯನ್ನು ನೇಣಿಗಟ್ಟಿರುವುದನ್ನು ಘಂಟಾಘೋಷವಾಗಿ ಖಂಡಿಸಿರುವುದು ಉದ್ಧಟತನವಲ್ಲದೇ ಮತ್ತೇನು?
ವಿಚಿತ್ರವೆಂದರೆ ಮೊದಲಿನಿಂದಲೂ ನಮ್ಮನ್ನಾಳುವವರು ನಮ್ಮದೇ ಭೂಭಾಗದಿಂದ ಉಗಮವಾದ ಪಾಕಿಸ್ತಾನದತ್ತ ಸಹೋದರ ಭಾವನೆಯನ್ನು ಹೊಂದಿದ್ದು, ಪಾಕಿಸ್ತಾನವು ಮಾತ್ರ  ಭಾರತವನ್ನು ಬದ್ಧ ವೈರಿಯೆಂದೇ ಪರಿಗಣಿಸಿದೆ. ಸ್ಥಾಪನೆಯಾದಾಗಲೇ ಲಕ್ಷಾಂತರ ಹಿಂದೂಗಳನ್ನು ಕಗ್ಗೊಲೆಗೈದದ್ದಲ್ಲದೇ ಕಾಶ್ಮೀರಕ್ಕೂ ಕಣ್ಣು ಹಾಕಿದ ಪಾಕಿಸ್ತಾನವು ಸ್ವತಂತ್ರವಾದ ವರ್ಷದಂತರದಲ್ಲಿಯೇ (1948ರಲ್ಲಿ) ಭಾರತದೊಂದಿಗೆ ಯುದ್ಧ ಸಾರಿ ಸೋಲಿಗೀಡಾಯ್ತು. ತದನಂತರವೂ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ ನಮ್ಮ ನೆರೆಯ ದೇಶವು ಚೀನಾ ಯುದ್ಧವಾದ ಅಲ್ಪಕಾಲದಲ್ಲಿಯೇ (1965ರಲ್ಲಿ) ಭಾರತದ ಮೇಲೆ ದಾಳಿ ನಡೆಸಿ ಸೋತು ಸುಣ್ಣವಾಯ್ತು. ವಶಪಡಿಸಿಕೊಂಡ ಭೂಭಾಗಗಳನ್ನೆಲ್ಲ ಹಿಂತಿರುಗಿಸಿದ್ದಲ್ಲದೇ ಸಾವಿರಾರು ಯುದ್ಧಕೈದಿಗಳನ್ನು ಬಿಡುಗಡೆ ಮಾಡಿ ದೊಡ್ಡತನ ಮೆರೆದ ಭಾರತದ ಮೇಲೆ ಬಾಂಗ್ಲಾದೇಶ ಸ್ಥಾಪನೆಯ ನಂತರ ಪಾಕಿಸ್ತಾನವು ಇನ್ನಷ್ಟು ದ್ವೇಷವನ್ನು ಬೆಳೆಸಿಕೊಂಡಿತು. 1999ರ ಕಾರ್ಗಿಲ್ ಕದನದಲ್ಲಿಯೂ ಪರಾಜಿತಗೊಂಡ ಪಾಕ್, ಭಾರತವನ್ನು ಅಸ್ಥ್ಥಿರಗೊಳಿಸಲು ಭಯೋತ್ಪಾದನೆಯೆಂಬ ವಾಮಮಾರ್ಗವನ್ನು ಅನುಸರಿಸತೊಡಗಿತು. ಅಲ್ಲಿನ ನೆಲವು ಉಗ್ರ ಸಂಘಟನೆಗಳಿಗೆ ಆಶ್ರಯತಾಣವಾಗಿರುವುದು ಹಾಗೂ ಪಾಕ್ ಕೃಪಾಪೋಷಿತ ಉಗ್ರರು ಭಾರತದಾದ್ಯಂತ ಭೀತಿ ಸೃಷ್ಟಿಸಲು ಬಾಂಬ್ ಸ್ಫೋಟಗಳನ್ನು ನಡೆಸುತ್ತಿರುವುದು ಜಗಜ್ಜಾಹೀರಾಗಿರುವ ಸತ್ಯ.
ಇಷ್ಟಾಗಿಯೂ ಸಂಬಂಧ ಸುಧಾರಣೆಯೆಂಬ ಹೆಸರಿನಲ್ಲಿ ನಮ್ಮ ಸರ್ಕಾರಗಳು ಪಾಕ್‌ನತ್ತ ಮೃದುಧೋರಣೆಯನ್ನು ಅನುಸರಿಸುತ್ತಿರುವಾಗ ನಮ್ಮನ್ನು ಕ್ರುದ್ಧರಾಗಿಸಬಲ್ಲ ಪಾಕ್‌ನ ನಡೆ ಭಾರತದ ಪಾಲಿಗೆ ಅಪಮಾನವಲ್ಲವೇ? ನಾವು ಸ್ನೇಹವೃದ್ಧಿಗಾಗಿ ಹೆಜ್ಜೆಯಿಟ್ಟಾಗಲೆಲ್ಲ ಪಾಕಿಸ್ತಾನವು ಬೆನ್ನಿಗೆ ಚೂರಿ ಹಾಕುತ್ತಲೇ ಇರುವುದು ಪದೇ ಪದೆ ಸಾಬೀತಾಗುತ್ತಲೇ ಇದೆ. ಇನ್ನಾದರೂ ಯುದ್ಧವಿಲ್ಲದ ಶಾಂತಿಕಾಲದಲ್ಲಿಯೂ ಭಾರತೀಯ ಸೈನಿಕರು ಅಕಾರಣವಾಗಿ ಮೃತಪಟ್ಟು ತನ್ಮೂಲಕ ಅವರ ಕುಟುಂಬಗಳು ಅನಾಥರಾಗುತ್ತಿರುವ ಶೋಚನೀಯ ಸ್ಥಿತಿ ನಮ್ಮ ನಾಯಕರ ಕಣ್ತೆರೆಸಲಿ. ಇದರೊಂದಿಗೆ ಅಮಾಯಕ ನಾಗರಿಕರನ್ನು ಭಯೋತ್ಪಾದಕ ದಾಳಿಗಳು ಬಲಿತೆಗೆದುಕೊಳ್ಳುತ್ತಿರುವುದು ಸರ್ಕಾರಗಳ ಮನತಟ್ಟಲಿ. ಇವೆಲ್ಲವುಗಳ ನಡುವೆಯೂ ದುಷ್ಕೃತ್ಯಗಳ ರೂವಾರಿ ಪಾಕ್‌ನತ್ತ ಕಠಿಣ ಕ್ರಮ ಕೈಗೊಳ್ಳಲು ಭಾರತವೇಕೆ ಹಿಂಜರಿಯುತ್ತಿದೆಯೆಂಬ ಸಂಗತಿ ಅರ್ಥವಾಗುತ್ತಿಲ್ಲ. ಕೇವಲ ಬಾಯಿಮಾತಿನಲ್ಲಿ ಖಂಡಿಸಿ ಸುಮ್ಮನಾಗುವ ನಮ್ಮ ನಾಯಕರ ವಿಧಾನವು ಖಂಡಿತವಾಗಿಯೂ ಪರಿಹಾರ ನೀಡಲಾರದು.
ಇನ್ನಾದರೂ ಇತಿಹಾಸದಿಂದ ಪಾಠ ಕಲಿತು ನಮ್ಮ ಸರ್ಕಾರವು ಎಚ್ಚೆತ್ತುಕೊಳ್ಳಲೇಬೇಕಿದೆ. ಇದರರ್ಥ ಪಾಕ್ ವಿರುದ್ಧ ಯುದ್ಧ ಸಾರಬೇಕೆಂದಲ್ಲ. ಪಾಕಿಸ್ತಾನಕ್ಕೆ ತನ್ನ ತಪ್ಪಿನ ಮನವರಿಕೆಯಾಗುವವರೆಗೂ ಸ್ನೇಹಹಸ್ತ ಚಾಚದೇ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಕಾಶ್ಮೀರದ ಬಿಕ್ಕಟ್ಟಿನಲ್ಲಿ ಮತ್ತೆ-ಮತ್ತೆ ಮೂಗುತೂರಿಸುವ ಪಾಕ್ ಕ್ರಮವನ್ನು ಈ ಮೂಲಕವಾದರೂ ವಿರೋಧಿಸಬೇಕಿದೆ. ಕ್ರಿಕೆಟನ್ನೂ ಒಳಗೊಂಡು ದ್ವಿಪಕ್ಷೀಯ ಕ್ರೀಡೆಗಳನ್ನು ಕೆಲಕಾಲ ನಿಷೇಧಿಸುವುದರೊಂದಿಗೆ, ಪಾಕ್ ನಾಯಕರಿಗೆ ರತ್ನಗಂಬಳಿ ಹಾಕಿ ಸ್ವಾಗತಿಸುವ ಸಂಪ್ರದಾಯವನ್ನು ಕೈಬಿಡಬೇಕಿದೆ. ಭಾರತದ ಐಕ್ಯತೆಯನ್ನು ರಕ್ಷಿಸುವ ನಿಟ್ಟಿನಲ್ಲ ಕಾಶ್ಮೀರದಲ್ಲಿ ಪಾಕ್ ಹಸ್ತಕ್ಷೇಪವನ್ನು ಶತಾಯಗತಾಯ ತಡೆಗಟ್ಟಬೇಕಿದೆ. ಒಟ್ಟಿನಲ್ಲಿ ನಮ್ಮ ದೇಶದ ಸಾರ್ವಭೌಮತೆಯ ಪ್ರಶ್ನೆ ಬಂದಾಗ ನಾವು ಸೌಮ್ಯತನವನ್ನು ತ್ಯಜಿಸಿ ಕಠಿಣರಾಗಬಲ್ಲೆವೆಂಬುದನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಡಲೇಬೇಕಾದ ಕಾಲಘಟ್ಟವಿದು. ಇಲ್ಲವಾದಲ್ಲಿ, ಭಾರತದ ಉದಾರನೀತಿಯನ್ನು ದುರುಪಯೋಗಪಡಿಸಿಕೊಂಡು ಇಂದು ಪಾಕಿಸ್ತಾನ ಹಾಗೂ ಇಟಲಿಗಳು ಧಾಷ್ಟ್ರ್ಯತನ ತೋರಿದಂತೆ, ಮುಂದೊಂದು ದಿನ ಸಣ್ಣ ದೇಶಗಳೂ ಭಾರತಕ್ಕೆ ಕ್ಯಾರೇ ಅನ್ನದ ಪರಿಸ್ಥಿತಿ ನಿರ್ಮಾಣವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಗುರಾಗಬೇಕಾದ ಸ್ಥಿತಿ ಬಂದೀತು!

-ಪ್ರಿಯದರ್ಶಿನಿ ಎಸ್ ಭಟ್, ಹೊನ್ನಾವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.