ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಬದ್ಧತೆಯೊಡನೆ ಅನುಷ್ಠಾನ ಮಾಡಲು ಹೊರಟಿರುವ ಮುಖ್ಯಮಂತ್ರಿಗಳ ಕ್ರಿಯಾಶೀಲತೆಗೆ ಹೃತ್ಪೂರ್ವಕವಾದ ಅಭಿನಂದನೆಗಳು. ಬಡವರಿಗೆ ಒಂದು ರೂ.ಗೆ ಮೂವತ್ತು ಕೆ.ಜಿ. ಅಕ್ಕಿ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಬಾಕಿ ಸಾಲ ಮನ್ನಾ, ಭಾಗ್ಯಜ್ಯೋತಿ ಯೋಜನೆಗೆ ಪುನಶ್ಚೇತನ ಮೊದಲಾದವುಗಳು ಸ್ವಾಗತಾರ್ಹವಾದ ವಿಚಾರ. ತಮಗೆ ಸಾಮಾಜಿಕ ನ್ಯಾಯದ ಬಗ್ಗೆ ಇರುವ ಬದ್ಧತೆ ಇದರಿಂದ ವ್ಯಕ್ತವಾಗುತ್ತದೆ.
ಅದರ ಜೊತೆಗೆ ತಾವು ಅಧಿಕಾರಿಗಳ ಸಭೆಯಲ್ಲಿ ಕಡಿಮೆ ದರ್ಜೆಯ ಪಾನೀಯಗಳನ್ನು ತಯಾರು ಮಾಡುವಂತೆ ಸೂಚನೆ ಕೊಟ್ಟಿದ್ದೀರಿ. ಇದರಿಂದ ಬಡವರು ಮದ್ಯಪಾನದ ವ್ಯಸನಕ್ಕೆ ಹೆಚ್ಚಾಗಿ ತುತ್ತಾಗುತ್ತಾರೆ. ಮದ್ಯಪಾನ ಮಾರಾಟದಲ್ಲಿ ಗಣನೀಯವಾದ ಆದಾಯ ಇಳಿಕೆಯಾಗಿ ಸೆಕೆಂಡ್ಸ್ ಪ್ರಾಬಲ್ಯ ಹೆಚ್ಚಬಹುದೆಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿರುವುದನ್ನು ಈಗಾಗಲೇ ಮಾಧ್ಯಮಗಳು ವರದಿ ಮಾಡಿವೆ.
1966ರಲ್ಲಿ ಕಾಂಗ್ರೆಸ್ ಪಕ್ಷ ಮದ್ಯಪಾನ ನೀತಿಯನ್ನು ಸಡಿಲಿಸಿದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಖಾತೆಯ ಸಚಿವರು ಮೈಸೂರು ಪ್ರಾಂತ್ಯದ ಪ್ರಭಾವಿ ನಾಯಕರಾದ ಯಶೋಧರಮ್ಮ ದಾಸಪ್ಪನವರು ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ನೀಡಿ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿದ್ದರು. ಅನೇಕ ಒತ್ತಡಗಳ ನಡುವೆ ಕೂಡ ಯಶೋಧರಮ್ಮ ದಾಸಪ್ಪನವರು ರಾಜಿನಾಮೆಯನ್ನು ವಾಪಾಸ್ಸು ಪಡೆಯಲೇ ಇಲ್ಲ. ಯಶೋಧರಮ್ಮ ದಾಸಪ್ಪನವರು ನೀಡಿದ ರಾಜಿನಾಮೆ ವ್ಯರ್ಥವಾಗಲಿಲ್ಲ. ಮದ್ಯಪಾನದ ಪರವಾಗಿ ಲಾಬಿ ಮಾಡಿದ ಅನೇಕರು ಎರಡು ದಶಕಗಳ ಕಾಲ ಅಧಿಕಾರದಿಂದ ವಂಚಿತರಾಗಿದ್ದರು. 1995ರಿಂದ 2004ರವರೆಗೆ ಕರ್ನಾಟಕದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದಿನಸಿ ಹಾಗೂ ಸ್ಟೋರ್ಸ್ಗಳಲ್ಲಿ ಬೀರು ಮಾರಾಟವನ್ನು ಪ್ರಾರಂಭಿಸುವ ಬಗ್ಗೆ ಸೂಚನೆ ನೀಡಿದಾಗ ವಿರುದ್ಧವಾಗಿ ವ್ಯಾಪಕವಾದ ಜನಾಭಿಪ್ರಾಯ ವ್ಯಕ್ತವಾಯಿತು. ಆಗ ಸರ್ಕಾರ ಅನಿವಾರ್ಯವಾಗಿ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು.
ಮದ್ಯಪಾನದಿಂದ ದಲಿತರು, ಹಿಂದುಳಿದ ವರ್ಗದವರು ಹಾಗೂ ಬಡವರು ಅನುಭವಿಸುತ್ತಿರುವ ಸಂಕಷ್ಟಗಳನ್ನು ತಜ್ಞ ಡಾ. ಆರ್. ಶ್ರೀಧರನ್ ಸಮರ್ಥವಾಗಿ ವಿಶ್ಲೇಷಿಸಿದ್ದಾರೆ. ಬಹುಮಟ್ಟದ ಕೌಟುಂಬಿಕ ಹಾಗೂ ಮಹತ್ತರ ಅಪರಾಧಗಳಿಗೆ ಈ ಮದ್ಯಪಾನ ದುಶ್ಚಟಗಳೇ ಕಾರಣವೆಂಬುದು ಅವರ ಸಂಶೋಧನೆಗಳ ಬಲವಾದ ಸಿದ್ಧಾಂತವಾಗಿದೆ. ಕರ್ನಾಟಕದ ಪಾನೀಯ ನಿಗಮ ಸಿದ್ಧಮಾಡಿರುವ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರಸ್ತುತ ಎರಡು ಕೋಟಿ ಮೂವತ್ತು ಲಕ್ಷ ಜನ ಮದ್ಯಪಾನದ ವ್ಯಸನಕ್ಕೆ ಒಳಗಾಗಿದ್ದಾರೆ. ಇದು ಜನಸಂಖ್ಯೆಯ ಶೇಕಡಾ ಮೂವತ್ತೆಂಟರಷ್ಟು ಎಂಬುದು ಗಮನಾರ್ಹವಾದ ವಿಚಾರ. ಮದ್ಯಪಾನದ ಬಂದ ಬಾಹುವಿಗೆ ಮತ್ತೊಂದು ಅಂಶವನ್ನು ಇಲ್ಲಿ ಸೇರಿಸಬಹುದು. 1998-99ನೇ ಸಾಲಿನಲ್ಲಿ ಅಬಕಾರಿ ಆದಾಯ ಆರುನೂರು ಕೋಟಿ ರೂ.ಗಳಿಗಿಂತ ಕಡಿಮೆ ಇತ್ತು. ಆದರೆ 2011-12ನೇ ಸಾಲಿನಲ್ಲಿ 14,12559 ಕೋಟಿ ರೂ. ವಹಿವಾಟನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮ ನಡೆಸಿದೆ. ಈ ಅಂಕಿ ಅಂಶಗಳಿಂದಲೇ ಮದ್ಯ ವ್ಯಸನಿಗಳ ಸಂಖ್ಯೆ ಎಷ್ಟು ಹೆಚ್ಚಿದೆ ಎಂಬುದು ತಿಳಿಯುತ್ತದೆ. ಅದರಲ್ಲೂ ಯುವ ಜನತೆ ಮದ್ಯಪಾನದ ಚಟಕ್ಕೆ ತುತ್ತಾಗುತ್ತಿರುವ ದುಃಖಕರವಾದ ವಿಚಾರ. 1992ರಿಂದ 1994ರವರೆಗೆ ಕರ್ನಾಟಕದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಹದಿನಾರು ವರ್ಷ ವಯಸ್ಸಿನ ಒಳಗಿನ ಯುವಕರಿಗೆ ಮದ್ಯವನ್ನು ಮಾರುವಂತಿಲ್ಲವೆಂದು ನಿಯಮ ರಚಿಸಿದ್ದು ಹಾಗೂ ಬಾರ್ ಮತ್ತು ಮದ್ಯದ ಅಂಗಡಿಗಳನ್ನು ತೆರೆಯಲು ಕಠಿಣವಾದ ನಿಬಂಧನೆಗಳನ್ನು ಸಹ ವಿಧಿಸಿತ್ತು. ಅನಂತರ ಬಂದ ಸರ್ಕಾರವು ಅದರ ಬಗ್ಗೆ ನಿರಾಸಕ್ತಿ ವಹಿಸಿದ ಕಾರಣದಿಂದಾಗಿ ಇಂದು ಆರು ಗಂಟೆಗೆ ಎಲ್ಲಾ ಬಾರ್ಗಳು ತಮ್ಮ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸುತ್ತಿರುತ್ತವೆ.
ಮದ್ಯಪಾನದಿಂದ ಸರ್ಕಾರಕ್ಕೆ ಎಷ್ಟೇ ಆದಾಯ ಬಂದರೂ ಅದನ್ನು ಮಹಾತ್ಮ ಗಾಂಧೀಜಿ ಭಾವಿಸಿದಂತೆ 'ಪಾಪದ ಹಣವೆಂದು' ಭಾವಿಸಬೇಕು. ತಾವು ಉತ್ತಮ ಆಡಳಿತಗಾರರು, ಖ್ಯಾತ ಅರ್ಥಶಾಸ್ತ್ರಜ್ಞರೆಂದು ಪ್ರಜ್ಞಾವಂತ ಜನರ ಮನಸ್ಸಿನಲ್ಲಿ ಪ್ರತಿಷ್ಠಾಪನೆಗೊಂಡಿದ್ದೀರಿ. ಮದ್ಯಪಾನ ವಲಯದ ಆದಾಯ ಕಡಿಮೆಯಾದರೆ ಅದನ್ನು ಸರಿದೂಗಿಸಿಕೊಳ್ಳುವ ಸಾಮರ್ಥ್ಯ ಕೂಡ ತಮ್ಮಲ್ಲಿ ಉಂಟು. ಈ ಬಗ್ಗೆ ಸಮಾಜ ಸೇವಕರನ್ನು, ಹಿರಿಯ ಸಾಹಿತಿಗಳನ್ನು ಹಾಗೂ ಮಹಿಳಾ ವಲಯದ ಸೇವಾಕರ್ತರೊಡನೆ ಜಂಟಿ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ತಮ್ಮನ್ನು ಕೋರಲಾಗಿದೆ.
-ಎಂ.ವಿ. ರಾಜಶೇಖರನ್
ಮಾಜಿ ಯೋಜನಾ ರಾಜ್ಯಸಚಿವರು