ಅಂಕಣಗಳು

ಅನುಕೂಲಸಿಂಧು ರಾಜಕಾರಣಕ್ಕೆ ಬಲಿಯಾಗುತ್ತಿರುವ ಭಾರತ!

Published On :

'ಭಾರತದ ನೀತಿ ನಿಯಮಗಳು ಅದರಲ್ಲೂ ವಿದೇಶಿ ನೀತಿಯನ್ನು ರೂಪಿಸುವಾಗ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲದೆ ಮತ್ತೇನನ್ನು ಪರಿಗಣಿಸುವುದಿಲ್ಲ.' ಇದು ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತು. ಹಾಗಿದ್ದರೆ, ರಾಷ್ಟ್ರದ ಹಿತಾಸಕ್ತಿಯನ್ನೇ ಮರೆಮಾಚಿದಂತೆ ನಡೆಯುತ್ತಿರುವ ಘಟನಾವಳಿಗಳ ಹೊಣೆ ಹೊರುವವರು ಯಾರು?  ವೋಟಿಗಾಗಿ ನೋಟು ಘಟನೆ ನಡೆದಾಗ, ಭಾರೀ ವಿರೋಧದ ನಡುವೆಯೂ ಎಫ್.ಡಿ.ಐ. ಹೇರಿಕೆ ಮತ್ತು ನೆರೆಯ ಶ್ರೀಲಂಕಾ ವಿರುದ್ಧ ಮತ ಚಲಾಯಿಸುವಾಗ ದೇಶದ ಸಾರ್ವಭೌಮತೆ, ರಕ್ಷಣೆಯ ಬಗ್ಗೆ ಯೋಚಿಸಿದ್ದು ಇದೆಯೇ?
ಇವು ತೀರಾ ಇತ್ತೀಚಿನ ಬೆಳವಣಿಗೆಗಳಷ್ಟೇ. 2008ರ ಜುಲೈ 22ರಂದು ವಿಶ್ವಾಸಮತ ಸಾಬೀತು ಪಡಿಸುವ ಅನಿವಾರ್ಯತೆ ಯುಪಿಎ-1ಕ್ಕೆ ಒದಗಿತ್ತು. ಅಮೆರಿಕದೊಂದಿಗಿನ ನಾಗರಿಕ ಅಣು ಒಪ್ಪಂದವನ್ನು ವಿರೋಧಿಸಿ ಎಡ ಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದವು. ಸರ್ಕಾರ ಉಳಿಸಿಕೊಂಡು, ಮಸೂದೆಗೆ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಬೆಂಬಲವನ್ನು ಯಾಚಿಸುತ್ತಿದ್ದರೆ, ವಿರೋಧಿಸಲಿಕ್ಕಾಗಿಯೇ ಎಂಬಂತೆ ಎನ್.ಡಿ.ಎ. ಮೈತ್ರಿಕೂಟ ವಿರೋಧಿಸುತ್ತಿತ್ತು. ಪ್ರಧಾನಿಯಾಗುವ ಕನಸು ಹೊತ್ತ ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮಾಯಾವತಿಯವರು ಹೊಸ ತಂತ್ರ ಹೆಣೆಯುತ್ತಿದ್ದರು. ಆ ಸಮಯದಲ್ಲಿ ಯಾರಿಗೂ ರಾಷ್ಟ್ರದ ಸಾರ್ವಭೌಮತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದಂತಿರಲಿಲ್ಲ. 543 ಸದಸ್ಯ ಬಲದ ಲೋಕಸಭೆಯಲ್ಲಿ 275 ಮತ ಪಡೆಯುವ ಮೂಲಕ ಯುಪಿಎ ಸರ್ಕಾರ ಅಧಿಕಾರ ಮುಂದುವರೆಸಿತು. ಮತ ಚಲಾಯಿಸಿದ ಜನತಾ ಪ್ರತಿನಿಧಿಗಳಲ್ಲಿ ನಾಗರಿಕ ಅಣು ಒಪ್ಪಂದದ ಬಗ್ಗೆ ಅರಿವು ಇಲ್ಲದವರೂ ಇದ್ದರೆ ಆಶ್ಚರ್ಯಪಡಬೇಕಿಲ್ಲ!
ಇನ್ನು ವಿದೇಶಿ ನೇರ ಬಂಡವಾಳ ಹೂಡಿಕೆ ವಿಚಾರದಲ್ಲಿ ನಡೆದದ್ದೂ ಅದೇ. ಶೇ.50ರಷ್ಟು ಎಫ್.ಡಿ.ಐ. ಅನ್ನು ದೇಶದ ಮೇಲೆ ಹೇರಿದರೆ ಆಗುವ ಸಾಧಕ-ಬಾಧಕಗಳನ್ನು ಯೋಚಿಸದೆ, ತಮ್ಮ ಅಸ್ತಿತ್ವ ಮತ್ತು ರಾಜಕೀಯ ಭವಿಷ್ಯಕ್ಕೆ ಹೆಚ್ಚು ಒತ್ತುಕೊಟ್ಟವರು ಹಲವರು.  ಎಫ್.ಡಿ.ಐ. ವಿರೋಧಿಸಿ ಮಮತಾ ಬ್ಯಾನರ್ಜಿ ಬೆಂಬಲ ಹಿಂತೆಗೆದುಕೊಂಡರೆ ಉತ್ತರಪ್ರದೇಶದಲ್ಲಿ ಇಂಗ್ಲಿಷ್ ಭಾಷೆಯನ್ನು ವಿರೋಧಿಸುವ ಮುಲಾಯಂಸಿಂಗ್ ಯಾದವ್ ಮತ್ತು ವಿಧಾನಸಭಾ ಚುನವಾಣೆಯಲ್ಲಿ ಸೋತು ಸುಣ್ಣವಾಗಿದ್ದ ಮಾಯಾವತಿ ಓಡೋಡಿ ಬಂದು ಯುಪಿಎ ಬೆಂಬಲಕ್ಕೆ ನಿಂತರು. ಸಮಾಜವಾದಿ ಪಕ್ಷದ 21 ಮತ್ತು ಬಹುಜನ ಸಮಾಜ ಪಕ್ಷದ 22 ಸದಸ್ಯರ ಬೆಂಬಲದಿಂದ ಮನಮೋಹನ್ಸಿಂಗ್ ಸರ್ಕಾರ ವಿದೇಶಿ ನೇರ ಬಂಡವಾಳಕ್ಕೆ ಕೆಂಪು ಹಾಸಿನ ಸ್ವಾಗತ ಕೋರಿತು. ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗುವ ಎಸ್ಪಿ, ಬಿಎಸ್ಪಿ, ನಮ್ಮ ನಡುವೆಯೇ ಬದುಕುತ್ತಿರುವ ಬೀದಿ ವ್ಯಾಪಾರಿಗಳ ಜೀವನದ ಬಗ್ಗೆ ಯೋಚಿಸಲಿಲ್ಲ. ದೇಶವಾಸಿಗಳಿಗಿಂತ ಅಧಿಕಾರ ಅಥವಾ ಅಸ್ತಿತ್ವವೇ ಮುಖ್ಯವಾದಂತಾಯಿತು.
ಇನ್ನು ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿದೆ ಎನ್ನಲಾದ ದೌರ್ಜನ್ಯದ ವಿಚಾರ. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸುಪ್ರೀಮ್ ಕರುಣಾನಿಧಿ ಯುಪಿಎ ಮೈತ್ರಿಕೂಟದಿಂದ ಹೊರಬರುತ್ತೇವೆ ಎನ್ನುವ ಮಾತನಾಡಿದರು. ಅಷ್ಟೇ. ಕೆಲ ಸಮಯದಲ್ಲೇ ಎಲ್ಲರ ಚಿತ್ತ ಹರಿದಿದ್ದು ಮುಲಾಯಂ ಸಿಂಗ್ ಮತ್ತು ಮಾಯಾವತಿಯವರತ್ತ. ಇಲ್ಲಿಯೂ ನಾ ಮುಂದು ತಾ ಮುಂದು ಎಂದು ಬೆಂಬಲ ನೀಡಲು ಮುಂದಾದರು.  ಆದರೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಅಮೆರಿಕ ಮಂಡಿಸಲಿದ್ದ ನಿರ್ಣಯವನ್ನು ಭಾರತ ಬೆಂಬಲಿಸಿದಲ್ಲಿ ಅಥವಾ ವಿರೋಧಿಸಿದಲ್ಲಿ ದೇಶಕ್ಕಾಗುವ ಲಾಭ-ನಷ್ಟಗಳನ್ನು ಚರ್ಚಿಸುವಷ್ಟು ವ್ಯವಧಾನವೂ ಇವರಿಗಿರಲಿಲ್ಲ.
ಅನುಕೂಲ ಸಿಂಧು ರಾಜಕಾರಣ ಮಾಡುವ ಪಕ್ಷಗಳ ಬೆಂಬಲದಿಂದ ಯುಪಿಎ ಸರ್ಕಾರ ಸುಭದ್ರವಾಗಿ ನಿಂತಿದೆ.  ಆ ಮೂಲಕ ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾ ಮಿಲಿಟರಿ ದೌರ್ಜನ್ಯದ ವಿರುದ್ಧ ಮತ ಚಲಾಯಿಸಿತು.  ಆದರೆ 12 ವರ್ಷಗಳಿಂದ ಉಪವಾಸ ಕುಳಿತಿರುವ ಐರೋಮ್ ಶರ್ಮಿಳಾ ಹೋರಾಟವನ್ನೇಕೆ ಗಮನಿಸುತ್ತಿಲ್ಲ? ಮಣಿಪುರ ಮತ್ತು ನೆರೆಯ ರಾಜ್ಯಗಳಲ್ಲಿರುವ ಸಶಸ್ತ್ರಪಡೆಯ ವಿಶೇಷಾಧಿಕಾರವನ್ನು ಹಿಂಪಡೆಯುವಂತೆ 2000ನೇ ಇಸವಿಯ ನವೆಂಬರ್ 02ರಿಂದ ಉಪವಾಸದ ಹೋರಾಟ ಮಾಡುತ್ತಿದ್ದಾರೆ ಶರ್ಮಿಳಾ. ಕಾಶ್ಮೀರದ ವಿಚಾರವಿನ್ನು ಜೀವಂತವಿದೆ. ಕಾಶ್ಮೀರ, ಶರ್ಮಿಳಾ ವಿಚಾರವನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆಸಬೇಕೆಂದರೆ ಉತ್ತರಿಸುವವರಾರು? ಮುಲಾಯಂ ಸಿಂಗ್ ಉತ್ತರಿಸುವರೇ, ಮಾಯಾವತಿಯವರೇ ಅಥವಾ ಕರುಣಾನಿಧಿ ಜವಾಬು ನೀಡುವರೇ? ರಾಷ್ಟ್ರದ ಸಾರ್ವಭೌಮತೆಯನ್ನೇ ಅಣಕಿಸುವ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲದೇ ಮತ್ತೇನನ್ನು ಪರಗಣಿಸಬಾರದು. ಆದರೆ ನಮ್ಮ ನೇತಾರರಿಗೆ ಇದ್ಯಾವುದರ ಅರಿವು ಇದ್ದಂತಿಲ್ಲ. ಆದರೆ ವಿಚಾರದ ಸೂಕ್ಷ್ಮತೆಯನ್ನು ಬೇರೆ ರೀತಿಯಲ್ಲಿ ಅಂದರೆ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದರ ಬಗ್ಗೆ ಜಾಗೃತರಾಗಬೇಕಿದೆ. ಶ್ರೀಲಂಕಾವನ್ನು ನೇರವಾಗಿ ವಿರೋಧಿಸುವ ಬದಲಿಗೆ, ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಿದ್ದರೆ ಸ್ವಲ್ಪ ಮಟ್ಟಿನ ಪರಿಹಾರ ಕಾಣಬಹುದಿತ್ತೇನೋ(?) ಎಲ್.ಟಿ.ಟಿ.ಇ. ವಿರುದ್ಧದ ಸಮರಕ್ಕೆ ಭಾರತೀಯ ಸೇನೆಯ ಸಹಾಯ ಪಡೆದುದನ್ನು ಶ್ರೀಲಂಕಾ ಮರೆತಿರಲಾರದು. ಸೂಕ್ಷ್ಮ ವಿಚಾರವಾಗಿರುವುದರಿಂದ ರಾಜಕೀಯ ಕಾರಣ ಅಥವಾ ಭಾಷೆಯ ಮೇಲಿನ ಅಭಿಮಾನದಿಂದ ರಾಷ್ಟ್ರದ ರಕ್ಷಣೆಗೆ ಧಕ್ಕೆ ತರುವ ನಿರ್ಧಾರ ಕೈಗೊಳ್ಳುವುದು ಅಪಾಯಕಾರಿ.
ಮೇಲಿನ ಘಟನೆಗಳು ಬೊಟ್ಟು ಮಾಡಿ ತೋರುವುದು ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಭಾರತ ಎಡವುತ್ತಿದೆ ಎಂಬುದನ್ನು.  ಒಂದು ಕಡೆ ಪಾಕಿಸ್ತಾನ ನರಿಯಂತೆ ಕಾದುಕುಳಿತಿದ್ದರೆ, ಇನ್ನೊಂದೆಡೆ ಚೀನಾ ರಣಹದ್ದಿನಂತೆ ಹವಣಿಸುತ್ತಿದೆ. ಶ್ರೀಲಂಕಾದ ಹಂಬನ್ತೋಟಾ ಎಂಬಲ್ಲಿ ಬಂದರು ನಿಮಾರ್ಣದ ಮೂಲಕ ಚೀನಾ ಭಾರತದ ಸುತ್ತಲೂ ತನ್ನ ನೆಲೆ ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪಾಕಿಸ್ತಾನ ದೇಶದೊಳಗೆ ಗಲಭೆ ಎಬ್ಬಿಸುವ ಕಣ್ಣಾಮುಚ್ಚಾಲೆ ಆಟಕ್ಕೆ ಕೈ ಹಾಕುತ್ತಿರುತ್ತದೆ. ಹೀಗಿದ್ದಾಗ್ಯೂ ಶ್ರೀಲಂಕಾದೊಂದಿಗಿನ ಬಾಂಧವ್ಯಕ್ಕೆ ಧಕ್ಕೆ ಬರುವಂತಹ ನಿರ್ಧಾರ ಕೈಗೊಳ್ಳುವುದು ಶತ್ರುವಿನ ಕೈ ಬಲಪಡಿಸಿದಂತಾಗುತ್ತದೆ.
ಒಳಗಿನ ಶತ್ರುಗಳಿಲ್ಲದಿದ್ದ ಪಕ್ಷದಲ್ಲಿ ಹೊರಗಿನ ಶತ್ರುವಿನಿಂದ ಯಾವ ತೊಂದರೆಯೂ ಬಾರದು ಎನ್ನುತ್ತಾರೆ ವಿನ್ಸ್ಟನ್ ಚರ್ಚಿಲ್. ಈ ಮಾತು ಸರ್ವಕಾಲಕ್ಕೂ ಅನ್ವಯಿಸುವಂತಹದ್ದು. ದೇಶದ ರಕ್ಷಣೆ, ಸಾರ್ವಭೌಮತೆಯ ವಿಚಾರ ಬಂದಾಗ ಅವರಿವರೆನ್ನದೆ ಎಲ್ಲರೂ ಒಂದೇ ನಿರ್ಧಾರಕ್ಕೆ ಕಟಿಬದ್ಧರಾದಲ್ಲಿ ಮಾತ್ರ ಚೀನಾ, ಪಾಕಿಸ್ತಾನದಂತಹ ರಾಷ್ಟ್ರಗಳಿಂದಾಗುವ ಅಪಾಯ ತಪ್ಪಿಸಬಹುದು. ಗಡಿ ವಿಚಾರವೊಂದೇ ಅಲ್ಲ, ಭಾರತದ ಮಾರುಕಟ್ಟೆಯನ್ನು ಕಾಮಧೇನುವಿನಂತೆ ಕಾಣುವ ಅಮೆರಿಕ ಇನ್ನಿತರ ದೇಶಗಳಿಗೆ ಕಡಿವಾಣವನ್ನೂ ಹಾಕಬಹುದು.
ಆದರಿದು ಆಗುವ ಮಾತೇ? ಅಣು ಒಪ್ಪಂದ, ಎಫ್.ಡಿ.ಐ., ಶ್ರೀಲಂಕಾ ವಿರುದ್ಧ ಮತ ಚಲಾವಣೆ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲ ಎನ್ನುವುದೇ ಸೂಕ್ತ.  ಆದರೆ ಸದ್ಯದ ರಾಜಕೀಯದ ಚಿಂತನೆಗಳನ್ನು ಹೊರಗಿಟ್ಟು ನೋಡಿದರೆ ಸಾಧ್ಯ ಎನ್ನುವ ಉತ್ತರವೂ ಲಭಿಸುತ್ತದೆ. ಭಾಷೆ, ಬಣ್ಣ, ಜನಾಂಗ, ಉಡುಪು, ಆಹಾರ, ಹವಾಮಾನ, ದೇವರು, ಧರ್ಮ, ಪಂಥ ಹೀಗೆ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು.  ಭಾರತದ ಸಾರಸರ್ವಸ್ವವೇ ಇದರಲ್ಲಡಗಿದೆ. ಶತಶತಮಾನಗಳಿಂದ ನಡೆದ ಆಕ್ರಮಣಗಳನ್ನು, ನೆಲದಲ್ಲಿಯೇ ಉದ್ಭವಿಸಿದ ಸವಾಲುಗಳನ್ನು ಎದುರಿಸಿಯೂ ಶಾಂತಿ ಸಹನೆ ಹೊಂದಲು ಕಾರಣ ವಿವಿಧತೆಯಲ್ಲಿ ಏಕತೆ ಎಂಬ ಅಂಶ.  ಗೆದ್ದಲು ಹುಳುಗಳು ಒಳಗಿನಿಂದಲೇ ಕೊರೆದು ಮರವನ್ನು ಟೊಳ್ಳಾಗಿಸುವ ರೀತಿಯಲ್ಲಿ, ಭಾರತವನ್ನು ಒಳಗಿನಿಂದಲೇ ದುರ್ಬಗೊಳಿಸುವ ಪ್ರಯತ್ನಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇತಿಹಾಸದಲ್ಲಿ ದಂಡೆತ್ತಿ ಬಂದವರಿಗೆಲ್ಲಾ ಅಡ್ಡದಾರಿಯ ಮಾರ್ಗ ತೋರಿದವರು ಇಲ್ಲಿನ ಸ್ವಾರ್ಥಿಗಳೇ.  
ಆದರಿಂದು ಪ್ರಜಾಪ್ರಭುತ್ವದಲ್ಲಿ ಬೇರೆಯದೇ ರೀತಿಯಲ್ಲಿ ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತರಲಾಗುತ್ತಿದೆ.  ವಿವಿಧ ಭಾಷೆ, ಪ್ರಾದೇಶಿಕ ಭಿನ್ನತೆಯಲ್ಲಿದ್ದರೂ ರಾಷ್ಟ್ರೀಯ ಏಕತೆಯ ವಿಚಾರದಲ್ಲಿ ರಷ್ಯಾವನ್ನು ಅನುಸರಿಸಿದರೆ ಹೆಮ್ಮೆ ಎನಿಸುತ್ತಿದೆ. ಜಪಾನಿಗರಿಗೆ ದೇಶವಲ್ಲದೆ ಮತ್ತೇನೂ ದೊಡ್ಡದಲ್ಲ. ಅದಕ್ಕೊಂದು ಉದಾಹರಣೆ ವಾಸ್ತವಕ್ಕೆ ಹತ್ತಿರವೆನ್ನಬಹುದಾದ ಈ ಕಥೆ. ಜಪಾನ್ ದೇಶದ ಶಾಲೆಯೊಂದರಲ್ಲಿ ಮಕ್ಕಳ ದೇಶಪ್ರೇಮವನ್ನು ಅರಿಯಲು ಶಿಕ್ಷಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ನೀನು ಪೂಜಿಸುವ ದೇವರು ಯಾರು ಎಂದು ಕೇಳಿದರು.  ಬುದ್ಧನೇ ನನ್ನ ದೇವರು, ಆತನೇ ಸರ್ವಸ್ವ ಎಂದು ಉತ್ತರಿಸಿದ ವಿದ್ಯಾರ್ಥಿ.  ಶಿಕ್ಷಕರ ಮರುಪ್ರಶ್ನೆ, ಬುದ್ಧ ಜಪಾನ್ನ ಮೇಲೆ ಯುದ್ಧ ಮಾಡಲು ಬಂದರೆ ಏನು ಮಾಡುತ್ತೀಯ? ಅದಕ್ಕುತ್ತರಿಸಿದ ಆ ವಿದ್ಯಾರ್ಥಿ, ಕತ್ತಿ ಹಿಡಿದು ನಾನೇ ಎದುರಿಸುತ್ತೇನೆ!.  ಇಲ್ಲಿ ಸಿಗುವ ಸಾರಾಂಶವಿಷ್ಟೇ ದೇವರು, ಧರ್ಮ, ಅಸ್ತಿತ್ವ, ಭವಿಷ್ಯ ಎಲ್ಲಕ್ಕಿಂತಲೂ ಮಿಗಿಲು ದೇಶ.  ಅದರೆ ದೇಶದ ಹಿತಾಸಕ್ತಿಯನ್ನೇ ಮರೆತ ನಮ್ಮ ನೇತಾರರ ವರ್ಗದಿಂದ ನಿರೀಕ್ಷಿಸುವುದಾದರೂ ಏನನ್ನು?

-  ಗೋಪಾಲ್.ಸಿ
gkckm@yahoo.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.