ಔಷಧ-ಮಾತ್ರೆಗಳಿಂದ ಹೊರತಾಗಿದ್ದೇವೆ ಎಂಬುವವರು ನಮ್ಮಲ್ಲಿ ಯಾರೂ ಇಲ್ಲವೇನೋ. ಆದರೆ ಆ್ಯಂಟಿಬಯೋಟಿಕ್ಗಳಿಗೆ ರೋಗಾಣುಗಳು ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿರುವ ಆತಂಕದ ವಿದ್ಯಮಾನವನ್ನು 'ಡೈಲಿ ಮೇಲ್' ವರದಿ ಮಾಡಿದೆ.
-----
ಬ್ಯಾಕ್ಟೀರಿಯಾಗಳು ಎಲ್ಲೆಡೆಯೂ ಇವೆ. ನಾವು ಬಳಸುವ ನೀರಿನಲ್ಲಿ, ನಮ್ಮ ಚರ್ಮದ ಮೇಲೆ, ಸಾರ್ವಜನಿಕ ಶೌಚಾಲಯಗಳಲ್ಲಿ, ನಮ್ಮ ಆಹಾರದಲ್ಲಿ...ಆದರೆ ಈಗವು ಮೊದಲಿನಂತಿಲ್ಲ. ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಬದಲಾಗುತ್ತಿವೆ. ಅತ್ಯುತ್ತಮ ಆ್ಯಂಟಿಬಯೋಟಿಕ್ಸ್(ಸೂಕ್ಷ್ಮ ಜೀವಿನಾಶಕ)ಗಳಿಗೂ ಬಗ್ಗದಂತಹ ಪ್ರತಿರೋಧಕ ಕ್ಷಮತೆ ಬೆಳಸಿಕೊಂಡಿವೆ. ಅವು ಹಾಗೆ ಬದಲಾಗಲು ನಾವೇ ಕಾರಣ! ನಮ್ಮ ರೋಗಭ್ರಮೆ, ಅಸಡ್ಡೆಯೇ ಅವುಗಳಿಗೆ ಹೊಸ ಶಕ್ತಿ ದಯಪಾಲಿಸಿದೆ.
ಕೆಲವು ದಿನಗಳ ಹಿಂದೆ ಇಂಗ್ಲೆಂಡಿನ ಮುಖ್ಯ ವೈದ್ಯಾಧಿಕಾರಿ ಪ್ರೊ. ಡೇಮ್ ಸ್ಯಾಲಿ, ಮುಂದಿನ ಕೆಲವು ವರ್ಷಗಳಲ್ಲಿ ಆ್ಯಂಟಿಬಯೋಟಿಕ್ ನಿರೋಧಕ ಸೋಂಕುಗಳು ಭಯೋತ್ಪಾದನೆ ಅಥವಾ ಗ್ಲೋಬಲ್ ವಾರ್ಮಿಂಗ್ನಂತೆಯೇ ಮಾನವ ಮಹಾದುರಂತಕ್ಕೆ ಕಾರಣವಾಗಬಲ್ಲವು ಎಂದು ಎಚ್ಚರಿಸಿದ್ದಾರೆ.
ಅವರ ಮಾತು ಯಾವುದೋ ಸೈನ್ಸ್ ಫಿಕ್ಷನ್ ಸಿನೆಮಾದಂತೆ ಉತ್ಪ್ರೇಕ್ಷೆಯಿಂದ ಕೂಡಿದೆ ಎಂದೆನಿಸಿದರೂ, ವೈದ್ಯಕೀಯ ತಜ್ಞರು ಡೇಮ್ ಸ್ಯಾಲಿಯವರ ಮಾತಿನಲ್ಲಿ ನಿಜವಡಗಿದೆ ಎಂದು ತಲೆಯಾಡಿಸುತ್ತಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ವರ್ಷಗಳಲ್ಲಿ, ಚಿಕ್ಕ ಗಾಯವೊಂದು ಕೂಡ ಪ್ರಾಣಾಂತಿಕವಾಗಬಲ್ಲದು ಎಂದವರು ಹೇಳುತ್ತಿದ್ದಾರೆ. ಈ ಸಮಸ್ಯೆಗೆ ಎರಡು ಪ್ರಮುಖ ಕಾರಣಗಳನ್ನು ಡೇಮ್ ಸ್ಯಾಲಿ ಕೊಡುತ್ತಾರೆ.
ಮೊದಲನೆಯ ಕಾರಣ, ನಾವು ಅವಶ್ಯಕತೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್ಸ್ಗಳನ್ನು ಉಪಯೋಗಿಸುತ್ತಿರುವುದು. ಇದರಿಂದಾಗಿ ಬ್ಯಾಕ್ಟೀರಿಯಾಗಳಿಗೆ ಅವುಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತಿದೆ. ಇನ್ನು ಎರಡನೆಯದು, ಹೊಸ ಆ್ಯಂಟಿಬಯೋಟಿಕ್ಸ್ಗಳ ಉತ್ಪಾದನೆ ಅಷ್ಟೇನೂ ಲಾಭದಾಯಕ ಕೆಲಸವಲ್ಲ ಎಂಬ ಕಾರಣದಿಂದ ಔಷಧ ಉದ್ಯಮಗಳು ಆ ನಿಟ್ಟಿನಲ್ಲಿ ಕೆಲಸ ಮಾಡದಿರುವುದು.
'80ರ ದಶಕದಿಂದೀಚೆಗೆ ನಮ್ಮಲ್ಲಿ ಹೊಸ ಶ್ರೇಣಿಯ ಆ್ಯಂಟಿಬಯೋಟಿಕ್ಸ್ಗಳನ್ನು ನಾವು ಉತ್ಪಾದಿಸಿಯೇ ಇಲ್ಲ. ದೊಡ್ಡ ದೊಡ್ಡ ಫಾರ್ಮಾ ಕಂಪೆನಿಗಳು ಅವೇ ಹಳೆಯ ಔಷಧಗಳನ್ನೇ ಉತ್ಪಾದಿಸುತ್ತಿವೆ' ಎನ್ನುತ್ತಾರೆ ಸ್ಯಾಲಿ. 'ಈಗ ಎಚ್ಚೆತ್ತುಕೊಳ್ಳದಿದ್ದರೆ, 19ನೇ ಶತಮಾನದಲ್ಲಿದ್ದಂಥ ಪರಿಸ್ಥಿತಿಯನ್ನು ನಾವೆಲ್ಲ ಎದುರಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಆಗೆಲ್ಲ ಬಹುತೇಕ ರೋಗಿಗಳು ಮೃತಪಡುತ್ತಿದ್ದರು. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಅಥವಾ ಅಂಗಾಂಗ ಕಸಿ ಚಿಕಿತ್ಸೆಗಳಂತೂ ಜೀವಕ್ಕೇ ಮಾರಕವಾಗಲಿವೆ'.
ಟಿ.ಬಿ. ಮತ್ತು Gonorrhoea (ಲೈಂಗಿಕ ಅಂಗಗಳಿಗೆ ತಗುಲುವ ರೋಗ) ಮುಂದಿನ ದಿನಗಳಲ್ಲಿ ಹೆಚ್ಚು ಅಪಾಯವೊಡ್ಡಬಲ್ಲವು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಾರೆ. 'ಔಷಧ ನಿರೋಧಕ ಟಿ.ಬಿ.ಯ ಹೊಸ ತಳಿಗಳನ್ನು ತಡೆಯಲು ನಾವೀಗ ಒಂದೇ ಬಾರಿಗೆ ಮೂರು ವಿಧದ ಆ್ಯಂಟಿಬಯೋಟಿಕ್ಸ್ಗಳನ್ನು ಬಳಸುತ್ತೇವೆ. ಆದರೆ ಈ ಮೂರೂ ಔಷಧಗಳನ್ನು ಒಮ್ಮೆಲೇ ಬಳಸುವುದರಿಂದ ಇದನ್ನು ತಡೆದುಕೊಳ್ಳುವಂತಹ ಕ್ಷಮತೆ ಬ್ಯಾಕ್ಟೀರಿಯಾಗೆ ಬರದಿರಲಿ ಎಂದು ನಾವು ಆಶಿಸುತ್ತೇವೆ. ಇನ್ನು ಎ್ಟಝ್ಟ್ಠ್ಠ್ಟಿಜಛ ಕಾರಕ ಬ್ಯಾಕ್ಟೀರಿಯಾದ ಪ್ರಬಲ ತಳಿಯೊಂದು ಹುಟ್ಟಿಕೊಳ್ಳುವುದಕ್ಕೆ ನಾವು ಸಾಕ್ಷಿಯಾಗಲಿದ್ದೇವೆ' ಎನ್ನುತ್ತಾರೆ ಸ್ಯಾಲಿ. ದುರದೃಷ್ಟವಶಾತ್ ಅವರ ಮಾತು ಸುಳ್ಳಲ್ಲ! ಕೆಲವು ತಿಂಗಳ ಹಿಂದೆ ಲಂಡನ್ ವಿಶ್ವವಿದ್ಯಾಲಯದ ವಿಷಯ ಪರಿಣತರು ಸುಮಾರು ಹದಿನೆಂಟು ಸಾರ್ವಜನಿಕ ಶೌಚಾಲಯಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ್ದರು. ಆ ಮಾದರಿಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡು ಬಂದಿದ್ದು 'ಸ್ಟೆಫೈಲೋಕೋಕಸ್' ಎಂಬ ಬ್ಯಾಕ್ಟೀರಿಯಾ- ಇವುಗಳಲ್ಲಿ ಮುಕ್ಕಾಲು ಪ್ರತಿಶತ ತಳಿಗಳು ನಾವು ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೋಟಿಕ್ಸ್ಗಳಿಗೆ ಸಾಯದಂತಹ ಕ್ಷಮತೆ ಬೆಳೆಸಿಕೊಂಡಿವೆ. ನಾವು ಚಿಕ್ಕ ಪುಟ್ಟ ರೋಗಗಳಿಗೂ ಅತಿ ಹೆಚ್ಚು ಆ್ಯಂಟಿಬಯೋಟಿಕ್ಸ್ಗಳನ್ನು ಬಳಸುತ್ತಿರುವುದು ಇದಕ್ಕೆ ಮುಖ್ಯ ಕಾರಣ. ನಮ್ಮ ಮೂಲಕ ಶೌಚಾಲಯ ಸೇರುವ ಈ ಸೂಕ್ಷ್ಮ ಜೀವಿನಾಶಕಗಳು ಶೌಚಾಲಯದ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸೇರುತ್ತವೆ. ಆ ಸಮಯದಲ್ಲೇ ಆ್ಯಂಟಿಬಯೋಟಿಕ್ಸ್ಗಳನ್ನು ತಡೆದುಕೊಳ್ಳಬಲ್ಲ ಕ್ಷಮತೆಯನ್ನು ಬ್ಯಾಕ್ಟೀರಿಯಾ ಬೆಳೆಸಿಕೊಂಡು ಬಿಡುತ್ತವೆ.
'ಪ್ರತಿ ವರ್ಷ ಬ್ರಿಟನ್ನೊಂದರಲ್ಲೇ ಸುಮಾರು 16 ಲಕ್ಷ ಮಂದಿ ರೋಗಿಗಳು ಅನವಶ್ಯಕವಾಗಿ ಆ್ಯಂಟಿಬಯೋಟಿಕ್ಸ್ ಸೇವಿಸುತ್ತಾರೆ. ತಪ್ಪು ಬರೀ ವೈದ್ಯರದ್ದಷ್ಟೇ ಅಲ್ಲ. ರೋಗದ ತೀವ್ರತೆ ಕಡಿಮೆಯಿದ್ದರೂ ರೋಗಿಗಳೇ ಹೆಚ್ಚು ಔಷಧಿ ಕೊಡುವಂತೆ ಕೇಳಿಕೊಳ್ಳುತ್ತಾರೆ' ಎನ್ನುತ್ತದೆ ಬ್ರಿಟಿಷ್ ಮೆಡಿಕಲ್ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ವರದಿ.
ಪ್ರೊ. ಮಾರ್ಕ್ ಫೀಲ್ಡ್ ಹೇಳುವ ಪ್ರಕಾರ, 'ರೋಗಕಾರಕ ಬ್ಯಾಕ್ಟೀರಿಯಾದ ಮೇಲೆ ನಾವು ಆ್ಯಂಟಿಬಯೋಟಿಕ್ನಿಂದ ದಾಳಿ ಮಾಡಿದಾಗ, ಆ ಬ್ಯಾಕ್ಟೀರಿಯಾ ತೀವ್ರ ಒತ್ತಡಕ್ಕೊಳಗಾಗುತ್ತದೆ. ಬಹುತೇಕ ಬ್ಯಾಕ್ಟೀರಿಯಾದ ತಳಿಗಳು ಸತ್ತರೂ, ಕೆಲವೊಂದು ಆ ಒತ್ತಡದಲ್ಲೇ ಬದುಕುಳಿದುಬಿಡುತ್ತವೆ. ಹಾಗೆ ಉಳಿದುಕೊಂಡ ಬ್ಯಾಕ್ಟೀರಿಯಾಗಳ ವಂಶವಾಹಿಯಲ್ಲಿ ಕಿರು ಬದಲಾವಣೆಗಳಾಗುತ್ತವೆ. ಇದರಿಂದಾಗಿ ಅವುಗಳು ಮುಂದೆ ದ್ವಿಗುಣಗೊಂಡಾಗ ಸಹಜವಾಗಿಯೇ ಅವುಗಳಲ್ಲಿ ಮೊದಲು ಬಳಸಿದ ಆ್ಯಂಟಿಬಯೋಟಿಕ್ಸ್ಗೆ ಪ್ರತಿರೋಧಕ ಶಕ್ತಿ ಬೆಳೆದುಬಿಟ್ಟಿರುತ್ತದೆ. ಇನ್ನು ರೋಗಿಗಳು, ಡಾಕ್ಟರ್ ಸೂಚಿಸಿದ ಸಂಪೂರ್ಣ ಅವಧಿಯವರೆಗೆ ಔಷಧ ಸೇವಿಸದಿರುವುದೂ ಇದಕ್ಕೊಂದು ಕಾರಣ. ಸ್ವಲ್ಪ ಆರಾಮವಾಯಿತು ಎಂದೆನಿಸಿದಾಕ್ಷಣ ಅವರು ಆ್ಯಂಟಿಬಯೋಟಿಕ್ಸ್ ಸೇವನೆ ನಿಲ್ಲಿಸಿಬಿಡುತ್ತಾರೆ. ಹಾಗಾಗೆ ಸಂಪೂರ್ಣವಾಗಿ ರೋಗಕಾರಕ ಬ್ಯಾಕ್ಟೀರಿಯಾಗಳು ದೇಹದಿಂದ ದೂರವಾಗುವುದಿಲ್ಲ. ಮುಂದೆ ದೇಹದಲ್ಲಿ ಉಳಿದಿರುವ ಅಲ್ಪ ಆ್ಯಂಟಿಬಯೋಟಿಕ್ಗೆ ಅವು ಒಗ್ಗಿಕೊಂಡು ಬಿಡುತ್ತವೆ. ಅಂದರೆ, ಬದುಕುಳಿದ ಬ್ಯಾಕ್ಟೀರಿಯಾಗಳು ಸತ್ತವಕ್ಕಿಂತ ಭಿನ್ನ ರೂಪ ತಾಳಿಬಿಡುತ್ತವೆ. ಪ್ರತಿರೋಧಕ ಶಕ್ತಿ ಅವುಗಳಲ್ಲಿ ಹೆಚ್ಚಿಬಿಡುತ್ತದೆ'
ಇನ್ನು ಜಾನುವಾರು ಔಷಧಗಳಿಂದಲೂ ಈ ಸಮಸ್ಯೆ ಹೆಚ್ಚುತ್ತಿದೆ. ಆಕಳು, ಹಂದಿ, ಕುರಿ ಮುಂತಾದ ಜಾನುವಾರುಗಳನ್ನು ಆರೋಗ್ಯವಾಗಿಡುವ ಮುಂಜಾಗ್ರತೆಯಿಂದ ಅವುಗಳಿಗೆ ಆ್ಯಂಟಿಬಯೋಟಿಕ್ಸ್ ಕೊಡುತ್ತಿರುವುದೇ ಇದಕ್ಕೆ ಕಾರಣ.
ಅತಿ ಹೆಚ್ಚು ಆ್ಯಂಟಿಬಯೋಟಿಕ್ಸ್ ಬಳಸುವ-ಉತ್ಪಾದಿಸುವ ದೇಶ ಚೀನಾ. ಅಲ್ಲಿ ಉತ್ಪಾದನೆಯಾಗುವ 46 ಪ್ರತಿಶತ ಆ್ಯಂಟಿಬಯೋಟಿಕ್ಸ್ ಜಾನುವಾರುಗಳಿಗೇ ಮೀಸಲು. ಇತ್ತೀಚೆಗೆ ಆಸ್ಟ್ರೇಲಿಯಾದ ಸುಮಾರು 12 ವಿಶ್ವವಿದ್ಯಾಲಯಗಳು ಸಹಯೋಗದಲ್ಲಿ ನಡೆಸಿದ ಸಂಶೋಧನೆಯಿಂದ, ಆಘಾತಕಾರಿ ಸಂಗತಿಯನ್ನು ಹೊರಗೆಡವಿವೆ. ಚೀನಾದ ಹಂದಿಗಳಲ್ಲಿ ಬೆಳೆಯುತ್ತಿರುವ ಬ್ಯಾಕ್ಟೀರಿಯಾಗಳು ಇಡೀ ಮಾನವ ಜನಾಂಗಕ್ಕೇ ಮಾರಕವಾಗಬಲ್ಲವು ಎಂದವು ಎಚ್ಚರಿಸಿವೆ. ಈ ಔಷಧ ನಿರೋಧಕ ಬ್ಯಾಕ್ಟೀರಿಯಾಗಳು ನೀರಿನ ಮೂಲಕ, ಗಾಳಿಯ ಮೂಲಕ, ಮನುಷ್ಯರ ಮೂಲಕ ಅಥವಾ ತೋಟಗಾರಿಕೆಗೆ ಬಳಸುವ ಸಗಣಿಯ ಮೂಲಕ ಪ್ರಪಂಚದಾದ್ಯಂತ ಸುಲಭವಾಗಿ ಹರಡಬಲ್ಲವು.
'ಈ ಔಷಧ ನಿರೋಧಕ ಸೂಕ್ಷ್ಮ ಜೀವಾಣುಗಳು ಪ್ರಾಣಿಗಳ ಮೂಲಕವೂ ಮನುಷ್ಯರಿಗೆ ಹರಡಬಲ್ಲವು' ಎನ್ನುತ್ತಾರೆ ಪ್ರೊ. ಫೀಲ್ಡರ್. ಇ.ಕೊಲೈ ಎನ್ನುವ ಅಪಾಯಕಾರಿ ಬ್ಯಾಕ್ಟೀರಿಯಾ, ಮಾಂಸ ಸೇವನೆಯಿಂದ ನಮ್ಮೊಳಗೆ ಪ್ರವೇಶಿಸಬಲ್ಲದು! ಇದಕ್ಕೆ ಪ್ರತಿಯಾಗಿ, ನಮ್ಮ ವಿಜ್ಞಾನಿಗಳು ಹಿಂದೆಂದಿಗಿಂತಲೂ ಅತಿ ಹೆಚ್ಚು ವೇಗದಿಂದ ಹೊಸ ಸಂಶೋಧನೆಗಳನ್ನು ಮಾಡಬೇಕಿದೆ. ಅದಾಗಲೇ ಈ ನಿಟ್ಟಿನಲ್ಲಿ ಕೆಲವು ಆಶಾದಾಯಕ ಬೆಳವಣಿಗೆಗಳಾಗುತ್ತಿವೆ. ಕೆಲವು ಸಮುದ್ರ ಜೀವಿಗಳಲ್ಲಿ ಬ್ಯಾಕ್ಟೀರಿಯಾ ನಿರೋಧಕ ಸಾರವಿರುವುದನ್ನು ಪತ್ತೆ ಹಚ್ಚಲಾಗಿದೆ.
'ಆದರೆ ಸರಿಯಾದ ಸಂಶೋಧನೆಗೆ ಸಾವಿರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ ಮತ್ತು ದಶಕಗಳೇ ಹಿಡಿಯಲಿದೆ. ಇದಕ್ಕೆ ಜಾಗತಿಕ ಬೆಂಬಲ ಅತಿ ಅವಶ್ಯ' ಎನ್ನುವ ಸ್ಯಾಲಿ, ಲಂಡನ್ನಲ್ಲಿ ನಡೆಯಲಿರುವ ಜಿ8 ಸಭೆಯಲ್ಲಿ ಈ ವಿಷಯದ ಬಗ್ಗೆ ಹೆಚ್ಚು ಒತ್ತು ಕೊಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಮುಖ್ಯ ಪ್ರಶ್ನೆಯೆಂದರೆ, ನಮ್ಮ ರೋಗಭ್ರಮೆಯಿಂದಾಗಿ ಈ ವಿನಾಶಕಾರಿ ಬ್ಯಾಕ್ಟೀರಿಯಾಗಳು ಯಾವುದೇ ಔಷಧಿಗೆ ಸಡ್ಡು ಹೊಡೆದು ನಿಲ್ಲುವಂತಹ ಪರಿಸ್ಥಿತಿ ಬರುವುದಕ್ಕಿಂತ ಮುಂಚೆ, ನಿರುಪದ್ರವಿ ಸೂಕ್ಷ್ಮ ಜೀವಿಗಳೂ ಕೂಡ ನಮಗೆಲ್ಲ ಮರಣದಂಡನೆ ವಿಧಿಸುವುದಕ್ಕಿಂತ ಮುಂಚೆ, ನಮ್ಮ ಜಾಗತಿಕ ನಾಯಕರು ಈ ಅಪಾಯದ ಬಗ್ಗೆ ಎಚ್ಚೆತ್ತುಕೊಳ್ಳುತ್ತಾರಾ ಎಂಬುದು.
-ಜಾನ್ ನ್ಯಾಶ್