ಅಂಕಣಗಳು

ಸವಾಲುಗಳನ್ನು ಎದುರಿಸಿ ನಿಂತಾನೆಯೇ ಚೀನಾದ ಹೊಸ ನಾಯಕ?

Published On :

ಜಗತ್ತಿನ ಎರಡು ಬಹುದೊಡ್ಡ ಸಂಸ್ಥೆಗಳು ಇತ್ತೀಚೆಗಷ್ಟೇ ಹೊಸ ನಾಯಕರನ್ನು ಹೊಂದಿದವು. ಒಂದು ರೋಮನ್ ಕ್ಯಾಥೊಲಿಕ್ ಚರ್ಚ್ ಹಾಗೂ ಇನ್ನೊಂದು ಚೀನಾದ ಕಮ್ಯುನಿಸ್ಟ್ ರಾಜ್ಯ. ಇಬ್ಬರೂ ಪ್ರಸ್ತುತ ಬೆಟ್ಟದಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸುಧಾರಣೆಗಾಗಿ ಎದ್ದಿರುವ ಧ್ವನಿಯನ್ನು ಇಬ್ಬರೂ ನಿರ್ವಹಿಸಬೇಕಿದೆ. ವಿವಾದಗಳಿಗೆ ಆಹಾರವಾಗುತ್ತಿರುವ ಚರ್ಚ್ ವ್ಯವಸ್ಥೆಯನ್ನು ಸುಧಾರಿಸುವುದರಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಫಲರಾದಾರೆಯೇ ಎಂದು ಕಾದು ನೋಡಬೇಕಾಗಿದೆ.
ಸುಧಾರಣೆಯ ಹಾದಿಯಲ್ಲಿ ಪೋಪ್ ಅವರಿಗೆ ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಆಗದೇ ಹೋದ ಪಕ್ಷದಲ್ಲೂ ಚರ್ಚ್‌ಗಳಿಗೆ ಆ ಕ್ಷಣದ ಆತಂಕ ಎಂಬುದೇನೂ ಇಲ್ಲ. ಏಕೆಂದರೆ ರಾಜಕೀಯ ಸಂಸ್ಥೆಗಳಿಗಿಂತ ಧಾರ್ಮಿಕ ಸಂಸ್ಥೆಗಳು ಹೆಚ್ಚಿನ ಅವಧಿಗೆ ಅಸ್ತಿತ್ವ ಕಾಪಾಡಿಕೊಳ್ಳುತ್ತವೆ. ಆದರೆ ಚೀನಾದ ಅಧ್ಯಕ್ಷರಾಗಿ ನೇಮಕವಾದ ಕ್ಸಿ ಜಿನ್‌ಪಿಂಗ್ ಪಾಲಿಗೆ ಸುಧಾರಣೆ ಎಂಬುದು ಕೇವಲ ಆಯ್ಕೆಯಾಗಿ ಉಳಿಯದೇ ತುರ್ತು ಅಗತ್ಯವಾಗಿದೆ. ಕಳೆದ ನವೆಂಬರ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಇವರು ಅಧ್ಯಕ್ಷರಾಗುವುದು ಖಚಿತವಾಗಿತ್ತು.
ಚೀನಾ ನಿಜಕ್ಕೂ ಹಲವು ವಲಯಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ಇದರ ಕೊಡುಗೆ ಶ್ರೇಯಸ್ಸು ಚೀನಾ ಜನತೆಗೆ ಹಾಗೂ ಕಮ್ಯುನಿಸ್ಟ್ ನಾಯಕತ್ವಕ್ಕೆ ಸಲ್ಲಬೇಕು. ಆದರೆ ಕಮ್ಯುನಿಸ್ಟ್ ಪಕ್ಷ ಹಾಗೂ ಜನರ ನಡುವೆ ಅಗಾಧವಾಗಿರುವ ಕಂದಕವು ಕೇವಲ ಭಯವನ್ನಷ್ಟೇ ಹುಟ್ಟಿಸುತ್ತಿಲ್ಲ ಬದಲಿಗೆ ಅಸ್ತಿತ್ವಕ್ಕೇ ಸವಾಲನ್ನು ಒಡ್ಡಿದೆ. ಅಭಿವೃದ್ಧಿ ರಂಗ, ಆಡಳಿತ ಹಾಗೂ ಸಾಮಾಜಿಕ ಸ್ಥಿರತೆಯಲ್ಲಿ ಉಂಟಾಗಿರುವ ತೀವ್ರತರವಾದ ಸಮಸ್ಯೆಗಳನ್ನು ಚೀನಾ ಹೇಗೆ ತಹಬಂದಿಗೆ ತರಲಿದೆ ಎಂಬುದರಲ್ಲೇ ಅದರ ಏಕಪಕ್ಷದ ಆಡಳಿತದ ಅಳಿವು ಉಳಿವು ಮುಂಬರುವ ದಿನಗಳಲ್ಲಿ ನಿರ್ಧಾರವಾಗಲಿದೆ. ಈ ಎಲ್ಲ ಸಮಸ್ಯೆಗಳು ಸಂಕೀರ್ಣವೂ ಬಲು ವೇಗದಿಂದ ತಲೆ ಎತ್ತುತ್ತಿರುವಂಥವುಗಳೂ ಆಗಿವೆ.
ಆದಾಯದಲ್ಲಿರುವ ಭಾರೀ ವ್ಯತ್ಯಯಗಳನ್ನು ಚೀನಾದ ಹೊಸ ನಾಯಕತ್ವವು ಸರಿಪಡಿಸಬೇಕಿದೆ. ವ್ಯಾಪಕ ಭ್ರಷ್ಟಾಚಾರ, ಮಿತಿಯಿಲ್ಲದ ಕೊಳ್ಳುಬಾಕತನ, ಪರಿಸರವು ಗಣನೀಯ ಪ್ರಮಾಣದಲ್ಲಿ ಧ್ವಂಸಗೊಂಡಿರುವುದು, ಕೆಲಸಗಾರರು, ರೈತರು ಮತ್ತು ಪತ್ರಕರ್ತರ ವರ್ಗವೂ ಸೇರಿದಂತೆ ಹಲವರಿಂದ ಸ್ಥಳೀಯ ಮಟ್ಟದಲ್ಲಿ ಆಗುತ್ತಿರುವ ಪ್ರತಿಭಟನೆಗಳು, ರಾಜಕೀಯ ಸುಧಾರಣೆಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೆಚ್ಚುತ್ತಿರುವ ಒತ್ತಾಯ, ಸಮಾಜದಲ್ಲಿ ಢಾಳಾಗಿರುವ ಮೌಲ್ಯಗಳ ಅಧಃಪತನ ಇವೆಲ್ಲವೂ ಚೀನಾವನ್ನು ಬಹುವಾಗಿ ಕಂಗೆಡಿಸುತ್ತಿರುವ ವಿದ್ಯಮಾನಗಳು. ಉದಾಹರಣೆಗೆ, ಚೈನೀಸ್ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸ್‌ನ ಇತ್ತೀಚಿನ ಅಧ್ಯಯನ ಸಾರುವ ಪ್ರಕಾರ ಅಲ್ಲಿನ ಸಮಾಜದ ವಿಶ್ವಾಸದ ಪ್ರಮಾಣ ಹಿಂದೆಂದೂ ಇಲ್ಲದಷ್ಟು ಕುಸಿದಿದೆ.
ಚೀನಾದ ಯಾವ ಕಮ್ಯುನಿಸ್ಟ್ ನಾಯಕನೂ ಕ್ಸಿ ಜಿನ್ ಥರದಲ್ಲಿ ಗಟ್ಟಿ ಧ್ವನಿಯಲ್ಲಿ ಎಚ್ಚರಿಕೆಗಳನ್ನು ಕೊಟ್ಟಿದ್ದಿಲ್ಲ. ಕಮ್ಯುನಿಸ್ಟ್ ಪಕ್ಷದ ನಿಯಮಗಳನ್ನು ಉಡಾಫೆಯಿಂದ ತೆಗೆದುಕೊಳ್ಳದಿರಿ ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕಟುವಾಗಿ ಎಚ್ಚರಿಸಿದ್ದಾರೆ. 'ನಮ್ಮ ಪಕ್ಷದ ಕಾರ್ಯಕರ್ತರುಗಳೆಲ್ಲರ ಬಲವೂ ವೃದ್ಧಿಯಾದಲ್ಲಿ ಮಾತ್ರ ಟೂ 100 ಇಯರ್ಸ್ ಮತ್ತು ಚೀನಾ ಜನರ ಮರುಚೈತನ್ಯದ ಮಹಾಕನಸನ್ನು ಸಾಕಾರಗೊಳಿಸುವುದಕ್ಕೆ ಸಾಧ್ಯವಾಗುತ್ತದೆ' ಎಂದು ತಮ್ಮ ಭಾಷಣದಲ್ಲಿ ಕ್ಸಿ ಹೇಳಿದ್ದಾರೆ. ಅವರು ಹೇಳುವ 'ಟೂ 100 ಇಯರ್ಸ್‌' ಎಂಬ ಪದಗುಚ್ಛ ಆ ದೇಶದ ಆಧುನಿಕ ಇತಿಹಾಸದ ಎರಡು ಮೈಲಿಗಲ್ಲುಗಳ ಬಗ್ಗೆ ಹೇಳಿರುವಂಥದ್ದು. 2021 ಬಂದರೆ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾಗೆ 100 ವರ್ಷ ತುಂಬುತ್ತದೆ. 2049ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗೆ ಶತಮಾನವಾಗುತ್ತದೆ. ಕ್ಸಿ ತಮ್ಮ ಎರಡನೇ ಬಾರಿಯ ಐದು ವರ್ಷಗಳ ಅವಧಿಯನ್ನು ಪೂರೈಸುವ ಸಂದರ್ಭದಲ್ಲೇ ಪಕ್ಷದ ಶತಮಾನೋತ್ಸವ ಬರುತ್ತದೆ. ಹೀಗಾಗಿಯೇ ಕಮ್ಯುನಿಸ್ಟ್ ಪಕ್ಷವನ್ನು ಸುಧಾರಿಸುವುದು ಅವರ ವೈಯಕ್ತಿಕ ನಿಗಾದ ಅಭಿಯಾನವಾಗಿದೆ ಹಾಗೂ ಮತ್ತೊಂದು ಶತಮಾನಕ್ಕೂ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಅಧಿಕಾರದ ಚುಕ್ಕಾಣಿಯಲ್ಲೇ ಇರುವಂತೆ ನೋಡಿಕೊಳ್ಳಬೇಕಾದ ಹೊಣೆಯೂ ಅವರದ್ದಾಗಿದೆ. ಇದನ್ನು ಸಾಮಾಜಿಕ ಸಂಘರ್ಷಗಳು ಹಾಗೂ ಹಿಂಸೆಗೆ ಕಾರಣವಾಗದ ರೀತಿಯಲ್ಲಿ ನಾಜೂಕಿನಲ್ಲಿ ನಿಭಾಯಿಸಬೇಕು. ಇದನ್ನು ಈಡೇರಿಸುವಲ್ಲಿ ಕ್ಸಿ ಸಫಲರಾಗುತ್ತಾರೋ ಇಲ್ಲವೋ ಎಂಬುದು ಬೇರೆಯದೇ ಮಾತಾದರೂ ಅವರು ಈಗಾಗಲೇ ತಮ್ಮ ದೇಶವಾಸಿಗಳ ಹಾಗೂ ಚೀನಾವನ್ನು ಆಸಕ್ತಿಯಿಂದ ನೋಡುತ್ತಿರುವ ವಿದೇಶಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೇಲೆ ವಿವರಿಸಿರುವ ವಿಷಯಗಳಲ್ಲಿ ಸಾಧನೆಯ ಮೆರಗು ತರುವ ಸಾಮರ್ಥ್ಯ ಅವರಲ್ಲಿದೆ ಎಂಬ ನಂಬಿಕೆಯಂತೂ ಎಲ್ಲರಲ್ಲೂ ಮೊಳೆತಿದೆ.
'ಗತದ ಸಂತರ ಪಾಠಗಳನ್ನು ಅರಿತುಕೊಂಡಾಗಲಷ್ಟೇ ಚೀನಾ ಕಮ್ಯುನಿಸ್ಟ್ ಪಾರ್ಟಿ ತನ್ನ ನೂರನೇ ವರ್ಷವನ್ನು ಆಚರಿಸಿಕೊಳ್ಳುವುದು ಸಾಧ್ಯ' ಎಂಬ ಮಹತ್ವದ ಮಾತುಗಳನ್ನಾಡಿದ್ದಾರೆ ಕ್ಸಿ. ಈ ಮೂಲಕ ಅವರು ಪ್ರಾಚೀನ ಚೀನಾದಲ್ಲಿ ಗೌರವಾದರಗಳಿಗೆ ಪಾತ್ರರಾಗಿದ್ದ ಕನ್‌ಫ್ಯೂಷಿಯಸ್, ಮೆನ್ಷಿಯಸ್ ಮತ್ತು ತತ್ವಜ್ಞಾನಿ ರಾಜ ಝುಗೆ ಲಿಯಾಂಗ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಅಂದರೆ ಚೀನಾದ ಈ ಹೊಸ ನಾಯಕ ಸೂಚ್ಯವಾಗಿ ಹೇಳುತ್ತಿರುವುದೇನೆಂದರೆ ಮಾರ್ಕ್ಸ್, ಲೆನಿನ್ ಹಾಗೂ ಮಾವೋ ಅವರು ಕಮ್ಯುನಿಸ್ಟ್ ಪಕ್ಷದ ಭವಿಷ್ಯವನ್ನು ಉತ್ತೇಜಿಸಬಲ್ಲ ಆಧ್ಯಾತ್ಮಕ ನಾಯಕರಾಗಿ ಪ್ರಸ್ತುತರಾಗಲಾರರು ಎಂದು. ಚೀನಾದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಆಗಿಹೋದ ಸಾಮಾಜಿಕ ಸುಧಾರಕರು ಮತ್ತು ಮೌಲ್ಯ ಹೊಂದಿದ್ದ ರಾಜರುಗಳು ಹೆಚ್ಚು ಪ್ರಸ್ತುತರಾಗುತ್ತಾರೆ ಎಂಬ ಧ್ವನಿ ಮೊಳಗಿಸಿದಂತಾಗಿದೆ.
ಇದು ಕೇವಲ ಕ್ಸಿ ಅವರ ವೈಯಕ್ತಿಕ ಬದ್ಧತೆ ಎಂದುಕೊಳ್ಳಬೇಕಿಲ್ಲ. ದೇಶದ ಬೌದ್ಧಿಕ ವಲಯ ಹಾಗೂ ಅತಿ ಚಟುವಟಿಕೆಯಿಂದ ಕೂಡಿರುವ ಅಂತರ್ಜಾಲ ಬಳಕೆದಾರರಲ್ಲಿ ಒಡಮೂಡುತ್ತಿರುವ ಭಾವನೆಗಳನ್ನು ಬಿಂಬಿಸುವ ಹೊಸ ಯೋಚನೆಯೊಂದನ್ನು ಅವರು ತಮ್ಮ ಮಾತುಗಳ ಮೂಲಕ ಬಿಂಬಿಸಿದ್ದಾರೆ ಅಷ್ಟೆ. ನಾನು ಮಹಾತ್ಮ ಗಾಂಧಿ ಕುರಿತ ಪುಸ್ತಕದ ಬಗ್ಗೆ ಉಪನ್ಯಾಸ ಕೊಡುವುದಕ್ಕೆ ಚೀನಾದ ಹಲವು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಖುದ್ದಾಗಿ ಕಂಡಿದ್ದೇನೆ. ಗಾಂಧಿ ಮತ್ತು ಅವರ ವಿಚಾರಧಾರೆಗಳ ಬಗ್ಗೆ ಅಲ್ಲಿ ಅನನ್ಯವಾದ ಗೌರವವಿದೆ. ಸತ್ಯದ ಅನ್ವೇಷಣೆ, ಅಹಿಂಸೆಯ ಆಚರಣೆ, ಪರಿಸರದ ಕುರಿತ ಗಾಂಧಿ ಬುದ್ಧಿಮತ್ತೆ, ಟ್ರಸ್ಟ್ ವ್ಯವಸ್ಥೆಯ ಪರಿಕಲ್ಪನೆ, ಮಹಿಳಾ ಬಲವರ್ಧನೆ, ಅಂತಾರಾಷ್ಟ್ರೀಯ ಸೌಹಾರ್ದ, ನಿಸ್ವಾರ್ಥ ಹಾಗೂ ಸರಳ ಬದುಕು ಇಂಥ ಎಲ್ಲ ಗಾಂಧಿತತ್ವಗಳೂ ಚೀನಾದ ಬೌದ್ಧಿಕ ವರ್ಗವನ್ನು ಪ್ರಭಾವಿಸಿವೆ. ಬೌದ್ಧ ಧರ್ಮದ ಕುರಿತು ಅವರ ಶ್ರದ್ಧೆಯೂ ಹೆಚ್ಚಾಗುತ್ತಿದೆ.
'ಚೀನಾದ ಪ್ರಾಚೀನ ಸಂತರು ಬೋಧಿಸಿದ್ದರಲ್ಲಿ ಹಾಗೂ ಗಾಂಧಿಯವರ ಉಪದೇಶಗಳಲ್ಲಿ ಬಹಳಷ್ಟು ಸಾಮ್ಯತೆ ಇದೆ' ಎನ್ನುತ್ತಾರೆ ಪ್ರೊಫೆಸರ್ ಕ್ವಾನ್ಯು ಶಾಂಗ್. ಸೌತ್ ಚೀನಾ ನಾರ್ಮಲ್ ವಿವಿಯಲ್ಲಿ ಅವರು ಗಾಂಧಿ ವಿಷಯಗಳ ತಜ್ಞರಾಗಿದ್ದಾರೆ. ಸಮತೂಕದ ಅಭಿವೃದ್ಧಿ ಹಾಗೂ ಸೌಹಾರ್ದ ಸಮಾಜದ ಕನಸು ಕಾಣುತ್ತಿರುವ ಚೀನಾಕ್ಕೆ ಗಾಂಧಿ ಬಹಳ ಪ್ರಸ್ತುತರಾಗುತ್ತಾರೆ ಎಂಬುದು ಅವರ ಅಭಿಮತ.      

- ಸುಧೀಂದ್ರ ಕುಲಕರ್ಣಿ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.