'ಚೇಂಜ್' ಇಲ್ಲದ ಒಂದು ಸುದ್ದಿಕತೆ
ಹನ್ನೊಂದರ ಹರೆಯದ ಹುಡುಗ ಕೌಶಲ್ ಶಕ್ಯ ವೃತ್ತಪತ್ರಿಕೆ ಮಾರುವುದಕ್ಕೆ ಟ್ರಾಫಿಕ್ನಲ್ಲಿ ಕಾರೊಂದರ ಬಾಗಿಲು ತಟ್ಟಿದನಂತೆ. ಅದು ರಾಹುಲ್ ಗಾಂಧಿ ಕುಳಿತ ಕಾರಾಗಿತ್ತು. ಭೋಪಾಲ್ನಲ್ಲಿ ಸಂಚರಿಸುತ್ತಿರುವಾಗ ಕೆಂಪುದೀಪ ಮಿನುಗಿದಾಗ ರಾಹುಲ್ ಅವರ ಮೋಟಾರುಸರಣಿ ನಿಂತಿತ್ತು. (ಹೌದೇ? ಕೆಂಪುದೀಪಕ್ಕೆ ರಾಹುಲ್ ಗಾಂಧಿ ಮತ್ತು ಹಿಂಬಾಲಕರ ಕಾರುಗಳನ್ನು ನಿಲ್ಲಿಸಲಾಗುತ್ತದೆಯೇ? ಹಾಗೊಮ್ಮೆ ನಿಂತಿದ್ದರೂ ಈ ಹುಡುಗನಿಗೆ ರಾಹುಲ್ ಕಾರಿನ ಹತ್ತಿರ ಹೋಗುವುದಕ್ಕೆ ಹೇಗೆ ಅವಕಾಶವಾಯಿತು?)
ಅದೇನೇ ಇರಲಿ, ಅಂತೂ ರಾಹುಲ್ ಗಾಂಧಿಗೆ ಪೇಪರ್ ಮಾರುವುದರಲ್ಲಿ ಕೌಶಲ್ ಸಫಲನಾದ. ಆತನ ಚಿತ್ರ ಪತ್ರಿಕೆಗಳ ಪುಟವನ್ನು ಅಲಂಕರಿಸಿತು. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಆ ಹುಡುಗನಿಗೆ 'ನೀನೇಕೆ ಶಾಲೆಗೆ ಹೋಗುತ್ತಿಲ್ಲ' ಎಂದು ಕೇಳಿದರಂತೆ. ಅದಕ್ಕೆ ಪ್ರತಿಯಾಗಿ ಆ ಹುಡುಗ ತನಗೆ ವೈದ್ಯನಾಗುವ ಆಸೆ ಇದ್ದರೂ ಮನೆಯಲ್ಲಿ ಐವರನ್ನು ಸಲಹುವ ಪ್ರಮೇಯವಿರುವುದರಿಂದ ಅದು ಸಾಧ್ಯವಾಗುತ್ತಿಲ್ಲವೆಂದ. ಅವನ ಕತೆ ಕೇಳಿ ರಾಹುಲ್, ಸಾವಿರ ರುಪಾಯಿ ನೋಟು ಕೊಟ್ಟರು. ಆ ಹುಡುಗ ಅಮಾಯಕನಾಗಿ, 'ಅಷ್ಟಕ್ಕೆ ತನ್ನ ಬಳಿ ಚೇಂಜ್ ಇಲ್ಲ' ಎಂದ. 'ನೀನೇ ಇಟ್ಟುಕೋ. ವೈದ್ಯನಾಗುವ ನಿನ್ನ ಕನಸನ್ನು ಸಾಯಲು ಬಿಡಬೇಡ' ಅಂದು ಮುಂದೆ ಹೊರಟರು ರಾಹುಲ್. ಇಲ್ಲಿಗೆ ಕತೆ ಮುಗಿಯುತ್ತಿತ್ತೇನೋ ಆದರೆ ಆ ರಾಜ್ಯದ ಕಾಂಗ್ರೆಸ್ ಅನುಯಾಯಿಗಳು ಅದನ್ನು ಜೀವಂತ ಇಟ್ಟು ರಾಹುಲ್ ಸಂತುಷ್ಟಿಗೆ ಯತ್ನಿಸಿದರು. ಒಬ್ಬರು ಆ ಹುಡುಗನ ತಂದೆಗೆ ಪ್ಯೂನ್ ಕೆಲಸ ಕೊಡುವುದಾಗಿ ಹೇಳಿದರು. ಇನ್ನೊಬ್ಬರು, 'ರಾಹುಲ್ ಬಾಬಾ ಸಾವಿರ ರುಪಾಯಿ ಕೊಡುತ್ತಾರೆ ಎಂದಾದರೆ ನಾನು ಆ ಹುಡುಗನಿಗೆ ಪ್ರತಿ ತಿಂಗಳು ಸಾವಿರ ರು ಸ್ಟೈಪಂಡ್ ಕೊಟ್ಟು ಶಾಲೆಯ ನಂತರ ವೈದ್ಯಕೀಯ ಶಿಕ್ಷಣಕ್ಕೆ ಸಹಕರಿಸುವೆ' ಎಂದರು.
ಕೌಶಲ್ಗೆ ಅಂಥ ಸತ್ಕಾರ ದೊರೆತಿದ್ದು ಒಳ್ಳೆಯದೇ. ಆದರೆ ಇದನ್ನೇ ಪ್ರಚಾರದ ವಿಷಯವಾಗಿಸುವ ಮೂಲಕ ರಾಹುಲ್ ಅನುಯಾಯಿಗಳು ತಮ್ಮ ಪಕ್ಷವು ಖಾಲಿ ತೋರ್ಪಡಿಕೆಗಳಿಗೆ ಹಾತೊರೆಯುತ್ತಿದೆ ಎಂಬುದನ್ನು ಗಟ್ಟಿ ಮಾಡಿದರು. ಏಕೆಂದರೆ ಕೌಶಲ್ನಂಥ ಸಾವಿರಾರು ಮಕ್ಕಳು ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಂತು ಹೂವು-ಹಣ್ಣು ಇನ್ನೇನೋ ಮಾರಿಕೊಂಡಿದ್ದಾರೆ. ಒಬ್ಬ ಕೌಶಲ್ಗೆ ಸಾವಿರ ರುಪಾಯಿ ನೀಡಿ ಪೋಸ್ಟರ್ಬಾಯ್ ಮಾಡುವುದರಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ನೀತಿ ನಿರೂಪಣೆಯ ಸ್ಥಾನದಲ್ಲಿ ಇರುವವರು ಕೌಶಲ್ ಪ್ರತಿನಿಧಿಸುವ ವರ್ಗವನ್ನು ಮೇಲೆತ್ತುವುದಕ್ಕೆ ಖಚಿತವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ರಾಹುಲ್ ಗಾಂಧಿಯವರ ದೃಷ್ಟಿಕೋನ ಕೊರತೆ ಇಲ್ಲೇ ಕಾಣಸಿಗುತ್ತದೆ. ಅವರು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ, ವಂಶವಾಹಿ ಅಧಿಕಾರ ಕೊನೆಗೊಳ್ಳಬೇಕಾದ ಬಗ್ಗೆ ಅನೇಕ ವೇದಿಕೆಗಳಲ್ಲಿ ಮಾತನಾಡುತ್ತಾರೆ. ಆದರೆ ಆ ಬಗ್ಗೆ ನಿಖರ ಕ್ರಿಯಾಯೋಜನೆಗಳು ಕಾಣುವುದಿಲ್ಲ. ಇಂಥ ಸಂದರ್ಭದಲ್ಲಿ ಕೌಶಲ್ ಕತೆಯನ್ನು ದೊಡ್ಡದಾಗಿ ಬಿಂಬಿಸುವುದರಿಂದ ಟೊಳ್ಳುತನವೇ ಪ್ರಮುಖವಾಗಿ ಗೋಚರಿಸಿಬಿಡುತ್ತದೆ. ಸುದ್ದಿ ಪತ್ರಿಕೆಯೊಂದಕ್ಕೆ ಸಾವಿರ ರುಪಾಯಿ ಕೊಟ್ಟ ನಡೆ ಚೇಂಜ್ ಒದಗಿಸಲಾರದ ನೇತಾರನ ವರ್ತನೆಗೆ ರೂಪಕವಾಗಿಬಿಡುತ್ತದೆ.
- ಸಂದೀಪ್ ರಾಯ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

