ಆಹಾ ನೋಡದೋ ಗಣಿ ಮಣ್ಣಿನ ಜಿಂಕೆ, ಧೂಳಾಯಿತಲ್ಲೋ ಬಳ್ಳಾರಿವೊಳ್ಗೆ ಪಾರ್ಟಿ ಮಂಕೆ, ರಾಮನ ಅವತಾರ ಶ್ರೀರಾಮನ ಅವತಾರ, ನೆಟ್ಟಗೆ ಆಗ್ಲಿಲ್ಲ ಬಿಎಸ್‌ಆರ್ ಪಾರ್ಟಿ ವ್ಯವಹಾರ...
ಹಿಂಗಂತೇಳಿ ಬಳ್ಳಾರಿ ಗಣಿ ಧಣಿಗಳ ಮಾಸ್ಟ್ರು ಮೈಂಡು ರೆಡ್ಡಿಗಾರು ಜೈಲ್ನಾಗೆ ಹಾಡ್ಕತಾಯಿದ್ರು. ಸಿಬಿಐನೋರು ಸಿಕ್ಕಾಪಟ್ಟೆ ಖುಸಿ ಆಗೋಗಿ 'ಹಾಡ್ನಾಗೆ ವಸಿ ಧಂ ಇರ್ಲಿ, ರಿದಂ ಇರ್ಲಿ' ಅಂತಂದ್ರು.
'ರಾಮಯ್ಯ ಏನಾಯ್ತಯ್ಯ, ಬಾಯ್ಗೆ ಮಣ್ಣು ಬಿದ್ದೋಯ್ತಯ್ಯ, ಬಳ್ಳಾರಿ ಜನ ಕೊಟ್ರಲ್ಲ ಕೈಯ್ಯ' ಅಂತೇಳಿ ರೆಡ್ಡಿಗಾರು ರಾಗ ಬುಟ್ರು. 'ವೋಗಿ ರೆಡ್ಡಿಗಾರು ಬರೇ ಸ್ಯಾಡ್ ಸಾಂಗು, ಸ್ಯಾಂಡ್ ಸಾಂಗು ಹಾಕಿ' ಅಂದ್ರು ಸಿಬಿಐನೋರು. 'ಸ್ಯಾಂಡ್ ಸಾಂಗ್ ಅಂದ್ರೆ ಏನು ಸಿವಾ ?' ಅಂದ್ರು ರೆಡ್ಡಿಗಾರು.
'ಹಾಡ್ನಾಗೆ ಮಣ್ಣುದು ವಾಸ್ನೆ ಇರ್ಬೇಕು. ಘಮಘಮ ಅಂತಾಯಿರ್ಬೇಕು, ಕೇಳ್ತಾಯಿದ್ರೆ ಕುಣ್ಯಂಗೆ ಆಗಬೇಕು ತಿಳೀತಾ' ಸಿಬಿಐನೋರು. 'ವೋ, ಸುಮ್ಕಿರ್ರಪ್ಪ, ಅಜ್ಜಿಗೆ ಅರಿವೆ ಚಿಂತೆ ಅಂದ್ರೆ ಮೊಮ್ಮಗಳ್ಗೆ ಇನ್ನೇನೋ ಚಿಂತೆ ಅಂತರಲ್ಲ ಹಂಗೆ ನಿಮ್ದೊಳ್ಳೆ ಕಥೆ ಆಯ್ತು. ವೋಗ್ಲಿ ತಕ್ಕಳಿ, ಅರೆರೆ ಗಣಿ ರಾಮ, ತಿಕ್ಬುಟ್ರಲ್ಲ ವುಂಡೆ ನಾಮ' ಅಂತ ಬುಟ್ರು ರೆಡ್ಡಿಗಾರು.
'ರೀ ಸ್ವಾಮಿ ನಿಮ್ಗೆ, ಗಣಿ, ಮಣ್ಣು ಬುಟ್ರೆ ಬ್ಯಾರೆ ಹಾಡು ಬರಾಕಿಲ್ವಾ ? ವೊಳ್ಳೇ ಸಾವಾಸ ಆಯ್ತಲ್ಲ. ಮ್ಯೂಜಿಕ್ಕು ಅಂದ್ರೆ ಹಂಸಲೇಖ ಥರ ಮ್ಯಾಜಿಕ್ಕು ಇರ್ಬೇಕು. ನೀವು ನೋಡುದ್ರೆ ಪಿಟೀಲು ಥರ ಕುಯ್ತಾಯಿದ್ದೀರ. ಯಾವ್ ಸೀಮೆ ಜನ ಕಣ್ರಿ ನೀವು' ಅಂತೇಳಿ ಸಿಬಿಐನೋರು ವಸಿ ರಾಂಗ್ ಅಬುಟ್ರು. 'ಗಣಿ ಯವಾರ ಯಾವಾಗ ಕೈ ಕೊಡ್ತೋ, ನಾನು ಯಾವಾಗ ಈ ಕಂಬಿ ಹಿಂದ್ಲಾಗಡೆ ಬಂದ್ಬುಟ್ನೋ ಅವಾಗ್ಲೇ ನಮ್ದು ಧಮ್ಮು, ರಿದಮ್ಮು ವೊಂಟೋಯ್ತು' ಅಂದ್ರು ರೆಡ್ಡಿಗಾರು.
'ಅದ್ಯಾಕೆ, ನಿಮ್ ಬ್ರದರ್ರು ಸೀರಾಮ್ಲು ಅಚೆಕಡೆ ಅವ್ರಲ್ಲಾ ಎಲ್ಲ ನೋಡ್ಕತರೆ ಬುಡಿ' ಅಂದ್ರು ಸಿಬಿಐನೋರು. 'ಹೌದು ಕಣ್ರಪ್ಪೋ, ಎನಿ ಸೆಂಟರ್ ಸಿಂಗಲ್ ಹ್ಯಾಂಡು ಥರ ಮನ್ಸ ನಮ್ ಬ್ರದರ್ರು. ಈವಾಗ ಹ್ಯಾಂಡಿಕ್ಯಾಪು ಆಬುಟ್ಟವ್ನೆ' ಏನಂತ ಮಾಡಾದು ಅಂದ್ರು ರೆಡ್ಡಿಗಾರು. 'ಮಿಲ್ಕ್ ಡೈರಿ ಸೋಮಸೇಖರ್ರು, ಸೀರಾಮ್ಲು ಬಾಮೈದ ಸುರೇಸು, ಸಾಂತಕ್ಕ, ಫಕೀರಪ್ಪ ಎಲ್ಲಾನೂ ಅವ್ರಲ್ಲ' ಅಂದ್ರು ಸಿಬಿಐನೋರು. 'ನಾನೂವೆ ಅವ್ರೆ ಅನ್ಕಂಡೇ ಇದ್ದೆ ಕಣ್ರಪ್ಪೋ, ಏನ್ಮಾಡೋದು, ಮುನ್ಸಿಪಾಲ್ಟಿ ಎಲೆಕ್ಸನ್ ರಿಜಲ್ಟು ಬಂದ್ಮೇಕೆ ನೋಡುದ್ರೆ ಡಮ್ಮಿ ಅಂತ ಪ್ರೂವ್ ಆಗೋಬುಟ್ರು' ಅಂತಂದ್ರು ರೆಡ್ಡಿಗಾರು.
'ಏನಾಯ್ತು ಎಲೆಕ್ಸಾನ್ನಾಗೆ ? ಯಾರು ಕೈಬುಟ್ರೂ ಬಳ್ಳಾರಿ ಮಂದಿ ನಿಮ್ ಕೈ ಬುಡಾಕಿಲ್ಲಾ ಅಲ್ವಾ ?' ಅಂದ್ರು ಸಿಬಿಐನೋರು. 'ನಾನೂವೆ ಹಂಗೆ ಅನ್ಕಂಡಿದ್ದೆ. ಬಳ್ಳಾರಿ ವೊಳ್ಗೆ ನಾವು ಕಟ್ಕಂಡಿರೋ ಕ್ವಾಟೆ ಪಸಂದಾಗದೆ. ಯಾರು ಮರುತ್ರು ಬಳ್ಳಾರಿ ಜನ ನಮ್ಮುನ್ನ ಮರ್ಯಂಗಿಲ್ಲ. ಅಲ್ಲಿ ನಾವು ಆಡಿದ್ದೇ ಆಟ, ಕೊಟ್ಟಿದ್ದೇ ಕಾಟ ಅಂತ ತಿಳ್ಕಂಡಿದ್ವಿ. ಎಲ್ಲಪ್ಪ ಕೈ ಹಿಡುದ್ರು ಎಲೆಕ್ಸನ್ನಾಗೆ ?'
'ಗಣಿಯೊಳಗಿಂದ ಲಾರಿ ಲೋಡು ಮಣ್ಣು ತಂದು ಹಂಗೇ ನಮ್ ತಲೆಮ್ಯಾಲೆ ಸುರುದ್ರಲ್ಲಪ್ಪ. ಮಣ್ಣು ಸುರ್ದಿದ್ದು ಸಾಲ್ದು ಅಂತ, ಕೈಕಾಲು ಕಟ್ಟಾಕಿ ಗಣಿಯೊಳ್ಗೆ ತಳ್ಬುಟ್ರು. ಪಾಪ ಸೀರಾಮ್ಲು ಗೊಳೋ ಆಂತ ಅಳ್ತಾವ್ನೆ ಕಣ್ರಪ್ಪೋ ಅಳ್ತಾವ್ನೆ. ಗೋಳು ನೋಡಕ್ಕೆ ನನ್ ಕೈನಾಗೆ ಆಗಾಕಿಲ್ಲ. ಈ ಸೀನು ನೋಡಕ್ಕೆ ನಾನು ಇರ್ಬೇಕಾಯಿತ್ತಾ?' ಅಂದ್ರು ರೆಡ್ಡಿಗಾರು. 'ಬಳ್ಳಾರಿವೊಳ್ಗೆ ಕಮ್ಮಿ ಸೀಟು ಬಂದೋಗೈತೇನು? ವೋಗ್ಲಿ ಬುಡಿ ಅಸೆಂಬ್ಲಿ ಎಲೆಕ್ಸನ್ನಾಗೆ ನಿಮ್ ಪೌರುಸ ತೋರ್ಸುದ್ರೆ ಆಯ್ತು' ಅಂದ್ರು ಸಿಬಿಐನೋರು. 'ಕಮ್ಮಿ ಸೀಟಾ? ಮನ್ಯಾಗೆ ಕೂತ್ಕಳಕ್ಕೆ ಇರೋ ಸೀಟು ಬುಟ್ರೆ ಇನ್ಯಾವ ಸೀಟೂ ಗಿಟ್ಟಿಲ್ಲಪ್ಪೋ' ಅಂತೇಳಿ ರೆಡ್ಡಿಗಾರೂ ವೊಂದೇ ಕಣ್ಣಾಗೆ ಗೋಳಾಡಕ್ಕೆ ಸುರು ಮಾಡುದ್ರು.
'ಇದು ಸ್ಯಾನೆ ಆತು ಬ್ಯಾಡು ಬುಡಿ. ಜನ ಯಾಕೆ ಹಿಂಗೆ ಆಬುಟ್ರು. ಅಲ್ಲ ಸೀರಾಮ್ಲು ಆ ಪಾಟಿ ಪ್ಯಾನು ತಿರುಗ್ಸುದ್ರು. ಆದ್ರೂ ಆ ಸಿಂಬಲ್ಗೆ ವೋಟು ಯಾಕೆ ಗುದ್ದಿಲ್ಲ ಅಂತ? ಎಲ್ಲೋ ಯಡ್ವಟ್ಟು ಆಗದೆ ಬುಡಿ. ಅಲ್ಲ, ಅವ್ರು ಯಾವ್ದು ಪ್ಯಾನು ತಿರುಗ್ಸಿದ್ದು? ಖೇತಾನೋ, ಉಷಾನೋ?' ಅಂದ್ರು ಸಿಬಿಐನೋರು.
'ಖೇತಾನೋ, ಸೈತಾನೋ ಯಾವ್ದೂ ತಿರುಗ್ಸುದ್ರು ಬುಡ್ರಪ್ಪ, ತಿರುಗ್ಸಿ ತಿರುಗ್ಸಿ ಸೀರಾಮ್ಲು ಕೈ ಸೀದೋಯ್ತು ವೋಗ್ರಪ್ಪ' ಅಂತೇಳಿ ರೆಡ್ಡಿಗಾರು ಎದ್ದೋದ್ರು.
- ಕೆ.ವಿ.ಪ್ರಭಾಕರ್
prabhukolar@yahoo.com