ಇಷ್ಟಕ್ಕೂ ಸಂಜಯ್ ಏನು ಅಕಳಂಕನೇ?

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದು ಮೊದಲ ತಪ್ಪು. ಗಮನಕ್ಕೆ ತರದಿದ್ದುದು ಎರಡನೇ ತಪ್ಪು
Updated on: 

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದು ಮೊದಲ ತಪ್ಪು. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಅದನ್ನು ಅಧಿಕಾರಿಗಳ ಗಮನಕ್ಕೆ ತರದಿದ್ದುದು ಎರಡನೇ ತಪ್ಪು

ಮುಂಬಯಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಹೊರಬಿದ್ದಿದೆ. ಮೊನ್ನೆ ಶುಕ್ರವಾರ ಸುಪ್ರೀಂಕೋರ್ಟ್ ಈ ಕರಾಳ ಅಧ್ಯಾಯದ ಕೊನೆ ಬರೆದಿದೆ. ಯಾಕೂಬ್ ಮೆಮಾನ್‌ಗೆ  ಗಲ್ಲಾದರೆ, ಉಳಿದ 10 ಮಂದಿಗೆ ಜೀವಾವಧಿ ಸಜೆಯಾಗಿದೆ. ಈ ಪಟ್ಟಿಯಲ್ಲಿದ್ದ ಬಾಲಿವುಡ್ಡಿಗ ಸಂಜಯ್ ದತ್ ಮೂರೂವರೆ ವರ್ಷದ ಸೆರೆವಾಸ ಪೂರ್ಣಗೊಳಿಸಬೇಕಿದೆ. ತೀರ್ಪು  ಹೊರಬೀಳುತ್ತಿದ್ದಂತೆಯೇ ಸಂಜಯ್ ದತ್‌ಗೆ ಅನುಕಂಪದ ಮಹಾಪೂರವೇ ಹರಿದಿದೆ. ಅದು ಸಹಜ. ಆದರೆ ಈ ಅನುಕಂಪ ನ್ಯಾಯಪಾಲನೆಯನ್ನೇ ಪ್ರಶ್ನಿಸುವ ಅತಿರೇಕ ಮುಟ್ಟಿದೆ. ಅದು  ಅಸಹನೀಯ. 'ಸಂವಿಧಾನದ 161ನೇ ಕಲಂನ ಅಧಿಕಾರ ಬಳಸಿ ಮಹಾರಾಷ್ಟ್ರ ರಾಜ್ಯಪಾಲರು ಸಂಜಯ್ ದತ್‌ಗೆ ಮಾಫಿ ನೀಡಬೇಕು. ಇಷ್ಟಕ್ಕೂ ಅವನೇನು ಕ್ರಿಮಿನಲ್ ಅಲ್ಲ,  ಭಯೋತ್ಪಾದಕನೂ ಅಲ್ಲ, ಈ ಬಗ್ಗೆ ನಾನೇ ಸ್ವತಃ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ' ಎಂದು ಪ್ರೆಸ್ ಕೌನ್ಸಿಲ್ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ತಮ್ಮ ಎಂದಿನ   activist  ಭಾಷಣ ಬಿಗಿದರೆ, 'ಎಂದೋ ತಿಳಿಯದೆ ಮಾಡಿದ ತಪ್ಪಿಗೆ ಸಂಜಯ್ ದತ್ ಈಗಾಗಲೇ ಸಾಕಷ್ಟು ಪರಿತಾಪ ಪಟ್ಟಿದ್ದಾನೆ. ಅವನನ್ನು ಮತ್ತೆ ಜೈಲಿಗೆ ಅಟ್ಟುವುದು ಸರಿ ಅಲ್ಲ. ಆತನನ್ನು ಸಜೆ  ಮುಕ್ತಗೊಳಿಸುವಂತೆ ನಾನು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ' ಎಂದು ಸಂಸದೆ ಜಯಾ ಬಚ್ಚನ್ ಟಿವಿ ಚಾನೆಲ್‌ಗಳಿಗೆ ಬೈಟ್ ನೀಡಿದರು. ದೂರದ ದುಬೈನಲ್ಲಿದ್ದ ಬಿಜೆಪಿ ಸಂಸದ ಶತ್ರುಘ್ನಸಿನ್ಹಾ  'ಈ ವಿಚಾರದಲ್ಲಿ ನಾನು ಕಟ್ಜು ಅವರ ನಿಲವನ್ನು ಸಮರ್ಥಿಸುತ್ತೇನೆ. ಸಂಜಯ್‌ಗೆ ಮಾಫಿ ನೀಡಲೇಬೇಕು' ಎಂದು ಗುಡುಗಿದರು. ದಕ್ಷಿಣದ ಕಡೆಯಿಂದ ರಜನಿಕಾಂತ್, ಚಿರಂಜೀವಿ ಸಹ ಸಂಜಯ್ ಪರ ಕೋರಸ್‌ಗೆ ದನಿಗೂಡಿಸಿದರು. ಇದನ್ನೆಲ್ಲ ನೋಡಿದರೆ ಸುಪ್ರೀಂಕೋರ್ಟ್ ತಪ್ಪು ಮಾಡಿಬಿಟ್ಟಿದೆ. ಸಂಜಯ್ ದತ್ ಏನೂ ತಿಳಿಯದ ಮುಗ್ಧ. ತಪ್ಪು ಮಾಡಿದ್ದರೂ ಅವನಿಗೆ ಶಿಕ್ಷೆ  ನೀಡಬಾರದಿತ್ತು. ಸುಪ್ರೀಂಕೋರ್ಟ್‌ಗೆ ಬುದ್ಧಿ ಹೇಳಲಾಗುವುದಿಲ್ಲ. ಆದರೆ ರಾಜ್ಯಪಾಲರು ಸಂಜಯ್ ನೆರವಿಗೆ ಬರಬೇಕು. ನ್ಯಾಯಾಲಯದ ಆದೇಶ ಜಾರಿಗೆ ಬ್ರೇಕ್ ಹಾಕಬೇಕು ಎಂಬುದು ಎಲ್ಲರ  ಒಕ್ಕೊರಲ ಮನವಿಯಾಗಿತ್ತು. ಇವರೆಲ್ಲರ ಅಯ್ಯೋ ಪಾಪಗಳು ಸಂಜಯ್‌ನ ಪಾಪಗಳನ್ನು ತೊಳೆದು ಬಿಟ್ಟಿದ್ದವು. ಸಂಜಯ್ ತೀರಾ ಒಳ್ಳೆಯವ. ನಮ್ಮ ನ್ಯಾಯ ವ್ಯವಸ್ಥೆಯೇ ತಪ್ಪು ಎನ್ನುವ ಧ್ವನಿ  ಇಲ್ಲಿ ಅಡಕವಾಗಿತ್ತು. ಹಾಗಾದರೆ ಸಂಜಯ್ ದತ್ ನಿಜಕ್ಕೂ ಅಕಳಂಕನೇ?
1993, ಮಾರ್ಚ್. ಮುಂಬಯಿಯ ಅನೇಕ ಕಡೆ ಸರಣಿಯಲ್ಲಿ ಬಾಂಬುಗಳು ಸ್ಫೋಟಿಸಿದವು. 272 ಮುಗ್ಧ ಜೀವಗಳು ತಮ್ಮದಲ್ಲದ ತಪ್ಪಿಗೆ ಬಲಿಯಾದವು. ಯಾವುದೇ ರೀತಿಯಲ್ಲಿ  ನೋಡಿದರೂ ಇದೊಂದು ಭಯೋತ್ಪಾದನೆಯ ಕೃತ್ಯವೇ. ಯೋಜನೆ, ಅನುಷ್ಠಾನ, ಪಿತೂರಿ ಈ ಯಾವುದೇ ರೀತಿಯಲ್ಲೂ ಇದು 26/11ರ ಭಯೋತ್ಪಾದನಾ ಕೃತ್ಯಕ್ಕಿಂತ ಭಿನ್ನವಾಗಿರಲಿಲ್ಲ.  26/11ರ ಹಿಂದೆ ಪಾಕ್‌ನ ಕೈವಾಡವಿದ್ದರೆ 1993ರ ಕುಕೃತ್ಯದ ಹಿಂದೆ ಭಾರತದವನೇ ಆಗಿದ್ದ ದಾವೂದ್ ಇಬ್ರಾಹಿಂ ನೇರವಾಗಿ ನಿಂತಿದ್ದ. ಅಂತಹ ದೇಶದ್ರೋಹಿ ದಾವೂದ್‌ನ ತಮ್ಮ ಅನೀಸ್  ಇಬ್ರಾಹಿಂ ಜೊತೆ ಸಂಜಯ್ ದೋಸ್ತಿ ಬೆಳೆದಿತ್ತು. ಮುಸ್ಲಿಮರ ಪರವಾಗಿ ತನ್ನ ತಂದೆ ಸುನಿಲ್ ದತ್ ಪಾದಯಾತ್ರೆ ಕೈಗೊಂಡ ಹಿನ್ನೆಲೆಯಲ್ಲಿ ಹಿಂದೂಗಳಿಂದ ತನಗೆ ಪ್ರಾಣ ಬೆದರಿಕೆ ಬರಬಹುದು  ಎಂದು ಸಂಜಯ್ ಹೆದರಿದ್ದನಂತೆ. ತನ್ನ ಆತ್ಮ ರಕ್ಷಣೆಗಾಗಿ ದೇಶದ್ರೋಹಿಗಳಿಂದ ಅಕ್ರಮವಾಗಿ ಬಂದೂಕುಗಳನ್ನು ಪಡೆದ. ಅಲ್ಲ, ಪ್ರಾಣ ಬೆದರಿಕೆ ಇದೆ ಎಂದಾದರೆ ಪರವಾನಗಿ ಪಡೆದು  ಸಕ್ರಮವಾಗಿಯೇ ಬಂದೂಕು ಹೊಂದಲು ದೇಶದ ಎಲ್ಲ ನಾಗರಿಕರಿಗೆ ಅವಕಾಶವಿದೆ. ಸಂಜಯ್‌ಗೆ ಈ ಸತ್ಯ ಗೊತ್ತಿರಲಿಲ್ಲವೆ? ಹೋಗಲಿ, ಆತ್ಮ ರಕ್ಷಣೆಗೆಂದು ಪಿಸ್ತೂಲು, ಬಂದೂಕು ಅಷ್ಟನ್ನೇ  ಹೊಂದಿದ್ದರೆ ಪರವಾಗಿಲ್ಲ. ಆದರೆ ಸಂಜಯ್‌ನ ಕರೆ ವಿವರಗಳನ್ನು ಪಡೆದು ಪೊಲೀಸರು ಆತನ ಮನೆಗೆ ನುಗ್ಗಿದಾಗ ಸಿಕ್ಕ ಶಸ್ತ್ರಾಸ್ತ್ರಗಳಾದವೂ ಎಂಥದ್ದು? 3 ಎಕೆ-56 ರೈಫಲ್, 9  ಮ್ಯಾಗಝೀನ್‌ಗಳು, 450 ಕಾಟ್ರಿಡ್ಜ್, 9 ಎಂಎಂ ಪಿಸ್ತೂಲು ಮತ್ತು 20ಕ್ಕೂ ಹೆಚ್ಚು ಹ್ಯಾಂಡ್ ಗ್ರೆನೇಡ್‌ಗಳು! ಇದರಲ್ಲಿ ಪಿಸ್ತೂಲು ಹೊರತುಪಡಿಸಿ ಉಳಿದವು  Assault rifleಗಳು. ಪ್ರಾಣ  ರಕ್ಷಣೆಗೆ ನಾವು-ನೀವು ಇಂತಹ ಅಸ್ತ್ರಗಳನ್ನು ಹೊಂದಲು ಸಾಧ್ಯವೇ? ಅಂತಹ ಸಮಜಾಯಿಷಿ ನೀಡಲು ಸಾಧ್ಯವೇ? ಮುಂಬಯಿ ತಳಮಳದಲ್ಲಿದ್ದ ಸಂದರ್ಭದಲ್ಲಿ ಅದನ್ನು ಪ್ರಕ್ಷುಬ್ಧ ಪ್ರದೇಶ  ಎಂದು ಘೋಷಿಸಲಾಗಿತ್ತು. ಆತನೇ ಹೇಳುವಂತೆ ಸಂಜಯ್ ನಿಜವಾಗಲೂ ಮುಗ್ಧನೇ ಆಗಿದ್ದರೆ, ಕೂಡಲೇ ತನ್ನ ಬಳಿ ಇರುವ ಅಸ್ತ್ರಗಳನ್ನು ಪೊಲೀಸರಿಗೊಪ್ಪಿಸಿ ತಪ್ಪಾಯ್ತು ಎಂದು  ಹೇಳಬಹುದಿತ್ತಲ್ಲವೇ? ಆದರೆ ಅದಾವುದನ್ನೂ ಮಾಡದೆ ಈಗ ಮುಗ್ಧತೆಯ ಸೋಗು ಹಾಕುವುದು ಎಷ್ಟು ಸಮಂಜಸ? ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದು ಮೊದಲ ತಪ್ಪು. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ  ಅದನ್ನು ಅಧಿಕಾರಿಗಳ ಗಮನಕ್ಕೆ ತರದಿದ್ದುದು ಎರಡನೇ ತಪ್ಪು. ಕಾನೂನು ಸರಿಯಾದ ದಿಕ್ಕಿನಲ್ಲಿ ಸಾಗಿದ್ದಿದ್ದರೆ ಟಾಡಾ ಅಡಿ ಸಂಜಯ್ ಕನಿಷ್ಠ 10 ವರ್ಷ ಕಂಬಿ ಎಣಿಸಬೇಕಾಗುತ್ತಿತ್ತು. ಆದರೆ  ವಿಚಾರಣೆ ನಡೆಸಿದ ನ್ಯಾಯಾಧೀಶರ ನ್ಯಾಯ ವಿವೇಚನೆಯಲ್ಲಿ ಟಾಡಾ ಕೈಬಿಟ್ಟು ಕೇವಲ ಶಸ್ತ್ರಾಸ್ತ್ರ ಕಾಯಿದೆಯಡಿ ಈತನಿಗೆ ಆರು ವರ್ಷ ಶಿಕ್ಷೆಯಾಗಿ ಈಗ ಸುಪ್ರೀಂಕೋರ್ಟ್ ಅದನ್ನು ಐದು ವರ್ಷಕ್ಕೆ ಇಳಿಸಿದೆ. ಸಂಜಯ್‌ಗೆ ಇದಕ್ಕಿಂತ ದೊಡ್ಡ ವಿನಾಯಿತಿ ಬೇಕೆ? ಆತ ಸಂಜಯ್ ಆಗಿರದಿದ್ದರೆ ಈ ವಿನಾಯಿತಿ ಸಾಮಾನ್ಯರಿಗೆ ದತ್ತವಾಗುತ್ತಿತ್ತೇ? ಇಂದು ಈತನ ಮುಗ್ಧತೆಯನ್ನು ಪ್ರಮಾಣೀಕರಿಸುವ ಬುದ್ಧಿಗೇಡಿ ಜೀವಿಗಳಿಗೆ ಇದು ಅರ್ಥವಾಗುವುದಿಲ್ಲವೇ?
ಜೈಬುನ್ನೀಸಾ ಕಾಜಿ. 71ರ ವಯೋವೃದ್ಧ ಮಹಿಳೆ. ಆಗಿನ್ನೂ ಅಬು ಸಲೀಂ ಮುಂಬಯಿಯಲ್ಲಿ ಅಕ್ರಮದಂಧೆ ನಡೆಸುತ್ತಿದ್ದ. ಜಮೀನು ಮಾರಾಟದ ವಿಷಯದಲ್ಲಿ ಜೈಬುನ್ನೀಸಾಗೂ ಅಬು ಸಲೀಂಗೂ ಸಂಪರ್ಕ ಬೆಳೆಯಿತು. ರಿಯಲ್ ಎಸ್ಟೇಟ್‌ನಲ್ಲೂ ಸಲೀಂ ನಿರತನಾಗಿದ್ದ. ಹಾಗಾಗಿ ಜೈಬುನ್ನೀಸಾ ಆತನ ನೆರವು ಕೇಳಿದ್ದುಂಟು. ಸಲೀಂ ಈ ಸಂಬಂಧ ಆಗಾಗ ಜೈಬುನ್ನೀಸಾ ಮನೆಗೆ ಬಂದು ಹೋಗುತ್ತಿದ್ದ. ಅದೊಂದು ದಿನ ಜೈಬುನ್ನೀಸಾಳ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಚೀಲ ಇರುವ ಸುಳಿವು ದೊರೆತು ಪೊಲೀಸಲು ರೇಡ್ ಮಾಡಿದಾಗ ಆಕೆ ಸಿಕ್ಕಿಬಿದ್ದಳು. ಆಕೆಯನ್ನೂ ಸಂಜಯ್‌ನಂತೆಯೇ ಟಾಡಾ ಕಾಯಿದೆಯಡಿ ಬಂಧಿಸಲಾಯಿತು. ಆಕೆಗೆ ಅದೇ ಕಾಯಿದೆಯಡಿ ಐದು ವರ್ಷಗಳ ಕಠಿಣ ಸಜೆಯಾಗಿದೆ. ಸಂಜಯ್‌ಗೆ ಸಿಕ್ಕ ವಿನಾಯಿತಿ ಆಕೆಗೆ ಸಿಕ್ಕಿಲ್ಲ. ಈಗ ಸಂಜಯ್ ಬಗ್ಗೆ ಹಲುಬುವ ಸೆಲೆಬ್ರಿಟಿಗಳಿಗೆ "ನನ್ನ ತಾಯಿ ಬಗ್ಗೆ ಏಕೆ ಇವರೆಲ್ಲಾ ಮಾತನಾಡಲಾರರು. ಸಂಜಯ್‌ಗೆ ಒಂದು ನ್ಯಾಯ, ನಮಗೆ ಒಂದು ನ್ಯಾಯವಾ?" ಎಂದು ಜೈಬುನ್ನೀಸಾಳ ಮಗಳು ಪ್ರಶ್ನೆ ಎಸೆದಿದ್ದಾಳೆ. ಇದಕ್ಕೆ ಸಂಜಯ್ ಪರ ದನಿಗಳು ಏನು ಉತ್ತರ ನೀಡುತ್ತವೆ? ಇನ್ನು ಕಾಂಗ್ರೆಸ್ ಪಕ್ಷದ ವಕ್ತಾರ ದಿಗ್ವಿಜಯ್ ಸಿಂಗ್, ಸಂಜಯ್ ಪರ ವಕಾಲತ್ತು ವಹಿಸಿ "ಸಂಜಯ್ ದತ್ ಕ್ರಿಮಿನಲ್ ಅಲ್ಲ, ಭಯೋತ್ಪಾದಕನೂ ಅಲ್ಲ. ಏನೋ ಹುಡುಗುತನ, ಅವಿವೇಕದ ಹೆಜ್ಜೆ ಇಟ್ಟಿದ್ದ" ಎಂದು ಬಡಬಡಾಯಿಸಿದ್ದಾರೆ. ಒಂದೇ ಬಾರಿಗೆ ನೂರಾರು ಜನರ ಪ್ರಾಣಹರಣ ಮಾಡುವ ಶಸ್ತ್ರಾಸ್ತ್ರಗಳನ್ನು ಹೊಂದುವುದು ಇವರ ದೃಷ್ಟಿಯಲ್ಲಿ ಕೇವಲ ಹುಡುಗಾಟಿಕೆ! ಸಂಜಯ್‌ನ ಹುಡುಗುತನಕ್ಕೆ ಇದೊಂದೇ ಅಲ್ಲ, ಬೇಕಾದಷ್ಟು ನಿದರ್ಶನಗಳಿವೆ. ಆರಂಭದಿಂದಲೂ ಆತ Spoilt brat. ಶಾಲೆಯಲ್ಲಿದ್ದಾಗಲೇ ಮಾದಕ ವ್ಯಸನಿ. ಅಷ್ಟೇಕೆ ಅಕ್ರಮವಾಗಿ ಮಾದಕ ವಸ್ತು ಹೊಂದಿದ್ದ ಕಾರಣ 1982ರಲ್ಲಿಯೇ ಐದು ತಿಂಗಳು ಜೈಲುಪಾಲಾಗಿದ್ದ. ನಂತರ ಮಾದಕ ದಾಸ್ಯದಿಂದ ಆತನನ್ನು ಮುಕ್ತಗೊಳಿಸಲು ಅಪ್ಪ ಸುನಿಲ್ ದತ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಅಂದರೆ ಕಾನೂನು ಮುರಿಯುವುದು ಈತನಿಗೆ ಪರಿಪಾಠವಾಗಿ ಹೋಗಿದೆ.
ಈತನ ಶಿಕ್ಷೆಯನ್ನು ಮನ್ನಾ ಮಾಡಬೇಕು ಎಂದು ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮಹಾರಾಷ್ಟ್ರದ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಹಾಗೆ ಮಾಡಲು ಅವರು ನೀಡಿರುವ ಕಾರಣಗಳಾದರೂ ಎಂಥವು. ಘಟನೆ ನಡೆದು 20 ವರ್ಷ ಆಗಿಹೋಗಿದೆ. ಈಗ ಶಿಕ್ಷೆ ಸಲ್ಲ ಎಂದು ಹೇಳುತ್ತಾರೆ. ಆದರೆ ನಿಧಾನವಾದರೂ ಸರಿ ನ್ಯಾಯ ಸಲ್ಲಲೇಬೇಕು ಎಂಬುದು ಸ್ವತಃ ನ್ಯಾಯಮೂರ್ತಿಯಾಗಿದ್ದ ಕಟ್ಜ್ಜುಗೆ ತಿಳಿಯದೆ? ಇದೇ ವಾದವನ್ನು ಮುಂದಿಟ್ಟುಕೊಂಡು ಕರ್ನಾಟಕ-ತಮಿಳುನಾಡು ಗಡಿಯಲ್ಲಿ 20 ಮಂದಿ ಪೊಲೀಸರನ್ನು ಹತ್ಯೆಗೈದ ವೀರಪ್ಪನ್ ಸಹಚರರಿಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಮಾಫಿ ಮಾಡಲು ಸಾಧ್ಯವೇ? ಸ್ವತಃ ರಾಷ್ಟ್ರಪತಿಗಳೇ ಅವರಿಗೆ ಕ್ಷಮೆ ಅಸಾಧ್ಯ ಎಂದು ಹೇಳಿಲ್ಲವೆ. ಸಂಜಯ್ ಈಗಾಗಲೇ 8 ತಿಂಗಳು ಜೈಲುವಾಸ ಅನುಭವಿಸಿದ್ದಾನೆ. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದಾನೆ. ಇದನ್ನು ಪರಿಗಣಿಸಿ ಮಾಫಿ ಮಾಡಬಹುದು ಎಂಬುದು ಕಟ್ಜು ವಕಾಲತ್ತು. ನಿಜವಾಗಲೂ ಇವರು ನ್ಯಾಯಪಾಲಕರಾಗಿದ್ದರಾ ಎಂಬ ಸಂದೇಹ ಮೂಡುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಸಿಕ್ಕ ನಂತರ ಸಂಜಯ್ ಜೈಲಿನಿಂದ ಹೊರಬಂದಿದ್ದು ನಿಜ. ಆದರೆ ಜಾಮೀನು ಸಿಕ್ಕ ಮಾತ್ರಕ್ಕೆ ಖುಲಾಸೆ ಆದ ಎಂದರ್ಥವೇ? ಇಂದಲ್ಲ ನಾಳೆ ಅಂತಿಮ ತೀರ್ಪು ಬಂದೇ ಬರುತ್ತದೆ ಎಂಬುದು ಸಂಜಯ್‌ಗೆ ತಿಳಿದಿರಲಿಲ್ಲವೇ? ಇನ್ನು ಮದುವೆ-ಮಕ್ಕಳು ಆತನ ವೈಯಕ್ತಿಕ ತೀರ್ಮಾನ. ಜಾಮೀನು ಅವಧಿಯಲ್ಲಿ ಮದುವೆಯಾದ ಎಂದಮಾತ್ರಕ್ಕೆ ಕಾನೂನು ಕರುಣೆ ತೋರಬೇಕೇ? ಇದೆಲ್ಲಕ್ಕಿಂತ ಹಾಸ್ಯಾಸ್ಪದ ಕಾರಣವನ್ನು ಕಾಟ್ಜು ನೀಡಿದ್ದಾರೆ. ಅದೆಂದರೆ ಸಂಜಯ್ ಒಬ್ಬ ಕಲಾವಿದ ಹಾಗೂ ಆತನ ಚಿತ್ರಗಳ ಮೂಲಕ ಸಮಾಜಕ್ಕೆ ಗಾಂಧಿಗಿರಿಯನ್ನು ನೆನಪು ಮಾಡಿಕೊಟ್ಟಿದ್ದಾನೆ. ಸಾಮಾಜಿಕ ಕಳಕಳಿ ಮೆರೆದಿದ್ದಾನೆ ಎಂದು ಹೇಳಿದ್ದಾರೆ. ಅಲ್ಲಾ ಕಟ್ಜು ಸಂಜಯ್ ದತ್‌ರ ಚಿತ್ರಗಳನ್ನು ನೋಡಿದ್ದಾರೆಯೇ? ಮುನ್ನಾಭಾಯಿ ಸರಣಿಯ ಎರಡು ಚಿತ್ರಗಳಲ್ಲಿ ಗಾಂಧಿಗಿರಿಯ ಪಾತ್ರ ಅಳವಡಿಸಿರುವುದನ್ನು ಬಿಟ್ಟು ಈತನ ಯಾವುದಾದರೂ ಚಿತ್ರದಲ್ಲಿ ಸಾಮಾಜಿಕ ಕಳಕಳಿ ತೃಣದಷ್ಟಾದರೂ ಇದೆಯೇ? ರಾಕಿಯಿಂದ ಆರಂಭವಾದ ಈ 'ಖಳನಾಯಕ'ನ ಬೆಳ್ಳಿ ಹೆಜ್ಜೆ ತುಂಬೆಲ್ಲ ಲಾಂಗು, ಮಚ್ಚು, ಬಂದೂಕು ಸಂಸ್ಕೃತಿಯೇ ವಿಜೃಂಭಿಸಿರುವುದು 'ವಾಸ್ತವ' ಅಲ್ಲವೇ? ಸುನಿಲ್ ದತ್ ಮತ್ತು ನರ್ಗಿಸ್ (ಸಂಜಯ್‌ನ ಅಪ್ಪ-ಅಮ್ಮ) ಸಮಾಜಕ್ಕೆ ನೀಡಿರುವ ಕೊಡುಗೆ ಗಮನಿಸಿ ಸಂಜಯ್‌ಗೆ ಶಿಕ್ಷೆ ಮನ್ನಾ ಮಾಡಬೇಕು ಎನ್ನುವುದು ಇದೇ ಕಟ್ಜು ಅವಿವೇಕದ ಸಲಹೆ. ಯಾವ ತಂದೆ-ತಾಯಿಯೂ ತಮ್ಮ ಮಕ್ಕಳು ಅಡ್ಡದಾರಿ ಹಿಡಿಯಬೇಕೆಂದು, ಕ್ರಿಮಿನಲ್‌ಗಳಾಗಬೇಕೆಂದೂ ಆಶಿಸುವುದಿಲ್ಲ. ಅದೇ ರೀತಿ ಅವರ ಸಭ್ಯತೆ, ಸಾಚಾತನ ಕ್ರಿಮಿನಲ್‌ಗಳಿಗೆ ಶಿಕ್ಷೆ ತಪ್ಪಿಸಲು ಸಾಧ್ಯವೂ ಇಲ್ಲ. ಸಂಜಯ್ ದತ್ ತಂದೆ ಕಾಂಗ್ರೆಸಿಗ. ಸೋದರಿ ಪ್ರಿಯಾ ಸಹ ಕಾಂಗ್ರೆಸ್ ಸಂಸದೆ. ಮಹಾರಾಷ್ಟ್ರದಲ್ಲಿರುವುದು ಕಾಂಗ್ರೆಸ್ ಸರಕಾರ, ಕಾಂಗ್ರೆಸ್ ರಾಜ್ಯಪಾಲ. ಸಮಾಜದ ಸೆಲೆಬ್ರಿಟಿ ವರ್ಗಗಳಿಂದ ಬರುತ್ತಿರುವ ಒತ್ತಡಕ್ಕೆ ಮಣಿದು ರಾಜ್ಯಪಾಲರು ಸಂಜಯ್ ಶಿಕ್ಷೆ ಮನ್ನಾ ಮಾಡಿದರೂ ಅಚ್ಚರಿ ಇಲ್ಲ. ಆದರೆ ಹಾಗೆ ಮಾಡಿದ್ದೇ ಆದರೆ ಭಾವಾತಿರೇಕಕ್ಕೆ ನ್ಯಾಯಪಾಲನೆಯನ್ನು ಒತ್ತೆ ಇಟ್ಟಂತೆಯೇ ಸರಿ.
ಅಜ್ಜ ಶಂಕರ್ ದಯಾಳ ಶರ್ಮಾ ರಾಷ್ಟ್ರಪತಿಯಾಗಿ ದೇಶ ಸೇವೆ ಮಾಡಿದ್ದಾರೆಂದು, ಜೆಸ್ಸಿಕಾ ಲಾಲ್ ಕೊಲೆ ಆರೋಪಿಯಾಗಿರುವ ಅವರ ಮೊಮ್ಮಗ ಮನು ಶರ್ಮಾನಿಗೂ ಕ್ಷಮೆ ಕೊಡಿ ಎಂದು ಕೇಳಿದರೆ ಒಪ್ಪುತ್ತೀರಾ?

-ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com